Sunday 11 June 2017

ನಾಟಕ - ರಷ್ಯನ್ ಗುಣ

ಮೂಲ ಕಥೆ : ‘ರಷ್ಯನ್ ಕ್ಯಾರೆಕ್ಟರ್’ ಅಲೆಕ್ಸಿ ಟಾಲ್ಸ್ಟಾಯ್


ದೃಶ್ಯ-1

(ಸೈನಿಕರ ಶಿಬಿರ. ಟೆಂಟಿನ ಹೊರಗೆ ಒಂದಿಬ್ಬರು ಕುಳಿತುಕೊಂಡು ಮಾತನಾಡುತ್ತಿದ್ದಾರೆ. ಅಲೆಕ್ಸಿ ಅವರಿಂದ ಸ್ವಲ್ಪ ದೂರದಲ್ಲಿ ಕುಳಿತು ಬರೆಯುವುದರಲ್ಲಿ ಮಗ್ನನಾಗಿದ್ದಾನೆ. ಆತನ ಜೊತೆ ಟ್ಯಾಂಕ್ ಚಾಲಕ ಚ್ಯುವಿಲೊವ್ ಅವನಿಗೆ ಏನನ್ನೋ ಹೇಳುತ್ತಿದ್ದಾನೆ. ಗುಂಡು ಹಾರುವ ಶಬ್ಧ, ದೂರದಲ್ಲೆಲ್ಲೋ ಬಾಂಬ್ ಸಿಡಿದ ಶಬ್ಧ ಕೇಳಿ ಬರುತ್ತಿರುತ್ತದೆ. ಒಬ್ಬ ಸೈನಿಕ ಕುಂಟುತ್ತಾ ಬಂದು ಅವರನ್ನು ಸೇರುತ್ತಾನೆ. ಒಂದಿಬ್ಬರು ಸೈನಿಕರು ಸೈನಿಕನೊಬ್ಬನನ್ನು ಹೊತ್ತುಕೊಂಡು ಬರುತ್ತಾರೆ. ಆಗ ಬಾಂಬ್ ದಾಳಿಯನ್ನು ಸೂಚಿಸುವ ಸೈರನ್ ಶಬ್ಧ ಕೇಳಿ ಬರುತ್ತದೆ. ಗಡಿಬಿಡಿ ಉಂಟಾಗುತ್ತದೆ. ಒಳಗಿನಿಂದ ಒಬ್ಬ ಓಡಿಬರುತ್ತಾನೆ. ಅಲ್ಲಿದ್ದವರ ಸಹಾಯ ಪಡೆದು ಕಾಲಿಗೆ ಪೆಟ್ಟಾದವನನ್ನು ಕರೆದುಕೊಂಡು ಹೋಗುತ್ತಾನೆ. ‘ಲೈಟ್ ಆಫ್ ಮಾಡಿ’, ‘ಬಂಕರ್‍ಗೆ ಹೋಗಿ’, ‘ಬೆಂಕಿ ಆರಿಸಿ’ ಎಂಬ ಕೂಗಾಟಗಳು ಕೇಳಿ ಬರುತ್ತವೆ. ಬಾಂಬ್ ಬಿದ್ದ ಶಬ್ಧ. ನಂತರ ಎಲ್ಲವೂ ಶಾಂತವಾಗುತ್ತದೆ. ಒಬ್ಬೊಬ್ಬರೇ ಹೊರಗೆ ಬರುತ್ತಾರೆ)
ಗ್ರೆಗೊರ್ : ಈ ನಾಜಿಗಳ ವಂಶಾನೆ ನಿರ್ವಂಶ ಮಾಡೋವರ್ಗೂ ನೆಮ್ಮದಿಯಿಲ್ಲ. ಪಾವೆಲ್, ಒಮ್ಮೊಮ್ಮೆ ಅನ್ಸುತ್ತೆ, ಇಡೀ ಜರ್ಮನಿಗೇ ಬೆಂಕಿ ಹಚ್ಚೋಣ ಅಂತ.
ಪಾವೆಲ್ : ಇಡೀ ಜರ್ಮನಿಗೇ ಬೆಂಕಿ ಹಚ್ಚಿದ್ರೆ, ನಾಜಿಗಳ ಜೊತೆ ಮನುಷ್ಯರೂ ಬೆಂದು ಹೋಗ್ತಾರೆ, ಗ್ರೆಗೊರ್.
ಗ್ರೆಗೊರ್ : ನಾವೇನೂ ಮನುಷ್ಯರಲ್ವಾ? ನಮ್ಮ  ಮನೆಯವರು ಮನುಷ್ಯರಲ್ವಾ? ನಮ್ಮನ್ನೆಲ್ಲಾ ದಿನಾ ಸಾಯಿಸ್ತಾರೆ. ಅವ್ರು ಮಾಡೋ ಅತ್ಯಾಚಾರ, ಅನಾಚಾರಗಳನ್ನ ನೆನಸಿಕೊಂಡ್ರೆ, ಅವರನ್ನ ಜೀವಂತವಾಗಿ ಹೂಳಬೇಕು ಅನ್ಸುತ್ತೆ. ಪಾಪಿಗಳು, ಪಾಪಿಗಳು.
ಪಾವೆಲ್ : ಅದು ಸರಿ. ಆದ್ರೆ ಈಗ ಅವರನ್ನ ಸೋಲಿಸೋದು ಹೇಗೆ ಅಂತ ಹೆಚ್ಚು ಯೋಚ್ನೆ ಮಾಡ್ಬೇಕು.
ಮಿಖಾಯಿಲ್ : ಪಾವೆಲ್, ನಿನ್ನೆ ಸ್ವೆರ್‍ದ್ಲೊವ್ ಮೇಲೆ ನಾಜಿಗಳು ದಾಳಿ ಮಾಡಿದ್ರಂತೆ. ಇಡೀ ಪ್ರದೇಶಾನ ತಮ್ಮ ಕೈಗೆ ತೆಗೆದುಕೊಂಡಿದ್ದಾರಂತೆ.
ಪಾವೆಲ್ : ಹೌದಾ ಮಿಖಾಯಿಲ್?
ಮಿಖಾಯಿಲ್ : ಹೌದು. ನಮ್ಮವರೇನೂ ಸುಮ್ನೆ ಬಿಟ್ಟಿಲ್ಲ. ಚೆನ್ನಾಗಿ ಕೊಟ್ಟಿದ್ದಾರೆ.
ಆಂದ್ರೆಯ್ : ಸ್ವೆರ್‍ದ್ಲೊವ್ ಜನರು ನಾಜಿಗಳಿಗೆ ಏನ್ ಮಾಡಿದ್ರು ಅಂತಾನೂ ಹೇಳು, ಮಿಖೊ.
ಮಿಖಾಯಿಲ್ : (ನಗುತ್ತಾ) ನೀನೇ ಹೇಳು ಆಂದ್ರೆಯ್. (ಎಲ್ಲರೂ ‘ಏನ್ ಮಾಡಿದ್ರು, ಹೇಳು’ ಎನ್ನುತ್ತಾರೆ)
ಆಂದ್ರೆಯ್ : ಸ್ವೆರ್‍ದ್ಲೊವ್ ಊರಿನಿಂದ ಆದಷ್ಟೂ ಜನರನ್ನ ದೂರದ ಹಳ್ಳಿಗಳಿಗೆ ಕಳುಹಿಸಿಬಿಟ್ರು. ಫ್ಯಾಕ್ಟರಿಯಿಂದ, ಮನೆಗಳಿಂದ ಏನೇನ್ ತಗೋಬಹುದೊ, ಅದನ್ನೆಲ್ಲಾ ತಗೊಂಡ್ರು. ಉಳಿದಿದ್ದನ್ನ ನಾಶ ಮಾಡಿದ್ರು. ಅಲ್ಲಿಗೆ ಬಂದ ನಾಜಿಗಳಿಗೆ ಏನೂ ಸಿಗದಿರೋ ಹಾಗೆ ಮಾಡಿದ್ರು. ನಾಜಿಗಳಿಗೆ ಏನೂ ಸಿಗಲಿಲ್ಲ. ಚೆನ್ನಾಗಿ ಬಾಯಾರಿದ್ರು. ಸಿಕ್ಕ ಸಿಕ್ಕ ಕಡೆ ನೀರು ಕುಡಿದ್ರು. ಪಾಪ, ಅದರಲ್ಲಿ ಭೇದಿ ಪೌಡರ್ ಸೇರಿತ್ತು ಅಂತ ಅವರಿಗೇನೂ ಗೊತ್ತಿತ್ತು. (ಎಲ್ಲರೂ ನಗುತ್ತಾರೆ) ಅವರಲ್ಲಿದ್ದ ಶೋಕಿದಾರರು ಮನೆಗೆ ನುಗ್ಗಿ, ಫೇಸ್ ಪೌಡರ್‍ನ ಮೈಗೆಲ್ಲಾ ಸುರಿದುಕೊಂಡ್ರು. ಅದು ತುರಿಕೆ ಪುಡಿ ಅಂತ ಆಮೇಲೆ ಗೊತ್ತಾಯ್ತು. (ಎಲ್ಲರೂ ಗಹಗಹಿಸಿ ನಗುತ್ತಾರೆ) ಒಳ್ಳೆ ಮಂಗಗಳ ಥರಾ ಕುಣೀತಾ ಇದ್ರು.
ಮಿಖಾಯಿಲ್ : ಆ ನಾಜಿಗಳು ರಷ್ಯನ್ನರು ಅಂದ್ರೆ ಏನ್ ಅಂದ್ಕೊಂಡಿದ್ದಾರೆ. ದಡ್ಡರು, ಹೇಡಿಗಳು ಅಂತಾನಾ? ಹುಂ, ಅವರ ಕೈಗೆ ಸಿಕ್ಕಿದ ಗೆರಿಲ್ಲಾ ನಾಯಕರು, ಪಾರ್ಟಿಸಾನ್ ಹುಡುಗರೂ ಸಹ ಒಂದಕ್ಷರಾನೂ ಬಿಟ್ಟಿಲ್ಲ. ಯಾವ ರಹಸ್ಯಾನೂ ಬಾಯಿಬಿಟ್ಟಿಲ್ಲ. ಪಾರ್ಟಿ ಕಾಮ್ರೇಡ್ಸ್ ಅಂತೂ ನಾಜಿಗಳ ನೆರಳಲ್ಲೇ ಇದ್ದು ಅವರ ಮೇಲೆ ದಾಳಿ ಮಾಡೋದಿಕ್ಕೆ ತಯಾರಿ ಮಾಡ್ತಾನೆ ಇದಾರೆ.
ಗ್ರೆಗೊರ್ : ಬಂಧಿಗಳಿಗೆ ತುಂಬಾ ಹಿಂಸೆ ಕೊಡ್ರಾರಾ? ಹೇಗೆ ಸಹಿಸ್ಕೋತಾರೋ?
(ಆಗ ಯುವತಿ ಸಾಷ ಮತ್ತು ಮಧ್ಯ ವಯಸ್ಸಿನ ನಿಕೊಲೆಯವ್ನಾ ಬರುತ್ತಾರೆ)
ನಿಕೊಲೆಯೆವ್ನಾ : ಟೀ ಕುಡಿತೀರಪ್ಪಾ! ತಗೊಳ್ಳಿ. ಸಾಷ ಬಿಸ್ಕತ್ ಕೊಡು.
ಸಾಷ : (ಬಿಸ್ಕತ್ ಕೊಡುತ್ತಾ) ಕಾಮ್ರೇಡ್ ಗ್ರೆಗೊರ್, ನಮ್ಮವರು ನಾಜಿಗಳ ಹಿಂಸೆನಾ ಹೇಗೆ ಸಹಿಸ್ಕೋತಾರೆ ಅಂತ ಕೇಳ್ತಿದ್ರಲ್ಲಾ. ನಾವು ಸೋವಿಯತ್ ಜನತೆ. ನಾವೊಂದು ಉದಾತ್ತ ಧ್ಯೇಯಕ್ಕೋಸ್ಕರ ಬಂದಿದೀವಿ. ಯಾವುದೇ ಅಸಮಾನತೆ ಇಲ್ಲದ, ಭೇದ ಇಲ್ಲದ, ಎಲ್ಲರೂ ಚೆನ್ನಾಗಿ ಬದುಕುವ ಸಮಾಜನ ಕಟ್ತಾ ಇದೀವಿ. ಈಗ ಅದನ್ನ ಉಳಿಸ್ಕೊಳ್ಳೋದಕ್ಕೋಸ್ಕರ ಹೋರಾಡ್ತಾ ಇದೀವಿ. ಹಾಗಾಗಿ ಕಷ್ಟಾನ ಸಹಿಸಿಕ್ಕೋಳ್ಳೋದಿಕ್ಕೆ ಸಾಧ್ಯವಾಗುತ್ತೆ. ನಮ್ಮದು ಮೃದು ಹೃದಯ, ಉಕ್ಕಿನ ದೇಹ. ಮುಂದಿನ ಭವಿಷ್ಯಕ್ಕೋಸ್ಕರ ನಮ್ಮ ಜೀವವನ್ನೂ ಕೊಡೋದಿಕ್ಕೆ ತಯಾರಾಗೇ ಬಂದಿದೀವಿ.
ನಿಕೊಲೆಯೆವಾ : ನಮಗೋಸ್ಕರ ಹಿಂದಿನವರು ಜೀವ ಕೊಟ್ರು, ಈಗ ನಾವು ಮುಂದಿನವರಿಗೋಸ್ಕರ... (ಗದ್ಗದಿತಳಾಗುತ್ತಾಳೆ)
ಪಾವೆಲ್ : ಅದೇ ಅಲ್ಲವಾ ರಷ್ಯನ್ ಗುಣ!
ಗ್ರೆಗೊರ್ : ಯಾವುದು?
ಪಾವೆಲ್ : ಅದೆಲ್ಲವೂ.
ಗ್ರೆಗೊರ್ : ಅದೆಲ್ಲವೂ ಅಂದ್ರೆ?
ಆಂದ್ರೆಯ್ : ಈಗ ಈ ನಮ್ಮ ದೇಶಪ್ರೇಮಿ ಯುದ್ಧಾನೇ ತಗೊ. ನಾವೀಗ ಹೇಗೆ ಹೋರಾಡ್ತಾ ಇದೀವಿ. ನಮ್ಮ ನಿಕೊಲೆಯೆವ್ನಾಳ ಇಬ್ಬರು ಮಕ್ಕಳೂ ಮಡಿದು ಸೋವಿಯತ್ ಧೀರರಾಗಿದ್ದಾರೆ. ನಮ್ಮ ಪ್ರತಿಯೊಂದು ಮನೇಲೂ ಒಬ್ಬನಲ್ಲ ಒಬ್ಬ ಧೀರ ತಾಯ್ನಾಡನ್ನ ಫ್ಯಾಸಿಸ್ಟರಿಂದ ಕಾಪಾಡೋದಿಕ್ಕೆ ಜೀವ ತೆತ್ತಿದ್ದಾನೆ.
ಮಿಖಾಯಿಲ್ : ಅದಷ್ಟೇ ಅಲ್ಲ. ಸೈನಿಕರಾಗಿ ರಣಾರಂಗಣದಲ್ಲಿ ಇರೋವರನ್ನ ಬಿಟ್ಟು ಬೇರೆ ಜನಾನೂ ಇದಾರೆ. ಹಳ್ಳಿಗಳಲ್ಲಿ ಹೊಲಗದ್ದೆಗಳಲ್ಲಿ ಬಾಂಬಿನ ಮೋಡದ ಕೆಳಗೆ ಕೆಲಸ ಮಾಡೊ ರೈತರು ನಮ್ಮ ಸೈನಿಕರಿಗೆ, ಜನರಿಗೆ ಆಹಾರ ಕೊಡ್ತಾರೆ. ಕಾರ್ಖಾನೆಗಳಲ್ಲಿ ಕೆಲಸ ಮಾಡೋ ಕಾರ್ಮಿಕರು ಯುದ್ಧದ ನೆರಳಿನಲ್ಲೇ ಶಸ್ತ್ರಾಸ್ತ್ರಗಳನ್ನ ಉತ್ಪಾದನೆ ಮಾಡ್ತಾರೆ. ಎಲ್ಲರೂ ಒಂದಲ್ಲ ಒಂದು ರೀತೀಲಿ ಯುದ್ಧದಲ್ಲಿದ್ದಾರೆ. ಯುದ್ಧದಲ್ಲಿ ಗೆಲ್ಲೋದಿಕ್ಕೆ ಶ್ರಮಿಸ್ತಾ ಇದಾರೆ. ಎಲ್ಲರೂ ಯೋಧರೇ!
ಸಾಷ : ಬರೇ ಧೀರೋದಾತ್ತ ಕೆಲಸಗಳಷ್ಟೇ ರಷ್ನನ್ ಗುಣ ಅಲ್ಲ, ಕಾಮ್ರೇಡ್. ನಾವು ಎಲ್ಲರ ದುಡಿತ ಒಬ್ಬನಿಗಲ್ಲ. ಎಲ್ಲರೂ ಎಲ್ಲರಿಗಾಗಿ. ಯಾರೂ ಆಳಲ್ಲ, ಯಾರೂ ಅರಸನಲ್ಲ. ಇಡೀ ಮನುಕುಲ ಒಂದೇ. ಇಡೀ ಮನುಕುಲದ ಹಿತಕ್ಕಾಗಿ ನನ್ನ ಹಿತವನ್ನ ಅರ್ಪಿಸಬೇಕು ಎನ್ನುವ ಸಿದ್ಧಾಂತವನ್ನ ಜೀವನದಲ್ಲಿ ಅಳವಡಿಸಿಕೊಂಡು ನವ ಮನುಷ್ಯರಾಗ್ತಾ ಇದೀವಿ. ಆದ್ದರಿಂದ ನಮ್ಮ ನೀತಿ, ನೈತಿಕತೆಗಳೇ ಬೇರೆ. ನಮ್ಮ ಸಂಸ್ಕøತಿನೇ ಬೇರೆ. ಅದು ಬಹಳ ಹೊಸದು. ತುಂಬಾ ಉದಾತ್ತವಾದದ್ದು.
ಗ್ರೆಗೊರ್ : ಉದಾಹರಣೆಗೆ...
ಸಾಷ : ಉದಾಹರಣೆ. (ಯೋಚಿಸುತ್ತಾ) ಯಾವ ಉದಾಹರಣೆ ಕೊಡಲಿ. (ಗಂಭೀರವಾಗಿ ಬರೆಯುತ್ತಿದ್ದ ಅಲೆಕ್ಸಿ, ಇವರ ಮಾತುಗಳನ್ನ ಕೇಳಿಸಿಕೊಳ್ಳುತ್ತಿರುತ್ತಾನೆ. ಅತ್ತಿಂದಿತ್ತ ಓಡಾಡುತ್ತಿರುವಾಗ ಅವನನ್ನು ಗಮನಿಸಿದ ಸಾಷ, ಅವನತ್ತ ತಿರುಗಿ) ಅಲೆಕ್ಸಿ, ನೀವು ಎಷ್ಟೊಂದು ಯುದ್ಧಭೂಮಿಗಳನ್ನ ನೋಡಿದ್ದೀರಾ! ನಗರ, ಹಳ್ಳಿಗಳಲ್ಲಿ ಬಗೆಬಗೆಯ ಜನರನ್ನ ನೋಡಿದ್ದೀರಾ!! ಅದರ ಬಗ್ಗೆ ತುಂಬಾ ಬರೆದಿದ್ದೀರಾ ಕೂಡ. ರಷ್ಯನ್ ಗುಣಕ್ಕೆ ಒಳ್ಳೆ ಉದಾಹರಣೆ ಕೊಡೋದಿಕ್ಕೆ ನೀವೆ ಸರಿಯಾದ ವ್ಯಕ್ತಿ.
ಅಲೆಕ್ಸಿ : (ಟ್ಯಾಂಕ್ ಚಾಲಕ ಚ್ಯುವಿಲೊವ್ ಜೊತೆ ಅವರ ಬಳಿಗೆ ಬರುತ್ತಾನೆ) ರಷ್ಯನ್ ಗುಣ! ಅದನ್ನ ವಿವರಿಸೋದಕ್ಕೆ ಸಾಧ್ಯವಿಲ್ಲ. ನಿಜ, ಉದಾಹರಣೆಯೇನೋ ಸಾಕಷ್ಟಿದೆ. ಆದರೆ ಯಾವುದನ್ನು ಆಯ್ಕೆ ಮಾಡ್ಕೋಬೇಕು? ಅದು ನನಗಂತೂ ಬಹಳ ಕಷ್ಟದ ಕೆಲಸ.
ಚ್ಯುವಿಲೊವ್ : ನಿಮಗೇ ಕಷ್ಟ ಆದ್ರೆ ಇನ್ನು ನಮ್ಮಂತಹವರ ಕಥೆಯೇನೂ? (ಎಲ್ಲರೂ ನಗುತ್ತಾರೆ)
ಅಲೆಕ್ಸಿ : ನಮ್ಮಂತಹವರ ಕಥೆ ! ಹಾಂ, ಚ್ಯುವಿಲೊವ್, ಈಗ ನೀನು ಹೇಳ್ತಾ ಇದ್ಯಲ್ಲ ಕಥೆ, ನಿನ್ನ ಲೆಫ್ಟಿನೆಂಟ್ ದ್ರೊಮೊವ್ ಕಥೆ, ಅದನ್ನೇ ಹೇಳು. ರಷ್ಯನ್ ಗುಣಕ್ಕೆ ಅದೇ ಒಳ್ಳೆಯ ಉದಾಹರಣೆ.
ಚ್ಯುವಿಲೊವ್ : ಏನು, ನಾನು ಕಥೆ ಹೇಳೋದಾ? ನಾನು ಅಕ್ಷರ ಗೊತ್ತಿಲ್ಲದಿರೋ ದಡ್ಡ. ನನಗೆ ಹೇಳೋಕೆ ಎಲ್ಲಿ ಬರುತ್ತೆ. ನೀವು ಕಥೆ ಬರೆಯವ್ರು. ನೀವು ಹೇಳಿದ್ರೇನೇ ಚೆನ್ನ. 
ಅಲೆಕ್ಸಿ : ಚ್ಯುವಿಲೊವ್, ಸತ್ಯವನ್ನ ನೇರವಾಗಿ ಹೇಳೋದೇ ಚೆನ್ನ. ಅದು ಹೃದಯಕ್ಕೆ ಮುಟ್ಟುತ್ತೆ. ಒರಟಾಗಿರಬಹುದು, ದೊಡ್ಡ ಶಬ್ಧಗಳಿಲ್ಲದಿರಬಹುದು. ಅವುಗಳೆಲ್ಲಾ ಅಲಂಕಾರಕ್ಕೆ, ಶಬ್ಧಾಡಂಬರಕ್ಕೆ ಅಷ್ಟೆ. ಆ ಕಥೇನ ನೀನೇ ಹೇಳು.
ಚ್ಯುವಿಲೊವ್ : ಆಯ್ತು, ಹೇಳ್ತೀನಿ. ಇದು ಹೋದ ವರ್ಷ ಕಸ್ರ್ಕ್ ಯುದ್ಧದಲ್ಲಿ ನಡೆದ ಘಟನೆ. ನಾನು ಟ್ಯಾಂಕ್ ಡ್ರೈವರ್ ಆಗಿದ್ದೆ. ನಮಗೆ ಲೆಫ್ಟಿನೆಂಟ್ ಆಗಿದ್ದೋರು ದ್ರೊಮೊವ್, ದ್ರೊಮೊವ್ ಯೆಗೊರೊವಿಚ್. ಆತ ಆಜಾನುಬಾಹು, ನೋಡೋದಿಕ್ಕೂ ಸುಂದರವಾಗಿದ್ದ. ಟ್ಯಾಂಕ್ ಮೇಲಿಂದ ಕೆಳಗಿಳಿದು ಬರ್ತಾ ಇದ್ರೆ, ಯುದ್ಧ ದೇವತೆಯೇ ಇಳಿದು ಬರೋ ಹಾಗಿತ್ತು. ಕಸ್ರ್ಕ್ ಹಳ್ಳಿಯ ಹತ್ತಿರ ಗುಡ್ಡದಲ್ಲಿ ಜೋರು ಯುದ್ಧ ನಡೀತಾ ಇತ್ತು. ಜರ್ಮನ್ನರನ್ನ ಹಿಂದಕ್ಕೆ ಓಡಿಸ್ತಾ ಇದ್ವಿ. ಆಗ ಒಂದು ಶೆಲ್ ನಮ್ಮ ಟ್ಯಾಂಕಿಗೆ ಬಡಿತು. ಇಬ್ಬರು ಅಲ್ಲೇ ಸತ್ತರು. ನಾನು ಹೊರಕ್ಕೆ ಜಿಗಿದೆ. ಇನ್ನೊಂದು ಶೆಲ್ ಹೊಡೆತಕ್ಕೆ ಬೆಂಕಿ ಹತ್ತಿಕೊಂಡ್ತು. ಲೆಫ್ಟಿನೆಂಟ್‍ಗೆ ಏನಾಯ್ತು ಅಂತ ಟ್ಯಾಂಕ್ ಮೇಲಕ್ಕೆ ಹೋದೆ. ಅವರ ಬಟ್ಟೆಗೆ ಬೆಂಕಿ ಹತ್ತಿತ್ತು. ಹೇಗೋ ಕೆಳಕ್ಕೆ ಎತ್ತಿಕೊಂಡು ಬಂದು, ನೆಲದಲ್ಲಿ ಮಲಗಿಸಿ ಬೆಂಕಿ ಆರಿಸಿದೆ...

ದೃಶ್ಯ-2

(ಯುದ್ಧಭೂಮಿ. ಚ್ಯುವಿಲೊವ್ ಕೂಗಾಟ ಕೇಳಿ ಒಂದಿಬ್ಬರು ಸೈನಿಕರು ಅವನ ಬಳಿಗೆ ಬರುತ್ತಾರೆ. ಚ್ಯುವಿಲೊವ್ ದ್ರೊಮೊವ್‍ನ ಮೂಗಿನ ಬಳಿ ಕೈಯಿಟ್ಟು ಉಸಿರಾಡುತ್ತಿದ್ದಾನೆಯೋ ಇಲ್ಲವೋ ಎಂದು ನೋಡುತ್ತಾನೆ)
ಚ್ಯುವಿಲೊವ್ : ಉಸಿರಾಡ್ತಾ ಇದಾನೆ. ಹೇಗಾದ್ರೂ ಬದುಕಿಸಬಹುದು. ಎತ್ಕೊ. ಆಸ್ಪತ್ರೆಗೆ ಕರೆದುಕೊಂಡು ಹೋಗೋಣ.
ಸೈನಿಕ-1 : ಇರು. (ಇನ್ನೊಬ್ಬ ಸೈನಿಕನಿಗೆ) ಅಲ್ಲಿ ಕಾಟನ್ ಬೆಡ್‍ಶೀಟ್ ಇದೆ ತಗೊಂಡು ಬಾ. ಇಲ್ಲಾಂದ್ರೆ ಎತ್ಕೊಂಡು ಹೋಗೋದು ಕಷ್ಟ. ಚರ್ಮ ಕಿತ್ಕೊಂಡು ಬರುತ್ತೆ. (ಅಷ್ಟರಲ್ಲಿ ನರ್ಸ್ ಬರುತ್ತಾಳೆ. ಅಲ್ಲೇ ಪ್ರಥಮ ಚಿಕಿತ್ಸೆ ಮಾಡುತ್ತಾಳೆ. ಇನ್ನೊಬ್ಬ ಸೈನಿಕ ಬೆಡ್‍ಶೀಟ್ ತರುತ್ತಾನೆ)
ನರ್ಸ್ : ಇಲ್ಲೇ ಮೆಡಿಕಲ್ ಟೆಂಟ್ ಇದೆ. ಕರ್ಕೊಂಡು ಬನ್ನಿ.
(ಸೈನಿಕರು ದ್ರೊಮೊವ್‍ನನ್ನು ಹೊತ್ತುಕೊಂಡು ಹೋಗುತ್ತಾರೆ)

ದೃಶ್ಯ-3

(ಆಸ್ಪತ್ರೆಯ ದೃಶ್ಯ. ದ್ರೊಮೊವ್ ಮುಖದ ತುಂಬಾ ಬ್ಯಾಂಡೆಜ್ ಇದೆ. ನರ್ಸ್ ಬರುತ್ತಾಳೆ. ಹಿಂಬದಿಯಿಂದ ಚ್ಯುವಿಲೊವ್ ಮತ್ತು ಅಲೆಕ್ಸಿಯ ಧ್ವನಿ)
ಚ್ಯುವಿಲೊವ್ ಧ್ವನಿ : ದ್ರೊಮೊವ್ ಕೆಲವು ತಿಂಗಳು ಆಸ್ಪತ್ರೆಯಲ್ಲೇ ಕಳೀಬೇಕಾಯ್ತು. ಆಪರೇಷನ್ನೆಲ್ಲಾ ಮಾಡಿದ್ರು.
ಅಲೆಕ್ಸಿ ಧ್ವನಿ : ಪ್ಲಾಸ್ಟಿಕ್ ಸರ್ಜರಿ.
ಚ್ಯುವಿಲೊವ್ ಧ್ವನಿ : ಅದೇ. ಅದನ್ನೇ ಮಾಡಿದ್ರು. ಕಣ್ಣು, ಕಿವಿ, ಮೂಗು, ತುಟಿ, ಹುಬ್ಬು ವಾಪಸ್ ಬಂತು. ಆದರೆ ಮುಖ ಮಾತ್ರ... (ಧ್ವನಿ ನಿಲ್ಲುತ್ತದೆ)
(ನರ್ಸ್ ಬಂದು ಬ್ಯಾಂಡೇಜ್ ಬಿಚ್ಚುತ್ತಾಳೆ. ಮುಖದಲ್ಲಿ ಮೂಳೆ ಕಾಣುತ್ತಿರುತ್ತವೆ. ವಿರೂಪವಾಗಿರುತ್ತದೆ. ದ್ರೊಮೊವ್ ಬೆಳಕಿಗೆ ಹೊಂದಿಕೊಳ್ಳಲು ಕಣ್ಣನ್ನು ಉಜ್ಜಿಕೊಂಡು ಸರಿಪಡಿಸಿಕೊಳ್ಳುತ್ತಾನೆ.)
ದ್ರೊಮೊವ್ : (ನರ್ಸ್‍ಗೆ) ಸ್ವಲ್ಪ ಕನ್ನಡಿ ಕೊಡಿ. ಮುಖ ನೋಡ್ಬೇಕು. (ಧ್ವನಿ ಒರಟಾಗಿದೆ)
ನರ್ಸ್ : (ಅಳುಕುತ್ತಾ) ಈಗೇನು ಆತುರ. ನಿಧಾನವಾಗಿ ನೋಡಿದ್ರಾಯ್ತು.
ದ್ರೊಮೊವ್ : (ಅದನ್ನು ಕೇಳಿಸಿಕೊಳ್ಳದೆ ತನಗೆ ತಾನೆ ಹೇಳಿಕೊಳ್ಳುತ್ತಾನೆ) ಇದೇನು ನನ್ನ ಧ್ವನಿನಾ. ನನಗೇ ಗುರುತು ಹಿಡಿಯೋಕೆ ಆಗ್ತಿಲ್ಲ. ನಾನು ಬದುಕಿದೀನಿ ತಾನೆ. (ತನ್ನನ್ನೇ ತಾನು ಚಿವಿಟಿಕೊಂಡು ‘ಹಾಂ’ ಎನ್ನುತ್ತಾನೆ) ಸ್ವಲ್ಪ ಕನ್ನಡಿ ಕೊಡಿ, ನನ್ನ ಮುಖನಾದ್ರೂ ಗುರುತು ಹಿಡಿತೀನಿ.
ನಸ್ : (ತೊದಲುತ್ತಾ) ಪರ್ವಾಗಿಲ್ಲ... ಬೇಡ ಬಿಡಿ.
ದ್ರೊಮೊವ್ : (ಮಿಲಿಟರಿ ಶೈಲಿಯಲ್ಲಿ) ಇದು ನನ್ನ ಆರ್ಡರ್. ಕನ್ನಡಿ ಕೊಡಿ. (ದ್ರೊಮೊವ್‍ಗೆ ಕನ್ನಡಿ ಕೊಟ್ಟ ನರ್ಸ್ ಆ ಕಡೆ ತಿರುಗಿ ಮುಖ ಮುಚ್ಚಿಕೊಂಡು ಅಳುತ್ತಾಳೆ. ಕನ್ನಡಿ ನೋಡಿದ ದ್ರೊಮೊವ್ ಒಂದು ಸಲ ನರಳುತ್ತಾನೆ) ಧ್ವನಿ ಮಾತ್ರ ಗುರುತು ಸಿಗೋಲ್ಲ ಅಂದುಕೊಂಡೆ. ಮುಖಾನೂ ಗುರುತು ಸಿಗೊಲ್ಲ. (ನರ್ಸ್ ಕಡೆ ತಿರುಗಿ) ನನಗಾಗಿ ಅಳಬೇಡಿ. ನಾನು ಇದಕ್ಕಿಂತಲೂ ಘೋರವಾಗಿರೋದನ್ನ ನೋಡಿದ್ದೀನಿ. ನನ್ನನ್ನ ಪ್ರೀತಿಸುವವರಿಗಾಗಿ ಅಳಬೇಕು. ಅವರಿಗೆ ಇದನ್ನು ಸಹಿಸಲು ಕಷ್ಟವಾಗಬಹುದು.
(ಅಲ್ಲಿಗೆ ಜನರಲ್ ಬರುತ್ತಾನೆ. ದ್ರೊಮೊವ್ ಮುಖ ಪ್ರೇಕ್ಷಕರತ್ತ ತಿರುಗಿರುತ್ತೆ)
ಜನರಲ್ : ಕಾಮ್ರೇಡ್ ದ್ರೊಮೊವ್, ಹೇಗಿದ್ದೀರಾ? (ದ್ರೊಮೊವ್ ತಿರುಗುತ್ತಾನೆ) ಜನರಲ್ ಮುಖ ನೋವಿನಿಂದ ಕಳಾಹೀನವಾಗುತ್ತದೆ. ನೇರವಾಗಿ ನೋಡುವುದನ್ನು ತಪ್ಪಿಸುತ್ತಾನೆ)
ದ್ರೊಮೊವ್ : ಚೆನ್ನಾಗಿದೀನಿ ಕಾಮ್ರೇಡ್ ಜನರಲ್.
ಜನರಲ್ : ಈ ದಿನ ನಿಮಗೆ ಡಿಸ್‍ಚಾರ್ಜ್.
ದ್ರೊಮೊವ್ : ಹೌದು, ಆಸ್ಪತ್ರೆಯಿಂದ ಡಿಸ್‍ಚಾರ್ಜ್, ರೆಜಿಮೆಂಟ್‍ನಲ್ಲಿ ಚಾರ್ಜ್.
ಜನರಲ್ : (ಕಷ್ಟಪಟ್ಟು ನಗುತ್ತಾ) ದ್ರೊಮೊವ್. ನಿಮ್ಮ ಆರೋಗ್ಯ ಸುಧಾರಿಸ್ಕೊಳ್ಳಿ. ನಂತರ ಸೈನ್ಯ ಬಿಟ್ಟು ನಿಮ್ಮನ್ನ ಬೇರೆ ಕಡೆ ಕಳುಹಿಸೋದಿಕ್ಕೆ ವ್ಯವಸ್ಥೆ ಮಾಡ್ತೀನಿ.
ದ್ರೊಮೊವ್ : (ಸ್ವಲ್ಪ ಸಿಟ್ಟಿನಿಂದ) ಸೈನ್ಯ ಬಿಟ್ಟು ಬೇರೆ ಕಡೆ. ಜನರಲ್, ಹಾಳಾಗಿರೋದು ನನ್ನ ಮುಖದ ಹೊರಗಿನ ಸೌಂದರ್ಯ. ದೇಹಾನೂ ಅಲ್ಲ, ಮನಸ್ಸೂ ಅಲ್ಲ. ನಾನೊಬ್ಬ ಸೈನಿಕ. ಒಂದೋ ಯುದ್ಧ ನಿಲ್ಲಬೇಕು, ಇಲ್ಲಾ ನಾನು ಸಾಯಬೇಕು. ಅಲ್ಲಿಯವರೆಗೂ ನಾನು ಸೈನಿಕನಾಗೇ ಉಳೀತೀನಿ.
ನರ್ಸ್ : ಗಾಯ ಈಗ ತಾನೆ ವಾಸಿಯಾಗಿದೆ. ಆಗಲೇ ರಣರಂಗಕ್ಕೆ ಹೋಗ್ಬೇಕಾ? ಎಲ್ಲರಿಗೂ ಗೊತ್ತು. ನೀವು ಪರಾಕ್ರಮಿಗಳು, ಯಾವುದಕ್ಕೂ ಹೆದರೋಲ್ಲ ಅಂತ. ಆದರೆ ಅದನ್ನೆಲ್ಲಾ ಈ ರೀತಿ ತೋರಿಸೋದು ಬೇಡ.
ದ್ರೊಮೊವ್ : (ವಿಷಣ್ಣನಾಗಿ ನಗುತ್ತಾ) ಸಿಸ್ಟರ್, ನಮ್ಮ ರಷ್ಯನ್ ಜನರೆಲ್ಲಾ ಗಾಯಗಳೊಂದಿಗೇ ಯುದ್ಧ ಮಾಡ್ತಿದಾರೆ. ಮನಸ್ಸಿನ ಗಾಯ, ದೇಹದ ಗಾಯ ಎಲ್ಲಾನೂ ಹೊತ್ಕೊಂಡು. ಅದೆಲ್ಲಾ ಮಾಗೋದಿಕ್ಕೆ ಬಹಳ ಕಾಲ ಬೇಕು. ಆದ್ರೆ ಎಲ್ಲರ ಗಾಯಗಳು ಮಾಗಬೇಕು ಅಂದ್ರೆ, ಈ ದೇಶದಲ್ಲಿ ಒಬ್ಬ ನಾಜಿನೂ ಇರಬಾರದು. ಸೋವಿಯತ್ ಸರ್ಕಾರ ಸುಭದ್ರವಾಗಿರಬೇಕು; ಕಾಮ್ರೇಡ್ ಸ್ಟಾಲಿನ್ ನಾಯಕರಾಗಿರಬೇಕು. ಬಾಂಬಿನ ಮಳೆ ಸುರಿತಾ ಇರೋವಾಗ ಕಾಮ್ರೇಡ್ ಸ್ಟಾಲಿನ್ ಬಯಲಿಗೆ ಬಂದು ಸೈನಿಕರ ಜೊತೆ ಮಾತನಾಡ್ತಾರೆ, ಜೀವದ ಹಂಗು ತೊರೆದು. ಇನ್ನು ನಾವು ಕೆಲವು ಗಾಯಗಳಿಗೆ ಹೆದರಬೇಕೆ?
ಜನರಲ್ : ಸರಿ ದ್ರೊಮೊವ್. ಸ್ವಲ್ಪ ದಿನ ರಜೆ ತಗೊಂಡು ಪೂರ್ತಿ ಗುಣಮುಖರಾಗಿ ಬನ್ನಿ. ನಿಮ್ಮಂಥ ಲೆಫ್ಟಿನೆಂಟ್‍ಗಳು ರಷ್ಯಾಗೆ ಬೇಕು.
ದ್ರೊಮೊವ್ : ಎಂಟು ತಿಂಗಳು ರಜೆಯಲ್ಲೇ ಇದ್ನಲ್ಲಾ ಜನರಲ್.
ಚ್ಯುವಿಲೊವ್ : ಕಾಮ್ರೇಡ್ ಲೆಫ್ಟಿನೆಂಟ್ ಎಂಟು ತಿಂಗಳು ಇದ್ದದ್ದು ಆಸ್ಪತ್ರೇಲಿ, ರಜೆಯಲ್ಲಲ್ಲ. (ಎಲ್ಲರೂ ನಗುತ್ತಾರೆ)
ಜನರಲ್ : ನೀವು ಊರಿಗೆ ಹೋಗಿ ಬಹಳ ವರ್ಷಗಳಾಯಿತು. ತಂದೆ ತಾಯೀನೂ ನೋಡಿದ ಹಾಗಾಗುತ್ತೆ. ಊರಿಗೆ ಹೋಗಿ ಬನ್ನಿ. ನಿಮಗಾಗಿ ನಾವೆಲ್ಲರೂ, ನಿಮ್ಮ ಟ್ಯಾಂಕ್, ಚ್ಯುವಿಲೊವ್ ಎಲ್ಲರೂ ಕಾಯ್ತಾ ಇರ್ತೀವಿ.
(ದ್ರೊಮೊವ್ ತಲೆಯಲ್ಲಾಡಿಸುತ್ತಾನೆ. ಜನರಲ್ ಹಿಂದಕ್ಕೆ ತಿರುಗುತ್ತಾನೆ. ಚ್ಯುವಿಲೊವ್ ದ್ರೊಮೊವ್ ಬಳಿಗೆ ಬರುತ್ತಾನೆ)
ಚ್ಯುವಿಲೊವ್ : (ಚೇಡಿಸುತ್ತಾ) ನಿಮ್ಮ ಗೆಳತಿ ಕಾತ್ಯಾ ಮಾಲಿಶೆವಾ, ಆಕೆನೂ ನೋಡಿಕೊಂಡು ಬರಬಹುದು. ನನ್ನ ಶುಭಾಷಯಗಳನ್ನೂ ತಿಳಿಸಿ.
(ದ್ರೊಮೊವ್ ತಲೆಯಲ್ಲಾಡಿಸುತ್ತಾನೆ. ಚ್ಯುವಿಲೊವ್ ಹೋದ ಮೇಲೆ ಅತ್ತಿಂದಿತ್ತ ತಿರುಗಾಡುತ್ತಾ ಯೋಚಿಸುತ್ತಾನೆ)
ದ್ರೊಮೊವ್ : (ಸ್ವಗತ) ಹೌದು, ಅಪ್ಪ, ಅಮ್ಮನ್ನ ನೋಡಬೇಕು. ಕಾತ್ಯಾಳನ್ನೂ ಮಾತನಾಡಿಸಬೇಕು. ನಾನು ಹೋದರೆ ಅವರಿಗೆಲ್ಲಾ ಸಂತೋಷವಾಗುತ್ತೆ. (ಒಂದು ಕ್ಷಣ ನಡುಗುತ್ತಾನೆ) ಆದ್ರೆ ಈ ಮುಖ ನೋಡಿದ್ರೆ, ಸಂತೋಷವಾಗುತ್ತಾ, ಭಯ ಆಗಲ್ವಾ, ಅವರಿಗೆ ನೋವಾಗಲ್ವಾ, ಕಾತ್ಯಾಳಿಗೆ ಅಸಹ್ಯವಾಗಲ್ವಾ? ಇಲ್ಲಾ, ಇಲ್ಲ. ಅವರಿಗೆ ಈ ಮುಖ ತೋರಿಸಲಾರೆ. ಆದರೆ ಅವರಿಗೆ ಏನಂತ ಹೇಳಲಿ. ನಾನೇನ್ ಮಾಡಲಿ... ಏನ್ ಮಾಡಲಿ...
ದೃಶ್ಯ-4

(ಮನೆಯ ದೃಶ್ಯ. ದ್ರೊಮೊವ್ ತಾಯಿ ಟೇಬಲ್ ಬಳಿಯಿದ್ದ ಕುರ್ಚಿಯಲ್ಲಿ ಕುಳಿತುಕೊಂಡು ಏನನ್ನೋ ಯೋಚಿಸುತ್ತಿದ್ದಾಳೆ. ಬಾಗಿಲು ಬಡಿದ ಶಬ್ಧ ಕೇಳಿಸುತ್ತದೆ)
ತಾಯಿ : ಯಾರು? ಯಾರು?
ದ್ರೊಮೊವ್ : ನಾನು. (ಗಂಟಲನ್ನು ಸರಿಪಡಿಸಿಕೊಂಡು) ಲೆಫ್ಟಿನೆಂಟ್ ಜೊಕೊವ್. ಸೋವಿಯತ್ ಯೂನಿಯನ್‍ನ ಧೀರ ಸೈನಿಕ. ನಿಮ್ಮ  ಮಗನ ಸ್ನೇಹಿತ.
(ತಾಯಿ ಗಡಿಬಿಡಿಯಿಂದ ಎದ್ದು ಬಾಗಿಲು ತೆಗೆಯುತ್ತಾಳೆ. ದ್ರೊಮೊವ್‍ನನ್ನು ದಿಟ್ಟಿಸಿ ನೋಡುತ್ತಾಳೆ. ಮುಖದಲ್ಲಿ ಪ್ರೀತಿ, ವೇದನೆ ಎರಡೂ ಇದೆ)
ತಾಯಿ : ಏನು ಮಗೂ, ಏನು ಬೇಕು?
ದ್ರೊಮೊವ್ : ನಿಮ್ಮ ಮಗ, ನಿಮ್ಮನ್ನು ನೋಡಿ ಮಾತನಾಡಿಸ್ಕೊಂಡು ಬರೋದಿಕ್ಕೆ ಹೇಳಿದ್ದಾನೆ. ಅದಕ್ಕೇ ಬಂದೆ ಅಮ್ಮ.
ತಾಯಿ : (ಆತನ ಕೈ ಹಿಡಿದು) ಅಯ್ಯೋ ನನ್ನ ಬುದ್ದಿಗಿಷ್ಟು ಒಳಗೆ ಬಾ. ನಿನ್ನನ್ನು ಹೊರಗೇ ನಿಲ್ಸಿದೀನಿ. (ಪೇಚಾಡಿಕೊಂಡು ಒಳಗೆ ಕರೆದೊಯ್ಯುತ್ತಾಳೆ) ಕುಳಿತಿಕೊ ಮಗು. ನೀರು ತರ್ತೀನಿ.
(ಆತನು ಅಲ್ಲಿದ್ದ ಸ್ಟೂಲನ್ನು ದಿಟ್ಟಿಸಿಕೊಂಡು ನೋಡಿ, ಏನೋ ನೆನಪಿಗೆ ಬಂದಂತೆ ಹೋಗಿ ಕುಳಿತುಕೊಳ್ಳುತ್ತಾನೆ) ನೀರು ತಗೋ. (ಅವನ ಬಳಿ ಕುಳಿತುಕೊಂಡು) ನಿಜ ಹೇಳಪ್ಪಾ, ಪಾಷಾ ಬದುಕಿದ್ದಾನ, ನನ್ನ ಮಗ ದ್ರೊಮೊವ್ ಬದುಕೇ ಇದ್ದಾನೆ ಅಲ್ವಾ? ಎಲ್ಲಾ ಚೆನ್ನಾಗಿದೆ ಅಲ್ವಾ?
ದ್ರೊಮೊವ್ : ಹೌದಮ್ಮ ಬದುಕಿದ್ದಾನೆ. ಗುಂಡುಕಲ್ ಥರ ಇದಾನೆ.
ತಾಯಿ : ಊಟ, ತಿಂಡಿ ಸರಿಯಾಗಿ ಮಾಡ್ತಾನಾ? ಅಂದ್ರೆ, ನಿಮಗೆಲ್ಲಾ ಊಟ, ನಿದ್ದೆ ಸರಿಯಾಗಿ ಆಗುತ್ತಾ?
ದ್ರೊಮೊವ್ : ಓಹೋ, ಅದಕ್ಕೇನಮ್ಮಾ. ನಾವು ಯಾವ ಊರಿಗೆ ಹೋದ್ರೂ ಅಲ್ಲೊಬ್ಬ ತಾಯೀನೊ, ಅಕ್ಕ, ತಂಗೀನೋ ಇರ್ತಾಳೆ. ಹೊಟ್ಟೆ ತುಂಬಾ ಊಟ ಹಾಕ್ಕೋಕ್ಕೆ. ಮನಸ್ಸಿನ ತುಂಬಾ ಪ್ರೀತಿ ಕೊಡೋಕೆ. ನಿಮ್ಮ ಮಗ ಅಂತೂ ಅದೆಂಥಾ ಹೊಟ್ಟೆ ಬಾಕ.
ತಾಯಿ : ಅವನು ಚಿಕ್ಕ ವಯಸ್ಸಿನಿಂದಲೂ ಹಾಗೆ. ಚೆನ್ನಾಗಿ ತಿಂತಾನೆ. ನಿಜ ಹೇಳಪ್ಪಾ, ಯುದ್ಧ ತುಂಬಾ ಭಯಾನಕ ಅಲ್ವಾ. ಸಾವು, ಗಾಯ, ಕಲೆಗಳು, ಅಬ್ಬಬ್ಬಾ ನಿಮ್ಮದು ಎಂಥಾ ಗುಂಡಿಗೆ?
ದ್ರೊಮೊವ್ : ನಿಜ ಅಮ್ಮಾ, ಯುದ್ಧ ತುಂಬಾ ಭಯಾನಕ. ಸಹಿಸಲಸಾಧ್ಯವಾದ ನೋವು ತರುತ್ತೆ. ಆದರೆ ಅದು ಮುಂದಿನ ಸುಖಕ್ಕೆ ಈಗ ಪಡೋ ಕಷ್ಟ. ನಾವು ಸಾವು-ನೋವುಗಳ ಮಧ್ಯೇನೆ ಇದ್ದಾಗ, ಎಲ್ಲಾ ಅಭ್ಯಾಸವಾಗಿ ಹೋಗುತ್ತೆ. ಸಹಿಸೋದೂ ಸುಲಭ ಆಗುತ್ತೆ. ದೂರ ನಿಂತು ನೋಡೋರಿಗೆ ಕಷ್ಟ ಅಷ್ಟೆ.
(“ಮರಿಯಾ” ಎಂದು ಹೊರಗಿನಿಂದ ಕೂಗಿದ ಶಬ್ಧ ಕೇಳುತ್ತದೆ)
ತಾಯಿ : (ಗಡಿಬಿಡಿಯಿಂದ ಒಮ್ಮೆ ದ್ರೊಮೊವ್ ಕಡೆ, ಮತ್ತೊಮ್ಮೆ ಬಾಗಿಲ ಕಡೆ ನೋಡುತ್ತಾ ಬಾಗಿಲು ತೆಗೆಯಲು ಹೋಗುತ್ತಾಳೆ) ತಂದೆ... ದ್ರೊಮೊವ್ ತಂದೆ ಯೆಗೊರ್ ಯೆಗೊರೊವಿಚ್ ಬಂದರು. 
(ದ್ರೊಮೊವ್ ಎದ್ದು ನಿಲ್ಲುತ್ತಾನೆ. ಕೈ ಕೈ ಹಿಸುಕಿಕೊಳ್ಳುತ್ತಾನೆ. ತಂದೆ ಅವನ ಬಳಿಗೆ ಬರುತ್ತಾರೆ)
ಇವನು ನಮ್ಮ ದ್ರೊಮೊವ್‍ನ ಸ್ನೇಹಿತ ಜೊಕೊವ್. ನಮ್ಮನ್ನ ನೋಡೋದಿಕ್ಕೆ ಬಂದಿದ್ದಾನೆ.
ಯೆಗೊರ್ : (ಕೈಕುಲುಕುತ್ತಾ) ನಿಮ್ಮನ್ನು ನೋಡಿ ಸಂತೋಷವಾಯಿತು. ಬಂದು ಬಹಳ ಹೊತ್ತಾಯಿತೆ. ಕುಳಿತುಕೊಳ್ಳಿ. ಯುದ್ಧ ಹೇಗೆ ನಡೀತಾ ಇದೆ. ನಾವು ನಾಜಿಗಳನ್ನ ಸೋಲಿಸೋದಿಕ್ಕೆ ಸಾಧ್ಯವಾಗಿದೆ, ಅಲ್ವಾ?
ದ್ರೊಮೊವ್ : ನಾವು ವೀರಾವೇಶದಿಂದ ಹೋರಾಡ್ತಾ ಇದೀವಿ. ಇಲ್ಲಿಯವರೆಗೂ ಹಿಂದೆ ಸರೀತಾ ಇದ್ವಿ. ಸ್ಟಾಲಿನ್‍ಗ್ರಾದ್ ಯುದ್ಧ ಆದ ಮೇಲೆ ನಾವು ಗೆಲ್ತಾ ಇದೀವಿ.
ಯೆಗೊರ್ : ಹೂಂ. (ಎನನ್ನೋ ನೆನಪಿಸಿಕೊಂಡವನಂತೆ) ತುಂಬಾ ಹಸಿವಾಗಿರಬೇಕು. ತಾಯಿ ಊಟಕ್ಕೆ ಬಡಿಸು. ಬನ್ನಿ ಜೊಕೊವ್. ಊಟ ಮಾಡ್ಕೊಂಡೇ ಮಾತನಾಡೋಣ.
(ಊಟಕ್ಕೆ ಬಡಿಸುತ್ತಿರುವಾಗ ತಾಯಿಯ ಕಣ್ಣು ದ್ರೊಮೊವ್‍ನ ಕೈಗಳ ಮೇಲೆ ಇದೆ. ಅದನ್ನು ಅಕಸ್ಮಾತ್ತಾಗಿ ನೋಡಿದ ದ್ರೊಮೊವ್ ಪೆಚ್ಚಾಗಿ ನಗುತ್ತಾನೆ)
ಈ ಬೇಸಿಗೆಯೊಳಗೆ ಯುದ್ಧ ಮುಗಿಯೋ ಹಾಗೆ ಕಾಣ್ಸುತ್ತೆ.
ದ್ರೊಮೊವ್ : ಅದೇನು ಯುದ್ಧಭೂಮಿಯಲ್ಲಿ ಇಲ್ಲದಿದ್ರೂ, ಬೇಸಿಗೆಯೊಳಗೆ ಮುಗಿಯುತ್ತೇ ಅಂತ ಹೇಗೆ ಹೇಳ್ತೀರಾ?
ಯೆಗೊರ್ : ಇಡೀ ಸೋವಿಯತ್ ದೇಶಾನೇ ಯುದ್ಧಭೂಮಿ ಆಗಿದೆಯೆಲ್ಲಾ ಜೊಕೊವ್. ಒಬ್ಬೊಬ್ಬರೂ ಒಂದೊಂದು ರಣಾಂಗಣದಲ್ಲಿ. ಜನರಿಗೆ ತೀರಾ ರೋಸಿ ಹೋಗಿದೆ. ಬದುಕಿದ್ರೆ ಸಮಾಜವಾದಿ ನೆಲದಲ್ಲಿ ಮಾತ್ರ ಅಂತ ನಿರ್ಧಾರ ಮಾಡಿದ್ದಾರೆ.
(ಊಟ ಮುಗಿಸಿಕೊಂಡು ಎದ್ದೇಳುತ್ತಾರೆ. ಯೆಗೊರ್ ಮರದ ಬೀರುವಿನ ಬಾಗಿಲು ತೆಗೆದು ವೋಡ್ಕಾ ಬಾಟಲು ತೆಗೆಯುತ್ತಾನೆ. ದ್ರೊಮೊವ್ ಬೀರುವಿನತ್ತ ದಿಟ್ಟಿಸಿ ನೋಡುತ್ತಿರುತ್ತಾನೆ. ತಾಯಿ ಅವನನ್ನೇ ಗಮನಿಸುತ್ತಾಳೆ) ಕ್ಷಮಿಸಿ, ವೋಡ್ಕಾ ಸ್ವಲ್ಪವೇ ಇರೋದು.
(ಆಗ ಕೆಲವರು ಮನೆಯೊಳಗೆ ಬರುತ್ತಾರೆ. ಯೆಗೊರ್ ಅವರನ್ನು ಸ್ವಾಗತಿಸಿ, ಪರಿಚಯ ಮಾಡಿಕೊಡುತ್ತಾರೆ)
ಈಕೆ ನತಾಶ, ಸಾಮೂಹಿಕ ಕೃಷಿಕ್ಷೇತ್ರದ ಅಧ್ಯಕ್ಷೆ. ಈತ ಪೊಲಿನ್‍ಸ್ಕಿ ಶಾಲೆಯ ಮುಖ್ಯೋಪಾಧ್ಯಾಯ. ಈತ ಲೆವ್‍ಷೆಂಕೊ. ಉಕ್ಕಿನ ಕಾರ್ಖಾನೆಯಲ್ಲಿ ಫರ್ನೆಸ್ ವಿಭಾಗದ ಮುಖ್ಯಸ್ಥ.
ನತಾಶ : ಯುದ್ಧದ ಬಗ್ಗೆ ಕೇಳಿ ನಿಮಗೆ ಕೆಟ್ಟ ನೆನಪುಗಳನ್ನು ತರೋದಿಕ್ಕೆ ಇಷ್ಟ ಇಲ್ಲ. ನಿಮಗೊಂದಿಷ್ಟು ಬ್ರೆಡ್ ಕೊಡೋಣ ಅಂತ ಬಂದೆ.
ದ್ರೊಮೊವ್ : (ಸ್ವೀಕರಿಸುತ್ತಾ) ಧನ್ಯವಾದಗಳು.
ಪೊಲಿನ್‍ಸ್ಕಿ : ನಾವು ಮಕ್ಕಳಿಗೆ ನಿಮ್ಮ ವೀರಗಾಥೆಗಳನ್ನ ಹೇಳ್ತಾ ಇದೀವಿ. ಮುಂದಿನ ಸಮಾಜದ, ಸುಂದರ ಬದುಕಿನ ಕನಸುಗಳನ್ನು ತುಂಬ್ತಾ ಇದೀವಿ. ಆದ್ರೆ ನೀವು ನಿಜವಾಗ್ಲೂ ಹೋರಾಡ್ತಾ ಇರೋರು. ನಿಮಗೆ ಋಣಿಯಾಗಿದ್ದೇವೆ.
ದ್ರೊಮೊವ್ : ನಾವೂ ಹೀಗಾಗೋದ್ರಲ್ಲಿ ನಿಮ್ಮಂಥ ಶಿಕ್ಷಕರ ಪಾತ್ರ ಇದೆಯಲ್ಲಾ! ಅದನ್ನ ಹೇಗೆ ಮರೆಯೋದು?
ಲೆವ್‍ಷೆಂಕೊ : ಸ್ವಲ್ಪ ಸಿಗರೇಟಿನ ಪುಡಿ ಇದೆ. ಚಳಿಗೆ ಬೇಕಾಗುತ್ತೆ ಇಟ್ಕೊಳ್ಳಿ.
ಯೆಗೊರ್ : (ಅದರ ವಾಸನೆ ಹಿಡಿದು) ತುಂಬಾ ಚೆನ್ನಾಗಿದೆ. ಒಳ್ಳೆ ಕ್ವಾಲಿಟಿ.
ನತಾಶ : (ಜೋರಾಗಿ ನಗುತ್ತಾ) ಹೊ, ಹೊ. ಸರಿಬಿಡಿ. ನಾವು ಗೆಲ್ಲೋದಂತೂ ಗ್ಯಾರಂಟಿ.
ಎಲ್ಲರೂ : ಯಾಕೆ?
ನತಾಶ : ಲೆವ್‍ಷೆಂಕೊ ಮಾವ ಖಜಾನೆಯಲ್ಲಿರೋ ಇಟ್ಕೊಂಡಿರೋ ಹೊಗೆಸೊಪ್ಪು ಕೊಟ್ಟಿದಾನೆ ಅಂದ್ರೆ, ಅಸಾಧ್ಯವಾದದ್ದು ಯಾವುದೂ ಇಲ್ಲ ಅಂತ ಲೆಕ್ಕ.
(ಎಲ್ಲರೂ ನಗುತ್ತಾರೆ)
ಲೆವ್‍ಷೆಂಕೊ : (ಸ್ವಲ್ಪ ನಾಚಿಕೆಯಿಂದ) ನಾನೇನೂ ಜಿಪುಣ ಅಲ್ಲ. ಹೊಗೆಸೊಪ್ಪಿನ ವಿಷಯದಲ್ಲಿ ಸ್ವಲ್ಪ ಹಾಗೆನೇ, ಇರಲಿ. ನಮ್ಮ ಹುಡುಗರಿಗಿಂತಾ ಹೊಗೆಸೊಪ್ಪೆ? ಬೇರೆಯವರೂ ಏನೇನೂ ಕೊಡ್ತೀನಿ ಅಂತಿದ್ರು. ಪೊಲೊವ್ನಾ ತಿಂಡಿ ಮಾಡ್ತೀನಿ ಅಂತಿದ್ಲು.
ಯೆಗೊರ್: ಏನಿದು? ಎಲ್ರೂ ಅವರನ್ನ ಈಗ್ಲೇ ವಾಪಸ್ ಕಳಿಸ್ತೀರೋ ಹಾಗಿದೆ. ಅವರು ಇನ್ನೂ ಒಂದೆರೆಡು ದಿನ ಇರ್ತಾರೆ. ಅಲ್ವಾ ಜೊಕೊವ್?
ತಾಯಿ : ಇದ್ದು ಹೋಗಪ್ಪಾ. ಬಂದಿರೋದು ಅಪರೂಪ.
ದ್ರೊಮೊವ್ : (ತಡವರಿಸುತ್ತಾ) ಆಯ್ತು, ಆಯ್ತು ಇರ್ತೀನಿ.
ನತಾಶ : ಹಾಗಿದ್ರೆ ಒಳ್ಳೆಯದೇ ಆಯ್ತು. ಬನ್ನಿ ನಮ್ಮ ಸಾಮೂಹಿಕ ಕೃಷಿಕ್ಷೇತ್ರಕ್ಕೆ ಹೋಗೋಣ. ನಮ್ಮ ಊರಿನ ರೈತರೆಲ್ಲಾ ಸೇರಿಕೊಂಡು ಸಾಮೂಹಿಕ ಕೃಷಿಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಅಂತ ನೋಡಿ.
ಪೊಲಿನ್‍ಸ್ಕಿ : ನಮ್ಮ ಮಕ್ಕಳ ಜೊತೆ ಸಮಯ ಕಳೀರಿ. ನಿಮ್ಮನ್ನು ನೋಡಿ ತುಂಬಾ ಸಂತೋಷ ಪಡ್ತಾರೆ.
ದ್ರೊಮೊವ್ : (ಆಶ್ಚರ್ಯದಿಂದ) ನನ್ನ ನೋಡಿ... ಸಂತೋಷ ಪಡ್ತಾರಾ...
ಪೊಲಿನ್‍ಸ್ಕಿ : ಹೌದು, ನಿಮ್ಮಂಥ ಧೀರ ಯೋಧರನ್ನು ನೇರವಾಗಿ ನೋಡಿದ್ರೆ, ಅವರಿಗೆ ಅದೆಷ್ಟು ಸಂತೋಷ, ಹೆಮ್ಮೆ, ಅಭಿಮಾನ ಬರುತ್ತೆ ಗೊತ್ತಾ.
ಲೆವ್‍ಷೆಂಕೊ : ಬನ್ನಿ, ಬನ್ನಿ. ಹುಡುಗ್ರ ಜೊತೆ ಮಾತನಾಡಿ. ಅವರು ಬರೀ ಪುಸ್ತಕ ಓದಿ ಪಂಡಿತರಾದ್ರೆ ಸಾಕಾಗೊಲ್ಲ. ಜೀವನ ಗೊತ್ತಾಗಬೇಕು. ನಿಮ್ಮ ಅನುಭವ ಹೇಳಬೇಕು. ಯುದ್ಧದಲ್ಲಿ ಏನೆಲ್ಲಾ ನಡೀತಾ ಇದೆ ಅನ್ನೋದನ್ನ ಯುದ್ಧದಲ್ಲಿರೋರ ಬಾಯಿಂದಲೇ ಕೇಳಬೇಕು. ಹೊರಡಿ.
ದ್ರೊಮೊವ್ : ನಡೀರಿ ಹೋಗೋಣ. (ತಂದೆಯತ್ತ ತಿರುಗಿ) ಕಾತ್ಯಾ ಮಾಲಿಶೆವಾ ಎಲ್ಲಿ ಸಿಕ್ತಾರೆ?
ಪೊಲಿನ್‍ಸ್ಕಿ : ಆಕೆಯ ಪರಿಚಯ ನಿಮಗಿದೆಯಾ? ಆಕೆ ನಮ್ಮ ಶಾಲೆ ಟೀಚರ್.
ದ್ರೊಮೊವ್ : ಇಲ್ಲ, ಇಲ್ಲ. ಇವರ ಮಗ ನೋಡಿಕೊಂಡು ಬರೋದಿಕ್ಕೆ ಹೇಳಿದ್ದ.
ಪೊಲಿನ್‍ಸ್ಕಿ : ಆಕೆ ಇವತ್ತು ಶಾಲೆಗೆ ಬಂದಿಲ್ಲ.
ತಾಯಿ : ಮನೇಲಿದ್ದಾಳೆ. ಈಗ್ಲೆ ಬರೋದಿಕ್ಕೆ ಹೇಳಿ ಕಳಿಸ್ಲಾ?
ದ್ರೊಮೊವ್ : ಈಗ ಬೇಡ. ನಾನು ಇವರ ಜೊತೆ ಹೋಗಿ ಬರ್ತೀನಿ. ಬರೋ ಅಷ್ಟರಲ್ಲಿ ಆಕೆ ಬಂದಿದ್ದರಾಯಿತು.
(ಎಲ್ಲರೂ ಹೊರಡುತ್ತಾರೆ. ಎಲ್ಲರೂ ಹೋದ ಮೇಲೆ ತಾಯಿ ಇದ್ದಕ್ಕಿದ್ದಂತೆ ಅಳುತ್ತಾಳೆ)
ಯೆಗೊರ್ : ಯಾಕೆ ತಾಯಿ, ದ್ರೊಮೊವ್‍ನ ನೆನಪು ಬಂತಾ? ಅವನೂ ಹೀಗೆ ಒಂದಿನ ಬರ್ತಾನೆ. ಯಾಕೆ ಯೋಚ್ನೆ ಮಾಡ್ತೀಯಾ?
ತಾಯಿ : ಯೆಗೊರ್, ನೀವು ಅವನನ್ನ ಸರಿಯಾಗಿ ನೋಡ್ಲಿಲ್ವಾ?
ಯೆಗೊರ್ : ಯಾಕೆ? ನೋಡಿದ್ನಲ್ಲಾ. ಮಾತಾಸಿಡ್ತಾನೆ ಇದೀನಲ್ಲಾ.
ತಾಯಿ : ನಿಮಗೆ ಅವನ ಗುರುತು ಸಿಗಲಿಲ್ವಾ? ಅವನೇ ನಮ್ಮ ಪಾಷ.
ಯೆಗೊರ್: ಏನು, ನಮ್ಮ ಮಗ ದ್ರೊಮೊವಾ? ದ್ರೊಮೊವ್‍ನ ಸ್ನೇಹಿತ ಅಂತ ಅವನೇ ಹೇಳಿದ್ನಲ್ಲಾ?
ತಾಯಿ : ಆದ್ರೆ ಅವನ ರೀತಿ ನೀತಿ ನೋಡಿದ್ರೆ ಗೊತ್ತಾಗುತ್ತೆ ಯೆಗೊರ್. ಅವನು ಬೆಂಚಿನ ಮೇಲೆ ಕುಳಿತ್ಕೊಂಡ ರೀತಿ. ಕೈಯಲ್ಲಿ ಚಮಚ ಹಿಡ್ಕೊಂಡಿದ್ದು. ನೀವು ಮರದ ಬೀರು ತೆಗೆದಾಗ ಬೆಂಕಿಪೆಟ್ಟಿಗೆನ ಒಂದೇ ಸಮ ನೋಡ್ತಿದ್ದ. ಅದರಲ್ಲಿ ಅವನಿಟ್ಟಿರೋ ಮೀನು ಹಿಡಿಯೊ ಹುಕ್‍ಗಳಿವೆ. ಯೆಗೊರ್, ಅವನು ನನ್ನ ಪಾಷ, ನನ್ನ ಪಾಷಾನೇ.
ಯೆಗೊರ್ : ನಿನಗೆಲ್ಲೋ ಹುಚ್ಚು ಹಿಡಿದಿದೆ. ಅವನು ನಿಜವಾಗಿಯೂ ನಮ್ಮ ಮಗನೇ ಆಗಿದ್ದರೆ, ಸುಳ್ಯಾಕೆ ಹೇಳ್ತಿದ್ದ.
ತಾಯಿ : (ಅಳುತ್ತಾ) ಬಹುಶಃ ತನ್ನ ವಿರೂಪ ಆಗಿರೋ ಮುಖಾನ ನಮಗೆ ತೋರ್ಸೋದಿಕ್ಕೆ ಇಷ್ಟ ಆಗ್ಲಿಲ್ವೋ ಏನೋ.
ಯೆಗೊರ್ : ನೀನು ದಡ್ಡಿ. ಇವತ್ತು ಸೋವಿಯತ್ ದೇಶದಲ್ಲಿ ಕಲೆಗಳಿರೋ ಮುಖಾನೇ ಅತ್ಯಂತ ಸುಂದರವಾದದ್ದು. ಅದು ದೇಶಕ್ಕಾಗಿ ಹೋರಾಡಿದ ಸಂಕೇತ. ಅದರಲ್ಲೂ ಈಗ ಬಂದವನ ಮುಖ ನೋಡು, ಅಂಥ ಮುಖ ಇರೋದು ಯಾರಿಗಾದರೂ ಗೌರವದ ವಿಷಯ. ಅಂತಹವನು ನಮ್ಮ ಹೆಮ್ಮೆಯ ಪುತ್ರ. ಮುಖದ ಮೇಲಿನ ಕಲೆ, ಎದೆಯ ಮೇಲಿನ ಪದಕ.
(ಆಗ ದ್ರೊಮೊವ್ ಒಳಗೆ ಬರುತ್ತಾನೆ. ಅವನ ಹಿಂದೆ ಇನ್ನಿತರರೂ ಬರುತ್ತಾರೆ. ತಾಯಿ ಕಣ್ಣನ್ನು ಒರೆಸಿಕೊಳ್ಳುತ್ತಾಳೆ)
ತಾಯಿ : (ದ್ರೊಮೊವ್‍ಗೆ) ಟೀ ಮಾಡಲೇ? ಇನ್ನೇನು ಕಾತ್ಯಾ ಬರ್ತಾಳೆ.
(ತಾಯಿ ಒಳಗೆ ಹೋಗುತ್ತಾಳೆ. ಕಾತ್ಯಾ ಒಳಗೆ ಬರುತ್ತಾಳೆ) 
ಯೆಗೊರ್ : ಬಾಮ್ಮಾ, ಬಾ. ಇವನು ದ್ರೊಮೊವ್‍ನ ಸ್ನೇಹಿತ, ಲೆಫ್ಟಿನೆಂಟ್ ಜೊಕೊವ್.
ಕಾತ್ಯಾ : (ದ್ರೊಮೊವ್ ಆಕೆಗೆ ಬೆನ್ನು ಹಾಕಿ ನಿಂತಿದ್ದಾನೆ) ನಮಸ್ಕಾರ. ದ್ರೊಮೊವ್ ಹೇಗಿದ್ದಾನೆ?
ದ್ರೊಮೊವ್ : (ತಿರುಗುತ್ತಾ) ಚೆನ್ನಾಗಿದ್ದಾನೆ. ನಿಮ್ಮನ್ನು ಕೇಳಿದ.
(ಅವನ ಮುಖ ನೋಡಿದ ಕಾತ್ಯಾ ಒಂದು ಕ್ಷಣ ಬೆಚ್ಚಿದಳು. ಅವಳ ಮುಖದಲ್ಲಿ ನೋವು ಕಾಣಿಸಿಕೊಂಡು ಮಾಯವಾಯಿತು. ಇದನ್ನು ಗಮನಿಸಿದ ದ್ರೊಮೊವ್‍ಗೆ ತುಂಬಾ ಬೇಸರವಾಗುತ್ತದೆ)
ಕಾತ್ಯಾ : (ಸುಧಾರಿಸಿಕೊಂಡು) ಆತನಿಗೆ ತಿಳಿಸಿ. ನಾನು ಅವನಿಗಾಗಿ ಕಾಯ್ತಾ ಇದೀನಿ ಅಂತ. ಏಳೆಂಟು ತಿಂಗಳಾಯ್ತು, ಕಾಗದಾನೂ ಬರೆದಿಲ್ಲ. ಅವನ ನಿರೀಕ್ಷೆಯಲ್ಲೇ ಇದ್ದೀನಿ.
ಯೆಗೊರ್ : ಜೊಕೊವ್, ಕಾತ್ಯಾ ತುಂಬಾ ಗಂಭೀರೆ. ಅವಳು ದ್ರೊಮೊವ್‍ಗೆ ಕಾಯ್ತೀನಿ ಅಂತ ಹೇಳಿದ್ರೆ ಅವನು ಒಂದೇ ಕೈ, ಒಂದೇ ಕಾಲಲ್ಲಿ ಬಂದ್ರೂ ಸರಿಯೇ, ಅವನಿಗಾಗೇ ಕಾಯ್ತಾ ಇರ್ತಾಳೆ. ಅವನಿಗೆ ಸ್ವಲ್ಪ ತಿಳಿಹೇಳಿ. ಕಾಗದ ಬರೀಲಿ.
(ತಾಯಿ ಟೀ ತೆಗೆದುಕೊಂಡು ಬರ್ತಾಳೆ)
ತಾಯಿ : ಟೀ ತಗೊಪ್ಪಾ. ಬಾ ಕಾತ್ಯಾ, ನೀನೂ ತಗೊ. ಒಳಗಡೆ ಇದೆ.
(ಕಾತ್ಯಾ ದ್ರೊಮೊವ್‍ನನ್ನೇ ನೋಡುತ್ತಾ ಒಳಗೆ ಹೋಗುತ್ತಾಳೆ)
ದ್ರೊಮೊವ್ : (ಟೀ ಕುಡಿದ ಮೇಲೆ) ತಾಯಿ ನಾನಿನ್ನು ಹೊರಡ್ತೀನಿ.
ತಾಯಿ : ಯಾಕಪ್ಪಾ? ಒಂದೆರೆಡು ದಿನ ಇರ್ತೀನಿ ಅಂದಿದ್ದೆ.
ಯೆಗೊರ್ : ಏನಾದರೂ ಬೇಸರವಾಯ್ತೆ?
ದ್ರೊಮೊವ್ : ಏನಿಲ್ಲಾ. ಯುದ್ಧ ಕರೀತಾ ಇದೆ. ನಾನು ಈಗಲೇ ಹೋಗಬೇಕು. ಇಲ್ಲಿ ನಿಲ್ಲೋಕೆ ಆಗ್ತಿಲ್ಲ. ನಾನಿನ್ನು ಬರ್ತೀನಿ.
ಯೆಗೊರ್ : ಸ್ವಲ್ಪ ಇರಿ. ಕುದುರೆಗಾಡೀನಾದ್ರೂ ತರ್ತೀನಿ. ಸಾಮೂಹಿಕ ಕೃಷಿಕ್ಷೇತ್ರದಲ್ಲಿದೆ.
ದ್ರೊಮೊವ್ : ಅವರಿಗೆ ತೊಂದರೆ ಬೇಡ. ನಾನೊಬ್ಬನೇ ನಡೆದು ಹೋಗ್ತೀನಿ, ಹಳ್ಳಿಯ ಸೌಂದರ್ಯವನ್ನ ನೋಡಿಕೊಂಡು. ಅದೇ ಹೆಚ್ಚು ಚೆನ್ನ.
(ದ್ರೊಮೊವ್ ಹೊರಡಲನುವಾಗುತ್ತಾನೆ. ತಾಯಿ ಬಂದು ಒಂದು ಶಾಲು ಕೊಡುತ್ತಾಳೆ. ಅದನ್ನು ಒಂದು ಕ್ಷಣ ನೋಡಿ ಭಾವಪರವಶನಾಗುತ್ತಾನೆ. ಮುಂದಕ್ಕೆ ಹೆಜ್ಜೆ ಇಡಲು ಹೋಗುತ್ತಾನೆ. ತಾಯಿ ‘ಪಾಷ’ ಎಂದು ಕೂಗುತ್ತಾಳೆ. ತಕ್ಷಣವೇ ದ್ರೊಮೊವ್ ‘ಅಮ್ಮ’ ಎಂದು ಬಿಡುತ್ತಾನೆ. ಕೈಗಳಿಂದ ಮುಖ ಮುಚ್ಚಿಕೊಂಡು ಕೆಳಗೆ ಕುಸಿಯುತ್ತಾನೆ. ತಾಯಿ ಓಡಿ ಬಂದು ಭುಜ ಹಿಡಿದುಕೊಳ್ಳುತ್ತಾಳೆ)
ತಾಯಿ : (ಅಳುತ್ತಾ) ಪಾಷ, ಪಾಷ. ಯಾಕೆ ಸುಳ್ಳು ಹೇಳಿದೆ? ನಿನ್ನ ಮುಖ ನೋಡಿ ಮಗನೋ, ಅಲ್ಲವೋ ಅಂತ ಹೇಳ್ತೀವಾ?
ದ್ರೊಮೊವ್ : ಅಮ್ಮಾ ದಯವಿಟ್ಟು ಕ್ಷಮಿಸು. ನಾನು ನಿಮ್ಮನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಲಿಲ್ಲಾ. ನಿಮಗೆ ನೋವು ಕೊಡಬಾರದು ಅಂತ ಅಂದ್ಕೊಂಡು ತುಂಬಾನೆ ನೋವು ಕೊಟ್ಟೆ. ಅಪ್ಪಾ, ನಿಮ್ಮ ಹೆಮ್ಮೆಗೆ ಧಕ್ಕೆ ತರಲ್ಲ.
ಯೆಗೊರ್ : ಹೋ, ಪಾಷ. ಇದು ನೀನೇನಾ. ನನ್ನ ಬುದ್ಧಿಗೆ ಹೊಳೀದೇ ಹೋದದ್ದು, ಅವಳ ಹೃದಯಕ್ಕೆ ತಿಳೀತು. ನಾನು ನಿನಗೆ ಯಾವಾಗ್ಲೂ ಹೇಳ್ತಾ ಇದ್ದೆ. ರಷ್ಯನ್ ಆಗಿರೋದಕ್ಕೆ ಹೆಮ್ಮೆ ಪಡು ಅಂತ. ಈ ಮುಖ ಹೊತ್ತ ರಷ್ಯನ್ ಆಗಿರೋದಕ್ಕೆ ಇನ್ನೂ ಹೆಚ್ಚು ಹೆಮ್ಮೆ ಪಡು. ಅದರಲ್ಲೇ ನಿಜವಾದ ಅಂತಃಸತ್ವ ಅಡಗಿರೋದು. ಮನುಷ್ಯತ್ವ ಇರೋದು. ಅದೇ ರಷ್ಯನ್ ಗುಣ.
ತಾಯಿ : ಪಾಷ, ಕಾತ್ಯಾ...
ದ್ರೊಮೊವ್ : ಅಮ್ಮಾ, ನಾನು ಮತ್ತೆ ಯುದ್ಧಭೂಮಿಗೆ ಹೊರಡೋನು. ವಾಪಸ್ ಬರ್ತೀನಾ, ಬಂದ್ರೂ ಹೇಗಿರ್ತೀನಿ ಗೊತ್ತಿಲ್ಲ. ಅವಳಿಗೆ ಮುಂದೆ ಒಳ್ಳೆ ಭವಿಷ್ಯ ಇದೆ. ಈ ಸುಟ್ಟ ಮುಖಾನಾ ಸಾಯೋವರ್ಗು ಯಾಕೆ ನೋಡ್ಬೇಕು?
ಕಾತ್ಯಾ : (ಒಳಗಿನಿಂದ ಇಣುಕಿ ಕೇಳಿಸಿಕೊಳ್ಳುತ್ತಿದ್ದವಳು ದ್ರೊಮೊವ್‍ನ ಬಳಿ ಓಡಿ ಬಂದು) ಪಾಷಾ... ನಾವು ಪ್ರೀತಿಸಿದಾಗ ಏನ್ ಮಾತಾಡ್ಕೊಂಡ್ವಿ ನೆನಪಿದೆಯಾ? ನಮ್ಮ ಪ್ರೀತಿ ದೈಹಿಕ ಆಕರ್ಷಣೆ ಅಲ್ಲ. ಒಂದು ಆದರ್ಶಕ್ಕಾಗಿ ಅಂತ. ನಮ್ಮ ಪ್ರೀತಿ ಸೋವಿಯತ್ ಸಮಾಜಾನ ಬೆಳೆಸೋದ್ರಲ್ಲಿ ಅರಳಬೇಕು ಅಂತ ನೀನೇ ಹೇಳಿದೆ. 
ದ್ರೊಮೊವ್ : ಆದರೆ ಕಾತ್ಯಾ...
ಕಾತ್ಯಾ : ಆದರೇನೂ ಇಲ್ಲ, ಏನೂ ಇಲ್ಲ. ನೀನು ಆದರ್ಶ ಬಿಟ್ಟಿದೀಯಾ ಹೇಳು?
ದ್ರೊಮೊವ್ : ಇಲ್ಲ.
ಕಾತ್ಯಾ : ನೀನು ಆದರ್ಶ ಬಿಟ್ಟ ದಿನ ನಾನು ನಿನ್ನನ್ನ ಬಿಡ್ತೀನಿ. ಅಲ್ಲಿಯವರೆಗೂ ನಾವು ಅಗಲಬಾರದು.
(ಎಲ್ಲರೂ ಸಂತೋಷದಿಂದ ಚಪ್ಪಾಳೆ ಹೊಡೆಯುತ್ತಾರೆ)



ನಾಟಕ ರೂಪಾಂತರ : ಎಸ್.ಎನ್.ಸ್ವಾಮಿ


No comments:

Post a Comment