Sunday 11 June 2017

ಪ್ರಸ್ತುತ - ರಾಧೆಯ ಬದುಕಿನ ಪುಟದೊಳಗೆ

                     
              ಬದುಕಿನ ಬಗ್ಗೆ ಸುಂದರ ಕನಸುಗಳನ್ನು ಕಾಣುತ್ತಾ ಜಿಗಿಯುತ್ತಾ. ನಲಿಯುತ್ತಾ ಆಟವಾಡುತ್ತಿದ್ದ, ಮುಂದೆ ಓದಿ ಒಳ್ಳೆಯ ಕೆಲಸ ಪಡೆಯಬೇಕೆಂದು ಬಯಸಿದ ರಾಧೆ ಇಂದು ಇದೆಲ್ಲದ್ದರಿಂದ ದೂರ ಉಳಿದಿದ್ದಾಳೆ, ಒಂದೆಡೆ ಹತಾಶೆ, ಮತ್ತೊಂದೆಡೆ ಯಾವುದರಲೂ ಆಸಕ್ತಿಯೇ ಇಲ್ಲ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪುಟ್ಟ ರಾಧೆಯು ತನ್ನಗಾದ ನೋವಿನ ಘಟನೆಯಿಂದ ಹೊರಬರಲಾರದೆ ನೊಂದಿರುವಳು.
        ಮನೆಯಲ್ಲಿ ಕಡುಬಡತನವಿದ್ದು ಒಂದು ಹೊತ್ತಿನ ಊಟಕ್ಕು ಕಷ್ಟವಾಗುತ್ತಿತ್ತು. ಅಮ್ಮ ಹೇಗೋ ಕೂಲಿ ಮಾಡಿ ನಾಲ್ಕು ಮಕ್ಕಳ ಹೊಟ್ಟೆ ತುಂಬಿತ್ತಿದ್ದಳು. ಆಗಷ್ಟೇ ಯೌವನಕ್ಕೆ ಕಾಲಿಟ್ಟ ರಾಧೆ ಓದಬೇಕೆಂಬ ಕನಸು ಹೊತ್ತು ಮುನ್ನಡೆಯುತ್ತಿದ್ದಳು, ತನ್ನ ಓದಿನ ಜೊತೆಗೆ ಅಮ್ಮನಿಗೆ ಸಹಾಯ ಮಾಡುತ್ತಾ ಬದುಕುತ್ತಿದ್ದ ಛಲಗಾತಿ ರಾಧೆ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಳು. ಅಮ್ಮನಿಗೂ ಆತಂಕ ಆದರೂ ಮಗಳ ಭವಿಷ್ಯಕ್ಕೆ, ಕನಸಿಗೆ ಎಂದೂ ಹಿಂದೇಟುಹಾಕಿದವಳಲ್ಲ. 
ಹೀಗೆ ಕನಸ್ಸನ್ನು ಸಾಕಾರಗೂಳಿಸಿಕೊಳ್ಳುವತ್ತ ಶತ ಪ್ರಯತ್ನ ಮಾಡುತ್ತಿದ್ದ ರಾದೆಯ ಬದುಕಿನಲ್ಲಿ ಒಂದು ಕಹಿ ಘಟನೆ ನಡದೇ ಹೋಯಿತು. ತನ್ನ ಕನಸ್ಸಿಗೆ ಬೆಂಬಲವಾಗಿದ್ದ ಸುಶೀಲಾ, ಪರಿಚಯಸ್ಥನೆಂದು ಪರಿಚಯಮಾಡಿಕೊಟ್ಟ ರಾಮು ಅವಳ ಬಾಳಿಗೆ ಮುಳ್ಳಾಗುತ್ತಾನೆಂದು ಸ್ವತಃ ಸುಶೀಲಾಳೆ ನಂಬಿರಲಿಲ್ಲ. ಅಮಾಯಕಳಾಗಿದ್ದ, ಸುಂದರಳಾಗಿದ್ದ ರಾಧೆಯ ಮೇಲೆ ಈ ಕಾಮುಕನ ದೃಷ್ಟಿ ಬೀಳುತ್ತದೆ ಎಂದು ತಿಳಿದಿರಲಿಲ್ಲ. 
ಅಮ್ಮನಿಲ್ಲದ ಹೊತ್ತಿನಲ್ಲಿ ಬಂದು ಕಾಳಜಿಯಿರುವವನಂತೆ ನಟಿಸುತ್ತಿದ್ದ ರಾಮು. ಮೊದಮೊದಲು ರಾಧೆಯೂ ಸಹ ಪರಿಚಯಸ್ಥನೆಂದು  ಸಲುಗೆಯಿಂದ ಇದ್ದಳು. ಆದರೆ ಕ್ರಮೇಣ ಅವನ ವರ್ತನೆಗಳಲ್ಲಿ ಬದಲಾವಣೆ ಕಂಡು ಮುಜುಗರ ಪಟ್ಟಿದ್ದಲ್ಲದೆ, ಅವನ ಬರುವಿಕೆಯು ಅವಳಿಗೆ ಬೇಸರವೂ ತರಿಸಿತ್ತು. ಅಮ್ಮನಲ್ಲಿ ಹೇಳಿಕೊಳ್ಳೋಣವೆಂದರೆ ಎನೋ ಭಯ, ಸಂಕೋಚ ಅಡ್ಡಿಯಾಗುತ್ತಿತ್ತು.. 
ಹೀಗೊಂದು ದಿನ ಶಾಲೆಯಿಂದ ಬಂದ ರಾಧೆಯು ಅನಿರೀಕ್ಷತವಾಗಿ ಆ ಕಾಮುಕ ರಾಮುವಿನ ಬಲೆಗೆ ಬೀಳುತ್ತಾಳೆ. ಏನಾಗುತ್ತಿದೆಯಂದು ಅರಿಯುವ ಮುನ್ನವೆ ಆ ಪುಟ್ಟ ಹೃದಯಕ್ಕೆ ಘಾಸಿಯಾಗಿತ್ತು. ಅಮ್ಮನಿಗೆ ಹೇಳಿದರೆ ನೆಟ್ಟಗಿರಲ್ಲ ಎಂಬ ಬೆದರಿಕೆ ಬೇರೆ. 
ಕ್ರಮೇಣ ದಿನ ಕಳೆದಂತೆ ಯಾವುದರಲ್ಲೂ ಆಸಕ್ತಿ ಇಲ್ಲದವಳಂತೆ ಕಾಣುತ್ತಿದ್ದ ಮಗಳನ್ನು ಗಮನಿಸಿದ ಅಮ್ಮ, "ರಾಧಾ ಏನಾಯಿತಮ್ಮ?" ಎಂದು ಕೇಳಿದಾಗ ಹೇಳಲ್ಲಿಕ್ಕೆ ಹಿಂಜರಿಕೆ, ಅಸಹಾಯಕತೆ, ಬೆದರಿಕೆ ಎಲ್ಲವೂ ಕಣ್ಮುಂದೆ ಬಂದು ಬಿಕ್ಕಿ ಬಿಕ್ಕಿ ಅಳತೂಡಗಿದಳು. 
ಪುಟ್ಟ ಕಂದನ ಸಂತೈಸಿ  ದೃಡ ನಿಶ್ಚಯಕ್ಕೆ ಬಂದು ಕೈಯಲ್ಲಿ ಮಚ್ಚು ಹಿಡಿದು ಹೊರಟೇ ಬಿಟ್ಟಳು, ರಾಧಾಳ ತಾಯಿಯ ಈ ರಣಚಂಡಿ ಅವತಾರವನ್ನು ನೋಡಿದ ರಾಮು ಅಲ್ಲಿಂದ ಕಾಲ್ಕಿತ್ತು ಓಡಿಹೋದ. ಇತ್ತ ಸೀದಾ ಮನೆಗೆ ಬಂದ ತಾಯಿ ರಾಧೆಯನ್ನು ಕರೆದುಕೊಂಡು ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿ ಮಗಳನ್ನು ಅಪ್ಪಿ ಕಣ್ಣೀರು ಸುರಿಸಿದಳು. 
ಆ ಕಣ್ಣೀರಿನಲ್ಲಿ ನೂರು ನೋವು ವೇದನೆ ಎದ್ದು ಕಾಣುತ್ತಿತ್ತು, ಇನ್ಯಾವುದೇ ಮಕ್ಕಳಿಗೂ ಹೀಗಾಗಬಾರದು ಎಂದು ಎಂದು ತನ್ನ ನೋವ ನುಂಗುತ್ತಲೇ, ರಾಮುವಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದಳು. ಪುಟ್ಟ ರಾಧೆಯು ತನ್ನ ಬದುಕಿನಲ್ಲಾದ ಈ ದುರ್ಘಟನೆಯನ್ನು ಮರೆಯಲ್ಲಿಕ್ಕಾಗದೆ, ತೀವ್ರ ಆಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುವಳು.
              ಈ ರಾಧೆ ಮತ್ತು ಇವಳಂತಿರುವ ಎಲ್ಲರಿಗೂ ನ್ಯಾಯ ಸಿಗುವುದೇ ಈ ಸಮಾಜ ಬದಲಾಗುವುದೇ?  ಪುಟ್ಟ ಮಕ್ಕಳ ಮೇಲಾಗುವ ದೌರ್ಜನ್ಯ ನಿಲ್ಲುವುದೇ? ಯಾರು ನೀಡುತ್ತಾರೆ ಈ ಪ್ರಶ್ನೆಗಳಿಗೆ ಉತ್ತರ- -- - -
  ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೀನಿ ನಾನೂ ಕೂಡ.


- ಗಿರಿಜಾ ಕೆ ಎಸ್ 


No comments:

Post a Comment