Showing posts with label ಗಿರಿಜಾ ಕೆ ಎಸ್. Show all posts
Showing posts with label ಗಿರಿಜಾ ಕೆ ಎಸ್. Show all posts

Sunday, 11 June 2017

ಪ್ರಸ್ತುತ - ರಾಧೆಯ ಬದುಕಿನ ಪುಟದೊಳಗೆ

                     
              ಬದುಕಿನ ಬಗ್ಗೆ ಸುಂದರ ಕನಸುಗಳನ್ನು ಕಾಣುತ್ತಾ ಜಿಗಿಯುತ್ತಾ. ನಲಿಯುತ್ತಾ ಆಟವಾಡುತ್ತಿದ್ದ, ಮುಂದೆ ಓದಿ ಒಳ್ಳೆಯ ಕೆಲಸ ಪಡೆಯಬೇಕೆಂದು ಬಯಸಿದ ರಾಧೆ ಇಂದು ಇದೆಲ್ಲದ್ದರಿಂದ ದೂರ ಉಳಿದಿದ್ದಾಳೆ, ಒಂದೆಡೆ ಹತಾಶೆ, ಮತ್ತೊಂದೆಡೆ ಯಾವುದರಲೂ ಆಸಕ್ತಿಯೇ ಇಲ್ಲ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಪುಟ್ಟ ರಾಧೆಯು ತನ್ನಗಾದ ನೋವಿನ ಘಟನೆಯಿಂದ ಹೊರಬರಲಾರದೆ ನೊಂದಿರುವಳು.
        ಮನೆಯಲ್ಲಿ ಕಡುಬಡತನವಿದ್ದು ಒಂದು ಹೊತ್ತಿನ ಊಟಕ್ಕು ಕಷ್ಟವಾಗುತ್ತಿತ್ತು. ಅಮ್ಮ ಹೇಗೋ ಕೂಲಿ ಮಾಡಿ ನಾಲ್ಕು ಮಕ್ಕಳ ಹೊಟ್ಟೆ ತುಂಬಿತ್ತಿದ್ದಳು. ಆಗಷ್ಟೇ ಯೌವನಕ್ಕೆ ಕಾಲಿಟ್ಟ ರಾಧೆ ಓದಬೇಕೆಂಬ ಕನಸು ಹೊತ್ತು ಮುನ್ನಡೆಯುತ್ತಿದ್ದಳು, ತನ್ನ ಓದಿನ ಜೊತೆಗೆ ಅಮ್ಮನಿಗೆ ಸಹಾಯ ಮಾಡುತ್ತಾ ಬದುಕುತ್ತಿದ್ದ ಛಲಗಾತಿ ರಾಧೆ ಎಲ್ಲರ ಮೆಚ್ಚುಗೆಗೂ ಪಾತ್ರಳಾಗಿದ್ದಳು. ಅಮ್ಮನಿಗೂ ಆತಂಕ ಆದರೂ ಮಗಳ ಭವಿಷ್ಯಕ್ಕೆ, ಕನಸಿಗೆ ಎಂದೂ ಹಿಂದೇಟುಹಾಕಿದವಳಲ್ಲ. 
ಹೀಗೆ ಕನಸ್ಸನ್ನು ಸಾಕಾರಗೂಳಿಸಿಕೊಳ್ಳುವತ್ತ ಶತ ಪ್ರಯತ್ನ ಮಾಡುತ್ತಿದ್ದ ರಾದೆಯ ಬದುಕಿನಲ್ಲಿ ಒಂದು ಕಹಿ ಘಟನೆ ನಡದೇ ಹೋಯಿತು. ತನ್ನ ಕನಸ್ಸಿಗೆ ಬೆಂಬಲವಾಗಿದ್ದ ಸುಶೀಲಾ, ಪರಿಚಯಸ್ಥನೆಂದು ಪರಿಚಯಮಾಡಿಕೊಟ್ಟ ರಾಮು ಅವಳ ಬಾಳಿಗೆ ಮುಳ್ಳಾಗುತ್ತಾನೆಂದು ಸ್ವತಃ ಸುಶೀಲಾಳೆ ನಂಬಿರಲಿಲ್ಲ. ಅಮಾಯಕಳಾಗಿದ್ದ, ಸುಂದರಳಾಗಿದ್ದ ರಾಧೆಯ ಮೇಲೆ ಈ ಕಾಮುಕನ ದೃಷ್ಟಿ ಬೀಳುತ್ತದೆ ಎಂದು ತಿಳಿದಿರಲಿಲ್ಲ. 
ಅಮ್ಮನಿಲ್ಲದ ಹೊತ್ತಿನಲ್ಲಿ ಬಂದು ಕಾಳಜಿಯಿರುವವನಂತೆ ನಟಿಸುತ್ತಿದ್ದ ರಾಮು. ಮೊದಮೊದಲು ರಾಧೆಯೂ ಸಹ ಪರಿಚಯಸ್ಥನೆಂದು  ಸಲುಗೆಯಿಂದ ಇದ್ದಳು. ಆದರೆ ಕ್ರಮೇಣ ಅವನ ವರ್ತನೆಗಳಲ್ಲಿ ಬದಲಾವಣೆ ಕಂಡು ಮುಜುಗರ ಪಟ್ಟಿದ್ದಲ್ಲದೆ, ಅವನ ಬರುವಿಕೆಯು ಅವಳಿಗೆ ಬೇಸರವೂ ತರಿಸಿತ್ತು. ಅಮ್ಮನಲ್ಲಿ ಹೇಳಿಕೊಳ್ಳೋಣವೆಂದರೆ ಎನೋ ಭಯ, ಸಂಕೋಚ ಅಡ್ಡಿಯಾಗುತ್ತಿತ್ತು.. 
ಹೀಗೊಂದು ದಿನ ಶಾಲೆಯಿಂದ ಬಂದ ರಾಧೆಯು ಅನಿರೀಕ್ಷತವಾಗಿ ಆ ಕಾಮುಕ ರಾಮುವಿನ ಬಲೆಗೆ ಬೀಳುತ್ತಾಳೆ. ಏನಾಗುತ್ತಿದೆಯಂದು ಅರಿಯುವ ಮುನ್ನವೆ ಆ ಪುಟ್ಟ ಹೃದಯಕ್ಕೆ ಘಾಸಿಯಾಗಿತ್ತು. ಅಮ್ಮನಿಗೆ ಹೇಳಿದರೆ ನೆಟ್ಟಗಿರಲ್ಲ ಎಂಬ ಬೆದರಿಕೆ ಬೇರೆ. 
ಕ್ರಮೇಣ ದಿನ ಕಳೆದಂತೆ ಯಾವುದರಲ್ಲೂ ಆಸಕ್ತಿ ಇಲ್ಲದವಳಂತೆ ಕಾಣುತ್ತಿದ್ದ ಮಗಳನ್ನು ಗಮನಿಸಿದ ಅಮ್ಮ, "ರಾಧಾ ಏನಾಯಿತಮ್ಮ?" ಎಂದು ಕೇಳಿದಾಗ ಹೇಳಲ್ಲಿಕ್ಕೆ ಹಿಂಜರಿಕೆ, ಅಸಹಾಯಕತೆ, ಬೆದರಿಕೆ ಎಲ್ಲವೂ ಕಣ್ಮುಂದೆ ಬಂದು ಬಿಕ್ಕಿ ಬಿಕ್ಕಿ ಅಳತೂಡಗಿದಳು. 
ಪುಟ್ಟ ಕಂದನ ಸಂತೈಸಿ  ದೃಡ ನಿಶ್ಚಯಕ್ಕೆ ಬಂದು ಕೈಯಲ್ಲಿ ಮಚ್ಚು ಹಿಡಿದು ಹೊರಟೇ ಬಿಟ್ಟಳು, ರಾಧಾಳ ತಾಯಿಯ ಈ ರಣಚಂಡಿ ಅವತಾರವನ್ನು ನೋಡಿದ ರಾಮು ಅಲ್ಲಿಂದ ಕಾಲ್ಕಿತ್ತು ಓಡಿಹೋದ. ಇತ್ತ ಸೀದಾ ಮನೆಗೆ ಬಂದ ತಾಯಿ ರಾಧೆಯನ್ನು ಕರೆದುಕೊಂಡು ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿ ಮಗಳನ್ನು ಅಪ್ಪಿ ಕಣ್ಣೀರು ಸುರಿಸಿದಳು. 
ಆ ಕಣ್ಣೀರಿನಲ್ಲಿ ನೂರು ನೋವು ವೇದನೆ ಎದ್ದು ಕಾಣುತ್ತಿತ್ತು, ಇನ್ಯಾವುದೇ ಮಕ್ಕಳಿಗೂ ಹೀಗಾಗಬಾರದು ಎಂದು ಎಂದು ತನ್ನ ನೋವ ನುಂಗುತ್ತಲೇ, ರಾಮುವಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದಳು. ಪುಟ್ಟ ರಾಧೆಯು ತನ್ನ ಬದುಕಿನಲ್ಲಾದ ಈ ದುರ್ಘಟನೆಯನ್ನು ಮರೆಯಲ್ಲಿಕ್ಕಾಗದೆ, ತೀವ್ರ ಆಘಾತಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುವಳು.
              ಈ ರಾಧೆ ಮತ್ತು ಇವಳಂತಿರುವ ಎಲ್ಲರಿಗೂ ನ್ಯಾಯ ಸಿಗುವುದೇ ಈ ಸಮಾಜ ಬದಲಾಗುವುದೇ?  ಪುಟ್ಟ ಮಕ್ಕಳ ಮೇಲಾಗುವ ದೌರ್ಜನ್ಯ ನಿಲ್ಲುವುದೇ? ಯಾರು ನೀಡುತ್ತಾರೆ ಈ ಪ್ರಶ್ನೆಗಳಿಗೆ ಉತ್ತರ- -- - -
  ಉತ್ತರ ಹುಡುಕುವ ಪ್ರಯತ್ನದಲ್ಲಿದ್ದೀನಿ ನಾನೂ ಕೂಡ.


- ಗಿರಿಜಾ ಕೆ ಎಸ್ 


Sunday, 7 May 2017

ಕವನ - ನನ್ನ ಹೋರಾಟ


ನನ್ನೊಳಗಿನ ದ್ವನಿ  ಹೇಳುತಿದೆ -
ನೀನು,
ನಿನ್ನ ಅಳುಕು , ಹಿಂಜರಿಕೆ
ಕುಗ್ಗುವ ಮನಸು, ಕೀಳರಿಮೆ
ಹೋರಾಡಬೇಕು ದಮನಿಸಬೇಕು

ನನ್ನ ಮನ ಹೇಳುತಿದೆ -
ನಿನ್ನ ಶಕ್ತಿಯ ಕುಂದಿಸುವ
ಆಶಾಬಾವನೆಯ ಹೊಸಕುವ
ನಾಳೆಗಳನ್ನು ಕುಗ್ಗಿಸುವ
ಕನಸುಗಳ ಕಮರಿಸುವ
ನಿನ್ನೊಳಗಿನ ಆ ನಿನ್ನನ್ನು
ನಿಸ್ಸಂಕೋಚವಾಗಿ ಕಿತ್ತೊಗೆಯಬೇಕು

ನಾನು ನಾನಾಗಿ ಬದುಕಲು
ನನ್ನ ನಾಳೆಯ ಕನಸುಗಳ ನೋಡಲು
ನನ್ನ ಅಸ್ಮಿತತೆ ಕಂಡುಕೊಳ್ಳಲು
ನಾನಿಂದು ಹೋರಾಡಬೇಕಿದೆ
ನನ್ನೊಳಗಿನ ಶತ್ರುವನ್ನು
ನನ್ನೊಳಗಿನ ಶತ್ರುವನ್ನು!!

-  ಗಿರಿಜಾ ಕೆ ಎಸ್     

Wednesday, 5 April 2017

ಕವನ - ನಾ ಬೇಡವಾದೆನೆ?



ನಾ ಹುಟಿದಾಗ ಅಮ್ಮನಂದು
ದುಃಖಿಸಿದಳು ಬಹಳ
ನನ್ನ ಜನ್ಮದಾತನಂತು
ಬರಲೆ ಇಲ್ಲ ನೋಡಲು

ಬೆಳೆಯುತ್ತಲೆ ಹೇಳಿದರೆಲ್ಲರೂ
ಹೆಣ್ಣು ಮಗಳು ನೀನು
ತಗ್ಗಿಬಗ್ಗಿ ನಡೆಯಬೇಕು
ನಗಲೆ ಬಾರದು ನೀನು
ನಕ್ಕರೆ ನೋಡುವರೆಲ್ಲರು;
ಅತ್ತರೂ ದನಿ ಕೇಳಬಾರದು

ಮದುವೆಯಾದ ಮೇಲೆ 
ಅತ್ತೆಮಾವರ ಸೇವೆ ಮಾಡಬೇಕು
ಮನೆಯ ಬೆಳಗಬೇಕು
ವಿರಾಮವಿಲ್ಲದೆ ದುಡಿಯಬೇಕು

ಗೆಳತಿ ಹೇಳಿದಳು,
ನಿನಗಾಗಿ ಸ್ವಲ್ಪ ಸಮಯವಿರಲಿ
ಆರೋಗ್ಯದ ಕಡೆ ಗಮನವಿರಲಿ
ನೀ ಸಂತೋಷದಿಂದಿದ್ದರೆ ತಾನೆ
ನೆಮ್ಮದಿ ತಾಣವಾಗುವುದು ಮನೆ

ನಾ ಕೇಳಿದೆ,
ಹುಟ್ಟುವಾಗ ಬೇಡದಾದೆ 
ಬೆಳೆಯುತ್ತಾ ದನಿ ಇಲ್ಲದಾದೆ
ಸ್ವಚ್ಛಂದವಾಗಿ ಓಡಾಡದಾದೆ
ಸ್ವತಂತ್ರವಾಗಿ ಕೆಲಸ ಮಾಡದಾದೆ
ನನಗೂ ನನ್ನ ಜಗತ್ತು ಇಲ್ಲವಾಯಿತ್ತಲಾ
ನನಗೂ ಕನಸುಗಳಿಲ್ಲವಾಯಿತ್ತಲ್ಲ
ನಾ ಹೀಗೆ ಇದ್ದು ಬಿಟ್ಟರೆ
ಬದುಕ್ಕಿದ್ದೂ ಸತ್ತಂತಲ್ಲವೆ

ಕನಸ ನನಸಾಗಿಸಲು
ನಾ ಬದುಕಬೇಕು
ನಾ ಬಾಳಿ ತೋರಿಸಬೇಕು
- ಗಿರಿಜಾ ಕೆ ಎಸ್       

Tuesday, 7 March 2017

ಕವನ,- ತನ್ನ ತಾ ಕಾಣಲು



ಆಯಾಸದಿ ಲಕುಮಿ ಎದ್ದು ನೋಡಲಲ್ಲಿ
ಮಲಗಿತ್ತು ಮಗುವು ಮಗ್ಗಲಲ್ಲಿ
ಹಸಿವಿನಿಂದ ಅತ್ತು ಅತ್ತು
ಕಂದ ನಿಸ್ತೇಜವಾಗಿತ್ತು
ಕಂದನ್ನ ಕಂಡ ಹೆತ್ತ ಕರುಳು
ನುಂಗಿಕೊಂಡಿತ್ತು ತನ್ನ ಅಳು

ಕಂಕುಳಲ್ಲಿ ಏರಿಸಿ ಕಂದನ
ಹೊರಟಳರಸಿ ಲಕುಮಿ ಕೆಲಸವ
ಸುತ್ತಿ ಸುತ್ತಿ ಸುಸ್ತಾಗಿತ್ತು
ಆಘಾತ ಅವಳಿಗೆ ಕಾದಿತ್ತು

ಮನೆಯೊಡೆಯನ ಹಸಿವನೀಗಿಸಲೆ?
ಕಂದನ ಹಸಿವನಿಂಗಿಸಲೆ?
ಮಾಡುವುದು ಏನು? ದಾರಿ ಇರುವುದಾದರೂ ಏನು?

ಒಲ್ಲೆನೆಂದರೆ ಕಂದ ಉಳಿಯುವುದಿಲ್ಲ
ಮಗುವಿಲ್ಲದಿರೆ
ನಾ ಬದುಕುಳಿಯುವುದಿಲ್ಲ
ಯಾವುದು ಸರಿ? ಯಾವುದು ತಪ್ಪು?

ಲಕುಮಿ ನೂರು ಬಾರಿ ತನ್ನನ್ನೇ ಕೇಳಿಕೊಂಡಳು
ಮಾಡಬೇಕು ಏನನ್ನು, ನಿರ್ಧರಿಸದಾದಳು

ಹೆಣ್ಣಿನ ನೋವ ಅರ್ಥ ಮಾಡಿಕೊಳ್ಳದ ಜಗವಿದು
ಹೆಣ್ಣಿನ ಮನಸ ಅರಿಯದ ಪ್ರಪಂಚವಿದು
ಇಲ್ಲಿ ಬದುಕಬೇಕಾದರೆ ಗಟ್ಟಿ ಮನಸು ಬೇಕು
ತುಚ್ಛ ಜನರ ಮೆಟ್ಟಿ ನಿಂತು ಮುನ್ನಡೆಯಬೇಕು
ನಾ ಬದುಕಬೇಕು ಇಂದು
ನಾ ಬಾಳಬೇಕು ಮುಂದೂ.

ದೃಢ ನಿಶ್ಚಯದಿಂದ
ಮುಂದೆ ಹೆಜ್ಜೆ ಇಟ್ಟು ನಡೆದಳು
ಕೊಳೆ ಬಾಳನು ಒದ್ದು ದಿಟ್ಟ ಹೆಜ್ಜೆ ಇಟ್ಟಳು
ತನ್ನ ತಾ ಕಾಣಲು

ಮತ್ತೆ ತನ್ನ ತಾ ಕಾಣಲು!!
- ಗಿರಿಜಾ ಕೆ ಎಸ್