Tuesday 7 March 2017

ಪ್ರಸ್ತುತ - ಹೊಸ ಎಚ್ಚರದ ಉತ್ಸಾಹದಲ್ಲಿ


' ಒಂದಲ್ಲ ಒಂದು ದಿನ
ಈ ನೆಲದಾ ಹೆಣ್ಣುಗಳು
ಮೆರವಣಿಗೆ ಹೊರಡುತ್ತಾರೆ....'!

ಕವಯಿತ್ರಿ ವಿನಯಾ ವಕ್ಕುಂದರವರ ಈ ಕವಿತೆ ಹಾಡಾಗಿ ತೇಲಿಬರುತ್ತಿದ್ದರೆ ಅವ್ಯಕ್ತ ಅನುಭೂತಿಯೊಂದು ನಮ್ಮನ್ನು ಸ್ಪರ್ಶಿದಂತಾಗುತ್ತದೆ. ಎಂತದೋ ಆತ್ಮಿಕ ಶಕ್ತಿ ಮೈ ಮನಸ್ಸನ್ನು ಪ್ರವಹಿಸಿದಂತಾಗುತ್ತದೆ. ಮನಸ್ಸು ಅವೇ ಸಾಲುಗಳನ್ನು ಗುನುಗುವಂತಾಗುತ್ತದೆ.
‌ ಒಂದು ಕಾಲಕ್ಕೆ ಸಂಜೆಯಾದರೆ ಸಾಕು ಕಣ್ಣಲ್ಲಿ ಭಯದ ದೀಪ ಹೊತ್ತಿಸಿಕೊಂಡು, ಬಾಗಿಲತ್ತ ಒಂದು ಕಣ್ಣಿಟ್ಟೇ ಉಸಿರಾಡುವ ಅವ್ವಂದಿರು, ಅಕ್ಕತಂಗಿಯರಿದ್ದರು ನನ್ನೂರಿನಲ್ಲಿ. ಅಪ್ಪ ಬರುತ್ತಾರೆಂದು ತನ್ನ ಬಾಲ್ಯದ ತುಂಟತನಗಳನ್ನೂ ಹತ್ತಿಕ್ಕಿಕ್ಕೊಂಡು ಮುಖಕ್ಕೆ ಇಸ್ತ್ರಿ ಹಾಕಿಕೊಂಡು ಕೈ ಕಟ್ಟಿಕೊಂಡು ಕೂರುತ್ತಿದ್ದ ಹೆಣ್ಣುಮಕ್ಕಳಿದ್ದರು. ಅಪ್ಪ ಓದಿಸುವುದಿಲ್ಲ ಅಂತ ಓದಿನ ಆಸೆಗೆ ಎಳ್ಳು ನೀರಿಟ್ಟು, ಅಪ್ಪ ಒಪ್ಪಿದ್ದು ಅಂತ ಕೊರಳೊಡ್ಡುವವರಿದ್ದರು!
ಶಾಲೆ, ಕಾಲೇಜಿಗೆ ಹೋಗಿ ಬರುವುದೂ, ಗೆಳತಿಯರೊಂದಿಗೆ ಚೂರು ಸಮಯ ಕಳೆಯುವುದೂ ಅಪ್ಪನ, ಅಣ್ಣ, ತಮ್ಮರ  ' ಕಾವಲಿ' ನಲ್ಲೇ ಆಗುವ ಕಾಲವಿತ್ತು.
  ಕಾಲದ ತಿರುಗುವಿಕೆಯಲ್ಲಿ ಎಷ್ಟೊಂದು ಬದಲಾವಣೆ. ಅರಿವು ಆಂದೋಲನವಾಗಿ, ಅಕ್ಷರ ಬೆಳಕಾಗಿ ಚೆಲ್ಲಿಕೊಂಡ ಮೇಲೆ ಯಾವ ಗೋಡೆಗಳು ಬೆಳಕ ತಡೆದಾವು!? ನೂರು ಮನೆಗಳನ್ನು ಮೀರದ ನನ್ನೂರಿನಲ್ಲಿ ಆರೇಳು ಸ್ತ್ರೀ ಶಕ್ತಿ ಸಂಘಗಳು!ಮಹಿಳೆಯರೇ ಸ್ಥಾಪಿಸಿಕೊಂಡ ಹಾಲು ಉತ್ಪಾದಕರ ಸಂಘ! ಸಂಘಟನೆಯ ಶಕ್ತಿಯೇ ಅಂತಹುದಲ್ವ! ಸಮೂಹಗಳಲ್ಲಿ ಸೇರಿ ಸಮಾಜವನ್ನು ನೋಡತೊಡಗಿದ ಹೆಣ್ಣುಮಕ್ಕಳಿಗೆ ಪುರುಷಾಹಂಕಾರ ಅರ್ಥವಾಗತೊಡಗಿತು! ಪುರುಷಪ್ರಧಾನ ವ್ಯವಸ್ಥೆಯ ದೌರ್ಜನ್ಯಗಳು ಅರಿವಾಗತೊಡಗಿದವು. ಹಿಂಸೆಯ ರೂಪಗಳು ಗೋಚರವಾಗತೊಡಗಿದವು. ಕೂಡಿಟ್ಟುಕೊಳ್ಳತೊಡಗಿದ ಸಣ್ಣ ಮೊತ್ತ ಬದುಕಿಗೆ ಅಪಾರವಾದ ಆತ್ಮವಿಶ್ವಾಸವನ್ನು ತಂದು ಕೊಡತೊಡಗಿತು! ದಿನಂಪ್ರತಿ ಕುಡಿದು ಬಂದು ಮನುಷ್ಯತ್ವ ಮರೆತು ವರ್ತಿಸುತ್ತಿದ್ದ ಗಂಡನನ್ನು ಪ್ರಶ್ನಿಸುವಂತಾಗುವುದು, ಬಲಪ್ರದರ್ಶನಕ್ಕೆ ಪ್ರತಿರೋಧ ತೋರಿಸುವುದು ಕಡಿಮೆಯೇನಲ್ಲ ಅಲ್ವಾ!?
ಅಪ್ಪ, ನೀನು ಸರಿ ಇದ್ದರಷ್ಟೇ ನನ್ನನ್ನು ಪ್ರಶ್ನಿಸಲು ಸಾಧ್ಯ ಎನ್ನುವ ಹೆಣ್ಣುಮಕ್ಕಳು ತಮ್ಮ ಓದು, ವಿವಾಹಗಳ ಬಗ್ಗೆ ತೀರ್ಮಾನ ಮಾಡುವಷ್ಟು ಬೆಳೆದದ್ದೂ ಸಾಧನೆಯೇ.!
ಮಗಳು ಬೈತಾಳೆ ಎನ್ನುವ ಅಪ್ಪಂದಿರನ್ನು ಕಂಡಾಗ ಹೆಮ್ಮೆಯಾಗುತ್ತದೆ.

  ಆದರೂ ಇದು ಸಂಪೂರ್ಣ ತೃಪ್ತಿ ತರುವಂತದ್ದೇನಲ್ಲ. ಒಂದು ಪ್ರತಿಷ್ಠಿತ ಹುದ್ದೆಯಲ್ಲಿ ಇರಬಹುದಾದ ಗಂಡನ ಹೆಂಡತಿಯೊಬ್ಬಳು ತನ್ನ ಗಂಡ ಆಫೀಸಿಗೆ ಹೋದ ನಂತರವೇ ಕದ್ದು ಮುಚ್ಚಿ ತನ್ನ ತವರಿಗೆ, ಗೆಳತಿಯರಿಗೆ ಫೋನು ಮಾಡುವುದನ್ನು ಏನನ್ನೋಣ!? ಏನಮ್ಮ,ಹೇಗಿದ್ದೀ? ಅಂತ ಪರಿಚಯದವರು ಕೇಳಿದರೂ ಗಂಡ ಬೈಯ್ಯುವ ಕಾರಣಕ್ಕೆ ಕದವಿಕ್ಕಿಕೊಳ್ಳುವವರ ಅಸಹಾಯಕತೆಗೆ ಏನು ಹೇಳುವುದು?ಆಡಲಾಗದೆ, ಅನುಭವಿಸಲಾಗದೆ ಮೌನವಾಗಿ ಸಂಕಟಪಡುವ, ನಾಲ್ವರು ಗಂಡುಮಕ್ಕಳಿದ್ದೂ ಗುಡಿಸಲಲ್ಲಿ ಬದುಕು ಕಳೆಯುವ ತಾಯಂದಿರ ಕರುಳ ಸಂಕಟಕ್ಕೆ ಯಾವ ಭಾಷೆ!?
   ಆದರೂ ಅರಿವು ಇವತ್ತು ಅಸ್ತ್ರವಾಗಿದೆ. ಜಗತ್ತನ್ನು ತನ್ನದೇ ದೃಷ್ಟಿಯಲ್ಲಿ ನೋಡಬಯಸುವ ಅವಳ ಛಾತಿಯಿಂದ ಬದಲಾವಣೆಗಳು ತೆರೆದುಕೊಳ್ಳುತ್ತಿವೆ. ತನ್ನ ಹಾದಿಯನ್ನು ನಿಚ್ಚಳ ಮಾಡಿಕೊಂಡು ಸ್ಪಷ್ಟ ಕನಸಿಟ್ಟುಕೊಂಡು ನಡೆಯುವ ಹೆಣ್ಣು ಮಕ್ಕಳು ನಿಜವಾಗಿ ' ಹೊಸ ಹಾಡ ಹಾಡುತ್ತ ...ಮೆರವಣಿಗೆ ಹೊರಡುತ್ತಾರೆ..!"

  -  ರಂಗಮ್ಮಹೊದೇಕಲ್.

No comments:

Post a Comment