Tuesday 7 March 2017

ಆರೋಗ್ಯ - ಹಣ್ಣೆಲೆಗಳು - 1



  “ನಿಮ್ಮ ಸಂತಾನೋತ್ಪತ್ತಿ ಜೀವನ ಮುಗಿದಿರಬಹುದು 
ಆದರೆ ಉತ್ಪನ್ನ ಜೀವನ ಮುಗಿದಿಲ್ಲ” - ಮಾರ್ಗರೆಟ್ ಮೀಡ್

ಅಧ್ಯಾಯ – 1
ಋತುಬ0ಧ

‘ಡಾಕ್ಟ್ರೇ, ನನಗೆ ರಾತ್ರಿ ಮಲಗಿದ ಮೇಲೆ ಪಕ್ಕನೆ ಎಚ್ಚರವಾಗುತ್ತದೆ, ಮೈಯೆಲ್ಲಾ ಬಿಸಿ ಬಿಸಿಯಾದಂತಹ ಅನುಭವ ಬೆವರು ಮುಖದಿಂದ ಸುರಿಯುತ್ತಾ ಇರುತ್ತದೆ.  ಫ್ಯಾನ್ ಇದ್ದರೂ ಸೆಖೆ ಅನ್ನಿಸುತ್ತೆ.  ನೀರು ಕುಡಿದು ಸುಧಾರಿಸಿಕೊಂಡು ಮತ್ತೆ ನಿದ್ದೆ ಮಾಡಲು ಹೋದರೆ ನಿದ್ದೆ ಸರಿಯಾಗಿ ಬರೋದೇ ಇಲ್ಲ ಏನು ಮಾಡಲಿ?’

‘ಮೇಡಂ ನಮ್ಮತ್ತೆ ಅಕಸ್ಮಾತ್ ಕಾಲು ಜಾರಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುವಾಗ ಬಿದ್ದು ಸೊಂಟದ ಮೂಳೆ ಮುರಿದುಹೋಗಿದೆ ಅವರನ್ನು ಅಸ್ಪತ್ರೆಗೆ ಸೇರಿಸಿದ್ದೇವೆ, ಅದಕ್ಕೆ ನಿನ್ನೆ ಬರಲಾಗಲಿಲ್ಲ.’

‘ಡಾಕ್ಟ್ರೇ, ನನಗೆ ಈ ಜೀವನವೇ ಸಾಕಾಗಿದೆ. ನನ್ನ ಮಾತನ್ನು ಯಾರು ಕಿವಿಗೆ ಹಾಕಿಕೊಳ್ಳುವುದಿಲ್ಲ. ನನಗೆ ಕೆಲಸ ಮಾಡಲು ಉತ್ಸಾಹವೇ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನಿಸುತ್ತದೆ. ಆದರೆ ಧೈರ್ಯವೇ ಇಲ್ಲ ಅನ್ನಿಸುತ್ತೆ. ಏನು ಮಾಡೋದು?’

‘ಮೇಡಂ, ನಮ್ಮತ್ತೆ ಗರ್ಭಚೀಲ ಜಾರಿದೆ ಅಂತಾ ನಮ್ಮ ಹತ್ತಿರ ಹೇಳೇ ಇಲ್ಲ. ನಾನು ಮೊನ್ನೆ ನೋಡಿ ವಿಚಾರಿಸಿದಾಗ, ತುಂಬಾ ದಿನದಿಂದ ಇದೆ, ನಿಮ್ಮಲ್ಲಿ ಹೇಳಲಿಲ್ಲ, ಡಾಕ್ಟ್ರ ಬಳಿ ಹೋಗಲು ಭಯ ಆಗುತ್ತದೆ ಅಂದರು. ನಾನೇ ಬಲವಂತದಿಂದ ಕರೆದುಕೊಂಡು ಬಂದೆ ಏನು ಮಾಡಬಹುದು ಅಂತಾ ಹೇಳಿ.’

ಇದು ಸ್ತ್ರೀರೋಗ ತಜ್ಞೆಯಾದ ನನ್ನ ಬಳಿಗೆ ಚಿಕಿತ್ಸೆಗಾಗಿ ಬರುವ 40 ರಿ0ದ 60 ವರ್ಷ ವಯಸ್ಸಿನ ಹೆಂಗಸರ ಸಾಮಾನ್ಯ ಸಮಸ್ಯೆಗಳು. ಇದನ್ನು ಋತುಬಂಧದ ಆಸುಪಾಸಿನ ವರ್ಷಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು (Perimenopausal syndrome) ಅಂತಲೇ ಗುರುತಿಸುತ್ತೇವೆ.

ಹಿಂದೆಂದಿಗಿಂತಲೂ ಈಗ ಮಹಿಳೆಯರ ಜೀವತಾವಧಿ ಹೆಚ್ಚಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ, ತಾಯಂದಿರ ಮರಣ ಪ್ರಮಾಣದಲ್ಲಿ ಇಳಿಕೆ, ಅಧುನಿಕ ವೈದ್ಯಕೀಯ ಸವಲತ್ತುಗಳು, ಜೀವನ ಕ್ರಮದಲ್ಲಿ ಬದಲಾವಣೆಗಳು, ಇವೆ ಮುಂತಾದವು. ಅರ್ಧದಷ್ಟು ಆಯಸ್ಸನ್ನು ಮಹಿಳೆ ಮುಟ್ಟು ನಿಂತ ಮೇಲೆ ಕಳೆಯುತ್ತಾಳೆ. ಆದ್ದರಿಂದ ಈ ವಯಸ್ಸಿನಲ್ಲಿ ಆಕೆಗೆ ಆಗುವ ಮೇಲೆ ಹೇಳಿದ ಕೆಲವು ತೊಂದರೆಗಳಿಗೆ ಅವಳಿಗೆ ಹೆಚ್ಚಿನ ಮಾಹಿತಿ ಮತ್ತು ಅದಕ್ಕೆ ಪರಿಹಾರದ ಅಗತ್ಯ ಇದೆ.

ಮೆನೋಪಾಸ್ (menopause)  ಎಂಬುವುದು ಒಂದು ಗ್ರೀಕ್ ಶಬ್ದ. ‘ಮೆನ್’ ಎಂದರೆ ತಿಂಗಳು, ‘ಪಾಸ್’ ಎಂದರೆ ನಿಲ್ಲುವುದು, ತಿಂಗಳ ಮುಟ್ಟು ನಿಲ್ಲುವುದು ಎಂದು ಇದರ ಅರ್ಥ. ಸಾಮಾನ್ಯವಾಗಿ ಹನ್ನೆರಡು ತಿಂಗಳುಗಳ ಕಾಲ ಮುಟ್ಟು ಬಾರದೆ ಹೋದರೆ ಅದನ್ನು ಋತುಬಂಧ ಎಂದು ಪರಿಗಣಿಸುತ್ತೇವೆ. ಈ ಸಮಯದಲ್ಲಿ ಪ್ರತಿಯೊಬ್ಬ ಸ್ತ್ರೀಯ ಅನುಭವವು ಬೇರೆಯೆ ಆಗಿರುತ್ತದೆ. ಕೆಲವರಿಗೆ ಯಾವ ತೊಂದರೆಯೂ ಇರುವುದಿಲ್ಲ, ಇನ್ನೂ ಕೆಲವರಿಗೆ ತು0ಬಾ ತೊಂದರೆಗಳಿರುತ್ತವೆ. ಹೆಂಗಸಿನ ಮಾನಸಿಕ, ಭೌದ್ದಿಕ ಹಾಗೂ ಆಧ್ಯಾತ್ಮಿಕ ಜೀವನ ಶೈಲಿಗೂ ಮತ್ತು ತೊಂದರೆಗಳಿಗೂ ನೇರ ಸಂಬಂಧವಿದೆ. ಪಾಶ್ಚಿಮಾತ್ಯರಿಗೆ ಹೋಲಿಸಿದಲ್ಲಿ ಭಾರತೀಯರಿಗೆ ಋತುಬಂಧದ ಆಸುಪಾಸಿನ ತೊಂದರೆಗಳಿದ್ದರೂ ಅದಕ್ಕಾಗಿ ವೈದ್ಯರ ಬಳಿ ಚಿಕಿತ್ಸೆಗಾಗಿ ಬರುವುದು ಅತಿ ವಿರಳ. ಅವರು ತಮ್ಮ ತಾಯಂದಿರ0ತೆ ಹೆಚ್ಚು ಕಷ್ಟಸಹಿಷ್ಣುಗಳಾಗಿರುತ್ತಾರೆ. ತಾಯಿ ಹೇಳಿದಂತೆ ಇವೆಲ್ಲ ಇದ್ದದ್ದೆ ಚಿ0ತೆ ಮಾಡಬಾರದು ಎಂದುಕೊಳ್ಳುತ್ತಾ ಮಕ್ಕಳಿಗೂ ಅದನ್ನೇ ಕಲಿಸುತ್ತಾರೆ. ತೀರ ಅಸ್ವಸ್ಥರಾದಾಗ ಮಾತ್ರ ವೈದ್ಯರ ಬಳಿ ಬರುತ್ತಾರೆ. ಇದರ ಬಗ್ಗೆ ಕುಟು0ಬದ ಇತರ ಸದಸ್ಯರಿಗೂ ಕೂಡ ತಿಳುವಳಿಕೆ ಇದ್ದರೆ ಒಳ್ಳೆಯದು. ಅವರು ಕೂಡ ಮಹಿಳೆಯರ ಈ ತೊಂದರೆಗಳಿಗೆ ಸ್ಪಂದಿಸುತ್ತಾರೆ ಹಾಗೂ ಸಹಕರಿಸುತ್ತಾರೆ.


ಗರ್ಭಕೋಶದ ಚಿತ್ರ
ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಗರ್ಭಕೋಶದ ಮೇಲಿನ 2/3 ಭಾಗವನ್ನು ಒಡಲು ಎ0ದು, ಕೆಳಗಿನ 1/3 ಭಾಗವನ್ನು ಗರ್ಭಕಂಠವೆ0ದು ಕರೆಯುತ್ತಾರೆ. ಗರ್ಭಕೋಶದ ಪಕ್ಕದಲ್ಲಿ ಎರಡು ಅಂಡಾಶಯಗಳು ಗರ್ಭನಾಳಕ್ಕೆ ಅಂಟಿಕೊಂಡಂತೆ ಇರುತ್ತದೆ. ಇವೆರಡರಲ್ಲೂ ಕೋಶಿಕೆಗಳು ಇರುತ್ತವೆ. ಹುಟ್ಟುವಾಗ 1,40,000 ದಷ್ಟಿದ್ದ ಕೋಶಿಕೆಗಳು ಕಡಿಮೆಯಾಗುತ್ತಾ ಬಂದು ಹದಿಹರೆಯದಲ್ಲಿ 40,000ದಷ್ಟಿರುತ್ತವೆ. ಪ್ರತಿ ತಿಂಗಳಿಗೊಮ್ಮೆ ಒಂದರಂತೆ ಕೋಶಿಕೆಯಿಂದ ಅಂಡಾಣು ಪರಿಪಕ್ವಗೊಂಡು 15 ರಿಂದ 45 ವರ್ಷದವರೆಗೆ 300-400 ಅಂಡಾಣುಗಳು ಮಾತ್ರ ಹೊರಗೆ ಬರುತ್ತವೆ. ನಲವತ್ತೈದರ ಆಸುಪಾಸಿನಲ್ಲಿ ಅಂಡಾಶಯದಲ್ಲಿರುವ ಕೋಶಿಕೆಗಳೆಲ್ಲಾ ಖಾಲಿಯಾಗಿ ಅಂಡಾಶಯದ ಕೆಲಸ ಸ್ಥಗಿತಗೊಳ್ಳುತ್ತದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಎಂಬ ಮುಖ್ಯವಾದ ಜೀವರಸಗಳು ಅಂಡಾಶಯದಿಂದ ಉತ್ಪತ್ತಿಗೊಳ್ಳುತ್ತಿರುತ್ತವೆ. ಋತುಬಂಧದ ಸಮಯದಲ್ಲಿ ಇವೆರಡು ಜೀವರಸದಲ್ಲಿ ಭಾರಿ ಪ್ರಮಾಣದ ಕಡಿತವುಂಟಾಗುತ್ತದೆ ಹಾಗೂ ಫಾಲಿಕಲ್ ಸ್ಟಿಮುಲೇಟಿಂಗ್ ಹಾರ್ಮೊನ್ (FSH ಮತ್ತು ಲ್ಯುಟಿನೈಸಿಂಗ್ ಹಾರ್ಮೊನ್ (LH) ಎಂಬ ಜೀವರಸಗಳು ಹೆಚ್ಚಾಗುತ್ತವೆ. ಈ ವ್ಯತ್ಯಯವೇ ದೇಹದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಕಾರಣ. ಮುಟ್ಟು ನಿಲ್ಲುವ 2-5 ವರ್ಷ ಮೊದಲು ಹಾಗೂ ಮುಟ್ಟು ನಿಂತ 2-5 ವರ್ಷ ನಂತರ ಕೆಲವಾರು ಸಮಸ್ಯೆಗಳು ಉದ್ಬವಿಸಬಹುದು.  ಇದು ಸಹಜ ನೈಸರ್ಗಿಕ ಕ್ರಿಯೆಯಾದರೂ ಕೆಲವರಿಗೆ ಇದನ್ನು ಸಹಿಸುವುದು ಕಷ್ಟವಾದಾಗ ಅಂತಹವರು ವೈದ್ಯರನ್ನು ಕಂಡು ಸಲಹೆ, ಸೂಚನೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಈ ಸಮಯದಲ್ಲಿ ದೈಹಿಕ ಬದಲಾವಣೆಗಳ ಜೊತೆಗೆ ಬೌದ್ಧಿಕ, ಲೈಂಗಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ.
(40-55 ವರ್ಷದೊಳಗೆ ನಿಮಗೆ ಯಾವಾಗ ಬೇಕಾದರೂ ಋತುಬಂಧವಾಗಬಹುದು. 30-35 ವರ್ಷದಲ್ಲಿ  ಋತುಬಂಧವಾದರೆ ಅದನ್ನು ಅಕಾಲಿಕ ಋತುಬಂಧವೆಂದು ಕರೆಯುತ್ತೇವೆ. ಶೇಕಡ ಒಂದರಷ್ಟು ಮಹಿಳೆಯರಲ್ಲಿ ಅಕಾಲಿಕ ಋತುಬಂಧವಾಗಬಹುದು. ಕೆಲವು ಮಹಿಳೆಯರಿಗೆ ಋತುಬಂಧದ ಯಾವುದೇ ಸಮಸ್ಯೆಗಳಿರುವುದಿಲ್ಲ. ಇನ್ನು ಕೆಲವರಿಗೆ ತುಂಬಾ ತೊಂದರೆಗಳಿರುತ್ತವೆ ಮತ್ತು ಅಂತಹ ಸಂದರ್ಭದಲ್ಲಿ ವೈದ್ಯರ ಸಹಾಯ ಬೇಕಾಗುತ್ತದೆ.)

ಈಸ್ಟ್ರೋಜನ್ ರಸದೂತ
ಈ ರಸದೂತ ನಿಮ್ಮ ದೇಹದ ಆಕೃತಿಯನ್ನು ಕಾಪಾಡಲು, ನಿಮ್ಮ ಧ್ವನಿಯನ್ನು ಮಧುರವಾಗಿಡಲು, ನಿಮ್ಮ ಚರ್ಮವನ್ನು ಮೆದುವಾಗಿ, ನಯವಾಗಿಡಲು ಸಹಕರಿಸುತ್ತದೆ. ನಿಮ್ಮ ಹೃದಯವನ್ನು, ಮೂಳೆಗಳನ್ನು, ಮೆದುಳನ್ನು ಕಾಪಾಡುತ್ತದೆ. ಹೃದಯಾಘಾತ ಬಾರದ0ತೆ ತಡೆಯುತ್ತದೆ. ಅದಕ್ಕೆ ಇದನ್ನು ‘ಹೃದಯದ ಮಿತ್ರ’ ಎನ್ನುತ್ತೇವೆ. ಋತುಬಂಧದ ಮೊದಲು ಹೆಣ್ಣುಮಕ್ಕಳು ಹೃದಯಾಘಾತದಿ0ದ ಸಾಯುವುದು ಕಡಿಮೆ. ಮೂಳೆಗಳನ್ನು ಗಟ್ಟಿಯಾಗಿಡಲು ನಿಮಗೆ ಈ ರಸದೂತದ ಅವಶ್ಯಕತೆ ಇದೆ.  ಈ ರಸದೂತ ಇಲ್ಲದಿದ್ದಾಗ ಟೊಳ್ಳುಮೂಳೆ ರೋಗ ಕಾಣಿಸಿಕೊಳ್ಳುತ್ತದೆ. ಮೆದುಳನ್ನು ಸದಾ ಲವಲವಿಕೆಯಿ0ದ ಇಡಲು ಈ ರಸದೂತ ಬೇಕು, ಇಲ್ಲದಿದ್ದರೆ ನೀವು ಖಿನ್ನತೆಯಿಂದ ಬಳಲುವಿರಿ. ದೇಹದ ಶಾಖವನ್ನು ಕಾಪಾಡಲು ನಿಮಗೆ ಈಸ್ಟ್ರೋಜನ್ ಬೇಕು ಇಲ್ಲದಿದ್ದರೆ ನಿಮಗೆ ದೇಹದಲ್ಲಿ ಬಿಸಿಯೇರುವುದು, ಸೆಖೆಯಾಗುವುದು, ಆತೀವ ಬೆವರುವುದು ಇರುತ್ತದೆ.


ಪ್ರೊಜೆಸ್ಟ್ರಾನ್ ರಸದೂತ
ಈ ರಸದೂತ ನಿಮ್ಮ ದೇಹದ ಕೊಬ್ಬನ್ನು ಕರಗಿಸಿ ಶಕ್ತಿಯನ್ನು ಉತ್ಪಾದನೆ ಮಾಡಲು ಸಹಕಾರಿ. ಥೈರಾಯಿಡ್ ಗ್ರ0ಥಿ ಸರಿಯಾಗಿ ಕೆಲಸಮಾಡಲು ಈ ರಸದೂತ ಬೇಕು. ಮನಸ್ಸನ್ನು ಸರಿಯಾಗಿಡಲು, ಶಾಂತವಾಗಿಡಲು ಇದರ ಅಗತ್ಯ ಇದೆ.  ಇದರ ಪ್ರಮಾಣ ಕಡಿಮೆಯಿದ್ದರೆ ನಿಮಲ್ಲಿ ಖಿನ್ನತೆ, ಉದ್ವಿಗ್ನತೆ ಹಾಗೂ ಇರುಸುಮುರುಸು ಉ0ಟಾಗುತ್ತದೆ. ಈ ರಸದೂತ ಇಲ್ಲದಿದ್ದಾಗ ನಿಮ್ಮ ತೂಕ ಹೆಚ್ಚಾಗುತ್ತದೆ ಮತ್ತು ನಿಮ್ಮ ಲೈ0ಗಿಕಾಸಕ್ತಿ ಕಡಿಮೆಯಾಗುತ್ತದೆ.

ಋತುಬಂಧ ಯಾವಾಗ ಬರುತ್ತದೆ?

ಋತುಬಂಧದ ವಯಸ್ಸು ಮಹಿಳೆಯ ಈ ಕೆಳಕಂಡ ವಿಷಯಗಳ ಮೇಲೆ ಅವಲಂಬಿಸಿರುತ್ತದೆ.
ಮೈನೆರೆಯುವುದು - ಮೊದಲು ಋತುಮತಿಯಾದ ವಯಸ್ಸು
ಋತುಚಕ್ರ
ಜನಾಂಗೀಯತೆ (Race)
ಆರ್ಥಿಕ ಹಾಗೂ ಸಾಮಾಜಿಕ ಗುಣಮಟ್ಟ 
ಗರ್ಭಧಾರಣೆ  ಮಾಡಿದ ಸಂಖ್ಯೆ ಹಾಗೂ ಮೊದಲಿಗೆ ಗರ್ಭವತಿಯಾದಾಗ ಆಕೆಯ ವಯಸ್ಸು
ಸ್ತನ್ಯಪಾನ ನೀಡಿದ ಸಮಯ (ಮಗುವಿಗೆ ಎಷ್ಟು ದಿನಗಳ ಕಾಲ ಎದೆ ಹಾಲನ್ನು ನೀಡಿದ್ದಾರೆ)
ಗರ್ಭನಿರೋಧಕ ಗುಳಿಗೆ ಸೇವಿಸಿದ ಬಗ್ಗೆ.
ವಂಶಪಾರಂಪರ್ಯತೆ 
ಧೂಮಪಾನ ಚಟವಿದ್ದರೆ.

ಋತುಬಂಧ ಒಂದು ರೂಪಾಂತರಗೊಳ್ಳುವ ಕ್ರಿಯೆ, ಇದು ಕಾಯಿಲೆಯಲ್ಲ ಎಂದು ನಿಮಗೆ ತಿಳಿದಿರಲಿ.
ಮುಟ್ಟು ನಿಲ್ಲುವ ಸಮಯದಲ್ಲಿ ಆಗುವಂತಹ ಬದಲಾವಣೆಗಳು ಯಾವುವು?

ಮೈ ಬಿಸಿಯೇರುವಿಕೆ (Hot flushes)
ಶೇಕಡ 85 ರಷ್ಟು ಮಂದಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಲಕ್ಷಣವೆಂದರೆ  ಮೈ ಬಿಸಿಯಾಗುವುದು. ಮುಖ ಮತ್ತು ಕುತ್ತಿಗೆಯ ಭಾಗದಲ್ಲಿ ಬಿಸಿ, ಬಿಸಿಯಾದ ಅನುಭವ, ಕೆಂಪೇರುವುದು ಮತ್ತು ಮೈ ಬೆವರುವುದು, ಇದು 2-5 ನಿಮಿಷದವರೆಗೆ, ದಿನದಲ್ಲಿ 2-10 ಸಲ ಕಾಣಿಸಿಕೊಳ್ಳುವುದು. ರಾತ್ರಿವೇಳೆ ಹೆಚ್ಚಾಗಿ ಕಾಣಿಸಿಕೊಂಡು, ನಿದ್ರೆಯನ್ನು ಕೆಡಿಸಬಹುದು. ರಾತ್ರಿ ವೇಳೆ ನಿದ್ದೆ ಮಾಡುತ್ತಿರುವಾಗ ಪಕ್ಕನೆ ಎಚ್ಚರವಾಗಿ ಮೈಯೆಲ್ಲ ಬೆವರಲು ಶುರುವಾಗುತ್ತದೆ. ಹಾಸಿಗೆ ಬೆವರಿನಿ0ದ ಒದ್ದೆಯಾಗಿರುತ್ತದೆ. ಇದನ್ನು ‘ರಾತ್ರಿ ಬೆವರುವಿಕೆ’ (night sweats) ಎಂದು ಕರೆಯುತ್ತೇವೆ. ಕೆಲವೊಮ್ಮೆ ಎದೆ ಬಡಿತ ತೀವ್ರಗೊಳ್ಳುತ್ತದೆ. ಒತ್ತಡದ ಸಮಯದಲ್ಲೂ ನಿಮಗೆ ಮೈ ಬಿಸಿಯೇರುವಿಕೆ ಕಾಣಿಸಿಕೊಳ್ಳಬಹುದು. ಚಳಿಗಾಲದಲ್ಲಿ ಕಡಿಮೆಯಿದ್ದರೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುತ್ತದೆ. ಸ್ಥೂಲಕಾಯದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕ0ಡು ಬರುತ್ತದೆ.

ಋತುಚಕ್ರದಲ್ಲಿ ಏನೇನು ಬದಲಾವಣೆಗಳಾಗುತ್ತವೆ?

ಋತುಬಂಧದ ಸಮಯದಲ್ಲಿ ಅಂಡಾಶಯದಲ್ಲಿದ್ದ ಕೋಶಿಕೆಗಳೆಲ್ಲಾ ಖಾಲಿಯಾಗಿ ಅಂಡಾಣು ಬಿಡುಗಡೆಯಾಗುವುದಿಲ್ಲ. ಅಂಡಾಣು ಬಿಡುಗಡೆಯಾಗದೆ ಜೀವರಸ ಉತ್ಪತ್ತಿಯಾಗುವುದಿಲ್ಲ. ಇದರಿಂದ ಗರ್ಭಾಶಯದ ಒಳಪದರ ತೆಳುವಾಗಿ ಮುಟ್ಟು ನಿಂತು ಹೋಗುತ್ತದೆ. ಜೀವರಸಗಳಿಲ್ಲದೆ ಸಂತಾನೋತ್ಪತ್ತಿಯ ಹೊರ ಮತ್ತು ಒಳ ಅಂಗಗಳಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಅಂಡಾಶಯದ ಗಾತ್ರ 3x2x1 ಸೆಂ.ಮೀ. ನಷ್ಟು ಇದ್ದದ್ದು 2x1x1 ಸೆಂ.ಮೀ.ಗೆ ಸಂಕುಚಿತಗೊಳ್ಳುತ್ತದೆ. ಗರ್ಭಕೋಶ ಚಿಕ್ಕದಾಗುತ್ತಾ ಬರುತ್ತದೆ. ಡಿಂಭನಳಿಕೆ ತೆಳುವಾಗುತ್ತದೆ. ಯೋನಿ ತೆಳುವಾಗುತ್ತದೆ, ಯೋನಿದ್ವಾರ (Introitusಸಂಕುಚಿತಗೊಳ್ಳುತ್ತದೆ. ಯೋನಿಯ ಹತ್ತಿರದ ಕೂದಲು ತೆಳುವಾಗುತ್ತದೆ ಮತ್ತು ಬಿಳಿ ಬಣ್ಣಕ್ಕೆ ತಿರುಗುತ್ತದೆ.

ಋತುಬಂಧದ ಸಮಯದಲ್ಲಿ ಋತುಚಕ್ರ ಸರಿಯಾಗಿ ಆಗುವುದಿಲ್ಲ.  ಕೆಲವು ಮಹಿಳೆಯರಲ್ಲಿ (ಶೇಕಡ 10) ಋತುಚಕ್ರ ತಟ್ಟನೆ ನಿಂತುಬಿಡಬಹುದು.  ಇನ್ನೂ 70% ಮಹಿಳೆಯರಲ್ಲಿ ಮುಟ್ಟಿನ ರಕ್ತಸ್ರಾವ ಕಡಿಮೆಯಾಗುತ್ತಾ ಬರುತ್ತದೆ.  ಇಲ್ಲವೇ ಋತುಚಕ್ರಗಳ ಮಧ್ಯದ ಅವಧಿ ಹೆಚ್ಚಾಗುತ್ತಾ ಹೋಗಿ ನಿಂತುಬಿಡುತ್ತದೆ.  ಒ0ದು ವರ್ಷ ಮುಟ್ಟು ಬಾರದಿದ್ದರೆ ಆಗ ನಿಮಗೆ ಋತುಬಂಧ ಬಂದಿದೆ ಎಂದು ಅರ್ಥ.

ದೇಹದ ಇತರ ಭಾಗಗಳಲ್ಲಿ ಆಗುವ ಬದಲಾವಣೆಗಳು ಯಾವುವು?

ದೇಹದಲ್ಲಿ ಮಾಂಸಖಂಡವು ಕ್ಷೀಣಿಸತೊಡಗುತ್ತದೆ. ಮಾಂಸಖಂಡದ ಕೋಶಗಳು ಪುನರುತ್ಪಾದನೆ ಮತ್ತು ದುರಸ್ತಿಗೊಳ್ಳುವಲ್ಲಿ ವಿಫಲಗೊಂಡಂತೆ ಅವುಗಳ ಸ್ಥಾನದಲ್ಲಿ ಕೊಬ್ಬು ಶೇಖರಣೆಗೊಳ್ಳುತ್ತದೆ. ಸ್ತನ, ನಿತಂಬ ಹಾಗೂ ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಗೊಳ್ಳುತ್ತದೆ. ಚರ್ಮದ ಹೊರಪದರ ಶುಷ್ಕವಾಗುತ್ತದೆ ಮತ್ತು ಒಳಪದರ ತೆಳುವಾಗುತ್ತದೆ. ಇದರಿಂದ ಚರ್ಮವು ಜೋತು ಬೀಳತೊಡಗುತ್ತದೆ ಮತ್ತು ಸುಕ್ಕುಗಟ್ಟುತ್ತದೆ. ತುಟಿಯ ಮೇಲ್ಬಾಗದಲ್ಲಿ ಮತ್ತು ಗದ್ದದ ಮೇಲೆ ಕೂದಲು ಬೆಳೆಯಬಹುದು. ತಲೆ ಕೂದಲು ಬೆಳ್ಳಗಾಗುತ್ತದೆ.

ಇದೇ ಸಮಯದಲ್ಲಿ ದೃಷ್ಟಿ ಶಕ್ತಿ ಗಣನೀಯವಾಗಿ ಇಳಿಮುಖವಾಗುತ್ತದೆ.  ಹತ್ತಿರದ ದೃಷ್ಟಿಯಲ್ಲಿ ಸ್ಪಷ್ಟತೆ ಕಡಿಮೆಯಾಗುತ್ತದೆ. ಇದನ್ನು  ಪ್ರೆಸ್‍ಬಯೋಪಿಯಾ (Presbiopia ಎಂದು ಕರೆಯುತ್ತಾರೆ. ಇನ್ನೂ ಕೆಲವರಲ್ಲಿ ಕಣ್ಣಿನ ಪೊರೆ (Cataract ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆ ಬಹಳ ಸುಲಭ. ಪ್ರೆಸ್‍ಬಯೋಪಿಯಾ ಇರುವವರು ಕನ್ನಡಕ ಧರಿಸಬಹುದು ಮತ್ತು ಕಣ್ಣೆನ ಪೊರೆ ಇರುವವರು ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹೊಸ lens  ಜೋಡಿಸಿಕೊಳ್ಳಬಹುದು.

ಟೊಳ್ಳುಮೂಳೆ  ರೋಗ (osteoporosisಎ0ದರೇನು?

ಋತುಬಂಧದ ಮುಖ್ಯ ಸಮಸ್ಯೆಗಳಲ್ಲಿ ಟೊಳ್ಳುಮೂಳೆ ರೋಗ ಒಂದು.  ಮೂಳೆಗಳು ತಮ್ಮ ಸಹಜವಾದ ಬಲವನ್ನು ಕಳೆದುಕೊಳ್ಳತೊಡಗುತ್ತವೆ. ಅಂತೆಯೇ ಸಣ್ಣಪುಟ್ಟ ಪೆಟ್ಟಿನಿಂದಾಗಿ ಮುರಿಯುವ/ಸೀಳುವ ಸ್ಥಿತಿಯನ್ನು ತಲುಪುತ್ತದೆ. ಇದೆಲ್ಲದರ ಪರಿಣಾಮವಾಗಿ ಕೀಲುನೋವು ಹಾಗೂ ಕೀಲುಗಳ ಊತವು ಕಾಣಿಸಿಕೊಳ್ಳುತ್ತದೆ. ಸಂಧಿವಾತ (Arthritis ಈ ಸಮಯದಲ್ಲಿ ಕಾಡುವ ಸಾಮಾನ್ಯ ತೊಂದರೆ.

ಇತರೆ ತೊಂದರೆಗಳು ಯಾವುವು?

ಈಸ್ಟ್ರೋಜನ್ ಜೀವರಸವು ಹೃದಯವನ್ನು ಕಾಪಾಡುವ ಜೀವರಸ ಆದ್ದರಿಂದ ಹೆಣ್ಣು ಮಕ್ಕಳಲ್ಲಿ ಮುಟ್ಟು ಇರುವವರೆಗೆ ಹೃದಯಸ್ತಂಭನ ಆಗುವ ಸಂಭವ ಕಡಿಮೆ. ಋತುಬಂಧದ ನಂತರ ಗಂಡಸರಲ್ಲಿ ಇರುವಷ್ಟೇ ಪ್ರಮಾಣದಲ್ಲಿ ಹೆಂಗಸರಲ್ಲೂ ಕೂಡ ಹೃದಯಸ್ತಂಭನ ಸಂಭವಿಸುತ್ತದೆ. 

ನರಗಳು ಹಾಗೂ ಮೆದುಳಿನ ಕಾರ್ಯಗಳು ನಿಧಾನಗೊಂಡು, ಬದಲಾವಣೆಗೊಂಡು ಆಲ್‍ಜೀಮರ್ (Alzheimer) ಎನ್ನುವ ರೋಗ ಋತುಬಂಧದ ನಂತರ ಕಾಡುವ ಇನ್ನೊಂದು ಸಮಸ್ಯೆ.

ರಕ್ತದೊತ್ತಡ, ಸಕ್ಕರೆ ಕಾಯಿಲೆ ಬರುವುದು, ಆಗಾಗ ತಲೆನೋವು, ಎದೆಬಡಿತ ಹೆಚ್ಚಾಗುವುದು, ಮುಂತಾದ ದೈಹಿಕ ಸಮಸ್ಯೆಗಳ ಜೊತೆ ಮಾನಸಿಕ ಬದಲಾವಣೆಗಳು ತಲೆದೋರುತ್ತವೆ.

ಈ ಮಾನಸಿಕ ಬದಲಾವಣೆಗಳು ಯಾವುವು ?

ಖಿನ್ನತೆ :
ಇದು ಋತುಬಂಧದ ಸಮಯದಲ್ಲಿ 75% ಕ್ಕೂ ಹೆಚ್ಚು ಮಹಿಳೆಯರನ್ನು ಕಾಡುವ ಸಮಸ್ಯೆ. ನಿದ್ರೆ ಬಾರದಿರುವುದು, ಏಕಾಗ್ರತೆ ಇಲ್ಲದಿರುವುದು, ಇರುಸು ಮುರುಸಾಗುವುದು, ಮರೆವು ಹೆಚ್ಚಾಗುವುದು, ಕಾರಣವಿಲ್ಲದೆ ಆಗಾಗ ಅಳುವುದು, ಕಣ್ಣಿನ ತುದಿಯಲ್ಲಿ ನೀರು ಯಾವಾಗಲೂ ಇರುವುದು, ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುವುದು, ಆಗಾಗ ತಲೆನೋವು ಬರುವುದು - ಇವೇ ಮು0ತಾದ ತೊಂದರೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಉದ್ವಿಗ್ನತೆಯನ್ನು ಕೂಡ ಈ ಸಮಯದಲ್ಲಿ  ಕಾಣಬಹುದು.

ಮೂತ್ರಕೋಶಕ್ಕೆ ಸಂಬಂಧಿಸಿದಂತೆ ಆಗುವ ಬದಲಾವಣೆಗಳು ಯಾವುವು ?
ಮೂತ್ರದ ಊರಿ, ಮೂತ್ರದ ಸೋಂಕು, ಅನಿಯಂತ್ರಿತ ಮೂತ್ರ ವಿಸರ್ಜನೆ ಇವೆಲ್ಲ ಈ ಸಮಯದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳು.

ಈ ಸಮಯದಲ್ಲಿ ಲೈಂಗಿಕ ಸಂಬಂಧಿ ಬದಲಾವಣೆಗಳು ಇರುತ್ತವೆಯೇ ?
ಯೋನಿಯು ಶುಷ್ಕವಾಗಿ, ಸಂಭೋಗ ಕ್ರಿಯೆ ಕಷ್ಟವಾಗುತ್ತದೆ. ಇದರಿಂದ ಈ ಸಮಯದಲ್ಲಿ ಲೈಂಗಿಕಾಸಕ್ತಿ  ಕಡಿಮೆಯಾಗುತ್ತದೆ.

ಸ್ತನಗಳಲ್ಲಿ ಆಗುವ ತೊಂದರೆಗಳೇನು ?
ಈ ಸಮಯದಲ್ಲಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವುದು ಒಂದು ಮುಖ್ಯ ಸಮಸ್ಯೆ. ಜೀವರಸಗಳ ಉತ್ಪನ್ನದಲ್ಲಿ ಏರುಪೇರಾಗಿ ಸ್ತನಗಳಲ್ಲಿ  ವ್ಯತ್ಯಯವುಂಟಾಗಿ ಅತೀವ ನೋವು ಕಾಣಿಸಿಕೊಳ್ಳುವುದು. ಈ ಸಮಯದಲ್ಲಿ ಸ್ತನಗಳಲ್ಲಿ ಕೊಬ್ಬು ಶೇಖರಣೆಗೊಂಡು ಸ್ತನ ದೊಡ್ಡದಾಗುತ್ತದೆ ಹಾಗೂ ಜೋತು ಬೀಳುತ್ತದೆ. ಇದಕ್ಕಾಗಿ ನೀವು ವೈದ್ಯರ ಬಳಿ ಕೆಲವೊಮ್ಮೆ ಬರಬೇಕಾಗಬಹುದು. ವೈದ್ಯರು ನಿಮ್ಮನ್ನು ಪರೀಕ್ಷಿಸಿ ಅದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ಕೊಡುತ್ತಾರೆ.


(ಮುಂದುವರೆಯುತ್ತದೆ)
-  ಡಾ ಪೂರ್ಣಿಮಾ. ಜೆ    

No comments:

Post a Comment