Thursday 14 September 2017

ಲೇಖನ - ಸಶಕ್ತೀಕರಣ ಪರಿಕಲ್ಪನೆ


       ‘ಶಕ್ತಿ ಪರಿಕಲ್ಪನೆ ಸುತ್ತ ನಡೆಯುವ ಕ್ರಿಯೆಯೇ ಸಶಕ್ತೀಕರಣ. ಸಶಕ್ತೀಕರಣವು ಒಂದು ಪರಿಕಲ್ಪನೆಗಿಂತ ಹೆಚ್ಚಾಗಿ ಪ್ರಕ್ರಿಯೆಯಾಗಿದೆ. ಅಂದರೆ ವ್ಯಕ್ತಿಗಳು ಶಕ್ತಿಯನ್ನು ಹೊಂದುವಂತೆ ಮಾಡುವ ಕ್ರಿಯೆಯೇ ಸಶಕ್ತೀಕರಣವೆನಿಸಿಕೊಳ್ಳುತ್ತದೆ. ಶಕ್ತಿಯನ್ನು ಹೊಂದುವಂತೆ ಮಾಡುವುದು ಎನ್ನುವುದು ಅವರು ಅಶಕ್ತ, ಶಕ್ತಿ ಇಲ್ಲದವರು ಅನ್ನುವುದನ್ನು ಸೂಚಿಸುತ್ತದೆ. ಏಕೆ ಅಶಕ್ತರಾಗಿದ್ದಾರೆ, ಅಶಕ್ತತೆಯ ಸ್ವರೂಪವೇನು, ಅವರನ್ನು ಹೇಗೆ ಸಶಕ್ತಗೊಳಿಸಬೇಕು ಅನ್ನುವುದನ್ನು ಶಕ್ತಿ ಪರಿಕಲ್ಪನೆಯ ಅರ್ಥ, ಆಯಾಮಗಳನ್ನು ಅನ್ವಯಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಮೊದಲಿಗೆ ಶಕ್ತಿ ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ಅರ್ಥಮಾಡಿಕೊಳ್ಳೋಣ.
ಶಕ್ತಿ ಪರಿಕಲ್ಪನೆ:
ಶಕ್ತಿ ಪದವನ್ನು ಸಾಮಾನ್ಯ ಪದವಾಗಿ ಮತ್ತು ಪರಿಕಲ್ಪನೆಯಾಗಿ ಬಳಸಲಾಗುತ್ತದೆ. ಸಾಮಾನ್ಯ ಅರ್ಥದಲ್ಲಿ ಶಕ್ತಿಯನ್ನು ದೈಹಿಕ ಸಾಮಥ್ರ್ಯಕ್ಕೆ ಅನ್ವಯವಾಗುವಂತೆ ಉಪಯೋಗಿಸಲಾಗುತ್ತದೆ. ಬಲ, ಚೈತನ್ಯ, ಸಾಮಥ್ರ್ಯ, ಅಧಿಕಾರ, ಪ್ರಾಬಲ್ಯ, ಪ್ರಭಾವ, ನಿಯಂತ್ರಣ, ಅರ್ಹತೆ, ಸಾಹಸ, ಮುಂತಾದ ಪದಗಳಿಗೆ ಪರ್ಯಾಯವಾಗಿ ಶಕ್ತಿಯನ್ನು ಬಳಸಲಾಗುತ್ತದೆ. ಯಾವುದೇ ಒಂದು ಜೀವಿಯಲ್ಲಿ ಜೀವ ಅಂಕುರವಾಗಿ ಅದು ಅಳಿಯುವವರೆಗೆ ಶಕ್ತಿಯು ಚೈತನ್ಯ ರೂಪದಲ್ಲಿ ಇರುತ್ತದೆ. ಅದು ವಿವಿಧ ರೂಪ ಪಡೆದು ದೈಹಿಕ, ಮಾನಸಿಕ ಹಂತಗಳಿಗೆ ಹರಡಿಕೊಂಡಿರುತ್ತದೆ. ಮಾನವರಲ್ಲಿ ಮಾನಸಿಕ ಹಂತದಲ್ಲಿ ಪ್ರಬಲವಾಗಿರುತ್ತದೆ. ಅದಕ್ಕೆ ಅವರನ್ನು ಬುದ್ದಿಜೀವಿಗಳು ಎಂದು ಕರೆಯುವುದು. ದೇಹದ ಶಕ್ತಿ ದೈಹಿಕ ಕಾರ್ಯಗಳನ್ನು ಮಾಡಲು ಸಹಾಯಕವಾದರೆ ಮಾನಸಿಕ ಶಕ್ತಿ ವಿಚಾರ ಮಾಡಲು, ವಿವೇಚಿಸಲು, ಆಲೋಚಿಸಲು ಸಹಾಯ ಮಾಡುತ್ತದೆ. ಎರಡೂ ಸೇರಿ ಮಾನವರನ್ನು ಇತರ ಜೀವಿಗಳಿಗಿಂತ ಭಿನ್ನವಾಗಿಸಿವೆ.
ಶಕ್ತಿ ಎಂಬ ಸಾಮಾನ್ಯ ಪದವನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ, ಅರ್ಥ ನಿರೂಪಣೆಯನ್ನು ನೀಡಿದಾಗ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತದೆ. ಶಕ್ತಿಯು ಜೈವಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಪೌರಾಣಿಕ, ಜಂಡರ್ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಒಂದು ಪರಿಕಲ್ಪನೆಯಾಗಿ ಬೆಳೆಯುತ್ತದೆ. ಅಂದರೆ ಮೇಲಿನ ಎಲ್ಲಾ ನೆಲೆಗಳಲ್ಲಿ ಶಕ್ತಿ ಪದವನ್ನು ಅಥೈಸಬಹುದು. ಅಂತಹ ಒಂದು ಪ್ರಯತ್ನವನ್ನು ಭಾಗದಲ್ಲಿ ಮಾಡಲಾಗುವುದು.
ಮೊದಲಿಗೆ ಜೈವಿಕ ನೆಲೆಯಲ್ಲಿ ನೋಡೋಣ. ಜೀವಿಯಲ್ಲಿ, ವ್ಯಕ್ತಿಯಲ್ಲಿ ಸಂಚಯವಾಗುವ ಶಕ್ತಿಯು ದೈಹಿಕವಿರಬಹುದು, ಮಾನಸಿಕವಿರಬಹುದು, ಪ್ರಕೃತಿದತ್ತವಾಗಿರಬಹುದು, ತಂದೆ ತಾಯಿಯಿಂದ ವಂಶಪಾರಂಪರೆಯಾಗಿ ಬಂದಿರಬಹುದು, ವ್ಯಕ್ತಿಯೇ ಸ್ವಪ್ರಯತ್ನದಿಂದ ಬೆಳೆಸಿಕೊಂಡಿರಬಹುದು. ಅದು ಹೇಗೆ ಬಂದಿರಲಿ ಶಕ್ತಿ ಇರುವ ಇಲ್ಲದಿರುವ ಜೀವಿಗಳನ್ನು, ವ್ಯಕ್ತಿಗಳನ್ನು ಗುರುತಿಸಿ ಭಿನ್ನವಾಗಿ ನೋಡಲಾಗುತ್ತದೆ.  ದೈಹಿಕ ಬಲ ಹೆಚ್ಚಾಗಿದ್ದರೆ ಬಲಶಾಲಿ/ಶಕ್ತಿಶಾಲಿ/ಬಲಾಡ್ಯ ಎಂದು ಗುರುತಿಸಲಾಗುತ್ತದೆ. ಅದು ಪ್ರಾಣಿಯಿರಲಿ, ಮಾನವರಿರಲಿ ಇವರು ಮನ್ನಣೆ, ಗೌರವ ಪಡೆದುಕೊಳ್ಳುತ್ತಾರೆ. ಮೇಲಿನ, ಆಳ್ವಿಕೆ ಸ್ಥಾನ ಪಡೆದುಕೊಳ್ಳುತ್ತಾರೆ. ದೈಹಿಕ ಬಲವಿಲ್ಲದವರು ದುರ್ಬಲರು, ಅಸಹಾಯಕರು, ಅಶಕ್ತರು ಎಂದು ಪರಿಗಣಿಸಲಾಗುತ್ತದೆ. ಕೀಳಾಗಿ ನೋಡಲಾಗುತ್ತದೆ. ಇವರು ಅವಲಂಬಿತರಾಗಿರುತ್ತಾರೆ, ಕೆಳಸ್ಥಾನದಲ್ಲಿರುತ್ತಾರೆ. ಆದರೂ ಇವರು ಸಂಪೂರ್ಣ ಅಶಕ್ತರು ಎಂದಲ್ಲ. ಅವರಲ್ಲೂ ಒಂದಲ್ಲಾ ಒಂದು ರೀತಿಯ ಶಕ್ತಿಯಿರುತ್ತದೆ. ಅದನ್ನು ವಿಚಾರವಂತರೆನಿಸಿಕೊಳ್ಳುವವರು ಗುರುತಿಸಬೇಕಷ್ಟೆ.
ಜೈವಿಕ ನೆಲೆಯಲ್ಲಿ ಯಾರು ಸಮರ್ಥರೋ/ಅರ್ಹರೋ ಅವರು ಉಳಿಯುತ್ತಾರೆ ಅನ್ನುವ ನಾಡ್ಣುಡಿಯಿದೆ. ಅಂದರೆ ಲಕ್ಷಾಂತರ ಜೀವಿಗಳು ಉಳಿವಿಗಾಗಿ ಹೋರಾಡುತ್ತಿರುವಾಗ ಯಾರೂ ಅರ್ಹರಿರುತ್ತಾರೋ ಅವರು ಉಳಿಯುತ್ತಾರೆ. ಇಲ್ಲಿ ದೈಹಿಕ ಸಾಮಥ್ರ್ಯ, ಚಾತುರ್ಯ, ಯುಕ್ತಿ ಮುಖ್ಯವಾಗುತ್ತದೆ. ಉಳಿವಿಗಾಗಿ ಜೀವಿಗಳು ಜೈವಿಕ ಅವಶ್ಯಕತೆಗಳನ್ನು ಪೂರೈಸಿಕೊಂಡು ಶಕ್ತಿಯನನು ಪಡೆದುಕೊಳ್ಳುತ್ತವೆ. ಮಾನವ ಜೀವಿಗಳು ಇದರ ಜೊತೆಗೆ ಮಾನಸಿಕ ಬಲವನ್ನು ಬೆಳೆಸಿಕೊಂಡು (ಸಾಮಜೀಕರಣದ ಮೂಲಕ) ಸಾಮಾಜಿಕ ನೆಲೆಯನ್ನು ಕಟ್ಟಿಕೊಳ್ಳುತ್ತಾರೆ. ಕುಟುಂಬದೊಂದಿಗೆ ಪ್ರಾರಂಭವಾಗುವ ಸಾಮಾಜಿಕ ನೆಲೆ ವಿಸ್ತಾರಗೊಂಡು ವ್ಯಕ್ತಿಗೆ ಸಾಮಾಜಿಕ ಶಕ್ತಿಯನ್ನು ಒದಗಿಸುತ್ತದೆ. ಅಂದರೆ ಪ್ರಾಣ ರಕ್ಷಣೆ, ಮೂಭೂತ ಅವಶ್ಯಕತೆಗಳು, ಶಿಕ್ಷಣ, ಆರ್ಥಿಕ ಭದ್ರತೆ, ಮಾನಸಿಕ, ಭಾವನಾತ್ಮಕ ಬೆಂಬಲ, ಆರೋಗ್ಯ ರಕ್ಷಣೆ ನೀಡುವುದರ ಮೂಲಕ ಒಂದು ಮಗುವು ವ್ಯಕ್ತಿಯಾಗಿ ರೂಪುಗೊಳ್ಳುವಂತೆ ಸಮಾಜದಲ್ಲಿ ಒಂದು ಸ್ಥಾನ ದೊರಕುವಂತೆ ಮಾಡುತ್ತದೆ. ಇಲ್ಲಿ ಶಕ್ತಿಯು ಸಾಮಾಜಿಕ ನೆಲೆಯನ್ನು ಪಡೆದುಕೊಳ್ಳುತ್ತದೆ.
ಶಕ್ತಿ ಪರಿಕಲ್ಪನೆಯು ಆರ್ಥಿಕ ಅಂಶಗಳನ್ನು ಒಳಗೊಂಡಿದೆ, ಪ್ರಭಾವಿಸಲ್ಪಡುತ್ತದೆ, ಆಧರಿಸಲ್ಪಟ್ಟಿದೆ. ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಿಂದ ಹಿಡಿದು ಕೌಶಲ್ಯ ಬೆಳವಣಿಗೆ, ಶಿಕ್ಷಣ, ಆದಾಯಗಳಿಸುವ ಸಾಮಥ್ರ್ಯ, ಸಂಪನ್ಮೂಲಗಳ ಲಭ್ಯತೆ, ಹಂಚಿಕೆಗಳವರೆಗಿನ ಆರ್ಥಿಕ ಅಂಶಗಳು ಶಕ್ತಿಯನ್ನು ಕಟ್ಟಿಕೊಡುತ್ತವೆ. ಯಾವ ವ್ಯಕ್ತಿಗಳು ಇವೆಲ್ಲವುಗಳನ್ನು ಹೊಂದುತ್ತಾರೋ, ಅವರು ಆರ್ಥಿಕವಾಗಿ ಬಲಾಡ್ಯರೆನಿಸಿಕೊಳ್ಳುತ್ತಾರೆ ಅವರು ಇತರರನ್ನು ನಿಯಂತ್ರಿಸುತ್ತಾರೆ, ಆಳುತ್ತಾರೆ. ಇಲ್ಲದವರು ಅಧೀನಕ್ಕೊಳಗಾಗುತ್ತಾರೆ ಹಾಗೂ ಆರ್ಥಿಕವಾಗಿ ಅಶಕ್ತರಾಗುತ್ತಾರೆ.
ಒಂದು ಜೈವಿಕ ಜೀವಿಯನ್ನು ಸಾಮಾಜಿಕ ಜೀವಿಯನ್ನಾಗಿಸುವಲ್ಲಿ ಮನೋಶಕ್ತಿಯು ಪ್ರಮುಖ ಪಾತ್ರವಹಿಸುತ್ತದೆ.  ಮಾನಸಿಕವಾಗಿ ಸ್ವಸ್ಥರಾದವರು ಶಕ್ತ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಚಿಂತನೆ, ವಿಚಾರ, ವಿವೇಚನಾ ಶಕ್ತಿಯಿಂದ ಬುದ್ದಿಜೀವಿ ಎನಿಸಿಕೊಳ್ಳುವ ಮಾನವರು ಪ್ರಕೃತಿಯ ಮೇಲೆ ಹಾಗೂ ಇತರ ಜೀವಿ ವರ್ಗಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿದೆ. ಇದನ್ನು ಸಮಾಜಕ್ಕೂ ವಿಸ್ತರಿಸಿಕೊಂಡು ಜನರ ಮೇಲೂ ನಿಯಂತ್ರಣ ಆಳ್ವಿಕೆ ನಡೆಸಲಾಗುತ್ತದೆ.
ಮಾನವರು ಸಂಘಜೀವಿಗಳಾಗಿ ವಿವಿಧ ಸಂಘ ಸಂಸ್ಥೆ, ವ್ಯವಸ್ಥೆಗಳನ್ನು ಕಟ್ಟಿಕೊಮಡು ಅದರ ಆಡಳಿತ ನಡೆಸುವ ಕಾರ್ಯವನ್ನು ಕೈಗೊಳ್ಳುತ್ತಾರೆ. ಮೇಲೆ ಹೆಸರಿಸಿದ ಶಕ್ತಿಯ ಸ್ವರೂಪಗಳನ್ನು ಹೊಂದಿ ವ್ಯಕ್ತಿಗಳು ಆಳ್ವಿಕೆ ಬಲವನ್ನು ಪಡೆಯುತ್ತಾರೆ. ಸಾಮಾನ್ಯ ಜನರೆಲ್ಲರಿಗೂ ಆಡಳಿತದಲ್ಲಿ ಭಾಗವಹಿಸಲು ಅವಕಾಶವಿರುವ ಜನರಿಂದ ಜನರು ಜನರಿಗಾಗಿ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕೆಲವೇ ಜನರು ಆಡಳಿತದ ಚುಕ್ಕಾಣಿ ಹಿಡಿದು ಇತರರನ್ನು ಆಳುತ್ತಾರೆ. ಇಲ್ಲಿ ಶಕ್ತಿ ರಾಜಕೀಯ ಆಯಾಮವನ್ನು ಪಡೆದುಕೊಳ್ಳುತ್ತದೆ.
ನಿಯಂತ್ರಣ, ಅಧಿಕಾರಕ್ಕೊಳಪಡುವವರು ಅಶಕ್ತರಾಗಿರುತ್ತಾರೆ. ಅಂತಹವರಲ್ಲಿ ಶಕ್ತಿಯನ್ನು ಸೃಷ್ಟಿಸಬೇಕಾಗುತ್ತದೆ, ತುಂಬಬೇಕಾಗುತ್ತದೆ. ಇದೇ ಸಶಕ್ತೀಕರಣವೆನಿಸಿಕೊಳ್ಳುತ್ತದೆ. ಸ್ವಂತಿಕೆ, ಸಂಪನ್ಮೂಲ, ನಂಬಿಕೆ, ಮೌಲ್ಯಗಳ ಕಟ್ಟುವಿಕೆ, ನಿರ್ಧಾರ ಕೈಗೊಳ್ಳುವಿಕೆಗಳು ಶಕ್ತಿಯ ಮೂಲಗಳಾದರೆ ಇವುಗಳನ್ನು ಕೆಲವರು ಜನ್ಮತಃನೋ, ಕುಟುಂಬದಿಂದನೋ, ಸ್ವಪ್ರಯತ್ನದಿಂದನೋ, ಅದೃಷ್ಟದಿಂದನೋ ಪಡೆದುಕೊಳ್ಳಬಹುದು. ಇನ್ನು ಕೆಲವರು ಇವುಗಳಿಲ್ಲದೆ ಶಕ್ತಿಯನ್ನು ಪಡೆಯದಿರಬಹುದು. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕøತಿಕ ಹಾಗೂ ರಾಜಕೀಯ ಕಾರಣಗಳಿಂದ ಶಕ್ತಿಯಿಂದ ವಂಚಿತರಾಗಬಹುದು. ಅಂತಹವರ ವಿಷಯದಲ್ಲೇ ಸಶಕ್ತೀಕರಣ ಪ್ರಕ್ರಿಯೆ ಅವಶ್ಯಕತೆ ಉಂಟಾಗುವುದು.
ಶಕ್ತಿಯು ಒಂದು ಪರಿಕಲ್ಪನೆಯಾಗಿ ವಿವಿಧ ಸ್ವರೂಪಗಳನ್ನು ಪಡೆಯುತ್ತದೆ. ಸ್ವಶಕ್ತಿಯನ್ನು ಗುರುತಿಸಿಕೊಂಡು ಇದ್ದರೆ ಬಳಸಿಕೊಳ್ಳಬೇಕು ಇಲ್ಲದಿದ್ದರೆ ಸೃಷ್ಟಿಸಿಕೊಳ್ಳಬೇಕು. ನಮ್ಮಲ್ಲಿರುವ ಶಕ್ತಿ ಸಾಮಥ್ರ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದು, ಇತರರಲ್ಲಿ ಶಕ್ತಿ ಬೆಳೆಸುವುದು, ಇತರರಲ್ಲಿರುವ ಶಕ್ತಿಯನ್ನು ಗುರುತಿಸುವುದು ಸಕರಾತ್ಮಕ ಶಕ್ತಿಯಾದರೆ ಇತರರನ್ನು ನಿಯಂತ್ರಿಸುವುದು, ಅಧಿಕಾರ ಚಲಾಯಿಸುವುದು ಅಧಿಕಾರ ಬಳಿಸಿಕೊಂಡು ಶೋಷಿಸುವುದು ದೌರ್ಜನ್ಯ ನಡೆಸುವಂತ ಶಕ್ತಿಯು ನಕಾರಾತ್ಮಕವಾದುದು. ಇದು ಸಲ್ಲದು. ಏಕೆಂದರೆ ಇದು ಶೋಷಣೆ, ಹಿಂಸೆ, ಅಸಮಾನತೆಗೆ ಕಾರಣವಾಗುತ್ತದೆ. ಸಮಾಜವಾದ ಹಾಗೂ ಉದಾರವಾದದ ನೆಲೆಯಲ್ಲಿ ಶಕ್ತಿಯು ಸಮಾನತೆ, ಹಂಚಿಕೆ, ಸ್ವಾತಂತ್ರ್ಯ, ಹಕ್ಕು, ಅಹಿಂಸೆಯ ತತ್ವಗಳನ್ನು ಅನುಸರಿಸಿಕೊಂಡು ನಡೆಯುತ್ತದೆ. ಇಲ್ಲದೆ ಹೋದರೆ ಇದುವರೆಗು ಏನು ಕೆಲವು ವ್ಯಕ್ತಿಗಳು, ಕೆಲವು ಗುಂಪುಗಳು ಶಕ್ತಿ ಪ್ರಯೋಗ ಮಾಡಿಕೊಂಡು ಇತರರನ್ನು ಶೋಷಿಸುತ್ತಿವೆಯೊ ಅದನ್ನೇ ಶಕ್ತಿ ಪಡೆದುಕೊಂಡವರು ಮಾಡುವಂತಾಗುತ್ತದೆ. ಆಗ ಸಶಕ್ತೀಕರಣದ ಪ್ರಕ್ರಿಯೆಗೆ ಅರ್ಥ ಬರುವುದಿಲ್ಲ.
       ಇಂಗ್ಲಿಷ್ನ ಎಂಪವರ್ಮೆಂಟ್ ಶಬ್ದಕ್ಕೆ  ಕನ್ನಡದಲ್ಲಿ ಸಶಕ್ತೀಕರಣ ಅಥವಾ ಸಬಲಿಕರಣ ಪದವನ್ನು ಸಮನಾರ್ಥವಾಗಿ ಬಳಸಲಾಗುತ್ತದೆ. ಅರ್ಥಕೋಶದಲ್ಲಿ ಎಂಪವರ್ಮೆಂಟ್ಗೆ ಶಕ್ತಿಕೊಡು ಅಧಿಕಾರ ವಹಿಸು ಕಾನೂನು ಹಕ್ಕುಗಳನ್ನು ನೀಡು ಸಮರ್ಥ ಮಾಡು ಅರ್ಹತೆ ಆಸ್ತಿಕೊಡು ಹೆಸರು ಬಿರುದು ಕೊಡು ಎಂದು ಅರ್ಥ ನೀಡಲಾಗಿದೆ. ಅಂದರೆ ಯಾರಲ್ಲಿ ಶಕ್ತಿ ಅರ್ಹತೆ ಸಾಮಥ್ರ್ಯ ಕೊರತೆಯಿದೆಯೋ (ಸಂಪೂರ್ಣವಾಗಿ ಏನೂ ಇಲ್ಲ ಎಂಬ ಅರ್ಥವಲ್ಲ, ಪ್ರತಿಯೊಬ್ಬರಲ್ಲೂ ಶಕ್ತಿ ಸಾಮಥ್ರ್ಯ ಅದೃಶ್ಯವಾಗಿರುತ್ತದೆ. ಅದನ್ನು ಬೆಳಕಿಗೆ ತರಬೇಕು, ಪುಷ್ಟೀಕರಸಬೇಕು) ಅದನ್ನು ತುಂಬುವ ಕಾರ್ಯವೇ ಸಶಕ್ತೀಕರಣ.
       ಸಶಕ್ತೀಕರಣವು ದುರ್ಬಲ ವರ್ಗದವರು, ಅಂಚಿಗೆ ತಳ್ಳಲ್ಪಟ್ಟು ನಿರ್ಲಕ್ಷ್ಯಕ್ಕೆ ಒಳಗಾದವರು, ಬಡವರು, ಅವಕಾಶ ವಂಚಿತರು, ಅನಾನುಕೂಲ ಪರಿಸ್ಥಿತಿಯಲ್ಲಿರುವ ಜನರಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಬಳಕೆಯಾಗುತ್ತದೆ. ವಿವಿಧ ಕಾರಣಗಳಿಂದ ಭೌಗೋಳಿಕ, ಧಾರ್ಮಿಕ, ಐತಿಹಾಸಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಕಾರಣಗಳಿಂದ ಕೆಲವು ಗುಂಪಿನ ಜನರು ಅವಕಾಶ ವಂಚಿತರಾಗುತ್ತಾರೆ, ದುರ್ಬಲರಾಗುತ್ತಾರೆ. ಅಂತಹವರಲ್ಲಿ ಶಕ್ತಿ ತುಂಬಿ ಅವರಿಗೆ ಅವಕಾಶ ಕಲ್ಪಿಸುವ, ಕಲ್ಪಿಸಿಕೊಳ್ಳುವಂತೆ ಸಾಮಥ್ರ್ಯ ಬೆಳೆಸುವ ಕ್ರಿಯೆಯೇ ಸಶಕ್ತೀಕರಣ. ಇಂತಹ ಗುಂಪುಗಳಲ್ಲಿ ಅನೇಕ ತರಹದ ಜನರು ಬರುತ್ತಾರೆ. ಬಡವರು, ಗ್ರಾಮೀಣ ಜನರು, ಕೊಳಚೆ ಪ್ರದೇಶದ ಜನರು, ಅನಕ್ಷರಸ್ಥರು, ದೈಹಿಕ ಕೆಲಸ ಮಾಡುವ ಅಸಂಘಟಿತ ವಲಯದ ಜನರು, ಬುಡಕಟ್ಟು ಜನರು, ಅಂಗವಿಕಲರು, ಬುದ್ಧಿಮಾಂದ್ಯರು, ವೃದ್ಧರು, ಜಾತಿ ಹೆಸರಿನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರು, ಭೌಗೋಳಿಕ ವಿಕೋಪಗಳಿಗೆ ಒಳಗಾದವರು, ಅನಾಥರು, ಮೂರನೇ ಜಂಡರ್ನವರು, ನಿರಾಶ್ರಿತರು, ಮುಂತಾದವರು. ಮಹಿಳೆಯರನ್ನು ಇಂತಹ ಗುಂಪಿಗೆ ಸೇರಿಸಲಾಗುತ್ತದೆ. ಸೇರುತ್ತಾರೋ ಇಲ್ಲವೋ ಅನ್ನುವುದನ್ನು ಮಹಿಳಾ ಸಶಕ್ತೀಕರಣ ಭಾಗದಲ್ಲಿ ನೋಡೋಣ. ಇವರೆಲ್ಲರು ಜಾರಿ, ವರ್ಗ, ಜಂಡರ್, ಪ್ರಾದೇಶಿಕತೆ, ಧರ್ಮ, ದುಡಿಮೆ, ಭೌಗೋಳಿಕ ಪರಿಸರ, ಹವಾಗುಣ, ಮುಂತಾದ ನೆಲೆಗಟ್ಟಿನಲ್ಲಿ ಅಂಚಿಗೆ ತಳ್ಳಲ್ಪಟ್ಟಿರುತ್ತಾರೆ. ಇವರು ಸಮಾಜದ ಪ್ರಮುಖ ಭಾಗವಾಗಿರುವುದರಿಂದ ಇವರನ್ನು ಬಿಟ್ಟು ಸಮಾಜದ ಸಂಪೂರ್ಣ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಇವರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕು. ಎರಡು ರೀತಿಯಲ್ಲಿ ಅಭಿವೃದ್ಧಿ ಪ್ರಕ್ರಿಯೆಲ್ಲಿ ಸಹಭಾಗಿಗಳಾಗಿ, ಪಾಲುದಾರರಾಗಿ ಪಾಲ್ಗೊಳ್ಳಬೇಕು ಮತ್ತು ಅಭಿವೃದ್ಧಿಯ ಲಾಭವನ್ನು ಪಡೆಯಬೇಕು. ಎರಡಕ್ಕೂ ಅವರನ್ನು ಸಿದ್ದಗೊಳಿಸುವ ಕಾರ್ಯವೇ ಸಶಕ್ತೀಕರಣ.
       ಹೇಗೆ ಇವರು ಬೇರೆ ಬೇರೆ ಕಾರಣಗಳಿಂದ ಅಶಕ್ತರಾಗಿದ್ದಾರೋ, ಇವರನ್ನು ಸಶಕ್ತಗೊಳಿಸಲು ಅನುಕರಿಸುವ ವಿಧಾನಗಳು ಕಾರ್ಯ ತತ್ವಗಳು ಸಶಕ್ತೀಕರಣದ ಪ್ರಕ್ರಿಯೆಯ ಸ್ವರೂಪ, ಗುರಿ ಭಿನ್ನವಾಗಿರುತ್ತವೆ. ಅರ್ಥೈಸುವ, ವ್ಯಾಖ್ಯಾನಿಸುವ ರೀತಿಯೂ ಭಿನ್ನವಾಗಿರುತ್ತದೆ. ಅಂದರೆ ಎಲ್ಲಾ ಗುಂಪಿನ ಸಶಕ್ತೀಕರಣದ ಅರ್ಥ, ಸ್ವರೂಪ. ಕಾರ್ಯತತ್ವ, ಗುರಿಗಳು ಒಂದೇ ರೀತಿಯಿರುವುದಿಲ್ಲ. ಹಾಗಾಗಿ ವಿವಿಧ ಕ್ಷೇತ್ರದವರು, ನೀತಿ ನಿರೂಪಕರು, ಹೋರಾಟದ ಕಾರ್ಯಕರ್ತರು, ಅಭಿವೃದ್ಧಿ ಆರ್ಥಿಕ ತಜ್ಞರು, ಧನ ಸಹಾಯ ನೀಡುವ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳವರು, ವಿಷಯ, ಕಾಲ, ಗುಂಪು, ದೇಶ, ಪ್ರದೇಶಗಳಿಗೆ ಸಂಬಂಧಿಸಿದಂತೆ ಸಶಕ್ತೀಕರಣವನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಅದರ ಗುರಿ, ಸ್ವರೂಪ, ಕಾರ್ಯತಂತ್ರಗಳನ್ನು ಹೊಣೆ ಹೊತ್ತಿರುವವರು ನಿರ್ಧರಿಸಬೇಕು. ಅವರು ಸಶಕ್ತಗೊಳಿಸುತ್ತಿರುವ ಜನರ ಯಾವ ಅವಶ್ಯಕತೆಗಳನ್ನು ಪೂರೈಸಬೇಕು, ಯಾವ ತಂತ್ರ ವಿಧಾನಗಳನ್ನು ಅಳವಡಿಸಿಕೊಂಡರೆ ಅವರು ಸಶಕ್ತರಾಗುತ್ತಾರೆ ಅನ್ನುವುದನ್ನು ನಿರ್ಣಯಿಸಬೇಕು.
       ಸಶಕ್ತೀಕರಣವು ನಿರಂತರವಾಗಿ ನಡೆಯುವ ಚಲನಶೀಲ ಪ್ರಕ್ರಿಯೆಯಾಗಿದೆ. ಈಗಿರುವ ಅಧಿಕಾರ ರಚನೆ, ಅಧಿಕಾರ ಸಂಬಂಧ ಎಲ್ಲರನ್ನು ಒಳಗೊಳ್ಳುವುದಿಲ್ಲವೋ, ಒಳಗೊಳ್ಳುವಂತೆ ಮಾಡುವವರೆಗೆ ಸಶಕ್ತೀಕರಣ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಅಂಚಿಗೆ ತಳ್ಳಲ್ಪಟ್ಟ, ಹೊರಗಿಡಲ್ಪಟ್ಟ ಜನರು ತಮ್ಮ ಅಧೀನತೆಗೆ, ಪರಕೀಯತೆಗೆ ಕಾರಣವಾಗುವ ಸಾಮಾಜಿಕ ರಚನೆ ಮತ್ತು ವಿಚಾರಧಾರೆಗಳನ್ನು ಅರ್ಥಮಾಡಿಕೊಂಡು, ಬದಲಾಯಿಸುವಂತೆ ಮಾಡಲು, ಅವರನ್ನು ಸಮರ್ಥರನ್ನಾಗಿ ಮಾಡುವುದೇ ಸಶಕ್ತೀಕರಣ. ಸಶಕ್ತೀಕರಣವು ಅಧಿಕಾರಕ್ಕೆ ಸಂಬಂಧಪಟ್ಟಿದ್ದು, ವ್ಯಕ್ತಿ ಹಾಗೂ ಗುಂಪುಗಳ ನಡುವಿನ ಅಧಿಕಾರ ಸಂಬಂಧ, ಹಂಚಿಕೆ, ಪುನರ್ ಹಂಚಿಕೆಯನ್ನು ಪ್ರತಿಪಾದಿಸುತ್ತದೆ.
       ಸಶಕ್ತೀಕರಣ ಹಾಗೂ ಒಳಗೊಳ್ಳುವಿಕೆ ಪರಿಕಲ್ಪನೆಗಳು ಒಂದಕ್ಕೊಂದು ಪೂರಕವಾಗಿದೆ. ಸಶಕ್ತೀಕರಣವು ಹೊರಗಿಡಲ್ಪಟ್ಟ ಅಥವಾ ಅಂಚಿಗೆ ತಳ್ಳಲ್ಪಟ್ಟ ಗುಂಪಿನವರಲ್ಲಿ ಸಾಮಥ್ರ್ಯವನ್ನು ತುಂಬುವ ಪ್ರಕ್ರಿಯೆ. ಇದು ಕೆಳಗಿನಿಂದ ಮೇಲಕ್ಕೆ ಚಲಿಸುವ ವಿಧಾನವಾಗಿದೆ. ಒಳಗೊಳ್ಳುವಿಕೆಯು ಮೇಲಿನಿಂದ ಕೆಳಗೆ ಚಲಿಸುವ ವಿಧಾನವಾಗಿದ್ದು, ಇದರಲ್ಲಿ ಹೊರಗಿಡಲ್ಪಟ್ಟ ಜನರು ಹಕ್ಕು, ಸಮಾನತೆ, ಅವಕಾಶಗಲನ್ನು ಪಡೆದುಕೊಳ್ಳುವಂತೆ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತದೆ. ಇವರೆಡೂ ವಿಧಾನಗಳನ್ನು ಏಕಕಾಲದಲ್ಲಿ ಅಳವಡಿಸಿಕೊಂಡು ನಿರ್ಲಕ್ಷ್ಯಕ್ಕೊಳಗಾದ ಗುಂಪುಗಳನ್ನು ಸಮಾನತೆಯೆಡೆಗೆ ಕೊಂಡೊಯ್ಯಬೇಕು.
       ಅಶಕ್ತರಲ್ಲಿ ಜಾಗೃತಿ ಮೂಡಿಸಿ ಅವರು ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಮಗೆ ಬೇಕಾಗಿರುವುದನ್ನು ಪಡೆಯಲು ಸಮರ್ಥರನ್ನಾಗಿಸುವ ಪ್ರಕ್ರಿಯೆಯೇ ಸಶಕ್ತೀಕರಣ. ಫಾಟೋ ಫ್ರಯರ್ ಅವರು ತಮ್ಮ ಜಾಗೃತೀಕರಣ ಸಿದ್ದಾಂತದಲ್ಲಿ ಬಡಜನರು ಹಾಗೂ ದುರ್ಬಲ ಜನರಿಗೆ ಸಂಬಂಧಿಸಿದಂತೆ ಚರ್ಚಿಸುವಾಗ ಸಶಕ್ತೀಕರಣ ಪರಿಕಲ್ಪನೆಯನ್ನು ಬಳಸಿದ್ದಾರೆ. ಬಡವರು ಅಧಿಕಾರ ರಚನೆಯನ್ನು ಪ್ರಶ್ನಿಸಿ ತಮ್ಮ ಜೀವನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಜಾಗೃತೀಕರಣ ಎಂದು ವ್ಯಾಖ್ಯಾನಿಸಿದ್ದಾರೆ. ಜಾಗೃತೀಕರಣವನ್ನು ಅಂಚಿಗೆ ತಳ್ಳಲ್ಪಟ್ಟ ಇತರ ಗುಂಒಇನವರಿಗೂ ಅನ್ವಯಿಸಿಕೊಂಡು ಹೆಚ್ಚು ವಿಶಾಲಾರ್ಥದಲ್ಲಿ ಮೂಡಿಬಂದುದೇ ಸಶಕ್ತೀಕರಣ.
       ಬೇರೆ ಬೇರೆ ಅಂಶಗಳಿಗೆ ಒತ್ತುಕೊಟ್ಟು ವಿವಿಧ ಕ್ಷೇತ್ರದ ವಿದ್ವಾಂಸರು ಸಶಕ್ತೀಕರಣವನ್ನು ವ್ಯಾಖ್ಯಾನಿಸಿದ್ದಾರೆ. ಸ್ತ್ರೀವಾದಿಗಳು, ಆರ್ಥಿಕ ತಜ್ಞರು, ಅಭಿವೃದ್ಧಿ ಚಿಂತಕರು, ಅನುದಾನ ನೀಡುವ ಸಂಸ್ಥೆಗಳು, ಸರ್ಕಾರದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳವರು, ಸಮಾಜ ಕಾರ್ಯಕರ್ತರು, ಚಳುವಳಿ ಕಾರ್ಯಕರ್ತರು ತಮ್ಮ ಕಾರ್ಯಕ್ಷೇತ್ರ, ಒತ್ತು ನೀಡಿದ ಅಂಶ, ಯಾರ ಸಶಕ್ತೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ, ಯಾವ ಗುಂಪಿನ ಜನರು ಅನ್ನುವುದನ್ನು ಇಟ್ಟುಕೊಂಡು ಸಂದರ್ಭಕ್ಕೆ ತಕ್ಕಂತೆ ಸಶಕ್ತಿಕರಣವನ್ನು ವ್ಯಾಖ್ಯಾನಿಸುತ್ತಾರೆ.
        ಎಲ್ಲಾ ವ್ಯಾಖ್ಯೆಗಳು ಒಟ್ಟು ಸಾರವನ್ನು ಇಟ್ಟುಕೊಂಡು ಸಶಕ್ತೀಕರಣದ ಕೆಲವು ಲಕ್ಷಣ ಅಥವಾ ಘಟಕಗಳನ್ನು ಗುರುತಿಸಬಹುದು.
್ಡ ಸ್ವಾಯತ್ತತೆ
್ಡ ಜೀವನದ ಮೇಲೆ ನಿಯಂತ್ರಣ ಹೊಂದುವುದು.
್ಡ ಆಯ್ಕೆಯ ಹಕ್ಕನ್ನು ಪಡೆಯುವುದು.
್ಡ ಆತ್ಮವಿಶ್ವಾಸ ಹೊಂದುವುದು.
್ಡ ಸಂಪನ್ಮೂಲಗಳ ಲಭ್ಯತೆ.
್ಡ ಸಂಪನ್ಮೂಲಗಳ ಮೇಲೆ ನಿಯಂತ್ರಣ.
್ಡ ಪರಾಧೀನತೆಯಿಂದ ಹೊರಬರುವುದು.
್ಡ ಆನರು ತಮ್ಮದೇ ಕಾರ್ಯಸೂಚಿಗಳನ್ನು ರೂಪಿಸಿಕೊಳ್ಳುವುದು.
್ಡ ವೈಯಕ್ತಿಕ ಮತ್ತು ಸಾಮುದಾಯಿಕ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದು.
್ಡ ಅಸಮಾನತೆಯಿಂದ ಕೂಡಿದ ಅಧಿಕಾರ ಸಂಬಂಧವನ್ನು ಪ್ರಶ್ನಿಸುವುದು, ಪುನರ್ ಹಂಚಿಕೆ ಮಾಡುವುದು.
್ಡ ಜನರನ್ನು ಅಶಕ್ತಗೊಳಿಸುವ ಸಾಮಾಜಿಕ ರಚನೆಯನ್ನು ಬದಲಾಯಿಸುವುದು.
್ಡ ಸ್ವ ಅರಿವು, ಸಾಮಾಜಿಕ ಅರಿವು.
್ಡ ಮುಕ್ತ ಸಂಚಲನೆ ಹೊಂದುವುದು.
್ಡ ಕೌಶಲ್ಯ ಬೆಳೆಸಿಕೊಂಡು, ಉತ್ಪಾದನಾ ಶಕ್ತಿ ಹಾಗೂ ಆದಾಯ ಗಳಿಸುವುದು.
್ಡ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು.
್ಡ ಅನ್ಯಾಯ, ಶೋಷಣೆಯನ್ನು ಪ್ರತಿಭಟಿಸುವುದು.
್ಡ ನ್ಯಾಯ ಕೇಳುವುದು.
್ಡ ಸಾರ್ವಜನಿಕ ಚಟುವಟಿಕೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.
್ಡ ಬೇಡಿಕೆ, ಹಕ್ಕು, ಅಭಿಲಾಷೆಗಳನ್ನು ವ್ಯಕ್ತಪಡಿಸುವುದು. ಅವುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವುದು, ಈಡೇರಿಸಿಕೊಳ್ಳುವುದು.
ವ್ಯಕ್ತಿಯಲ್ಲಿ ಶಕ್ತಿ ಅಥವಾ ಬಲವನ್ನು ತುಂಬುವ ಕ್ರಿಯೆಗೆ ಅಮಾತ್ರ್ಯ ಸೇನ್ ಅವರು ಸಾಮಥ್ರ್ಯ ಪರಿಕ್ರಮ ಅಂದು ಕರೆಯುತ್ತಾರೆ. ಇದು ಸಶಕ್ತೀಕರಣಕ್ಕೆ ಪರ್ಯಾಯ ಪದವಾಗಿದೆ. ದೈಹಿಕ, ಭೌಗೋಳಿಕ,ಕೌಟುಂಬಿಕ, ಸಾಮಾಜಿಕ ಮತ್ತು ಮಾನಸಿಕ ಅಂಶಗಳು ವ್ಯಕ್ತಿಗಳನ್ನು ಶಕ್ತರನ್ನಾಗಿ ಅಥವಾ ಅಶಕ್ತರನ್ನಾಗಿ ರೂಪಿಸುತ್ತವೆ ಎಂದು ಹೇಳುತ್ತಾರೆ.
ಹೀಗೆ ಶಕ್ತಿ ಹಾಗು ಸಶಕ್ತೀಕರಣ ಪರಿಕಲ್ಪನೆಗಳನ್ನು ವಿವಿಧ ನೆಲೆಗಳಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

- ಹೇಮಲತ ಎಚ್. ಎಮ್    
                                       


1 comment: