Tuesday 12 September 2017

ಆರೋಗ್ಯ - ಹಣ್ಣೆಲೆಗಳು - 7

 (ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)
                                       
   ಅಧ್ಯಾಯ - 7
ಸ್ಥೂಲಕಾಯ, ಬೊಜ್ಜುತನ

ಭಾರತದಲ್ಲಿ 37% ನಷ್ಟು ಹೆ0ಗಸರು ಸ್ಥೂಲಕಾಯದಿ0ದ ಬಳಲುತ್ತಿದ್ದಾರೆ. ಮುಟ್ಟು ನಿಲ್ಲುವ ಆಸುಪಾಸಿನಲ್ಲಿ ಜೀವರಸಗಳ ಕೊರತೆಯಿಂದಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಮಧ್ಯ ಭಾಗದಲ್ಲಿ, ನಿತಂಬಗಳಲ್ಲಿ ಸ್ತನಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿ, ದೇಹದ ಆಕಾರದಲ್ಲಿ ಬದಲಾವಣೆ ಆಗುವುದು. ಕೆಲಸ ಮಾಡಲು ಕಷ್ಟವಾಗಿ ಸುಮ್ಮನೆ ಕೂತುಕೊಳ್ಳುವುದು. ಮಕ್ಕಳು ಮತ್ತು ಸೊಸೆಯಂದಿರು ಕೆಲಸ ಮಾಡುತ್ತಿರುವುದರಿಂದ ಕೆಲಸ ಕಡಿಮೆಯಾಗುವುದು. ವಂಶಪಾರಂಪರ್ಯವಾಗಿಯೂ ಕೂಡ ಬೊಜ್ಜು ಬರಬಹುದು. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸಗಳ ಕೊರತೆ ಹಾಗೂ ಡಿಹೈಡ್ರೋ ಎಪಿಆಂಡ್ರೋಸ್ಟಿರಾನ್ ಜೀವರಸದ ಕೊರತೆಯಿಂದ ದೇಹದಲ್ಲಿ ಕೊಬ್ಬು ಶೇಖರವಾಗಿ ಸ್ಥೂಲಕಾಯ ಉಂಟಾಗುತ್ತದೆ. ಇದರೊಟ್ಟಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಕಾಯಿಲೆಗಳು ಸಂಬಂಧ ಹೊಂದಿವೆ. 

 ಕೊಬ್ಬು ಕರಗಿಸಲು ಏನು ಮಾಡಬೇಕು?

ವ್ಯಾಯಮ: ದಿನಕ್ಕೆ ಕನಿಷ್ಟ ಪಕ್ಷ 20-30 ನಿಮಿಷದಷ್ಟು ವೇಗದ ನಡಿಗೆಯನ್ನು ಮಾಡಬೇಕು.
ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು
ವಾರಕ್ಕೆ ಅರ್ಧ ಕೆ.ಜಿ ಹಾಗೂ ತಿಂಗಳಿಗೆ ಎರಡು ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕು
ಯೋಗಾಸನ ಮತ್ತು ಪ್ರಾಣಾಯಾಮವನ್ನು  ದಿನವೂ ಮಾಡಬೇಕು
ಸಮತೋಲನ ಆಹಾರವನ್ನು ಸೇವಿಸಬೇಕು
ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು
ಮಾಂಸವನ್ನು ಬಳಸುವಾಗ ಎಚ್ಚರವಿರಲಿ
ಎಣ್ಣೆ ಪದಾರ್ಥ, ಸಿಹಿ ತಿಂಡಿ, ಹಾಲಿನಿಂದ ಮಾಡಿದ ಪದಾರ್ಥಗಳನ್ನು ತ್ಯಜಿಸಬೇಕು


ಅಧ್ಯಾಯ - 8
ಋತುಬಂಧದ ಸಮಯದಲ್ಲಿ ಬರುವ ಅರ್ಬುದ ರೋಗಗಳು (ಕ್ಯಾನ್ಸರ್)

1) ಸ್ತನದ ಕ್ಯಾನ್ಸರ್
2) ಗರ್ಭಕಂಠದ ಕ್ಯಾನ್ಸರ್
3) ಗರ್ಭಕೋಶದ ಕ್ಯಾನ್ಸರ್
4) ಅಂಡಾಶಯದ ಕ್ಯಾನ್ಸರ್
5) ಗರ್ಭನಾಳದ ಕ್ಯಾನ್ಸರ್
6) ಯೋನಿಯ ಕ್ಯಾನ್ಸರ್

ಸ್ತನದ ಕ್ಯಾನ್ಸರ್
ಇಡೀ ಪ್ರಪಂಚದಲ್ಲಿ ಹೆಂಗಸರು ಹೆಚ್ಚಾಗಿ ಸಾಯುವುದು ಸ್ತನದ ಕ್ಯಾನ್ಸರ್‍ನಿಂದ. ಪ್ರತಿ ಅರ್ಧ ಗಂಟೆಗೊಮ್ಮೆ ಒಬ್ಬ ಹೆಣ್ಣು ಮಗಳು ಸ್ತನದ ಕ್ಯಾನ್ಸರ್ (breast cancer) ನಿಂದ ಸಾಯುತ್ತಿದ್ದಾಳೆ. ಭಾರತದಲ್ಲಿ ಪ್ರತಿ ವರುಷಕ್ಕೆ 75,000 ಹೊಸ ಸ್ತನ ಕ್ಯಾನ್ಸರ್ ರೋಗಿಗಳ ಪತ್ತೆಯಾಗುತ್ತದೆ.  ಪ್ರತಿ 22 ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಸ್ತನದ ಕ್ಯಾನ್ಸರ್ ಬರುತ್ತದೆ. ಸ್ತನದ ಕ್ಯಾನ್ಸರ್ 40 ರಿಂದ 60 ವರ್ಷ ವಯಸ್ಸಿನ ಹೆಂಗಸರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಅದರಿಂದ ಸಂಭವಿಸಬಹುದಾದ ಪ್ರಾಣಾಪಾಯವನ್ನು ತಪ್ಪಿಸಬಹುದು.

ಸ್ತನದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುವುದು 
- 40 ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ 
- ವಂಶಪಾರಂಪರ್ಯವಾಗಿ ಬರುವಂತಹ ಬಿ.ಆರ್.ಸಿ.ಎ. ಜೀನ್ (ವಂಶವಾಹಿನಿ) ಇರುವವರಲ್ಲಿ
- ಮನೆಯಲ್ಲಿ ತಾಯಂದಿರಿಗೆ, ಸಹೋದರಿಯರಿಗೆ ಹಾಗೂ ಸಮೀಪ ಸಂಬಂಧಿಗಳಲ್ಲಿದ್ದರೆ
- ಮದ್ಯಪಾನ, ಧೂಮಪಾನ ಮಾಡುವುದರಿಂದ 
- ಗರ್ಭ ನಿರೋಧ ಗುಳಿಗೆಗಳನ್ನು ದೀರ್ಘಕಾಲ ಉಪಯೋಗಿಸಿದರೆ 
- ದೀರ್ಘಕಾಲ  ಜೀವರಸ ಮರುಪೂರಣ ಚಿಕಿತ್ಸೆ (HRT) ತೆಗೆದುಕೊಂಡರೆ 
- ಬೇಗನೆ ಋತುಮತಿಯಾಗಿದ್ದರೆ
- ತಡವಾಗಿ ಋತುಬಂಧವಾದರೆ
- ಋತುಬಂಧದ ನಂತರ ಬೊಜ್ಜು ಇದ್ದರೆ
- ಮಕ್ಕಳಿಲ್ಲದಿದ್ದರೆ
- ತಡವಾಗಿ ಮಗು ಜನಿಸಿದರೆ
- ಮಗುವಿಗೆ ಸ್ತನ್ಯಪಾನ ಮಾಡದಿದ್ದರೆ 
- ವಿಕಿರಣಕ್ಕೆ ಒಡ್ಡಿಕೊಂಡಿದ್ದರೆ

ವಯಸ್ಸಾದಂತೆ ಸ್ತನದಲ್ಲಿ ಕೊಬ್ಬಿನ ಅಂಶ ಶೇಖರವಾಗುತ್ತದೆ ಮತ್ತು ಸ್ತನ ಜೋತು ಬೀಳುತ್ತದೆ. ಗಡ್ಡೆ ಇದೆಯೇ ಎಂದು ಪರೀಕ್ಷಿಸಲು ಕೂಡ ತುಂಬಾ ಕಷ್ಟ ಆಗುತ್ತದೆ. ಆದ್ದರಿಂದ ಎಲ್ಲರೂ ಹದಿಹರೆಯದಿಂದಲೇ ತಮ್ಮ ತಮ್ಮ ಸ್ತನಗಳನ್ನೂ ಸ್ವತ: ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಮುಟ್ಟಿಗೆ ಮುಂಚೆ ಸ್ತನ ನೋವು ಕೆಲವರಲ್ಲಿ ಕಾಣಿಸಿಕೊಳ್ಳುವುದರಿಂದ, ಮುಟ್ಟಾದ ನಂತರದ ಒಂದೆರಡು ದಿನಗಳಲ್ಲಿ ಪರೀಕ್ಷಿಸಿಕೊಳ್ಳಲು ಒಳ್ಳೆಯ ಸಮಯ. ಸ್ತನಗಳಲ್ಲಿ ಯಾವುದೇ ಗಡ್ಡೆಗಳಿದ್ದಲ್ಲಿ ಅಥವಾ ಮೊಲೆ ತೊಟ್ಟಿನಿಂದ ರಕ್ತ ಅಥವಾ ನೀರಿನಂತಹ ದ್ರವ ಸ್ರವಿಸುತ್ತಿದ್ದರೆ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಸ್ತನದ ಚರ್ಮವು ಕಿತ್ತಳೆ ಹಣ್ಣಿನ ಸಿಪ್ಪೆಯ ರೀತಿಯಿದ್ದು, ಕೆಳಗಡೆ ಗಡ್ಡೆಯಿದ್ದರೆ ಬಹುಶಃ ಅದು ಕ್ಯಾನ್ಸರ್ ಗಡ್ಡೆ ಇರಬಹುದು ತಡಮಾಡದೆ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಸೂಕ್ತ.

ನಿಮ್ಮ ಸ್ತನಗಳನ್ನು ನೀವೇ ಪರೀಕ್ಷಿಸಿಕೊಳ್ಳಿ: 
ಕನ್ನಡಿ ಮುಂದೆ ನಿಂತು ಎರಡು ಸ್ತನಗಳು ಒಂದೇ ಗಾತ್ರವಿದೆಯೇ ಹಾಗೂ ಮೊಲೆತೊಟ್ಟುಗಳು ಒಂದೇ ಸಮಮಟ್ಟದಲ್ಲಿದೆಯೇ ಎಂದು ನೋಡಬೇಕು. ಕೈಯನ್ನು ಸ್ತನದ ಮೇಲಿಟ್ಟು ಎದೆಗೂಡಿಗೆ ಸಮಾನಾಂತರವಾಗಿ ಒತ್ತಿದಾಗ ನಿಮ್ಮ ಕೈ ಹಾಗೂ ಎದೆಯ ಎಲುಬಿನ ಮದ್ಯೆ ಏನಾದರೂ ಗಡ್ಡೆಗಳು ಇವೆಯೇ ಎಂದು ನೋಡಿಕೊಳ್ಳಿ. ಹಾಗೆಯೇ ಮಲಗಿಕೊಂಡು ಪರೀಕ್ಷಿಸಿಕೊಳ್ಳಿ. ನಿಮಗೇನಾದರು ಸಂದೇಹವಿದ್ದರೆ ವೈದ್ಯರ ಬಳಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ, ಅವರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ವೈದ್ಯರು ನಿಮ್ಮನ್ನು ಪರೀಕ್ಷಿಸಿ ಗಡ್ಡೆ ಇದೆ ಅಂತಾದರೆ ಅದು ಕ್ಯಾನ್ಸರ್ ಹೌದೋ ಅಲ್ಲವೋ ಎಂದು ಖಚಿತ ಪಡಿಸಿಕೊಳ್ಳಲು ಹಾಗೂ ಅದು ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗೆ ಹೇಳಿದ ಕೆಲವು ತಪಾಸಣೆಗಳನ್ನು ಮಾಡುತ್ತಾರೆ. 

ಮ್ಯಾಮೋಗ್ರಫಿ _ (Mammography
ಕ್ಷಕಿರಣಗಳನ್ನು ಉಪಯೋಗಿಸಿ ಮ್ಯಾಮೋಗ್ರಫಿ ಮಾಡುತ್ತಾರೆ, ಇದರಿಂದ ಸ್ತನದಲ್ಲಿರುವುದು ಕ್ಯಾನ್ಸರ್ ಗಡ್ಡೆಯೋ ಅಥವಾ ಸೌಮ್ಯ ಗಡ್ಡೆಯೋ ಎಂದು ತಿಳಿಯುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರು 1-2 ವರ್ಷಕ್ಕೊಮ್ಮೆ ಮ್ಯಾಮೋಗ್ರಫಿ ಮಾಡಿಸಿಕೊಳ್ಳುವುದು ಒಳ್ಳೆಯದು.

ಸೋನೋಗ್ರಫಿ ಮತ್ತು ಸೂಜಿಯಿಂದ ದ್ರವವನ್ನು ತೆಗೆದು ಬಯಾಪ್ಸಿ ಮಾಡುವುದು (FNAB
ಸೋನೋಗ್ರಫಿ ಮಾಡುವುದರಿಂದ ಸ್ತನದಲ್ಲಿರುವ ಗಡ್ಡೆ ಕ್ಯಾನ್ಸರ್ ಗಡ್ಡೆಯೇ ಇಲ್ಲವೇ ನೀರಿನಿಂದ ತುಂಬಿದ ಗುಳ್ಳೆಯೇ ಎಂದು ತಿಳಿಯುತ್ತದೆ. ಸೋನೋಗ್ರಫಿ ಸಹಾಯದಿಂದ ಸೂಜಿಯಿಂದ ಅದರಲ್ಲಿರುವ ದ್ರವವನ್ನು ಇಲ್ಲವೇ ಜೀವಕೋಶಗಳನ್ನು ತೆಗೆದು ಕ್ಯಾನ್ಸರ್ ಕಣಗಳಿವೆಯೇ ಎಂದು ಪತ್ತೆ ಹಚ್ಚಬಹುದು.

ಚಿಕಿತ್ಸೆ
ಸ್ತನದ ಕ್ಯಾನ್ಸರ್ ಸೇರಿದಂತೆ ಇತರ ಎಲ್ಲಾ ಕ್ಯಾನ್ಸರ್ ರೋಗಗಳನ್ನು ನಾಲ್ಕು ಹಂತಗಳಲ್ಲಿ ಗುರುತಿಸುತ್ತೇವೆ. ಪ್ರಾರಂಭದ ಹಂತ, ಅಂದರೆ ಹಂತ ಒಂದು ಮತ್ತು ಹಂತ ಎರಡರಲ್ಲಿ ರೋಗವನ್ನು ಪತ್ತೆಹಚ್ಚಿದರೆ ಗಡ್ಡೆಯನ್ನು ಮಾತ್ರ ತೆಗೆದುಹಾಕಿ ನಂತರ ಬೇಕಾದ ವಿಕಿರಣ ಚಿಕಿತ್ಸೆ (ರೇಡಿಯೋಥೆರಪಿ) ಇಲ್ಲವೇ ರಸಾಯನ ಚಿಕಿತ್ಸೆ (ಕೀಮೋಥೆರಪಿ) ಗಳನ್ನು ಕೊಡುತ್ತಾರೆ. ಇದರಿಂದ ಮಹಿಳೆಯು 10-20 ವರ್ಷಗಳ ಕಾಲ ಚೆನ್ನಾಗಿ ಬಾಳಬಹುದು. ಮೂರು ಮತ್ತು ನಾಲ್ಕನೇ ಹಂತದಲ್ಲಿ ರೋಗ ಪತ್ತೆಯಾದರೆ ಶಸ್ತ್ರಚಿಕಿತ್ಸೆ ಮಾಡಲು ಕಷ್ಟವಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿ ಇಡೀ ಸ್ತನವನ್ನು ತೆಗೆದು ಹಾಕಬೇಕಾಗಬಹುದು. ನಂತರ ವಿಕಿರಣ ಚಿಕಿತ್ಸೆ ನೀಡಬೇಕಾಗಬಹುದು.  ಕೆಲವರಿಗೆ ರಸಾಯನ ಚಿಕಿತ್ಸೆಯನ್ನು ನೀಡುತ್ತಾರೆ. ಇದರಿಂದ ಮಹಿಳೆ ಕೆಲವು ತಿಂಗಳು ಅಥವಾ ವರ್ಷ ಕಾಲ ಆರಾಮವಾಗಿ ಕಳೆಯಬಹುದು. ನೋವಿನಿಂದ ನರಳುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರೋಗ ತುಂಬಾ ಉಲ್ಬಣಗೊಂಡಾಗ ನೋವಿನಿಂದ ನರಳುವುದನ್ನು ತಪ್ಪಿಸಲು ನೋವು ನಿವಾರಕಗಳನ್ನು ಕೊಡಬೇಕಾಗಬಹುದು.

ಸ್ತನದ ಕ್ಯಾನ್ಸರ್ ಬಾರದಂತೆ ತಡೆಗಟ್ಟುವ ವಿಧಾನಗಳು
- ಮೊದಲ ಮಗುವಿನ ಜನನವನ್ನು ಮುಂದೂಡಬೇಡಿ
- ಮಗುವಿಗೆ ಸ್ತನ್ಯಪಾನವನ್ನು ಒಂದು ವರ್ಷದವರೆಗೆ ಕಡ್ಡಾಯವಾಗಿ ಕೊಡುವುದು ಸೂಕ್ತ
- ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಿ
- ಪ್ರತಿ ವಾರದಲ್ಲಿ ನಾಲ್ಕು ಗಂಟೆಗಿಂತ ಹೆಚ್ಚಿಗೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿರಿ
- ಗರ್ಭ ನಿರೋಧಕ ಗುಳಿಗೆಗಳನ್ನು ಮತ್ತು ಚುಚ್ಚುಮದ್ದನ್ನು ಹಾಗೂ ಜೀವರಸ ಮರುಪೂರಣ ಚಿಕಿತ್ಸೆಯನ್ನು (HRT) ದೀರ್ಘಕಾಲ ತೆಗೆದುಕೊಳ್ಳಬಾರದು.
- ದ್ಯಪಾನ ಹಾಗೂ ಧೂಮಪಾನ ಪೂರ್ಣ ನಿಲ್ಲಿಸಿ ಬಿಡಿ.
- ಹೂಕೋಸು, ಎಲೆ ಕೋಸು, ಮೊಳಕೆ ಬರಿಸಿದ ಕಾಳು, ಮೀನು, ಸಸ್ಯಜನ್ಯ ಎಣ್ಣೆಯನ್ನು ಹೆಚ್ಚಾಗಿ ಉಪಯೋಗಿಸಿರಿ
- ಸೋಯಾ ಹಾಗೂ ದನದ ಹಾಲನ್ನೂ ಹೆಚ್ಚಾಗಿ ಸೇವಿಸಿದರೆ ಸ್ತನದ ಕ್ಯಾನ್ಸರನ್ನೂ ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬಹುದು. 

ಋತುಬಂಧದ ಆಸುಪಾಸಿನಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಸ್ತನದ ನೋವು ಕಾಣಿಸಿಕೊಳ್ಳುತ್ತದೆ. ಯಾವುದೇ ಗಡ್ಡೆಗಳಿಲ್ಲದೆ ಬರೀ ನೋವಿದ್ದರೆ ಚಿಂತಿಸಬೇಡಿ. ನಿಮ್ಮ ವೈದ್ಯರಲ್ಲಿಗೆ ಹೋಗಿ ತೋರಿಸಿಕೊಳ್ಳಿ. ಅದಕ್ಕೆ ಕೆಲವು ಔಷಧಿಗಳಿವೆ, ಅದರಿ0ದ ನೋವನ್ನು ಕಡಿಮೆಮಾಡಿಕೊಳ್ಳಬಹುದು.

ಗರ್ಭಕಂಠದ ಕ್ಯಾನ್ಸರ್ (Cervical Cancer
ಸ್ತನದ ಕ್ಯಾನ್ಸರ್ ನಂತರ ಹೆಚ್ಚಾಗಿ ಮಹಿಳೆಯರು ಸಾಯುವುದು ಗರ್ಭಕಂಠದ ಕ್ಯಾನ್ಸರ್‍ನಿಂದ. ಇದು 30 ರಿಂದ 35 ವರ್ಷಗಳಲ್ಲಿ ಹಾಗೂ 50-55 ವರ್ಷಗಳಲ್ಲೂ ಕಂಡುಬರುವ ಕ್ಯಾನ್ಸರ್.

ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುವುದು
- ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಹೆಂಗಸರಲ್ಲಿ
- ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುವವರಲ್ಲಿ
- ಒಬ್ಬರಿಗಿಂತ ಹೆಚ್ಚು ಗಂಡಸರೊಟ್ಟಿಗೆ ಲೈಂಗಿಕ ಸಂಬಂಧ ಹೊಂದಿರುವವರಲ್ಲಿ
- ವೇಶ್ಯೆಯರಲ್ಲಿ 
- ವೈರಲ್ ಸೋಂಕು ಇರುವವರಲ್ಲಿ
-
ಈ ಕೆಳಗಿನ ತೊಂದರೆಗಳು ಕಾಣಿಸಿಕೊಂಡಲ್ಲಿ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು 
- ಅನಿಯಮಿತ ರಕ್ತಸ್ರಾವ
- ಋತುಬಂಧದ ನಂತರ ರಕ್ತಸ್ರಾವ
- ಅತಿಯಾಗಿ ಬಿಳಿ ಹೋಗುವುದು ಹಾಗೂ ದುರ್ವಾಸನೆಯಿಂದ ಕೂಡಿರುವುದು
- ಕೆಂಪು ಮಿಶ್ರಿತ ಬಿಳಿಸ್ರಾವ
- ಸಂಭೋಗದ ನಂತರದ ರಕ್ತಸ್ರಾವ

ವೈದ್ಯರ ಬಳಿಗೆ ಹೋದಾಗ ವೈದ್ಯರು ಯೋನಿಯ ಮುಖಾಂತರ ಗರ್ಭಕಂಠ ವೀಕ್ಷಿಸಿ ಏನಾದರೂ ತೊಂದರೆ ಇದೆಯೇ ಎಂದು ಪರೀಕ್ಷಿಸುತ್ತಾರೆ. ಹೂಕೋಸಿನಂತಹ ದುರ್ಮಾಂಸ ಬೆಳೆದಿದ್ದರೆ ಅದರಿಂದ ಸ್ವಲ್ಪ ಚೂರನ್ನು ತೆಗೆದು ಪರೀಕ್ಷೆಗೆ ಕಳುಹಿಸುತ್ತಾರೆ. ಗರ್ಭಕಂಠದ ಕ್ಯಾನ್ಸರ್ ಅನ್ನು ಐದು ಹಂತಗಳಾಗಿ ವಿಂಗಡಿಸುತ್ತೇವೆ. ಯಾವ ಹಂತದಲ್ಲಿದೆ ಎಂದು ತಿಳಿಯಲು ಈ ಕೆಳಗೆ ತಿಳಿಸಿದ ತಪಾಸಣೆಗಳನ್ನು ಮಾಡಬೇಕಾಗುತ್ತದೆ. ಹಂತವನ್ನು ಗುರುತಿಸಿದ ನಂತರ ಚಿಕಿತ್ಸೆಯನ್ನೂ ಕೊಡಲು ಸುಲಭವಾಗುತ್ತದೆ. 

ಪ್ಯಾಪನ ಲೇಪನ:
ಗಡ್ಡೆಗಳು ಇಲ್ಲದಿದ್ದಲ್ಲಿ  ಮರದ ತೆಳು ಹಲಗೆಯ ಸಹಾಯದಿಂದ  ಗರ್ಭಕಂಠವನ್ನು ಸವರಿ ಲೇಪನವನ್ನು ತಯಾರಿಸಿ ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿದರೆ ಕ್ಯಾನ್ಸರ್ ಕಣಗಳು ಇವೆ0iÉುೀ ಎಂದು ತಿಳಿಯುತ್ತದೆ. ಅಸಾಮಾನ್ಯ ಕಣಗಳು ಇದ್ದಲ್ಲಿ ಇದನ್ನು ‘ಂ’ ಹಂತದ ಕ್ಯಾನ್ಸರ್ ಎಂದು ಗುರುತಿಸುತ್ತೇವೆ.

ವೈದ್ಯರು ಬರೀಗಣ್ಣಿನಿಂದ ನೋಡಿದ ಮೇಲೆ ಏನೂ ಕಾಣಿಸದಿದ್ದಲ್ಲಿ ಕಾಲ್ಪೋಸ್ಕೋಪಿ ಎಂಬ ಯಂತ್ರದಿಂದ ಗರ್ಭಕಂಠವನ್ನು ವೀಕ್ಷಿಸಿ ಏನಾದರೂ ಅಸಾಮಾನ್ಯವಾದುದು ಇದೆಯೇ  ಎಂದು ನೋಡುತ್ತಾರೆ. ಇದ್ದಲ್ಲಿ ಆ ಜಾಗದಿಂದ ತುಂಡೊಂದನ್ನು ತೆಗೆಯುತ್ತಾರೆ. ತೆಗೆಯುವ ಮೊದಲಿಗೆ ಅಸಿಟಿಕ್ ಅಸಿಡ್‍ನ್ನು ಲೇಪಿಸುತ್ತಾರೆ. ಅಸಿಟಿಕ್ ಅಸಿಡ್ ಅಸಾಮಾನ್ಯ ಜೀವಕೋಶಗಳೊಂದಿಗೆ ಬೆರೆತು ಅಸಾಮಾನ್ಯ ಕೋಶವು ಸರಿಯಾಗಿ ಕಾಣುವಂತೆ ಮಾಡುತ್ತದೆ. ಆಗ ಬಯಾಪ್ಸಿ ತೆಗೆಯಲು ಇನ್ನೂ ಸುಲಭವಾಗುತ್ತದೆ. ತೆಗೆದ ಭಾಗವನ್ನು ಪರೀಕ್ಷೆಗೆ ಕಳುಹಿಸಿ, ಕ್ಯಾನ್ಸರ್ ಕಣಗಳಿವೆಯೇ ಎಂದು ನೋಡುತ್ತಾರೆ. ‘0’ ಹಾಗೂ ಒಂದನೇ ಹಂತದ ಕ್ಯಾನ್ಸರ್ ಇದ್ದರೆ ಇದರಿಂದ ತಿಳಿಯುತ್ತದೆ. ‘0’ ಹಾಗೂ ಒಂದನೇ ಹಂತದ ಕ್ಯಾನ್ಸರ್ ಇದ್ದರೆ ಶಸ್ತ್ರ ಚಿಕಿತ್ಸೆಯ ಮುಖಾಂತರ ಕಾಯಿಲೆಯನ್ನು ವಾಸಿಗೊಳಿಸಬಹುದು.
2ನೇ ಹಂತದಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ವಿಧಗಳನ್ನು ಗುರುತಿಸಿ ‘ಎ’ ವಿಧವನ್ನೂ ‘ವರ್‍ಧೀಮ್‍ನ’ ಶಸ್ತ್ರ ಚಿಕಿತ್ಸೆ ಮೂಲಕ ನಿವಾರಣೆಗೊಳಿಸಬಹುದು. 2ನೇ‘ಬಿ’ ಹಂತ ಹಾಗೂ ‘3’ ಮತ್ತು ‘4’ನೇ ಹಂತದ ಕ್ಯಾನ್ಸರನ್ನೂ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಿಕಿರಣ ಚಿಕಿತ್ಸೆ ಇಲ್ಲವೇ ರಸಾಯನ ಚಿಕಿತ್ಸೆ ಕೊಟ್ಟು ಹೆಚ್ಚುಹರಡದಂತೆ ನೋಡಿಕೊಳ್ಳಬಹುದು, ಇಲ್ಲವೇ ರೋಗದ ತೀವ್ರ ಸ್ವರೂಪದ ತೊಂದರೆಗಳನ್ನು ತಹಬದಿಗೆ ತರಬಹುದಷ್ಟೇ ವಿನಹ ಪೂರ್ತಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. 
ಮೂರನೇ ಮತ್ತು ನಾಲ್ಕನೇ ಹಂತದಲ್ಲಿ ಗರ್ಭಕೋಶದ ಕ್ಯಾನ್ಸರ್ ಮೂತ್ರಕೋಶಕ್ಕೆ ಮತ್ತು ಮಲಕೋಶಕ್ಕೆ ಹರಡಿರುತ್ತದೆ. ಇದನ್ನು ತಿಳಿದುಕೊಳ್ಳಲು ಆಲ್ಟ್ರಾಸೋನೋಗ್ರಫಿ, ಸಿಸ್ಟೋಸ್ಕೋಪಿ ಮತ್ತು ರೆಕ್ಟೋಸ್ಕೋಪಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. 

ಮೂತ್ರಕೋಶಕ್ಕೆ ಹಬ್ಬಿದರೆ ಈ ಕೆಳಕಂಡ ತೊಂದರೆಗಳು ಕಾಣಿಸಿಕೊಳ್ಳಬಹುದು-
- ಉರಿಮೂತ್ರ
- ಪದೇ ಪದೇ ಮೂತ್ರ ವಿಸರ್ಜನೆ 
- ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. 

ಮಲಕೋಶಕ್ಕೆ ಸ್ವಲ್ಪ ನಿಧಾನವಾಗಿ ಹಬ್ಬುತ್ತದೆ ಮತ್ತು ಮಲ ವಿಸರ್ಜನೆಯಲ್ಲಿ ಸ್ವಲ್ಪ ವ್ಯತ್ಯಯವಾಗುತ್ತದೆ. 

ಕ್ಯಾನ್ಸರ್ ಕಣಗಳು ದುಗ್ಧ ನಾಳದ ಮುಖಾಂತರ ಮತ್ತು ರಕ್ತದ ಮೂಲಕ ಇತರ ಭಾಗಗಳಾದ ಮೆದುಳು, ಪುಪ್ಪಸ, ಮೂಳೆ,  ಯಕೃತ್ ಮುಂತಾದ ಕಡೆ ಹರಡುತ್ತದೆ. ಇದಕ್ಕೆ ‘ಮರುಚಲು ಕ್ಯಾನ್ಸರ್’ (metastasis) ಎಂದು ಕರೆಯುತ್ತಾರೆ. ಯೋನಿಗೆ  ನೇರವಾಗಿ ಹರಡುತ್ತದೆ. ಗರ್ಭಚೀಲದ ಕುತ್ತಿಗೆಯಿಂದ ಗರ್ಭಕೋಶಕ್ಕೆ ಹಾಗೂ ಡಿಂಭ ನಳಿಕೆಗೆ ಹರಡುತ್ತದೆ. ಸೊಂಟದ ಎಲುಬಿಗೆ (Pelvic bone) ನೇರವಾಗಿ ಹರಡುತ್ತದೆ. 

ಕೋನ್ ಬಯಾಪ್ಸಿ (Cone Biopsy)
 ಈ ಚಿಕಿತ್ಸೆ ಮಾಡಿದರೆ ಸೊನ್ನೆ ಹಂತದ ಕ್ಯಾನ್ಸರ್‍ಗೆ ಚಿಕಿತ್ಸೆ ಮಾಡಿದಂತೆ ಆಗುತ್ತದೆ. ಇದರಲ್ಲಿ ಗರ್ಭಕಂಠವನ್ನು ಶಂಖಾಕೃತಿ ರೂಪದಲ್ಲಿ ಕತ್ತರಿಸಿ ತೆಗೆಯುತ್ತಾರೆ ಹಾಗೂ ತೆಗೆದ ಭಾಗವನ್ನು  ಪರೀಕ್ಷೆಗೆ ಕಳುಹಿಸುತ್ತಾರೆ. ಇದಕ್ಕೆ ಹೆಚ್ಚಿನ ಖರ್ಚು ಬರುವುದಿಲ್ಲ. ತೊಂದರೆಗಳು ಕೂಡ ಉಂಟಾಗುವುದಿಲ್ಲ.
‘0’ ಹಂತದ ಮತ್ತು ಒಂದನೇ ಹಂತದ ಕ್ಯಾನ್ಸರ್‍ಗೆ ಲೇಸರ್ ಚಿಕಿತ್ಸೆ, ಕ್ರಯೋ ಸರ್ಜರಿ ಹಾಗೂ ಲೂಪ್ ಎಲೆಕ್ಟ್ರೋಸರ್ಜಿಕಲ್ ಚಿಕಿತ್ಸೆಗಳನ್ನು ಕೂಡ ಮಾಡಬಹುದು. ಇವೆಲ್ಲಕ್ಕೂ ತಜ್ಞ ವೈದ್ಯರ ಸಲಹೆ ಪಡೆಯುವುದು ಹಾಗೂ ಆಗಾಗ ತಪಾಸಣೆಗೊಳಗಾಗುವುದು ಅಗತ್ಯ. 

ಗರ್ಭಕಂಠದ ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು 
        -ಪ್ಯಾಪನ ಲೇಪನವನ್ನು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳಬಹುದು. ಎರಡು ಸಲ ಮಾಡಿದಾಗ ನೇತ್ಯಾತ್ಮಕ ಎಂದು ಬಂದರೆ ಐದು ವರ್ಷಕ್ಕೊಮ್ಮೆ ಜೀವಂತವಾಗಿರುವವರೆಗೂ ಮಾಡಿಸಿಕೊಂಡರೆ ಒಳ್ಳೆಯದು
- ಮದುವೆಯ ವಯಸ್ಸು 18 ಆಗಿರಲೇಬೇಕು 21 ಕ್ಕೆ ದೂಡಿದರೂ ಪರವಾಗಿಲ್ಲ.
- ಹೆಚ್ಚು ಮಕ್ಕಳನ್ನು ಹೆರಬೇಡಿ. ಒಂದು ಬೇಕು, ಇಲ್ಲವೇ ಎರಡು ಸಾಕು.
- ಲೈಂಗಿಕ ಸಂಬಂಧಗಳ ಬಗ್ಗೆ ಎಚ್ಚರಿಕೆಯಿಂದಿರಿ.
-ಇದಕ್ಕೆ ಸಂಬಂಧಿಸಿದಂತೆ ವ್ಯಾಕ್ಸಿನ್ ಬಂದಿದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ  ಸಂಶೋಧನೆಯ  ಅಗತ್ಯ ಇದೆ. ಈಗಲೇ ಅದರ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಆಗುವುದಿಲ್ಲ. ಸಧ್ಯಕ್ಕೆ ಮೂರು ಸಲ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. 18 ರಿಂದ 45 ವರ್ಷದವರೆಗಿನ ಲೈಂಗಿಕ ಚಟುವಟಿಕೆಯುಳ್ಳ ಎಲ್ಲಾ ಹೆಣ್ಣುಮಕ್ಕಳು ತೆಗೆದುಕೊಳ್ಳಬಹುದು.

ಗರ್ಭಕೋಶದ ಕ್ಯಾನ್ಸರ್
ಗರ್ಭಕೋಶದ ಒಳ ಪದರದಿಂದ ಆರಂಭವಾಗಿ ಇತರೆಡೆಗೆ ಹರಡುವ ಗರ್ಭಕೋಶದ ಕ್ಯಾನ್ಸರ್‍ನ ಮುಖ್ಯ ಗುಣಲಕ್ಷಣಗಳು
- ಅತೀವ ರಕ್ತಸ್ರಾವ, ಗಡ್ಡೆ ಗಡ್ಡೆಯಾಗಿ ರಕ್ತ ಹೋಗುವುದು
- ಋತುಬಂಧದ ನಂತರದ ರಕ್ತಸ್ರಾವ
- ಮುಟ್ಟು ಪದೇ ಪದೇ ಆಗುತ್ತಿರುವುದು 
- ಅತೀವ  ಬಿಳಿಸ್ರಾವವಾಗುತ್ತಿರುವುದು

ಗರ್ಭಕೋಶದ ಕ್ಯಾನ್ಸರ್ ಈ ಕೆಳಗಿನವರಲ್ಲಿ ಹೆಚ್ಚಾಗಿ ಕಂಡುಬರುವುದು
- ಸ್ಥೂಲ ದೇಹ ಹೊಂದಿದವರಲ್ಲಿ
- ಮಕ್ಕಳಾಗದ ಸ್ತ್ರೀಯರಲ್ಲಿ
- ತುಂಬಾ ಚಿಕ್ಕ ವಯಸ್ಸಿನಲ್ಲಿ ಋತುಮತಿಯಾದವರಲ್ಲಿ
- ತುಂಬಾ ವಯಸ್ಸಾದ ಮೇಲೆ ಋತುಬಂಧ ಹೊಂದಿದವರಲ್ಲಿ
- ಆರ್ಥಿಕ ಹಾಗೂ ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿದ ಸ್ತ್ರೀಯರಲ್ಲಿ 
- ಋತುಬಂಧದ ನಂತರ ರಸದೂತ ಮರುಪೂರಣ ಚಿಕಿತ್ಸೆ ತೆಗೆದುಕೊಳ್ಳುತ್ತಿರುವವರಲ್ಲಿ
- ಮಧುಮೇಹ ಅಥವಾ ರಕ್ತದೊತ್ತಡ ಕಾಯಿಲೆ ಇದ್ದವರಲ್ಲಿ

ವೈದ್ಯರ ಬಳಿಗೆ ಹೋದರೆ ಅವರು ನಿಮ್ಮನ್ನು ಕೂಲಂಕುಷವಾಗಿ ಪರೀಕ್ಷಿಸಿ ಗರ್ಭ ಚೀಲ ಹಿಗ್ಗಿದೆಯೇ ಇಲ್ಲವೇ ಎಂದು  ನೋಡಿ ನಿಮಗೆ ಅಲ್ಟ್ರಾಸೋನೋಗ್ರಫಿ ಪರೀಕ್ಷೆ ಮಾಡಿಸಿಕೊಳ್ಳಲು ಹೇಳುತ್ತಾರೆ. ಅದರಲ್ಲಿ ಗರ್ಭಕೋಶದ ಒಳಪದರದ ದಪ್ಪವನ್ನು ನೋಡುತ್ತಾರೆ. ತು0ಬಾ ದಪ್ಪಗಾಗಿದ್ದರೆ ಅದನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಗರ್ಭಕೋಶದ ಒಳಪದರವನ್ನು ಕೆರೆದು ತೆಗೆಯುವುದಕ್ಕೆ D&C ಎನ್ನುತ್ತಾರೆ. D&C ಮಾಡಿ ಒಳಪದರದ ಚೂರನ್ನು ಪರೀಕ್ಷೆಗೆ ಕಳುಹಿಸುತ್ತಾರೆ. ಅದರಲ್ಲಿ ಕ್ಯಾನ್ಸರ್ ಕಣಗಳಿದ್ದರೆ ಅಥವಾ ಜೀವಕೋಶಗಳು ಅಸಾಮಾನ್ಯವಾಗಿದ್ದರೆ ಗರ್ಭಕೋಶದ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡುತ್ತಾರೆ.

ಗರ್ಭಕೋಶದ ಕ್ಯಾನ್ಸರನ್ನು ಸಹ ನಾಲ್ಕು ಹಂತಗಳಲ್ಲಿ ಗುರುತಿಸಬಹುದು. ಒಂದು ಮತ್ತು ಎರಡನೇ ಹಂತದ ಕ್ಯಾನ್ಸರ್ ಅನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಮೂರು ಮತ್ತು ನಾಲ್ಕನೇ ಹಂತದ ಕ್ಯಾನ್ಸರ್‍ಗೆ ಶಸ್ತ್ರಚಿಕಿತ್ಸೆ ಜೊತೆಗೆ ವಿಕಿರಣ ಚಿಕಿತ್ಸೆ ಅಥವಾ ರಸಾಯನ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ಶಸ್ತ್ರ ಚಿಕಿತ್ಸೆಯಲ್ಲಿ ಅಳಿದುಳಿದ ಕ್ಯಾನ್ಸರ್ ಕಣಗಳನ್ನು ನಾಶ ಮಾಡಬಹುದು. ರೋಗಿಯ ಅಯಸ್ಸನ್ನು ಮತ್ತು ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಬಹುದು.

ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ದಪ್ಪಗಾಗಿರುವ ಹಾಲ್ರಸ ಗ್ರಂಥಿ (lymph node) ಗಳನ್ನು ತೆಗೆಯುವುದು ಅವಶ್ಯ ಏಕೆಂದರೆ ಹಾಲ್ರಸದ ಮೂಲಕ  ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡುತ್ತದೆ. ಇದನ್ನು ಮರುಚಲ ಕ್ಯಾನ್ಸರ್ ಎಂದು ಹೇಳುತ್ತೇವೆ. ಇದು ಕ್ಯಾನ್ಸರ್‍ನ ನಾಲ್ಕನೇ ಹಂತದಲ್ಲಿ ಕಂಡುಬರುವ ಸಮಸ್ಯೆ. ಮರುಚಲ ಕ್ಯಾನ್ಸರ್ ಮೂಳೆಯಲ್ಲಿ, ಮೆದುಳಿನಲ್ಲಿ, ಪುಪ್ಪುಸದಲ್ಲಿ, ಯಕೃತ್‍ನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಇದನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು
- 40 ರ ನಂತರ ಎಲ್ಲರೂ ಅಲ್ಟ್ರಾಸೋನೋಗ್ರಫಿ ಪರೀಕ್ಷೆ ಮಾಡಿಸಿಕೊಳ್ಳಿ
- ಅತೀವ ರಕ್ತಸ್ರಾವವಾದ ಕೂಡಲೇ ವೈದ್ಯರಲ್ಲಿಗೆ ಬನ್ನಿ, ವಿಳಂಬಮಾಡಬೇಡಿ
- ರಸದೂತ ಮರಪೂರಣ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ಆಗಾಗ ವೈದ್ಯರಲ್ಲಿ ತಪಾಸಣೆಗೆ ಒಳಗಾಗಿ, ನಿಮಗೆ ರಕ್ತಸ್ರಾವವಾದರೆ ತಕ್ಷಣ ಡಾಕ್ಟರ್ ಬಳಿಗೆ ಹೋಗಿ
- ಗರ್ಭನಿರೋಧಕ ಮಾತ್ರೆಗಳನ್ನು ಉಪಯೋಗಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳು ಕಡಿಮೆ ಎಂದು ಇತ್ತೀಚಿನ ಅಧ್ಯಯನಗಳಿಂದ ತಿಳಿದುಬಂದಿದೆ. ಆದ್ದರಿಂದ ಮಕ್ಕಳ ನಡುವೆ ಅಂತರ ಕಾಪಾಡಿಕೊಳ್ಳಲು ಗರ್ಭನಿರೋಧಕ ಗುಳಿಗೆಗಳನ್ನು ಅವಶ್ಯ ತೆಗೆದುಕೊಳ್ಳಿ ಮತ್ತು ವೈದ್ಯರ ಸಲಹೆಯನ್ನು ಆಗಾಗ ತೆಗೆದುಕೊಳ್ಳುತ್ತಿರಿ. 

ಅಂಡಾಶಯದ ಕ್ಯಾನ್ಸರ್ 

ಇದು ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಅದರೂ ಇದನ್ನು ಕಂಡು ಹಿಡಿಯುವುದು ಕಷ್ಟಸಾಧ್ಯ. ಗರ್ಭಕಂಠದ ಅಥವಾ ಗರ್ಭಕೋಶದ ಕ್ಯಾನ್ಸರ್‍ನಲ್ಲಿ ಇರುವಂತೆ ಇಲ್ಲಿ ರಕ್ತಸ್ರಾವವಾಗಲಿ, ಬಿಳಿಸ್ರಾವವಾಗಲಿ ಇರುವುದಿಲ್ಲ. ಆರಂಭಿಕ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳಿರುವುದಿಲ್ಲ. ಅತಿಯಾಗಿ ಬೆಳೆದು ದೊಡ್ಡ ಗಡ್ಡೆಯಾದಾಗಲಷ್ಟೇ ಹೊಟ್ಟೆ ಉಬ್ಬಿರುವುದನ್ನು ಗಮನಿಸಬಹುದು. ಋತುಸ್ರಾವ ಸರಿಯಾಗಿಯೇ ಇರುತ್ತದೆ. ನಲ್ವತ್ತರ ನಂತರ ಎಲ್ಲರೂ ಸ್ಥೂಲಕಾಯರಾಗುವುದರಿ0ದ  ಆ ಸಮಯದಲ್ಲಿ ಹೊಟ್ಟೆಯ ಸುತ್ತ ಕೊಬ್ಬಿನಾಂಶ ಶೇಖರವಾಗಿರುವುದರಿಂದ ಎಲ್ಲರೂ ನಿರ್ಲಕ್ಷಿಸುತ್ತಾರೆ. ಹಾಗಾಗಿ ವೈದ್ಯರ ಬಳಿ ಬರುವಾಗ ವಿಳಂಬವಾಗಿರುತ್ತದೆ. ಬಂದರೂ ಇವರಲ್ಲಿ ಕರುಳು ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಹೆಚ್ಚಾಗಿರುತ್ತದೆ. ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಭಾವನೆ, ತೂಕದಲ್ಲಿ ಇಳಿಕೆ, ವಾಕರಿಕೆ ಮತ್ತು ವಾಂತಿಯಾಗುವುದು. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು - ಇವೆಲ್ಲ ಸಾಮಾನ್ಯವಾಗಿ ಕೇಳಿ ಬರುವ ತೊಂದರೆಗಳು. ಕಿಬ್ಬೊಟ್ಟೆ ನೋವು, ಅನಿಯಮಿತ ರಕ್ತಸ್ರಾವ, ಮಲಬದ್ಧತೆ, ಇವೂ ಕೂಡ ಕೆಲವರಲ್ಲಿ ಇರಬಹುದುದು. ವೈದ್ಯರು ನಿಮ್ಮ ತೊಂದರೆಗಳ ಪಟ್ಟಿಯನ್ನು ಪಡೆದು ಪರೀಕ್ಷೆ ಮಾಡುತ್ತಾರೆ. ದೊಡ್ಡ ಗಡ್ಡೆಗಳಿದ್ದರೆ ಹೊಟ್ಟೆ ಮುಟ್ಟಿ ನೋಡಿದಾಗಲೇ ಗಡ್ಡೆ ಕೈಗೆ ಸಿಗುತ್ತದೆ.  ಯೋನಿ ಮೂಲಕ ಪರೀಕ್ಷೆ ಮಾಡಿದರೆ ಗರ್ಭಕೋಶದ ಗಾತ್ರ ಹಾಗೂ ಅದರ ಪಕ್ಕದಲ್ಲಿರುವ ಅಂಡಾಶಯ ದೊಡ್ಡದಾಗಿದ್ದರೆ ಅದರ ಗಾತ್ರ ತಿಳಿಯುತ್ತದೆ. ಕೆಲವೊಮ್ಮೆ ಗುದನಾಳದ ಮೂಲಕ ಈ ಗಡ್ಡೆ ಕೈಗೆ ಸಿಗಬಹುದು. 

ಆಲ್ಟ್ರಾಸೋನೋಗ್ರಫಿ ಪರೀಕ್ಷೆಯಿಂದ ಗಡ್ಡೆ ಇದೆಯೇ, ಇಲ್ಲವೇ ಎ0ಬ ನಿಖರವಾದ ಮಾಹಿತಿಯನ್ನು ಪಡೆಯಬಹುದು. ಗಡ್ಡೆ ಇದ್ದರೆ ಅದು  ಕ್ಯಾನ್ಸರ್ ಗಡ್ಡೆಯೇ ಇಲ್ಲವೇ ಸೌಮ್ಯ ಸ್ವಭಾವದ ನೀರು ತುಂಬಿದ ಗುಳ್ಳೆಯೇ ಎಂದು  ತಿಳಿಯಬಹುದು. ಇದರ ಜೊತೆ ಕ್ಷ-ಕಿರಣ,  ಬೇರಿಯಂ ಎನಿಮಾ ಹಾಗೂ ರಕ್ತದಲ್ಲಿ ಸಿ.ಎ-125 ಎ0ಬ ಕ್ಯಾನ್ಸರ್ ಸೂಚಕದ ಪ್ರಮಾಣವನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆ ಮಾಡಬಹುದೇ ಇಲ್ಲವೇ ಎಂದು ನಿರ್ಧರಿಸಬಹುದು. ಹೊಟ್ಟೆಯಲ್ಲಿ ನೀರು ತುಂಬಿದ್ದರೆ ಆಲ್ಟ್ರಾಸೋನೋಗ್ರಫಿಯಲ್ಲಿ ತಿಳಿಯುತ್ತದೆ. ಹಾಗಾದಲ್ಲಿ ಸೂಜಿಯ ಮೂಲಕ ಹೊಟ್ಟೆಯೊಳಗಿಂದ ನೀರನ್ನು ತೆಗೆದು ಸೂಕ್ಷ್ಮದರ್ಶಕ ಪರೀಕ್ಷೆಗೆ ಒಡ್ಡಿದರೆ ಕ್ಯಾನ್ಸರ್ ಕಣಗಳಿವೆಯೇ ಎಂದು ತಿಳಿಯಬಹುದು. ಇವೆಲ್ಲಾ ಪರೀಕ್ಷೆ ಮಾಡುವುದರಿಂದ ರೋಗದ ಹಂತವನ್ನೂ ಹಾಗೂ ಅದರ ಚಿಕಿತ್ಸೆಯನ್ನು ನಿರ್ಧರಿಸಲು ಸಹಾಯಕವಾಗುವುದು.

ಅಂಡಾಶಯದ ಕ್ಯಾನ್ಸರ್‍ಅನ್ನು ಕೂಡ ನಾಲ್ಕು ಹ0ತಗಳಲ್ಲಿ ಗುರುತಿಸುತ್ತೇವೆ. ಇದರಲ್ಲಿ ವಿವಿಧ ರೀತಿಯ ಕ್ಯಾನ್ಸರ್‍ಗಳಿವೆ. ಅದನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ನೋಡಿ ನಿರ್ಧರಿಸಲಾಗುವುದು.

ಇತ್ತೀಚೆಗೆ ಎಂ.ಆರ್.ಐ ಹಾಗೂ ಸಿ.ಟಿ. ಸ್ಕ್ಯಾನ್ ಮೂಲಕ ರೋಗ ಎಲ್ಲಿಯವರೆಗೂ ಹಬ್ಬಿದೆ, ಶಸ್ತ್ರ ಚಿಕಿತ್ಸೆ ಮಾಡಲು ಆಗುತ್ತದೆ ಇಲ್ಲವೇ ಎಂದು ನಿರ್ಧರಿಸಬಹುದು. ಅಂಡಾಶಯದ ಕ್ಯಾನ್ಸರ್‍ಗೆ ಶಸ್ತ್ರ ಚಿಕಿತ್ಸೆ ಮಾಡುವುದು ಯಾವಾಗಲೂ ಉತ್ತಮ, ಕೆಲವೊಮ್ಮೆ ಕ್ಯಾನ್ಸರ್ ಎಲ್ಲಾ ಕಡೆಗೂ ಹರಡಿ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಯಾವ ರೀತಿಯ ಕ್ಯಾನ್ಸರ್ ಎಂದು ತಿಳಿದುಕೊಳ್ಳಲು ಸೂಕ್ಷ್ಮದರ್ಶಕ ಪರೀಕ್ಷೆಗೋಸ್ಕರ ಸ್ವಲ್ಪ ಭಾಗವನ್ನು ಮಾತ್ರ  ತೆಗೆದು ಮತ್ತೇನನ್ನು ಮಾಡದೆ ತೆರೆದ ಭಾಗವನ್ನು ಮುಚ್ಚಬೇಕಾಗುತ್ತದೆ. 

ರಸಾಯನ ಚಿಕಿತ್ಸೆ ಈ ಕ್ಯಾನ್ಸರ್‍ಗೆ ಒಂದು ಉತ್ತಮ ಪರ್ಯಾಯ ಚಿಕಿತ್ಸೆ. ಶಸ್ತ್ರ ಚಿಕಿತ್ಸೆಗೆ ಮುಂಚೆ ಕೊಟ್ಟರೆ ಗಡ್ಡೆ ಕರಗಿ ಶಸ್ತ್ರ ಚಿಕಿತ್ಸೆ ಮಾಡಲು ಅನುಕೂಲವಾಗುತ್ತದೆ. ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಕೊಟ್ಟರೆ ಅಳಿದುಳಿದ ಕ್ಯಾನ್ಸರ್ ಕಣಗಳು ನಾಶವಾಗುತ್ತವೆ.

ಶಸ್ತ್ರ ಚಿಕಿತ್ಸೆ ಮಾಡುವಾಗ ಗರ್ಭಕೋಶವನ್ನು, ಗರ್ಭನಾಳಗಳನ್ನು, ಗಡ್ಡೆಯಿಂದ ಕೂಡಿದ ಅಂಡಾಶಯ ಹಾಗೂ ಉಳಿದ ಎದುರುಗಡೆ ಅಂಡಾಶಯವನ್ನು ತೆಗೆದು ಹಾಕಲಾಗುತ್ತದೆ. ಅದರೊಂದಿಗೆ ಹಾಲ್ರಸ ಗ್ರಂಥಿಗಳು ದೊಡ್ಡದಾಗಿದ್ದರೆ ಅದನ್ನು ಕೂಡ ತೆಗೆಯಲಾಗುವುದು. ವಿಕಿರಣ ಚಿಕಿತ್ಸೆಯು ಕೆಲವೊಂದು ಕ್ಯಾನ್ಸರ್‍ಗೆ ಒಳ್ಳೆಯದಾಗುತ್ತದೆ. ಆದ್ದರಿಂದ ನಾವು ಕ್ಯಾನ್ಸರನ್ನು ಮೊದಲಿಗೆ ಗುರುತಿಸುವುದು ಅವಶ್ಯಕ ಮತ್ತು ಯಾವ ಹಂತದಲ್ಲಿದೆ ಎಂದು ತಿಳಿಯುವುದು ಮುಖ್ಯ. ವ್ಯಕ್ತಿಯ ವಯಸ್ಸು ಅವರ ಸಂತಾನೋತ್ಪತ್ತಿಯ ಮಟ್ಟ ಹಾಗೂ ಕ್ಯಾನ್ಸರ್‍ನ ಹಂತವನ್ನು ಅವಲಂಬಿಸಿ ಯಾವ ರೀತಿಯ ಚಿಕಿತ್ಸೆ ಬೇಕಾಗಬಹುದೆಂದು ನಿರ್ಧರಿಸಲಾಗುವುದು.

ಅಂಡಾಶಯದ ಕ್ಯಾನ್ಸರ್‍ಗೆ ಸಂಭಾವ್ಯ ಕಾರಣಗಳು
- ತಾಯಿ, ಅಕ್ಕ- ತಂಗಿಯರಲ್ಲಿ, ಸಮೀಪ ಸಂಬಂಧಿಗಳಲ್ಲಿ ಅಂಡಾಶಯದ ಕ್ಯಾನ್ಸರ್ ಇದ್ದರೆ ನಿಮಗೂ ಬರಬಹುದು
- ಗರ್ಭಧರಿಸದ ಹೆಂಗಸರಲ್ಲಿ ಹೆಚ್ಚಾಗಿ ಕಂಡುಬರುತ್ತದೆ
- ಸ್ತನ ಕ್ಯಾನ್ಸರ್ ಇದ್ದವರಲ್ಲಿ ಹೆಚ್ಚಾಗಿ ಕಾಣಬರುತ್ತದೆ  

ಆದರೆ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೆ ಸಂಭಾವ್ಯ ಕಡಿಮೆ

ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು
- ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಿ.
- 40 ರ ನಂತರ ಆಗಾಗ ಆಲ್ಟ್ರಾಸೋನೋಗ್ರಫಿ ಮಾಡಿಸಿಕೊಳ್ಳಬಹುದು.
- ಮೇಲೆ ತಿಳಿಸಿದಂತೆ ಮನೆಯಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದಲ್ಲಿ ನೀವು ಆಗಾಗ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ.

ಡಿಂಭನಾಳದ ಕ್ಯಾನ್ಸರ್ (Tubal Cancer
ಇದು ಅತ್ಯಂತ ಅಪರೂಪದ ಕ್ಯಾನ್ಸರ್, ಇದರ ರೋಗಲಕ್ಷಣಗಳು
- ಗರ್ಭಕೋಶದ ಕಿಳ್ಗುಳಿಯ ನೋವು 
- ಯೋನಿಯ ಮೂಲಕ ತೆಳುವಾದ ನೀರಿನಂತಹ ದ್ರವಸ್ರಾವ

ಆಲ್ಟ್ರಾಸೋನೋಗ್ರಫಿ ಮೂಲಕ ಕೆಲವೊಮ್ಮೆ ಇದನ್ನು ಪತ್ತೆ ಹಚ್ಚಬಹುದು.
ಶಸ್ತ್ರ ಚಿಕಿತ್ಸೆ ಮತ್ತು ರಸಾಯನ ಚಿಕಿತ್ಸೆಯಿಂದ ಇದನ್ನು ನಿವಾರಿಸಿಕೊಳ್ಳಬಹುದು

ಯೋನಿಯ ಕ್ಯಾನ್ಸರ್ ( Vaginal Cancer) 
 ಇದು ಕೂಡ  ಅತಿ ವಿರಳವಾದ ಕ್ಯಾನ್ಸರ್
- ಯೋನಿಯಲ್ಲಿ ಹುಣ್ಣು ಅಥವಾ ಹೂಕೋಸಿನ ರೂಪದ ಗಡ್ಡೆ ಕಾಣಿಸಿಕೊಳ್ಳುವುದು.
- ಬಿಳಿ- ಕೆಂಪು ಮಿಶ್ರಿತ ಕೆಟ್ಟ ವಾಸನೆಯುಕ್ತ ಯೋನಿ ಸ್ರಾವ.
- ಸಂಭೋಗದ ಸಮಯದಲ್ಲಿ ಕೆಂಪುಸ್ರಾವ ಕಾಣಿಸಿಕೊಳ್ಳುವುದು.
- ಋತುಬಂಧದ ನಂತರ ಕಾಣಿಸಿಕೊಳ್ಳುವ ಕ್ಯಾನ್ಸರ್ .
- ಮೊದಲಿಗೆ ವೈರಾಣುವಿನಿಂದ ಬರುವಂತಹ ಸೋಂಕು ನಂತರ ಕ್ಯಾನ್ಸರ್‍ಗೆ ತಿರುಗುವುದು.
- ಬಯಾಪ್ಸಿ ಮಾಡಿ, ಚೂರನ್ನು ತೆಗೆದು ಕ್ಯಾನ್ಸರ್‍ ಅನ್ನು ಖಚಿತಪಡಿಸಿಕೊಳ್ಳಬಹುದು.
ಶಸ್ತ್ರ ಚಿಕಿತ್ಸೆ ಮಾಡಿ ಯೋನಿ, ಗರ್ಭಕೋಶ, ಅಂಡಾಶಯ ಹಾಗೂ ಹಾಲ್ರಸ ಗ್ರಂಥಿಗಳನ್ನು ತೆಗೆದು ಹಾಕಬೇಕು. ಶಸ್ತ್ರ ಚಿಕಿತ್ಸೆ ತುಂಬಾ ಕ್ಲಿಷ್ಟಕರವಾದುದು. ಶಸ್ತ್ರ ಚಿಕಿತ್ಸೆ ಅಸಾಧ್ಯವಾದಾಗ ವಿಕಿರಣ ಚಿಕಿತ್ಸೆ ಕೊಡಬಹುದು. ವ್ಯಕ್ತಿಯ ವಯಸ್ಸು, ಕ್ಯಾನ್ಸರ್‍ನ ಹಂತ ಇದನ್ನು ಅವಲಂಬಿಸಿ ಚಿಕಿತ್ಸೆ ಮಾಡಬೇಕಾಗುತ್ತದೆ. 
(ಮುಂದುವರೆಯುತ್ತದೆ)
- ಡಾ ಪೂರ್ಣಿಮಾ. ಜೆ 

No comments:

Post a Comment