Sunday 11 June 2017

ಆರೋಗ್ಯ - ಹಣ್ಣೆಲೆಗಳು - 4

( ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ )      

 ಆಧ್ಯಾಯ - 4
ಮೂತ್ರದ ಅಸಂಯಮ (Urinary Incontinence)

ಕೆಮ್ಮಿದಾಗ, ಸೀನುವಾಗ, ಜೋರಾಗಿ ನಗುವಾಗ ಮೂತ್ರ ಒಸರುವುದು, ಶೌಚಾಲಯಕ್ಕೆ ಹೋಗುವವರೆಗೆ ಮೂತ್ರ ನಿಯಂತ್ರಿಸಿಕೊಳ್ಳಲಾಗದಿರುವುದು, ಶೌಚಾಲಯಕ್ಕೆ ಹೋಗುವ ಮೊದಲೇ ಮೂತ್ರ ಬಂದು ನಿಮ್ಮ ಬಟ್ಟೆ ಒದ್ದೆಯಾಗುವುದು, ಇವೆಲ್ಲವನ್ನೂ ‘ಮೂತ್ರ ಅಸಂಯಮ’ ಎಂದು ಕರೆಯುತ್ತೇವೆ. ಋತುಬಂಧದ ಆಸುಪಾಸಿನಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಈಸ್ಟ್ರೋಜನ್ ಜೀವರಸದ ಉತ್ಪಾದನೆಯಲ್ಲಿ ಕೊರತೆಯುಂಟಾಗಿ, ಮೂತ್ರ ಚೀಲದ, ಮೂತ್ರನಾಳದ ಪದರಗಳು ನಮೆತಕ್ಕೆ (atrophy) ಒಳಗಾಗಿ, ಮೂತ್ರವನ್ನೂ ಹಿಡಿದಿಡುವ ಶಕ್ತಿಯನ್ನೂ ಕಳೆದುಕೊಳ್ಳುತ್ತದೆ.


ರಾತ್ರಿ ನಿದ್ರೆಯಲ್ಲಿ ಕೂಡ ನಿಮಗೆ ಅರಿವಿಲ್ಲದಂತೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯಾಗಬಹುದು. ನಿಮಗೆ ಗಾಬರಿಯಾದಾಗ, ಗಡಿಬಿಡಿಯಲ್ಲಿರುವಾಗ ಮೂತ್ರ ಮಾಡಲು ನಿಮಗೆ ತುರ್ತಾಗಿ ಅನಿಸಬಹುದು. ಸಂಭೋಗದ ಸಮಯದಲ್ಲಿ ಇಲ್ಲವೆ ಆನಂತರದಲ್ಲಿ ಮೂತ್ರಕ್ಕೆ ಹೋಗಬೇಕೆನಿಸುವುದು. ಮೂತ್ರದ ಸೋಂಕು ಆಗಾಗ ಕಾಣಿಸಿಕೊಂಡು ಮೂತ್ರದ ಅಸಂಯಮಕ್ಕೆ ಕಾರಣವಾಗಬಹುದು. ದಿನವೂ ಒಳಬಟ್ಟೆಯನ್ನು (pad) ಧರಿಸಿರಬೇಕಾಗಬಹುದು. ನಿಮಗೆ ಮನೆಯಿಂದ ಹೊರಗಡೆ ಎಲ್ಲಿಯಾದರೂ ಹೋದಲ್ಲಿ ಈ ಸಮಸ್ಯೆ ಕಾಣಬಹುದು, ಆದ್ದರಿಂದ ನೀವು ಮನೆಯೊಳಗಡೆಯೇ ಉಳಿಯಬಹುದು.
pad


ಈ ಸಮಸ್ಯೆ ಇರುವವರಲ್ಲಿ ನೂರರಲ್ಲಿ ಒಬ್ಬರು ಮಾತ್ರ ವೈದ್ಯರ ಬಳಿ ಬರುತ್ತಾರೆ. ಸಂಕೋಚದಿಂದ  ಇದರ ಬಗ್ಗೆ ಯಾರು ಮಾತಾನಾಡದೇ ಇರುವ ಸಾಧ್ಯತೆಗಳಿವೆ. ಇದರ ಬಗ್ಗೆ ಸರಿಯಾದ ಮಾಹಿತಿ ಕೂಡ ಸಿಗುವುದಿಲ್ಲ. ಇದನ್ನು ವಿವಿಧ ರೀತಿಯ ಚಿಕಿತ್ಸೆಯಿಂದ ನಿವಾರಣೆಗೊಳಿಸಬಹುದು ಎಂಬ ಅರಿವಿರುವುದಿಲ್ಲ. ಇಂತಹ ಸಮಸ್ಯೆಗಳಿಂದ ಬಳಲುವವರು ವೈದ್ಯರ ಬಳಿ ಹೋಗಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಿರಿ. ನಿಮಗೆ ಬರೀ ಕೀಗಲ್‍ನ ವ್ಯಾಯಮ ಸಾಕಾಗಬಹುದು ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಔಷಧಗಳನ್ನು ನಿಮಗೆ ಬರೆದುಕೊಡಬಹುದು.


ಇಲ್ಲವೇ ನಿಮಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು. ಶಸ್ತ್ರ ಚಿಕಿತ್ಸೆಯಲ್ಲಿ ಕೂಡ ಈಗ ನಾನಾರೀತಿಯ ಬದಲಾವಣೆಗಳಾಗಿ  ಉತ್ತಮ ಫಲಿತಾಂಶ ದೊರೆಯುತ್ತದೆ. ವಿವಿಧ ರೀತಿಯ, ‘ಮೆಷ್’ (mesh) ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಅದನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆ ಮಾಡಿದರೆ ಉತ್ತಮ ಫಲಿತಾಂಶ ಸಿಕ್ಕಿ ರೋಗಿಗೆ ಸಂತೋಷವಾಗುತ್ತದೆ. 
ಮೂರು ರೀತಿಯ ಮೂತ್ರದ ಅಸಂಯಮವನ್ನು ಗುರುತಿಸುತ್ತೇವೆ. ಅದನ್ನು ಪತ್ತೆಹಚ್ಚಲು ಕೆಲವೊಂದು ಪರೀಕ್ಷೆಗಳನ್ನು ಮಾಡುತ್ತೇವೆ.

ಆಲ್ಟ್ರಾಸೋನೋಗ್ರಫಿ ಮಾಡಿ ಮೂತ್ರಕೋಶದಲ್ಲಿ, ಮೂತ್ರಪಿಂಡದಲ್ಲಿ ಅಥವಾ ಗರ್ಭಕೋಶದಲ್ಲಿ ಏನಾದರೂ ತೊಂದರೆ ಇದೆಯೇ ಎಂದು ನೋಡಲಾಗುವುದು.


ಸಿಸ್ಟೋಸ್ಕೋಪಿ ಎಂಬ ಪರೀಕ್ಷೆಯಲ್ಲಿ ಸಣ್ಣಕೊಳವೆಯನ್ನು ಉಪಯೋಗಿಸಿ ಮೂತ್ರನಾಳದ ಮೂಲಕ ಅದನ್ನು ತೂರಿಸಿ ಮೂತ್ರಕೋಶದ ಒಳಭಾಗವನ್ನು ಪರೀಕ್ಷಿಸಿ ಏನಾದರು ಗಡ್ಡೆಯಿದ್ದರೆ ತುಣುಕನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತೇವೆ


ಸಿಸ್ಟೋಮೆಟ್ರೋಗ್ರಾಮ್ ; ಸಣ್ಣ ನಳಿಕೆಯ0ತಹ ಯಂತ್ರವೊಂದನ್ನು ಮೂತ್ರ ನಾಳದ ಮೂಲಕ ಮೂತ್ರಕೋಶದಲ್ಲಿಟ್ಟು ವಿವಿಧ ಒತ್ತಡ ಪ್ರಮಾಣವನ್ನು ನೋಡಿ,ಯಾವ ರೀತಿಯ ಮೂತ್ರದ ಅಸಂಯಮ ಇದೆ? ಅದಕ್ಕೆ ಶಸ್ತ್ರಚಿಕಿತ್ಸೆ ಬೇಕೇಬೇಡವೇ ಎಂದು ನಿರ್ಧರಿಸಬಹುದು.

‘ಕೀಗಲ್’ನ ಕಿಳ್ಗುಳಿ ಸ್ನಾಯುಗಳ ವ್ಯಾಯಮ ಸ್ವಲ್ಪ ಮಟ್ಟಿಗೆ ಮೂತ್ರ ಅಸಂಯಮವನ್ನು ನಿಯಂತ್ರಿಸಲು ನೆರವಾಗುತ್ತದೆ. ಕೆಲವು ಔಷಧಗಳನ್ನು ಮೂತ್ರದ್ವಾರದ ಸುತ್ತಲೂ ಸೂಜಿಯಮೂಲಕ ಚುಚ್ಚುವುದರಿಂದ ಮೂತ್ರ ದ್ವಾರವು ಸಣ್ಣದಾಗಿ ಅಸಂಯಮ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಕೆಲವು ಹೊಸದಾಗಿ ಬಂದಿರುವ ಆವಿಷ್ಕಾರಗಳನ್ನು ‘ಟಿವಿಟಿ’(TVT) ಮತ್ತು ‘ಟಿಒಟಿ’(TOT) ಎ0ದು ಕರೆಯುತ್ತೇವೆ. ಇದು ಸ್ವಲ್ಪ ದುಬಾರಿಯಾದರೂ ಇದರಿಂದ ಒಳ್ಳೆಯ ಫಲಿತಾಂಶವಿದೆ. ಇವು ಬಹಳ ಸುಲಭವಾಗಿ ಹಾಗೂ ಬಹು ಬೇಗನೆ ಮಾಡುವಂತಹ ಶಸ್ತ್ರಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆಯ ನಂತರ ಬೇಗನೆ ಸುಧಾರಿಸಿಕೊಳ್ಳಬಹುದು, ನೋವಾಗಲಿ, ತೊಂದರೆಗಳಾಗಲಿ ಬಹಳ ಕಡಿಮೆ.

ಕೃತಕ ಸ್ಪಿಂಕ್ಟರ್ :
 ಮೂತ್ರ ಸಂಗ್ರಹಿಸಲು ಮೂತ್ರ ದ್ವಾರದ ಹತ್ತಿರ ಈ ಸಾಧನವನ್ನು ಅಳವಡಿಸಬಹುದು. ಇದು ಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆ ಯಾಕೆಂದರೆ ನಮ್ಮ ಮಹಿಳೆಯರಿಗೆ ಈ ಕುರಿತು ಮಾಹಿತಿಗಳೇ ಇರುವುದಿಲ್ಲ. 

(ಮುಂದುವರೆಯುತ್ತದೆ)

- ಡಾ. ಪೂರ್ಣಿಮಾ ಜೆ 

No comments:

Post a Comment