Tuesday 7 March 2017

ಮಹಿಳಾ ಇತಿಹಾಸ - ೧ - ಅಂತರರಾಷ್ಟ್ರೀಯ ಮಹಿಳಾ ದಿನದ ಇತಿಹಾಸ





"ಸಮಾಜ ಮಹಿಳೆಯರ ಮುಕ್ತ ಬೆಳವಣಿಗೆಯನ್ನು ಒಪ್ಪಿಕೊಳ್ಳದಿದ್ದರೆ ಆ ಸಮಾಜವನ್ನು ಪುನರ್ ರಚಿಸಬೇಕು" ಎಂದು ಆಧುನಿಕ ಯುಗದ ಪ್ರಥಮ ಮಹಿಳಾ ವೈದ್ಯೆ ಎಲಿಜಬೆತ್ ಬ್ಲಾಕ್ವೆಲ್ ಹೇಳಿರುವುದು ಅಕ್ಷರಶಃ ಸತ್ಯವಾದುದು. ಈ ನಿಟ್ಟಿನಲ್ಲಿ ಮಹಿಳೆಯರ ಮುಕ್ತ ಬೆಳವಣಿಗೆಯನ್ನು ಒಪ್ಪದ ಸಮಾಜವನ್ನು ಬದಲಿಸುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಈಗಲೂ ಸಹ ನಡೆಯುತ್ತಿದೆ. ಮಹಿಳೆ ಏನೆಲ್ಲಾ ಸಾಧನೆ ಮಾಡಿದರು ಎಷ್ಟೇ  ಮೇಲಿನ ಸ್ಥಾನಕ್ಕೇರಿದರೂ ಒಂದಲ್ಲ ಒಂದು ರೀತಿ ಶೋಷಣೆಗೊಳಗಾಗುತ್ತಲೇ ಇದ್ದಾಳೆ. ಈ ರೀತಿ ಶೋಷಣೆಗೊಂಡ ಮಹಿಳೆಯರ ಅವಿರತ ಹೋರಾಟದಿಂದ ಜನ್ಮ ತಾಳಿ ಬಂದುದೆ ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಮಾರ್ಚ್ 8 ರಂದು ಈ ದಿನವನ್ನು ಆಚರಿಸಲಾಗುತ್ತದೆ. "ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ" ಇದರ ಮೂಲ ಉದ್ದೇಶ.


  ಈ ಮಹಿಳಾ ಹೋರಾಟವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. 1789 ರ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪರ್ಷಿಯನ್  ಮಹಿಳೆಯರು "ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಮತಚಲಾವಣೆಗಾಗಿ ಮೆರವಣಿಗೆಯನ್ನು ಮಾಡಿದರು.
1792 – ಮೇರಿ ವೋಲ್ಸ್‍ಟನ್‍ಕ್ರಾಫ್ಟ್ "ಮಹಿಳಾ ಹಕ್ಕುಗಳ ಪುರಾವೆ"ಯನ್ನು  ರಚಿಸಿದರು.


"ಸ್ತ್ರೀಯರು ಪುರುಷರಿಗಿಂತ ಯಾವುದೇ ರೀತಿಯಲ್ಲಿ ಕೀಳಲ್ಲ; ಹಾಗಾಗಿ ಸಮಾನ ಹಕ್ಕುಗಳನ್ನು ನೀಡಬೇಕು. ಶಿಕ್ಷಣದ ಮೂಲಕ ಸ್ತ್ರೀಯರ ಮನಸ್ಸು ಸದೃಢ ಮತ್ತು ವಿಸ್ತಾರಗೊಳ್ಳುತ್ತದೆ; ಆ ಮೂಲಕ ಕುರುಡು ವಿಧೇಯತೆ ಕೊನೆಯಾಗುತ್ತದೆ. ಸ್ತ್ರೀಯರು ಪುರುಷರ ಮೇಲೆ ಅಧಿಕಾರ ಹೊಂದಿರಬೇಕೆಂದು ನಾನು ಇಚ್ಛಿಸುವುದಿಲ್ಲ; ತಮ್ಮ ಮೇಲೆ ತಾವು ಅಧಿಕಾರ ಹೊಂದಿರಬೇಕು. ನಮಗೆ ಬೇಕಿರುವುದು ನ್ಯಾಯ, ಭಿಕ್ಷೆಯಲ್ಲ!!" ಎಂದು ಘಂಟಾಘೋಷವಾಗಿ ಸಾರಿದರು. 
   1848 ರಲ್ಲಿ ನಡೆದ ಸಮಾವೇಶದಲ್ಲಿ ಎಲಿಜಬೆತ್ ಕ್ಯಾಡಿ ಸ್ಟಾನ್ಟನ್ ಮತ್ತು ಲುಕ್ರೆಷಿಯ ಮೋಟ್ ರವರು ಪುರುಷ ಮತ್ತು ಮಹಿಳೆಯರನ್ನು ಸಮಾನ ದೃಷ್ಟಿಯಲ್ಲಿ  ಕಾಣಬೇಕೆಂದು ವಾದಿಸಿದರು.
  ನ್ಯೂಯಾರ್ಕ್ನ ಬಟ್ಟೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯರ ಸ್ಥಿತಿ  ಶೋಚನೀಯವಾಗಿತ್ತು. ಅಲ್ಲಿ ಅವರ ಶ್ರಮಕ್ಕೆ ತಕ್ಕಂತೆ ವೇತನ ನೀಡುತ್ತಿರಲಿಲ್ಲ. ದುಡಿಯುವ ಅವಧಿಯು ಹೆಚ್ಚಾಗಿತ್ತು. ಇದರಿಂದ ಬೇಸತ್ತ ಮಹಿಳೆಯರು ದುಡಿಯುವ ಅವಧಿಯನ್ನು ಕಡಿಮೆ ಮಾಡಿ, ಶ್ರಮಕ್ಕೆ ತಕ್ಕಂತೆ ವೇತನವನ್ನು ನೀಡುವಂತೆ ಮತ್ತು ಪುರುಷರಿಗಿರುವಂತೆ ಮತ ಚಲಾಯಿಸುವ ಹಕ್ಕನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. 1875 ಮಾರ್ಚ್ 8 ರಂದು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ಪ್ರತಿಭಟನೆ ಕ್ರಮೇಣ ವಿಶ್ವದಾದ್ಯಂತ ವ್ಯಾಪಿಸಿತು. ನಂತರ ಅನೇಕ ಮಹಿಳಾ ಸಂಘಟನೆಗಳು ಹುಟ್ಟಿದವು.
  1890 ರಲ್ಲಿ ಪ್ರಾರಂಭಗೊಂಡ  NAWSA ( National American Women Suffrage Association)  ಮತ ಚಲಾಯಿಸುವ ಹಕ್ಕಿಗಾಗಿ ಹೋರಾಟ ನಡೆಸಿತು.
     1889 ರಲ್ಲಿ ಕ್ಲಾರಾ ಜೆಟ್ಕಿನ್ ರವರು ಪ್ಯಾರಿಸ್ ನಲ್ಲಿ ನಡೆದ ಕಾಂಗ್ರೆಸ್  ಸಮಾವೇಶದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ತಮ್ಮ ಪ್ರಥಮ ಭಾಷಣವನ್ನು ಮಾಡಿದರು.
  1903 ರಲ್ಲಿ ಬ್ರಿಟನ್ನಿನಲ್ಲಿ  WSPU (women's Social Political Union) ಸಹ ಮತ ಚಲಾಯಿಸುವ ಹಕ್ಕಿಗಾಗಿ ಚಳುವಳಿಯನ್ನು ಮಾಡಿತು.
   1908 ರಲ್ಲಿ ವಾಷಿಂಗ್ಟನ್ ನಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಮಹಿಳೆಯರು  ಕಡಿಮೆ ದುಡಿಯುವ ಅವಧಿ,  ಉತ್ತಮ ವೇತನ ಮತ್ತು ಮತ ಚಲಾಯಿಸುವ ಹಕ್ಕಿಗಾಗಿ ದೊಡ್ಡ ಮೆರವಣಿಗೆಯನ್ನು ನಡೆಸಿದರು.
  1909 ರಲ್ಲಿ ಅಮೆರಿಕಾದ ಸಮಾಜವಾದಿ ಪಕ್ಷವು ಫೆಬ್ರವರಿ 28 ರಂದು "ಪ್ರಥಮ ರಾಷ್ಟ್ರೀಯ ಮಹಿಳಾ ದಿನ " ವನ್ನು ಆಚರಿಸಿ ತಮ್ಮ ಬೇಡಿಕೆಗಳನ್ನು  ಮಂಡಿಸಿತು.
1910 ರಲ್ಲಿ ಜರ್ಮನಿಯ ಸಮಾಜವಾದಿ ಕ್ಲಾರಾ ಜೆಟ್ಕಿನ್ ಮತ್ತು ರೋಸಾ ಲುಕ್ಸೆಮ್ಬರ್ಗ್ ರವರ ನೇತೃತ್ವದಲ್ಲಿ ಎರಡನೆ ಅಂತರರಾಷ್ರೀಯ ಕಾರ್ಮಿಕ ಮಹಿಳೆಯರ ಸಮಾವೇಶ ಕೊಪನ್ಹೇಗ್ ನಲ್ಲಿ ನಡೆಯಿತು. ಇದರಲ್ಲಿ  ಕ್ಲಾರಾರವರು ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವಂತೆ ಪ್ರಸ್ತಾಪಿಸಿದರು. ಈ ಸಮಾವೇಶದಲ್ಲಿ ಸುಮಾರು ನೂರು ಮಹಿಳೆಯರು ಹದಿನೇಳು ರಾಷ್ಟ್ರಗಳಿಂದ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.



   1911 ಮಾರ್ಚ್ 19 ರಲ್ಲಿ ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ಅಮೆರಿಕದ, ಇಂಗ್ಲೆಂಡ್ ಮತ್ತು ಸ್ವಿಟ್ಜರ್‌ಲೆಂಡ್ ನ ಮಹಿಳೆಯರು ಪ್ರತಿಭಟನೆ ನಡೆಸಿದರು. ಇದರಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಾಗಿ ಮಹಿಳೆಯರು ಮತ್ತು ಪುರುಷರು  ಭಾಗವಹಿಸಿದ್ದರು. ಇದರ ಉದ್ದೇಶ ಸ್ತ್ರೀ-ಪುರುಷ ತಾರತಮ್ಯ ನೀತಿಯ ನಿರ್ಮೂಲನವಾಗಿತ್ತು. ಕ್ರಮೇಣ ಈ ಪ್ರತಿಭಟನೆ ವಿಶ್ವದ ಎಲ್ಲೆಡೆ ಪ್ರಾರಂಭವಾಯಿತು.
   1913 ರಲ್ಲಿ ರಷ್ಯಾದ ಮಹಿಳೆಯರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು ಮತ್ತು ನಾರ್ವೆಯ ಮಹಿಳೆಯರು ಮತ ಚಲಾಯಿಸುವ ಹಕ್ಕನ್ನು ಪಡೆದುಕೊಂಡರು. 
  1914 ರ ಪ್ರಥಮ ಜಾಗತಿಕ ಯುದ್ಧದಲ್ಲಿ ಯೂರೋಪಿನ ಮಹಿಳೆಯರು  ಯುದ್ಧವನ್ನು ವಿರೋಧಿಸಿ ಮೆರವಣಿಗೆ ನಡೆಸಿ, ವಿಶ್ವಶಾಂತಿಗಾಗಿ ತಮ್ಮ ಐಕ್ಯತೆಯನ್ನು ತೋರಿಸಿದರು.
  1917 ರಲ್ಲಿ ರಷ್ಯಾ ದೇಶವು ಮಾರ್ಚ್ 8 ರಂದು ಅಧಿಕೃತವಾಗಿ ಸರ್ಕಾರಿ ರಜೆಯೆಂದು ಘೋಷಿಸಿತು ಮತ್ತು ಮಹಿಳೆಯರಿಗೆ  ಸಮಾನ ಅವಕಾಶಗಳನ್ನು ನೀಡಿತು. 
    ನಂತರ ಆಸ್ಟ್ರಿಯಾ ,ಅಮೆರಿಕಾ, ಕೆನಡಾ,  ಹಂಗೇರಿ,  ಜರ್ಮನಿ,  ಸ್ವೀಡನ್, ಬ್ರಿಟನ್, ಚಿಲಿ, ಜಪಾನ್ ಮೊದಲಾದ ರಾಷ್ಟ್ರಗಳು ಮಹಿಳೆಯರಿಗೆ ಹಕ್ಕುಗಳನ್ನು ನೀಡಿದವು.
   1975 ರಲ್ಲಿ ಪ್ರಥಮ ಬಾರಿಗೆ ಯುನೈಟೆಡ್ ನೇಷನ್ಸ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿತು ಮತ್ತು ಆ ವರ್ಷವನ್ನು  "ಅಂತರರಾಷ್ಟ್ರೀಯ ಮಹಿಳೆಯರ ವರ್ಷ" ಎಂದು ಘೋಷಿಸಲಾಯಿತು.
   ಈ ರೀತಿಯಾಗಿ ಶೋಷಣೆಯ ವಿರುದ್ಧ ಆರಂಭವಾದ ಹೋರಾಟದ ಫಲವಾಗಿ ಮಾರ್ಚ್ 8 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ರೂಪುಗೊಂಡಿತು.
  2011ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷವಾಗಿತ್ತು. ಅಂದರೆ 2011 ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನೂರನೇ ವಸಂತಕ್ಕೆ ಕಾಲಿರಿಸಿತು.
  ಹೀಗೆ ಅಂತರರಾಷ್ಟ್ರೀಯ. ಮಹಿಳಾ ದಿನಾಚರಣೆಯು ಶತಮಾನವನ್ನು ಕಂಡರೂ ಮಹಿಳೆಯರ ಸ್ಥಿತಿಯಿನ್ನೂ ಸುಧಾರಿಸಿಲ್ಲ. "ಹೆಣ್ಣು ಕ್ಷಮಯಾ ಧರಿತ್ರಿ, ಸಹನೆಶೀಲೆ, ತ್ಯಾಗಮಾತೆ, ಪೂಜ್ಯನೀಯಳು" ಎಂದೆಲ್ಲಾ ಹೊಗಳಿದರೂ ಈ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರ ಮಾಡುವುದು ನಿಂತಿಲ್ಲ. ಇನ್ನೂ ಸಹಾ ಎಷ್ಟೋ ಮಹಿಳೆಯರು ಕತ್ತಲೆಯಲ್ಲಿಯೇ ಇದ್ದಾರೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ಸ್ತ್ರೀ ಭ್ರೂಣಹತ್ಯೆ ಅವಿರತವಾಗಿ ನಡೆಯುತ್ತಲೇ ಇದೆ. ಇನ್ನು ವರದಕ್ಷಿಣೆ ಸಮಸ್ಯೆ, ಬಾಲ್ಯವಿವಾಹ ಸಮಸ್ಯೆ ಜೀವಂತವಾಗಿದೆ.
  ಇದನ್ನೆಲ್ಲಾ ಹೋಗಲಾಡಿಸಲು ಬೇಕಾದರೆ ಹೆಣ್ಣಿನ ಬಗ್ಗೆಯಿರುವ ಪರಿಕಲ್ಪನೆ  ಬದಲಾಗಬೇಕು. ಹಿಂದೆ "ಹೆಣ್ಣು ಸಂಸಾರದ ಕಣ್ಣಾಗಿದ್ದಳು" ಆದರೆ ಈಗ ಇಡೀ ಸಮಾಜದ ಕಣ್ಣಾಗಿ ಬೆಳೆಯಬೇಕು. ಅಂದರೆ ಈಗ ಆಕೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾಳೆ. ಇದನ್ನೆಲ್ಲಾ ಸಾಧಿಸಬೇಕಾದರೆ ಅಂದರೆ ಪ್ರಜ್ಞಾವಂತ ಪ್ರಜೆಯಾಗಿ ರೂಪುಗೊಳ್ಳಬೇಕಾದರೆ ಅವಳಿಗೆ ತಂದೆ, ತಾಯಿ ಸರಿಯಾದ ಶಿಕ್ಷಣವನ್ನು ನೀಡಿ, ಅವಳನ್ನು ಸಬಲೆಯನ್ನಾಗಿ ಬೆಳೆಸಬೇಕು. ಇದರಿಂದ ಅವಳಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿ ಅವಳು ಪ್ರಗತಿಯತ್ತ ಸಾಗುತ್ತಾಳೆ ಮತ್ತು ಇಡೀ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಾಳೆ ಎಂಬುವುದರಲ್ಲಿ ಸಂಶಯವೇ ಇಲ್ಲ. 
    -ವಿಜಯಲಕ್ಷ್ಮಿ  .ಎಂ.ಎಸ್.

No comments:

Post a Comment