Friday 31 March 2017

ಆರೋಗ್ಯ - ಹಣ್ಣೆಲೆಗಳು - 2

ಅಧ್ಯಾಯ - 2
ಟೊಳ್ಳುಮೂಳೆ ರೋಗ    [Osteoporosis - ಆಸ್ಟಿಯೋಪೆÇರೋಸಿಸ್]  ಮೆದುಮೂಳೆ

      
ಋತುಬಂಧದ ಆಸುಪಾಸಿನಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಟೊಳ್ಳಾಗಿ ದುರ್ಬಲಗೊಂಡು ಮುರಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸಗಳ ಕೊರತೆಯಿಂದಾಗಿ ಮೂಳೆಯ ರಚನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ.  ಮೂಳೆ ನಿಧಾನವಾಗಿ ಕೃಶವಾಗುತ್ತ ಹೋಗುತ್ತದೆ, ಆದರೆ ಅದರ ಆಕಾರದಲ್ಲಿ  ಯಾವುದೇ ರೀತಿಯ ವ್ಯತ್ಯಾಸವಾಗುವುದಿಲ್ಲ.

ಶೇಕಡ 30ಕ್ಕಿಂತ ಹೆಚ್ಚು ಮೂಳೆ ಟೊಳ್ಳಾದರೆ ಆರೋಗ್ಯದಲ್ಲಿ ತೊಂದರೆಯುಂಟಾಗುತ್ತದೆ. ಒಂದು ಸಣ್ಣ ಅಪಘಾತ ಕೂಡ ಮೂಳೆ ಮುರಿತಕ್ಕೆ ಕಾರಣವಾಗಬಹುದು. ಹೆಚ್ಚಾಗಿ ಸೊಂಟದ ಮೂಳೆ ಮುರಿಯುವುದು (hip fracture).  ಮೊಣಕೈ ಮೂಳೆ ಮುರಿತವು ಕೂಡ ಸಾಮಾನ್ಯ, ಇದನ್ನು ‘ಕೋಲೆಯ ಮೂಳೆ ಮುರಿತ’ (Colles’ fractureಎಂದು ಕರೆಯುತ್ತಾರೆ. ಬೆನ್ನು ಮೂಳೆ ಮುರಿತವು ಸಾಮಾನ್ಯವಾಗಿ ಕಂಡು ಬರುತ್ತದೆ. ಹಲ್ಲುಗಳು ಉದುರುತ್ತವೆ. ಮೂಳೆ ಸವೆತ ಕೆಲವರಲ್ಲಿ ಅತಿಯಾಗಿದ್ದರೆ ಇನ್ನೂ ಕೆಲವರಲ್ಲಿ ಅತೀ ಕಡಿಮೆಯಿರುತ್ತದೆ.


ಮೆದು ಮೂಳೆಗೆ ಸಂಭಾವ್ಯ ಕಾರಣಗಳನ್ನು ಈ ರೀತಿ ವಿವರಿಸಲಾಗಿದೆ.
·        ಋತುಬಂಧ ಬೇಗನೆ ಬಂದರೆ (ಅಕಾಲಿಕ ಋತುಬಂಧ)
·        ವಂಶವಾಹಿನಿಯಿಂದ -ಯುರೋಪ್ ಮತ್ತು ಏಷ್ಯಾ ಪ್ರದೇಶಗಳ ಮಹಿಳೆಯರಲ್ಲಿ ಮೂಳೆ ಸವೆತ ಹೆಚ್ಚಾಗಿ ಕಂಡುಬಂದರೆ, ಆಫ್ರಿಕಾದ ಮಹಿಳೆಯರಲ್ಲಿ ಇದು ತೀರಾ ಕಡಿಮೆ.
·        ಕ್ಯಾಲ್ಸಿಯಂ ಸೇವನೆ ಕಡಿಮೆ ಇದ್ದರೆ.
·        ಧೂಮಪಾನ ಹಾಗೂ ಮಧ್ಯಪಾನದ ದಾಸರಾಗಿದ್ದರೆ, ಅತಿಯಾಗಿ ಕಾಫಿ ಸೇವಿಸುತ್ತಿದ್ದರೆ
·        ಕೃಶವಾಗಿ, ಕಡಿಮೆ ತೂಕ ಹೊಂದಿದವರಲ್ಲಿ,
·        ಹೆಚ್ಚಿನ ತೂಕ ಇರುವವರಲ್ಲಿ (125 ಕೆ.ಜಿಗಿಂತ ಹೆಚ್ಚಿದ್ದರೆ)
·        ಮಕ್ಕಳಿಲ್ಲದವರಲ್ಲಿ
·   ಅನೊರೆಕ್ಸಿಯಾ ನರ್ವೋಸಾ (Anorexia Nervosa)- - ಊಟ ಮಾಡದೆ, ತೀರಾ ಕೃಶವಾಗಿರುವುದು
·        ವ್ಯಾಯಾಮ ಮಾಡದೆ ಇದ್ದರೆ
·        ಅಪೌಷ್ಟಿಕತೆ ಮತ್ತು ಆನಾರೋಗ್ಯ ಹೊಂದಿದ್ದರೆ
· ಕೆಲವು ಜೌಷಧಗಳನ್ನು ದೀರ್ಘಕಾಲ ಉಪಯೋಗಿಸುತ್ತಿದ್ದರೆ. ಉದಾ-ಹೆಪಾರಿನ್ (Heparin),  ಜಿಎನ್.ಆರ್.ಹೆಚ್ (GnRh),  ಮಿಥೋಟ್ರೆಕ್ಸೆಟ್ (methotrexate),   ಕಾರ್ಟಿಕೋಸ್ಟಿರಾಯ್ಡ್ (corticosteroid)    ಇನ್ನೂ ಮುಂತಾದವುಗಳು
·        ವಿಟಮಿನ್ .ಡಿ. ಕೊರತೆಯಿದ್ದರೆ (ಸೂರ್ಯನ ಬೆಳಕಿಗೆ ಮೈಯೊಡ್ಡದಿದ್ದರೆ)
·        ಖಿನ್ನತೆ - ಮೂಳೆ ನಾಶದ ಗತಿಯನ್ನು ತೀವ್ರಗೊಳಿಸುತ್ತದೆ
·        ಮನೆಯಲ್ಲಿ ಯಾರಿಗಾದರೂ ಟೊಳ್ಳುಮೂಳೆ ತೊಂದರೆ ಇದ್ದರೆ
·        ಸಂಧಿವಾತ, ಕರುಳಿನ ತೊಂದರೆ ಹಾಗೂ ಇತರೆ ದೀರ್ಘಕಾಲದ ರೋಗಗಳಿದ್ದರೆ

ಸಾಮಾನ್ಯವಾಗಿ ಮೂಳೆಯಲ್ಲಿರುವ ಜೀವಕೋಶಗಳು ಸತತವಾಗಿ ನಶಿಸಿ ಹೋಗಿ, ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಿರುತ್ತವೆ. ವಯಸ್ಸಾದಂತೆ ಹೊಸ ಜೀವಕೋಶಗಳು ಉತ್ಪತ್ತಿಯಾಗುವುದು ಕಡಿಮೆಯಾಗಿ ಮೂಳೆಯು ತೆಳುವಾಗುತ್ತಾ ಮೃದುಗೊಳ್ಳುತ್ತದೆ. 35 ವರ್ಷದ ನಂತರ ಮೂಳೆಯ ಸಾಂದ್ರತೆ ಕಡಿಮೆಯಾಗುತ್ತಾ ಬರುತ್ತದೆ. ಋತುಬಂಧದ ಸಮಯದಲ್ಲಿ ಈಸ್ಟ್ರೋಜನ್ ಜೀವರಸವು ಕಡಿಮೆಯಾಗಿ ಮೂಳೆ ನಶಿಸಿ ಹೋಗುವ ಕ್ರಿಯೆ ತ್ವರಿತಗೊಳ್ಳುತ್ತದೆ. ಬೆನ್ನು ಮೂಳೆಗಳಲ್ಲಿ ಇದನ್ನು ನಾವು ಸರಿಯಾಗಿ ಗಮನಿಸಬಹುದು.  ಬೆನ್ನುಮೂಳೆ ಮೆದುವಾಗಿ ಮೇಲ್ಬಾಗದ ದೇಹದ ಭಾರವನ್ನು ತಡೆಯಲಾಗದೆ ಬಿದುರುಗೊಂಡು (Compressed ದೇಹದ ಎತ್ತರವು ಕಡಿಮೆಯಾಗುತ್ತದೆ ಮತ್ತು ಬೆನ್ನು ಹುರಿಯ ಬಾಗುವಿಕೆ ಹೆಚ್ಚಾಗಿ ಗೂನು ಬೆನ್ನಿಗೆಡೆ ಮಾಡಿಕೊಡುತ್ತದೆ. ವಯಸ್ಸು ಹೆಚ್ಚಾದಂತೆ ಗೂನು ಕೂಡ ಹೆಚ್ಚಾಗುತ್ತದೆ.  ಇದಕ್ಕೆ ‘ವಿಡೋಸ್ ಹಂಪ್’ (widow’s humpಅಥವಾ ‘ಡೊವೆಜರ್ ಹ0ಪ್’ (Dowager’s hump ಎಂತಲೂ ಕರೆಯುತ್ತಾರೆ.


ಮೆದುಮೂಳೆಯ ರೋಗ ಲಕ್ಷಣಗಳು
·        ಅರಂಭದ ಹಂತದಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ. ಅಪರೂಪಕ್ಕೊಮ್ಮೆ ಮೈಕೈ ನೋವು, ಬೆನ್ನು ನೋವು ಅಥವಾ ಕಾಲು ನೋವು ಕಾಣಿಸಿಕೊಳ್ಳುವುದು
·        ಯಾವುದೇ ಆಘಾತವಿಲ್ಲದೆ ತನ್ನಂತಾನೆ ಮೂಳೆ ಮುರಿತ ಉಂಟಾಗುವುದು
·        ಒಸಡಿನ ರೋಗಗಳಿಲ್ಲದೆ ಹಲ್ಲು ಉದುರುವುದು ಈ ರೋಗದ ಲಕ್ಷಣ
·        ವ್ಯಕ್ತಿ ಗೂನಾಗುವುದು ಮತ್ತು ಎತ್ತರ ಕಡಿಮೆಯಾಗುವುದು


ಮೆದುಮೂಳೆಯನ್ನು ಪತ್ತೆ ಹಚ್ಚುವ ವಿಧಾನಗಳು
·        ಕ್ಷಕಿರಣ (X-ray):  ಇದರಲ್ಲಿ 30% ರಷ್ಟು ಮೂಳೆ ಸವೆದಿದ್ದರೆ ಮಾತ್ರ ತಿಳಿಯುತ್ತದೆ.
·        ಡೆಕ್ಸಾ (DEXA):  ಡ್ಯೂಯಲ್ ಎನರ್ಜಿ ಎಕ್ಸ್‍ರೇ ಅಬ್ಸರ್ಬ್‍ಶಿಯೊಮೆಟ್ರಿ (Dual Energy x-ray absorptiometry): ಇದರಿಂದ ಮೂಳೆಯ ಖನಿಜಾಂಶ ಸಾಂದ್ರತೆಯನ್ನು ಕ0ಡು ಹಿಡಿಯಬಹುದು
·       ಡಿ.ಪಿ.ಡಿ (D.P.D): ಡ್ಯುಯಲ್ ಪ್ರೋಟಾನ್ ಡೆನ್ಸಿಟೋಮೆಟ್ರಿ (Dual photon densitometry)
  • ಮೂಳೆ ಖನಿಜಾಂಶ ಸಾಂದ್ರತೆ (B.M.D-Bone Mineral density)


ಡ್ಯೂಯಲ್ ಎನರ್ಜಿ ಎಕ್ಸ್‍ರೇ ಅಬ್ಸರ್ಬ್‍ಶಿಯೊಮೆಟ್ರಿಯ ಸಹಾಯದಿಂದ ಬೆನ್ನುಮೂಳೆ, ತೊಡೆಯಮೂಳೆ, ಮೊಣಕೈ ಮೂಳೆ ಹಾಗೂ ಇತರ ಮೂಳೆಗಳ ಸಾಂದ್ರತೆ ಕಡಿಮೆಯಾಗಿದೆಯೆ ಎಂದು ಪತ್ತೆ ಹಚ್ಚಬಹುದು. ಶೇ 1-5 ರಷ್ಟೂ ಪ್ರಮಾಣದ ಮೂಳೆ ಸವೆತವನ್ನು ಈ ವಿಧಾನದಿಂದ ಕಂಡುಹಿಡಿಯಬಹುದು.

 ಮೆದುಮೂಳೆಗೆ ಚಿಕಿತ್ಸೆ

ಜೀವರಸ ಮರುಪೂರಣ ಚಿಕಿತ್ಸೆ  (Harmone Replacement therapy -HRT)
ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಗಳನ್ನು ಕೊಟ್ಟು ಮೂಳೆ ಸವೆಯುವುದನ್ನು ತಡೆಗಟ್ಟಬಹುದು. ಸರ್ಮ್ (SERM)  ಎನ್ನುವ ಈಸ್ಟ್ರೋಜನ್ ತರಹದ ಜೀವರಸಗಳು ಈಗೀಗ ಮಾರುಕಟ್ಟೆಯಲ್ಲಿ ಲಭ್ಯ. ಟಿಬೊಲೋನ್  ಅನ್ನು ಮಾತ್ರೆ ರೂಪದಲ್ಲಿ ಸೇವಿಸಬಹುದು. ಚರ್ಮದ ಮೇಲೆ ಅ0ಟಿಸಿಕೊಳ್ಳಬಹುದಾದ ಪ್ಯಾಚ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಯೋನಿಯೊಳಗೆ ಮುಲಾಮಿನ ರೂಪದಲ್ಲೂ ಇದನ್ನು ಉಪಯೋಗಿಸಬಹುದು. ‘ರಿ0ಗ್’ನ ರೂಪದಲ್ಲಿ ಇದನ್ನು ಯೋನಿಯ ಒಳಗಡೆ ಅಳವಡಿಸಬಹುದು. ಇವುಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವುದು ಉಚಿತವಲ್ಲ.

ಬೈಪಾಸ್ಪ್‍ನೇಟ್ಸ್    (Biphosphanates
ಇದನ್ನು ಉಪಯೋಗಿಸುವುದರಿಂದ ಮೂಳೆ ಮುರಿತವನ್ನು ತಡೆಗಟ್ಟಬಹುದು. ಮೂಳೆ ಸಾಂದ್ರತೆಯನ್ನು ಇರುವ ಮಟ್ಟದಲ್ಲೇ ಉಳಿಸಿಕೊಳ್ಳಬಹುದು. ಬೆನ್ನುಮೂಳೆ ಮತ್ತು ಸೊಂಟದ ಮೂಳೆಯ ಸಾಂದ್ರತೆ ಹೆಚ್ಚಿಸಲು ಇದು ಸಹಾಯಕವಾಗಿದೆ.

ಕ್ಯಾಲ್ಸಿಟೋನಿನ್ (Calcitonin
ಇದು ಥೈರಾಯಿಡ್ ಗ್ರಂಥಿ ಸ್ರವಿಸುವ ಒಂದು ಜೀವರಸ. ಇದನ್ನು ಮೂಗಿನ ಮೂಲಕ ಜೌಷಧಿಯಾಗಿ ಸೇವಿಸಬಹುದು. ಇದು ಕೂಡ ಮೂಳೆಯ ಸವೆತವನ್ನು ವಿಳಂಬಗೊಳಿಸುತ್ತದೆ.

ಕ್ಯಾಲ್ಸಿಯಂ/ ಕ್ಯಾಲ್ಸಿಟ್ರಿಯಲ್– (Calcitriol
ದಿನಕ್ಕೆ 1000 ಗ್ರಾಂ ನಿಂದ 1500 ಗ್ರಾಂ ನವರೆಗೆ ಕ್ಯಾಲ್ಸಿಯಂ ಸೇವಿಸುವುದರಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು.


ವಿಟಮಿನ್ ‘ಡಿ’
ವಿಟಮಿನ್ ‘ಡಿ’ ಅನ್ನಾಂಗ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೆಚ್ಚಿಸಿ ಮೂಳೆ ಮುರಿತವನ್ನು ಕಡಿಮೆ ಮಾಡುತ್ತದೆ. 400 ಐಯು ನಿಂದ 800 ಐಯು ವರೆಗೆ ದಿನವೂ ಸೇವಿಸಬೇಕು.

ಮೆಗ್ನೀಶಿಯಮ್;
ಕ್ಯಾಲ್ಸಿಯಂ ಒಟ್ಟಿಗೆ ಮೆಗ್ನೀಶಿಯಮ್ ಕೂಡ ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ ಹೀರುವಿಕೆಯನ್ನು ಪರಿಪೂರ್ಣಗೊಳಿಸುತ್ತದೆ. ಮೂಳೆ ರಚನೆಗೆ ಸಹಾಯ ಮಾಡುವ ಆಲ್ಕಲೈನ್ ಫಾಸ್ಪಟೇಸ್ ಕಿಣ್ವವನ್ನು ಪ್ರಚೋದಿಸಿ ಕಾರ್ಯಮಗ್ನಗೊಳಿಸುತ್ತದೆ.

ಮೆದುಮೂಳೆಯು ಬಾರದಂತೆ ಹೇಗೆ ತಡೆಗಟ್ಟುವುದು?
ಅ)  ಕ್ಯಾಲ್ಸಿಯಂ ಮತ್ತು ವಿಟಮಿನ್ ‘ಡಿ’ ಸೇವನೆ: ಋತುಬಂಧದ ಮೊದಲು ಎಲ್ಲಾ ಮಹಿಳೆಯರು ದಿನಕ್ಕೆ 1200 ಮಿ.ಗ್ರಾಂ. ನಷ್ಟು ಕ್ಯಾಲ್ಸಿಯಂ ಅನ್ನು ಸೇವಿಸಬೇಕು. ಋತುಬಂಧದ ನಂತರ 1500 ಮಿ.ಗ್ರಾಂ. ನಷ್ಟು ಸೇವಿಸಬೇಕು
ಆ) ವಿಟಮಿನ್ ‘ಡಿ’ ಯನ್ನೂ ದಿನಕ್ಕೆ 400 ಐಯು ನಷ್ಟು ಉಪಯೋಗಿಸಬೇಕು. ಋತುಬಂಧದ ನಂತರ ಇ)  ಬಾಲ್ಯದಿಂದಲೂ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸೂರ್ಯನ ಕಿರಣಗಳಿಗೆ ಮೈಯನ್ನು ಈ)  ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರಬೇಕು. ಹಾಲು, ಮೊಸರು, ಚೀಸ್, ಕಾಯಿಪಲ್ಲೆ, ಹಸಿರು ತರಕಾರಿಗಳು ಹಾಗೂ ಕೆಲವು ಕಾಳುಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ
ಉ)  ಎಳವೆಯಿಂದಲೇ ಕ್ಯಾಲ್ಸಿಯಂ ಮತ್ತು ವಿಟಮಿನ್ ‘ಡಿ’ ಅನ್ನು ಸರಿಯಾಗಿ ತೆಗೆದುಕೊಳ್ಳಬೇಕು
ಊ)  ಧೂಮಪಾನ ಸೇವಿಸುವುದನ್ನು ನಿಲ್ಲಿಸುವುದರಿಂದ ಮೂಳೆ ಸವೆಯುವುದು ನಿಲ್ಲುತ್ತದೆ
ಋ)  ಮಧ್ಯಪಾನ ನಿಲ್ಲಿಸಿ
ಎ)  ಅತಿಯಾದ ಕಾಫಿ ಸೇವನೆ ಸಲ್ಲದು

ವ್ಯಾಯಾಮ ಏನು ಮಾಡುವುದು?


ಗುರುತ್ವ ಶಕ್ತಿಯ ವಿರುದ್ಧದ ವ್ಯಾಯಾಮಗಳಿಂದ ಮೂಳೆಗಳು ಬಲಗೊಳ್ಳುತ್ತವೆ. ಬಿರುನಡಿಗೆ, ಜಾಗಿಂಗ್ ಮೆಟ್ಟಿಲುಗಳನ್ನೇರುವುದು, ಭಾರ ಹೊರುವ ವ್ಯಾಯಾಮ, ಟೆನ್ನಿಸ್, ಶಟಲ್, ಇತರೆ ಯಾವುದೇ ವ್ಯಾಯಾಮ ನಿಮ್ಮ ತೂಕವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದರೆ ದಿನದಲ್ಲಿ ಕನಿಷ್ಟ ಪಕ್ಷ ಮೂವತ್ತು ನಿಮಿಷ ಮಾಡಬೇಕು. 3 ಕಿ.ಮೀ. ನಷ್ಟು ನಿತ್ಯ ನಡಿಗೆ ಮಾಡಬಹುದು. ಕನಿಷ್ಟ ಪಕ್ಷ ವಾರದಲ್ಲಿ ಮೂರು ಬಾರಿಯಾದರೂ 20 ರಿ0ದ 30 ನಿಮಿಷಗಳ ಕಾಲ ನಡೆಯುವುದು ಬಹು ಮುಖ್ಯ. ಕ್ರೀಡಾಪಟುಗಳಾಗಿದ್ದ ಮಹಿಳೆಯರು ಮುಪ್ಪಿನಲ್ಲಿ ಮೂಳೆ ಸವೆತಕ್ಕೆ ಒಳಗಾಗುವುದು ಕಡಿಮೆ. ದೈಹಿಕವಾಗಿ ಕಠಿಣ ಕಾರ್ಯಗಳಲ್ಲಿ ತೊಡಗಿಸಿಕೊ0ಡಿರುವ ಮಹಿಳೆಯರಲ್ಲೂ ಹೆಚ್ಚಿನ ಗಟ್ಟಿಮೂಳೆಗಳಿರುವುದು ಕಂಡುಬಂದಿದೆ. ನೃತ್ಯ ಕೂಡ ಮೂಳೆಗಳನ್ನು ಗಟ್ಟಿಯಾಗಿಡಲು ಸಹಾಯಮಾಡುವುದು. ವ್ಯಾಯಾಮ, ಸರಿಯಾದ ಆಹಾರ ಪೋಷಣೆ ಹಾಗೂ ಮೂಳೆಸಾಂದ್ರತೆ ಒಂದಕ್ಕೊಂದು ನಂಟು ಹೊಂದಿರುವುದನ್ನು ಹಲವು ವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮೂಲಕ ಧೃಡಿಪಡಿಸಿದ್ದಾರೆ.


ಋತುಬಂಧದ ನಂತರ ಮೂಳೆ ಮುರಿಯಲು ಸಣ್ಣ ಪುಟ್ಟ ಪೆಟ್ಟಾದರೂ ಸಾಕು. ಆದ್ದರಿಂದ ವಯಸ್ಸಾದವರು ಬೀಳುವುದನ್ನು ತಡೆಗಟ್ಟಲು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಅವು ಯಾವುದೆಂದರೆ:
·        ನಿಮಗೆ ನಡೆಯಲು ಕಷ್ಟವಾದರೆ ಊರುಗೋಲನ್ನು ಉಪಯೋಗಿಸಿ
·      ನಿಮ್ಮ ಚಪ್ಪಲಿ ಅಥವಾ ಶೂ ಅನ್ನು ಧರಿಸುವಾಗ ಸರಿಯಾಗಿ ಧರಿಸಿಕೊಳ್ಳಿ, ಶೂಲೇಸನ್ನು ಸರಿಯಾಗಿ  ಕಟ್ಟಿಕೊಳ್ಳಲು ಮರೆಯಬೇಡಿರಿ
·     ಓದುವಾಗ ಓದುವ ಕನ್ನಡಕವನ್ನು ಉಪಯೋಗಿಸಿ, ನಡೆಯುವಾಗ ನಿಮ್ಮ ಮಾಮೂಲಿ ಕನ್ನಡಕವನ್ನು  ಉಪಯೋಗಿಸಲು ಮರೆಯಬೇಡಿರಿ
·        ಪಾದ ಒರೆಸುವ ಬಟ್ಟೆ ಸರಿಯಾಗಿದೆಯೇ ಎಂದು ನೋಡಿಕೊಂಡು ಉಪಯೋಗಿಸಿ
·        ಬಚ್ಚಲು ಮನೆಯಲ್ಲಿ ಹಾಗೂ ಶೌಚಾಲಯದಲ್ಲಿ ಕೈಕಂಬಗಳನ್ನು (Hand rails) ಮಾಡಿಸಿಕೊಳ್ಳಿರಿ
·        ನಿಮ್ಮ ಹಾಸಿಗೆಯ ಪಕ್ಕದಲ್ಲಿ ದೀಪವಿರಲಿ ಇಲ್ಲವೆ ಟಾರ್ಚ್ (Torch ಅನ್ನು ಉಪಯೋಗಿಸಲು 
ಮರೆಯಬೇಡಿರಿ
·        ಮೆಟ್ಟಲು ಹತ್ತುವಾಗ ಮತ್ತು ಎಲ್ಲಾ ಇಕ್ಕಟ್ಟು ಪ್ರದೇಶಗಳಲ್ಲಿ ಬೆಳಕು ಸರಿಯಾಗಿ ಇರುವಂತೆ
ನೋಡಿಕೊಳ್ಳಿ
·        ಅವಶ್ಯಕತೆಯಿರುವ ವಸ್ತುಗಳನ್ನು ಕೈಗೆಟಕುವಂತೆ ಇಟ್ಟುಕೊಳ್ಳಿರಿ
·  ಯಾವುದೇ ಕೆಲಸ ಮಾಡುವಾಗ ನಿಧಾನದಿಂದ ಜಾಗ್ರತೆಯಿಂದ ಮಾಡಿರಿ. ಗಡಿಬಿಡಿ ಮಾಡಿಕೊಳ್ಳುವುದು ಒಳ್ಳೆಯದಲ್ಲ

ಟೊಳ್ಳು ಮೂಳೆ ಇದ್ದಲ್ಲಿ ಮೂಳೆ ಮುರಿತಕ್ಕೆ ಕಾರಣಗಳು

* ವಯಸ್ಸು 65 ವರ್ಷಕ್ಕಿಂತ ಹೆಚ್ಚಾಗಿದ್ದರೆ
* ಮನೆಯಲ್ಲಿ ಯಾರಿಗಾದರೂ ಟೊಳ್ಳುಮೂಳೆಯಿದ್ದು ಮೂಳೆ ಮುರಿತವಿದ್ದರೆ (ತಾಯಂದಿರಲ್ಲಿ ಸೊಂಟ ಮೂಳೆ ಮುರಿತ)
* ಹಿಂದೆ ಯಾವಾಗಲಾದರೂ ಮೂಳೆ ಮುರಿದಿದ್ದರೆ
* ಅಕಾಲಿಕ ಋತುಬಂಧವಾಗಿದ್ದರೆ
* ಎಕ್ಸ್-ರೆ ತೆಗೆದಾಗ ಟೊಳ್ಳುಮೂಳೆ ಕಾಣಿಸಿದರೆ
* ಕೆಲವು ಔಷಧಿ ಸೇವನೆಯಿಂದ
* ಸಂಧಿವಾತ, ಕರುಳಿನ ತೊಂದರೆಯಿದ್ದರೆ-ಇತರೆ ರೋಗವಿದ್ದರೆ
* ಕಡಿಮೆ ತೂಕವಿದ್ದರೆ
* ಧೂಮಪಾನ, ಮಧ್ಯಪಾನ ಹಾಗೂ ಅತಿಯಾಗಿ ಕಾಫಿ ಸೇವಿಸುತ್ತಿದ್ದರೆ

(ಮುಂದುವರೆಯುತ್ತದೆ)
ಡಾ ಪೂರ್ಣಿಮಾ. ಜೆ      

No comments:

Post a Comment