Sunday 11 June 2017

ಕವನ - ಇಂತಹ ಮದುವೆ ಬೇಕೆ



ಮುಂಜಾವದಿ ಏಳಬೇಕು
ಮೂರು ಘಂಟೆ ನಿದ್ದೆ ಸಾಕು
ಹಗಲು ರಾತ್ರಿ ಗಾಣದ
ಎತ್ತಿ ನಂತೆ  ದುಡೀಬೇಕು.

ತೌರು ಮನೆ ತೊರೆಯಬೇಕು
ಸಂಬಂಧಗಳ ಕಳಚಬೇಕು
ಅಪ್ಪ ಅಮ್ಮ ಅಣ್ಣ ತಂಗಿ
ವ್ಯಾಮೋಹ ಬಿಡಬೇಕು. 

ನೌಕರಿಯ ಮಾಡಬೇಕು
‌ಸಂಬಳವ ತರಬೇಕು 
ಎಲ್ಲ ತಂದು ಪತಿಗೆ ನೀಡಿ
ಕಾಸಿಗೆ ಕೈ ಒಡ್ಡಬೇಕು.

ಹೇಳಿದಾಗ ಮಂಚವೇರಬೇಕು
ಮಗುವ ಹೆತ್ತು ಕೊಡಬೇಕು
ಗಂಡೊ ಹೆಣ್ಣೊ ನಿರ್ಧಾರ
ಗಂಡನಿಗೇ ಬಿಡಬೇಕು.

ಬಟ್ಟೆ ಒಡವೆ ಬೇಡಬೇಕು
ತುತ್ತು ಅನ್ನ ಕೇಳಬೇಕು
ಹೊರಗೆ ಎಲ್ಲೆ ಹೋದರೂ
ವರದಿ ಎಲ್ಲ ನೀಡಬೇಕು.

ಏನು ಬೇಕು ಎಷ್ಟು ಬೇಕು
ಹೇಗೆ ಬದುಕಿ ಬಾಳಬೇಕು
ಕೂತು ನಿಂತು ನಡೆಯಲು
ಅನುಮತಿಯ ಪಡೆಯಬೇಕು.

ಈ ರೀತಿಯ ಬದುಕು ಸಾಕು
ಸ್ವಾತಂತ್ರ್ಯವ ಸವಿಯಬೇಕು
ಹಕ್ಕಿಯಂತೆ ಹಾರಾಡುತ್ತ
ಮುಕ್ತವಾಗಿ ಬದುಕಬೇಕು.

ಮದುವೆ ಹೊಣೆಯಾಗಬೇಕು
ಇಬ್ಬರೂ ಸಮನಾಗಬೇಕು
ಮನಗಳ ಮಿಲನದಿಂದ
ಬಾಳಬಂಡಿ ಸಾಗಬೇಕು.

 - ಸುಧಾ ಜಿ      

No comments:

Post a Comment