Tuesday 7 March 2017

ಮಹಿಳಾ ಸಾಧಕಿಯರು - 1- ಅಂತರರಾಷ್ಟ್ರೀಯ ಮಹಿಳಾ ದಿನದ ರೂವಾರಿ - ಕ್ಲಾರಾ ಜೆಟ್ಕಿನ್


ಮಾರ್ಚ್ ತಿಂಗಳು ಬಂದಿತೆಂದರೆ ಸಾಕು ಮಹಿಳೆಯರಿಗೆ ಏನೋ ಸಂಭ್ರಮ. ಮಾರ್ಚ್ ರಂದು ವಿಶ್ವದಾದ್ಯಂತ  ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ. ಆದರೆ ಇದರ ಹಿಂದೆ ಎಷ್ಟೋ ಜನರ ಹೋರಾಟಶ್ರಮವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಪ್ರಮುಖರಾದವರು ಕ್ಲಾರಾ ಜೆಟ್ಕಿನ್ ರವರು.
  ಮಹಿಳಾ ಹೋರಾಟಗಾರ್ತಿಸಮಾಜವಾದಿ ಚಿಂತಕಿ ಕ್ಲಾರಾರವರು 1857 ಜುಲೈ 5 ರಂದು ಮಧ್ಯಮ ವರ್ಗದ  ಗಾಟ್‌ಫ್ರಿಡ್ ಐಸೆನರ್ ಮತ್ತು ಜೋಸೆಫಿನ್ ವೀಟೆಲ್ ಐಸೆನರ್ ರವರ ಮೊದಲನೆ ಮಗಳಾಗಿ ಜರ್ಮನಿಯಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರು ಶಿಕ್ಷಕರಾಗಿದ್ದರು. ಕ್ಲಾರಾರವರು ತಂದೆ ಬೋಧಿಸುತ್ತಿದ್ದ ಶಾಲೆಯಲ್ಲಿ  ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. ತಂದೆಯ ನಿವೃತ್ತಿ ನಂತರ ಪಟ್ಟಣಕ್ಕೆ ಬಂದು ನೆಲೆಸಿದರು. ನಂತರ ಇವರು ಸಾಹಿತ್ಯ ಮತ್ತು  ಇತಿಹಾಸದಲ್ಲಿ ಪದವಿ ಮುಗಿಸಿದರು. ಇವರು ಶಿಕ್ಷಕಿಯಾಗಿರುವಾಗ ವುಮೆನ್ಸ್ ಎಜುಕೇಶನ್ ಸೊಸೈಟಿ ಮತ್ತು ನ್ಯಾಷನಲ್ ಅಸೋಸಿಯೇಷನ್ ಆಫ್ ಜರ್ಮನ್ ವುಮೆನ್ ನಡೆಸುತ್ತಿದ್ದ ಸಭೆಗಳಲ್ಲಿ ಭಾಗವಹಿಸುತ್ತಿದ್ದರು 
  1878ರಲ್ಲಿ ರಷ್ಯಾದ ವಿದ್ಯಾರ್ಥಿಗಳ ಪರಿಚಯವಾಗಿ ಇವರು "ಸಾಮಾಜಿಕ ಕಾರ್ಮಿಕ ಪಕ್ಷಕ್ಕೆ" ಸೇರಿದರು. 1878 ರಲ್ಲಿ ಜರ್ಮನಿಯಲ್ಲಿ ಬಿಸ್ಮಾರ್ಕ್ ಸಾಮಾಜಿಕ ಚಟುವಟಿಕೆಗಳನ್ನು ನಿಷೇಧಿಸಿದ್ದರಿಂದ ಕ್ಲಾರಾರವರನ್ನು ಪ್ಯಾರಿಸ್ ಗೆ ಗಡಿಪಾರು ಮಾಡಲಾಯಿತು. ಈ ಸಮಯದಲ್ಲಿ ಪರಿಚಯವಾದ ಮಾರ್ಕ್ಸ್ ವಾದಿ ಆಸಿಫ್ ಜೆಟ್ಕಿನ್ ಇವರಿಗೆ ಮಾರ್ಕ್ಸ್ ರವರ ಸಿದ್ಧಾಂತಗಳನ್ನು ತಿಳಿಸಿಕೊಟ್ಟರು.  ನಂತರ ಕ್ಲಾರಾರವರು ಆಸಿಫ್ ಜೆಟ್ಕಿನ್ ರವರನ್ನು ವಿವಾಹವಾಗಿ ಜೆಟ್ಕಿನ್ ಎಂಬ ಹೆಸರನ್ನು ಸೇರಿಸಿಕೊಂಡರು.
ಕ್ಲಾರಾರವರು ಕಾನ್ಸ್ಟೆಂಟಿನ್ ಮತ್ತು  ಮ್ಯಾಕ್ಸಿಮ್ ಎಂಬ ಎರಡು ಮಕ್ಕಳ ತಾಯಿಯಾದರು. 1889 ರಲ್ಲಿ ಆಸಿಫ್ ಜೆಟ್ಕಿನ್ ರವರು ಮರಣ ಹೊಂದಿದರು.
  ಪ್ಯಾರಿಸ್ ನಲ್ಲಿ ಇದ್ದ ಸಮಯದಲ್ಲಿ ಕ್ಲಾರಾರವರು ಅಂತರರಾಷ್ಟ್ರೀಯ ಸಮಾಜವಾದಿ ಗುಂಪಿನ ಸಂಘಟನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದರು. ಆ ಸಮಯದಲ್ಲಿ ಮಹಿಳೆಯರ ಸ್ಥಿತಿ  ತುಂಬಾ ಶೋಚನೀಯವಾಗಿತ್ತು. ಹೆಣ್ಣು ಗಂಡೆಂಬ ತಾರತಮ್ಯ ನೀತಿಯಿಂದ ಮಹಿಳೆಯರಿಗೆ ಕೆಲಸ ಸಿಗುತ್ತಿರಲಿಲ್ಲ. ಮಹಿಳೆಯರಿಗೆ ಸರಿಯಾದ ವೇತನವನ್ನು ನೀಡುತ್ತಿರಲಿಲ್ಲ ಮತ್ತು ಅವರಿಗೆ ಮತ ಚಲಾಯಿಸುವ ಹಕ್ಕು ಇರಲಿಲ್ಲ. ಇಂತಹ ಸಂದರ್ಭದಲ್ಲಿ  ಮಹಿಳೆಯರಿಗೆ ರಾಜಕೀಯವಾಗಿಆರ್ಥಿಕವಾಗಿ ಸಮಾನ ಅವಕಾಶಗಳು ಮತ್ತು  ಮತ ಚಲಾಯಿಸುವ ಹಕ್ಕು  ದೊರೆಯುವಂತೆ ನಡೆಸಿದ ಹೋರಾಟದಲ್ಲಿ ಕ್ಲಾರಾರವರ ಪಾತ್ರ ಗಣನೀಯವಾದದು.
1891 ರಿಂದ 1928 ರವರೆಗಿನ ಸಾಮಾಜಿಕ ಪ್ರಜಾಸತ್ತಾತ್ಮಕ ಮಹಿಳೆಯರ ಹೋರಾಟದಲ್ಲಿ  ಬಹಳ ಶ್ರಮಿಸಿದರು. ಇದೇ ಸಮಯದಲ್ಲಿ "equality "ಪತ್ರಿಕೆಯ ಸಂಪಾದಕಿಯಾಗಿಯೂ ಕೆಲಸ ನಿರ್ವಹಿಸಿದ್ದರು. 
1908 ರ ಅಮೆರಿಕದ ಮತದಾನದ ಹಕ್ಕಿಗಾಗಿ ನಡೆದ ಹೋರಾಟದಿಂದ ಸ್ಪೂರ್ತಿಗೊಂಡ ಕ್ಲಾರಾರವರು 1910ರ ಆಗಸ್ಟ್ ನಲ್ಲಿ ಕೊಪನ್ ಹೇಗ್ ನಲ್ಲಿ  ಪ್ರಥಮ ಅಂತರರಾಷ್ಟ್ರೀಯ ಸಮಾಜವಾದಿ  ಮಹಿಳಾ ಸಮಾವೇಶ ದಲ್ಲಿ  ವರ್ಷಕ್ಕೊಂದು ದಿನವನ್ನು ಮಹಿಳೆಯರ ದಿನವಾಗಿ ನಿಗದಿಪಡಿಸಿ ಆಚರಿಸುವಂತೆ ಪ್ರಸ್ತಾಪ ಮಾಡಿದರು.
 ಇದನ್ನು 17 ರಾಷ್ಟ್ರದ 100 ಪ್ರತಿನಿಧಿಗಳು ಅನುಮೋದಿಸಿದರು. ಈ ಎಲ್ಲಾ ಬೆಳವಣಿಗೆಯ ಫಲವಾಗಿ 1911 ರಲ್ಲಿ ಪ್ರಥಮ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
  ಪ್ರಥಮ ಜಾಗತಿಕ ಯುದ್ಧದ ಸಮಯದಲ್ಲಿ ಕ್ಲಾರಾರೋಸಾ ಲುಕ್ಸೆಂಬರ್ಗ್ ಮೊದಲಾದವರು ಪಕ್ಷದ ಸಿದ್ಧಾಂತಗಳನ್ನು ಮೀರಿ ಅಂತರರಾಷ್ಟ್ರೀಯ ಯುದ್ಧ ವಿರೋಧಿ ಸಮ್ಮೇಳನವನ್ನು 1915 ರಲ್ಲಿ ಬರ್ಲಿನ್ ನಲ್ಲಿ ಸಂಘಟಿಸಿದರು. ಈ ಯುದ್ಧ ವಿರೋಧಿ ಚಟುವಟಿಕೆಗಳಿಂದ ಕ್ಲಾರಾರವರನ್ನು ಹಲವಾರು ಬಾರಿ ಬಂಧಿಸಲಾಯಿತು. 1916 ರಲ್ಲಿ ಇವರನ್ನು "ಗೃಹಬಂಧನ" ದಲ್ಲಿರಿಸಲಾಯಿತು ಆದರೆ ಅವರ ಆರೋಗ್ಯದ ಸಮಸ್ಯೆಯಿಂದ ಬಿಡುಗಡೆ ಮಾಡಲಾಯಿತು. 1916ರಲ್ಲಿ ಸ್ಥಾಪನೆಯಾದ ಇಂಡಿಪೆಂಡೆಂಟ್ ಸೋಷಿಯಲಿಸ್ಟ್  ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕರಲ್ಲಿ ಇವರು ಒಬ್ಬರು. ಜರ್ಮನಿಯ ಕ್ರಾಂತಿಯ ಸಮಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಜರ್ಮನಿ  ಪ್ರಾರಂಭವಾಯಿತು. ಕ್ಲಾರಾರವರು ಇದರ ಸದಸ್ಯತ್ವವನ್ನು ಪಡೆದರು. 1920 ರಿಂದ 1933 ರವರೆಗೆ ಪ್ರತಿನಿಧಿಯಾಗಿ ಪಕ್ಷವನ್ನು ಮುನ್ನೆಡೆಸಿದರು. 1920 ರಲ್ಲಿ  "ಮಹಿಳೆಯರ ಪ್ರಶ್ನೆ"(The women question) ಎಂಬ ವಿಷಯದ ಬಗ್ಗೆ ಲೆನಿನ್ ರವರನ್ನು ಸಂದರ್ಶಿಸಿದರು.
  1924ರವರೆಗೆ ಇವರು K.P.D.ಯ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. 1921ರಿಂದ 1933ರವರೆಗೆ ಇವರು ಕಮ್ಯುನಿಸ್ಟ್  ಇಂಟರ್ ನ್ಯಾಷನಲ್  ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು.1925 ರಲ್ಲಿ ಜರ್ಮನ್ ಲೆಫ್ಟ್ ವಿಂಗ್ ಸಾಲಿಡಾರಿಟಿ ಆರ್ಗನೈಸೇಷನ್ ನ ಅಧ್ಯಕ್ಷರಾಗಿ ಆಯ್ಕೆಯಾದರು. 1932 ರಲ್ಲಿ ರೀಚ್ಸ್ಟಾಗ್ ನ ಅಧ್ಯಕ್ಷರಾಗಿದ್ದರು.
1933 ರಲ್ಲಿ ಹಿಟ್ಲರ್ ಮತ್ತು ನಾಜಿ ಪಕ್ಷದವರು ಸಮತಾವಾದಿ ಪಕ್ಷವನ್ನು ನಿಷೇಧಿಸಿದರು. ಪರಿಣಾಮವಾಗಿ ಕ್ಲಾರಾರವರನ್ನು ಗಡಿಪಾರು  ಮಾಡಲಾಯಿತು. ರಷ್ಯಾಕ್ಕೆ ತೆರಳಿದ ಕ್ಲಾರಾರವರು ತಮ್ಮ 76ನೇ  ವಯಸ್ಸಿನಲ್ಲಿ ನಿಧನರಾದರು. ಇವರನ್ನು "Grandmother of communism" (ಸಮತಾವಾದದ ಅಜ್ಜಿ) ಎಂದು ಗೌರವಿಸಲಾಗಿದೆ.
  1949ರ ನಂತರ ಕ್ಲಾರವರ ಹೆಸರು ಎಲ್ಲಾ ಕಡೆ ಪ್ರಸಿದ್ಧಿಯಾಯಿತು. ಜರ್ಮನಿಯ ಪ್ರಮುಖ ಪಟ್ಟಣಗಳ ರಸ್ತೆಗಳಿಗೆ ಇವರ ಹೆಸರನ್ನಿಡಲಾಯಿತು.
1954 ರಲ್ಲಿ ಕ್ಲಾರಾರವರ ಚಿತ್ರವಿರುವ ಪದಕವನ್ನು  ಹೊರತಂದರು.
1967 ರಲ್ಲಿ  ಕ್ಲಾರಾ ಜೆಟ್ಕಿನ್ ರವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
1987 ರಲ್ಲಿ ಇವರ ಚಿತ್ರವಿರುವ ಅಂಚೆಚೀಟಿ ಮುದ್ರಿಸಿದರು.
  ಕ್ಲಾರಾ ಜೆಟ್ಕಿನ್ ರಂತೆ ಮಹಿಳೆಯರ ಸಮಾನತೆಗೆ ಎಲ್ಲರೂ ಶ್ರಮಿಸಿದಾಗ ಮಾತ್ರ ಅವರ ಪರಿಕಲ್ಪನೆಯ "ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ"ಗೆ ನಿಜವಾದ ಅರ್ಥ ದೊರೆಯುವುದು.
     -  ವಿಜಯಲಕ್ಷ್ಮಿ ಎಂ ಎಸ್ 

No comments:

Post a Comment