Tuesday 18 July 2017

ಕವನ - ಗೃಹಿಣಿಯ ಸ್ವಗತ



ನನಗೆ ಹೆಸರಿಲ್ಲ . . . . ಬರೀ ಪಾತ್ರಗಳು . . .
ರೆಕ್ಕೆ ಬಿಚ್ಚುವ ಮೊದಲೇ
ಮದುವೆಯ ಸಂಕೋಲೆ,
ತೌರ ನಂಟ ಕಳಚಿ, ಹೊಸ ಬಂಧಗಳಲಿ
ನನ್ನವರ ಹುಡುಕುವ ಒತ್ತು;

ಕೈಹಿಡಿದವನ ಮನವರಿವ ಮುನ್ನ
ಕೈಗೆರಡು ಕಂದಮ್ಮಗಳು
ಮನೆಯ ನಿತ್ಯ ದಿನಚರಿ ಆರಂಭ,
ಅಂತ್ಯ, ಎಲ್ಲಾ ನನ್ನಿಂದಲೆ;

ಆದರೆ . . . . ಕೊನೆಗೆ ಉಳಿಯುವುದು ಬರೀ ತಂಗಳನ್ನ,
ನನ್ನ ಪ್ರಪಂಚದಲಿ ಪ್ರಶಸ್ತಿ ಗರಿಗಳಿಲ್ಲ,
ನನ್ನವರ ಗೆಲುವು ನನ್ನದೆಂಬ ಹೆಮ್ಮೆ
ಆದರೆ . . . ನನ್ನ ಸೋಲು ಕೇವಲ ನನ್ನದೇ;

‘ನಾನು ದುಡಿಯಲೇ ಹೊರಗೆ?’ ಎಂದರೆ,
‘ನಿನಗೇಕೆ ಊರ ಉಸಾಬರಿ, ಮನೆ
ಸಂಭಾಳಿಸು, ಅಷ್ಟೇ ಸಾಕು ಹೆಣ್ಣಿಗೆ,
ಲೌಕಿಕ ವಿಚಾರದಡಿ ತುಟಿ ತೆರೆದರೆ,
ನಿನಗೆ ಪ್ರಪಂಚ ಜ್ಞಾನವಿಲ್ಲ,
ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ, ಸುಮ್ಮನಿರು;

ಅವಕಾಶ ಬೇಕು ನನಗೆ ಜಗವರಿಯಲು,
ಎರಡು ಮಾತಾಡಲು,
ಅದಿಲ್ಲದೆ ತೋರಿಸಲು ಬರೀ ಸೀರೆ ಆಭರಣಗಳು,
ಗಂಡನ ದಾಹ ತೀರಿದರೂ ನನ್ನ ಅತೃಪ್ತ
ಬಯಕೆಗಳು ನಿರಂತರ ಸುಪ್ತ,
ಮನೆಯೊಳಗಿನ ಅತ್ಯಾಚಾರಗಳ ಹೇಳಿಕೊಂಡವರ್ಯಾರು?

ನನ್ನ ಸೋಲಿಗೆ ಬೈಗುಳದ ಸುರಿಮಳೆ,
ಆದರೆ . . . ಹೊರಗಿನ ಜಂಜಾಟಕ್ಕೆ ಬೇಕು
ನನ್ನ ಸಮಾಧಾನ;
ಸಂಬಳ ರಜೆ ನನಗನ್ವಯವಿಲ್ಲ;

ಒಂದು ಧನ್ಯವಾದವೂ ಇಲ್ಲ, ಕೊನೆಗೆ
ಶತಮಾನದಿಂದಲೂ ಜಗದ ಕಿರೀಟ ತೊಟ್ಟ
ಪುರುಷನ ಹಿಂದೆ ಹೆಣ್ಣಿನ ನಿಟ್ಟುಸಿರು,
ತ್ಯಾಗಗಳಿರಬಹುದಲ್ಲವೇ?
ಲೋಕವಿಟ್ಟ ಹೆಸರು ‘ಆದರ್ಶ ಗೃಹಿಣಿ’
ನಡೆದ ದಾರಿ ತಿರುಗಿ ನೋಡಿದರೆ . . . . ಬರೀ ಸೊನ್ನೆ. .

-     ಜ್ಯೋತಿ    

1 comment: