Thursday 14 September 2017

ಲೇಖನ - ಮಹಿಳಾ ಸಮಸ್ಯೆಗಳು ಮತ್ತು ಹೋರಾಟಗಳು - 1


[ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಹತ್ತು ಹಲವಾರು. ಸಮಾಜ, ಕುಟುಂಬ, ವಿದ್ಯಾಸಂಸ್ಥೆ, ದುಡಿಯುವ ಸ್ಥಳಗಳು ಹೀಗೆ ಎಲ್ಲೆಡೆ ಸ್ತ್ರೀ ಅವಮಾನಕ್ಕೆ, ದೌರ್ಜನಕ್ಕೆ ಗುರಿಯಾಗುತ್ತಲೇ ಇರುತ್ತಾಳೆ. ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಹಿಳೆ ಅದರ ವಿರುದ್ಧ ನಿರಂತರ ಹೋರಾಟಗಳನ್ನೂ ಸಹ ನಡೆಸುತ್ತಿದ್ದಾಳೆ. ಈ ಅಂಕಣ ಮಹಿಳಾ ಸಮಸ್ಯೆಗಳ ಬಗ್ಗೆ, ಅವುಗಳ ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸಲಿಚ್ಛಿಸುತ್ತದೆ. ಓದುಗರೂ ಸಹ ಈ ಅಂಕಣಕ್ಕೆ ತಮ್ಮ ಲೇಖನಗಳನ್ನು ಕಳಿಸಬಹುದು] 

ಮಹಿಳಾ ಸಬಲೀಕರಣ


ಒಮ್ಮೆ ವಿವೇಕಾನಂದರನ್ನು ಅಮೇರಿಕಾದಲ್ಲಿ ಯಾರೋ ಕೇಳಿದರಂತೆ, “ಮಹಿಳಾ ಸಬಲೀಕರಣ ಎಂದರೇನು” ಎಂದು. ಅದಕ್ಕೆ ವಿವೇಕಾನಂದರು ಕೊಟ್ಟ ಉತ್ತರ : “ತನ್ನ ಜೀವನದಲ್ಲಿನ ಎಲ್ಲಾ ವಿಷಯಗಳ ಬಗ್ಗೆ ಒಬ್ಬ ಮಹಿಳೆ ತಾನೇ ತೀರ್ಮಾನ ಕೈಗೊಳ್ಳುವುದೇ ಸಬಲೀಕರಣ” ಎಂದರು. ಸಬಲೀಕರಣ ಎಂದರೆ, ಮಹಿಳೆಯರನ್ನು ಸಶಕ್ತರನ್ನಾಗಿಸುವುದು. 
ಆದರೆ ಇದು ಹೇಳಿಕೆಯಷ್ಟು ಸುಲಭವಲ್ಲ, ಆಚರಣೆಗೆ ತರುವುದು. ಕಾರಣ, ಶತಶತಮಾನಗಳಿಂದ ಮಹಿಳೆ ಅಬಲೆ ಎನ್ನುವ ನಂಬಿಕೆ ಬೆಳೆದು ಬಂದಿದೆ. ಪುರುಷಪ್ರಧಾನ ಸಮಾಜ ತನ್ನ ಹಿತಾಸಕ್ತಿಗಾಗಿ, ತನ್ನ ಸ್ವಾರ್ಥಕ್ಕಾಗಿ ಇದನ್ನು ಹುಟ್ಟುಹಾಕಿದೆ. ಮಹಿಳೆ ಅಬಲೆಯಾದ್ದರಿಂದ, ದುರ್ಬಲಳಾದ್ದರಿಂದ, ಚಿಕ್ಕಂದಿನಲ್ಲಿ ತಂದೆಯ ಅಡಿಯಲ್ಲಿ, ಯೌವ್ವನದಲ್ಲಿ ಪತಿಯ ಅಡಿಯಲ್ಲಿ, ವೃದ್ಧಾಪ್ಯದಲ್ಲಿ ಮಗನ ಅಡಿಯಲ್ಲಿ - ಮಗಳ ಅಲ್ಲ - ಇರಬೇಕೆಂದು ಹೇಳಿದೆ. 16 ವರ್ಷದ ಒಬ್ಬ ಹೆಣ್ಣುಮಗಳು ಹೊರಗಡೆ ಹೋಗಬೇಕಾದರೆ, 4 ವರ್ಷದ ಹುಡುಗನನ್ನು ಜೊತೆಗೆ ಕರೆದುಕೊಂಡು ಹೋಗು ಎನ್ನುವಷ್ಟರ ಮಟ್ಟಿಗಿದೆ ನಮ್ಮ ಸಮಾಜ. ಆ 4 ವರ್ಷದ ಹುಡುಗ ಸ್ವಲ್ಪ ದೂರ ಹೋದ ಮೇಲೆ, ‘ಅಕ್ಕಾ ಎತ್ಕೊ, ಕಾಲು ನೋಯುತ್ತಿದೆ’ ಎನ್ನುತ್ತಾನೆ. ಆದರೆ ನಮ್ಮ ಸಮಾಜದ ನಂಬಿಕೆಯ ಪ್ರಕಾರ ಅವನನ್ನು ಕಳಿಸುವುದು ಆ ಹೆಣ್ಣುಮಗಳ ರಕ್ಷಣೆಗಾಗಿ. 
ಸ್ತ್ರೀಯರು ಸಹ ಈ ಅಬಲೆ ಎನ್ನುವುದನ್ನು ಅಂಗೀಕರಿಸಿಬಿಟ್ಟಿದ್ದಾರೆ, ನಂಬಿಬಿಟ್ಟಿದ್ದಾರೆ. ಅದನ್ನೇ ತಮ್ಮ ಮಕ್ಕಳಿಗೂ ಹೇಳಿಕೊಡುತ್ತಾರೆ. ವಾಸ್ತವದಲ್ಲಿ ತಂದೆ ತನ್ನ ಮಗಳಿಗೆ ಹೀಗಿರು, ಹಾಗಿರು ಎನ್ನುವುದು ಕಡಿಮೆ, ಅದನ್ನು ಹೇಳುವುದು ತಾಯಿಯೇ. ಏಕೆಂದರೆ ಹೆಣ್ಣುಮಕ್ಕಳು ಪುರುಷಪ್ರಧಾನ ಧೋರಣೆಯನ್ನು ತಮ್ಮದಾಗಿಸಿಕೊಂಡುಬಿಟ್ಟಿದ್ದಾರೆ, ಅದನ್ನೇ ತಮ್ಮ ಮುಂದಿನ ಪೀಳಿಗೆಗೂ ಕಲಿಸಿಕೊಡುತ್ತಾರೆ. 
ಆದರೆ ನಿಜಕ್ಕೂ ಹೆಣ್ಣು ಅಬಲೆಯಲ್ಲ. ದೈಹಿಕವಾಗಿ, ಮಾನಸಿಕವಾಗಿ. ಮೇಡಂ ಕ್ಯೂರಿಯವರು ಎಲ್ಲರಿಗೂ ಗೊತ್ತು. 2 ವಿಜ್ಞಾನ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದವರು. ಇಡೀ ಜಗತ್ತಿನಲ್ಲಿ 2 ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಮಾತ್ರವಲ್ಲ, ಮೊದಲ ವ್ಯಕ್ತಿಯೂ ಹೌದು. ಅದೇ ರೀತಿ, ದೈಹಿಕವಾಗಿಯೂ ಕೂಡ ಹೆಣ್ಣುಮಗಳು ಬಲಿಷ್ಟಳು. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಮಿಕರ ಸಂಘದ ಅಧ್ಯಯನದ ಪ್ರಕಾರ ಮಹಿಳೆ ವಿಶ್ವದಾದ್ಯಂತ ಪುರುಷನಿಗಿಂತ ಪ್ರತಿನಿತ್ಯ 2 ಘಂಟೆ ಹೆಚ್ಚು ದುಡಿಯುತ್ತಾಳೆ ಮತ್ತು 2 ಘಂಟೆ ಕಡಿಮೆ ನಿದ್ರಿಸುತ್ತಾಳೆ. ಹೆಣ್ಣು ಇನ್ನೊಂದು ಜೀವಕ್ಕೆ ಜನ್ಮ ನೀಡುವಾಗ, ಎಷ್ಟು ನೋವನ್ನು ಅನುಭವಿಸುತ್ತಾಳೆ ಎಂದು ನೋಡಿದರೆ ಮಹಿಳೆ ಎಷ್ಟು ಬಲಿಷ್ಟಳು ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ಹಳ್ಳಿಯ ಹೆಣ್ಣುಮಕ್ಕಳನ್ನು ನೋಡಿದರೆ ಅದು ಬಹಳ ನಿಚ್ಚಳವಾಗಿ ಕಂಡುಬರುತ್ತದೆ.
ಇಲ್ಲಿ ಕನ್ನಡದ ಪ್ರಸಿದ್ಧ ಬರಹಗಾರ್ತಿಯಾದ, ತಿರುಮಲಾಂಬಾರವರ ಒಂದು ಕವನ – ಗೌಡ್ತಿ ನೆನಪಿಗೆ ಬರುತ್ತದೆ. ಒಂದು ಹಳ್ಳಿಯಲ್ಲಿ ಗೌಡ, ಗೌಡ್ತಿ ಇರುತ್ತಾರೆ. ಗೌಡ ಯಾವಾಗಲೂ ಗೌಡ್ತಿಯನ್ನು, ನೀನು ಬಲಹೀನಳು, ನಿಮ್ಮದು ಯಾವ ಮಹಾ ಕೆಲಸ, ನಮ್ಮದನ್ನು ನಿಮಗೆ ಮಾಡಲು ಸಾಧ್ಯವಿಲ್ಲ ಎಂದು ಹಂಗಿಸುತ್ತಿರುತ್ತಾನೆ. ಗೌಡ್ತಿ ಅದನ್ನು ಒಪ್ಪದೆ, ಬೇಕಿದ್ರೆ ಪಂದ್ಯ ಹಾಕೋಣ. ನಾನು ನಿಮ್ಮ ಕೆಲಸ ಮಾಡುವೆ, ಆದರೆ ನೀವು ನನ್ನ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುತ್ತಾಳೆ. ಹೀಗೆಯೇ ಹಲವಾರು ಬಾರಿ ವಾಗ್ವಾದ ನಡೆಯುತ್ತಿರುತ್ತದೆ. ಒಂದು ದಿನ ಗೌಡ ಬೆಳಿಗ್ಗೆ ಎದ್ದು ನೋಡಿದರೆ ಗೌಡ್ತಿ ಮನೆಯಲ್ಲಿ ಇರುವುದಿಲ್ಲ, ನೇಗಿಲು, ಎತ್ತುಗಳು ಇಲ್ಲದಿದ್ದದ್ದ ಕಂಡು, ಓಹ್, ಗೌಡ್ತಿ ಹೊಲಕ್ಕೆ ಹೋಗಿದ್ದಾಳೆ ಎಂದು ಅರ್ಥ ಮಾಡಿಕೊಂಡು, ಮನೆಕೆಲಸ ಮಾಡಲಾರಂಭಿಸುತ್ತಾನೆ. ಮೊದಲು ಕೊಟ್ಟಿಗೆಗೆ ಹೋಗಿ, ಅದನ್ನು ಸ್ವಚ್ಛಗೊಳಿಸುವಷ್ಟರಲ್ಲಿ, ಸಗಣಿಯ ಮೇಲೆ ಕಾಲಿಟ್ಟು ಕೆಳಗೆ ಬೀಳುತ್ತಾನೆ. ಪಾತ್ರೆ ತೊಳೆದು, ಅಡಿಗೆ ಮನೆಗೆ ಹೋಗುವಾಗ ಬಾಗಿಲು ತಗುಲಿಸಿಕೊಳ್ಳುತ್ತಾನೆ. ಹಾಲು ಕಾಯಿಸಲು ಹೋಗಿ ಕೈ ಸುಟ್ಟುಕೊಳ್ಳುತ್ತಾನೆ. ಹೀಗೆ ಸಂಜೆಯಾಗುವಷ್ಟರಲ್ಲಿ ಗೌಡ ಸುಸ್ತಾಗಿರುವುದಷ್ಟೇ ಅಲ್ಲದೆ, ಯಾವ ಕೆಲಸವನ್ನೂ ಸರಿಯಾಗಿ ಮಾಡಿರುವುದಿಲ್ಲ. ಆದರೆ ಸಂಜೆ ಬಂದ ಗೌಡ್ತಿ, ನನ್ನ ಕೆಲಸ ಸರಾಗವಾಗಿ ನಡೆಯಿತು ಎಂದು ಹಸನ್ಮುಖಳಾಗಿ ಹಿಂತಿರುಗುತ್ತಾಳೆ. ಕೊನೆಗೆ ಗೌಡ ಗೌಡ್ತಿಗೆ ಕೈಮುಗಿದು, ನೀವೇ ದೊಡ್ಡವರು, ನಿಮ್ಮಂತೆ ನಾವು ಕೆಲಸ ನಿಭಾಯಿಸಲು ನಮಗೆ ಸಾಧ್ಯವಿಲ್ಲ ಎನ್ನುತ್ತಾನೆ. 
ಆದರೆ, ಸಮಾಜ, ಪರಿಸರ ಹುಟ್ಟುತ್ತಲೇ ಹೆಣ್ಣುಮಕ್ಕಳಲ್ಲಿ, ನೀವು ಅಬಲೆಯರು, ಬಲಹೀನರು ಎನ್ನುವ ಭಾವನೆ ಬೆಳೆಸಿಬಿಡುತ್ತದೆ. ಹೆಣ್ಣಲ್ಲೂ ಅದೇ ಭಾವನೆ ಬೇರುಬಿಟ್ಟಿದೆ. ಇಲ್ಲಿ ಈಸೋಪನ ಕಥೆಯೊಂದು ನೆನಪಿಗೆ ಬರುತ್ತದೆ. ಒಂದು ಹದ್ದಿನ ಮರಿ ಆಕಸ್ಮಿಕವಾಗಿ ಕೆಳಗೆ ಬೀಳುತ್ತದೆ. ಕೋಳಿಯೊಂದು ಅದನ್ನು ತನ್ನ ಮರಿಗಳೊಂದಿಗೆ ಸಾಕುತ್ತದೆ. ಹದ್ದಿನ ಮರಿ ದೊಡ್ಡದಾಗುತ್ತದೆ. ಮೇಲೆ ಹಾರಾಡುವ ಹದ್ದುಗಳನ್ನು ಕಂಡಾಗಲೆಲ್ಲ “ನಾನು ಅದರಂತೆ ಹಾರಾಡುವಂತಿದ್ದರೆ” ಎಂದುಕೊಳ್ಳುತ್ತದೆ. ತಾನು ಬೆಳೆದ ಪರಿಸರದಿಂದಾಗಿ ಅದು ತನ್ನ ಸಹಜ ಸ್ವಭಾವವನ್ನು ಮರೆತುಬಿಡುತ್ತದೆ. 
ನಾವು ಹೆಣ್ಣುಮಕ್ಕಳು ಸಹ ಆ ಹದ್ದಿನಮರಿಯಂತಾಗಿಬಿಟ್ಟಿದ್ದೇವೆ. ನಮ್ಮ ಸಹಜ ಸ್ವಭಾವವನ್ನು ಮರೆತುಬಿಟ್ಟು, ನಾವು ಅಬಲೆಯರು, ಬಲಹೀನರು ಎಂದು ಭಾವಿಸಿದ್ದೇವೆ. ಮಾನಸಿಕವಾಗಿ ನಾವು ಬಲಹೀನರಾಗಿಬಿಟ್ಟಿದ್ದೇವೆ. ಆದ್ದರಿಂದಲೇ ನಮ್ಮ ಮೇಲೆ ಇಷ್ಟೆಲ್ಲಾ ದೌರ್ಜನ್ಯಗಳು, ದಬ್ಬಾಳಿಕೆಗಳು ನಡೆಯುತ್ತಿದ್ದರೂ, ನಾವು ಮೌನವಾಗಿ ಸಹಿಸಿಕೊಳ್ಳುತ್ತಿದ್ದೇವೆ. ಈ ಸಮಸ್ಯೆಗಳೆಲ್ಲಾ ಹೋಗಬೇಕಾದರೆ ಸ್ತ್ರೀ ಸಶಕ್ತಳಾಗಬೇಕು. ಅಂದರೆ ಸ್ತ್ರೀ ತನ್ನ ಅಂತಃಶಕ್ತಿಯನ್ನು ಗುರುತಿಸಬೇಕು. ಬೆಳೆಸಿಕೊಳ್ಳಬೇಕು. ತೊಟ್ಟಿಲನ್ನು ತೂಗುವ ಕೈ ದೇಶ ಆಳಬಲ್ಲದು ಎನ್ನುವುದು ನಿರ್ವಿವಾದವಾಗಿ ಸಾಬೀತಾಗಿರುವ ಸತ್ಯ. ನಾವು ಪ್ರತಿಯೊಬ್ಬರೂ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ತೋರಿಸಬೇಕು.

ಸಶಕ್ತೀಕರಣ ಎಂದರೆ ಎಲ್ಲಾ ಕ್ಷೇತ್ರಗಳಲ್ಲಿ – ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳಲ್ಲಿ ನಮ್ಮನ್ನೇ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು. ಸಾಧನೆ ಮಾಡಿ ತೋರಿಸುವುದು. ಇದು ಖಂಡಿತವಾಗಿಯೂ ಸಾಧ್ಯ. ಮಹಾರಾಷ್ಟ್ರದ ಲಾಟೋರ್‍ನಲ್ಲಿ “ಎಲ್ಲಾ ಮಹಿಳೆಯರೇ ಇರುವ ಪಂಚಾಯತ್” ಇದೆ. ಅದು ಇಡೀ ರಾಷ್ಟ್ರದಲ್ಲಿಯೇ ಅತ್ಯುತ್ತಮ ಪ್ರಗತಿ ಸಾಧಿಸಿರುವ ಪಂಚಾಯತ್ ಆಗಿದೆ. ಆ ಪಂಚಾಯತಿ ವ್ಯಾಪ್ತಿಯ ಪುರುಷರೇ, ಮಹಿಳೆಯರು ಉತ್ತಮ ಕೆಲಸ ಮಾಡುತ್ತಾರೆಂದು ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಆ ಹೆಣ್ಣುಮಕ್ಕಳು ಅದನ್ನು ಮಾಡಿ ತೋರಿಸಿದ್ದಾರೆ.
ಪ್ರತಿ ಮಹಿಳೆ ಮೇರಿ ಕ್ಯೂರಿ, ಕಿತ್ತೂರು ಚೆನ್ನಮ್ಮ, ಹೆಲೆನ್ ಕೆಲ್ಲರ್, ಫ್ಲಾರೆನ್ಸ್ ನೈಟಿಂಗೇಲ್‍ರಂತಾಗಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು. ಅವರಿಗೆ ಸಾಧ್ಯ, ನಮಗೆ ಸಾಧ್ಯವಿಲ್ಲ ಎನ್ನುವ ಧೋರಣೆ ಬೇಡ. ಎಲ್ಲರಿಗೂ ಅದು ಸಾಧ್ಯ, ಆದರೆ ನಾವು ನಮ್ಮೊಳಗಿರುವ ಶಕ್ತಿಯನ್ನು ಗುರುತಿಸುತ್ತಿಲ್ಲ. 
ರಾಮಾಯಣ ಎಲ್ಲರಿಗೂ ಗೊತ್ತು. ಅದರಲ್ಲಿ ಅಂಗದನ ನೇತೃತ್ವದಲ್ಲಿ ವಾನರ ಸೈನ್ಯೆ ಸೀತೆಯನ್ನು ಹುಡುಕಿಕೊಂಡು ಬರಲು ತೆರಳುತ್ತದೆ. ಸಂಪಾತಿಯಿಂದ ಸೀತೆ ಲಂಕೆಯಲ್ಲಿದ್ದಾಳೆ ಎನ್ನುವುದು ಗೊತ್ತಾಗುತ್ತದೆ. ಆದರೆ ಸಮುದ್ರ 100 ಯೋಜನಗಳ ದೂರವಿದ್ದು, ದಾಟುವುದು ಹೇಗೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಒಂದು ವಾನರ ನಾನು 10 ಯೋಜನ ಹಾರಬಲ್ಲೆ, ಇನ್ನೊಂದು ನಾನು 20 ಹಾರಬಲ್ಲೆ, ಹೀಗೆ ಹೇಳುತ್ತಾ ಹೋಗುತ್ತದೆ. ಜಾಂಬವಂತ, ನಾನು ಯುವಕನಾಗಿದ್ದರೆ ದಾಟಬಹುದಿತ್ತು, ನನಗೀಗ ವಯಸ್ಸಾಗಿದೆ ಆದ್ದರಿಂದ 90 ಯೋಜನ ಹಾರಬಲ್ಲೆ ಎನ್ನುತ್ತದೆ. ಅಂಗದ, ನಾನು 100 ಯೋಜನ ಹಾರಬಲ್ಲೆ ಆದ್ರೆ ಹಿಂತಿರುಗಬಲ್ಲೆನಾ ಗೊತ್ತಿಲ್ಲ ಎನ್ನುತ್ತಾನೆ. ನಾಯಕನನ್ನು ಕಳಿಸಲು ಯಾರೂ ಒಪ್ಪುವುದಿಲ್ಲ. ಜಾಂಬವಂತ ಯೋಚಿಸುತ್ತಾ ಸುತ್ತಲೂ ನೋಡಿ, ಅನ್ಯಮನಸ್ಕನಾಗಿ ಬಂಡೆಯ ಮೇಲೆ ಕುಳಿತು ಸಮುದ್ರವನ್ನೇ ನೋಡುತ್ತಿದ್ದ ಹನುಮಂತನನ್ನು ನೋಡಿ “ಅಗೋ ನಮಗೆ ಬೇಕಾದ ವ್ಯಕ್ತಿ ಅಲ್ಲಿದ್ದಾನೆ’ ಎನ್ನುತ್ತಾನೆ. ಅಂಗದ, ಮತ್ತೆ ಅವನು ಏನೂ ಮಾತನಾಡುತ್ತಿಲ್ಲವೇ ಎಂದಾಗ, ಜಾಂಬವಂತ ಅದು ಅವನಿಗೇ ಗೊತ್ತಿಲ್ಲ, ಅದಕ್ಕೆ ಕಾರಣವಿಷ್ಟೇ ಎನ್ನುವ ಕಥೆ ಹೇಳುತ್ತಾನೆ. ಚಿಕ್ಕಂದಿನಲ್ಲಿ ಸೂರ್ಯನನ್ನು ನೋಡಿ ಹಣ್ಣೆಂದು ಭಾವಿಸಿ ಆಂಜನೇಯ ಹಾರಿ ಅದನ್ನು ಕೈಯ್ಯಲ್ಲಿ ಹಿಡಿದುಕೊಂಡು ಬಂದುಬಿಟ್ಟ. ಲೋಕ ಕತ್ತಲಾಯಿತು. ಎಲ್ಲರೂ ಬಂದು ಕೇಳಿಕೊಂಡರೂ ಕೊಡಲಿಲ್ಲ, ಆಗ ಇಂದ್ರ ತನ್ನ ಇಂದ್ರಾಯುಧದಿಂದ ಆಂಜನೇಯನ ದವಡೆಗೆ ಹೊಡೆದು, ಸೂರ್ಯನನ್ನು ಸ್ವಸ್ಥಾನಕ್ಕೆ ಕಳಿಸಿ, ಆಂಜನೇಯನಿಗೆ ಶಾಪ ಕೊಟ್ಟ, “ಯಾರಾದರೂ ನೆನಪಿಸುವವರೆಗೂ ನಿನ್ನ ಶಕ್ತಿ ನಿನಗೆ ಅರಿವಾಗದಿರಲಿ” ಎಂದು. ನಂತರ ಜಾಂಬವಂತ ಹನುಮಂತನ ಬಳಿ ಹೋಗಿ "ನಿನಗೆ ಸಾಧ್ಯ" ಎಂದು ಪ್ರೇರೇಪಿಸಿದ. ಹನುಮಂತ ಲಂಕೆಗೆ ಹಾರಿದ.
 ಇಲ್ಲಿ ಕಥೆಯ ಸಾರಂಶ ಇಷ್ಟೇ. ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಸ್ತ್ರೀಯಲ್ಲಿ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ. ನಮಗೆ ಯಾರೋ ಹೇಳುವವರೆಗೂ ನಮ್ಮ ಶಕ್ತಿ ನಮಗೆ ಅರಿವಾಗುವುದಿಲ್ಲ. ಆ ಅಂತಃಶಕ್ತಿಯನ್ನು ಅರಿತು ಬೆಳೆಯಬೇಕು. ಬೆಳೆಯುವ ಛಲ, ಇದ್ದರೆ ನಾವು ಖಂಡಿತ ಬೆಳೆಯುತ್ತೇವೆ. 
ಇಲ್ಲಿ ಇನ್ನೊಂದು ಅಂಶ ಬರುತ್ತದೆ. ಸ್ತ್ರೀ ಸಶಕ್ತೀಕರಣವೆಂದರೆ ಪುರುಷ ವಿರೋಧಿ ಹೋರಾಟವಲ್ಲ. ಬದಲಿಗೆ ಪುರುಷರು ಈ ಹೋರಾಟದಲ್ಲಿ ಜೊತೆಗೂಡಬೇಕು. ಮಹಾನ್ ಬಂಗಾಳಿ ಬರಹಗಾರರಾದ ಶರತ್ಚಂದ್ರ ಚಟರ್ಜಿಯವರು, “ಸ್ತ್ರೀಯರನ್ನು ಕತ್ತಲಿನಲ್ಲಿಟ್ಟು ಪುರುಷ ಮಾತ್ರ ಬೆಳಕಿನೆಡೆಗೆ ಹೇಗೆ ಸಾಗಬಲ್ಲ, ಅರ್ಧದಷ್ಟು ಭಾಗವಿರುವ ಮಹಿಳೆಯರನ್ನು ಪಾತಾಳದಲ್ಲಿಟ್ಟು, ಉಳಿದರ್ಧ ಪುರುಷರು ಹೇಗೆ ಎತ್ತರಕ್ಕೆ ಸಾಗಬಲ್ಲರು” ಎಂದು ಕೇಳಿದ್ದಾರೆ. 
ಇಡೀ ವಿಶ್ವದಲ್ಲಿ ಸ್ತ್ರೀ ವಿಮೋಚನೆಯ ಹೋರಾಟ ಆರಂಭಿಸಿದವರು ಮಹಿಳೆಯರೇ. ಪುರುಷರು ಅವರ ಜೊತೆಗೂಡಿದರು. ಆದರೆ ಭಾರತದ ವೈಶಿಷ್ಟ್ಯವೆಂದರೆ, ಇಲ್ಲಿ ಮೊದಲಿಗೆ, ರಾಮ್‍ಮೋಹನ್ ರಾಯ್, ವಿದ್ಯಾಸಾಗರ್, ಜ್ಯೋತಿಭಾ ಫುಲೆ ಮುಂತಾದ ಮಹನೀಯರು ಮಹಿಳಾ ಪರ ದನಿ ಎತ್ತಿದರು. ನಂತರ ಸ್ತ್ರೀಯರು ಆ ಹೋರಾಟಕ್ಕಿಳಿದರು. ಆದ್ದರಿಂದ ಆ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಹೋಗಬೇಕಿದೆ. 
ಪ್ರತಿ ಯಶಸ್ವಿ ಪುರುಷನ ಹಿಂದೆ ಓರ್ವ ಸ್ತ್ರೀ ಇರುವಂತೆ, ಪ್ರತಿ ಯಶಸ್ವಿ ಮಹಿಳೆಯ ಹಿಂದೆಯೂ ಓರ್ವ ಪುರುಷ ಇದ್ದಾನೆ. ಸಾವಿತ್ರಿಬಾಯಿ ಫುಲೆ, ಮೇರಿ ಕ್ಯೂರಿ, ಶಾರದಾದೇವಿ, ಮುಂತಾದವರ ಬೆಂಬಲವಾಗಿ ನಿಂತವರು ಅವರವರ ಗಂಡಂದಿರು. ಹೆಲೆನ್ ಕೆಲ್ಲರ್, ಫ್ಲಾರೆನ್ಸ್ ನೈಟಿಂಗೇಲ್, ಹೈಪಾಷಿಯಾ ಮುಂತಾದವರ ಹಿಂದೆ ಇದ್ದವರು ಅವರವರ ತಂದೆಯಂದಿರು.  ಖಗೋಳಶಾಸ್ತ್ರಜ್ಞೆ ಕ್ಯಾರೊಲಿನ್ ಹರ್ಷಲ್, ಸಮಾಜ ಸುಧಾರಕಿ ರೊಕೆಯಾ ಖಾತೂನ್ ರವರ ಹಿಂದೆ ಇದ್ದದ್ದು ಅವರ ಅಣ್ಣಂದಿರು. 
ನಾವು ಪುರುಷರಲ್ಲಿ ಕೇಳಿಕೊಳ್ಳುವುದಿಷ್ಟೇ ನೀವು ನಮ್ಮನ್ನು ಪ್ರೋತ್ಸಾಹಿಸುವ, ನಮ್ಮ ಅಂತಃಶಕ್ತಿಯನ್ನು ತೋರಿಸುವ, ಜಾಗೃತಗೊಳಿಸುವ ಜಾಂಬವಂತರಾಗಿ, ಅದನ್ನು ಕಡಿಯುವ ಇಂದ್ರರಾಗಬೇಡಿ. 
ಆದರೆ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ತಾವೇ ಮಾಡಬೇಕು, ವೈಯಕ್ತಿಕವಾಗಿ, ಸಾಮೂಹಿಕವಾಗಿ. ಪುರುಷರು ಅದಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. 
ನಮ್ಮ ಬದುಕು ಅಡಿಗೆ ಮನೆಗಷ್ಟೇ ಸೀಮಿತವಾಗಬಾರದು. ಗೃಹಕೃತ್ಯ ಕಡಿಮೆ ಎಂದಲ್ಲ. ಆದರೆ ಅದರ ಜೊತೆಗೆ ರಾಜಕೀಯ, ಆರ್ಥಿಕ, ಎಲ್ಲಾ ಕ್ಷೇತ್ರಗಳಲ್ಲಿ ಮುಂಬರಬೇಕು. ಸಮಾಜಕ್ಕೆ ನಮ್ಮ ಕೊಡುಗೆಯನ್ನು ನೀಡಬೇಕು.
ಆಗ ಸ್ತ್ರೀಯರ ಬಗೆಗಿನ ಕೆಟ್ಟ ಧೋರಣೆ ದೂರವಾಗುತ್ತದೆ. ಸ್ತ್ರೀ ಭೋಗದ ವಸ್ತು ಎನ್ನುವ ಧೋರಣೆ ಬದಲಾಗುತ್ತದೆ. ಸ್ತ್ರೀಯ ಮೇಲಾಗುವ ದೌರ್ಜನ್ಯ, ದಬ್ಬಾಳಿಕೆಗಳು ನಿಲ್ಲುತ್ತವೆ. ನಮ್ಮೆಲ್ಲರ ಮನ ಕಲಕಿದಂತಹ ನಿರ್ಭಯಾಳ ಅತ್ಯಾಚಾರದಂತಹ ಘಟನೆಗಳು ಮರುಕಳಿಸುವುದಿಲ್ಲ. ದೌರ್ಜನ್ಯಗಳು ದೂರವಾದರೆ ಉತ್ತಮ ಸಮಾಜ ರೂಪುಗೊಳ್ಳುತ್ತದೆ.
ಎಲ್ಲಾ ಮಹಾನ್ ಚಿಂತಕರ ಪ್ರಕಾರ, ಒಂದು ದೇಶದ ಪ್ರಗತಿಯನ್ನು ಅಳೆಯಬೇಕಾದರೆ ಆ ದೇಶದ ಸ್ತ್ರೀಯರ ಸ್ಥಾನಮಾನದ ಆಧಾರದ ಮೇಲೆ ಅಳೆಯಬೇಕು ಎಂದಿದ್ದಾರೆ. ಆ ರೀತಿಯಲ್ಲಿ ನೋಡಿದರೆ, ನಮ್ಮ ದೇಶದ ಸ್ಥಾನಮಾನ ಇಂದು ಬಹಳ ದುರ್ದೆಶೆಯಲ್ಲಿದೆ. 
ಆದ್ದರಿಂದ ಸ್ತ್ರೀಯರ ಸ್ಥಾನಮಾನ ಉತ್ತಮವಾಗಬೇಕು. ಸ್ತ್ರೀಯರ ಸ್ಥಾನಮಾನ ಉತ್ತಮವಾದರೆ, ಉತ್ತಮ ಸಮಾಜ ರೂಪುಗೊಳ್ಳುತ್ತದೆ. ಅಂತಹ ಸಮಾಜದಲ್ಲಿ ಬದುಕಲು ಎಲ್ಲರಿಗೂ ಇಷ್ಟವಾಗುತ್ತದೆ. ಅಂತಹ ಉತ್ತಮ ಸಮಾಜ ಸ್ಥಾಪನೆಗೆ ಸ್ತ್ರೀ ಸಬಲೀಕರಣ ಅತ್ಯಗತ್ಯ, ಅನಿವಾರ್ಯ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ಏಕೆಂದರೆ ನಿರ್ಭಯಾಳ ಸಾವಿಗೆ ಕಣ್ಣೀರಿಡುವುದು ಆಕೆಯ ತಾಯಿ ಮಾತ್ರವಲ್ಲ, ತಂದೆ, ಅಣ್ಣ, ತಮ್ಮ ಎಲ್ಲರೂ. ಹಾಗಾಗಿ ಎಲ್ಲಾ ಸುಚಿಂತನಾಶೀಲ ಪುರುಷರು ಸ್ತ್ರೀಯರ ಸಬಲೀಕರಣದ ಹೋರಾಟದಲ್ಲಿ ಸೇರಿಕೊಳ್ಳಬೇಕು.

ಉತ್ತಮ ಸಮಾಜ ನಿರ್ಮಾಣಕ್ಕಾಗಿ, ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕಾಗಿ, ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ಸಬಲೀಕರಣಕ್ಕಾಗಿ ಶ್ರಮಿಸಲು ನಾವು ಇಂದೇ ಕಂಕಣಬದ್ಧರಾಗಬೇಕು.  

- ಸುಧಾ ಜಿ 

No comments:

Post a Comment