Sunday 11 June 2017

ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು - 2

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

II. ಪ್ರಸವ-ಪೂರ್ವ ಚಿಕಿತ್ಸಾಕ್ರಮ
(1) ಗರ್ಭಪಾತ ಮತ್ತು ಗರ್ಭನಿರೋಧಕ
ಕೇಂದ್ರೀಯ ನಿಯಂತ್ರಣ ಮತ್ತು ಸ್ಥಳೀಯ ಸ್ವಾಯತ್ತತೆಯು ಯಾವ ಮಟ್ಟದಲ್ಲಿದೆ ಎಂಬುದು ಆಯಾ ವಿಷಯಕ್ಕೆ ಅನುಗುಣವಾಗಿರುತ್ತದೆ. ಮಗುವಿನ ಜನನದ ಪ್ರಶ್ನೆಗೆ ಬಂದರೆ, ಕೇಂದ್ರದ ಆಶಯಗಳನ್ನು ಅಪರೂಪವಾದ ದೃಢತೆಯೊಂದಿಗೆ ವ್ಯಕ್ತಪಡಿಸುತ್ತದೆ. ಸೋವಿಯತ್ ಯೂನಿಯನ್‍ಗೆ ಜನಸಂಖ್ಯೆ ಹೆಚ್ಚುವುದು ಬೇಕು; ಅದಕ್ಕೆ ಶಕ್ತಿಶಾಲಿ ಜನರು ಬೇಕು; ಈ ಉದ್ದೇಶ ಈಡೇರಬೇಕೆಂದರೆ ಪ್ರಸವಪೂರ್ವದ ಮತ್ತು ಪ್ರಸವ ನಂತರದ ಕಾಲವು ಬಹಳ ಮುಖ್ಯವೆಂದು ನಂಬಿದೆ. ಇದಕ್ಕೆ ಅನುಗುಣವಾಗಿ, ಅದು ಮಗುವಿನ ಜನನ, ಗರ್ಭಪಾತ ಮತ್ತು ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ.
ಎಲ್ಲರಿಗೂ ತಿಳಿದಿರುವ ಹಾಗೆ ರಷ್ಯಾದಲ್ಲಿ ಗರ್ಭಪಾತವು ಕಾನೂನುಬದ್ಧ; ಆದರೆ ನಿಯಂತ್ರಣವೇ ಇಲ್ಲ ಎನ್ನುವಂತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಸರ್ಕಾರಿ ಕ್ಲಿನಿಕ್‍ಗಳಲ್ಲಿ ಗರ್ಭಪಾತ ಮಾಡಿಸದಿದ್ದರೆ ಅದು ಸಂಪೂರ್ಣವಾಗಿ ಕಾನೂನು ಉಲ್ಲಂಘನೆಯಾಗುತ್ತದೆ ಮತ್ತು ಹೊರಗೆ ಮಾಡಿಸಿಕೊಂಡರೆ ಮೂರು ವರ್ಷಗಳ ಸೆರೆಮನೆ ವಾಸದ ಶಿಕ್ಷೆ ನೀಡಲಾಗುತ್ತದೆ – ಅದು ರಷ್ಯಾದಲ್ಲಿ ಬಹಳ ದೊಡ್ಡ ಶಿಕ್ಷೆ. (ಅಲ್ಲಿ ಪ್ರತಿಯೊಂದು ನಗರ ಹಾಗೂ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿವೆ ಎನ್ನುತ್ತಾರೆ. ಒಂದು ಹೊಸ ಕಾರ್ಖಾನೆಯನ್ನು ಕಟ್ಟಿದ ಕೂಡಲೇ ಅಥವಾ ಹೊಸ ಜಿಲ್ಲೆ ಆರಂಭವಾದ ಕೂಡಲೇ ಅಲ್ಲೊಂದು ಸರ್ಕಾರಿ ಆಸ್ಪತ್ರೆ ತೆರೆಯಲು ಪ್ರಯತ್ನ ಮಾಡಲಾಗುತ್ತದೆ) ಗರ್ಭಪಾತಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ಮಾಡಿಸುವುದು ಕಡ್ಡಾಯ. ವೈದ್ಯಕೀಯ ಕಾರಣಗಳಿಗೋ ಅಥವಾ ದೊಡ್ಡ ಕುಟುಂಬ ಎನ್ನುವಂತಹ ಬೇರೆ ಕಾರಣಗಳಿಗೋ ಅಲ್ಲದಿದ್ದರೆ ಆಕೆ ಮಗುವಿಗೆ ಜನ್ಮ ನೀಡಬಾರದೇಕೆ – ಎಂದು ಆಕೆಯ ಮನವೊಲಿಸಲು ತುಂಬಾ ಪ್ರಯತ್ನಿಸುತ್ತಾರೆ. ಪ್ರಥಮ ಪ್ರಸವವಾದರಂತೂ ಗರ್ಭಪಾತ ನಿಲ್ಲಿಸಲು ತಮ್ಮೆಲ್ಲಾ ಶಕ್ತಿಯನ್ನು ಉಪಯೋಗಿಸುತ್ತಾರೆ. ಆದರೆ ಆಕೆಯ ಮಾತೇ ಕೊನೆ; ಅವಳಿಗೆ ಮಗು ಬೇಡವೆಂದರೆ ಬೇಡ, ಅಲ್ಲಿಗೆ ಮುಗಿಯಿತು. ಆದರೆ ಅವಳ ಮನವೊಲಿಸಲು ಮಾಡುವ ಪ್ರಚಾರದ ಮತ್ತು ಮನವೊಪ್ಪಿಸುವ ಕೆಲಸದ ದಾಳಿಯನ್ನು ಎದುರಿಸಿ ನಿಲ್ಲಬೇಕೆಂದರೆ ಆಕೆ ಬಹಳ ಗಟ್ಟಿ ಹೆಂಗಸಾಗಬೇಕು.
ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಇರುವ ವ್ಯತ್ಯಾಸವೆಂದರೆ, ರಷ್ಯಾದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿರುವುದರಿಂದ, ಮಾನ್ಯ ಮಾಡಿರುವುದರಿಂದ ಅದರಲ್ಲಿ ರಹಸ್ಯ ಕಾಪಾಡುವುದು ಮತ್ತು ಅದರ ದುಷ್ಪರಿಣಾಮಗಳು ಕಣ್ಮರೆಯಾಗಿವೆ. ಗರ್ಭಪಾತಕ್ಕೆ ಬಹಳ ಕಡಿಮೆ ಶುಲ್ಕವಿರುತ್ತದೆ; ಕಡುಬಡವ ಕಾರ್ಮಿಕರಿಗೆ ಉಚಿತ; ಮತ್ತು ಸಹಜ ಹೆರಿಗೆಯಿಂದ ಮಗು ಹುಟ್ಟಿದಾಗ ನೀಡುತ್ತಿದ್ದ ವೇತನವನ್ನೇ ಚೇತರಿಕೆಯ (ಛಿoಟಿvಚಿಟesಛಿeಟಿಛಿe) ಸಮಯದಲ್ಲೂ ನೀಡಲಾಗುವುದು. ಇದರ ಪರಿಣಾಮವು ಜನಸಮೂಹದ ಮೆಲೆ ಯಾವ ರೀತಿಯಿದೆ ಎನ್ನುವುದನ್ನು ಅಳೆಯುವುದು ಬಹಳ ಕಷ್ಟ; ಗರ್ಭಪಾತ ಮತ್ತು ಜನನಗಳ ಬಗ್ಗೆ ವಿವಿಧ ರೀತಿಯ ಸುದ್ದಿಗಳು ಬರುತ್ತವೆ. ಅದೇನೆ ಆಗಲಿ, ಜನಸಂಖ್ಯೆಯಂತೂ ವೇಗವಾಗಿ ಬೆಳೆಯುವತ್ತ ಸಾಗುತ್ತಿದೆ. ಈ ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಸವ-ನಂತರದ ಆರೈಕೆಯು ಕಾರಣ ಎನ್ನುವುದರಲ್ಲಿ ಸಂದೇಹವೇ ಇಲ್ಲ; ಆದರೆ ಬೇರೆ ದೇಶದ ರೈತ ಸಮುದಾಯದಲ್ಲಿರುವಂತೆ ರಷ್ಯಾದಲ್ಲೂ ಸಹ ತಾಯ್ತನವು ಬಹಳ ಬೇಗ ಆರಂಭವಾಗುತ್ತದೆ ಎಂಬುದೂ ನೆನಪಿನಲ್ಲಿರಬೇಕು. ನಾನು ಲೆನಿನ್‍ಗ್ರಾದ್‍ನ ಕ್ಲಿನಿಕ್‍ನಲ್ಲಿ ನೋಡಿದ ತಾಯಂದಿರ ವಯಸ್ಸು ಸುಮಾರು ಹದಿನೇಳು ಅಥವಾ ಹದಿನೆಂಟಿರಬೇಕು.
ಗರ್ಭಪಾತಕ್ಕೆ ಪರ್ಯಾಯವಾಗಿ ಗರ್ಭನಿರೋಧಕ ಉಪಯೋಗಿಸುವುದು ಹೆಚ್ಚಾಗುತ್ತಿದೆ; ಮತ್ತು ತಾಯಂದಿರ ಆರೈಕೆಗಾಗಿ ಇರುವ ಮಾಸ್ಕೊ ಇನ್ಸ್‍ಸ್ಟಿಟ್ಯೂಟ್ ಫಾರ್ ದಿ ಪ್ರೊಟೆಕ್ಷನ್ ಆಫ್ ಮದರ್ಸ್ ತಂದಿರುವ ಪುಸ್ತಕಗಳಲ್ಲಿ ಗರ್ಭನಿರೋಧಕ ಒಂದು ಪರ್ಯಾಯ ಎಂದು ಸ್ಪಷ್ಟವಾಗಿ ಪರಿಗಣಿಸಲಾಗಿದೆ.  ಅದು ಅಪೇಕ್ಷಿತ ಪರ್ಯಾಯವೇ ಎಂಬುದು ಸ್ಪಷ್ಟವಾಗಿಲ್ಲ; ಹೌದೆಂದು ಕೆಲವು ಸೋವಿಯತ್ ವೈದ್ಯರು ಹೇಳಿದರೆ, ಬೇರೆ ಕೆಲವರು ಇಲ್ಲವೆನ್ನುತ್ತಾರೆ; ಇನ್ನು ಕೆಲವರು, ಇಂಗ್ಲೆಂಡ್ ಜನರಂತೆ ಎರಡೂ ಇರಬಾರದು ಎನ್ನುತ್ತಾರೆ. ಯವುದೇ ರೀತಿಯಲ್ಲಾದರೂ, ಜನನದ ನಿಯಂತ್ರಣವನ್ನು ವ್ಯಾಪಕವಾಗಿ ಉಪಯೋಗಿಸಲು ಎರಡು ಕಷ್ಟಗಳಿವೆ: ಮೊದಲನೆಯದಾಗಿ, ಅದನ್ನು ಉಪಯೋಗಿಸಲು ಏನೇ ಆಗಲಿ ಸ್ವಲ್ಪಮಟ್ಟಿಗಾದರೂ ಜಾಣತನ ಮತ್ತು ಜಾಗರೂಕತೆ ಬೇಕು, ಅದನ್ನು ಹಿಂದುಳಿದ ಪ್ರದೇಶಗಳಲ್ಲಿರುವ ಗ್ರಾಮೀಣ ಜನರಿಂದ ನಿರೀಕ್ಷಿಸುವುದು ಕಷ್ಟ; ಎರಡನೆಯದಾಗಿ, ಗರ್ಭನಿರೋಧಕ ವಸ್ತುಗಳನ್ನು ಸೋವಿಯತ್ ಯೂನಿಯನ್‍ನಲ್ಲೇ ತಯಾರಿಸಲಾಗುವುದು ಮತ್ತು ಅವುಗಳು ಯಾವಾಗಲೂ ನಂಬಲರ್ಹವಲ್ಲ. ಅದೇನೇ ಇರಲಿ, ಸೋವಿಯತ್ ಯೂನಿಯನ್‍ನಲ್ಲಿ ಈ ವಿಷಯಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ‘ಲೈಂಗಿಕ ಶಿಕ್ಷಣ’ವನ್ನು ನೀಡುತ್ತಿದ್ದಾರೆ; ಅದನ್ನು ಮಾಸ್ಕೊದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಿದ್ದಾರೆ; ಉದಾಹರಣೆಗೆ, ಒಡೆಸ್ಸಾದಲ್ಲಿ ಮದುವೆಯ ಬಗ್ಗೆ (ಅದು ಯಾವುದೇ ರೀತಿಯ ಮದುವೆಯಾಗಿರಬಹುದು) ಯೋಚಿಸುವ ಯುವಜನರು ವೈದ್ಯರನ್ನು ಕಾಣಬೇಕೆನ್ನುವುದು ಸಾಮಾನ್ಯ ನಿಯಮ. ಅದು ಕಾನೂನಲ್ಲ, ಆದರೂ ವೈದ್ಯರನ್ನು ಭೇಟಿ ಮಾಡೇ ಮಾಡುತ್ತಾರೆ ಮತ್ತು ಸೋವಿಯತ್ ರಷ್ಯಾದ ಜೀವನದಲ್ಲಿ ಬಲವಾದ ಗುಣಲಕ್ಷಣವಾದ ಅರೆ-ಸಾರ್ವಜನಿಕ ಶಾಲಾ ನೀತಿಸಂಹಿತೆ ಮೂಲಕ ಒತ್ತಾಯ ಮಾಡಲಾಗುತ್ತದೆ. ಜೊತೆಗೆ, ಕೈಗಾರಿಕೆಗಳಲ್ಲಾಗಲಿ, ಇನ್ನೆಲ್ಲೇ ಆಗಲಿ, ಕ್ಲಿನಿಕ್‍ಗಳಲ್ಲಿ ಜನನ ನಿಯಂತ್ರಣದ ಕುರಿತು ಚಿತ್ರಸಹಿತ ವಿವರಣೆಯ ಪೋಸ್ಟರ್‍ಗಳಿರುತ್ತವೆ ಮತ್ತು ಅದರ ಬಗ್ಗೆ ಉಪನ್ಯಾಸ ಮತ್ತು ಮಾಹಿತಿಗಳನ್ನು ನೀಡುತ್ತಾರೆ; ನಾವು ಈಗಾಗಲೇ ತಿಳಿಸಿದ ಮಾಸ್ಕೊದಲ್ಲಿರುವ ಸಂಸ್ಥೆಗಳಂತಹ ಕೆಲವು ಸಂಸ್ಥೆಗಳು ಸಲಹೆ ಮತ್ತು ವಿಚಾರಣೆಗಳ ಬಹಳ ವಿಸ್ತೃತವಾದ ವ್ಯವಸ್ಥೆಯನ್ನು ಹೊಂದಿವೆ; ಅದರಲ್ಲಿ ವೈದ್ಯಕೀಯ ತಪಾಸಣೆ ನಡೆಯುತ್ತಿರುವಾಗ ಕ್ರಮೇಣವಾಗಿ ವೈದ್ಯರು ಬಹಳ ದೊಡ್ಡದಾದ ಮತ್ತು ಲೆಕ್ಕವಿರದಷ್ಟು ವಿವರಗಳನ್ನು ತುಂಬಬೇಕಾದ ನಮೂನೆಗಳಿವೆ.
(2) ಮಗುವಿನ ಜನನ
ಈ ವಿಷಯದ ಋಣಾತ್ಮಕ ಅಂಶದಿಂದ ಮಗುವಿನ ಜನನದ ವ್ಯವಸ್ಥೆಯನ್ನು ನೋಡೋಣ. ಇಲ್ಲಿ ಮಾತೃತ್ವವನ್ನು ಕಾಪಾಡಲು ಸೋವಿಯತ್ ಕಾನೂನುಗಳು ಪ್ರಪಂಚದಲ್ಲೇ ಅತ್ಯಂತ ಉದಾರವಾದ ಅವಕಾಶಗಳನ್ನು ಮಾಡಿಕೊಟ್ಟಿವೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ದೈಹಿಕ ಶ್ರಮ ಹಾಕುವ ಪ್ರತಿಯೊಬ್ಬ ಉದ್ಯೋಗಸ್ಥೆಯೂ* (*ಈಉದ್ದೇಶಕ್ಕಾಗಿ ಕೆಲವೊಂದು ಉದ್ಯೋಗಗಳನ್ನು ಉದಾ: ವೈದ್ಯವೃತ್ತಿ, ದೈಹಿಕ ವೃತ್ತಿಗಳೆಂದು ವಿಭಾಗಿಸಲಾಗಿದೆ) ಪೂರ್ತಿ ವೇತನದೊಂದಿಗೆ ನಾಲ್ಕು ತಿಂಗಳ ರಜೆಯನ್ನು – ಮಗು ಹುಟ್ಟುವ ಮುನ್ನ ಮತ್ತು ನಂತರ ಎರೆಡೆರೆಡು ತಿಂಗಳು - ನೀಡಬೇಕೆಂದು ರಷ್ಯನ್ ಕಾನೂನು ಹೇಳುತ್ತದೆ. ಕಛೇರಿಗಳಲ್ಲಿ ಕೆಲಸ ಮಾಡುವವರಿಗೆ ರಜೆಯ ಕಾಲಾವಧಿಯು 12 ವಾರಗಳಾಗುತ್ತದೆ. ಇದರ ಜೊತೆಗೆ, ನವಜಾತ ಶಿಶುವಿಗೆ ಬೇಕಾದ ಬಟ್ಟೆಬರೆ, ಹಾಸಿಗೆ, ಮುಂತಾದವುಗಳನ್ನು ಕೊಳ್ಳಲು ಅಸಮರ್ಥರಾದ ತಾಯಂದಿರಿಗೆ ‘ತಾಯ್ತನ’ಕ್ಕೆ ಮತ್ತು ಹೊರಗಿನ ಆಹಾರ ತಿನ್ನಿಸಲು ವಿಶೇಷ ಭತ್ಯೆಗಳನ್ನು ನೀಡಲಾಗುವುದು. ಈ ರೀತಿಯ ಕೆಲವು ಸಹಾಯಗಳನ್ನು ಬಂಡವಾಳಶಾಹಿ ರಾಷ್ಟ್ರಗಳಲ್ಲೂ ಕೆಲವೊಮ್ಮೆ ಕೊಡುತ್ತಾರೆ; ಆದರೆ ಆ ದೇಶಗಳಲ್ಲಿ ಅದಕ್ಕೆ “ದಾನ” ಎಂಬ ಹೆಸರಿರುವುದು ಸಹಜ. ತಾಯಿಯು ಸಾಧ್ಯವಾದಷ್ಟೂ ಅತ್ಯಂತ ಅನಾನುಕೂಲವಾದ ಸಮಯದಲ್ಲಿ “ಕರುಣಾಮಯಿ ಮಹಿಳೆ”ಯರಿಂದ ಕಾಣಿಕೆಗಳನ್ನು ಸ್ವೀಕರಿಸಿ, ಅವರಿಗೆ ನಮಸ್ಕರಿಸಿ ಅಭಾರಿಯಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ; ಸೋವಿಯತ್ ರಷ್ಯಾದಲ್ಲಿ ಅದು ದಾನವಲ್ಲ, ಹಕ್ಕು.
ಪ್ರಸವಪೂರ್ವ ಆರೈಕೆಗಾಗಿ ಪ್ರತಿಯೊಬ್ಬ ಗರ್ಭಿಣಿಯೂ ಆಕೆಯ ಕಾರ್ಖಾನೆ ಅಥವಾ ಕಛೇರಿಯ ಕ್ಲಿನಿಕ್ ಅಥವಾ ಜಿಲ್ಲಾ ಕ್ಲಿನಿಕ್‍ಗೆ ಬರಬೇಕೆಂಬ ನಿರೀಕ್ಷೆಯಿದೆ; ಅದು ಅವರು ತಮ್ಮ ಸಂಬಳವನ್ನು ಪಡೆಯುವುದಕ್ಕೆ ಇರುವ ಷರತ್ತು ಎಂದು ತಿಳಿಸಿದರು. ಅಂತಹ ಕ್ಲಿನಿಕ್‍ಗಳಲ್ಲಿ ಪರಿಣಿತಿಯಲ್ಲಿ, ಕಾರ್ಯದಕ್ಷತೆಯಲ್ಲಿ ಮತ್ತು ಅದನ್ನು ನಡೆಸುವವರ ಅನುಭವದಲ್ಲಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗಳಿರುತ್ತವೆ ಎನ್ನುವುದು ಸತ್ಯ. ನಾನು ನೋಡಿದ ಕ್ಲಿನಿಕ್‍ಗಳಲ್ಲಿ, ಲೆನಿನ್‍ಗ್ರಾದ್‍ನ ಲಾವ್ರೊವ್ ರಸ್ತೆಯಲ್ಲಿರುವ ಸ್ಮೊಲ್ನಿ ಜಿಲ್ಲೆಯಲ್ಲಿ ಸೇವೆ ಮಾಡುವ ಜಿಲ್ಲಾ ಕ್ಲಿನಿಕ್ ಅತ್ಯುತ್ತಮವಾದದ್ದು; ಅಲ್ಲಿ ಸಮಾಲೋಚನೆಗಾಗಿ ಗರ್ಭಿಣಿಯರು ಹಾಗೂ ಬಾಣಂತಿಯರು ನಿರಂತರವಾಗಿ ಹೊಳೆಯಂತೆ ಹರಿದು ಬರುತ್ತಾರೆ. ಜೊತೆಗೆ ನಿರೀಕ್ಷಣಾ ಕೊಠಡಿಗಳಲ್ಲಿ ಮತ್ತು ಬೇರೆ ಕಡೆಗಳಲ್ಲೂ ಸಹ ಬಹಳ ಪರಿಣಾಮಿಕಾರಿಯಾದ ಪೋಸ್ಟರ್‍ಗಳು ಇದ್ದವು. ಇವುಗಳನ್ನು ಋತುಗಳಿಗೆ ತಕ್ಕಂತೆ ಬದಲಾವಣೆ ಮಾಡುತ್ತಾರೆ. ಅವುಗಳು ಆಗಸ್ಟ್‍ನಲ್ಲಿ, ಮುಖ್ಯವಾಗಿ ನೊಣಗಳಿಂದ ಆಹಾರ ಪದಾರ್ಥಗಳು ಹಾಳಾಗುವ ಬಗ್ಗೆ, ಇನ್ನೂ ಮುಂತಾದ ವಿಷಯಗಳ ಬಗ್ಗೆ ತಿಳಿಸುತ್ತವೆ. ತಾಯಿಯು ಮಗು ಹುಟ್ಟಿದ ನಂತರ ಉದ್ಯೋಗಕ್ಕೆ ಹೋಗದಿದ್ದರೂ ಮಗುವಿನ ಆರೈಕೆಗಾಗಿ ವೇತನ ಪಡೆಯುತ್ತಾಳೆ. ಆ ಕಾಲಾವಧಿಯಲ್ಲೂ ಆಕೆ ಮಗುವಿನೊಂದಿಗೆ ಕ್ಲಿನಿಕ್‍ಗೆ ಕಾಲಕಾಲಕ್ಕೆ ಬರುವುದು ಕಡ್ಡಾಯ. ಲೆನಿನ್‍ಗ್ರಾದ್, ಮಾಸ್ಕೊ ಮತ್ತು ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟೂ ಕೇಂದ್ರಗಳಲ್ಲಿ ತಾಯಂದಿರು ಸಲಹೆಗಾಗಿ ಕ್ಲಿನಿಕ್‍ಗೆ ಬರುವಂತೆ ಉತ್ತೇಜಿಸಲು ಅನುಸರಣಾ ವಿಧಾನಗಳಿವೆ; ಜೊತೆಗೆ, ಕ್ಲಿನಿಕ್‍ನ ಸಿಬ್ಬಂದಿಗಳು ತಾಯಂದಿರ ಮನೆಗಳಿಗೇ ಭೇಟಿ ನೀಡಿ, ಅವರು ಹೇಗೆ ಚೇತರಿಸಿಕೊಳ್ಳುತ್ತಿದ್ದಾರೆಂದು ಗಮನಿಸುತ್ತಾರೆ. ಮನೆಗೆ ಭೇಟಿ ನೀಡುವ ಸೇವೆಯು ಎಷ್ಟರಮಟ್ಟಿಗೆ ನಡೆಯುತ್ತಿದೆ ಎನ್ನುವುದು ಸಿಬ್ಬಂದಿಯ ಲಭ್ಯತೆಯ ಮೇಲೆ ಅವಲಂಬಿತವಾಗಿದೆ; ಆದರೆ ಸಾಮಾನ್ಯವಾಗಿ ಹೇಳುವುದಾದರೆ, ಈ ವಿಷಯದಲ್ಲಾಗಲಿ ಅಥವಾ ಬೇರೆ ವಿಷಯದಲ್ಲಾಗಲಿ ರಷ್ಯನ್ ಆರೋಗ್ಯ ವ್ಯವಸ್ಥೆಯು ‘ಪ್ರಸವ ನಂತರ’ದ ಆರೈಕೆಗೆ ಮಹತ್ವ ನೀಡುವುದನ್ನು ತುಂಬಾ ಉತ್ತೇಜಿಸುತ್ತದೆ.
ಮಕ್ಕಳ ಜೀವನವನ್ನು ಕಾಪಿಟ್ಟುಕೊಳ್ಳುವ ಮತ್ತು ತಾಯಂದಿರ ಸೌಕರ್ಯ ಹಾಗೂ ಸಂತೋಷವನ್ನು ಹೆಚ್ಚಿಸುವ ಮಾರ್ಗವಾದ ‘ಸಲಹಾ ಸೇವೆ’ಯ ಬಗ್ಗೆ ಅತಿಶಯದಿಂದ ಮಾತನಾಡಲು ಸಾಧ್ಯವೇ ಇಲ್ಲ. ಅದರ ಕುರಿತು ಅಂಕಿಅಂಶಗಳನ್ನು ಪಡೆಯುವುದು ಸುಲಭವಲ್ಲ; ಆದರೆ ನಾವು ಗಮನಿಸಬೇಕಾದ ಅಂಶವೆಂದರೆ, 1910ರಲ್ಲಿ (ಒಂದು ವರ್ಷದಲ್ಲಿ) ಯುರೋಪಿಯನ್ ರಷ್ಯಾದಲ್ಲಿ ಶಿಶುಮರಣದ ಪ್ರಮಾಣವು ಸಾವಿರಕ್ಕೆ ಇನ್ನೂರ ಎಂಭತ್ತೈದು ಇತ್ತು; 1927ರ ಹೊತ್ತಿಗೆ ಅದು ನೂರ ಎಂಬತ್ತನಾಲ್ಕಿಗೆ ಬಂದಿತು; 1928ರಲ್ಲಿ ಲೆನಿನ್‍ಗ್ರಾದ್‍ನಲ್ಲಿ ನೂರ ಮುವತ್ತೇಳಕ್ಕೆ ಮತ್ತು ಮಾಸ್ಕೊದಲ್ಲಿ 128ಕ್ಕೆ ಇಳಿಯಿತು, ಇನ್ನೂ ಇಳಿಯುತ್ತದೆ ಎನ್ನುತ್ತಾರೆ; ಹಾಗಿದ್ದರೂ ಸಹ, ಬ್ರಿಟನ್‍ಗಿಂತಲೂ ಸ್ವಲ್ಪ ಹೆಚ್ಚಾಗೇ ಇದೆ. ಬಹಳ ಹಿಂದುಳಿದ ರೈತಾಪಿ ದೇಶದ ಪರಿಸ್ಥಿತಿಯಿಂದ ಹೊರಬರುತ್ತಿರುವ ಒಂದು ದೇಶದಲ್ಲಿ ಈ ಅಂಕಿಅಂಶಗಳು ಮಹತ್ವಪೂರ್ಣವಾದವು. ಬಹುಶಃ ಇನ್ನೂ ಹೆಚ್ಚಿನ ಗಮನಾರ್ಹವಾದ ವಿಷಯವೆಂದರೆ, ನಾರ್ಕೊಮ್ಸ್‍ದ್ರಾವ್ ಅಧಿಕಾರಿಗಳ ಪ್ರಕಾರ, ಕಜûಕಿಸ್ತಾನ್ ಮತ್ತು ಉಜ್óಬೆಕಿಸ್ತಾನ್, ಮುಂತಾದ ಸ್ವತಂತ್ರ ರಿಪಬ್ಲಿಕ್‍ಗಳಂತಹ ಹಿಂದುಳಿದ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯದ ದೊಡ್ಡ ಭಾಗ ಆರೋಗ್ಯ ಶಿಕ್ಷಣಕ್ಕೆ ಮತ್ತು ಪ್ರಚಾರಕ್ಕೆ ಖರ್ಚಾಗುತ್ತದೆ; ಪ್ರಚಾರವು ಹೆಚ್ಚಿನಾಂಶ ಪೋಸ್ಟರ್ ಮತ್ತು ಪ್ಲೆಕಾರ್ಡ್ ಮೂಲಕ ನಡೆಯುತ್ತದೆ. (ಇಲ್ಲಿ ವಿವಿಧ ರೀತಿಯ ತಾಯಿ ಮತ್ತು ಮಕ್ಕಳ ಸಂರಕ್ಷಣಾ ಸಂಸ್ಥೆಗಳಂತೆ, ಶಿಶುಜೀವನ ಮತ್ತು ಆರೋಗ್ಯ ಪರಿಸ್ಥಿತಿಗಳ ವಸ್ತುಸಂಗ್ರಹಾಲಯದ ಪಾತ್ರವನ್ನೂ ಗಮನಿಸಬೇಕು. ರಷ್ಯಾದಲ್ಲಿ ಈ ರೀತಿಯ ವಸ್ತುಸಂಗ್ರಹಾಲಯವು ಕೇವಲ ಐತಿಹಾಸಿಕ ಸ್ಥಳ ಅಥವಾ ಅಮೂರ್ತವಾದ ಆಸಕ್ತಿಯಾಗದೆ ಪ್ರಾಯೋಗಿಕವಾದ ಶೈಕ್ಷಣಿಕ ಸಂಸ್ಥೆಯಾಗಿದೆ.) ಜನಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳಕ್ಕೆ ಇತರ ಕಾರಣಗಳಂತೆ ಮಕ್ಕಳನ್ನು ಅಕಾಲ ಸಾವಿನಿಂದ ಪಾರುಮಾಡುವುದೂ ಸಹ ಒಂದು ಕಾರಣ.
ಮಗುವಿನ ಜನನದ ಬಗ್ಗೆ ಹೇಳುವುದಾದರೆ, ಯೂನಿಯನ್‍ನ ಮುಖಂಡರು ಘೋಷಿಸಿರುವ ಉದ್ದೇಶವೆಂದರೆ, ಸಾಧ್ಯವಾದಷ್ಟು ಮಗುವಿನ ಜನನ ಆಸ್ಪತ್ರೆಯಲ್ಲಾಗಬೇಕು. ಇದನ್ನು ಕೇಳಿ ಕೆಲವರು ಬೆಚ್ಚಿಬೀಳಬಹುದು; ಅವರಿಗೆ ರಷ್ಯಾದ ಕಾರ್ಮಿಕರ ಇಕ್ಕಟ್ಟಿನ ಪರಿಸ್ಥಿತಿ ತಿಳಿದಿಲ್ಲ; ಅವರು ತಮ್ಮ ಶತಮಾನಗಳ ಪರಿಸ್ಥಿತಿಯಿಂದ ಪೂರ್ಣವಾಗಿ ಮುಕ್ತವಾಗಿಲ್ಲ; ನಮ್ಮ ಪಕ್ಷದ ಸದಸ್ಯರೊಬ್ಬರು ಹೇಳುವಂತೆ, “ಅವರು ಇಂಗ್ಲೆಂಡಿನ ಹಂದಿಗೂಡಿಗಿಂತ ಕಡೆಯಾದ ಮನೆಗಳಲ್ಲಿ ವಾಸಿಸುತ್ತಾರೆ.” ಅವರ ಉದ್ದೇಶವಿನ್ನೂ ಪೂರ್ತಿಯಾಗಿಲ್ಲ; ಆದರೆ ಅದನ್ನು ಎರಡನೇ ಪಂಚವಾರ್ಷಿಕ ಯೋಜನೆಯಲ್ಲಿ ಸಾಧಿಸಬಹುದು ಎಂಬ ಆಶಯವಿದೆ. ಒಳರೋಗಿಗಳ ಆಸ್ಪತ್ರೆಯನ್ನು ಜನ ಮತ್ತು ವಸ್ತುಗಳು ಸಿಕ್ಕಿದಷ್ಟೂ ಬೇಗ ಕಟ್ಟುತ್ತಿದ್ದಾರೆ; ಆ ಕೆಲಸಕ್ಕೆ ಮಹಿಳೆಯರೂ ಸೇರಿಕೊಳ್ಳಬೇಕೆಂದು ಉತ್ತೇಜಿಸುತ್ತಿದ್ದಾರೆ. ಇಂಗ್ಲಿಷ್ ಗುಣಮಟ್ಟಗಳಿಗೆ ಒಗ್ಗಿಹೋಗಿರುವ ಕಾರ್ಮಿಕನಿಗೆ ಬಹುಶಃ ಈ ಆಸ್ಪತ್ರೆಗಳು ಒರಟಾಗಿರುವಂತೆ ಕಾಣಿಸಬಹುದು; ಉದಾಹರಣೆಗೆ, ಸಾಮಾನ್ಯವಾಗಿ ಗ್ರಾಹಕ ವಸ್ತುಗಳ ಕೊರತೆಯ ಭಾಗವಾದ ಅರಿವಳಿಕೆ, ಸೋಪು, ಬಟ್ಟೆಗಳ ಕೊರತೆಯಿದೆ; ಇದರ ಕುರಿತು ಈ ಪುಸ್ತಕದ ಇತರೆ ಲೇಖಕರು ಗಮನ ಸೆಳೆದಿದ್ದಾರೆ. ಅರಿವಳಿಕೆಯನ್ನು ಶಿಶುಜನನ (ಅಥವಾ ಗರ್ಭಪಾತ) ಸಂದರ್ಭದಲ್ಲಿ ಸಾಮಾನ್ಯವಾಗಿ ಬಳಸುವುದಿಲ್ಲ; ಇದನ್ನು ಒಪ್ಪಿಕೊಳ್ಳುತ್ತಾ ರಷ್ಯನ್ ವೈದ್ಯರು ಹೇಳುತ್ತಾರೆ, “ಅದರ ಅವಶ್ಯಕತೆಯಿಲ್ಲ ಅಥವಾ ಅದರ ನಿರೀಕ್ಷೆಯೂ ಇಲ್ಲ.” ಇದು ರಷ್ಯಾದ ಪೂರ್ವ ಇತಿಹಾಸವನ್ನು ನೋಡಿದರೆ ಸರಿಯೇನೋ; ಆದರೆ ನಾವು ಕರೆಯುವ ‘ನಾಗರಿಕತೆ’ಯು ಜನ ಸಮುದಾಯಕ್ಕೂ ವಿಸ್ತರಿಸುತ್ತಿರುವಾಗ, ಅರಿವಳಿಕೆ ಮತ್ತು ಇತರ ಔಷಧಗಳ ಬೇಡಿಕೆಯು ಹೆಚ್ಚುತ್ತಿದೆ ಮತ್ತು ವಿದೇಶಗಳಿಂದ ಪೂರೈಕೆಯಾಗದೆ ಹೋದರೆ ಕಷ್ಟಗಳು ಹೆಚ್ಚುವ ಸಾಧ್ಯತೆಗಳಿವೆ. ರಷ್ಯನ್ ಆರೋಗ್ಯ ಅಧಿಕಾರಿಗಳು ಮುಖ್ಯವಾದ ಔಷಧಿಗಳಲ್ಲಿ ಸ್ವಂತ ಕಾಲಮೇಲೆ ನಿಲ್ಲಬಹುದೆಂಬ ಭರವಸೆ ಹೊಂದಿದ್ದಾರೆ; ಆ ಪರಿಸ್ಥಿತಿ ಈಗಿಲ್ಲ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಮಲೇರಿಯಾ ರೋಗವನ್ನು ಹೊರಗಟ್ಟಲು ತುರ್ತು ಅವಶ್ಯಕವಾದ ಕ್ವಿನೈನ್, ಬಂಡವಾಳಶಾಹಿಗಳ ಏಕಸ್ವಾಮ್ಯಾಧಿಪತ್ಯದಿಂದಾಗಿ ಬಹಳ ಕಷ್ಟಕರವಾಗಿದೆ; ರಷ್ಯನ್ನರು ಸಿಂಥೆಟಿಕ್ ಕ್ವಿನೈನ್ ಅನ್ನು ಉತ್ಪಾದಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

 - ಎಸ್.ಎನ್.ಸ್ವಾಮಿ 



No comments:

Post a Comment