Tuesday 7 March 2017

ಮಹಿಳಾ ಸಾಧಕಿಯರು - 2- ಅಂತರರಾಷ್ಟ್ರೀಯ ಮಹಿಳಾ ದಿನದ ರೂವಾರಿ - ರೋಸಾ ಲುಕ್ಸೆಂಬರ್ಗ್



ಅಂತರರಾಷ್ಟ್ರೀಯ  ಮಹಿಳಾ ದಿನಾಚರಣೆಯ ಸಮಯದಲ್ಲಿ  ಕ್ಲಾರಾ ಜೆಟ್ಕಿನ್ ರವರ ಜೊತೆಗೆ ಕೇಳಬರುವ ಮತ್ತೊಬ್ಬ ಮಹಿಳೆ ಹೆಸರೆಂದರೆ ಮಾರ್ಕ್ಸ್ ವಾದಿ ಚಿಂತಕರು, ತತ್ವಜ್ಞಾನಿಗಳು, ಅರ್ಥಶಾಸ್ತ್ರಜ್ಞರುಯುದ್ಧ ವಿರೋಧಿ ಕಾರ್ಯಕರ್ತರು ಮತ್ತು ಕ್ರಾಂತಿಕಾರಿ  ಸಮಾಜವಾದಿಗಳೂ ಆದ ರೋಸಾ ಲುಕ್ಸೆಂಬರ್ಗ್ ರವರದ್ದು. ಇವರು ಮಾರ್ಚ್ 5 ,1871 ರಲ್ಲಿ ಎಲಿಯಾಸ್ ಲುಕ್ಸೆಂಬರ್ಗ್ ಮತ್ತು ಲಿನೆ ಲೊವೆನ್ಸ್ ಟೈಮ್ ರ ಮಗಳಾಗಿ ಪೋಲೆಂಡ್ ನಲ್ಲಿ ಜನಿಸಿದರು. ಇವರ ಜನನ ಪೋಲೆಂಡ್ನಲ್ಲಿಯಾದರೂ ಇವರು  ಜರ್ಮನ್ ಪ್ರಜೆಯಾದರು. ತಂದೆ ಮರದ ವ್ಯಾಪಾರಿಯಾಗಿದ್ದರು. ತಂದೆ ಉದಾರವಾದಿ ವಿಚಾರಗಳನ್ನು ಹೇಳುತ್ತಿದ್ದರು. ತಾಯಿ ಧಾರ್ಮಿಕ ವ್ಯಕ್ತಿಯಾಗಿದ್ದರು. 
ರೋಸಾರವರಿಗೆ ಜರ್ಮನ್, ಪೋಲೀಶ್ ಭಾಷೆಗಳಲ್ಲದೆ, ರಷ್ಯನ್ ಭಾಷೆಯು ತಿಳಿದಿತ್ತು. ಇವರು 1880 ರಲ್ಲಿ ಶಾಲೆಗೆ ಸೇರಿದರು. ಇವರು 1887 ರಲ್ಲಿ ಸೆಕೆಂಡರಿ ಸ್ಕೂಲ್ ಗ್ರಾಜುಯೇಷನ್ ಮುಗಿಸಿದರು. ನಂತರ ಸ್ವಿಡ್ಜರ್ಲ್ಯಾಂಡ್ ನ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ತತ್ವಜ್ಞಾನಇತಿಹಾಸರಾಜ್ಯಶಾಸ್ತ್ರ,  ಅರ್ಥಶಾಸ್ತ್ರ ಮತ್ತು ಗಣಿತವನ್ನು ಓದಿದರು. 1897 ರಲ್ಲಿ "ಪೋಲೆಂಡ್ ನ ಕೈಗಾರಿಕಾ ಅಭಿವೃದ್ಧಿ " ಎಂಬ ಹೆಸರಿನಲ್ಲಿ ಡಾಕ್ಟರೇಟ್ ಮಹಾಪ್ರಬಂಧವನ್ನು ಮಂಡಿಸಿ, "ಡಾಕ್ಟರ್  ಆಪ್ ಲಾ" ಪದವಿಯನ್ನು ಪಡೆದರು. 
1886ರಲ್ಲಿಯೇ ಪ್ರೊಲೆಟೇರಿಯಟ್ ಪಾರ್ಟಿ (ಕಾರ್ಮಿಕವರ್ಗದ ಪಕ್ಷ)ದ ಸದಸ್ಯೆಯಾದರು. ಇವರು ತಮ್ಮ 20ನೆ ವಯಸ್ಸಿನಲ್ಲಿಯೇ ಮುಷ್ಕರಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಿದರು. 1893 ರಲ್ಲಿ "ಕಾರ್ಮಿಕರ ಧ್ಯೇಯ" ಎಂಬ ಪತ್ರಿಕೆಯನ್ನು ಆರಂಭಿಸಿದರು. ಆಸ್ಟ್ರಿಯ ಮತ್ತು ರಷ್ಯಾದಲ್ಲಿ ಸಮಾಜವಾದ ಕ್ರಾಂತಿಯಾದ ನಂತರ ಇವರು ಕೇವಲ ಪೋಲೆಂಡ್ ನ ಸ್ವಾತಂತ್ರ್ಯಕ್ಕಾಗಿ ಹೋರಾಡದೆ, ಇಡೀ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಇವರು ತಮ್ಮ ಜೀವನದ ಬಹಳಷ್ಟು  ಸಮಯವನ್ನು ಜರ್ಮನಿಯಲ್ಲಿ ಕಳೆದರೂ ಪೋಲೆಂಡ್ ನವಸಮಾಜವಾದಿ ಪ್ರಭುತ್ವದ ಮುಖ್ಯ ಚಿಂತಕರಾಗಿದ್ದರು  ಮತ್ತು ಪ್ರಮುಖ ಸಂಘಟನಾಕಾರರಾಗಿದ್ದರು. 
ಇವರಿಗೆ ಜರ್ಮನಿಗೆ ಹೋಗಲು ಅವಕಾಶವಿರಲಿಲ್ಲ. ಅದಕ್ಕಾಗಿ ಇವರು ತಮ್ಮ ಹಳೆಯ ಸ್ನೇಹಿತನ ಮಗನಾದ ಗುಸ್ಟಾವ್ ಲುಬೇಕ್ ರವರನ್ನು 1897ರಲ್ಲಿ ವಿವಾಹವಾಗಿ ಜರ್ಮನಿಯ ಪ್ರಜೆಯಾದರು. ಆದರೆ ಅವರೊಂದಿಗಿರಲಿಲ್ಲ.  5 ವರ್ಷದ ನಂತರ ವಿಚ್ಛೇದನೆಯನ್ನು ಪಡೆದುಕೊಂಡರು.
ಜರ್ಮನಿಯ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದಲ್ಲಿ ಕ್ಲಾರಾರವರನ್ನು ಭೇಟಿಯಾದರು. ಇಬ್ಬರು ಒಟ್ಟಿಗೆ ಸೇರಿ ಸಂಘಟನೆ ಕಾರ್ಯಗಳಲ್ಲಿ ತೊಡಗಿದರು. ಇವರಿಬ್ಬರ ಗೆಳೆತನ ಜೀವನಪರ್ಯಂತ ಉಳಿಯಿತು. ಇವರು ಜರ್ಮನಿಯಲ್ಲಿ ಅಂತರರಾಷ್ಟ್ರೀಯತೆಯ ಆಧಾರದ ಮೇಲೆ ಸಮಾಜವಾದಿ ಚಿಂತನೆಯನ್ನು  ಬೆಳೆಸಿದರು. ಇವರು ಸಂಕುಚಿತ ರಾಷ್ರೀಯತೆಯನ್ನು ವಿರೋಧಿಸುತ್ತಿದ್ದರು. ಇವರ ಪ್ರಕಾರ 'ಕ್ರಾಂತಿ ಬದುಕಿನ ರೀತಿಯಾಗಿತ್ತು.' ಜರ್ಮನಿಯ ಪಕ್ಷದಲ್ಲಿ ಸುಧಾರಣಾವಾದಿ ಸಂಸದೀಯ ವಿಧಾನವನ್ನು ವಿರೋಧಿಸಿದರು. ಇವರು ಸಾಮಾಜಿಕ  ಕ್ರಾಂತಿಯನ್ನು ಎತ್ತಿಹಿಡಿದರು. ಬರ್ಲಿನ್ ಪಕ್ಷದ ತರಬೇತಿ ಕೇಂದ್ರದಲ್ಲಿ ಮಾರ್ಕ್ಸ್ ವಾದ ಮತ್ತು ಅರ್ಥಶಾಸ್ತ್ರವನ್ನು ಬೋಧಿಸುತ್ತಿದ್ದರು. 1900 ರಿಂದ ಯೂರೋಪಿನ ವರ್ತಮಾನ ಪತ್ರಿಕೆಗಳಲ್ಲಿ ಸಮಕಾಲೀನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು  ವಿಶ್ಲೇಷಿಸುತ್ತಿದ್ದರು. 1904 ರಿಂದ 1906 ರವರೆಗೆ ಇವರು ನಡೆಸುತ್ತಿದ್ದ  ರಾಜಕೀಯ ಚಟುವಟಿಕೆಗಳಿಂದ 3 ಬಾರಿ ಬಂಧಿಯಾಗಿದ್ದರು.
1910
ರಲ್ಲಿ ಕ್ಲಾರಾ ಜೆಟ್ಕಿನ್ ರವರೊಡನೆ ಸೇರಿ 2ನೇ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಆಗ್ರಹಿಸಿಪ್ರತಿ ವರ್ಷ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ಪ್ರಸ್ತಾಪಿಸಿದರು.
1914
ರಲ್ಲಿ ಯೂರೋಪಿನ ಎಲ್ಲಾ ಕಾರ್ಮಿಕ ಪಕ್ಷಗಳು ಜೊತೆಗೂಡಿ ಯುದ್ಧವನ್ನು ನಿಲ್ಲಿಸಲು ಕರೆ ನೀಡಿದವು. ಇದನ್ನು ಎಲ್ಲಾ ಪಕ್ಷಗಳು ಅಂಗೀಕರಿಸಿದವು. ಇವರು ಫ್ರಾಂಕ್ ಫರ್ಟ್ ನಲ್ಲಿ ಬಹಿರಂಗವಾಗಿ ಯುದ್ಧ ವಿರೋಧಿ ಪ್ರತಿಭಟನೆಗಳನ್ನು ಪ್ರದರ್ಶಿಸಿದರು. ಇವರನ್ನು ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಂಧಿಸಲಾಯಿತು. 1917 ನವೆಂಬರ್ 8 ರಂದು ಬಿಡುಗಡೆ ಮಾಡಲಾಯಿತು. ರೋಸಾ ಮತ್ತು ಲೆಬ್ನೆಕ್ಟ್ ಇಬ್ಬರು ಸೇರಿ ಸ್ಪಾರ್ಟಕಸ್ ಲೀಗ್ ನ್ನು ಪುನರಾರಂಭಿಸಿದರು. ಮತ್ತು  1917 ರಲ್ಲಿ "red flag" ಪತ್ರಿಕೆಯನ್ನು ಪ್ರಾರಂಭಿಸಿದರು.
1919
ಜನವರಿಯಲ್ಲಿ ಬರ್ಲಿನ್ ನಲ್ಲಿ ಎರಡನೆಯ ಕ್ರಾಂತಿಯ ಅಲೆ  ಪ್ರಾರಂಭವಾಯಿತು. ಇದರಲ್ಲಿ ರೋಸಾ ಮತ್ತು ಲೆಬ್ನೆಕ್ಟ್ ಇಬ್ಬರು ಸಕ್ರಿಯವಾಗಿ  ಭಾಗವಹಿಸತೊಡಗಿದರು. ಪರಿಣಾಮವಾಗಿ ಇಬ್ಬರನ್ನು 1919ರ ಜನವರಿಯಲ್ಲಿ ಬಂಧಿಸಲಾಯಿತು. ರೋಸಾರವರನ್ನು ನಗ್ನಗೊಳಿಸಿ ಹಿಂಸಿಸಲಾಯಿತು. ತಲೆ ಎತ್ತಿ ನಿಂತ ರೋಸಾರವರನ್ನು ಭೀಕರವಾಗಿ 
ಕೊಲ್ಲಲಾಯಿತು. ಅವರ ದೇಹವನ್ನು ಬರ್ಲಿನ್ ನ ಕಾಲುವೆಗೆ ಬಿಸಾಕಲಾಯಿತು. ಲೆಬ್ನೆಕ್ಟ್ ರವರಿಗೂ ಹಿಂಸೆ ನೀಡಿ ಕೊಂದು ಶವವನ್ನು  ಬಿಸಾಕಲಾಯಿತು. ಆದರೆ 1919 ಜೂನ್ 1 ರಂದು ಇವರ ದೇಹಗಳನ್ನು ಪತ್ತೆ ಹಚ್ಚಿ ಗುರುತಿಸಲಾಯಿತು.  ಇಬ್ಬರನ್ನು ಬರ್ಲಿನ್ ನ ಫ್ರೆಡರಿಕ್ ಫೆಲ್ಡೆ  ಕೇಂದೀಯ ರುದ್ರಭೂಮಿಯಲ್ಲಿ ಊಳಲಾಯಿತು. ಪ್ರತಿ ವರ್ಷ ಜನವರಿ ಎರಡನೆ ಭಾನುವಾರವನ್ನು, ಸಮಾಜವಾದಿ ಕಮ್ಯೂನಿಸ್ಟರು ಇವರ ಸಂಸ್ಮರಣ ದಿನವನ್ನಾಗಿ ಆಚರಿಸುವರು.
   ರೋಸಾ ಮರಣದ ನಂತರ ಪೂರ್ವ ಜರ್ಮನಿಯಲ್ಲಿ ಹಲವಾರು ರಸ್ತೆಗಳಿಗೆ ಮತ್ತು ಪಾರ್ಕ್ ಗಳಿಗೆ ಇವರ ಹೆಸರನ್ನಿಡಲಾಗಿದೆ. ಪೋಲೆಂಡ್ ನ ಕಾರ್ಖಾನೆಯೊಂದಕ್ಕೆ ಇವರ ಹೆಸರನ್ನಿಡಲಾಗಿದೆ. ಖ್ಯಾತ ಕವಿ ಬರ್ಟೋಲ್ಟ್ ಬ್ರೆಟ್ ಇವರ ಗೌರವಾರ್ಥ ಕವನವನ್ನು ಬರೆದಿದ್ದಾರೆ. ಲುಕ್ಸೆಂಬರ್ಗ್ ನಲ್ಲಿ ಇವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. 1986 ರಲ್ಲಿ ಜರ್ಮನಿಯಲ್ಲಿ ರೋಸಾ ಲುಕ್ಸೆಂಬರ್ಗ್ ಎಂಬ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ ಬಂಡವಾಳದ ಕ್ರೋಢೀಕರಣ, ಸಮಗ್ರ ಕೃತಿಗಳು, ಸಮಗ್ರ ಪತ್ರಗಳುರಾಜಕೀಯ ಕೃತಿಗಳು ಮೊದಲಾದವುಗಳು.

   - ವಿಜಯಲಕ್ಷ್ಮಿ ಎಂ ಎಸ್ 

No comments:

Post a Comment