Showing posts with label ಆರೋಗ್ಯ. Show all posts
Showing posts with label ಆರೋಗ್ಯ. Show all posts

Tuesday, 12 September 2017

ಆರೋಗ್ಯ - ಹಣ್ಣೆಲೆಗಳು - 7

 (ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)
                                       
   ಅಧ್ಯಾಯ - 7
ಸ್ಥೂಲಕಾಯ, ಬೊಜ್ಜುತನ

ಭಾರತದಲ್ಲಿ 37% ನಷ್ಟು ಹೆ0ಗಸರು ಸ್ಥೂಲಕಾಯದಿ0ದ ಬಳಲುತ್ತಿದ್ದಾರೆ. ಮುಟ್ಟು ನಿಲ್ಲುವ ಆಸುಪಾಸಿನಲ್ಲಿ ಜೀವರಸಗಳ ಕೊರತೆಯಿಂದಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಮಧ್ಯ ಭಾಗದಲ್ಲಿ, ನಿತಂಬಗಳಲ್ಲಿ ಸ್ತನಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿ, ದೇಹದ ಆಕಾರದಲ್ಲಿ ಬದಲಾವಣೆ ಆಗುವುದು. ಕೆಲಸ ಮಾಡಲು ಕಷ್ಟವಾಗಿ ಸುಮ್ಮನೆ ಕೂತುಕೊಳ್ಳುವುದು. ಮಕ್ಕಳು ಮತ್ತು ಸೊಸೆಯಂದಿರು ಕೆಲಸ ಮಾಡುತ್ತಿರುವುದರಿಂದ ಕೆಲಸ ಕಡಿಮೆಯಾಗುವುದು. ವಂಶಪಾರಂಪರ್ಯವಾಗಿಯೂ ಕೂಡ ಬೊಜ್ಜು ಬರಬಹುದು. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸಗಳ ಕೊರತೆ ಹಾಗೂ ಡಿಹೈಡ್ರೋ ಎಪಿಆಂಡ್ರೋಸ್ಟಿರಾನ್ ಜೀವರಸದ ಕೊರತೆಯಿಂದ ದೇಹದಲ್ಲಿ ಕೊಬ್ಬು ಶೇಖರವಾಗಿ ಸ್ಥೂಲಕಾಯ ಉಂಟಾಗುತ್ತದೆ. ಇದರೊಟ್ಟಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಕಾಯಿಲೆಗಳು ಸಂಬಂಧ ಹೊಂದಿವೆ. 

 ಕೊಬ್ಬು ಕರಗಿಸಲು ಏನು ಮಾಡಬೇಕು?

• ವ್ಯಾಯಮ: ದಿನಕ್ಕೆ ಕನಿಷ್ಟ ಪಕ್ಷ 20-30 ನಿಮಿಷದಷ್ಟು ವೇಗದ ನಡಿಗೆಯನ್ನು ಮಾಡಬೇಕು.
• ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು
• ವಾರಕ್ಕೆ ಅರ್ಧ ಕೆ.ಜಿ ಹಾಗೂ ತಿಂಗಳಿಗೆ ಎರಡು ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕು
• ಯೋಗಾಸನ ಮತ್ತು ಪ್ರಾಣಾಯಾಮವನ್ನು  ದಿನವೂ ಮಾಡಬೇಕು
• ಸಮತೋಲನ ಆಹಾರವನ್ನು ಸೇವಿಸಬೇಕು
• ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು
• ಮಾಂಸವನ್ನು ಬಳಸುವಾಗ ಎಚ್ಚರವಿರಲಿ
• ಎಣ್ಣೆ ಪದಾರ್ಥ, ಸಿಹಿ ತಿಂಡಿ, ಹಾಲಿನಿಂದ ಮಾಡಿದ ಪದಾರ್ಥಗಳನ್ನು ತ್ಯಜಿಸಬೇಕು


ಅಧ್ಯಾಯ - 8
ಋತುಬಂಧದ ಸಮಯದಲ್ಲಿ ಬರುವ ಅರ್ಬುದ ರೋಗಗಳು (ಕ್ಯಾನ್ಸರ್)

1) ಸ್ತನದ ಕ್ಯಾನ್ಸರ್
2) ಗರ್ಭಕಂಠದ ಕ್ಯಾನ್ಸರ್
3) ಗರ್ಭಕೋಶದ ಕ್ಯಾನ್ಸರ್
4) ಅಂಡಾಶಯದ ಕ್ಯಾನ್ಸರ್
5) ಗರ್ಭನಾಳದ ಕ್ಯಾನ್ಸರ್
6) ಯೋನಿಯ ಕ್ಯಾನ್ಸರ್

ಸ್ತನದ ಕ್ಯಾನ್ಸರ್
ಇಡೀ ಪ್ರಪಂಚದಲ್ಲಿ ಹೆಂಗಸರು ಹೆಚ್ಚಾಗಿ ಸಾಯುವುದು ಸ್ತನದ ಕ್ಯಾನ್ಸರ್‍ನಿಂದ. ಪ್ರತಿ ಅರ್ಧ ಗಂಟೆಗೊಮ್ಮೆ ಒಬ್ಬ ಹೆಣ್ಣು ಮಗಳು ಸ್ತನದ ಕ್ಯಾನ್ಸರ್ (breast cancer) ನಿಂದ ಸಾಯುತ್ತಿದ್ದಾಳೆ. ಭಾರತದಲ್ಲಿ ಪ್ರತಿ ವರುಷಕ್ಕೆ 75,000 ಹೊಸ ಸ್ತನ ಕ್ಯಾನ್ಸರ್ ರೋಗಿಗಳ ಪತ್ತೆಯಾಗುತ್ತದೆ.  ಪ್ರತಿ 22 ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಸ್ತನದ ಕ್ಯಾನ್ಸರ್ ಬರುತ್ತದೆ. ಸ್ತನದ ಕ್ಯಾನ್ಸರ್ 40 ರಿಂದ 60 ವರ್ಷ ವಯಸ್ಸಿನ ಹೆಂಗಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಅದರಿಂದ ಸಂಭವಿಸಬಹುದಾದ ಪ್ರಾಣಾಪಾಯವನ್ನು ತಪ್ಪಿಸಬಹುದು.

ಸ್ತನದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುವುದು 
- 40 ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ 
- ವಂಶಪಾರಂಪರ್ಯವಾಗಿ ಬರುವಂತಹ ಬಿ.ಆರ್.ಸಿ.ಎ. ಜೀನ್ (ವಂಶವಾಹಿನಿ) ಇರುವವರಲ್ಲಿ
- ಮನೆಯಲ್ಲಿ ತಾಯಂದಿರಿಗೆ, ಸಹೋದರಿಯರಿಗೆ ಹಾಗೂ ಸಮೀಪ ಸಂಬಂಧಿಗಳಲ್ಲಿದ್ದರೆ
- ಮದ್ಯಪಾನ, ಧೂಮಪಾನ ಮಾಡುವುದರಿಂದ 
- ಗರ್ಭ ನಿರೋಧ ಗುಳಿಗೆಗಳನ್ನು ದೀರ್ಘಕಾಲ ಉಪಯೋಗಿಸಿದರೆ 
- ದೀರ್ಘಕಾಲ  ಜೀವರಸ ಮರುಪೂರಣ ಚಿಕಿತ್ಸೆ (HRT) ತೆಗೆದುಕೊಂಡರೆ 
- ಬೇಗನೆ ಋತುಮತಿಯಾಗಿದ್ದರೆ
- ತಡವಾಗಿ ಋತುಬಂಧವಾದರೆ
- ಋತುಬಂಧದ ನಂತರ ಬೊಜ್ಜು ಇದ್ದರೆ
- ಮಕ್ಕಳಿಲ್ಲದಿದ್ದರೆ
- ತಡವಾಗಿ ಮಗು ಜನಿಸಿದರೆ
- ಮಗುವಿಗೆ ಸ್ತನ್ಯಪಾನ ಮಾಡದಿದ್ದರೆ 
- ವಿಕಿರಣಕ್ಕೆ ಒಡ್ಡಿಕೊಂಡಿದ್ದರೆ

ವಯಸ್ಸಾದಂತೆ ಸ್ತನದಲ್ಲಿ ಕೊಬ್ಬಿನ ಅಂಶ ಶೇಖರವಾಗುತ್ತದೆ ಮತ್ತು ಸ್ತನ ಜೋತು ಬೀಳುತ್ತದೆ. ಗಡ್ಡೆ ಇದೆಯೇ ಎಂದು ಪರೀಕ್ಷಿಸಲು ಕೂಡ ತುಂಬಾ ಕಷ್ಟ ಆಗುತ್ತದೆ. ಆದ್ದರಿಂದ ಎಲ್ಲರೂ ಹದಿಹರೆಯದಿಂದಲೇ ತಮ್ಮ ತಮ್ಮ ಸ್ತನಗಳನ್ನೂ ಸ್ವತ: ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಮುಟ್ಟಿಗೆ ಮುಂಚೆ ಸ್ತನ ನೋವು ಕೆಲವರಲ್ಲಿ ಕಾಣಿಸಿಕೊಳ್ಳುವುದರಿಂದ, ಮುಟ್ಟಾದ ನಂತರದ ಒಂದೆರಡು ದಿನಗಳಲ್ಲಿ ಪರೀಕ್ಷಿಸಿಕೊಳ್ಳಲು ಒಳ್ಳೆಯ ಸಮಯ. ಸ್ತನಗಳಲ್ಲಿ ಯಾವುದೇ ಗಡ್ಡೆಗಳಿದ್ದಲ್ಲಿ ಅಥವಾ ಮೊಲೆ ತೊಟ್ಟಿನಿಂದ ರಕ್ತ ಅಥವಾ ನೀರಿನಂತಹ ದ್ರವ ಸ್ರವಿಸುತ್ತಿದ್ದರೆ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಸ್ತನದ ಚರ್ಮವು ಕಿತ್ತಳೆ ಹಣ್ಣಿನ ಸಿಪ್ಪೆಯ ರೀತಿಯಿದ್ದು, ಕೆಳಗಡೆ ಗಡ್ಡೆಯಿದ್ದರೆ ಬಹುಶಃ ಅದು ಕ್ಯಾನ್ಸರ್ ಗಡ್ಡೆ ಇರಬಹುದು ತಡಮಾಡದೆ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಸೂಕ್ತ.

ನಿಮ್ಮ ಸ್ತನಗಳನ್ನು ನೀವೇ ಪರೀಕ್ಷಿಸಿಕೊಳ್ಳಿ: 
ಕನ್ನಡಿ ಮುಂದೆ ನಿಂತು ಎರಡು ಸ್ತನಗಳು ಒಂದೇ ಗಾತ್ರವಿದೆಯೇ ಹಾಗೂ ಮೊಲೆತೊಟ್ಟುಗಳು ಒಂದೇ ಸಮಮಟ್ಟದಲ್ಲಿದೆಯೇ ಎಂದು ನೋಡಬೇಕು. ಕೈಯನ್ನು ಸ್ತನದ ಮೇಲಿಟ್ಟು ಎದೆಗೂಡಿಗೆ ಸಮಾನಾಂತರವಾಗಿ ಒತ್ತಿದಾಗ ನಿಮ್ಮ ಕೈ ಹಾಗೂ ಎದೆಯ ಎಲುಬಿನ ಮದ್ಯೆ ಏನಾದರೂ ಗಡ್ಡೆಗಳು ಇವೆಯೇ ಎಂದು ನೋಡಿಕೊಳ್ಳಿ. ಹಾಗೆಯೇ ಮಲಗಿಕೊಂಡು ಪರೀಕ್ಷಿಸಿಕೊಳ್ಳಿ. ನಿಮಗೇನಾದರು ಸಂದೇಹವಿದ್ದರೆ ವೈದ್ಯರ ಬಳಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ, ಅವರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ವೈದ್ಯರು ನಿಮ್ಮನ್ನು ಪರೀಕ್ಷಿಸಿ ಗಡ್ಡೆ ಇದೆ ಅಂತಾದರೆ ಅದು ಕ್ಯಾನ್ಸರ್ ಹೌದೋ ಅಲ್ಲವೋ ಎಂದು ಖಚಿತ ಪಡಿಸಿಕೊಳ್ಳಲು ಹಾಗೂ ಅದು ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗೆ ಹೇಳಿದ ಕೆಲವು ತಪಾಸಣೆಗಳನ್ನು ಮಾಡುತ್ತಾರೆ. 

ಮ್ಯಾಮೋಗ್ರಫಿ _ (Mammography) 
ಕ್ಷಕಿರಣಗಳನ್ನು ಉಪಯೋಗಿಸಿ ಮ್ಯಾಮೋಗ್ರಫಿ ಮಾಡುತ್ತಾರೆ, ಇದರಿಂದ ಸ್ತನದಲ್ಲಿರುವುದು ಕ್ಯಾನ್ಸರ್ ಗಡ್ಡೆಯೋ ಅಥವಾ ಸೌಮ್ಯ ಗಡ್ಡೆಯೋ ಎಂದು ತಿಳಿಯುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರು 1-2 ವರ್ಷಕ್ಕೊಮ್ಮೆ ಮ್ಯಾಮೋಗ್ರಫಿ ಮಾಡಿಸಿಕೊಳ್ಳುವುದು ಒಳ್ಳೆಯದು.

ಸೋನೋಗ್ರಫಿ ಮತ್ತು ಸೂಜಿಯಿಂದ ದ್ರವವನ್ನು ತೆಗೆದು ಬಯಾಪ್ಸಿ ಮಾಡುವುದು (FNAB) 
ಸೋನೋಗ್ರಫಿ ಮಾಡುವುದರಿಂದ ಸ್ತನದಲ್ಲಿರುವ ಗಡ್ಡೆ ಕ್ಯಾನ್ಸರ್ ಗಡ್ಡೆಯೇ ಇಲ್ಲವೇ ನೀರಿನಿಂದ ತುಂಬಿದ ಗುಳ್ಳೆಯೇ ಎಂದು ತಿಳಿಯುತ್ತದೆ. ಸೋನೋಗ್ರಫಿ ಸಹಾಯದಿಂದ ಸೂಜಿಯಿಂದ ಅದರಲ್ಲಿರುವ ದ್ರವವನ್ನು ಇಲ್ಲವೇ ಜೀವಕೋಶಗಳನ್ನು ತೆಗೆದು ಕ್ಯಾನ್ಸರ್ ಕಣಗಳಿವೆಯೇ ಎಂದು ಪತ್ತೆ ಹಚ್ಚಬಹುದು.

ಚಿಕಿತ್ಸೆ
ಸ್ತನದ ಕ್ಯಾನ್ಸರ್ ಸೇರಿದಂತೆ ಇತರ ಎಲ್ಲಾ ಕ್ಯಾನ್ಸರ್ ರೋಗಗಳನ್ನು ನಾಲ್ಕು ಹಂತಗಳಲ್ಲಿ ಗುರುತಿಸುತ್ತೇವೆ. ಪ್ರಾರಂಭದ ಹಂತ, ಅಂದರೆ ಹಂತ ಒಂದು ಮತ್ತು ಹಂತ ಎರಡರಲ್ಲಿ ರೋಗವನ್ನು ಪತ್ತೆಹಚ್ಚಿದರೆ ಗಡ್ಡೆಯನ್ನು ಮಾತ್ರ ತೆಗೆದುಹಾಕಿ ನಂತರ ಬೇಕಾದ ವಿಕಿರಣ ಚಿಕಿತ್ಸೆ (ರೇಡಿಯೋಥೆರಪಿ) ಇಲ್ಲವೇ ರಸಾಯನ ಚಿಕಿತ್ಸೆ (ಕೀಮೋಥೆರಪಿ) ಗಳನ್ನು ಕೊಡುತ್ತಾರೆ. ಇದರಿಂದ ಮಹಿಳೆಯು 10-20 ವರ್ಷಗಳ ಕಾಲ ಚೆನ್ನಾಗಿ ಬಾಳಬಹುದು. ಮೂರು ಮತ್ತು ನಾಲ್ಕನೇ ಹಂತದಲ್ಲಿ ರೋಗ ಪತ್ತೆಯಾದರೆ ಶಸ್ತ್ರಚಿಕಿತ್ಸೆ ಮಾಡಲು ಕಷ್ಟವಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿ ಇಡೀ ಸ್ತನವನ್ನು ತೆಗೆದು ಹಾಕಬೇಕಾಗಬಹುದು. ನಂತರ ವಿಕಿರಣ ಚಿಕಿತ್ಸೆ ನೀಡಬೇಕಾಗಬಹುದು.  ಕೆಲವರಿಗೆ ರಸಾಯನ ಚಿಕಿತ್ಸೆಯನ್ನು ನೀಡುತ್ತಾರೆ. ಇದರಿಂದ ಮಹಿಳೆ ಕೆಲವು ತಿಂಗಳು ಅಥವಾ ವರ್ಷ ಕಾಲ ಆರಾಮವಾಗಿ ಕಳೆಯಬಹುದು. ನೋವಿನಿಂದ ನರಳುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರೋಗ ತುಂಬಾ ಉಲ್ಬಣಗೊಂಡಾಗ ನೋವಿನಿಂದ ನರಳುವುದನ್ನು ತಪ್ಪಿಸಲು ನೋವು ನಿವಾರಕಗಳನ್ನು ಕೊಡಬೇಕಾಗಬಹುದು.

ಸ್ತನದ ಕ್ಯಾನ್ಸರ್ ಬಾರದಂತೆ ತಡೆಗಟ್ಟುವ ವಿಧಾನಗಳು
- ಮೊದಲ ಮಗುವಿನ ಜನನವನ್ನು ಮುಂದೂಡಬೇಡಿ
- ಮಗುವಿಗೆ ಸ್ತನ್ಯಪಾನವನ್ನು ಒಂದು ವರ್ಷದವರೆಗೆ ಕಡ್ಡಾಯವಾಗಿ ಕೊಡುವುದು ಸೂಕ್ತ
- ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಿ
- ಪ್ರತಿ ವಾರದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚಿಗೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿರಿ
- ಗರ್ಭ ನಿರೋಧಕ ಗುಳಿಗೆಗಳನ್ನು ಮತ್ತು ಚುಚ್ಚುಮದ್ದನ್ನು ಹಾಗೂ ಜೀವರಸ ಮರುಪೂರಣ ಚಿಕಿತ್ಸೆಯನ್ನು (HRT) ದೀರ್ಘಕಾಲ ತೆಗೆದುಕೊಳ್ಳಬಾರದು.
- ಮದ್ಯಪಾನ ಹಾಗೂ ಧೂಮಪಾನ ಪೂರ್ಣ ನಿಲ್ಲಿಸಿ ಬಿಡಿ.
- ಹೂಕೋಸು, ಎಲೆ ಕೋಸು, ಮೊಳಕೆ ಬರಿಸಿದ ಕಾಳು, ಮೀನು, ಸಸ್ಯಜನ್ಯ ಎಣ್ಣೆಯನ್ನು ಹೆಚ್ಚಾಗಿ ಉಪಯೋಗಿಸಿರಿ
- ಸೋಯಾ ಹಾಗೂ ದನದ ಹಾಲನ್ನೂ ಹೆಚ್ಚಾಗಿ ಸೇವಿಸಿದರೆ ಸ್ತನದ ಕ್ಯಾನ್ಸರನ್ನೂ ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬಹುದು. 

ಋತುಬಂಧದ ಆಸುಪಾಸಿನಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಸ್ತನದ ನೋವು ಕಾಣಿಸಿಕೊಳ್ಳುತ್ತದೆ. ಯಾವುದೇ ಗಡ್ಡೆಗಳಿಲ್ಲದೆ ಬರೀ ನೋವಿದ್ದರೆ ಚಿಂತಿಸಬೇಡಿ. ನಿಮ್ಮ ವೈದ್ಯರಲ್ಲಿಗೆ ಹೋಗಿ ತೋರಿಸಿಕೊಳ್ಳಿ. ಅದಕ್ಕೆ ಕೆಲವು ಔಷಧಿಗಳಿವೆ, ಅದರಿ0ದ ನೋವನ್ನು ಕಡಿಮೆಮಾಡಿಕೊಳ್ಳಬಹುದು.

ಗರ್ಭಕಂಠದ ಕ್ಯಾನ್ಸರ್ (Cervical Cancer) 
ಸ್ತನದ ಕ್ಯಾನ್ಸರ್ ನಂತರ ಹೆಚ್ಚಾಗಿ ಮಹಿಳೆಯರು ಸಾಯುವುದು ಗರ್ಭಕಂಠದ ಕ್ಯಾನ್ಸರ್‍ನಿಂದ. ಇದು 30 ರಿಂದ 35 ವರ್ಷಗಳಲ್ಲಿ ಹಾಗೂ 50-55 ವರ್ಷಗಳಲ್ಲೂ ಕಂಡುಬರುವ ಕ್ಯಾನ್ಸರ್.

ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುವುದು
- ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಹೆಂಗಸರಲ್ಲಿ
- ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುವವರಲ್ಲಿ
- ಒಬ್ಬರಿಗಿಂತ ಹೆಚ್ಚು ಗಂಡಸರೊಟ್ಟಿಗೆ ಲೈಂಗಿಕ ಸಂಬಂಧ ಹೊಂದಿರುವವರಲ್ಲಿ
- ವೇಶ್ಯೆಯರಲ್ಲಿ 
- ವೈರಲ್ ಸೋಂಕು ಇರುವವರಲ್ಲಿ
-
ಈ ಕೆಳಗಿನ ತೊಂದರೆಗಳು ಕಾಣಿಸಿಕೊಂಡಲ್ಲಿ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು 
- ಅನಿಯಮಿತ ರಕ್ತಸ್ರಾವ
- ಋತುಬಂಧದ ನಂತರ ರಕ್ತಸ್ರಾವ
- ಅತಿಯಾಗಿ ಬಿಳಿ ಹೋಗುವುದು ಹಾಗೂ ದುರ್ವಾಸನೆಯಿಂದ ಕೂಡಿರುವುದು
- ಕೆಂಪು ಮಿಶ್ರಿತ ಬಿಳಿಸ್ರಾವ
- ಸಂಭೋಗದ ನಂತರದ ರಕ್ತಸ್ರಾವ

ವೈದ್ಯರ ಬಳಿಗೆ ಹೋದಾಗ ವೈದ್ಯರು ಯೋನಿಯ ಮುಖಾಂತರ ಗರ್ಭಕಂಠ ವೀಕ್ಷಿಸಿ ಏನಾದರೂ ತೊಂದರೆ ಇದೆಯೇ ಎಂದು ಪರೀಕ್ಷಿಸುತ್ತಾರೆ. ಹೂಕೋಸಿನಂತಹ ದುರ್ಮಾಂಸ ಬೆಳೆದಿದ್ದರೆ ಅದರಿಂದ ಸ್ವಲ್ಪ ಚೂರನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತಾರೆ. ಗರ್ಭಕಂಠದ ಕ್ಯಾನ್ಸರ್ ಅನ್ನು ಐದು ಹಂತಗಳಾಗಿ ವಿಂಗಡಿಸುತ್ತೇವೆ. ಯಾವ ಹಂತದಲ್ಲಿದೆ ಎಂದು ತಿಳಿಯಲು ಈ ಕೆಳಗೆ ತಿಳಿಸಿದ ತಪಾಸಣೆಗಳನ್ನು ಮಾಡಬೇಕಾಗುತ್ತದೆ. ಹಂತವನ್ನು ಗುರುತಿಸಿದ ನಂತರ ಚಿಕಿತ್ಸೆಯನ್ನೂ ಕೊಡಲು ಸುಲಭವಾಗುತ್ತದೆ. 

ಪ್ಯಾಪನ ಲೇಪನ:
ಗಡ್ಡೆಗಳು ಇಲ್ಲದಿದ್ದಲ್ಲಿ  ಮರದ ತೆಳು ಹಲಗೆಯ ಸಹಾಯದಿಂದ  ಗರ್ಭಕಂಠವನ್ನು ಸವರಿ ಲೇಪನವನ್ನು ತಯಾರಿಸಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿದರೆ ಕ್ಯಾನ್ಸರ್ ಕಣಗಳು ಇವೆ0iÉುೀ ಎಂದು ತಿಳಿಯುತ್ತದೆ. ಅಸಾಮಾನ್ಯ ಕಣಗಳು ಇದ್ದಲ್ಲಿ ಇದನ್ನು ‘ಂ’ ಹಂತದ ಕ್ಯಾನ್ಸರ್ ಎಂದು ಗುರುತಿಸುತ್ತೇವೆ.

ವೈದ್ಯರು ಬರೀಗಣ್ಣಿನಿಂದ ನೋಡಿದ ಮೇಲೆ ಏನೂ ಕಾಣಿಸದಿದ್ದಲ್ಲಿ ಕಾಲ್ಪೋಸ್ಕೋಪಿ ಎಂಬ ಯಂತ್ರದಿಂದ ಗರ್ಭಕಂಠವನ್ನು ವೀಕ್ಷಿಸಿ ಏನಾದರೂ ಅಸಾಮಾನ್ಯವಾದುದು ಇದೆಯೇ  ಎಂದು ನೋಡುತ್ತಾರೆ. ಇದ್ದಲ್ಲಿ ಆ ಜಾಗದಿಂದ ತುಂಡೊಂದನ್ನು ತೆಗೆಯುತ್ತಾರೆ. ತೆಗೆಯುವ ಮೊದಲಿಗೆ ಅಸಿಟಿಕ್ ಅಸಿಡ್‍ನ್ನು ಲೇಪಿಸುತ್ತಾರೆ. ಅಸಿಟಿಕ್ ಅಸಿಡ್ ಅಸಾಮಾನ್ಯ ಜೀವಕೋಶಗಳೊಂದಿಗೆ ಬೆರೆತು ಅಸಾಮಾನ್ಯ ಕೋಶವು ಸರಿಯಾಗಿ ಕಾಣುವಂತೆ ಮಾಡುತ್ತದೆ. ಆಗ ಬಯಾಪ್ಸಿ ತೆಗೆಯಲು ಇನ್ನೂ ಸುಲಭವಾಗುತ್ತದೆ. ತೆಗೆದ ಭಾಗವನ್ನು ಪರೀಕ್ಷೆಗೆ ಕಳುಹಿಸಿ, ಕ್ಯಾನ್ಸರ್ ಕಣಗಳಿವೆಯೇ ಎಂದು ನೋಡುತ್ತಾರೆ. ‘0’ ಹಾಗೂ ಒಂದನೇ ಹಂತದ ಕ್ಯಾನ್ಸರ್ ಇದ್ದರೆ ಇದರಿಂದ ತಿಳಿಯುತ್ತದೆ. ‘0’ ಹಾಗೂ ಒಂದನೇ ಹಂತದ ಕ್ಯಾನ್ಸರ್ ಇದ್ದರೆ ಶಸ್ತ್ರ ಚಿಕಿತ್ಸೆಯ ಮುಖಾಂತರ ಕಾಯಿಲೆಯನ್ನು ವಾಸಿಗೊಳಿಸಬಹುದು.
2ನೇ ಹಂತದಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ವಿಧಗಳನ್ನು ಗುರುತಿಸಿ ‘ಎ’ ವಿಧವನ್ನೂ ‘ವರ್‍ಧೀಮ್‍ನ’ ಶಸ್ತ್ರ ಚಿಕಿತ್ಸೆ ಮೂಲಕ ನಿವಾರಣೆಗೊಳಿಸಬಹುದು. 2ನೇ‘ಬಿ’ ಹಂತ ಹಾಗೂ ‘3’ ಮತ್ತು ‘4’ನೇ ಹಂತದ ಕ್ಯಾನ್ಸರನ್ನೂ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಿಕಿರಣ ಚಿಕಿತ್ಸೆ ಇಲ್ಲವೇ ರಸಾಯನ ಚಿಕಿತ್ಸೆ ಕೊಟ್ಟು ಹೆಚ್ಚುಹರಡದಂತೆ ನೋಡಿಕೊಳ್ಳಬಹುದು, ಇಲ್ಲವೇ ರೋಗದ ತೀವ್ರ ಸ್ವರೂಪದ ತೊಂದರೆಗಳನ್ನು ತಹಬದಿಗೆ ತರಬಹುದಷ್ಟೇ ವಿನಹ ಪೂರ್ತಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. 
ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಗರ್ಭಕೋಶದ ಕ್ಯಾನ್ಸರ್ ಮೂತ್ರಕೋಶಕ್ಕೆ ಮತ್ತು ಮಲಕೋಶಕ್ಕೆ ಹರಡಿರುತ್ತದೆ. ಇದನ್ನು ತಿಳಿದುಕೊಳ್ಳಲು ಆಲ್ಟ್ರಾಸೋನೋಗ್ರಫಿ, ಸಿಸ್ಟೋಸ್ಕೋಪಿ ಮತ್ತು ರೆಕ್ಟೋಸ್ಕೋಪಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. 

ಮೂತ್ರಕೋಶಕ್ಕೆ ಹಬ್ಬಿದರೆ ಈ ಕೆಳಕಂಡ ತೊಂದರೆಗಳು ಕಾಣಿಸಿಕೊಳ್ಳಬಹುದು-
- ಉರಿಮೂತ್ರ
- ಪದೇ ಪದೇ ಮೂತ್ರ ವಿಸರ್ಜನೆ 
- ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. 

ಮಲಕೋಶಕ್ಕೆ ಸ್ವಲ್ಪ ನಿಧಾನವಾಗಿ ಹಬ್ಬುತ್ತದೆ ಮತ್ತು ಮಲ ವಿಸರ್ಜನೆಯಲ್ಲಿ ಸ್ವಲ್ಪ ವ್ಯತ್ಯಯವಾಗುತ್ತದೆ. 

ಕ್ಯಾನ್ಸರ್ ಕಣಗಳು ದುಗ್ಧ ನಾಳದ ಮುಖಾಂತರ ಮತ್ತು ರಕ್ತದ ಮೂಲಕ ಇತರ ಭಾಗಗಳಾದ ಮೆದುಳು, ಪುಪ್ಪಸ, ಮೂಳೆ,  ಯಕೃತ್ ಮುಂತಾದ ಕಡೆ ಹರಡುತ್ತದೆ. ಇದಕ್ಕೆ ‘ಮರುಚಲು ಕ್ಯಾನ್ಸರ್’ (metastasis) ಎಂದು ಕರೆಯುತ್ತಾರೆ. ಯೋನಿಗೆ  ನೇರವಾಗಿ ಹರಡುತ್ತದೆ. ಗರ್ಭಚೀಲದ ಕುತ್ತಿಗೆಯಿಂದ ಗರ್ಭಕೋಶಕ್ಕೆ ಹಾಗೂ ಡಿಂಭ ನಳಿಕೆಗೆ ಹರಡುತ್ತದೆ. ಸೊಂಟದ ಎಲುಬಿಗೆ (Pelvic bone) ನೇರವಾಗಿ ಹರಡುತ್ತದೆ. 

ಕೋನ್ ಬಯಾಪ್ಸಿ (Cone Biopsy)
 ಈ ಚಿಕಿತ್ಸೆ ಮಾಡಿದರೆ ಸೊನ್ನೆ ಹಂತದ ಕ್ಯಾನ್ಸರ್‍ಗೆ ಚಿಕಿತ್ಸೆ ಮಾಡಿದಂತೆ ಆಗುತ್ತದೆ. ಇದರಲ್ಲಿ ಗರ್ಭಕಂಠವನ್ನು ಶಂಖಾಕೃತಿ ರೂಪದಲ್ಲಿ ಕತ್ತರಿಸಿ ತೆಗೆಯುತ್ತಾರೆ ಹಾಗೂ ತೆಗೆದ ಭಾಗವನ್ನು  ಪರೀಕ್ಷೆಗೆ ಕಳುಹಿಸುತ್ತಾರೆ. ಇದಕ್ಕೆ ಹೆಚ್ಚಿನ ಖರ್ಚು ಬರುವುದಿಲ್ಲ. ತೊಂದರೆಗಳು ಕೂಡ ಉಂಟಾಗುವುದಿಲ್ಲ.
‘0’ ಹಂತದ ಮತ್ತು ಒಂದನೇ ಹಂತದ ಕ್ಯಾನ್ಸರ್‍ಗೆ ಲೇಸರ್ ಚಿಕಿತ್ಸೆ, ಕ್ರಯೋ ಸರ್ಜರಿ ಹಾಗೂ ಲೂಪ್ ಎಲೆಕ್ಟ್ರೋಸರ್ಜಿಕಲ್ ಚಿಕಿತ್ಸೆಗಳನ್ನು ಕೂಡ ಮಾಡಬಹುದು. ಇವೆಲ್ಲಕ್ಕೂ ತಜ್ಞ ವೈದ್ಯರ ಸಲಹೆ ಪಡೆಯುವುದು ಹಾಗೂ ಆಗಾಗ ತಪಾಸಣೆಗೊಳಗಾಗುವುದು ಅಗತ್ಯ. 

ಗರ್ಭಕಂಠದ ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು 
        -ಪ್ಯಾಪನ ಲೇಪನವನ್ನು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳಬಹುದು. ಎರಡು ಸಲ ಮಾಡಿದಾಗ ನೇತ್ಯಾತ್ಮಕ ಎಂದು ಬಂದರೆ ಐದು ವರ್ಷಕ್ಕೊಮ್ಮೆ ಜೀವಂತವಾಗಿರುವವರೆಗೂ ಮಾಡಿಸಿಕೊಂಡರೆ ಒಳ್ಳೆಯದು
- ಮದುವೆಯ ವಯಸ್ಸು 18 ಆಗಿರಲೇಬೇಕು 21 ಕ್ಕೆ ದೂಡಿದರೂ ಪರವಾಗಿಲ್ಲ.
- ಹೆಚ್ಚು ಮಕ್ಕಳನ್ನು ಹೆರಬೇಡಿ. ಒಂದು ಬೇಕು, ಇಲ್ಲವೇ ಎರಡು ಸಾಕು.
- ಲೈಂಗಿಕ ಸಂಬಂಧಗಳ ಬಗ್ಗೆ ಎಚ್ಚರಿಕೆಯಿಂದಿರಿ.
-ಇದಕ್ಕೆ ಸಂಬಂಧಿಸಿದಂತೆ ವ್ಯಾಕ್ಸಿನ್ ಬಂದಿದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ  ಸಂಶೋಧನೆಯ  ಅಗತ್ಯ ಇದೆ. ಈಗಲೇ ಅದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಆಗುವುದಿಲ್ಲ. ಸಧ್ಯಕ್ಕೆ ಮೂರು ಸಲ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. 18 ರಿಂದ 45 ವರ್ಷದವರೆಗಿನ ಲೈಂಗಿಕ ಚಟುವಟಿಕೆಯುಳ್ಳ ಎಲ್ಲಾ ಹೆಣ್ಣುಮಕ್ಕಳು ತೆಗೆದುಕೊಳ್ಳಬಹುದು.

ಗರ್ಭಕೋಶದ ಕ್ಯಾನ್ಸರ್
ಗರ್ಭಕೋಶದ ಒಳ ಪದರದಿಂದ ಆರಂಭವಾಗಿ ಇತರೆಡೆಗೆ ಹರಡುವ ಗರ್ಭಕೋಶದ ಕ್ಯಾನ್ಸರ್‍ನ ಮುಖ್ಯ ಗುಣಲಕ್ಷಣಗಳು
- ಅತೀವ ರಕ್ತಸ್ರಾವ, ಗಡ್ಡೆ ಗಡ್ಡೆಯಾಗಿ ರಕ್ತ ಹೋಗುವುದು
- ಋತುಬಂಧದ ನಂತರದ ರಕ್ತಸ್ರಾವ
- ಮುಟ್ಟು ಪದೇ ಪದೇ ಆಗುತ್ತಿರುವುದು 
- ಅತೀವ  ಬಿಳಿಸ್ರಾವವಾಗುತ್ತಿರುವುದು

ಗರ್ಭಕೋಶದ ಕ್ಯಾನ್ಸರ್ ಈ ಕೆಳಗಿನವರಲ್ಲಿ ಹೆಚ್ಚಾಗಿ ಕಂಡುಬರುವುದು
- ಸ್ಥೂಲ ದೇಹ ಹೊಂದಿದವರಲ್ಲಿ
- ಮಕ್ಕಳಾಗದ ಸ್ತ್ರೀಯರಲ್ಲಿ
- ತುಂಬಾ ಚಿಕ್ಕ ವಯಸ್ಸಿನಲ್ಲಿ ಋತುಮತಿಯಾದವರಲ್ಲಿ
- ತುಂಬಾ ವಯಸ್ಸಾದ ಮೇಲೆ ಋತುಬಂಧ ಹೊಂದಿದವರಲ್ಲಿ
- ಆರ್ಥಿಕ ಹಾಗೂ ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿದ ಸ್ತ್ರೀಯರಲ್ಲಿ 
- ಋತುಬಂಧದ ನಂತರ ರಸದೂತ ಮರುಪೂರಣ ಚಿಕಿತ್ಸೆ ತೆಗೆದುಕೊಳ್ಳುತ್ತಿರುವವರಲ್ಲಿ
- ಮಧುಮೇಹ ಅಥವಾ ರಕ್ತದೊತ್ತಡ ಕಾಯಿಲೆ ಇದ್ದವರಲ್ಲಿ

ವೈದ್ಯರ ಬಳಿಗೆ ಹೋದರೆ ಅವರು ನಿಮ್ಮನ್ನು ಕೂಲಂಕುಷವಾಗಿ ಪರೀಕ್ಷಿಸಿ ಗರ್ಭ ಚೀಲ ಹಿಗ್ಗಿದೆಯೇ ಇಲ್ಲವೇ ಎಂದು  ನೋಡಿ ನಿಮಗೆ ಅಲ್ಟ್ರಾಸೋನೋಗ್ರಫಿ ಪರೀಕ್ಷೆ ಮಾಡಿಸಿಕೊಳ್ಳಲು ಹೇಳುತ್ತಾರೆ. ಅದರಲ್ಲಿ ಗರ್ಭಕೋಶದ ಒಳಪದರದ ದಪ್ಪವನ್ನು ನೋಡುತ್ತಾರೆ. ತು0ಬಾ ದಪ್ಪಗಾಗಿದ್ದರೆ ಅದನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಗರ್ಭಕೋಶದ ಒಳಪದರವನ್ನು ಕೆರೆದು ತೆಗೆಯುವುದಕ್ಕೆ D&C ಎನ್ನುತ್ತಾರೆ. D&C ಮಾಡಿ ಒಳಪದರದ ಚೂರನ್ನು ಪರೀಕ್ಷೆಗೆ ಕಳುಹಿಸುತ್ತಾರೆ. ಅದರಲ್ಲಿ ಕ್ಯಾನ್ಸರ್ ಕಣಗಳಿದ್ದರೆ ಅಥವಾ ಜೀವಕೋಶಗಳು ಅಸಾಮಾನ್ಯವಾಗಿದ್ದರೆ ಗರ್ಭಕೋಶದ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡುತ್ತಾರೆ.

ಗರ್ಭಕೋಶದ ಕ್ಯಾನ್ಸರನ್ನು ಸಹ ನಾಲ್ಕು ಹಂತಗಳಲ್ಲಿ ಗುರುತಿಸಬಹುದು. ಒಂದು ಮತ್ತು ಎರಡನೇ ಹಂತದ ಕ್ಯಾನ್ಸರ್ ಅನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಮೂರು ಮತ್ತು ನಾಲ್ಕನೇ ಹಂತದ ಕ್ಯಾನ್ಸರ್‍ಗೆ ಶಸ್ತ್ರಚಿಕಿತ್ಸೆ ಜೊತೆಗೆ ವಿಕಿರಣ ಚಿಕಿತ್ಸೆ ಅಥವಾ ರಸಾಯನ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ಶಸ್ತ್ರ ಚಿಕಿತ್ಸೆಯಲ್ಲಿ ಅಳಿದುಳಿದ ಕ್ಯಾನ್ಸರ್ ಕಣಗಳನ್ನು ನಾಶ ಮಾಡಬಹುದು. ರೋಗಿಯ ಅಯಸ್ಸನ್ನು ಮತ್ತು ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಬಹುದು.

ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ದಪ್ಪಗಾಗಿರುವ ಹಾಲ್ರಸ ಗ್ರಂಥಿ (lymph node) ಗಳನ್ನು ತೆಗೆಯುವುದು ಅವಶ್ಯ ಏಕೆಂದರೆ ಹಾಲ್ರಸದ ಮೂಲಕ  ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುತ್ತದೆ. ಇದನ್ನು ಮರುಚಲ ಕ್ಯಾನ್ಸರ್ ಎಂದು ಹೇಳುತ್ತೇವೆ. ಇದು ಕ್ಯಾನ್ಸರ್‍ನ ನಾಲ್ಕನೇ ಹಂತದಲ್ಲಿ ಕಂಡುಬರುವ ಸಮಸ್ಯೆ. ಮರುಚಲ ಕ್ಯಾನ್ಸರ್ ಮೂಳೆಯಲ್ಲಿ, ಮೆದುಳಿನಲ್ಲಿ, ಪುಪ್ಪುಸದಲ್ಲಿ, ಯಕೃತ್‍ನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಇದನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು
- 40 ರ ನಂತರ ಎಲ್ಲರೂ ಅಲ್ಟ್ರಾಸೋನೋಗ್ರಫಿ ಪರೀಕ್ಷೆ ಮಾಡಿಸಿಕೊಳ್ಳಿ
- ಅತೀವ ರಕ್ತಸ್ರಾವವಾದ ಕೂಡಲೇ ವೈದ್ಯರಲ್ಲಿಗೆ ಬನ್ನಿ, ವಿಳಂಬಮಾಡಬೇಡಿ
- ರಸದೂತ ಮರಪೂರಣ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ಆಗಾಗ ವೈದ್ಯರಲ್ಲಿ ತಪಾಸಣೆಗೆ ಒಳಗಾಗಿ, ನಿಮಗೆ ರಕ್ತಸ್ರಾವವಾದರೆ ತಕ್ಷಣ ಡಾಕ್ಟರ್ ಬಳಿಗೆ ಹೋಗಿ
- ಗರ್ಭನಿರೋಧಕ ಮಾತ್ರೆಗಳನ್ನು ಉಪಯೋಗಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳು ಕಡಿಮೆ ಎಂದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ. ಆದ್ದರಿಂದ ಮಕ್ಕಳ ನಡುವೆ ಅಂತರ ಕಾಪಾಡಿಕೊಳ್ಳಲು ಗರ್ಭನಿರೋಧಕ ಗುಳಿಗೆಗಳನ್ನು ಅವಶ್ಯ ತೆಗೆದುಕೊಳ್ಳಿ ಮತ್ತು ವೈದ್ಯರ ಸಲಹೆಯನ್ನು ಆಗಾಗ ತೆಗೆದುಕೊಳ್ಳುತ್ತಿರಿ. 

ಅಂಡಾಶಯದ ಕ್ಯಾನ್ಸರ್ 

ಇದು ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಅದರೂ ಇದನ್ನು ಕಂಡು ಹಿಡಿಯುವುದು ಕಷ್ಟಸಾಧ್ಯ. ಗರ್ಭಕಂಠದ ಅಥವಾ ಗರ್ಭಕೋಶದ ಕ್ಯಾನ್ಸರ್‍ನಲ್ಲಿ ಇರುವಂತೆ ಇಲ್ಲಿ ರಕ್ತಸ್ರಾವವಾಗಲಿ, ಬಿಳಿಸ್ರಾವವಾಗಲಿ ಇರುವುದಿಲ್ಲ. ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳಿರುವುದಿಲ್ಲ. ಅತಿಯಾಗಿ ಬೆಳೆದು ದೊಡ್ಡ ಗಡ್ಡೆಯಾದಾಗಲಷ್ಟೇ ಹೊಟ್ಟೆ ಉಬ್ಬಿರುವುದನ್ನು ಗಮನಿಸಬಹುದು. ಋತುಸ್ರಾವ ಸರಿಯಾಗಿಯೇ ಇರುತ್ತದೆ. ನಲ್ವತ್ತರ ನಂತರ ಎಲ್ಲರೂ ಸ್ಥೂಲಕಾಯರಾಗುವುದರಿ0ದ  ಆ ಸಮಯದಲ್ಲಿ ಹೊಟ್ಟೆಯ ಸುತ್ತ ಕೊಬ್ಬಿನಾಂಶ ಶೇಖರವಾಗಿರುವುದರಿಂದ ಎಲ್ಲರೂ ನಿರ್ಲಕ್ಷಿಸುತ್ತಾರೆ. ಹಾಗಾಗಿ ವೈದ್ಯರ ಬಳಿ ಬರುವಾಗ ವಿಳಂಬವಾಗಿರುತ್ತದೆ. ಬಂದರೂ ಇವರಲ್ಲಿ ಕರುಳು ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಹೆಚ್ಚಾಗಿರುತ್ತದೆ. ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಭಾವನೆ, ತೂಕದಲ್ಲಿ ಇಳಿಕೆ, ವಾಕರಿಕೆ ಮತ್ತು ವಾಂತಿಯಾಗುವುದು. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು - ಇವೆಲ್ಲ ಸಾಮಾನ್ಯವಾಗಿ ಕೇಳಿ ಬರುವ ತೊಂದರೆಗಳು. ಕಿಬ್ಬೊಟ್ಟೆ ನೋವು, ಅನಿಯಮಿತ ರಕ್ತಸ್ರಾವ, ಮಲಬದ್ಧತೆ, ಇವೂ ಕೂಡ ಕೆಲವರಲ್ಲಿ ಇರಬಹುದುದು. ವೈದ್ಯರು ನಿಮ್ಮ ತೊಂದರೆಗಳ ಪಟ್ಟಿಯನ್ನು ಪಡೆದು ಪರೀಕ್ಷೆ ಮಾಡುತ್ತಾರೆ. ದೊಡ್ಡ ಗಡ್ಡೆಗಳಿದ್ದರೆ ಹೊಟ್ಟೆ ಮುಟ್ಟಿ ನೋಡಿದಾಗಲೇ ಗಡ್ಡೆ ಕೈಗೆ ಸಿಗುತ್ತದೆ.  ಯೋನಿ ಮೂಲಕ ಪರೀಕ್ಷೆ ಮಾಡಿದರೆ ಗರ್ಭಕೋಶದ ಗಾತ್ರ ಹಾಗೂ ಅದರ ಪಕ್ಕದಲ್ಲಿರುವ ಅಂಡಾಶಯ ದೊಡ್ಡದಾಗಿದ್ದರೆ ಅದರ ಗಾತ್ರ ತಿಳಿಯುತ್ತದೆ. ಕೆಲವೊಮ್ಮೆ ಗುದನಾಳದ ಮೂಲಕ ಈ ಗಡ್ಡೆ ಕೈಗೆ ಸಿಗಬಹುದು. 

ಆಲ್ಟ್ರಾಸೋನೋಗ್ರಫಿ ಪರೀಕ್ಷೆಯಿಂದ ಗಡ್ಡೆ ಇದೆಯೇ, ಇಲ್ಲವೇ ಎ0ಬ ನಿಖರವಾದ ಮಾಹಿತಿಯನ್ನು ಪಡೆಯಬಹುದು. ಗಡ್ಡೆ ಇದ್ದರೆ ಅದು  ಕ್ಯಾನ್ಸರ್ ಗಡ್ಡೆಯೇ ಇಲ್ಲವೇ ಸೌಮ್ಯ ಸ್ವಭಾವದ ನೀರು ತುಂಬಿದ ಗುಳ್ಳೆಯೇ ಎಂದು  ತಿಳಿಯಬಹುದು. ಇದರ ಜೊತೆ ಕ್ಷ-ಕಿರಣ,  ಬೇರಿಯಂ ಎನಿಮಾ ಹಾಗೂ ರಕ್ತದಲ್ಲಿ ಸಿ.ಎ-125 ಎ0ಬ ಕ್ಯಾನ್ಸರ್ ಸೂಚಕದ ಪ್ರಮಾಣವನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆ ಮಾಡಬಹುದೇ ಇಲ್ಲವೇ ಎಂದು ನಿರ್ಧರಿಸಬಹುದು. ಹೊಟ್ಟೆಯಲ್ಲಿ ನೀರು ತುಂಬಿದ್ದರೆ ಆಲ್ಟ್ರಾಸೋನೋಗ್ರಫಿಯಲ್ಲಿ ತಿಳಿಯುತ್ತದೆ. ಹಾಗಾದಲ್ಲಿ ಸೂಜಿಯ ಮೂಲಕ ಹೊಟ್ಟೆಯೊಳಗಿಂದ ನೀರನ್ನು ತೆಗೆದು ಸೂಕ್ಷ್ಮದರ್ಶಕ ಪರೀಕ್ಷೆಗೆ ಒಡ್ಡಿದರೆ ಕ್ಯಾನ್ಸರ್ ಕಣಗಳಿವೆಯೇ ಎಂದು ತಿಳಿಯಬಹುದು. ಇವೆಲ್ಲಾ ಪರೀಕ್ಷೆ ಮಾಡುವುದರಿಂದ ರೋಗದ ಹಂತವನ್ನೂ ಹಾಗೂ ಅದರ ಚಿಕಿತ್ಸೆಯನ್ನು ನಿರ್ಧರಿಸಲು ಸಹಾಯಕವಾಗುವುದು.

ಅಂಡಾಶಯದ ಕ್ಯಾನ್ಸರ್‍ಅನ್ನು ಕೂಡ ನಾಲ್ಕು ಹ0ತಗಳಲ್ಲಿ ಗುರುತಿಸುತ್ತೇವೆ. ಇದರಲ್ಲಿ ವಿವಿಧ ರೀತಿಯ ಕ್ಯಾನ್ಸರ್‍ಗಳಿವೆ. ಅದನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ನೋಡಿ ನಿರ್ಧರಿಸಲಾಗುವುದು.

ಇತ್ತೀಚೆಗೆ ಎಂ.ಆರ್.ಐ ಹಾಗೂ ಸಿ.ಟಿ. ಸ್ಕ್ಯಾನ್ ಮೂಲಕ ರೋಗ ಎಲ್ಲಿಯವರೆಗೂ ಹಬ್ಬಿದೆ, ಶಸ್ತ್ರ ಚಿಕಿತ್ಸೆ ಮಾಡಲು ಆಗುತ್ತದೆ ಇಲ್ಲವೇ ಎಂದು ನಿರ್ಧರಿಸಬಹುದು. ಅಂಡಾಶಯದ ಕ್ಯಾನ್ಸರ್‍ಗೆ ಶಸ್ತ್ರ ಚಿಕಿತ್ಸೆ ಮಾಡುವುದು ಯಾವಾಗಲೂ ಉತ್ತಮ, ಕೆಲವೊಮ್ಮೆ ಕ್ಯಾನ್ಸರ್ ಎಲ್ಲಾ ಕಡೆಗೂ ಹರಡಿ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಯಾವ ರೀತಿಯ ಕ್ಯಾನ್ಸರ್ ಎಂದು ತಿಳಿದುಕೊಳ್ಳಲು ಸೂಕ್ಷ್ಮದರ್ಶಕ ಪರೀಕ್ಷೆಗೋಸ್ಕರ ಸ್ವಲ್ಪ ಭಾಗವನ್ನು ಮಾತ್ರ  ತೆಗೆದು ಮತ್ತೇನನ್ನು ಮಾಡದೆ ತೆರೆದ ಭಾಗವನ್ನು ಮುಚ್ಚಬೇಕಾಗುತ್ತದೆ. 

ರಸಾಯನ ಚಿಕಿತ್ಸೆ ಈ ಕ್ಯಾನ್ಸರ್‍ಗೆ ಒಂದು ಉತ್ತಮ ಪರ್ಯಾಯ ಚಿಕಿತ್ಸೆ. ಶಸ್ತ್ರ ಚಿಕಿತ್ಸೆಗೆ ಮುಂಚೆ ಕೊಟ್ಟರೆ ಗಡ್ಡೆ ಕರಗಿ ಶಸ್ತ್ರ ಚಿಕಿತ್ಸೆ ಮಾಡಲು ಅನುಕೂಲವಾಗುತ್ತದೆ. ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಕೊಟ್ಟರೆ ಅಳಿದುಳಿದ ಕ್ಯಾನ್ಸರ್ ಕಣಗಳು ನಾಶವಾಗುತ್ತವೆ.

ಶಸ್ತ್ರ ಚಿಕಿತ್ಸೆ ಮಾಡುವಾಗ ಗರ್ಭಕೋಶವನ್ನು, ಗರ್ಭನಾಳಗಳನ್ನು, ಗಡ್ಡೆಯಿಂದ ಕೂಡಿದ ಅಂಡಾಶಯ ಹಾಗೂ ಉಳಿದ ಎದುರುಗಡೆ ಅಂಡಾಶಯವನ್ನು ತೆಗೆದು ಹಾಕಲಾಗುತ್ತದೆ. ಅದರೊಂದಿಗೆ ಹಾಲ್ರಸ ಗ್ರಂಥಿಗಳು ದೊಡ್ಡದಾಗಿದ್ದರೆ ಅದನ್ನು ಕೂಡ ತೆಗೆಯಲಾಗುವುದು. ವಿಕಿರಣ ಚಿಕಿತ್ಸೆಯು ಕೆಲವೊಂದು ಕ್ಯಾನ್ಸರ್‍ಗೆ ಒಳ್ಳೆಯದಾಗುತ್ತದೆ. ಆದ್ದರಿಂದ ನಾವು ಕ್ಯಾನ್ಸರನ್ನು ಮೊದಲಿಗೆ ಗುರುತಿಸುವುದು ಅವಶ್ಯಕ ಮತ್ತು ಯಾವ ಹಂತದಲ್ಲಿದೆ ಎಂದು ತಿಳಿಯುವುದು ಮುಖ್ಯ. ವ್ಯಕ್ತಿಯ ವಯಸ್ಸು ಅವರ ಸಂತಾನೋತ್ಪತ್ತಿಯ ಮಟ್ಟ ಹಾಗೂ ಕ್ಯಾನ್ಸರ್‍ನ ಹಂತವನ್ನು ಅವಲಂಬಿಸಿ ಯಾವ ರೀತಿಯ ಚಿಕಿತ್ಸೆ ಬೇಕಾಗಬಹುದೆಂದು ನಿರ್ಧರಿಸಲಾಗುವುದು.

ಅಂಡಾಶಯದ ಕ್ಯಾನ್ಸರ್‍ಗೆ ಸಂಭಾವ್ಯ ಕಾರಣಗಳು
- ತಾಯಿ, ಅಕ್ಕ- ತಂಗಿಯರಲ್ಲಿ, ಸಮೀಪ ಸಂಬಂಧಿಗಳಲ್ಲಿ ಅಂಡಾಶಯದ ಕ್ಯಾನ್ಸರ್ ಇದ್ದರೆ ನಿಮಗೂ ಬರಬಹುದು
- ಗರ್ಭಧರಿಸದ ಹೆಂಗಸರಲ್ಲಿ ಹೆಚ್ಚಾಗಿ ಕಂಡುಬರುತ್ತದೆ
- ಸ್ತನ ಕ್ಯಾನ್ಸರ್ ಇದ್ದವರಲ್ಲಿ ಹೆಚ್ಚಾಗಿ ಕಾಣಬರುತ್ತದೆ  

ಆದರೆ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೆ ಸಂಭಾವ್ಯ ಕಡಿಮೆ

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು
- ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಿ.
- 40 ರ ನಂತರ ಆಗಾಗ ಆಲ್ಟ್ರಾಸೋನೋಗ್ರಫಿ ಮಾಡಿಸಿಕೊಳ್ಳಬಹುದು.
- ಮೇಲೆ ತಿಳಿಸಿದಂತೆ ಮನೆಯಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದಲ್ಲಿ ನೀವು ಆಗಾಗ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ.

ಡಿಂಭನಾಳದ ಕ್ಯಾನ್ಸರ್ (Tubal Cancer) 
ಇದು ಅತ್ಯಂತ ಅಪರೂಪದ ಕ್ಯಾನ್ಸರ್, ಇದರ ರೋಗಲಕ್ಷಣಗಳು
- ಗರ್ಭಕೋಶದ ಕಿಳ್ಗುಳಿಯ ನೋವು 
- ಯೋನಿಯ ಮೂಲಕ ತೆಳುವಾದ ನೀರಿನಂತಹ ದ್ರವಸ್ರಾವ

ಆಲ್ಟ್ರಾಸೋನೋಗ್ರಫಿ ಮೂಲಕ ಕೆಲವೊಮ್ಮೆ ಇದನ್ನು ಪತ್ತೆ ಹಚ್ಚಬಹುದು.
ಶಸ್ತ್ರ ಚಿಕಿತ್ಸೆ ಮತ್ತು ರಸಾಯನ ಚಿಕಿತ್ಸೆಯಿಂದ ಇದನ್ನು ನಿವಾರಿಸಿಕೊಳ್ಳಬಹುದು

ಯೋನಿಯ ಕ್ಯಾನ್ಸರ್ ( Vaginal Cancer) 
 ಇದು ಕೂಡ  ಅತಿ ವಿರಳವಾದ ಕ್ಯಾನ್ಸರ್
- ಯೋನಿಯಲ್ಲಿ ಹುಣ್ಣು ಅಥವಾ ಹೂಕೋಸಿನ ರೂಪದ ಗಡ್ಡೆ ಕಾಣಿಸಿಕೊಳ್ಳುವುದು.
- ಬಿಳಿ- ಕೆಂಪು ಮಿಶ್ರಿತ ಕೆಟ್ಟ ವಾಸನೆಯುಕ್ತ ಯೋನಿ ಸ್ರಾವ.
- ಸಂಭೋಗದ ಸಮಯದಲ್ಲಿ ಕೆಂಪುಸ್ರಾವ ಕಾಣಿಸಿಕೊಳ್ಳುವುದು.
- ಋತುಬಂಧದ ನಂತರ ಕಾಣಿಸಿಕೊಳ್ಳುವ ಕ್ಯಾನ್ಸರ್ .
- ಮೊದಲಿಗೆ ವೈರಾಣುವಿನಿಂದ ಬರುವಂತಹ ಸೋಂಕು ನಂತರ ಕ್ಯಾನ್ಸರ್‍ಗೆ ತಿರುಗುವುದು.
- ಬಯಾಪ್ಸಿ ಮಾಡಿ, ಚೂರನ್ನು ತೆಗೆದು ಕ್ಯಾನ್ಸರ್‍ ಅನ್ನು ಖಚಿತಪಡಿಸಿಕೊಳ್ಳಬಹುದು.
ಶಸ್ತ್ರ ಚಿಕಿತ್ಸೆ ಮಾಡಿ ಯೋನಿ, ಗರ್ಭಕೋಶ, ಅಂಡಾಶಯ ಹಾಗೂ ಹಾಲ್ರಸ ಗ್ರಂಥಿಗಳನ್ನು ತೆಗೆದು ಹಾಕಬೇಕು. ಶಸ್ತ್ರ ಚಿಕಿತ್ಸೆ ತುಂಬಾ ಕ್ಲಿಷ್ಟಕರವಾದುದು. ಶಸ್ತ್ರ ಚಿಕಿತ್ಸೆ ಅಸಾಧ್ಯವಾದಾಗ ವಿಕಿರಣ ಚಿಕಿತ್ಸೆ ಕೊಡಬಹುದು. ವ್ಯಕ್ತಿಯ ವಯಸ್ಸು, ಕ್ಯಾನ್ಸರ್‍ನ ಹಂತ ಇದನ್ನು ಅವಲಂಬಿಸಿ ಚಿಕಿತ್ಸೆ ಮಾಡಬೇಕಾಗುತ್ತದೆ. 
(ಮುಂದುವರೆಯುತ್ತದೆ)
- ಡಾ ಪೂರ್ಣಿಮಾ. ಜೆ 

Saturday, 19 August 2017

ಆರೋಗ್ಯ - ಹಣ್ಣೆಲೆಗಳು - 6

ಅಧ್ಯಾಯ - 6
ಲೈಂಗಿಕ ಸಮಸ್ಯೆಗಳು

ಯೋನಿಯಲ್ಲಿ ಬಿಳಿ ಸ್ರಾವವಿಲ್ಲದೆ ಯೋನಿಯು ಶುಷ್ಕವಾಗಿ ಅಥವಾ ಒಣಗಿದಂತಾಗಿ ಸಂಭೋಗ ಕ್ರಿಯೆಯು ಕಷ್ಟವಾಗುತ್ತದೆ  ಹಾಗೂ ನೋವಿನಿಂದ ಕೂಡಿರುತ್ತದೆ. ಯೋನಿಯ ಒಳ ಪದರ ನಮೆತಗೊಂಡು ಯೋನಿದ್ವಾರವು ಸಂಕುಚಿತವಾಗಿರುತ್ತದೆ.  ಇದರಿಂದ ಸಂಭೋಗ ಕ್ರಿಯೆಯು ಕಷ್ಟವಾಗುತ್ತದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಕೊರತೆಯಿಂದ ಮೇಲೆ ಹೇಳಿದ ಸಮಸ್ಯೆಗಳು ಉದ್ಬವಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಲ್ಯೂಬ್ರಿಕೆಂಟ್ಸ್ (lubricants) ಮುಲಾಮನ್ನು ಯೋನಿಯಲ್ಲಿ ಹರಡಿ ಸ್ವಲ್ಪ ಪಸೆಯಿರುವಂತೆ ನೋಡಿಕೊಂಡು ಸಂಭೋಗ ಕ್ರಿಯೆಯನ್ನೂ ಸುಲಭಗೊಳಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆ ಇಲ್ಲವೆ ಯಾವುದೇ ಸುವಾಸನೆರಹಿತ ಸಸ್ಯಜನ್ಯ ಎಣ್ಣೆಯನ್ನು ಉಪಯೋಗಿಸಬಹುದು. ಲೈಂಗಿಕ ಕ್ರಿಯೆಯಲ್ಲಿ ಉತ್ಸುಕತೆ ಇರುವುದಿಲ್ಲ. ಸಂಭೋಗ ಕ್ರಿಯೆ ಕಷ್ಟವಾದಾಗ ಮಾನಸಿಕವಾಗಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಲೈಂಗಿಕತೆಯು ವಿವಿಧ ಅಯಾಮಗಳ ಮೇಲೆ ಆವಲಂಬಿತವಾಗಿರುತ್ತದೆ -
ಬೌದ್ಧಿಕ, ಮಾನಸಿಕ, ಸಾಮಾಜಿಕ ಹಾಗೂ ವ್ಯಕ್ತಿಗಳ ನಡುವಣ ಸಂಬಂಧ ಇವೆಲ್ಲವೂ ಋತುಬಂಧದ ಸಮಯದಲ್ಲಿ ಏರುಪೇರಾಗಿರುವುದು.
• ಮಾಂಸಖಂಡದ ಬಲಹೀನತೆ
• ಲೈಂಗಿಕ ಕ್ರಿಯೆಯಲ್ಲಿ ಸ್ತನಗಳ ಗಾತ್ರ ಹಿಗ್ಗದಿರುವಿಕೆ
• ಗರ್ಭಾಂಕುರ (clitoris) ಉದ್ರೇಕಗೊಳ್ಳದಿರುವುದು
• ಯೋನಿಯು ಒಣಗಿರುವುದು
• ಯೋನಿಯು ಹಿಗ್ಗದಿರುವುದು
• ಜೀವರಸಗಳು ಇಲ್ಲದಿರುವುದರಿಂದ 
• ರಕ್ತ ಸಂಚಾರ ಸರಿಯಾಗಿಲ್ಲದಿರುವುದು
• ಸ್ಪರ್ಶ ಪ್ರಚೋದನೆ ಕೂಡ ಕಡಿಮೆಯಾಗಿರುತ್ತದೆ.
• ದೇಹದ ಆಕಾರದಲ್ಲಿ, ರೂಪದಲ್ಲಿ ಬದಲಾವಣೆಗಳು ಆಗಿರುವುದರಿಂದ ಕೂಡ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿರುವುದು.
• ಯೋನಿ ನಮೆತಗೊಂಡು ಸಂಭೋಗ ಕ್ರಿಯೆಯಿಂದ ಘಾಸಿಗೊಂಡು ನಂಜಾಗಬಹುದು. ಇದರಿಂದ ಸಂಭೋಗದ ನಂತರ ವಿಪರೀತ ಉರಿ ಕಾಣಿಸಿಕೊಳ್ಳಬಹುದು.

ಇದಕ್ಕೆ ಪರಿಹಾರವೇನು?

ಯೋನಿಯನ್ನು ಒಣಗದಂತೆ ನೋಡಿಕೊಳ್ಳಲು ಮಾರುಕಟ್ಟೆಯಲ್ಲಿ ದೊರಕುವ ಲ್ಯುಬ್ರಿಕ್ ಕ್ರೀಮ್‍ಗಳನ್ನು ಉಪಯೋಗಿಸಬಹುದು. ಈಸ್ಟ್ರೋಜನ್ ಮುಲಾಮನ್ನು ಕೂಡ ವೈದ್ಯರ ಸಲಹೆ ಮೇರೆಗೆ ಉಪಯೋಗಿಸುವುದರಿಂದ ಯೋನಿ ನಮೆತವನ್ನು ಕಡಿಮೆ ಮಾಡಬಹುದು. ಇದರಿಂದ ಕಷ್ಟ ಸಂಭೋಗವನ್ನು ಹಾಗೂ ಉರಿಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿಕೊಳ್ಳಬಹುದು. ಇದ್ಯಾವುದು ಇಲ್ಲದಿದ್ದಾಗ ಸಸ್ಯಜನ್ಯ ತೈಲವಾದ ಕೊಬ್ಬರಿಎಣ್ಣೆಯನ್ನು ಕೂಡ ಬಳಸಬಹುದು. 

                                             ಅಧ್ಯಾಯ - 7
ಸ್ಥೂಲಕಾಯ, ಬೊಜ್ಜುತನ

ಭಾರತದಲ್ಲಿ 37% ನಷ್ಟು ಹೆ0ಗಸರು ಸ್ಥೂಲಕಾಯದಿ0ದ ಬಳಲುತ್ತಿದ್ದಾರೆ. ಮುಟ್ಟು ನಿಲ್ಲುವ ಆಸುಪಾಸಿನಲ್ಲಿ ಜೀವರಸಗಳ ಕೊರತೆಯಿಂದಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಮಧ್ಯ ಭಾಗದಲ್ಲಿ, ನಿತಂಬಗಳಲ್ಲಿ ಸ್ತನಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿ, ದೇಹದ ಆಕಾರದಲ್ಲಿ ಬದಲಾವಣೆ ಆಗುವುದು. ಕೆಲಸ ಮಾಡಲು ಕಷ್ಟವಾಗಿ ಸುಮ್ಮನೆ ಕೂತುಕೊಳ್ಳುವುದು. ಮಕ್ಕಳು ಮತ್ತು ಸೊಸೆಯಂದಿರು ಕೆಲಸ ಮಾಡುತ್ತಿರುವುದರಿಂದ ಕೆಲಸ ಕಡಿಮೆಯಾಗುವುದು. ವಂಶಪಾರಂಪರ್ಯವಾಗಿಯೂ ಕೂಡ ಬೊಜ್ಜುಬರಬಹುದು. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸಗಳ ಕೊರತೆ ಹಾಗೂ ಡಿಹೈಡ್ರೋಎಪಿಆಂಡ್ರೋಸ್ಟಿರಾನ್ ಜೀವರಸದ ಕೊರತೆಯಿಂದ ದೇಹದಲ್ಲಿ ಕೊಬ್ಬು ಶೇಖರವಾಗಿ ಸ್ಥೂಲಕಾಯ ಉಂಟಾಗುತ್ತದೆ. ಇದರೊಟ್ಟಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಕಾಯಿಲೆಗಳು ಸಂಬಂಧ ಹೊಂದಿವೆ. 

 ಕೊಬ್ಬು ಕರಗಿಸಲು ಏನು ಮಾಡಬೇಕು?

• ವ್ಯಾಯಮ: ದಿನಕ್ಕೆ ಕನಿಷ್ಟ ಪಕ್ಷ 20-30 ನಿಮಿಷದಷ್ಟು ವೇಗದ ನಡಿಗೆಯನ್ನು ಮಾಡಬೇಕು.
• ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು
• ವಾರಕ್ಕೆ ಅರ್ಧ ಕೆ.ಜಿ ಹಾಗೂ ತಿಂಗಳಿಗೆ ಎರಡು ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕು
• ಯೋಗಾಸನ ಮತ್ತು ಪ್ರಾಣಾಯಾಮವನ್ನು  ದಿನವೂ ಮಾಡಬೇಕು
• ಸಮತೋಲನ ಆಹಾರವನ್ನು ಸೇವಿಸಬೇಕು
• ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು
• ಮಾಂಸವನ್ನು ಬಳಸುವಾಗ ಎಚ್ಚರವಿರಲಿ
• ಎಣ್ಣೆ ಪದಾರ್ಥ, ಸಿಹಿ ತಿಂಡಿ, ಹಾಲಿನಿಂದ ಮಾಡಿದ ಪದಾರ್ಥಗಳನ್ನು ತ್ಯಜಿಸಬೇಕು

- ಡಾ ಪೂರ್ಣಿಮಾ. ಜೆ     


Tuesday, 18 July 2017

ಆರೋಗ್ಯ - ಹಣ್ಣೆಲೆಗಳು - 5

ಅಧ್ಯಾಯ - 5
ಋತುಬಂಧದ ಸಮಯದಲ್ಲಾಗುವ ಮಾನಸಿಕ ಬದಲಾವಣೆಗಳು

ಋತುಬಂಧದ ಸಮಯದಲ್ಲಿ ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ರಂಗಗಳು ಕೂಡ ಮುಖ್ಯವಾದ ಬದಲಾವಣೆಗಳಿಂದ ಕೂಡಿರುತ್ತವೆ. ದೈಹಿಕ ತೊಂದರೆಗಳ ಜೊತೆಗೆ ಈ ಬದಲಾವಣೆಗಳು ಕೂಡ ನಿಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ.

ಖಿನ್ನತೆ (Depression)

ಶೇಕಡ 78 ಮಹಿಳೆಯರಲ್ಲಿ ಕಂಡುಬರುವ ತೊಂದರೆಯೆಂದರೆ ಖಿನ್ನತೆ. ಋತುಬಂಧದ ಆಸುಪಾಸಿನಲ್ಲಿ ಆಗುವ ತೊಂದರೆಗಳನ್ನು ‘ಸ್ಯಾಂಡ್‍ವಿಚ್ ಜನರೇಶನ್ ಪೆನಾಮೆನನ್’(Sandwitch Generation phenomenon) ಎ0ದು ಕರೆಯುತ್ತೇವೆ. ಈ ಸಮಯದಲ್ಲಿ ಮಕ್ಕಳು ಪ್ರಬುದ್ಧರಾಗಿ ಮದುವೆಗೆ ಸಿದ್ಧರಾಗಿರುತ್ತಾರೆ. ಹೆಣ್ಣು ಮಕ್ಕಳಿದ್ದರಂತೂ ಅವರಿಗೆ ಒಳ್ಳೆ ಮನೆ ಸಿಗಬೇಕು, ಒಳ್ಳೆ ಗಂಡು ಸಿಗಬೇಕು ಮತ್ತು ವರದಕ್ಷಿಣೆ ಕೊಡಬೇಕಾಗಬಹುದು ಎಂಬ ಆತಂಕ. ಗಂಡು ಮಕ್ಕಳಾದರೆ ಒಳ್ಳೆ ಕೆಲಸ ಸಿಗಬೇಕು, ಕೈ ತುಂಬಾ ಸಂಬಳ ಬರಬೇಕು ಮದುವೆಯಾದ್ರೆ, ಒಳ್ಳೆ ಸೊಸೆ ಬರಬೇಕು, ಬರುವ ಸೊಸೆ ಹೇಗಿರುವಳೋ  ಎನೋ ಎಂಬೆಲ್ಲಾ ಚಿಂತೆ. ಮಗನನ್ನು ತನ್ನಿಂದ ಸೊಸೆ ಕಿತ್ತುಕೊಂಡರೆ ಎಂಬ ಚಿಂತೆ. ವಯಸ್ಸಾದ ತಂದೆ ತಾಯಿಯಂದಿರಿದ್ದರೆ ಅವರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ. ಅತ್ತೆ ಮಾವಂದಿರು ಮನೆಯಲ್ಲಿದ್ದರೆ ಅವರ ಸೇವೆ ಮಾಡಬೇಕಾಗುತ್ತದೆ ಇವರು ವಯಸ್ಸಾದವರಾದ್ದರಿಂದ ಅವರಿಗೆ ಕಾಯಿಲೆಗಳು ಒಂದಲ್ಲ, ಒಂದು ಇದ್ದೇ ಇರುತ್ತದೆ. ಆಗ ಅವರನ್ನು ನೋಡಿಕೊಳ್ಳುವ ಒತ್ತಡ ಹೆಚ್ಚಾಗುತ್ತದೆ.
    
ಇನ್ನೂ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ, ಹೊರಗಡೆ ಕೆಲಸದಲ್ಲೂ ಹಾಗೂ ಮನೆಯಲ್ಲೂ ಎರಡೂ ಕಡೆ  ಹೆಚ್ಚಿನ ಕೆಲಸ ಹಾಗೂ ತೀವ್ರ ಮಾನಸಿಕ  ಒತ್ತಡ ಇದ್ದೇ ಇರುತ್ತದೆ.

ಆರ್ಥಿಕ ಅಭದ್ರತೆ
ಮದುವೆಗೆ ಬಂದ ಹೆಣ್ಣು ಮಕ್ಕಳ ಮದುವೆ ಮಾಡುವುದು, ವರದಕ್ಷಿಣೆ, ಮದುವೆ ಖರ್ಚು. ಮಗ ನಿರುದ್ಯೋಗಿಯಾಗಿದ್ದರೆ ಅವನನ್ನೂ ಸಾಕಬೇಕಾದ ಅನಿವಾರ್ಯತೆ.
ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಮನೋವೈದ್ಯರ ಬಳಿಗೆ ಹೋಗಿ ಸಲಹೆ ಸೂಚನೆ ಪಡೆಯಬೇಕಾಗುತ್ತದೆ.

ಖಾಲಿಯಾದ ಗೂಡು (Empty Nest Syndrome)
• ಮಕ್ಕಳು ದೊಡ್ಡವರಾಗಿ, ಮದುವೆ ಇಲ್ಲವೇ, ಕೆಲಸದ ನಿಮಿತ್ತ ಮನೆಯಿಂದ ಹೊರಗುಳಿಯುವುದು
• ತಂದೆತಾಯಿಯರು, ಅತ್ತೆ ಮಾವಂದಿರು ಮರಣ ಹೊಂದಿರುವುದು
• ಗಂಡನನ್ನು ಕಳೆದುಕೊಳ್ಳುವುದು
• ಗಂಡ ಇದ್ದರೂ ಪ್ರೀತಿಯ ಕೊರತೆ
• ಸಾಮಾಜಿಕವಾಗಿ ಒಂಟಿತನದ ಅನುಭವ

ಇತರ ಮಾನಸಿಕ ತೊಂದರೆಗಳು
• ಬಹುಬೇಗ ಕಿರಿಕಿರಿಯಾಗುವುದು
• ಎಲ್ಲದ್ದಕ್ಕೂ ಸಿಡುಕುವುದು
• ಮನೋಸ್ಥಿತಿಯ ತೊಯ್ದಾಟ
• ತನ್ನನ್ನೂ ಯಾರು ಪ್ರೀತಿಸುವುದಿಲ್ಲ ಎಂಬ ಆತಂಕ
• ಸಾವಿನ ಬಗ್ಗೆ, ಮುಪ್ಪಿನ ಬಗ್ಗೆ ಭಯ
• ತನ್ನ ಸೌಂದರ್ಯ ಕುಂದಿದೆ ಎಂಬ ಚಿಂತೆ
• ಲೈಂಗಿಕ ನಿರಾಸಕ್ತಿ
• ತಲೆನೋವು 
• ಎದೆಬಡಿತ ಹೆಚ್ಚಾಗುವುದು.

ಶೇಕಡ 92 ಮಹಿಳೆಯರು ಸಣ್ಣ ಪುಟ್ಟ ವಿಷಯಕ್ಕೆ ಸಹನೆ ಕಳೆದುಕೊಂಡು ಎಲ್ಲರ ಮೇಲೆ ಕೂಗಾಡುವುದನ್ನು ಕಾಣಬಹುದು. ಶೇಕಡ 75 ಮಂದಿಯಲ್ಲಿ ತಲೆನೋವು ಬರಬಹುದು, ದೃಷ್ಟಿದೋಷದಿಂದಲ್ಲ ಎನ್ನುವುದಕ್ಕೆ ನೇತ್ರ ವೈದ್ಯರ ಬಳಿ ಪರೀಕ್ಷಿಸಿ ಕನ್ನಡಕ ಬೇಕಾದರೆ ಮಾಡಿಸಿಕೊಳ್ಳಿ.

ಶೇಕಡ 64 ಮಂದಿಯಲ್ಲಿ ಮರುಗುಳಿತನ ಕಾಣಿಸಿಕೊಳ್ಳುತ್ತದೆ. ಹೆಸರುಗಳನ್ನು ಮರೆಯುವುದು, ಮನೆಯಲ್ಲಿಟ್ಟ ವಸ್ತುಗಳನ್ನು ಎಲ್ಲಿಟ್ಟಿದ್ದೇವೆಂದು ಮರೆಯುವುದು, ಅಂಗಡಿಗೆ ಹೋದಾಗ ಬೇಕಾಗುವ ವಸ್ತು ನೆನಪಾಗದಿರುವುದು, ಈ ಸಮಯದಲ್ಲಿ ಸಾಮಾನ್ಯ ಸಮಸ್ಯೆ.

ಶೇಕಡ 50 ಮಂದಿಯಲ್ಲಿ ನಿದ್ದೆ ಇಲ್ಲದಿರುವುದು ಕೂಡ ಒಂದು ಸಾಮಾನ್ಯ ಸಮಸ್ಯೆ ರಾತ್ರಿ ಸೆಖೆಯಾಗಿ ಏಳುವುದು, ಮೂತ್ರ ವಿಸರ್ಜನೆಗೆಂದು ಎದ್ದು ನಂತರ ನಿದ್ರೆ ಬಾರದೇ ಹೋಗುವುದು. ಮರುದಿನ ಸುಸ್ತಾಗುವುದು ಕೆಲಸ ಮಾಡಲು ಆಗದೇ ಇರಬಹುದು.

ಕಾರಣವಿಲ್ಲದೆ ಆಗಾಗ ಆಳುವುದು ಕೂಡ ಒಂದು ಸಾಮಾನ್ಯ ಸಮಸ್ಯೆ. ಕಣ್ಣಿನ ತುದಿಯಲ್ಲಿ ನೀರು ಯಾವಾಗಲು ಇರುವುದು. ಸಣ್ಣ ಪುಟ್ಟ ವಿಷಯಕ್ಕೆ ಅಳುವುದು. ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು ಕೂಡ ಈ ಸಮಯದಲ್ಲಿ ಕಾಡುವ ಒಂದು ಸಮಸ್ಯೆ.

ಉದ್ವಿಗ್ನತೆ (anxiety):

 ಉದ್ವಿಗ್ನತೆ ಋತುಬಂಧದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಮಾನಸಿಕ ಸ್ಠಿತಿ. ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡಿಕೊಳ್ಳುವುದು. ರಸದೂತಗಳ ಪ್ರಮಾಣದ ಏರುಪೇರಿನಿಂದಾಗಿ ಎಲ್ಲ ವಿಷಯಗಳಲ್ಲೂ ಉದ್ವಿಗ್ನತೆಗೊಳಗಾಗುವುದು ಸಾಮಾನ್ಯವಾಗಿ ಕ0ಡುಬರುತ್ತದೆ.

  - ಡಾ ಪೂರ್ಣಿಮಾ. ಜೆ      

Sunday, 11 June 2017

ಆರೋಗ್ಯ - ಹಣ್ಣೆಲೆಗಳು - 4

( ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ )      

 ಆಧ್ಯಾಯ - 4
ಮೂತ್ರದ ಅಸಂಯಮ (Urinary Incontinence)

ಕೆಮ್ಮಿದಾಗ, ಸೀನುವಾಗ, ಜೋರಾಗಿ ನಗುವಾಗ ಮೂತ್ರ ಒಸರುವುದು, ಶೌಚಾಲಯಕ್ಕೆ ಹೋಗುವವರೆಗೆ ಮೂತ್ರ ನಿಯಂತ್ರಿಸಿಕೊಳ್ಳಲಾಗದಿರುವುದು, ಶೌಚಾಲಯಕ್ಕೆ ಹೋಗುವ ಮೊದಲೇ ಮೂತ್ರ ಬಂದು ನಿಮ್ಮ ಬಟ್ಟೆ ಒದ್ದೆಯಾಗುವುದು, ಇವೆಲ್ಲವನ್ನೂ ‘ಮೂತ್ರ ಅಸಂಯಮ’ ಎಂದು ಕರೆಯುತ್ತೇವೆ. ಋತುಬಂಧದ ಆಸುಪಾಸಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಈಸ್ಟ್ರೋಜನ್ ಜೀವರಸದ ಉತ್ಪಾದನೆಯಲ್ಲಿ ಕೊರತೆಯುಂಟಾಗಿ, ಮೂತ್ರ ಚೀಲದ, ಮೂತ್ರನಾಳದ ಪದರಗಳು ನಮೆತಕ್ಕೆ (atrophy) ಒಳಗಾಗಿ, ಮೂತ್ರವನ್ನೂ ಹಿಡಿದಿಡುವ ಶಕ್ತಿಯನ್ನೂ ಕಳೆದುಕೊಳ್ಳುತ್ತದೆ.


ರಾತ್ರಿ ನಿದ್ರೆಯಲ್ಲಿ ಕೂಡ ನಿಮಗೆ ಅರಿವಿಲ್ಲದಂತೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯಾಗಬಹುದು. ನಿಮಗೆ ಗಾಬರಿಯಾದಾಗ, ಗಡಿಬಿಡಿಯಲ್ಲಿರುವಾಗ ಮೂತ್ರ ಮಾಡಲು ನಿಮಗೆ ತುರ್ತಾಗಿ ಅನಿಸಬಹುದು. ಸಂಭೋಗದ ಸಮಯದಲ್ಲಿ ಇಲ್ಲವೆ ಆನಂತರದಲ್ಲಿ ಮೂತ್ರಕ್ಕೆ ಹೋಗಬೇಕೆನಿಸುವುದು. ಮೂತ್ರದ ಸೋಂಕು ಆಗಾಗ ಕಾಣಿಸಿಕೊಂಡು ಮೂತ್ರದ ಅಸಂಯಮಕ್ಕೆ ಕಾರಣವಾಗಬಹುದು. ದಿನವೂ ಒಳಬಟ್ಟೆಯನ್ನು (pad) ಧರಿಸಿರಬೇಕಾಗಬಹುದು. ನಿಮಗೆ ಮನೆಯಿಂದ ಹೊರಗಡೆ ಎಲ್ಲಿಯಾದರೂ ಹೋದಲ್ಲಿ ಈ ಸಮಸ್ಯೆ ಕಾಣಬಹುದು, ಆದ್ದರಿಂದ ನೀವು ಮನೆಯೊಳಗಡೆಯೇ ಉಳಿಯಬಹುದು.
pad


ಈ ಸಮಸ್ಯೆ ಇರುವವರಲ್ಲಿ ನೂರರಲ್ಲಿ ಒಬ್ಬರು ಮಾತ್ರ ವೈದ್ಯರ ಬಳಿ ಬರುತ್ತಾರೆ. ಸಂಕೋಚದಿಂದ  ಇದರ ಬಗ್ಗೆ ಯಾರು ಮಾತಾನಾಡದೇ ಇರುವ ಸಾಧ್ಯತೆಗಳಿವೆ. ಇದರ ಬಗ್ಗೆ ಸರಿಯಾದ ಮಾಹಿತಿ ಕೂಡ ಸಿಗುವುದಿಲ್ಲ. ಇದನ್ನು ವಿವಿಧ ರೀತಿಯ ಚಿಕಿತ್ಸೆಯಿಂದ ನಿವಾರಣೆಗೊಳಿಸಬಹುದು ಎಂಬ ಅರಿವಿರುವುದಿಲ್ಲ. ಇಂತಹ ಸಮಸ್ಯೆಗಳಿಂದ ಬಳಲುವವರು ವೈದ್ಯರ ಬಳಿ ಹೋಗಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಿರಿ. ನಿಮಗೆ ಬರೀ ಕೀಗಲ್‍ನ ವ್ಯಾಯಮ ಸಾಕಾಗಬಹುದು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಔಷಧಗಳನ್ನು ನಿಮಗೆ ಬರೆದುಕೊಡಬಹುದು.


ಇಲ್ಲವೇ ನಿಮಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು. ಶಸ್ತ್ರ ಚಿಕಿತ್ಸೆಯಲ್ಲಿ ಕೂಡ ಈಗ ನಾನಾರೀತಿಯ ಬದಲಾವಣೆಗಳಾಗಿ  ಉತ್ತಮ ಫಲಿತಾಂಶ ದೊರೆಯುತ್ತದೆ. ವಿವಿಧ ರೀತಿಯ, ‘ಮೆಷ್’ (mesh) ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಅದನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆ ಮಾಡಿದರೆ ಉತ್ತಮ ಫಲಿತಾಂಶ ಸಿಕ್ಕಿ ರೋಗಿಗೆ ಸಂತೋಷವಾಗುತ್ತದೆ. 
ಮೂರು ರೀತಿಯ ಮೂತ್ರದ ಅಸಂಯಮವನ್ನು ಗುರುತಿಸುತ್ತೇವೆ. ಅದನ್ನು ಪತ್ತೆಹಚ್ಚಲು ಕೆಲವೊಂದು ಪರೀಕ್ಷೆಗಳನ್ನು ಮಾಡುತ್ತೇವೆ.

ಆಲ್ಟ್ರಾಸೋನೋಗ್ರಫಿ ಮಾಡಿ ಮೂತ್ರಕೋಶದಲ್ಲಿ, ಮೂತ್ರಪಿಂಡದಲ್ಲಿ ಅಥವಾ ಗರ್ಭಕೋಶದಲ್ಲಿ ಏನಾದರೂ ತೊಂದರೆ ಇದೆಯೇ ಎಂದು ನೋಡಲಾಗುವುದು.


ಸಿಸ್ಟೋಸ್ಕೋಪಿ ಎಂಬ ಪರೀಕ್ಷೆಯಲ್ಲಿ ಸಣ್ಣಕೊಳವೆಯನ್ನು ಉಪಯೋಗಿಸಿ ಮೂತ್ರನಾಳದ ಮೂಲಕ ಅದನ್ನು ತೂರಿಸಿ ಮೂತ್ರಕೋಶದ ಒಳಭಾಗವನ್ನು ಪರೀಕ್ಷಿಸಿ ಏನಾದರು ಗಡ್ಡೆಯಿದ್ದರೆ ತುಣುಕನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತೇವೆ


ಸಿಸ್ಟೋಮೆಟ್ರೋಗ್ರಾಮ್ ; ಸಣ್ಣ ನಳಿಕೆಯ0ತಹ ಯಂತ್ರವೊಂದನ್ನು ಮೂತ್ರ ನಾಳದ ಮೂಲಕ ಮೂತ್ರಕೋಶದಲ್ಲಿಟ್ಟು ವಿವಿಧ ಒತ್ತಡ ಪ್ರಮಾಣವನ್ನು ನೋಡಿ,ಯಾವ ರೀತಿಯ ಮೂತ್ರದ ಅಸಂಯಮ ಇದೆ? ಅದಕ್ಕೆ ಶಸ್ತ್ರಚಿಕಿತ್ಸೆ ಬೇಕೇಬೇಡವೇ ಎಂದು ನಿರ್ಧರಿಸಬಹುದು.

‘ಕೀಗಲ್’ನ ಕಿಳ್ಗುಳಿ ಸ್ನಾಯುಗಳ ವ್ಯಾಯಮ ಸ್ವಲ್ಪ ಮಟ್ಟಿಗೆ ಮೂತ್ರ ಅಸಂಯಮವನ್ನು ನಿಯಂತ್ರಿಸಲು ನೆರವಾಗುತ್ತದೆ. ಕೆಲವು ಔಷಧಗಳನ್ನು ಮೂತ್ರದ್ವಾರದ ಸುತ್ತಲೂ ಸೂಜಿಯಮೂಲಕ ಚುಚ್ಚುವುದರಿಂದ ಮೂತ್ರ ದ್ವಾರವು ಸಣ್ಣದಾಗಿ ಅಸಂಯಮ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಕೆಲವು ಹೊಸದಾಗಿ ಬಂದಿರುವ ಆವಿಷ್ಕಾರಗಳನ್ನು ‘ಟಿವಿಟಿ’(TVT) ಮತ್ತು ‘ಟಿಒಟಿ’(TOT) ಎ0ದು ಕರೆಯುತ್ತೇವೆ. ಇದು ಸ್ವಲ್ಪ ದುಬಾರಿಯಾದರೂ ಇದರಿಂದ ಒಳ್ಳೆಯ ಫಲಿತಾಂಶವಿದೆ. ಇವು ಬಹಳ ಸುಲಭವಾಗಿ ಹಾಗೂ ಬಹು ಬೇಗನೆ ಮಾಡುವಂತಹ ಶಸ್ತ್ರಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆಯ ನಂತರ ಬೇಗನೆ ಸುಧಾರಿಸಿಕೊಳ್ಳಬಹುದು, ನೋವಾಗಲಿ, ತೊಂದರೆಗಳಾಗಲಿ ಬಹಳ ಕಡಿಮೆ.

ಕೃತಕ ಸ್ಪಿಂಕ್ಟರ್ :
 ಮೂತ್ರ ಸಂಗ್ರಹಿಸಲು ಮೂತ್ರ ದ್ವಾರದ ಹತ್ತಿರ ಈ ಸಾಧನವನ್ನು ಅಳವಡಿಸಬಹುದು. ಇದು ಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆ ಯಾಕೆಂದರೆ ನಮ್ಮ ಮಹಿಳೆಯರಿಗೆ ಈ ಕುರಿತು ಮಾಹಿತಿಗಳೇ ಇರುವುದಿಲ್ಲ. 

(ಮುಂದುವರೆಯುತ್ತದೆ)

- ಡಾ. ಪೂರ್ಣಿಮಾ ಜೆ 

Monday, 8 May 2017

ಆರೋಗ್ಯ - ಹಣ್ಣೆಲೆಗಳು - 3

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)     

ಅಧ್ಯಾಯ - 3

                    ಗರ್ಭಚೀಲದ ಜಾರಿಳಿತ  (Prolapse uterus)


ಗರ್ಭಚೀಲದ ಜಾರಿಳಿತ ಋತುಬಂಧದ ಆಸುಪಾಸಿನಲ್ಲಿ, ಹೆಚ್ಚಾಗಿ ಋತುಬಂಧದ ನಂತರ ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆ. ಇದರ ಬಗ್ಗೆ ಬಹಳ ಮಹಿಳೆಯರಿಗೆ ತಿಳಿದಿರುವುದಿಲ್ಲ. ತಿಳಿದಿದ್ದರೂ ಸಂಕೋಚದಿಂದ, ಆರ್ಥಿಕ ಸಮಸ್ಯೆಗಳಿಂದ, ಕೌಟುಂಬಿಕ ತಾಪತ್ರಯಗಳಿಂದ, ಶಸ್ತ್ರಚಿಕಿತ್ಸೆಯ ಭಯದಿಂದ ವೈದ್ಯರ ಬಳಿಗೆ ಬರುವಾಗ ತಡವಾಗಿರುತ್ತದೆ.

ಗರ್ಭಕೋಶವನ್ನು ಅದರ ಸ್ಥಾನದಲ್ಲಿರಿಸಲು ಹಲವು ತಂತುಕಟ್ಟುಗಳು (ligament), ಸ್ನಾಯುಗಳು ಮತ್ತು ತೆಳು ಪದರಗಳು (fascia) ಸಹಾಯಕವಾಗಿದೆ. ಇವೆಲ್ಲವೂ ಋತುಬಂಧದ ಸಮಯದಲ್ಲಿ ನಮೆತಗೊಂಡು (atrophy)   ಗರ್ಭಕೋಶದ ಜಾರಿಳಿತವುಂಟಾಗುತ್ತದೆ.

ಅಶಕ್ತಗೊಳ್ಳಲು (ನಮೆತಗೊಳ್ಳಲು) ಮುಖ್ಯ ಕಾರಣಗಳು ಯಾವುವೆಂದರೆ:
• ರಸದೂತಗಳ ಉತ್ಪಾದನೆಯಲ್ಲಿ ವ್ಯತ್ಯಯ
• ಹೆರಿಗೆಗಳು ಕಷ್ಟವಾಗಿ, ಸ್ನಾಯುಗಳು, ಒಳಪದರುಗಳು ಹಾಳಾಗಿರುವುದು
• ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದು, ಹೆರಿಗೆಗಳ ನಡುವಿನ ಅಂತರ ಕಡಿಮೆಯಿದ್ದರೆ
• ಕಷ್ಟಕರವಾದ ಹೆರಿಗೆಯಲ್ಲಿ ಮಗುವನ್ನು ತೆಗೆಯಲು ಇಕ್ಕಳ (forceps) ಉಪಯೋಗಿಸಿರುವುದು
• ಅತಿಯಾದ ಕೆಮ್ಮು, ಉಬ್ಬಸವಿರುವುದು
• ಹುಟ್ಟಿನಿಂದ ಸ್ನಾಯುಗಳ ಅಶಕ್ತತೆಯಿರುವುದು


ಗರ್ಭಕೋಶದ ಅಂಗರಚನೆ ಬಗ್ಗೆ ಒಂದೆರಡು ವಿವರಣೆ ನೀಡದಿದ್ದರೆ ಗರ್ಭಕೋಶದ ಜಾರಿಳಿತದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಗರ್ಭಕೋಶವು ನಮ್ಮ ಮುಷ್ಟಿ ಗಾತ್ರದ ಅಂಗ. ಅದು ಕಟಿ ಪ್ರದೇಶದ (pelvis) ಮೂಳೆಗಳ ಗೂಡಿನಲ್ಲಿ ಇರುವುದು. ಕಿಬ್ಬೊಟ್ಟೆಯಲ್ಲಿ ಮೂತ್ರಕೋಶದ ಹಿಂಭಾಗದಲ್ಲಿ ಮತ್ತು ಮಲಕೋಶದ ಮುಂಭಾಗದಲ್ಲಿ, ಅಂದರೆ ಇವೆರಡರ ಮಧ್ಯೆ ಸ್ವಲ್ಪ ಬಾಗಿಕೊಂಡು ಕೆಲವೊಂದು ಸ್ನಾಯುಗಳು, ತಂತು ಕಟ್ಟುಗಳು ಹಾಗೂ ತೆಳು ಪದರಗಳಿಂದ  ಸುತ್ತುವರಿಯಲ್ಪಟ್ಟು ತನ್ನ ಸ್ಥಾನದಲ್ಲಿ ಇರುತ್ತದೆ.

ಗರ್ಭಕೋಶವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದರೆ, ಒಂದೊಂದು ಭಾಗದಲ್ಲೂ ವಿವಿಧ ಸ್ನಾಯುಗಳು, ತಂತುಕಟ್ಟುಗಳು ಹಾಗೂ ಪದರಗಳು  ಗರ್ಭಕೋಶವನ್ನು ಅದರ ಸ್ಥಾನದಲ್ಲಿರಿಸುತ್ತವೆ. 
ಮೇಲ್ಭಾಗದಲ್ಲಿ :
ದುಂಡು ತಂತುಕಟ್ಟು (Round ligament), ಡಿಂಭನಾಳ (Fallopian tube)  ಹಾಗೂ ಅಂಡಾಶಯದ ತಂತುಕಟ್ಟು (ovarian ligament), ಇವಿಷ್ಟನ್ನು ಅಗಲ ತಂತುಕಟ್ಟು  (Broad ligament)   ಎಂದು ಕರೆಯುತ್ತೇವೆ.
ಮಧ್ಯಭಾಗದಲ್ಲಿ:
ಮ್ಯಾಕೆನ್‍ರಾಡ್‍ನ ತಂತುಕಟ್ಟು (Mackenrodt’s ligament)  ಮತ್ತು ಯುಟಿರೋ ಸೇಕ್ರಲ್ ತಂತುಕಟ್ಟು (uterosacral ligament) ಇವೆರಡೂ ಸೇರಿ ಗರ್ಭಕೋಶವನ್ನು ಅದರ ಸ್ಥಾನದಲ್ಲಿ ಹಿಡಿದಿಟ್ಟಿರುತ್ತದೆ. ಯುಟಿರೋ ಸೇಕ್ರಲ್ ತಂತುಕಟ್ಟು ಗರ್ಭಕೋಶವನ್ನು ಅದರ ಹಿಂಭಾಗದಲ್ಲಿರುವ ಸೇಕ್ರಮ್ ಎಂಬ ಮೂಳೆಗೆ ಅಂಟಿಕೊಂಡು ಅದು ಕೆಳಗೆ ಜಾರದಂತೆ ನೋಡಿಕೊಳ್ಳುತ್ತದೆ. 
ಕೆಳಭಾಗದಲ್ಲಿ:
ಮುಂದುಗಡೆ ಮೂತ್ರಕೋಶದಿಂದ ತಂತುಕಟ್ಟು ಗರ್ಭಕೋಶಕ್ಕೆ ಸೇತುವೆಯಾಗಿ ಗರ್ಭಕೋಶವನ್ನು ಅದರ ಜಾಗದಲ್ಲಿ ಹಿಡಿದಿಟ್ಟಿರುತ್ತದೆ. ಗರ್ಭಕೋಶದ ಕೆಳಭಾಗದಲ್ಲಿ ಯೋನಿಯ ಎರಡು ಕಡೆಗಳಲ್ಲಿ ಅದರ ಒಳಪದರುಗಳು ಅದನ್ನು ತನ್ನ ಸ್ಥಾನದಲ್ಲಿರಿಸಲು ಸಹಕರಿಸುತ್ತವೆ.


ಇವೆಲ್ಲಕ್ಕೂ ಅದರ ಬಲವನ್ನು ಕೊಡಲು ದೇಹದಲ್ಲಿ ಉತ್ಪತ್ತಿಯಾಗುವ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸದ ಅವಶ್ಯಕತೆಯಿದೆ. ಯಾವಾಗ ಈ ಜೀವರಸಗಳ ಉತ್ಪತ್ತಿ ಕ್ಷೀಣಿಸುವುದೋ ಆಗ ತಂತುಕಟ್ಟುಗಳು, ಸ್ನಾಯುಗಳು ತಮ್ಮಬಲವನ್ನು ಕಳೆದುಕೊಳ್ಳುತ್ತ ಹೋಗುತ್ತವೆ ಮತ್ತು ಗರ್ಭಕೋಶವು ತನ್ನ ಸ್ಥಾನದಿಂದ ಸ್ವಲ್ಪ ಸ್ವಲ್ಪವಾಗಿ ಜಾರುತ್ತ ಕೆಳಗೆ ಯೋನಿಯ ಮೂಲಕ ಹೊರಗೆ ಬರುತ್ತದೆ.
ಗರ್ಭಕೋಶದ ಜಾರಿಳಿತವನ್ನು  ಸಾಮಾನ್ಯವಾಗಿ ಮೂರು ರೀತಿಯಲ್ಲಿ ಗುರುತಿಸುತ್ತೇವೆ. 
ಮೊದಲನೆ ಹಂತ: ಗರ್ಭಕೋಶ ತನ್ನ ಸ್ಥಾನಕ್ಕಿಂತ ಸ್ವಲ್ಪವೇ ಕೆಳಗೆ ಜಾರಿದ್ದು ಅದನ್ನು ವೈದ್ಯರು ಪರಿಶೀಲಿಸಿದಾಗ ಮಾತ್ರ ತಿಳಿಯುತ್ತದೆ. 
ಎರಡನೆ ಹಂತ: ಇದರಲ್ಲಿ ಗರ್ಭಕೋಶವು ಯೋನಿದ್ವಾರದ ಬಳಿ ಬಂದಿದ್ದು ಮೂತ್ರ ಮಾಡುವಾಗ ಇಲ್ಲವೇ ಮಲ ವಿಸರ್ಜಿಸುವಾಗ ಏನೋ ಜಾರಿದಂತಾಗಿ, ಇಲ್ಲ ಕೆಳಗೆ ಸಿಗುವಂತಾಗಿ ಮಹಿಳೆಯರು ವೈದ್ಯರ ಬಳಿಗೆ ಬರುತ್ತಾರೆ.
ಮೂರನೇ ಹಂತ: ಇದರಲ್ಲಿ ಗರ್ಭಕೋಶವು ಯೋನಿದ್ವಾರದಿಂದ ಹೊರಗೆ ಬಂದಿರುತ್ತದೆ. ಮೊದಮೊದಲಿಗೆ ಚಿಕ್ಕದಿದ್ದು, ಬರಬರುತ್ತಾ ದೊಡ್ಡದಾಗುತ್ತ ಹೋಗುತ್ತದೆ ಮತ್ತು ಮಹಿಳೆಯರು ವೈದ್ಯರ ಬಳಿಗೆ ತಮ್ಮ ಈ ತೊಂದರೆಗಾಗಿ ಬರುತ್ತಾರೆ.

ಗರ್ಭಕೋಶದ ಜಾರಿಳಿತದ ವಿವಿಧ ಹಂತಗಳು 

ಗರ್ಭಕೋಶದ ಜಾರಿಳಿತದಿಂದಾಗುವ ತೊಂದರೆಗಳು
• ಏನೋ ಕೆಳಗಡೆ ಬಂದ ಹಾಗೆ/ಜಾರಿದ ಹಾಗೆ ಅನ್ನಿಸುವುದು
• ಹೆಚ್ಚು ಹೊತ್ತು ನಿಂತರೆ ಇಲ್ಲವೆ ಹೆಚ್ಚಾಗಿ ಓಡಾಡಿದರೆ ಗರ್ಭಕೋಶ ಜಾರುತ್ತದೆ ಮತ್ತು ಮಲಗಿದಾಗ ಇಲ್ಲವಾಗುತ್ತದೆ
• ಬರುಬರುತ್ತಾ ಹೆಚ್ಚೆಚ್ಚು ಹೊರಬಂದು ದೊಡ್ಡದಾಗಿ, ನಡೆದಾಡಲು ತೊಂದರೆಯಾಗುತ್ತದೆ
• ಬೆನ್ನು ನೋವು ಬರಬಹುದು
• ಗರ್ಭಕೋಶದ ಜೊತೆ ಮೂತ್ರಕೋಶವು ಜಾರಿ ಆಗಾಗ ಮೂತ್ರ ಮಾಡಬೇಕೆಂದು ಅನ್ನಿಸಬಹುದು
• ಕೈಯಿಂದ ಗರ್ಭಕೋಶವನ್ನು ಒಳಗೆ ದೂಡಿದರೆ ಮಾತ್ರ ಮೂತ್ರ ಮಾಡಲು ಆಗುವುದು
• ಮೂತ್ರಕೋಶದಲ್ಲಿ ಮೂತ್ರ ಉಳಿದು ನಂಜಾಗಿ ಜ್ವರ ಆಗಾಗ ಬರಬಹುದು ಮತ್ತು ಪದೇ ಪದೇ ಉರಿಮೂತ್ರದ ಸಮಸ್ಯೆ ತಲೆದೋರಬಹುದು
• ಮಲವಿಸರ್ಜನೆ ಮಾಡುವಾಗಲೂ ತೊಂದರೆಗಳಾಗಬಹುದು
• ಗರ್ಭಕೋಶ ಹೊರಗೆ ಉಳಿದರೆ, ಅದರ ರಕ್ತ ಸಂಚಾರದಲ್ಲಿ ವ್ಯತ್ಯಯವಾಗಿ ಅದರ ಮೇಲೆ ಗಾಯ (ವ್ರಣ) ಆಗಬಹುದು. ಇದರಿಂದ ಬಿಳಿ ಮುಟ್ಟು ಇಲ್ಲವೇ ರಕ್ತಮಿಶ್ರಿತ ಬಿಳಿಸ್ರಾವ ಹೋಗಬಹುದು, ವಾಸನೆಯಿಂದ ಕೂಡಿರಬಹುದು
• ಸಂಭೋಗ ಕ್ರಿಯೆಯಲ್ಲಿ ತೊಂದರೆಯುಂಟಾಗಬಹುದು

ಗರ್ಭಕೋಶ ಜಾರಿರುವುದನ್ನು ಮಹಿಳೆಯರು ಸುಲಭವಾಗಿ ಗುರುತಿಸಬಹುದು. ಗುರುತಿಸಿದ ತಕ್ಷಣ ವೈದ್ಯರ ಬಳಿಗೆ ಬಂದು ಚಿಕಿತ್ಸೆಗೊಳಪಡುವುದು ಒಳ್ಳೆಯದು ಇಲ್ಲದಿದ್ದರೆ ಅದು ಬರಬರುತ್ತಾ ಹೆಚ್ಚು ತೊಂದರೆ ಮಾಡಬಹುದು. ಹೆಚ್ಚು ವಯಸ್ಸಾದಂತೆ ಶಸ್ತ್ರ ಚಿಕಿತ್ಸೆ ಮಾಡಲು ಅನೇಕ ತೊಡಕುಗಳು ಎದುರಾಗಬಹುದು. ಅಧುನಿಕ ವೈದ್ಯ ರಂಗದಲ್ಲಿ ಅರವಳಿಕೆ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ಸುಧಾರಣೆಗಳಾಗಿರುವುದರಿಂದ ಯಾವುದೇ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು.

ವಜೈನಲ್ ಹಿಸ್ಟರೆಕ್ಟಮಿ (Vaginal Hysterectomy) 


ಯೋನಿಯ ಮೂಲಕವೇ ಶಸ್ತ್ರ ಚಿಕಿತ್ಸೆ ಮಾಡಿ, ಗರ್ಭಕೋಶವನ್ನು ತೆಗೆದುಹಾಕುವುದು ಮತ್ತು ಜಾರಿದ ಮೂತ್ರಕೋಶವನ್ನು ಅದರ ಸ್ಥಾನದಲ್ಲಿಟ್ಟು ತಂತು ಕಟ್ಟುಗಳನ್ನು ಬಿಗಿಗೊಳಿಸುವುದು. ಮಲಕೋಶವನ್ನು ಕೂಡ ತಂತುಕಟ್ಟುಗಳನ್ನು ಜೋಡಿಸಿ ಬಿಗಿಗೊಳಿಸುವುದು. ಇದನ್ನು ‘ವಜೈನಲ್ ಹಿಸ್ಟರೆಕ್ಟಮಿ’ ಎನ್ನುತ್ತೇವೆ. ‘ವಜೈನಲ್’ ಅಂದರೆ ‘ಯೋನಿ’ ಮೂಲಕ ‘ಹಿಸ್ಟರೆಕ್ಟಮಿ’ ಎಂದರೆ ‘ಗರ್ಭಕೋಶವನ್ನು ತೆಗೆಯುವುದು’ ಎಂದರ್ಥ. ಇದು 1 ಗಂಟೆಯಿಂದ 2-3 ಗಂಟೆಗಳ ಕಾಲ ಮಾಡುವ ಶಸ್ತ್ರಚಿಕಿತ್ಸೆ. ರೋಗಿಯು ಶಸ್ತ್ರಚಿಕಿತ್ಸೆಯ ನಂತರ 3-5 ದಿನಗಳ ಕಾಲ ಮಾತ್ರ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಹೊಲಿಗೆ ತೆಗೆಯುವ ಅವಶ್ಯಕತೆಯಿರುವುದಿಲ್ಲ. ನೋವು ಕೂಡ ಕಡಿಮೆಯಿರುತ್ತದೆ. ರೋಗಿಯು ಎದ್ದು ಬೇಗನೆ ತಿರುಗಾಡಬಹುದು. ಮೇಲೆ ಹೇಳಿದ ಸಮಸ್ಯೆಗಳೆಲ್ಲಾ ಶೇಕಡ 80 ರಷ್ಟು ಕಡಿಮೆಯಾಗಬಹುದು.

ಯೋನಿದ್ವಾರವನ್ನು ಕಿರಿದುಗೊಳಿಸುವುದರಿಂದ ಸಂಭೋಗ ಕ್ರಿಯೆಯು ಉತ್ತಮಗೊಳ್ಳುತ್ತದೆ. ಸ್ನಾಯುಗಳು, ತಂತುಕಟ್ಟುಗಳು ಬಲಹೀನವಾಗಿದ್ದರೆ ಮಾರುಕಟ್ಟೆಯಲ್ಲಿ ದೊರಕುವ ‘ಮೆಷ್’ (Mesh) ಉಪಯೋಗಿಸಿ ಶಸ್ತ್ರ ಚಿಕಿತ್ಸೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. 

ಗರ್ಭಕೋಶ ಜಾರಿಳಿತವನ್ನು ತಪ್ಪಿಸುವ ಮುಂಜಾಗ್ರತಾ ಕ್ರಮಗಳು;
• ಗರ್ಭಿಣಿಯಾಗಿರುವಾಗ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ಮಾಡುವುದು ಒಳ್ಳೆಯದು
• ಎಲ್ಲಾ ಹೆರಿಗೆಗಳನ್ನು ಅಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಮಾಡಿಸಿಕೊಳ್ಳಿ
• ಎರಡು ಮಕ್ಕಳ ನಡುವೆ ಸಾಕಷ್ಟು ಅಂತರವಿರಲಿ (ಕನಿಷ್ಟ 3-5 ವರ್ಷಗಳು) 
• ಗರ್ಭನಿರೋಧಕ ಗುಳಿಗೆ, ವಂಕಿ (ಕಾಪರ್ ‘ಟಿ’),  ನಿರೋಧ್ ಅನ್ನು ಬಳಸಿ ಮಕ್ಕಳ ನಡುವೆ ಅಂತರವಿರಿಸಿಕೊಳ್ಳಿ
• ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳು ಬೇಡ. ಒಂದು ಇದ್ದರೂ ಸಾಕು
• ‘ಕೀಗಲ್‍ನ ವ್ಯಾಯಾಮ’ (Kegel’s exercise)  ಅಂದರೆ ಹೊರ ಜನನಾಂಗದ ಸ್ನಾಯುಗಳ ವ್ಯಾಯಾಮ. ಮೂತ್ರ ಬರುವಾಗ ತಡೆ, ತಡೆದು ಮಾಡುವುದು, ಸುಮ್ಮನೆ ಕುಳಿತಿರುವಾಗ ಕಟಿ ಪ್ರದೇಶದ ಸ್ನಾಯುಗಳನ್ನು ಕುಗ್ಗಿಸುವುದು ಮತ್ತು ಹಿಗ್ಗಿಸುವುದನ್ನು ಸುಮಾರು ಒಂದು ಬಾರಿಗೆ 10-20 ಸಲ ದಿನಕ್ಕೆ 10-20 ಸಲ ಮಾಡಬೇಕು. ಇದರಿಂದ ಆ ಭಾಗದ ಸ್ನಾಯುಗಳು, ತಂತುಗಳು ಗಟ್ಟಿಯಾಗಿ ಗರ್ಭಕೋಶ ಜಾರುವುದನ್ನು ತಡೆಗಟ್ಟುತ್ತದೆ. 



ಶಸ್ತ್ರಚಿಕಿತ್ಸೆ ಮಾಡಲು ಆಗದಿದ್ದಲ್ಲಿ, ಪೆಸ್ಸರಿ (Pessary)  ಅಥವಾ ‘ರಿಂಗ್’ (Ring) ಬಳೆಯಾಕಾರದ, ರಬ್ಬರಿನಿಂದ ತಯಾರಿಸಿದ ವಸ್ತುಗಳು. ಇದನ್ನು ಯೋನಿಯ ಮೂಲಕ ಒಳಗಡೆ ಸೇರಿಸಿ, ಗರ್ಭಕೋಶ ಜಾರದಂತೆ ನೋಡಿಕೊಳ್ಳಬಹುದು. ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಅದನ್ನು ತೆಗೆದು ಶುಭ್ರಗೊಳಿಸಿ ಮತ್ತೆ ಹಾಕಿಕೊಳ್ಳಬೇಕು. ಅಲ್ಲಿಯೇ ಬಿಟ್ಟರೆ ನಂಜಾಗಿ ಅಥವಾ ಆ ಜಾಗದಲ್ಲಿ ಗಾಯವಾಗಿ ತೊಂದರೆ ಆಗಬಹುದು.


ಶಸ್ತ್ರ ಚಿಕಿತ್ಸೆಯ ನ0ತರದ ಜಾರುವಿಕೆ (vault prolapse)

ಹಿಸ್ಟರೆಕ್ಟಮಿ ಮಾಡಿದ ನ0ತರವು ಯೋನಿಯು ಕೆಳಗೆ ಜಾರುವ ಸಾಧ್ಯತೆಗಳನ್ನು ತಳ್ಳಿಹಾಕುವ ಆಗಿಲ್ಲ. “ಮೆಷ್” ಉಪಯೋಗಿಸಿ ಶಸ್ತ್ರ ಚಿಕಿತ್ಸೆ ಮಾಡಿದರೆ ಈ ತೊಂದರೆ ಸ್ವಲ್ಪ ಕಡಿಮೆ. ಜೀವರಸಗಳ ಕೊರತೆಯೆ ಇದಕ್ಕೆ ಕಾರಣ. 


- ಡಾ ಪೂರ್ಣಿಮಾ. ಜೆ

Friday, 31 March 2017

ಆರೋಗ್ಯ - ಹಣ್ಣೆಲೆಗಳು - 2

ಅಧ್ಯಾಯ - 2
ಟೊಳ್ಳುಮೂಳೆ ರೋಗ    [Osteoporosis - ಆಸ್ಟಿಯೋಪೆÇರೋಸಿಸ್]  ಮೆದುಮೂಳೆ

      
ಋತುಬಂಧದ ಆಸುಪಾಸಿನಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ಟೊಳ್ಳಾಗಿ ದುರ್ಬಲಗೊಂಡು ಮುರಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸಗಳ ಕೊರತೆಯಿಂದಾಗಿ ಮೂಳೆಯ ರಚನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ.  ಮೂಳೆ ನಿಧಾನವಾಗಿ ಕೃಶವಾಗುತ್ತ ಹೋಗುತ್ತದೆ, ಆದರೆ ಅದರ ಆಕಾರದಲ್ಲಿ  ಯಾವುದೇ ರೀತಿಯ ವ್ಯತ್ಯಾಸವಾಗುವುದಿಲ್ಲ.

ಶೇಕಡ 30ಕ್ಕಿಂತ ಹೆಚ್ಚು ಮೂಳೆ ಟೊಳ್ಳಾದರೆ ಆರೋಗ್ಯದಲ್ಲಿ ತೊಂದರೆಯುಂಟಾಗುತ್ತದೆ. ಒಂದು ಸಣ್ಣ ಅಪಘಾತ ಕೂಡ ಮೂಳೆ ಮುರಿತಕ್ಕೆ ಕಾರಣವಾಗಬಹುದು. ಹೆಚ್ಚಾಗಿ ಸೊಂಟದ ಮೂಳೆ ಮುರಿಯುವುದು (hip fracture).  ಮೊಣಕೈ ಮೂಳೆ ಮುರಿತವು ಕೂಡ ಸಾಮಾನ್ಯ, ಇದನ್ನು ‘ಕೋಲೆಯ ಮೂಳೆ ಮುರಿತ’ (Colles’ fracture) ಎಂದು ಕರೆಯುತ್ತಾರೆ. ಬೆನ್ನು ಮೂಳೆ ಮುರಿತವು ಸಾಮಾನ್ಯವಾಗಿ ಕಂಡು ಬರುತ್ತದೆ. ಹಲ್ಲುಗಳು ಉದುರುತ್ತವೆ. ಮೂಳೆ ಸವೆತ ಕೆಲವರಲ್ಲಿ ಅತಿಯಾಗಿದ್ದರೆ ಇನ್ನೂ ಕೆಲವರಲ್ಲಿ ಅತೀ ಕಡಿಮೆಯಿರುತ್ತದೆ.


ಮೆದು ಮೂಳೆಗೆ ಸಂಭಾವ್ಯ ಕಾರಣಗಳನ್ನು ಈ ರೀತಿ ವಿವರಿಸಲಾಗಿದೆ.
·        ಋತುಬಂಧ ಬೇಗನೆ ಬಂದರೆ (ಅಕಾಲಿಕ ಋತುಬಂಧ)
·        ವಂಶವಾಹಿನಿಯಿಂದ -ಯುರೋಪ್ ಮತ್ತು ಏಷ್ಯಾ ಪ್ರದೇಶಗಳ ಮಹಿಳೆಯರಲ್ಲಿ ಮೂಳೆ ಸವೆತ ಹೆಚ್ಚಾಗಿ ಕಂಡುಬಂದರೆ, ಆಫ್ರಿಕಾದ ಮಹಿಳೆಯರಲ್ಲಿ ಇದು ತೀರಾ ಕಡಿಮೆ.
·        ಕ್ಯಾಲ್ಸಿಯಂ ಸೇವನೆ ಕಡಿಮೆ ಇದ್ದರೆ.
·        ಧೂಮಪಾನ ಹಾಗೂ ಮಧ್ಯಪಾನದ ದಾಸರಾಗಿದ್ದರೆ, ಅತಿಯಾಗಿ ಕಾಫಿ ಸೇವಿಸುತ್ತಿದ್ದರೆ
·        ಕೃಶವಾಗಿ, ಕಡಿಮೆ ತೂಕ ಹೊಂದಿದವರಲ್ಲಿ,
·        ಹೆಚ್ಚಿನ ತೂಕ ಇರುವವರಲ್ಲಿ (125 ಕೆ.ಜಿಗಿಂತ ಹೆಚ್ಚಿದ್ದರೆ)
·        ಮಕ್ಕಳಿಲ್ಲದವರಲ್ಲಿ
·   ಅನೊರೆಕ್ಸಿಯಾ ನರ್ವೋಸಾ (Anorexia Nervosa)- - ಊಟ ಮಾಡದೆ, ತೀರಾ ಕೃಶವಾಗಿರುವುದು
·        ವ್ಯಾಯಾಮ ಮಾಡದೆ ಇದ್ದರೆ
·        ಅಪೌಷ್ಟಿಕತೆ ಮತ್ತು ಆನಾರೋಗ್ಯ ಹೊಂದಿದ್ದರೆ
· ಕೆಲವು ಜೌಷಧಗಳನ್ನು ದೀರ್ಘಕಾಲ ಉಪಯೋಗಿಸುತ್ತಿದ್ದರೆ. ಉದಾ-ಹೆಪಾರಿನ್ (Heparin),  ಜಿಎನ್.ಆರ್.ಹೆಚ್ (GnRh),  ಮಿಥೋಟ್ರೆಕ್ಸೆಟ್ (methotrexate),   ಕಾರ್ಟಿಕೋಸ್ಟಿರಾಯ್ಡ್ (corticosteroid)    ಇನ್ನೂ ಮುಂತಾದವುಗಳು
·        ವಿಟಮಿನ್ .ಡಿ. ಕೊರತೆಯಿದ್ದರೆ (ಸೂರ್ಯನ ಬೆಳಕಿಗೆ ಮೈಯೊಡ್ಡದಿದ್ದರೆ)
·        ಖಿನ್ನತೆ - ಮೂಳೆ ನಾಶದ ಗತಿಯನ್ನು ತೀವ್ರಗೊಳಿಸುತ್ತದೆ
·        ಮನೆಯಲ್ಲಿ ಯಾರಿಗಾದರೂ ಟೊಳ್ಳುಮೂಳೆ ತೊಂದರೆ ಇದ್ದರೆ
·        ಸಂಧಿವಾತ, ಕರುಳಿನ ತೊಂದರೆ ಹಾಗೂ ಇತರೆ ದೀರ್ಘಕಾಲದ ರೋಗಗಳಿದ್ದರೆ

ಸಾಮಾನ್ಯವಾಗಿ ಮೂಳೆಯಲ್ಲಿರುವ ಜೀವಕೋಶಗಳು ಸತತವಾಗಿ ನಶಿಸಿ ಹೋಗಿ, ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಿರುತ್ತವೆ. ವಯಸ್ಸಾದಂತೆ ಹೊಸ ಜೀವಕೋಶಗಳು ಉತ್ಪತ್ತಿಯಾಗುವುದು ಕಡಿಮೆಯಾಗಿ ಮೂಳೆಯು ತೆಳುವಾಗುತ್ತಾ ಮೃದುಗೊಳ್ಳುತ್ತದೆ. 35 ವರ್ಷದ ನಂತರ ಮೂಳೆಯ ಸಾಂದ್ರತೆ ಕಡಿಮೆಯಾಗುತ್ತಾ ಬರುತ್ತದೆ. ಋತುಬಂಧದ ಸಮಯದಲ್ಲಿ ಈಸ್ಟ್ರೋಜನ್ ಜೀವರಸವು ಕಡಿಮೆಯಾಗಿ ಮೂಳೆ ನಶಿಸಿ ಹೋಗುವ ಕ್ರಿಯೆ ತ್ವರಿತಗೊಳ್ಳುತ್ತದೆ. ಬೆನ್ನು ಮೂಳೆಗಳಲ್ಲಿ ಇದನ್ನು ನಾವು ಸರಿಯಾಗಿ ಗಮನಿಸಬಹುದು.  ಬೆನ್ನುಮೂಳೆ ಮೆದುವಾಗಿ ಮೇಲ್ಬಾಗದ ದೇಹದ ಭಾರವನ್ನು ತಡೆಯಲಾಗದೆ ಬಿದುರುಗೊಂಡು (Compressed)  ದೇಹದ ಎತ್ತರವು ಕಡಿಮೆಯಾಗುತ್ತದೆ ಮತ್ತು ಬೆನ್ನು ಹುರಿಯ ಬಾಗುವಿಕೆ ಹೆಚ್ಚಾಗಿ ಗೂನು ಬೆನ್ನಿಗೆಡೆ ಮಾಡಿಕೊಡುತ್ತದೆ. ವಯಸ್ಸು ಹೆಚ್ಚಾದಂತೆ ಗೂನು ಕೂಡ ಹೆಚ್ಚಾಗುತ್ತದೆ.  ಇದಕ್ಕೆ ‘ವಿಡೋಸ್ ಹಂಪ್’ (widow’s hump) ಅಥವಾ ‘ಡೊವೆಜರ್ ಹ0ಪ್’ (Dowager’s hump)  ಎಂತಲೂ ಕರೆಯುತ್ತಾರೆ.


ಮೆದುಮೂಳೆಯ ರೋಗ ಲಕ್ಷಣಗಳು
·        ಅರಂಭದ ಹಂತದಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ. ಅಪರೂಪಕ್ಕೊಮ್ಮೆ ಮೈಕೈ ನೋವು, ಬೆನ್ನು ನೋವು ಅಥವಾ ಕಾಲು ನೋವು ಕಾಣಿಸಿಕೊಳ್ಳುವುದು
·        ಯಾವುದೇ ಆಘಾತವಿಲ್ಲದೆ ತನ್ನಂತಾನೆ ಮೂಳೆ ಮುರಿತ ಉಂಟಾಗುವುದು
·        ಒಸಡಿನ ರೋಗಗಳಿಲ್ಲದೆ ಹಲ್ಲು ಉದುರುವುದು ಈ ರೋಗದ ಲಕ್ಷಣ
·        ವ್ಯಕ್ತಿ ಗೂನಾಗುವುದು ಮತ್ತು ಎತ್ತರ ಕಡಿಮೆಯಾಗುವುದು


ಮೆದುಮೂಳೆಯನ್ನು ಪತ್ತೆ ಹಚ್ಚುವ ವಿಧಾನಗಳು
·        ಕ್ಷಕಿರಣ (X-ray):  ಇದರಲ್ಲಿ 30% ರಷ್ಟು ಮೂಳೆ ಸವೆದಿದ್ದರೆ ಮಾತ್ರ ತಿಳಿಯುತ್ತದೆ.
·        ಡೆಕ್ಸಾ (DEXA):  ಡ್ಯೂಯಲ್ ಎನರ್ಜಿ ಎಕ್ಸ್‍ರೇ ಅಬ್ಸರ್ಬ್‍ಶಿಯೊಮೆಟ್ರಿ (Dual Energy x-ray absorptiometry): ಇದರಿಂದ ಮೂಳೆಯ ಖನಿಜಾಂಶ ಸಾಂದ್ರತೆಯನ್ನು ಕ0ಡು ಹಿಡಿಯಬಹುದು
·       ಡಿ.ಪಿ.ಡಿ (D.P.D): ಡ್ಯುಯಲ್ ಪ್ರೋಟಾನ್ ಡೆನ್ಸಿಟೋಮೆಟ್ರಿ (Dual photon densitometry)
  • ಮೂಳೆ ಖನಿಜಾಂಶ ಸಾಂದ್ರತೆ (B.M.D-Bone Mineral density)


ಡ್ಯೂಯಲ್ ಎನರ್ಜಿ ಎಕ್ಸ್‍ರೇ ಅಬ್ಸರ್ಬ್‍ಶಿಯೊಮೆಟ್ರಿಯ ಸಹಾಯದಿಂದ ಬೆನ್ನುಮೂಳೆ, ತೊಡೆಯಮೂಳೆ, ಮೊಣಕೈ ಮೂಳೆ ಹಾಗೂ ಇತರ ಮೂಳೆಗಳ ಸಾಂದ್ರತೆ ಕಡಿಮೆಯಾಗಿದೆಯೆ ಎಂದು ಪತ್ತೆ ಹಚ್ಚಬಹುದು. ಶೇ 1-5 ರಷ್ಟೂ ಪ್ರಮಾಣದ ಮೂಳೆ ಸವೆತವನ್ನು ಈ ವಿಧಾನದಿಂದ ಕಂಡುಹಿಡಿಯಬಹುದು.

 ಮೆದುಮೂಳೆಗೆ ಚಿಕಿತ್ಸೆ

ಜೀವರಸ ಮರುಪೂರಣ ಚಿಕಿತ್ಸೆ  (Harmone Replacement therapy -HRT)
ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಗಳನ್ನು ಕೊಟ್ಟು ಮೂಳೆ ಸವೆಯುವುದನ್ನು ತಡೆಗಟ್ಟಬಹುದು. ಸರ್ಮ್ (SERM)  ಎನ್ನುವ ಈಸ್ಟ್ರೋಜನ್ ತರಹದ ಜೀವರಸಗಳು ಈಗೀಗ ಮಾರುಕಟ್ಟೆಯಲ್ಲಿ ಲಭ್ಯ. ಟಿಬೊಲೋನ್  ಅನ್ನು ಮಾತ್ರೆ ರೂಪದಲ್ಲಿ ಸೇವಿಸಬಹುದು. ಚರ್ಮದ ಮೇಲೆ ಅ0ಟಿಸಿಕೊಳ್ಳಬಹುದಾದ ಪ್ಯಾಚ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಯೋನಿಯೊಳಗೆ ಮುಲಾಮಿನ ರೂಪದಲ್ಲೂ ಇದನ್ನು ಉಪಯೋಗಿಸಬಹುದು. ‘ರಿ0ಗ್’ನ ರೂಪದಲ್ಲಿ ಇದನ್ನು ಯೋನಿಯ ಒಳಗಡೆ ಅಳವಡಿಸಬಹುದು. ಇವುಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವುದು ಉಚಿತವಲ್ಲ.

ಬೈಪಾಸ್ಪ್‍ನೇಟ್ಸ್    (Biphosphanates) 
ಇದನ್ನು ಉಪಯೋಗಿಸುವುದರಿಂದ ಮೂಳೆ ಮುರಿತವನ್ನು ತಡೆಗಟ್ಟಬಹುದು. ಮೂಳೆ ಸಾಂದ್ರತೆಯನ್ನು ಇರುವ ಮಟ್ಟದಲ್ಲೇ ಉಳಿಸಿಕೊಳ್ಳಬಹುದು. ಬೆನ್ನುಮೂಳೆ ಮತ್ತು ಸೊಂಟದ ಮೂಳೆಯ ಸಾಂದ್ರತೆ ಹೆಚ್ಚಿಸಲು ಇದು ಸಹಾಯಕವಾಗಿದೆ.

ಕ್ಯಾಲ್ಸಿಟೋನಿನ್ (Calcitonin) 
ಇದು ಥೈರಾಯಿಡ್ ಗ್ರಂಥಿ ಸ್ರವಿಸುವ ಒಂದು ಜೀವರಸ. ಇದನ್ನು ಮೂಗಿನ ಮೂಲಕ ಜೌಷಧಿಯಾಗಿ ಸೇವಿಸಬಹುದು. ಇದು ಕೂಡ ಮೂಳೆಯ ಸವೆತವನ್ನು ವಿಳಂಬಗೊಳಿಸುತ್ತದೆ.

ಕ್ಯಾಲ್ಸಿಯಂ/ ಕ್ಯಾಲ್ಸಿಟ್ರಿಯಲ್– (Calcitriol) 
ದಿನಕ್ಕೆ 1000 ಗ್ರಾಂ ನಿಂದ 1500 ಗ್ರಾಂ ನವರೆಗೆ ಕ್ಯಾಲ್ಸಿಯಂ ಸೇವಿಸುವುದರಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು.


ವಿಟಮಿನ್ ‘ಡಿ’
ವಿಟಮಿನ್ ‘ಡಿ’ ಅನ್ನಾಂಗ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೆಚ್ಚಿಸಿ ಮೂಳೆ ಮುರಿತವನ್ನು ಕಡಿಮೆ ಮಾಡುತ್ತದೆ. 400 ಐಯು ನಿಂದ 800 ಐಯು ವರೆಗೆ ದಿನವೂ ಸೇವಿಸಬೇಕು.

ಮೆಗ್ನೀಶಿಯಮ್;
ಕ್ಯಾಲ್ಸಿಯಂ ಒಟ್ಟಿಗೆ ಮೆಗ್ನೀಶಿಯಮ್ ಕೂಡ ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ ಹೀರುವಿಕೆಯನ್ನು ಪರಿಪೂರ್ಣಗೊಳಿಸುತ್ತದೆ. ಮೂಳೆ ರಚನೆಗೆ ಸಹಾಯ ಮಾಡುವ ಆಲ್ಕಲೈನ್ ಫಾಸ್ಪಟೇಸ್ ಕಿಣ್ವವನ್ನು ಪ್ರಚೋದಿಸಿ ಕಾರ್ಯಮಗ್ನಗೊಳಿಸುತ್ತದೆ.

ಮೆದುಮೂಳೆಯು ಬಾರದಂತೆ ಹೇಗೆ ತಡೆಗಟ್ಟುವುದು?
ಅ)  ಕ್ಯಾಲ್ಸಿಯಂ ಮತ್ತು ವಿಟಮಿನ್ ‘ಡಿ’ ಸೇವನೆ: ಋತುಬಂಧದ ಮೊದಲು ಎಲ್ಲಾ ಮಹಿಳೆಯರು ದಿನಕ್ಕೆ 1200 ಮಿ.ಗ್ರಾಂ. ನಷ್ಟು ಕ್ಯಾಲ್ಸಿಯಂ ಅನ್ನು ಸೇವಿಸಬೇಕು. ಋತುಬಂಧದ ನಂತರ 1500 ಮಿ.ಗ್ರಾಂ. ನಷ್ಟು ಸೇವಿಸಬೇಕು
ಆ) ವಿಟಮಿನ್ ‘ಡಿ’ ಯನ್ನೂ ದಿನಕ್ಕೆ 400 ಐಯು ನಷ್ಟು ಉಪಯೋಗಿಸಬೇಕು. ಋತುಬಂಧದ ನಂತರ ಇ)  ಬಾಲ್ಯದಿಂದಲೂ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸೂರ್ಯನ ಕಿರಣಗಳಿಗೆ ಮೈಯನ್ನು ಈ)  ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರಬೇಕು. ಹಾಲು, ಮೊಸರು, ಚೀಸ್, ಕಾಯಿಪಲ್ಲೆ, ಹಸಿರು ತರಕಾರಿಗಳು ಹಾಗೂ ಕೆಲವು ಕಾಳುಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ
ಉ)  ಎಳವೆಯಿಂದಲೇ ಕ್ಯಾಲ್ಸಿಯಂ ಮತ್ತು ವಿಟಮಿನ್ ‘ಡಿ’ ಅನ್ನು ಸರಿಯಾಗಿ ತೆಗೆದುಕೊಳ್ಳಬೇಕು
ಊ)  ಧೂಮಪಾನ ಸೇವಿಸುವುದನ್ನು ನಿಲ್ಲಿಸುವುದರಿಂದ ಮೂಳೆ ಸವೆಯುವುದು ನಿಲ್ಲುತ್ತದೆ
ಋ)  ಮಧ್ಯಪಾನ ನಿಲ್ಲಿಸಿ
ಎ)  ಅತಿಯಾದ ಕಾಫಿ ಸೇವನೆ ಸಲ್ಲದು

ವ್ಯಾಯಾಮ ಏನು ಮಾಡುವುದು?


ಗುರುತ್ವ ಶಕ್ತಿಯ ವಿರುದ್ಧದ ವ್ಯಾಯಾಮಗಳಿಂದ ಮೂಳೆಗಳು ಬಲಗೊಳ್ಳುತ್ತವೆ. ಬಿರುನಡಿಗೆ, ಜಾಗಿಂಗ್ ಮೆಟ್ಟಿಲುಗಳನ್ನೇರುವುದು, ಭಾರ ಹೊರುವ ವ್ಯಾಯಾಮ, ಟೆನ್ನಿಸ್, ಶಟಲ್, ಇತರೆ ಯಾವುದೇ ವ್ಯಾಯಾಮ ನಿಮ್ಮ ತೂಕವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದರೆ ದಿನದಲ್ಲಿ ಕನಿಷ್ಟ ಪಕ್ಷ ಮೂವತ್ತು ನಿಮಿಷ ಮಾಡಬೇಕು. 3 ಕಿ.ಮೀ. ನಷ್ಟು ನಿತ್ಯ ನಡಿಗೆ ಮಾಡಬಹುದು. ಕನಿಷ್ಟ ಪಕ್ಷ ವಾರದಲ್ಲಿ ಮೂರು ಬಾರಿಯಾದರೂ 20 ರಿ0ದ 30 ನಿಮಿಷಗಳ ಕಾಲ ನಡೆಯುವುದು ಬಹು ಮುಖ್ಯ. ಕ್ರೀಡಾಪಟುಗಳಾಗಿದ್ದ ಮಹಿಳೆಯರು ಮುಪ್ಪಿನಲ್ಲಿ ಮೂಳೆ ಸವೆತಕ್ಕೆ ಒಳಗಾಗುವುದು ಕಡಿಮೆ. ದೈಹಿಕವಾಗಿ ಕಠಿಣ ಕಾರ್ಯಗಳಲ್ಲಿ ತೊಡಗಿಸಿಕೊ0ಡಿರುವ ಮಹಿಳೆಯರಲ್ಲೂ ಹೆಚ್ಚಿನ ಗಟ್ಟಿಮೂಳೆಗಳಿರುವುದು ಕಂಡುಬಂದಿದೆ. ನೃತ್ಯ ಕೂಡ ಮೂಳೆಗಳನ್ನು ಗಟ್ಟಿಯಾಗಿಡಲು ಸಹಾಯಮಾಡುವುದು. ವ್ಯಾಯಾಮ, ಸರಿಯಾದ ಆಹಾರ ಪೋಷಣೆ ಹಾಗೂ ಮೂಳೆಸಾಂದ್ರತೆ ಒಂದಕ್ಕೊಂದು ನಂಟು ಹೊಂದಿರುವುದನ್ನು ಹಲವು ವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮೂಲಕ ಧೃಡಿಪಡಿಸಿದ್ದಾರೆ.


ಋತುಬಂಧದ ನಂತರ ಮೂಳೆ ಮುರಿಯಲು ಸಣ್ಣ ಪುಟ್ಟ ಪೆಟ್ಟಾದರೂ ಸಾಕು. ಆದ್ದರಿಂದ ವಯಸ್ಸಾದವರು ಬೀಳುವುದನ್ನು ತಡೆಗಟ್ಟಲು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಅವು ಯಾವುದೆಂದರೆ:
·        ನಿಮಗೆ ನಡೆಯಲು ಕಷ್ಟವಾದರೆ ಊರುಗೋಲನ್ನು ಉಪಯೋಗಿಸಿ
·      ನಿಮ್ಮ ಚಪ್ಪಲಿ ಅಥವಾ ಶೂ ಅನ್ನು ಧರಿಸುವಾಗ ಸರಿಯಾಗಿ ಧರಿಸಿಕೊಳ್ಳಿ, ಶೂಲೇಸನ್ನು ಸರಿಯಾಗಿ  ಕಟ್ಟಿಕೊಳ್ಳಲು ಮರೆಯಬೇಡಿರಿ
·     ಓದುವಾಗ ಓದುವ ಕನ್ನಡಕವನ್ನು ಉಪಯೋಗಿಸಿ, ನಡೆಯುವಾಗ ನಿಮ್ಮ ಮಾಮೂಲಿ ಕನ್ನಡಕವನ್ನು  ಉಪಯೋಗಿಸಲು ಮರೆಯಬೇಡಿರಿ
·        ಪಾದ ಒರೆಸುವ ಬಟ್ಟೆ ಸರಿಯಾಗಿದೆಯೇ ಎಂದು ನೋಡಿಕೊಂಡು ಉಪಯೋಗಿಸಿ
·        ಬಚ್ಚಲು ಮನೆಯಲ್ಲಿ ಹಾಗೂ ಶೌಚಾಲಯದಲ್ಲಿ ಕೈಕಂಬಗಳನ್ನು (Hand rails) ಮಾಡಿಸಿಕೊಳ್ಳಿರಿ
·        ನಿಮ್ಮ ಹಾಸಿಗೆಯ ಪಕ್ಕದಲ್ಲಿ ದೀಪವಿರಲಿ ಇಲ್ಲವೆ ಟಾರ್ಚ್ (Torch)  ಅನ್ನು ಉಪಯೋಗಿಸಲು 
ಮರೆಯಬೇಡಿರಿ
·        ಮೆಟ್ಟಲು ಹತ್ತುವಾಗ ಮತ್ತು ಎಲ್ಲಾ ಇಕ್ಕಟ್ಟು ಪ್ರದೇಶಗಳಲ್ಲಿ ಬೆಳಕು ಸರಿಯಾಗಿ ಇರುವಂತೆ
ನೋಡಿಕೊಳ್ಳಿ
·        ಅವಶ್ಯಕತೆಯಿರುವ ವಸ್ತುಗಳನ್ನು ಕೈಗೆಟಕುವಂತೆ ಇಟ್ಟುಕೊಳ್ಳಿರಿ
·  ಯಾವುದೇ ಕೆಲಸ ಮಾಡುವಾಗ ನಿಧಾನದಿಂದ ಜಾಗ್ರತೆಯಿಂದ ಮಾಡಿರಿ. ಗಡಿಬಿಡಿ ಮಾಡಿಕೊಳ್ಳುವುದು ಒಳ್ಳೆಯದಲ್ಲ

ಟೊಳ್ಳು ಮೂಳೆ ಇದ್ದಲ್ಲಿ ಮೂಳೆ ಮುರಿತಕ್ಕೆ ಕಾರಣಗಳು

* ವಯಸ್ಸು 65 ವರ್ಷಕ್ಕಿಂತ ಹೆಚ್ಚಾಗಿದ್ದರೆ
* ಮನೆಯಲ್ಲಿ ಯಾರಿಗಾದರೂ ಟೊಳ್ಳುಮೂಳೆಯಿದ್ದು ಮೂಳೆ ಮುರಿತವಿದ್ದರೆ (ತಾಯಂದಿರಲ್ಲಿ ಸೊಂಟ ಮೂಳೆ ಮುರಿತ)
* ಹಿಂದೆ ಯಾವಾಗಲಾದರೂ ಮೂಳೆ ಮುರಿದಿದ್ದರೆ
* ಅಕಾಲಿಕ ಋತುಬಂಧವಾಗಿದ್ದರೆ
* ಎಕ್ಸ್-ರೆ ತೆಗೆದಾಗ ಟೊಳ್ಳುಮೂಳೆ ಕಾಣಿಸಿದರೆ
* ಕೆಲವು ಔಷಧಿ ಸೇವನೆಯಿಂದ
* ಸಂಧಿವಾತ, ಕರುಳಿನ ತೊಂದರೆಯಿದ್ದರೆ-ಇತರೆ ರೋಗವಿದ್ದರೆ
* ಕಡಿಮೆ ತೂಕವಿದ್ದರೆ
* ಧೂಮಪಾನ, ಮಧ್ಯಪಾನ ಹಾಗೂ ಅತಿಯಾಗಿ ಕಾಫಿ ಸೇವಿಸುತ್ತಿದ್ದರೆ

(ಮುಂದುವರೆಯುತ್ತದೆ)
- ಡಾ ಪೂರ್ಣಿಮಾ. ಜೆ