Sunday 11 June 2017

ಲೇಖನ - ಮಹಿಳಾ ಸಶಕ್ತೀಕರಣ: ಒಂದು ಪುನರ್‍ಚಿಂತನೆ




ಮಹಿಳಾ ಸಶಕ್ತೀಕರಣವು ಕಳೆದ 30 ವರ್ಷಗಳಿಂದ ಬೆಳೆದು ಬಂದ ಪರಿಕಲ್ಪನೆಯಾಗಿದೆ. ಅದರ ಮೂಲವನ್ನು 3 ವಿಚಾರಧಾರೆಗಳಲ್ಲಿ ಗುರುತಿಸಿಕೊಂಡು ವಿಶ್ಲೇಷಿಸಬಹುದು. 1. ಸ್ತ್ರೀವಾದಿ ಚಿಂತನೆ 2. ಅಭಿವೃದ್ಧಿ ಪ್ರಕ್ರಿಯೆ ಹಾಗೂ 3. ತಳಮಟ್ಟದ ಜನರ ಸಂಘಟನೆ. 
ಸ್ತ್ರೀವಾದಿ ಚಿಂತನೆಯು “ವೈಯಕ್ತಿಕ ರಾಜಕೀಯವಾದುದು” ಎಂಬ ಪ್ರತಿಪಾದನೆಯನ್ನು ಆಧರಿಸಿ ಮಹಿಳಾ ಸಶಕ್ತೀಕರಣವನ್ನು ನೋಡುತ್ತದೆ. ಉದಾರವಾದಿ ಸ್ತ್ರೀವಾದಿಗಳು ಶಿಕ್ಷಣ ಆರೋಗ್ಯ ಆದಾಯ ಉದ್ಯೋಗವನ್ನು ನೀಡುವುದರ ಮೂಲಕ ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಿದರೆ ಸಹಜವಾಗಿ ಸಶಕ್ತಗೊಳ್ಳುತ್ತಾರೆ ಎಂದು ನಂಬುತ್ತದೆ. ಆದರೆ ತೀವ್ರಗಾಮಿ ಸ್ತ್ರೀವಾದಿಗಳು, ಪುರುಷಪ್ರಧಾನ ಆಳ್ವಿಕೆ, ಮೌಲ್ಯಗಳನ್ನು ಪ್ರಶ್ನಿಸುವ, ಕುಟುಂಬ ವ್ಯವಸ್ಥೆಯನ್ನು ತೊಡೆದುಹಾಕುವ, ಅಸಮಾನ ಅಧಿಕಾರ ಹಾಗೂ ಜಂಡರ್ ಸಂಬಂಧಗಳನ್ನು ಬದಲಾಯಿಸುವ ಹಾಗು ಸಾಮಾಜಿಕ ರಚನೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತಂದರೆ ಮಾತ್ರ ಮಹಿಳೆಯರನ್ನು ಬಲಗೊಳಿಸಬಹುದು ಎಂದು ಪ್ರತಿಪಾದಿಸುತ್ತದೆ. 
ಮಹಿಳಾ ಸಶಕ್ತೀಕರಣದ ಕುರಿತು ಸಂಶೋಧನೆ ನಡೆಸುವ ಜೋ. ರೋಲ್ಯಾಂಡ್ ಅವರು ಮಹಿಳಾ ಸಶಕ್ತೀಕರಣವನ್ನು ‘ಶಕ್ತಿ ನೀಡುವ’ ‘ಇತರರೊಂದಿಗೆ ಹಂಚಿಕೊಳ್ಳುವ ಶಕ್ತಿ’ ಹಾಗೂ ‘ಆಂತರಿಕ ಶಕ್ತಿ’ ಎಂಬ ಶಕ್ತಿ ಪ್ರಕಾರಗಳೊಂದಿಗೆ ಅರ್ಥೈಸುತ್ತಾರೆ. ಬೇರೆಯವರ ಮೇಲೆ ಅಧಿಕಾರ ಚಲಾಯಿಸುವ ಶಕ್ತಿಯನ್ನು ಮಹಿಳಾ ಸಶಕ್ತೀಕರಣಕ್ಕೆ ಅನ್ವಯಿಸಲಾಗುವುದಿಲ್ಲ ಎನ್ನುತ್ತಾರೆ. ಏಕೆಂದರೆ ಇದೂವರೆಗೆ ಪುರುಷರು ಹೊಂದಿರುವ ಈ ಪ್ರಕಾರದ ಶಕ್ತಿಯನ್ನು ಮಹಿಳೆಯರಿಗೆ ಅನ್ವಯಿಸಿಕೊಂಡರೆ ಪುರುಷರ ಮೇಲೆ ಅಧಿಕಾರ ಹೊಂದುವುದು ಎಂಬರ್ಥದಲ್ಲಿ ಮಹಿಳಾ ಸಶಕ್ತೀಕರಣವನ್ನು ವ್ಯಾಖ್ಯಾನಿಸಿದಂತಾಗುತ್ತದೆ, ಅದೇ ಅದರ ಗುರಿಯಾಗಿಬಿಡುತ್ತದೆ. 
ಆದರೆ ವಾಸ್ತವದಲ್ಲಿ ಮಹಿಳಾ ಸಶಕ್ತೀಕರಣವೆಂದರೆ ಇದುವರೆಗೆ ಕಳೆದುಕೊಂಡ ಅವಕಾಶಗಳನ್ನು, ಸಮಾನತೆಯನ್ನು ಪಡೆಯುವುದು. ಜಂಡರ್ ತಾರತಮ್ಯಗಳಿಂದ ಮುಕ್ತಿಹೊಂದಿ ಸ್ವತಂತ್ರ್ಯ, ಸ್ವಾವಲಂಬಿ ವ್ಯಕ್ತಿಯಾಗಿ ಮಹಿಳೆಯರನ್ನು ರೂಪಿಸುವುದು ಮಹಿಳಾ ಸಶಕ್ತೀಕರಣದ ಅರ್ಥ ಹಾಗೂ ಗುರಿ.
ಮಾರ್ಕ್ಸ್ ವಾದಿ ಸ್ತ್ರೀವಾದದಲ್ಲಿ, ಮಹಿಳೆಯರು ಸಾಮಾಜಿಕ ಉತ್ಪಾದನೆಯಲ್ಲಿ ತೊಡಗಬೇಕು, ಖಾಸಗಿ ಆಸ್ತಿ ಪರಿಕಲ್ಪನೆ ತೊಲಗಿಸಬೇಕು ಹಾಗೂ ಮಹಿಳೆಯರು ಮಾಡುವ ಗೃಹಕೃತ್ಯಗಳಿಗೆ ಆರ್ಥಿಕ ಮನ್ನಣೆ ದೊರಕುವಂತಾಗಬೇಕೆಂಬ ಪ್ರತಿಪಾದನೆಗಳಲ್ಲಿ ಮಹಿಳಾ ಸಶಕ್ತೀಕರಣದ ಸುಳಿವನ್ನು ಗುರುತಿಸಬಹುದು.
ಮಹಿಳೆಯರು ಮನೆಯಿಂದ ಹೊರೆಗೆ ದುಡಿಯಲು ಆರಂಭಿಸಿದ್ದಾರೆ ಕುಟುಂಬದ ಆರ್ಥಿಕ ಪರಿಸ್ಥಿತಿ  ಸುಧಾರಿಸಿದರೂ ಮಹಿಳೆಯರು ಸಂಪೂರ್ಣವಾಗಿ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಗಳಿಸಿದ ಆದಾಯದ ಮೇಲೆ ನಿಯಂತ್ರಣ ಹೊಂದುವುದು ಅಷ್ಟೇ ಮುಖ್ಯ. 
ಇತ್ತೀಚಿನ ದಿನಗಳಲ್ಲಿ ಜಾಗತೀಕರಣದ ಪ್ರಭಾವದಿಂದ ಖಾಸಗೀ ಆಸ್ತಿ ಪರಿಕಲ್ಪನೆ  ವಿಸ್ತಾರಗೊಳ್ಳುತ್ತಿರುವ ಹೊತ್ತಿನಲ್ಲಿ ಆದಾಯ, ಸಂಪತ್ತುಗಳ ಲಬ್ಯತೆ ಮತ್ತು ಅವುಗಳ ಮೇಲೆ ಒಡೆತನ ಪಡೆಯುವುದುಹರಸಾಹಸವೆ ಸರಿ. ಆರ್ಥಿಕತೆಯ ವಲಯದಲ್ಲಿ ವಸ್ತುವಿನ ಮಾರುಕಟ್ಟೆಯಲ್ಲಿ ಸ್ತ್ರೀದೇಹ ವಾಣಿಜ್ಯೀಕರಣಗೊಂಡು ಲೈಂಗಿಕ ವಸ್ತುವಾಗುತಿದ್ದರೆ ಶ್ರ್ರಮದ ಮೂರು ಕಟ್ಟೆಯಲ್ಲಿ ಮಹಿಳೆಯರ ಶ್ರಮ ಅಗ್ಗವಾಗಿ ಶೋಷಣೆಗೆ ಒಳಗಾಗುತ್ತದೆ. ಕಾರ್ಪೋರೇಟ್ ವಲಯದಲ್ಲಿ ಶಿಕ್ಷಣ ತರಬೇತಿ ಹೊಂದಿದ ನಗರದ ಹೆಣ್ಣುಮಕ್ಕಳು  ಉುದ್ಯೋಗ ಅವಕಾಶಗಳು ಹೆಚ್ಚುತ್ತಿರುವಂತೆ ಬಿಂಬಿಸುತ್ತಾರೆ. ಅಲ್ಲಿಯೂ ಗಂಡುಮಕ್ಕಳಿಗೆ ಹೋಲಿಸಿದರೆ ಅವರ ಪ್ರಮಾಣ ಕಡಿಮೆಯಿದೆ.  ಜೊತೆಗೆ ಅಲ್ಲಿ ಅವರ ಕೆಲಸದ ಸ್ಥಿತಿ ವಾತಾವರಣ, ಬಡ್ತಿ, ವೇತನ, ಸೇವಾ ಸೌಲಭ್ಯ, ಕೆಲಸದ  ಅವಧಿ ಹಾಗೂ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಆಳವಾಗಿ ಪರಿಶೀಲಿಸಿ ಇವೆಲ್ಲವೂ ಅವರನ್ನು ಅಶಕ್ತಗೊಳಿಸಿವೆಯೊ ಎಂಬ ಪಶ್ನೆಗೆ ಉತ್ತರ ಹುಡುಕಬೇಕಾಗಿದೆ.
ಜಾಗತೀಕರಣದ ಪ್ರಭಾವದೊಳಗೆ 25 ವರ್ಷ ಕಳೆದಿರುವ ನಮ್ಮ ಆರ್ಥಿಕ ಪರಿಸ್ಥಿತಿ, ಅಭಿವೃದ್ಧಿ ಪ್ರಕ್ರಿಯೆ ಹಾಗೂ ಸಾಮಾಜಿಕ ಬದಲಾವಣೆಯ ಹಿನ್ನಲೆಯಲ್ಲಿ ಮಹಿಳಾ ಸಶಕ್ತೀಕರಣವನ್ನು ಪುನರ್ ಚಿಂತನೆಗೆ ಒಳಪಡಿಸುವ ಅವಶ್ಯಕತೆಯಿದೆ. ಮಹಿಳಾ ಸಶಕ್ತೀಕರಣದ ಪರಿಕ್ರಮಗಳಲ್ಲಿ ಶಿಕ್ಷಣಕ್ಕೆ ಮೊದಲ ಆಧ್ಯತೆ. ಶಿಕ್ಷಣವು ವ್ಯಕ್ತಿಗೆ ಜ್ಞಾನ ಅರಿವು ಕೌಶಲ್ಯಗಳನ್ನು ನೀಡಿ ವ್ಯಕ್ತಿತ್ವವನ್ನು ರೂಪಿಸುವ ಉದ್ದೇಶ ಹೊಂದಿದೆ.  ಶಿಕ್ಷಣ ಪಡೆದ  ಹೆಣ್ಣುಮಕ್ಕಳಲ್ಲಿ ಆರ್ಥಿಕ ಸ್ವಾತಂತ್ರ್ಯ ಆಯ್ಕೆ ಹಕ್ಕು ಹಾಗೂ ಪ್ರಶ್ನಿಸುವ ಗುಣ ಸಹಜವಾಗಿ ಮೂಡುತ್ತದೆ. ಇಂತಹ ಹೆಣ್ಣುಮಕ್ಕಳನ್ನು ಸ್ತ್ರೀಯರು ಸೇರಿದಂತೆ ಇಡೀ ಸಮಾಜವು ಒಪ್ಪಿಕೊಳ್ಳಬೇಕು. 
ಸಶಕ್ತೀಕರಣದ ಗುಣಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಲು  ಹೊರಟರೆ ಅನೇಕ ಅಡ್ಡಿಗಳು ಎದುರಾಗುತ್ತವೆ. ಬದಲಾದ, ಸಶಕ್ತಗೊಂಡ ಹೆಣ್ಣುಮಕ್ಕಳನ್ನು ಅಂಗೀಕರಿಸುವ ವಾತಾವರಣ ಸೃಷ್ಟಿಯಾಗಬೇಕು ಇಲ್ಲದಿದ್ದರೆ ಶಿಕ್ಷಣವೆ ಸಶಕ್ತೀಕರಣಕ್ಕೆ ವ್ಯತರಿಕ್ತ ಅಂಶವಾಗುತ್ತದೆ. ಉದಾ: ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ ಪಡೆದ ಹೆಣ್ಣುಮಕ್ಕಳು ವಿವಾಹದಲ್ಲಿ ಆಯ್ಕೆ ಹಕ್ಕನ್ನು ಚಲಾಯಿಸಲು ಹೊರಟರೆ ಇತ್ತೀಚಿಗೆ ಕಂಡು ಬರುತ್ತಿರುವ ಮರ್ಯಾದ ಹತ್ಯೆಗಳು ನಡೆಯುತ್ತವೆ, ಚಿಕ್ಕ ವಯಸ್ಸಿಗೆ ಮದುವೆ ಮಾಡುವ ಪದ್ಧತಿ ಜಾರಿಗೆ ಬರಬಹುದು. ದುಡಿಯುವ ಮಹಿಳೆ ತಮ್ಮ ಆದಾಯವನ್ನು ತಾವೆ ಖರ್ಚು ಮಾಡಿದರೆ ಅವಳ ಉದ್ಯೋಗ ಅವಕಾಶವನ್ನು ನಿರಾಕರಿಸುವ ಪರಿಸ್ಥಿತಿ ಮತ್ತೆ ಬರಬಹುದು. ಸ್ವಾವಲಂಬನೆ. ಸ್ವತಂತ್ರ್ಯ ವ್ಯಕ್ತಿತ್ವ, ಸ್ವಂತ ನಿರ್ಧಾರ ಕೈಗೊಳ್ಳುವ, ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹೆಣ್ಣುಮಕ್ಕಳನ್ನು ಮದುವೆಯಾಗಲು ಹುಡುಗರು ನಿರಾಕರಿಸಬಹುದು. ಇದರ ಅರ್ಥ ಮಹಿಳಾ ಸಬಲೀಕರಣವನ್ನು ಬೇಡವೆಂದು ಅಲ್ಲ. ಸಶಕ್ತಗೊಂಡ ಮಹಿಳೆಯರನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಬೇಕು.
ದೊಡ್ಡ ನಗರಗಳಲ್ಲಿ ವಿಚ್ಛೇದನೆ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಕೂಗೂ ಕೇಳಿಬರುತ್ತದೆ. ಇದಕ್ಕೆ ಕಾರಣಗಳನ್ನು, ಸಾಂಪ್ರದಾಯಿಕ ಮನೋಭಾವದವರು, ಹುಡುಗಿಯರಲ್ಲಿ ಉಂಟಾದ ಬದಲಾವಣೆಯಲ್ಲಿ ಹುಡುಕುತ್ತಾ ಅವರನ್ನೇ ದೂಷಿಸುತ್ತಿರುವುದು ಕಂಡುಬರುತ್ತಿದೆ. ಅಂದರೆ ನಾವು  ಸಶಕ್ತೀಕರಣದ ಸೂಚಿಗಳು ಎಂದು ಏನನ್ನು ಗುರುಸುತ್ತೇವೋ ಅವುಗಳು ನವ ಪೀಳಿಗೆಯ ಹೆಣ್ಣುಮಕ್ಕಳಲ್ಲಿ ಕಂಡುಬಂದರೆ ವಿಚ್ಛೇದನಕ್ಕೆ ಅದೇ ಕಾರಣ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಅದೇ ಕಾರಣ ಆಗಿದ್ದರೂ ಅದನ್ನು ವಿಶ್ಲೇಷಿಸುವ ದೃಷ್ಟಿಕೋನ ಮೂಡಿಬರಬೇಕು. ಉದಾ: ಹೊರಗೆ ದುಡಿಯುವ ಹೆಣ್ಣುಮಕ್ಕಳಾಗಲಿ ಮನೆಯಲ್ಲಿರುವ ಹೆಣ್ಣುಮಕ್ಕಳಾಗಲಿ ಗೃಹಕೆಲಸದಲ್ಲಿ ಹಂಚಿಕೆಯನ್ನು  ಮುಕ್ತ ಚಲನೆ ಬಯಸುತ್ತಾರೆ, ಕುಟುಂಬದಲ್ಲಿ ನಿರ್ಧಾರ ಕೈಗೊಳ್ಳುವುದರಲ್ಲಿ ಭಾಗವಹಿಸಲು ಇಚ್ಛಿಸುತ್ತಾರೆ. ಆಸ್ತಿ, ಸಂಪತ್ತು ತಮ್ಮ ಹೆಸರಿನಲ್ಲಿ ಯಾಕೆ ನೊಂದಣಿ ಮಾಡಿಸಬಾರದು ಎಂದು ಪ್ರಶ್ನಿಸುತ್ತಾರೆ.  ಇವು ಕುಟುಂಬದಲ್ಲಿ ಕಲಹ ಉಂಟುಮಾಡುತ್ತವೆ. ಘರ್ಷಣೆ ವಿಪರೀತವಾದರೆ ವಿಚ್ಛೇಶನದಲ್ಲಿ ಕೊನೆಗೊಳ್ಳಬಹುದು. ಅಂದರೆ ಶಿಕ್ಷಣ, ಸಾಮಾಜೀಕರಣ, ಜ್ಞಾನ ಹಾಗೂ ಅರಿವಿನ ಮೂಲಕ ಹೆಣ್ಣುಮಕ್ಕಳನ್ನು ಸ್ವಾವಲಂಬಿ, ಸ್ವತಂತ್ರ್ಯ ವ್ಯಕ್ತಿಯಾಗಿ ರೂಪಿಸಿದರಷ್ಟೆ ಸಾಲದು ಅವರನ್ನು ಒಪ್ಪಿಕೊಳ್ಳುವ ಮನಸ್ಸು, ಕೌಟುಂಬಿಕ ರಚನೆಯಲ್ಲಿನ ಬದಲಾವಣೆಗಳು ಅಷ್ಟೆ ಮುಖ್ಯ. 
ನನ್ನ ಸಂಬಂಧಿಕರಲ್ಲಿ ವೃತ್ತಿಶಿಕ್ಷಣ ಪಡೆದು ಒಳ್ಳೆ ಕೆಲಸದಲ್ಲಿರುವ ಹೆಣ್ಣುಮಕ್ಕಳಿದ್ದಾರೆ. ಅವರನ್ನು ಕಾಡುತ್ತಿರುವ ಮೂಲ ಪ್ರಶ್ನೆ ಮನೆ ಕೆಲಸ ನಾವೊಬ್ಬರೆ ಮಾಡಬೇಕಾ? ಆಸ್ತಿಯನ್ನು ಖರೀದಿಸಿದರೆ, ವಸ್ತುಗಳನ್ನು ಕೊಂಡರೆ ನಮ್ಮ ಹೆಸರಿನಲ್ಲಿ ಯಾಕೆ ಇಡಬಾರದು? ಈ ಬದಲಾವಣೆ ಬೇಕೆಂದು ಕೇಳಿದರೆ ಮನೆಯಲ್ಲಿ ಜಗಳವಾಗುತ್ತದೆ ಇಲ್ಲ ಹಿಂದಿನಿಂದ ಏನು ನಡೆದುಕೊಂಡು ಬಂದಿದೆಯೊ ಅದನ್ನು ಒಪ್ಪಿಕೊಳ್ಳಬೇಕು. ಆಗ ಸಶಕ್ತೀಕರಣಗೊಂಡದ್ದರಿಂದ ಪ್ರಯೋಜನವೇನು? 
ಸಾಂಪ್ರದಾಯಿಕ ಸಾಮಾಜಿಕರಣದಲ್ಲಿ ಬೆಳೆದು ಬಂದ ಗಂಡುಮಕ್ಕಳಲ್ಲಿ ಇನ್ನೂ ಗೃಹಕೃತ್ಯಗಳು ಮಹಿಳೆಯರಿಗೆ ಸಂಬಂಧಿಸಿದ್ದು ತಾವು ಅದರಲ್ಲಿ ಭಾಗಿಯಾಗುವುದು ಕೀಳು ಅಥವಾ ಭಾಗಿಯಾಗಬೇಕೆಂಬ ಅರಿವಿಲ್ಲದಿರುವುದು ಅಥವಾ ಒಮ್ಮೆ ಮಾಡಿಬಿಟ್ಟರೆ ಮುಂದೆಯೂ ನಾವೆ ಮಾಡಬೇಕಾಗುತ್ತದೆ ಅಥವಾ ತಂದೆ ತಾಯಿ ಮತ್ತು ಮನೆಯವರು ಅಕ್ಕಪಕ್ಕದವರು ಹೆಂಡತಿಯು ಗುಲಾಮ ಎನ್ನುತ್ತಾರೆ ಎಂಬ ಭಯದಿಂದ ಗೃಹಕೃತ್ಯಗಳಲ್ಲಿ ಭಾಗಿಯಾಗುತ್ತಿಲ್ಲ. ಕೆಲವು ಕುಟುಂಬಗಳಲ್ಲಿ ಪುರುಷರು ಭಾಗಿಯಾಗುತ್ತಿರಬಹುದು. ಆಗಿದ್ದರೆ ಖಂಡಿತ ಸಂತೋಷ. ಆದರೆ ಅದರ ಪ್ರಮಾಣ ಎಷ್ಟು, ಯಾವ ರೀತಿಯ ಕೆಲಸಗಳಲ್ಲಿ ಭಾಗಿಯಾಗಿರುತ್ತಾರೆ ಅನ್ನುವುದು ಮುಖ್ಯ. ಹೆಣ್ಣು ಮಕ್ಕಳು ಕೇಳುವುದನ್ನು, ಪ್ರಶ್ನಿಸುವುದನ್ನು ಕುಟುಂಬದ ಸದಸ್ಯರು ಇಷ್ಟಪಡುವುದಿಲ್ಲ್ಟ. ಆಸ್ತಿಯಲ್ಲಿ ಸಮಪಾಲು ಕೇಳುವ ಹೆಣ್ಣುಮಕ್ಕಳನ್ನು ಸ್ವಾರ್ಥಿಗಳು, ತಂದೆ ತಾಯಿ ಅಣ್ಣತಮ್ಮಂದಿರ ಬಗ್ಗೆ ಪ್ರೀತಿ ಕಾಳಜಿ ಇಲ್ಲದವರು ಎಂದು ಟೀಕಿಸಲಾಗುತ್ತದೆ. 
ಶಿಕ್ಷಣ ಪಡೆದು, ವೈಚಾರಿಕತೆ ಬೆಳೆಸಿಕೊಂಡು ವೃತ್ತಿ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳು ನಮ್ಮ ಸಾಂಪ್ರದಾಯಿಕ, ಪದ್ಧತಿ ಮೂಡನಂಬಿಕೆಗಳನ್ನು ಪ್ರಶ್ನಿಸಬಹುದು. ಮನೆಯಲ್ಲಿ ಆಚರಣೆ ಪೂಜೆಗಳಲ್ಲಿ ಭಾಗವಹಿಸಲು ಇಚ್ಛಿಸದೆ ಅವುಗಳನ್ನು ಮಾಡಲ್ಲ ಅನ್ನಬಹುದು. ಆಗ ಮನೆಯವರಿಂದ ಒತ್ತಡ ಬರುತ್ತದೆ, ನೀನು ಕಲಿತಾಕ್ಷಣ ಎಲ್ಲವನ್ನೂ ಪ್ರಶ್ನಿಸುವ, ನಿರಾಕರಿಸುವ ಹಾಗಿಲ್ಲ. ಹಿಂದಿನಿಂದ ಏನು ನಡೆದುಕೊಂಡು ಬಂದಿದೆಯೋ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ. ವಿಶೇಷವಾಗಿ ಗಂಡನ ಮನೆಯವರು ತಮ್ಮ ಮನೆಯ ಆಚರಣೆ ರೀತಿರಿವಾಜುಗಳನ್ನು ಹೇರುತ್ತಾರೆ. ವೃತ್ತಿಯಲ್ಲಿ ತೊಡಗಿರುವ ಹೆಣ್ಣುಮಕ್ಕಳಿಗೆ  ಗೊಂದಲ ಉಂಟಾಗುತ್ತದೆ. ಉದಾ: ಗಂಡನ ಮನೆಯವರು  ಸಂಪ್ರದಾಯವರಾಗಿದ್ದರೆ ಕುಟುಂಬದ ಪದ್ಧತಿಯಂತೆ  ಹಬ್ಬ, ಪೂಜೆಗಳನ್ನು ಸೊಸೆ ಮಾಡಬೇಕೆಂದು  ನಿರೀಕ್ಷಿಸುತ್ತಾರೆ.  ನಂಬಿಕೆಯಿಲ್ಲವೆಂದು ಅಥವಾ ಸಮಯವಿಲ್ಲದೇ ಆಗಲ್ಲ ಎಂದರೆ ದೊಡ್ಡ ಗಲಾಟೆಯಾಗುತ್ತದೆ.
ಹೀಗೆ ಸಶಕ್ತೀಕರಣ ಪರಿವರ್ತನೆಯ ಹಂತದಲ್ಲಿರುವ ಹೆಣ್ಣುಮಕ್ಕಳು ಅಂತ್ಯಂತ ಗೊಂದಲ, ದ್ವಿಗುಣ ಹೊರೆ, ಒತ್ತಡಗಳಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಅದರಿಂದ ಹೊರಬರಬೇಕೆಂದರೆ ಒಂದು ವೃತ್ತಿಯನ್ನು ಬಿಟ್ಟು ಅಥವಾ ಕಡೆಗಣೆಸಿ ಕುಟುಂಬದ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಇಲ್ಲಿ ಕುಟುಂಬದ ನಿರೀಕ್ಷೆಗಳನ್ನು ನಿರ್ಲಕ್ಷಿಸಿ ವೃತ್ತಿ ಬೆಳವಣಿಣಿಗೆಗೆ ಕಡೆ ಹೆಚ್ಚು ಗಮನ ಬಿಡಬೇಕು. ಇಲ್ಲ ಇವೆರಡನ್ನು ಸಮದೂಗಿಸಿಕೊಂಡು ಹೋಗುತ್ತೇನೆ ಎಂದು ‘ಸೂಪರ್ ವಿಮೆನ್’ ಆಗಬೇಕು. ಕುಟುಂಬ ಹಾಗೂ ಕೆಲಸದ ಸ್ಥಳಗಳಲ್ಲಿ ಬೆಂಬಲಪೂರಕ ವಾತಾವರಣವಿದ್ದರೆ ಖಂಡಿತ ಹೆಣ್ಣು ಮಕ್ಕಳು ‘ಸೂಪರ್ ವುಮೆನ್’ ಆಗುತ್ತಾರೆ. ಆದರೆ ಎಲ್ಲರಿಗೂ ಪೂರಕ ವಾತಾವರಣ ದೊರಕುವುದಿಲ್ಲ. 
 ನಮ್ಮ ಮುಂದಿರುವ ಪ್ರಶ್ನೆ ಮಹಿಳಾ ಸಶಕ್ತೀಕರಣ ಪ್ರಕ್ರಿಯೆಯನ್ನುಮುಂದುವರೆಸಿಕೊಂಡು ಹೋಗುವುದಾದರೆ ಅದರ ಪರಿಣಾಮಗಳನ್ನು ಹೇಗೆ ಎದುರಿಸಬೇಕು? ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ವೃತ್ತಿಪರರಾಗಿ ಸ್ವತಂತ್ರ್ಯ ವ್ಯಕ್ತಗಳನ್ನಾಗಿ ರೂಪಿಸಬೇಕು ಅದರಲ್ಲಿ ಎರಡು ಮಾತಿಲ್ಲ ಆದರೆ ಸಶಕ್ತಗೊಂಡ ಮಹಿಳೆ ಮುನ್ನಡೆಯಬೇಕು, ಅವಳ ಸಾಮರ್ಥ್ಯವನ್ನು ಉಳಿಸಿಕೊಳ್ಳುವಂತಾಗಿ ಅದು ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗೆ ಸಹಾಯಕವಾಗಬೇಕು. ಇದರಲ್ಲಿ ಪುರುಷರ ಕುಟುಂಬದ ಸದಸ್ಯರ ಹಾಗೂ ಜನರ ಬೆಂಬಲ, ಸ್ತ್ರೀಪರ ದೃಷ್ಟಿಕೋನ, ಸಮಾನತೆಯ ಮನೋಭಾವ ತುಂಬ ಮುಖ್ಯ ಮಹಿಳಾ ಸಶಕ್ತೀಕರಣದಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಸಾಮಾಜೀಕರಣ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣು ಗಂಡು ಮಕ್ಕಳನ್ನು ಬೆಳೆಸುವಲ್ಲಿ ತುಂಬ ತಾರತಮ್ಯವಿದೆ. ಈ ತಾರತಮ್ಯ ಮುಂದೆ ಹೆಣ್ಣು ಮಕ್ಕಳ ಸಶಕ್ತೀಕರಣಕ್ಕೆ ಅಡಿಯನ್ನುಂಟುಮಾಡುತ್ತವೆ. ಹೆಣ್ಣುಮಕ್ಕಳಲ್ಲಿ ತಾಳ್ಮೆ ಸಹನೆ ತ್ಯಾಗ, ಮನೆಗೆಲಸ ಕಲಿಸುವಂತೆ, ಪ್ರೀತಿ ಮಮತೆ ಗುಣಗಳನ್ನು ಬೆಳೆಸುವಂತೆ ಗಂಡುಮಕ್ಕಳಲ್ಲೂ ಬೆಳೆಸಬೇಕು. ಮನೆಗೆಲಸವನ್ನು ಹಂಚಿಕೊಳ್ಳುವ, ಆಸ್ತಿಯನ್ನು ಅಕ್ಕತಂಗಿಯರೊಂದಿಗೆ ಹಂಚಿಕೊಳ್ಳುವ, ಹೆಣ್ಣುಮಕ್ಕಳನ್ನು ಸಮಾನವಾಗಿ ನೋಡುವ, ಅವರ ಹಕ್ಕು ಪಾತ್ರಗಳನ್ನು ಗೌರವಿಸುವ, ಅವಳು ಕೀಳು, ತಾನು ಹೇಳಿದ ಹಾಗೆ ಅವಳು ಕೇಳಬೇಕು, ಅವಳು ಅಬಲೆ, ದುರ್ಬಲಳು, ತನ್ನ ಆಶ್ರಯದಲ್ಲೆ ಇರಬೇಕು. ತಾನು ಮೋಸಮಾಡಿದರೂ, ಕರ್ತವ್ಯ ನಿಭಾಯಿಸದಿದ್ದರೂ ತನ್ನನ್ನು ಪ್ರಶ್ನಿಸಬಾರದು ಗಂಡಿಗೊಂದು ನೀತಿ ಹೆಣ್ಣಿಗೊಂದು ನೀತಿ ಎಂಬ ಧೋರಣೆಗಳನ್ನು ಬೆಳೆಸಬಾರದು.
ಅದೇ ರೀತಿ ಹೆಣ್ಣುಮಕ್ಕಳಲ್ಲಿ ಹಕ್ಕು, ಸಮಾನತೆ, ಸ್ವಾತಂತ್ರ್ಯವನ್ನು ಬೆಳೆಸುವುದೆಂದರೆ ಖಂಡಿತ  ಸ್ವೇಚ್ಛಾಚಾರವಲ್ಲ, ವೈಯಕ್ತಿಕ ಬೆಳವಣಿಗೆಯೇ ಮುಖವೆಂದು, ದುರಭಿಮಾನ, ಸ್ವಕೇಂದ್ರಿತ ನಿಲುವು, ದಾಷ್ರ್ಯತನಗಳನ್ನು ಬೆಳೆಸುವುದಲ್ಲ. ಅವರ ಸಶಕ್ತೀಕರಣವೆಂದರೆ ಸಮಾನತೆಯ ಹಕ್ಕು ಪಡೆಯುವುದಾದರೂ ಪುರುಷರ ಮೇಲೆ ಅಧಿಕಾರ ಹೊಂದುವುದಿಲ್ಲ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವರು, ಸ್ವಾತಂತ್ರ್ಯ, ಹಕ್ಕುಗಳನ್ನು ಬಲಿಕೊಡದಿರುವುದು, ಹಿಂಸೆ, ಅನ್ಯಾಯ ವಂಚನೆಗಳನ್ನು ಒಪ್ಪಿಕೊಳ್ಳದೇ ಪ್ರತಿಭಟಿಸುವುದು, ಪ್ರಶ್ನಿಸುವುದು ಮಹಿಳಾ ಸಶಕ್ತೀಕರಣ. ಇತ್ತೀಚಿನ ಬಂಡವಾಳಶಾಹಿ ನಿಲುವಿನ ಮಹಿಳಾ ಸಶಕ್ತೀಕರಣವನ್ನು ವಿಶೇಷವಾಗಿ ಗಮನಿಸಬೇಕು. ಸ್ವಕೇಂದ್ರಿತ, ಮೇಲ್‍ಸ್ವರದಲ್ಲಿ ಆತ್ಮವಿಶ್ವಾಸವನ್ನು ಬಿಂಬಿಸುವ, ಮಹಿಳಾ ಸಶಕ್ತೀಕರಣ ಪರಿಕಲ್ಪನೆಯು ಸಮಾಜವಾದಿ ಮತ್ತು ಪ್ರಜಾಪ್ರಭುತ್ವ ತತ್ವ ಆದಾರಿತ ಪರಿಕಲ್ಪನೆಗಿಂತ ಭಿನ್ನವಾಗಿದೆ. 
ಬಹುರಾಷ್ಟ್ರೀಯ ಕಂಪನಿಗಳು ತಮ್ಮ  ವಸ್ತುಗಳ ಮಾರಾಟಕ್ಕೆ ಮಹಿಳಾ ಸಶಕ್ತೀಕರಣವನ್ನು ಸಾಧನವಾಗಿ ಬಳಸಿಕೊಳ್ಳುತ್ತವೆ. ಇಲ್ಲಿ ಹೆಣ್ಣಿನ ಸೌಂದರ್ಯ ಅದನ್ನು ಹೆಚ್ಚಿಸಿಕೊಳ್ಳಲು ಸೌಂದರ್ಯವರ್ಧಕಗಳ ಬಳಕೆ, ಹಾಗೂ ಇತರ ಗೃಹ ಉಪಯೋಗಿ  ವಸ್ತುಗಳ ಜಾಹಿರಾತಿನಲ್ಲಿ ಮಹಿಳಾ ಸಶಕ್ತೀಕರಣವನ್ನು ಬಿಂಬಿಸಲಾಗುತ್ತದೆ. ಹೆಣ್ಣುಮಕ್ಕಳಲ್ಲಿ ಕೌಶಲ್ಯ, ಜ್ಞಾನ, ಮಾಹಿತಿ ಮತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಬೆಳೆಸುವುದರ ಮೂಲಕ ಸಶಕ್ತಿಗೊಳಿಸುವದಕ್ಕಿಂತ ಸೌಂದರ್ಯವನ್ನು ಹೆಚ್ಚಿಸಿಕೊಂಡು, ವಸ್ತುಗಳ ಖರೀದಿಯಲ್ಲಿ ಜಾಣತನವನ್ನು ತೋರಿಸಿಕೊಂಡು, ಪುರುಷನಿಗೆ ಅಧೀನನಾಗಿದ್ದುಕೊಂಡೇ ಸಶಕ್ತಗೊಂಡಂತೆ ತೋರಿಸಲಾಗುತ್ತದೆ. ಇಲ್ಲವೇ ಸ್ವಕೇಂದ್ರೀಕೃತ, ಅತಿಯಾದ ವ್ಯಕ್ತಿಗತ ಸ್ವಾತಂತ್ರ್ಯ ಹಾಗೂ ಸಾಂಪ್ರದಾಯಿಕ ಸಿದ್ಧ ಮಾದರಿಗಳನ್ನು ಪ್ರಚುರ ಪಡಿಸುವ ನಿಟ್ಟಿನಲ್ಲಿ ಮಹಿಳಾ ಸಶಕ್ತೀಕರಣವನ್ನು ಬಿಂಬಿಸಲಾಗುತ್ತದೆ.
ಆಂತರಿಕ ಶಕ್ತಿಯನ್ನು ರೂಪಿಸಿಕೊಂಡು ಜ್ಞಾನ ಕೌಶಲ್ಯ ಸಾಮೃಥ್ರ್ಯಗಳ ಮೂಲಕ ಆತ್ಮ ವಿಶ್ವಾಸ ಪಡೆದು ತಾನೂ ಸಶಕ್ತಗೊಂಡು ಇತರ ಮಹಿಳೆಯರನ್ನು ಸಶಕ್ತಗೊಳಿಸುತ್ತಾ ಮುಂದುವರೆಯುವುದೇ ನಿಜವಾದ ಮಹಿಳಾ ಸಶಕ್ತೀಕರಣ. ಬೌದ್ಧಿಕ ಚಿಂತನೆ, ನಿಲುವುಗಳು ಮಹಿಳಾ ಸಶಕ್ತೀಕರಣಕ್ಕೆ ಪೂರಕವಾಗುತ್ತವೆ. ಪ್ರತಿಯೊಂದು ಜೀವಿಯನ್ನು ಪ್ರೀತಿಯಿಂದ ಕಾಣುವುದು, ಎಲ್ಲ ಜನರನ್ನು ಸಮಾನವಾಗಿ ನೋಡುವುದು, ನಿಸ್ವಾರ್ಥ, ತ್ಯಾಗ, ಸಹನಾಶೀಲತೆ, ತಾಳ್ಮೆಗುಣಗಳು ಸಶಕ್ತೀಕರಣದ ಗುಣಾತ್ಮಕ ಅಂಶಗಳಾಗಿವೆ. ಇವುಗಳನ್ನು ಮಹಿಳೆಯರಿಗಷ್ಟೆ ಅಲ್ಲ ಪುರುಷರಲ್ಲೂ ಬೆಳೆಸಿದರೆ ಮಹಿಳಾ ಸಶಕ್ತೀಕರಣವನ್ನು ಸಾಧಿಸಬಹುದು. 
- ಡಾ. ಹೇಮಲತ.ಎಚ್.ಎಮ್
ಮೈಸೂರು

1 comment:

  1. ಚೆನ್ನಾಗಿದೆ, ಜೊತೆಗೆ economy base,adara mele olidaddella iruttade,marxvadada prakara politics estu necessary endiddare chennagitteno annisitu

    ReplyDelete