Tuesday 7 March 2017

ಕವನ - ಅಂತರರಾಷ್ಟ್ರೀಯ ಮಹಿಳಾ ದಿನ



ಮತ್ತೊಮ್ಮೆ ಬಂದಿದೆ
ಮಾರ್ಚ್ ಎಂಟು
ಮಹಿಳಾ ದಿನವೆಂದೆ
ನಮಗದರ ನಂಟು.

ನೂರು ವರುಷಗಳ
ಇತಿಹಾಸ ಉಂಟು
ಬಿಚ್ಚಿದರೆ ದೊರೆವುದು
ಹೋರಾಟಗಳ ಗಂಟು.

1909ರಲ್ಲಿ ನಡೆದ
ಸ್ತ್ರೀ ಸಮ್ಮೇಳನದಲ್ಲಿ
ನಾಯಕಿ ಕ್ಲಾರಾ, ರೋಸಾ
ಹೋರಾಟದ ಕರೆಯಿತ್ತರಲ್ಲಿ.

1910ರಲ್ಲಿ ಸೇರಿದರು
ನ್ಯೂಯಾರ್ಕ್ ನಲ್ಲಿ
ಕೇಳಿದರು ಬೇಕೆಂದು
ಮತದಾನದ ಹಕ್ಕನಲ್ಲಿ.

ಆರಂಭವಾದವೆಲ್ಲೆಡೆ
ಹಕ್ಕಿನ ಹೋರಾಟಗಳು
ವಿಶ್ವದಲಿ ಬೆಳದವು
ಮಹಿಳಾ ಚಳುವಳಿಗಳು.

ದೇಶ ದೇಶಗಳಲ್ಲಿ
ಸಿಕ್ಕವು ಕೆಲ ಹಕ್ಕುಗಳು
ಇನ್ನುಳಿದವುಗಳಿಗಾಗಿ
ನಡೆದಿವೆ ಸೆಣಸಾಟಗಳು.

ಬಂಧನ, ಅಪಮಾನ
ಗುಂಡೇಟಿನ ಸುರಿಮಳೆ
ಸಹಿಸಿದರು ಎಲ್ಲವನು
ಕೀಳಲು ದಮನದ ಕಳೆ.

ಮೂಡಿದೆ ಮನದಲಿಂದು
ಪ್ರಶ್ನೆಗಳ ಸರಮಾಲೆ
ಒಡೆದಿದ್ದೇವೆಯೇ ನಾವು
ದಾಸ್ಯದ ಶೃಂಖಲೆ?

ಸ್ವಾತಂತ್ರ್ಯ ಸಿಕ್ಕಿದೆಯೆ
ನಿಜವಾಗಿ ನಮಗೆ?
ಸಮಾನತೆ ದೊರೆತಿದೆಯೆ
ದಿಟವಾಗಿ ನಮಗೆ?

ಬಿಡುಗಡೆಯಾಗಿದೆಯೆ
ದಾಸ್ಯ ಬಂಧನಗಳಿಂದ?
ಮುಕ್ತರಾಗಿದ್ದೇವೆಯೆ
ಎಲ್ಲ ಅಪಮಾನಗಳಿಂದ?

ನಿಂತಿವೆಯೆ ಎಲ್ಲ
ದಮನ ದೌರ್ಜನ್ಯಗಳು?
ಕೊನೆಗೊಂಡಿವೆಯೆ
ದರ್ಪದಬ್ಬಾಳಿಕೆಗಳು?

ದಕ್ಕಿದೆಯೆ ಎಲ್ಲರಿಗೂ
ಹಕ್ಕು-ಅಧಿಕಾರ?
ಸಿಕ್ಕಿದೆಯೆ ನಮಗೆ
ಆತ್ಮ ಸಮ್ಮಾನ?

ದೂರವಿದೆ ಇನ್ನೂ
ವಿಮೋಚನೆಯ ಗುರಿ
ಕಡಿದಾಗಿದೆ ಅದನ್ನು
ಪಡೆಯುವ ದಾರಿ.

ತಲುಪಿಹೆವು ಅರ್ಧ ಗಮ್ಯ 
ಶತಮಾನದ ಹೋರಾಟದಿ
ನಡೆಯಬೇಕಿದೆ ಇನ್ನೂ
ಛಲದಿ, ಆತ್ಮಬಲದಿ.

ದೊರೆಯಬೇಕಿದೆ ಶಿಕ್ಷಣ
ಸಂಬಳದ ಅಧಿಕಾರ
ಎಲ್ಲೆಡೆ ನಿರ್ಭಯವಾಗಿ
ಓಡಾಡಲು ಸಹಕಾರ.

ಬಿಡುಗಡೆಗೆ ಎಲ್ಲರು
ಐಕ್ಯತೆಯಿಂ ಕೂಡಿ
ದುಡಿದರೆ ಖಂಡಿತ
ಸಿಡಿಯುವುದು ಬೇಡಿ.
- ಸುಧಾ ಜಿ     

No comments:

Post a Comment