Sunday 11 June 2017

ಕಥೆ - ಛಲ



ಬದುಕು ಬೇಡವೆನಿಸತೊಡಗಿತ್ತು. ಎಲ್ಲೆಡೆ ಕತ್ತಲಾವರಿಸಿದಂತೆ ಭಾಸವಾಗುತ್ತಿತ್ತು. ಎಲ್ಲರೂ ಇದ್ದು ಸಹ ಯಾರೂ ಇಲ್ಲವೆನಿಸಿತ್ತು. ನನಗೆ ಏಕೆ ಈ ಶಿಕ್ಷೆ? ನಾನು ಯಾರಿಗೆ ಏನು ಅಪಕಾರ ಮಾಡಿದ್ದೆ ಎಂದು ನನಗೀ ಶಿಕ್ಷೆ? - ತನ್ನಲ್ಲೇ ಮಂಥನ ನಡೆಸಿದ್ದಳು ಭವಾನಿ.
ಭವಾನಿ ಬಿ ಇ ಪದವೀಧರೆ. ಪ್ರಸಿದ್ಧ ಕಂಪನಿಯೊಂದರಲ್ಲಿ ಉನ್ನತ ಹುದ್ದೆ, ಕೈತುಂಬಾ ಸಂಬಳ, ವೈದ್ಯ ಹುದ್ದೆಯಲ್ಲಿದ್ದ ಗಂಡ, ಮುತ್ತಿನಂತಹ ಇಬ್ಬರು ಮಕ್ಕಳು - ಸರ್ವಜ್ಞನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ತ್ರಿಪದಿಯಂತಿತ್ತು ಅವಳ ಜೀವನ.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಬರಸಿಡಿಲು ಬಡಿದಂತೆ ಬಂದಿತ್ತು ಆ ವಾರ್ತೆ. ಎಲ್ಲಾ ಸ್ನೇಹಿತೆಯರು 40 ರ ನಂತರ ಒಂದು ಸಾಮಾನ್ಯ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಭವಾನಿಯೂ ಮಾಡಿಸಿಕೊಂಡಿದ್ದಳು. ಬಂದ ವರದಿ ಅವಳನ್ನು ತಲ್ಲಣಗೊಳಿಸಿತ್ತು. ಅವಳಿಗೆ ಸ್ತನ ಕ್ಯಾನ್ಸರ್‍ನ ಮೊದಲನೆಯ ಹಂತ ಎಂದಿತ್ತು. 
ಪರೀಕ್ಷೆ ಮಾಡಿದ ಡಾಕ್ಟರ್ ಈ ವಿಷಯ ಭವಾನಿಗೆ ಹೇಳಿದಾಗ ಅವಳಿಗೆ ಆಕಾಶವೇ ಕಳಚಿಬಿದ್ದಂತೆನಿಸಿತ್ತು. ವೈದ್ಯರು ಎಷ್ಟೇ ಸಮಾಧಾನ ಮಾಡಲೆತ್ನಿಸಿದರು, ಅವಳಿಗೆ ಅದನ್ನು ಅಂಗೀಕರಿಸಲಾಗಲಿಲ್ಲ. ‘ಚಿಕ್ಕಂದಿನಿಂದಲೂ ನನ್ನ ಆರೋಗ್ಯ ಚೆನ್ನಾಗಿತ್ತು. ನನಗೆ ಯಾವುದೇ ರೀತಿಯ ಖಾಯಿಲೆ ಇರಲಿಲ್ಲ. ನನಗೆ ಜ್ವರ ಬಂದೇ ಎಷ್ಟೋ ವರ್ಷವಾಗಿತ್ತು. ಇಂತಹ ಖಾಯಿಲೆ ಹೇಗೆ ಬರಲು ಸಾಧ್ಯ?’ ಎನ್ನುವುದೇ ಅವಳ ಪ್ರಶ್ನೆಯಾಗಿತ್ತು.
ಸ್ವತಃ ವೈದ್ಯನಾಗಿದ್ದ ಪತಿ ಆನಂದ್ ವಿವರಿಸಿ ಹೇಳಿದರೂ ಭವಾನಿ ನಂಬಲು ತಯಾರಿರಲಿಲ್ಲ. ಹೇಗೋ ಹಲವಾರು ವೈದ್ಯರ ಬಳಿ ಕರೆದುಕೊಂಡು ಹೋದ ಮೇಲೆ ನಿಧಾನವಾಗಿ ಭವಾನಿಗೆ ಅರ್ಥವಾಯಿತು.
ಆನಂದ್ ಸ್ನೇಹಿತರಾದ ಡಾ. ರಾಮನಾಥರು, “ನೋಡಿ, ಕ್ಯಾನ್ಸರ್ ಬರುವುದು ಇಂತಹುದೇ ಕಾರಣದಿಂದ ಎಂದು ಹೇಳಲು ಸಾಧ್ಯವಿಲ್ಲ. ಈಗ ನೋಡಿ ನಾನು ಚೆನ್ನಾಗಿಯೇ ಇದ್ದೇನೆ. ಆದರೆ ಇನ್ನೊಂದು ತಿಂಗಳಿನಲ್ಲಿ ಅದು ಕಾಣಿಸಿಕೊಳ್ಳಬಹುದು. ಆದರೆ ಮುಖ್ಯ ವಿಷಯವೆಂದರೆ ನಿಮ್ಮದಿನ್ನೂ ಮೊದಲ ಹಂತದಲ್ಲಿದೆ. ಆದ್ದರಿಂದ ಟ್ರೀಟ್‍ಮೆಂಟ್ ಕೊಟ್ಟರೆ ಖಂಡಿತ ಗುಣಪಡಿಸಬಹುದು. ಅಷ್ಟೊಂದು ಯೋಚನೆ ಮಾಡಬೇಡಿ” ಎಂದಿದ್ದರು.
ಖಾಯಿಲೆ ಇದೆ ಎಂದು ಒಪ್ಪಿಕೊಂಡ ಮೇಲೆ ಭವಾನಿಗೆ, ತನಗೆ ವಾಸಿಯಾಗುತ್ತದೆ ಎಂದು ನಂಬಿಕೆ ಇರಲಿಲ್ಲ. ಎಲ್ಲರೂ ಎಷ್ಟೊ ಹೇಳಲು ಪ್ರಯತ್ನಿಸಿದರೂ ಒಪ್ಪಿಕೊಳ್ಳಲು ಅವಳು ತಯಾರಿರಲಿಲ್ಲ. ತಾನು ಬದುಕುವುದಿಲ್ಲವೆಂದೇ ಕೊರಗಲಾರಂಭಿಸಿದ್ದಳು.
ಟ್ರೀಟ್‍ಮೆಂಟ್ ಆರಂಭವಾಯಿತು. ಔಷಧಿಗಳನ್ನು ತೆಗೆದುಕೊಳ್ಳಲಾರಂಭಿಸಿದಳು. ಪರಿಣಾಮವಾಗಿ ಕೂದಲುದುರುವುದು ಆರಂಭವಾಯಿತು. 
ಭವಾನಿ ರೂಮಿನ ಹೊರಗಡೆ ಬರುವುದನ್ನು ನಿಲ್ಲಿಸಿ ರೂಮಿನಲ್ಲಿಯೇ ಉಳಿದಳು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಯಾವಾಗಲೂ ಮಂಕಾಗಿಯೇ ಕುಳಿತಿರುತ್ತಿದ್ದಳು, ಶೂನ್ಯದಲ್ಲಿ ದೃಷ್ಟಿಯಿಟ್ಟು. 
ಎಲ್ಲರೂ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿ ವಿಫಲರಾದರು. ಯಾರಾದರೂ ಸಮಾಧಾನ ಮಾಡಲು ಬಂದರೆ, “ನಿಮಗೆ ನನ್ನ ರೀತಿಯ ಖಾಯಿಲೆ ಬಂದಿಲ್ಲವಲ್ಲ. ಹಾಗಾಗಿ ಹೇಳುವುದು ಸುಲಭ” ಎಂದು ಮಾತುಗಳನ್ನು ಮಧ್ಯಕ್ಕೆ ತುಂಡರಿಸುತಿದ್ದಳು. ಕ್ರಮೇಣ ಮೌನಿಯಾಗಿಬಿಟ್ಟಳು.
ಸ್ವಲ್ಪ ದಿನಗಳ ನಂತರ ಆಪರೇಷನ್‍ಗೆಂದು ಆಸ್ಪತ್ರೆಗೆ ಸೇರಿಸಬೇಕಾದಾಗಲೂ ಬಹಳಷ್ಟು ಶ್ರಮ ಪಡಬೇಕಾಯಿತು. “ಹೇಗೂ ಸಾಯುವೆನೆಂದು ಗೊತ್ತಿದ್ದ ಮೇಲೆ ಈ ನೋವೆಲ್ಲಾ ಯಾಕೆ” ಎಂದು ವಾದಿಸಿದಳು.
ಡಾ. ರಾಮನಾಥರವರು “ಇಲ್ಲಮ್ಮ, ನಿಜಕ್ಕೂ ಇದು ವಾಸಿಯಾಗುತ್ತೆ, ಗಾಬರಿಯಾಗುವ ಅವಶ್ಯಕತೆಯಿಲ್ಲ” ಎಂದರೆ, “ಇಲ್ಲ ಅಂಕಲ್, ನೀವು ನನಗೆ ಸಮಾಧಾನ ಮಾಡಲು ಹೇಳುತ್ತಿದ್ದೀರಾ. ನಾನು ಓದಿದ್ದೇನೆ. ಇದು ಖಂಡಿತ ವಾಸಿಯಾಗೋದಿಲ್ಲ” ಎಂದು ಹಠ ಹಿಡಿದಳು.
ಹೇಗೊ ಕಷ್ಟಪಟ್ಟು ಆಪರೇಷನ್‍ಗೆ ಒಪ್ಪಿಸಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಯೂ ಯಾರೊಂದಿಗೂ ಮಾತನಾಡದೆ ಮೌನವಾಗಿರುತ್ತಿದ್ದಳು. ಹೊರಗಡೆ ಕರೆದುಕೊಂಡು ಹೋದರೂ ಯಾರನ್ನೂ ಮಾತನಾಡುತ್ತಿರಲಿಲ್ಲ. ಟೆಸ್ಟಗಳೆಲ್ಲಾ ನಡೆಯುತ್ತಿದ್ದವು.
2ನೇ ದಿನ ಸಂಜೆ, ಭವಾನಿ ಹೊರಗಡೆ ಪಾರ್ಕಿನಲ್ಲಿ ಕುಳಿತಿದ್ದಾಗ, ತನ್ನದೇ ವಯಸ್ಸಿನ ಹೆಂಗಸೊಬ್ಬಳು ಎಲ್ಲರೊಂದಿಗೆ ನಗುನಗುತ್ತಾ ಮಾತನಾಡುವುದನ್ನು ಕಂಡಳು. ಪ್ರತಿಯೊಬ್ಬರ ಬಳಿ ತಾನೆ ಹೋಗಿ, ಮಾತನಾಡಿಸಿ, ಅವರನ್ನು ನಗಿಸುವುದನ್ನು ಕಂಡಳು. 
ಡಾಕ್ಟರ್ ಇರಬಹುದೇ ಎಂದುಕೊಂಡರೆ ಬಿಳಿಯ ಕೋಟಿರಲಿಲ್ಲ. ನರ್ಸ್ ಎನ್ನುವುದಕ್ಕೆ ಯಾವುದೇ ಕುರುಹುಗಳಿರಲಿಲ್ಲ. ಯಾರೋ ಸಾಮಾಜಿಕ ಕಾರ್ಯಕರ್ತೆ ಎಂದುಕೊಂಡಳು. ಆಕೆ ಒಬ್ಬರಾದ ಮೇಲೆ ಒಬ್ಬರನ್ನು ಮಾತನಾಡಿಸುತ್ತಿರುವುದನ್ನು ಕಂಡು ಇನ್ನೆಲ್ಲಿ ತನ್ನ ಹತ್ತಿರವೂ ಬಂದುಬಿಡುತ್ತಾಳೊ ಎಂದುಕೊಂಡು ರೂಮಿಗೆ ಬಂದುಬಿಟ್ಟಳು. 
ಸುಮಾರು 8 ಘಂಟೆಯ ಸುಮಾರಿಗೆ ಭವಾನಿ ಊಟ ಮುಗಿಸಿ ಒಬ್ಬಳೇ ಕುಳಿತಿದ್ದಳು. ಆಗ ರೂಮಿನ ಬಾಗಿಲನ್ನು ತೆರೆಯುತ್ತಾ ಆ ಹೆಂಗಸು ಒಳಬರುವುದನ್ನು ಕಂಡಳು. ಮಲಗುತ್ತಿರುವಂತೆ ನಟಿಸಲು ಯತ್ನಿಸಿದಳು.
ಆ ಹೆಂಗಸು ಒಳಗೆ ಬಂದವಳೆ, “ನೀವು ಬಹಳ ದೊಡ್ಡ ಇಂಜಿನಿಯರಂತೆ. ಪಕ್ಕದ ವಾರ್ಡಿನಲ್ಲಿರುವ ಹುಡುಗ ಇಂಜಿನಿಯರಿಂಗ್ ಓದಬೇಕಂತೆ. ಅವನಿಗೆ ಒಂಚೂರು ಮಾರ್ಗದರ್ಶನ ಮಾಡುವಿರಾ?” ಕೇಳಿದಳು.
ಕೋಪ ಬಂದಿತು ಭವಾನಿಗೆ. “ನೀವ್ಯಾರು? ನನ್ನ ಬಗ್ಗೆ ಏನು ಗೊತ್ತು? ನಾನಿರುವ ಪರಿಸ್ಥಿತಿ ಗೊತ್ತೇ? ಗೊತ್ತಿದ್ದೂ ಈ ರೀತಿ ಮಾತನಾಡುವಿರಲ್ಲಾ?” ಒರಟಾಗಿಯೇ ಕೇಳಿದಳು.
“ಖಂಡಿತವಾಗಿ ಗೊತ್ತು. ಈಗಷ್ಟೇ ಡಾ. ಆನಂದ್ ಸಿಕ್ಕಿದ್ದರು. ನಿಮಗೆ ಬಂದಿರುವುದು ಬಹಳ ಚಿಕ್ಕ ಸಮಸ್ಯೆ. ಏನೂ ಆಗುವುದಿಲ್ಲ. ಒಂದು ವಾರ ಕಳೆಯುವುದರೊಳಗೆ ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗುತ್ತೆ. ಒಂದು ತಿಂಗಳೊಳಗೆ ಪೂರ್ಣ ಹುಷಾರಾಗ್ತೀರಾ. 3 ತಿಂಗಳೊಳಗೆ ಪುನಃ ಕೆಲಸಕ್ಕೆ ಹೋಗ್ತೀರಾ.”
ಭವಾನಿ ವ್ಯಂಗ್ಯವಾಗಿ ಕೇಳಿದಳು, “ನೀವೇನು ದೇವರೇ?”
“ಅಯ್ಯೊ ಭಗವಂತಾ. ನಾನು ಡಾಕ್ಟರ್ ಕೂಡ ಅಲ್ಲ. ಆದರೆ ಒಂದಂತೂ ನಿಜ. ನೀವು ನಿಮ್ಮ ನೋವನ್ನು ಮರೆತರೆ, ಪುನಃ ಎದ್ದುನಿಲ್ಲುತ್ತೇನೆ ಎಂದು ಗಟ್ಟಿ ಮನಸ್ಸು ಮಾಡಿದರೆ, ಖಂಡಿತ ಹುಷಾರಾಗುವಿರಿ. ಮನಸ್ಸಿಗಿಂತ ಬೇರೆ ಔಷಧಿ ಇಲ್ಲ. ಏಳಿ ಗಟ್ಟಿ ಮನಸ್ಸು ಮಾಡಿ.” ಆಕೆ ಉತ್ತರಿಸಿದರು.
ಕೋಪ ತಡೆದುಕೊಳ್ಳಲಾಗಲಿಲ್ಲ. “ಈ ಬಿಟ್ಟಿ ಉಪದೇಶ ಬೇಡ. ಹೋಗ್ರಿ ಹೊರಗೆ” ಕಿರುಚಿದಳು. ಆ ಶಬ್ದಕ್ಕೆ ನರ್ಸ್ ಓಡಿಬಂದಳು.
“ಓಕೆ, ಓಕೆ, ಹೋಗ್ತೀನಿ. ನರ್ಸ್ ಅವರಿಗೆ ನೀರು ಕೊಡಿ. ಮತ್ತೆ ನಾಳೆ ಅಲ್ಲ, ನಾಡಿದ್ದು ಸಿಗ್ತೀನಿ. ನಾನು ಹೇಳಿದ್ದನ್ನು ಯೋಚನೆ ಮಾಡಿ” ಹೇಳುತ್ತಲೇ ಹೊರನಡೆದಳು ಆಕೆ.
“ನಿಮ್ಮ ಆಸ್ಪತ್ರೆಯಲ್ಲಿ ಒಂಚೂರು ವ್ಯವಸ್ಥೆ ಇಲ್ಲವಲ್ಲ. ಯಾರ್ರಿ ಆಕೆ, ಇಲ್ಲೇನು ಕೆಲಸ?” ಕೇಳಿದಳು ನರ್ಸನ್ನು.
“ಮೇಡಂ ಅವರು ಎಷ್ಟು ಹೇಳಿದರೂ ಕೇಳಲ್ಲ, ಬಿಡಿ ನೀವು ಮಲಗಿಕೊಳ್ಳಿ” ಹೇಳಿ ನರ್ಸ್ ಹೊರಹೋದಳು.
ಸ್ವಲ್ಪ ಹೊತ್ತಾದ ಮೇಲೆ ಆನಂದ್ ರೂಮಿನೊಳಗೆ ಬಂದ. ಯಾವಾಗಲೂ ಶೂನ್ಯದಲ್ಲಿಯೇ ದೃಷ್ಟಿ ಇಟ್ಟಿರುತ್ತಿದ್ದ ಅಥವಾ ಕಣ್ಣೀರು ಹಾಕುತ್ತಿದ್ದ ಹೆಂಡತಿ, ಇಂದು ಏನೋ ಯೋಚಿಸುತ್ತಿರುವಂತೆನಿಸಿತು. ಕೇಳಿದ.
“ಯಾರೋ ಒಬ್ಬ ಹೆಂಗಸು ಬಂದಿದ್ದಳು. ನೀವವಳಿಗೆ ನನ್ನ ಬಗ್ಗೆ ಹೇಳಿದ್ದಿರಾ?” ಕೇಳಿದಳು.
“ಓಹೋ ಆಕೆಯಾ?”
“ಯಾರಾಕೆ, ನೀವ್ಯಾಕೆ ನನ್ನ ಬಗ್ಗೆ ಎಲ್ಲರಿಗೆ ಹೇಳೋದು?”
“ಆಕೆಯ ಹೆಸರು ಸುಮ. ಆಕೆ ಎಲ್ಲರ ಹತ್ತಿರ ಹೋಗಿ ಅವರ ಸಮಸ್ಯೆ ಕೇಳ್ತಾರೆ. ತಮ್ಮ ಕೈಲಾದ ಸಹಾಯ ಮಾಡ್ತಾರೆ, ಸಾಂತ್ವನ ಹೇಳ್ತಾರೆ.” 
“ಆಕೆಯೇನೂ ಸಾಮಾಜಿಕ ಕಾರ್ಯಕರ್ತೆಯೇ?”
“ಅಲ್ಲ, ಆಕೆಯೂ ಒಬ್ಬ ರೋಗಿ.”
“ಏನಾಗಿದೆ ಆಕೆಗೆ. ಏನೋ ಗಂಭೀರವಲ್ಲದ ಖಾಯಿಲೆ ಇರಬೇಕು. ಅದಕ್ಕೆ ಹೀಗೆ ಎಲ್ಲೆಡೆ ಓಡಾಡುತ್ತಿರುತ್ತಾರೆ. ಆದರೆ ಎಲ್ಲರೂ ತಮ್ಮಂತೆ ಎಂದುಕೊಂಡಿದ್ದಾರೇನೊ? ನಮ್ಮ ರೋಗದ ಗಂಭೀರತೆ ಅವರಿಗೆ ಹೇಗೆ ಅರ್ಥವಾಗಬೇಕು?”
“ಭವಾನಿ, ಈ ಆಸ್ಪತ್ರೆ ಕ್ಯಾನ್ಸರ್ ಆಸ್ಪತ್ರೆ ಎಂದು ಮರೆತುಹೋದೆಯೇನು. ಇಲ್ಲಿರುವ ಎಲ್ಲಾ ರೋಗಿಗಳೂ ಕ್ಯಾನ್ಸರ್ ರೋಗಿಗಳೇ.” ಶಾಕ್ ಆದಳು ಭವಾನಿ.
“ಏನು, ಆಕೆಗೆ ಕ್ಯಾನ್ಸರ್ರೇ?”
“ಹೌದು, ಬ್ರೆಸ್ಟ್ ಕ್ಯಾನ್ಸರ್, ಮೂರನೆಯ ಹಂತ. ನಾಳೆಯೇ ಆಕೆಯ ಆಪರೇಷನ್.” ಭವಾನಿ ದಂಗಾಗಿ ಹೋದಳು.
“ಮತ್ತೆ ಅಷ್ಟು ನಗುನಗುತ್ತಾ, ಎಲ್ಲರೊಂದಿಗೆ . . . .”
“ನನಗೂ ಮೊದಲು ಆಶ್ಚರ್ಯವಾಯಿತು. ಮೊದಲ ದಿನ ಆಕೆಗೆ ಖಾಯಿಲೆ ಎಂದು ಗೊತ್ತಾದ ತಕ್ಷಣ ಆಕೆ ಒಂದೆರಡು ನಿಮಿಷ ಮಾತನಾಡಲೇ ಇಲ್ಲ. ಶಾಕ್‍ಗೆ ಒಳಗಾದರೇನೋ ಎಂದು ನಾವಂದುಕೊಂಡೆವು. ನಾಳೆ ಬರುತ್ತೇನೆ ಡಾಕ್ಟ್ರೆ ಎಂದು ಹೊರಟುಹೋದರು. ನಾವು ಅವರೊಬ್ಬರೇ ಬಂದಾಗ ಹೇಳಿ ತಪ್ಪು ಮಾಡಿದೆವೇನೋ ಎನಿಸಿಬಿಟ್ಟಿತ್ತು. ಆದರೆ ಮರುದಿನ ನಗುನಗುತ್ತಾ ಬಂದ ಅವರು ‘ಏನು ಮಾಡಬೇಕು ಹೇಳಿ ಡಾಕ್ಟ್ರೇ’ ಎಂದರು. ‘ನೆನ್ನೆ ಏನಾಗಿತ್ತು’ ಎಂದು ಕೇಳಿದ್ದಕ್ಕೆ ‘ತಕ್ಷಣ ಶಾಕ್ ಎನಿಸಿತು. ನಾನು ಮಾಡಬೇಕಾದದ್ದು ಬೇಕಾದಷ್ಟಿದೆ. ಇಷ್ಟು ಬೇಗ ಎಲ್ಲವೂ ಮುಗಿಯಿತೇ ಎನಿಸಿತು. ಆದ್ರೆ ಯೋಚಿಸಿದ ಮೇಲೆ, ಹೇಗೂ ಹೋಗೇ ಹೋಗ್ತೀನಿ ಅನ್ನುವುದಾದರೆ ಕೆಲವು ಅರೇಂಜ್‍ಮೆಂಟ್ಸ್ ಮಾಡಬೇಕು. ಅದನ್ನು ಮಾಡಿ ಒಂದು ವಾರದಲ್ಲಿ ಬಂದು ಅಡ್ಮಿಟ್ ಆಗ್ತೀನಿ’ ಎಂದರು.”
“ವಾರದ ನಂತರ ಬಂದು ಸೇರಿದರು. ಆಕೆಗೆ ವಯಸ್ಸಾದ ತಾಯಿ, ಒಬ್ಬ 14 ವರ್ಷದ ಮಗಳಿದ್ದಾಳೆ, ಅಷ್ಟೇ. ಆದರೆ ನೀನವರ ಸ್ನೇಹಿತರ ಬಳಗವನ್ನು ನೋಡಬೇಕು. ಹಿರಿಯರು, ಕಿರಿಯರೆನ್ನದೆ ಅವರನ್ನು ನೋಡಲು ಬರುತ್ತಾರೆ. ವಿಚಿತ್ರ ಎಂದರೆ ಅವರಿಗೆ ಇವರು ಸಮಾಧಾನವನ್ನು ಹೇಳಿ ಕಳಿಸ್ತಾರೆ.”
“ಅತಿ ನೋವಿನ ಎಲ್ಲಾ ಟ್ರೀಟ್‍ಮೆಂಟ್‍ಅನ್ನು ನಗುನಗುತ್ತಲೇ ಸಹಿಸಿದರು. ಇಲ್ಲಿಯೂ ಅಷ್ಟೇ ತಾವೂ ನಗುತ್ತಾ, ಇತರರನ್ನು ನಗಿಸಲು ಯತ್ನಿಸುತ್ತಿರುತ್ತಾರೆ. ಸಂಜೆ ನಿನ್ನ ಬಗ್ಗೆ ಕೇಳಿದರು. ನಾನೇ ಹೇಳಿದೆ. ಅದಕ್ಕೇ ಬಂದಿದ್ದಾರೆ” ಎಂದ.
ಭವಾನಿಗೆ ಏನು ಉತ್ತರ ಕೊಡಬೇಕೋ ಗೊತ್ತಾಗಲಿಲ್ಲ. ಸ್ವಲ್ಪ ಸುಧಾರಿಸಿಕೊಂಡು, “ಆಕೆಯ ಪರಿಸ್ಥಿತಿ ಏನು, ಬದುಕುಳಿಯುತ್ತಾರಾ?”
“ಗೊತ್ತಿಲ್ಲ, ಹೇಳುವುದು ಕಷ್ಟ. 3 ನೇ ಹಂತವಲ್ಲವೇ?”
“ಇದು ಆಕೆಗೆ ಗೊತ್ತಾ?” ಭವಾನಿಯ ಮನಸ್ಸಿನಲ್ಲಿ ಆಕೆಗೆ ಖಚಿತವಾಗಿ ಗೊತ್ತಿಲ್ಲ, ಆದ್ದರಿಂದಲೇ ಇಷ್ಟು ನಗುನಗುತ್ತಿರಲು ಸಾಧ್ಯ ಎಂದುಕೊಂಡಳು.
“ಹೌದು, ಗೊತ್ತು.” ಭವಾನಿಗೆ ತನ್ನ ಕಿವಿಗಳನ್ನು ನಂಬಲಾಗಲಿಲ್ಲ. ಇನ್ನೊಮ್ಮೆ ಕೇಳಿ ಖಚಿತಪಡಿಸಿಕೊಂಡಳು. ಆ ವಾಕ್ಯ ಭವಾನಿಯ ಜೀವನವನ್ನೇ ಬದಲಿಸಿತು. ಯೋಚಿಸಲಾರಂಭಿಸಿದಳು. ಕ್ರಮೇಣ ಆಕೆಯ ಮುಖದ ಮೇಲೆ ಮಂದಹಾಸ ಮೂಡಿತು.
ಸುಮಾರು ಒಂದೆರಡು ಘಂಟೆಗಳಾದ ಮೇಲೆ ಮಲಗಿದ್ದ ಆನಂದ್‍ನನ್ನು ಎಬ್ಬಿಸಿದಳು.
“ಏನು ಬೇಕು?” ಕಣ್ಣುಜ್ಜಿಕೊಳ್ಳುತ್ತಲೇ ಕೇಳಿದ.
“ಬೆಳಿಗ್ಗೆ ಆಕೆಯ ಆಪರೇಷನ್ ಎಷ್ಟೊತ್ತಿಗೆ?”
“ಯಾರ ಆಪರೇಷನ್?”
“ಅದೇ ಸುಮಾ ಇಲ್ಲಿಗೆ ಬಂದಿದ್ದರಲ್ಲ, ಆಕೆಯದು?”
“9 ಘಂಟೆಗೆ. ಆದರೆ ಅದನ್ನು ಕೇಳಲು ಇದು ಸಮಯವೇ?” 
“ಬೆಳಿಗ್ಗೆ 7 ಘಂಟೆಗೆ ನನ್ನನ್ನು ಆಕೆಯ ರೂಮಿಗೆ ಕರೆದುಕೊಂಡು ಹೋಗುವಿರಾ? ಆಕೆಗೆ ಥ್ಯಾಂಕ್ಸ್ ಹೇಳಬೇಕು. ಬದುಕಿನ ಅರ್ಥವನ್ನು ಕಲಿಸಿಕೊಟ್ಟಿದ್ದಕ್ಕೆ.”
ಆ ಮಾತುಗಳನ್ನು ಕೇಳಿ, ಜಗ್ಗನೆ ಎದ್ದು ಕೂತ ಆನಂದ್. ಆಕೆಯ ಮುಖದ ಮೇಲಿನ ಮುಗುಳ್ನಗೆಯನ್ನು, ಹೊಳೆಯುತ್ತಿದ್ದ ಕಂಗಳನ್ನು ನೋಡಿ ಅವನ ನಿದ್ದೆ ಹಾರಿಹೋಯಿತು.
“ಖಂಡಿತವಾಗಿ, ಖಂಡಿತವಾಗಿ” ಎದ್ದು ಆಕೆಯ ಹತ್ತಿರ ಬಂದು ಮೃದುವಾಗಿ ಅವಳ ಕೈಗಳನ್ನು ಒತ್ತಿದ. ಇಷ್ಟು ದಿನಗಳ ಮೇಲೆ ಅವನು ಮತ್ತೆ ಮೊದಲಿನ ಭವಾನಿಯನ್ನು ಕಂಡ.
(ಸತ್ಯ ಕಥೆಯನ್ನಾಧರಿಸಿ)

- ಸುಧಾ ಜಿ      

No comments:

Post a Comment