Tuesday 18 July 2017

ಆರೋಗ್ಯ - ಹಣ್ಣೆಲೆಗಳು - 5

ಅಧ್ಯಾಯ - 5
ಋತುಬಂಧದ ಸಮಯದಲ್ಲಾಗುವ ಮಾನಸಿಕ ಬದಲಾವಣೆಗಳು

ಋತುಬಂಧದ ಸಮಯದಲ್ಲಿ ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ರಂಗಗಳು ಕೂಡ ಮುಖ್ಯವಾದ ಬದಲಾವಣೆಗಳಿಂದ ಕೂಡಿರುತ್ತವೆ. ದೈಹಿಕ ತೊಂದರೆಗಳ ಜೊತೆಗೆ ಈ ಬದಲಾವಣೆಗಳು ಕೂಡ ನಿಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ.

ಖಿನ್ನತೆ (Depression)

ಶೇಕಡ 78 ಮಹಿಳೆಯರಲ್ಲಿ ಕಂಡುಬರುವ ತೊಂದರೆಯೆಂದರೆ ಖಿನ್ನತೆ. ಋತುಬಂಧದ ಆಸುಪಾಸಿನಲ್ಲಿ ಆಗುವ ತೊಂದರೆಗಳನ್ನು ‘ಸ್ಯಾಂಡ್‍ವಿಚ್ ಜನರೇಶನ್ ಪೆನಾಮೆನನ್’(Sandwitch Generation phenomenonಎ0ದು ಕರೆಯುತ್ತೇವೆ. ಈ ಸಮಯದಲ್ಲಿ ಮಕ್ಕಳು ಪ್ರಬುದ್ಧರಾಗಿ ಮದುವೆಗೆ ಸಿದ್ಧರಾಗಿರುತ್ತಾರೆ. ಹೆಣ್ಣು ಮಕ್ಕಳಿದ್ದರಂತೂ ಅವರಿಗೆ ಒಳ್ಳೆ ಮನೆ ಸಿಗಬೇಕು, ಒಳ್ಳೆ ಗಂಡು ಸಿಗಬೇಕು ಮತ್ತು ವರದಕ್ಷಿಣೆ ಕೊಡಬೇಕಾಗಬಹುದು ಎಂಬ ಆತಂಕ. ಗಂಡು ಮಕ್ಕಳಾದರೆ ಒಳ್ಳೆ ಕೆಲಸ ಸಿಗಬೇಕು, ಕೈ ತುಂಬಾ ಸಂಬಳ ಬರಬೇಕು ಮದುವೆಯಾದ್ರೆ, ಒಳ್ಳೆ ಸೊಸೆ ಬರಬೇಕು, ಬರುವ ಸೊಸೆ ಹೇಗಿರುವಳೋ  ಎನೋ ಎಂಬೆಲ್ಲಾ ಚಿಂತೆ. ಮಗನನ್ನು ತನ್ನಿಂದ ಸೊಸೆ ಕಿತ್ತುಕೊಂಡರೆ ಎಂಬ ಚಿಂತೆ. ವಯಸ್ಸಾದ ತಂದೆ ತಾಯಿಯಂದಿರಿದ್ದರೆ ಅವರನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ. ಅತ್ತೆ ಮಾವಂದಿರು ಮನೆಯಲ್ಲಿದ್ದರೆ ಅವರ ಸೇವೆ ಮಾಡಬೇಕಾಗುತ್ತದೆ ಇವರು ವಯಸ್ಸಾದವರಾದ್ದರಿಂದ ಅವರಿಗೆ ಕಾಯಿಲೆಗಳು ಒಂದಲ್ಲ, ಒಂದು ಇದ್ದೇ ಇರುತ್ತದೆ. ಆಗ ಅವರನ್ನು ನೋಡಿಕೊಳ್ಳುವ ಒತ್ತಡ ಹೆಚ್ಚಾಗುತ್ತದೆ.
    
ಇನ್ನೂ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ, ಹೊರಗಡೆ ಕೆಲಸದಲ್ಲೂ ಹಾಗೂ ಮನೆಯಲ್ಲೂ ಎರಡೂ ಕಡೆ  ಹೆಚ್ಚಿನ ಕೆಲಸ ಹಾಗೂ ತೀವ್ರ ಮಾನಸಿಕ  ಒತ್ತಡ ಇದ್ದೇ ಇರುತ್ತದೆ.

ಆರ್ಥಿಕ ಅಭದ್ರತೆ
ಮದುವೆಗೆ ಬಂದ ಹೆಣ್ಣು ಮಕ್ಕಳ ಮದುವೆ ಮಾಡುವುದು, ವರದಕ್ಷಿಣೆ, ಮದುವೆ ಖರ್ಚು. ಮಗ ನಿರುದ್ಯೋಗಿಯಾಗಿದ್ದರೆ ಅವನನ್ನೂ ಸಾಕಬೇಕಾದ ಅನಿವಾರ್ಯತೆ.
ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಮನೋವೈದ್ಯರ ಬಳಿಗೆ ಹೋಗಿ ಸಲಹೆ ಸೂಚನೆ ಪಡೆಯಬೇಕಾಗುತ್ತದೆ.

ಖಾಲಿಯಾದ ಗೂಡು (Empty Nest Syndrome)
ಮಕ್ಕಳು ದೊಡ್ಡವರಾಗಿ, ಮದುವೆ ಇಲ್ಲವೇ, ಕೆಲಸದ ನಿಮಿತ್ತ ಮನೆಯಿಂದ ಹೊರಗುಳಿಯುವುದು
ತಂದೆತಾಯಿಯರು, ಅತ್ತೆ ಮಾವಂದಿರು ಮರಣ ಹೊಂದಿರುವುದು
ಗಂಡನನ್ನು ಕಳೆದುಕೊಳ್ಳುವುದು
ಗಂಡ ಇದ್ದರೂ ಪ್ರೀತಿಯ ಕೊರತೆ
ಸಾಮಾಜಿಕವಾಗಿ ಒಂಟಿತನದ ಅನುಭವ

ಇತರ ಮಾನಸಿಕ ತೊಂದರೆಗಳು
ಬಹುಬೇಗ ಕಿರಿಕಿರಿಯಾಗುವುದು
ಎಲ್ಲದ್ದಕ್ಕೂ ಸಿಡುಕುವುದು
ಮನೋಸ್ಥಿತಿಯ ತೊಯ್ದಾಟ
ತನ್ನನ್ನೂ ಯಾರು ಪ್ರೀತಿಸುವುದಿಲ್ಲ ಎಂಬ ಆತಂಕ
ಸಾವಿನ ಬಗ್ಗೆ, ಮುಪ್ಪಿನ ಬಗ್ಗೆ ಭಯ
ತನ್ನ ಸೌಂದರ್ಯ ಕುಂದಿದೆ ಎಂಬ ಚಿಂತೆ
ಲೈಂಗಿಕ ನಿರಾಸಕ್ತಿ
ತಲೆನೋವು 
ಎದೆಬಡಿತ ಹೆಚ್ಚಾಗುವುದು.

ಶೇಕಡ 92 ಮಹಿಳೆಯರು ಸಣ್ಣ ಪುಟ್ಟ ವಿಷಯಕ್ಕೆ ಸಹನೆ ಕಳೆದುಕೊಂಡು ಎಲ್ಲರ ಮೇಲೆ ಕೂಗಾಡುವುದನ್ನು ಕಾಣಬಹುದು. ಶೇಕಡ 75 ಮಂದಿಯಲ್ಲಿ ತಲೆನೋವು ಬರಬಹುದು, ದೃಷ್ಟಿದೋಷದಿಂದಲ್ಲ ಎನ್ನುವುದಕ್ಕೆ ನೇತ್ರ ವೈದ್ಯರ ಬಳಿ ಪರೀಕ್ಷಿಸಿ ಕನ್ನಡಕ ಬೇಕಾದರೆ ಮಾಡಿಸಿಕೊಳ್ಳಿ.

ಶೇಕಡ 64 ಮಂದಿಯಲ್ಲಿ ಮರುಗುಳಿತನ ಕಾಣಿಸಿಕೊಳ್ಳುತ್ತದೆ. ಹೆಸರುಗಳನ್ನು ಮರೆಯುವುದು, ಮನೆಯಲ್ಲಿಟ್ಟ ವಸ್ತುಗಳನ್ನು ಎಲ್ಲಿಟ್ಟಿದ್ದೇವೆಂದು ಮರೆಯುವುದು, ಅಂಗಡಿಗೆ ಹೋದಾಗ ಬೇಕಾಗುವ ವಸ್ತು ನೆನಪಾಗದಿರುವುದು, ಈ ಸಮಯದಲ್ಲಿ ಸಾಮಾನ್ಯ ಸಮಸ್ಯೆ.

ಶೇಕಡ 50 ಮಂದಿಯಲ್ಲಿ ನಿದ್ದೆ ಇಲ್ಲದಿರುವುದು ಕೂಡ ಒಂದು ಸಾಮಾನ್ಯ ಸಮಸ್ಯೆ ರಾತ್ರಿ ಸೆಖೆಯಾಗಿ ಏಳುವುದು, ಮೂತ್ರ ವಿಸರ್ಜನೆಗೆಂದು ಎದ್ದು ನಂತರ ನಿದ್ರೆ ಬಾರದೇ ಹೋಗುವುದು. ಮರುದಿನ ಸುಸ್ತಾಗುವುದು ಕೆಲಸ ಮಾಡಲು ಆಗದೇ ಇರಬಹುದು.

ಕಾರಣವಿಲ್ಲದೆ ಆಗಾಗ ಆಳುವುದು ಕೂಡ ಒಂದು ಸಾಮಾನ್ಯ ಸಮಸ್ಯೆ. ಕಣ್ಣಿನ ತುದಿಯಲ್ಲಿ ನೀರು ಯಾವಾಗಲು ಇರುವುದು. ಸಣ್ಣ ಪುಟ್ಟ ವಿಷಯಕ್ಕೆ ಅಳುವುದು. ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು ಕೂಡ ಈ ಸಮಯದಲ್ಲಿ ಕಾಡುವ ಒಂದು ಸಮಸ್ಯೆ.

ಉದ್ವಿಗ್ನತೆ (anxiety):

 ಉದ್ವಿಗ್ನತೆ ಋತುಬಂಧದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಮಾನಸಿಕ ಸ್ಠಿತಿ. ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡಿಕೊಳ್ಳುವುದು. ರಸದೂತಗಳ ಪ್ರಮಾಣದ ಏರುಪೇರಿನಿಂದಾಗಿ ಎಲ್ಲ ವಿಷಯಗಳಲ್ಲೂ ಉದ್ವಿಗ್ನತೆಗೊಳಗಾಗುವುದು ಸಾಮಾನ್ಯವಾಗಿ ಕ0ಡುಬರುತ್ತದೆ.

  - ಡಾ ಪೂರ್ಣಿಮಾ. ಜೆ      

2 comments: