Thursday 14 September 2017

ಕವನ - ಸ್ವಾತಂತ್ರ್ಯದ ಚರಣಗಳು



ಗಂಡಸರೆ! ಗಂಡಿನೆದೆಯ ತಂದೆಯಿಂದ ಬಂದವರು
ಸ್ವತಂತ್ರರು ನಾವೆಂದು ಜಂಬ ಮಾಡುವವರೆ;
ಇಳೆಯ ಮೇಲೆ ಗುಲಾಮನ ಉಸಿರೊಂದು
ಗಾಳಿಯಲಿ ತೀಡುವಾಗ, ನೀವು ಗಂಡೆದೆಯವರೆ, ಸ್ವತಂತ್ರರೇ?
ಸೋದರರ ಕರಗಳನು ನೋಯಿಸುವ ಬೇಡಿಗಳನು
ತಡವದಿರೆ, ಬಿಡಿಸದಿರೆ, ನಿಮ್ಮೆದೆಯು ಗಂಡೆದೆಯೇ?
ಗುಲಾಮರಲ್ಲವೇ ನೀವು, ತೊಡದೆ ಬೇಡಿಯನು?
ಸ್ವತಂತ್ರರಾಗಲು ಯೋಗ್ಯರಲ್ಲದವರು, ನೀವು ||

ಹೆಂಗಸರೆ! ಹೊಸ ಭೂಮಿಯ ಹೊಸ ಬಾಳಿನ ಗಾಳಿಯನು
ಕುಡಿವ ಕಂದಮ್ಮಗಳಿಗೆ ಜನ್ಮ ನೀಡುವಿರಿ
ನೀವೊಂದು ದಿನ; ಬೇಡಿಯಲಿ ಬಂಧಿಯಾಗಿಹ
ಸೋದರಿಯರ ಕಂಡು, ಲಾವಾರಸದ ಕುದಿವ
ಕೆಂಪು ನದಿಯು ಹರಿದಂತೆ, ಬಿಸಿರಕ್ತ ರಭಸದಲಿ
ಸಂಚರಿಸದಿರೆ ನಿಮ್ಮ ಧಮನಿಗಳಲಿ;
ತಲೆ ತಗ್ಗಿಸದೆ ಕೇಳಿ, ಗಂಡೆದೆಯ, ಸ್ವತಂತ್ರ
ಮಕ್ಕಳ ಜನ್ಮದಾತೆ ನೀವಾಗಲು ಯೋಗ್ಯರೇ? ||

ನಮ್ಮ ಬಂಧು-ಬಾಂಧವರ ಹಿತಕೆ ಬೇಡಿಯನು
ಕಳಚದಿರೆ, ಸ್ವಾತಂತ್ರ್ಯವದು ನಿಜವೇ?
ಮನುಕುಲಕ್ಕಿರುವ ನಮ್ಮ ಋಣವ
ಮರೆತಿರಾ, ರಕ್ತ ಮಾಂಸದ ಹೃದಯವಿದ್ದೂ?
ಇಲ್ಲ, ಇಲ್ಲ. ನಮ್ಮ ಸೋದರರ ಬೇಡಿಯೊಳು
ನಮ್ಮ ಕರಗಳನ್ನಿಟ್ಟು, ಹೃದಯದಳೊಂದಾಗಿ,
ಎಲ್ಲರ ಬೇಡಿ ಬಿಡಿಸುವುದೇ ನಿಜದರ್ಥದಲಿ ಸ್ವಾತಂತ್ರ್ಯ ||




- ಎಸ್.ಎನ್.ಸ್ವಾಮಿ 
ಪ್ರೇರಣೆ: ಎರಿನ್ ಹ್ಯಾನ್‍ಸನ್

No comments:

Post a Comment