Thursday 13 July 2017

ಪುಸ್ತಕ ವಿಮರ್ಶೆ - ಹುದುಗಲಾರದ ದು:ಖ (A Grief to Bury)

‘ಹುದುಗಲಾರದ ದು:ಖ’ ಗ್ರಂಥದ ಒಂದು ಅವಲೋಕನ
ವಸಂತ ಕಣ್ಣಾಬಿರನ್ ಅವರ ‘ಎ ಗ್ರೀಫ್ ಟು ಬರಿ’ ಗ್ರಂಥವು ಎಂ.ಎಸ್. ಆಶಾದೇವಿ ಅವರ ಅನುವಾದ ಸಂಯೋಜಕತ್ವದಲ್ಲಿ ‘ಹುದುಗಲಾರದ ದು:ಖ’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿದೆ. ಗ್ರಂಥವು ವೈವಾಹಿಕ ಚೌಕಟ್ಟಿನ ಮಹಿಳಾ ಲೋಕವನ್ನು ತೆರೆದಿಟ್ಟಿದೆ. ಅದರಲ್ಲೂ ಸಾಂಪ್ರದಾಯಿಕ ಮತ್ತು ಆಧುನಿಕತೆ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಪಲ್ಲಟ ಕಾಲಗಟ್ಟದಲ್ಲಿ ಹುಟ್ಟಿ ಬೆಳೆದು ಬಂದ 12 ವಿಶೇಷ ಮಹಿಳೆಯರ ಬದುಕನ್ನು ಅವರ ಮಾತಿನ ಮೂಲಕವೇ ಕಟ್ಟಿ ಕೊಟ್ಟಿದೆ. ಈ ಗ್ರಂಥ ಓದಿದ ನಂತರ ನನ್ನಲ್ಲಿ ಮೂಡಿದ ಕೆಲವು ಅನಿಸಿಕೆ ಹಾಗು ಅವಲೋಕಿಸಿದ ಕೆಲವು ಅಂಶಗಳನ್ನು ಹಂಚಿಕೊಳ್ಳುವುದು ಈ ಲೇಖನದ ಉದ್ದೇಶ. 
ಶೀರ್ಷಿಕೆಯ ಅನುವಾದದ ಬಗ್ಗೆ ಹೇಳುವುದಾದರೆ ‘ಎ ಗ್ರೀಫ್ ಟು ಬರಿ’ ಎಂಬುದು ‘ಹುದುಗಿಸಿಕೊಂಡ ದು:ಖ’ ಅಥವಾ ‘ಹುದುಗಿಸಬೇಕಾದ ದು:ಖ’ ಎಂದಾಗಿದಿದ್ದರೆ ಸೂಕ್ತವಾಗುತಿತ್ತು ಅನಿಸುತ್ತದೆ. ಪ್ರಕರಣಗಳನ್ನು ಓದಿದಾಗ ಎಲ್ಲಾ ಮಹಿಳೆಯರು ತಮ್ಮ ನಿಜವಾದ ಭಾವನೆ, ನೋವು, ನಲಿವು, ಅನಿಸಿಕೆ, ದು:ಖ, ಅಭಿಪ್ರಾಯಗಳನ್ನು ಹೊರಹಾಕಲಾಗದೆ ಒಳಗೆ ಮುಚ್ಚಿಟ್ಟುಕೊಂಡು ಎಲ್ಲವೂ ಓಕೆ, ಚೆನ್ನಾಗಿದೆ ಎಂದು ಬಿಂಬಿಸಿಕೊಂಡಿರುವದು ಕಂಡುಬರುತ್ತದೆ.     
ಆಯ್ದುಕೊಂಡಿರುವ ಎಲ್ಲಾ ಮಹಿಳೆಯರು ಶಿಕ್ಷಿತ, ಮೇಲು ವರ್ಗದ(ಕೆಲವರು ಮಧ್ಯಮ ವರ್ಗದವರು) ನಗರದ, ರಾಜಕೀಯವಾಗಿ ಸಾಮಾಜಿಕವಾಗಿ ಮೇಲು ಸ್ತರದ ಕುಟುಂಬಗಳಿಂದ ಬಂದವರು. ಅವರು ಏನೆಲ್ಲಾ ಸಾಧನೆ ಮಾಡಿದ್ದರೂ ಅದಕ್ಕೆ ಈ ಹಿನ್ನಲೆ ಕಾರಣವಾಗಿದೆ. ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಉದ್ಯೋಗ ಮಾಡಿದ್ದಾರೆ. ಇವರುಗಳ ವೈವಾಹಿಕ ಮತ್ತು ವೈಧವ್ಯ ಜೀವನವನ್ನು ಪರಿಶೀಲಿಸುವ ಉದ್ದೇಶವಿಟ್ಟುಕೊಂಡು ಗ್ರಂಥ ರಚಿಸಿರುವುದರಿಂದ  ಅವರ ಔದ್ಯೋಗಿಕ ಸಾಮಾಜಿಕ ಸಾಧನೆಗಳಿಗೆ ಹೆಚ್ಚು ಒತ್ತು ನೀಡಿಲ್ಲ. ಬಹುಶ: ಮಹಿಳೆಯರ ಸಮಸ್ತ ಸಾಧನೆಯನ್ನು ಬೆಳಕಿಗೆ ತರಬೇಕೆಂದರೆ ನೂರಾರು ಗ್ರಂಥಗಳು ಪ್ರಕಟವಾಗಬೇಕಾಗುತ್ತದೆ, ಆಗಬೇಕಿದೆ.
ಜೀವನದ ಅನೇಕ ಸಂಗತಿಗಳನ್ನು ಹೀಗೆ ಎಂದು ಖಚಿತವಾಗಿ  ಹೇಳಲಾಗುವುದುಲ್ಲ ಅಥವಾ ಸಾಮಾನ್ಯೀಕರಿಸಿ ಹೇಳುವುದು ಕಷ್ಟ. ಸಾಮಾನ್ಯವಾಗಿ ಮಹಿಳೆಯರ ಜೀವನದ ಬಾಲ್ಯ, ಯೌವನ, ವಿವಾಹ, ಮಕ್ಕಳು, ಅವರ ಪೋಷಣೆ, ಉದ್ಯೋಗ, ಕೌಟುಂಬಿಕ ಜೀವನ, ವೈಧವ್ಯ, ಆರೋಗ್ಯ, ಲೈಂಗಿಕತೆ, ಉಡುಪು ಇತ್ಯಾದಿ ವಿಷಯಗಳಲ್ಲಿ  ದ್ವಂದ್ವ, ಗೊಂದಲ, ಅಸ್ಪಷ್ಟತೆಯಿಂದ ಕೂಡಿ ಮೇಲುಸ್ತರದಲ್ಲಿ ಬಿಂಬಿತವಾಗುತ್ತವೆ. ಗ್ರಂಥದಲ್ಲಿ ದಾಖಲಾಗಿರುವ 12 ಮಹಿಳೆಯರ ಮಾತುಗಳನ್ನು ಗಮನಿಸಿದರೆ ಸಂಪೂರ್ಣವಾಗಿ ತಮ್ಮನ್ನು ತೆರೆದುಕೊಂಡಿದ್ದಾರೆ, ಮನಸ್ಸಿನ ಆಳದಲ್ಲಿರುವ ಭಾವನೆ, ಅನಿಸಿಕೆಗಳನ್ನು ಮುಕ್ತವಾಗಿ ಹೇಳೀಕೊಂಡಿದ್ದಾರೆ ಅಂತ ಅನಿಸುವುದಿಲ್ಲ. ಬಹುಶ: ತಮ್ಮ ವೈಯಕ್ತಿಕ ಬದುಕು ಸಾರ್ವಜನಿಕವಾಗುವುದು ಇಷ್ಟವಿಲ್ಲದಿರಬಹುದು. ಅದರಲ್ಲೂ ತಮ್ಮ ಪತಿ ಬಗ್ಗೆ ಒಟ್ಟಾರೆ ಅಭಿಪ್ರಾಯವನ್ನು ಅವರಿಗೆ ಹೇಳಾಲಾಗಿಲ್ಲ. ಒಂದೊ ಅವರಿಗೇ ಸ್ಪಷ್ಟತೆಯಿಲ್ಲದಿರಬಹುದು ಅಥವಾ ಹೇಳಿಕೊಳ್ಳಲಾಗದಂತಿರಬಹುದು. 
ನಾನು ಗಮನಿಸಿರುವ ಒಂದು ಅಂಶವೆಂದರೆ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಗಂಡ ಎಷ್ಟೇ ಕಡಟ್ಟವನಿರಲಿ, ಇಷ್ಟವಿಲ್ಲದವನಾಗಿರಲಿ ಅವನನ್ನು ಬಿಟ್ಟುಕೊಡುವುದಿಲ್ಲ. ಯಾಕಿರಬಹುದು ಎಂದು ನನ್ನಲ್ಲಿ ಕುತೂಹಲವಿತ್ತು. ನನ್ನ ಅಂದಾಜಿನಂತೆ, ಗಂಡಂದಿರಿಂದಲೆ ಅವರು ಜೀವನವನ್ನು ಕಟ್ಟಿಕೊಳ್ಳಬೇಕು, ಅನಿವಾರ್ಯವಾಗಿ ಅವರನ್ನೆ ನಂಬಿ ಬದುಕುವಂತ ಪರಿಸ್ಥತಿಯನ್ನು ಸೃಷ್ಟಿಸಿಲಾಗಿದೆ, ಅವರಿಂದಲೆ ಹೆಸರು, ಸ್ಥಾನ, ಗುರುತಿಸುವಿಕೆ, ಸಾಮಾಜಿಕ ಮನ್ನಣೆ, ಆರ್ಥಿಕ ಸವಲತ್ತು ಸಿಗುತ್ತಿರುತ್ತದೆ. ಬೇಕೊ ಬೇಡವೊ ವಿವಾಹದ ಮೂಲಕ ಸಂಬಂಧ ಏರ್ಪಟ್ಟಿರುತ್ತದೆ, ಕ್ರಮೇಣ ಅವರ ಬಗ್ಗೆ ಪ್ರೀತಿ, ಮೋಹ ಬೆಳೆದಿರುತ್ತದೆ, ಕೆಲವೊಮ್ಮೆ ಕುರುಡು ಮೋಹವೂ ಆವರಿಸಿರುತ್ತದೆ, ಅವನ ಅವಗುಣಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅವರೆಂತವರೆ ಆದರೂ ತಮ್ಮವರು ಎಂಬ ಆಪ್ತತೆಯನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಅವರನ್ನು ಬಿಟ್ಟುಕೊಡುವುದಿಲ್ಲ. ಹಾಗೆಂದು ಗಂಡಂದಿರ ಬಗ್ಗೆ ದೂರು ಹೇಳುತ್ತಾ ಕೂರಬೇಕೆಂದಿಲ್ಲ. ನಿಜ ಹೇಳದಿದ್ದರೆ ಮಹಿಳೆಯರ ಪರಿಸ್ಥಿತಿಗೆ ಅವರೆಷ್ಟು ಕಾರಣ ಎಂದು ತಿಳಿಯದೆ ಸಮಾಜದಲ್ಲಿ ಪುರುಷರು ಒಳ್ಳೆಯವರೆಂದೆ ಬಿಂಬಿತರಾಗಿ ಎಲ್ಲದಕ್ಕೂ ಮಹಿಳೆಯರೆ ಕಾರಣ ಅವರು ಸರಿಯಿಲ್ಲ, ಅವರದೆ ತಪ್ಪು ಅನ್ನುವ ಅಭಿಪ್ರಾಯ ಮೂಡುತ್ತದೆ. 
ಮಹಿಳೆಯರ ಸ್ಥಾನ ಗಂಡನ ಸ್ಥಾನ ಪ್ರತಿಷ್ಟೆಯನ್ನು ಅವಲಂಬಿಸಿರುವಾಗ ಅವನ ಬಗ್ಗೆ ದೂರು ಹೇಳಿದರೆ, ದೋಷಗಳನ್ನು ಎತ್ತಿ ಆಡಿದರೆ ತನ್ನ ಸ್ಥಾನ ಪ್ರತಿಷ್ಟೆಗೆ ಕುಂದುಂಟಾಗಬಹುದೆಂಬ ಅಂಜಿಕೆಯಿರಬಹುದು. ತಮ್ಮವರು ಅಂತ ಅಂದುಕೊಂಡವರ ಬಗ್ಗೆ ಜನ ಆಡಿಕೊಂಡರೆ, ಅಗೌರವಿಸಿದರೆ ಮಹಿಳೆಯರಿಗೆ ಸಹಿಸಿಕೊಳ್ಳಲಾಗುವುದುದಿಲ್ಲ. ಮಕ್ಕಳು ಎಷ್ಟೇ ತಪ್ಪು ಮಾಡಿದರು ಒಪ್ಪಿಕೊಳ್ಳದ ತಂದೆತಾಯಿಯ ಕುರುಡು ಪ್ರೀತಿಯ ತರ. ಎಲ್ಲವನ್ನು ಒಪ್ಪಿಕೊಳ್ಳುವ, ಹೊಂದಿಕೊಳ್ಳುವ, ಸಹಿಸಿಕೊಳ್ಳುವ ವಿಶಾಲ ಮನೋಭಾವದಂತ ವ್ಯಕ್ತಿ ಸಹಜ ಗುಣಗಳು ಗಂಡನನ್ನು ಬಿಟ್ಟುಕೊಡದಿರುವುದಕ್ಕೆ ಕಾರಣವಿರಬಹುದು.
ಹನ್ನೆರಡು ಮಂದಿಯಲ್ಲಿ ಇಬ್ಬರು ಮಾತ್ರ ತಮಗೆ ಒಪ್ಪಿಗೆಯಾಗದ ವಿವಾಹದಿಂದ ಆಚೆ ಬಂದು ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಉಳಿದವರೆಲ್ಲ ನಿರಂತರ ಹೋರಾಟದ ಮೂಲಕ ವೈವಾಹಿಕ ಜೀವನವನ್ನು ಉಳಿಸಿಕೊಂಡಿದ್ದಾರೆ. ನೀರಾ ದೇಸಾಯಿಯವರು ತಮ್ಮ ಮಿತಿಯನ್ನು ಮೀರಿ ಕೌಟುಂಬಿಕ ಹೊಂದಾಣ ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೆಂಡತಿಯಾರಾಗಿ ಪತಿ ಬಗ್ಗೆ, ಕುಟುಂಬದ ಸದಸ್ಯರ ಬಗ್ಗೆ ತಮ್ಮ ಅಸಮಧಾನ ಭಿನ್ನಾಭಿಪ್ರಾಯ ಮನಸ್ತಾಪಗಳನ್ನು ಅತ್ಯಂತ ನಾಜೂಕಿನಿಂದ ಹೇಳಿಕೊಂಡಿದ್ದಾರೆ. ಇದನ್ನು ಒರಟು ಭಾಷೆಯಲ್ಲಿ ಹೇಳಿದಿದ್ದರೆ ‘ವೈವಾಹಿಕ ಸಂಬಂಧ ಹಾಳಾಗಿತ್ತು, ಇಂತಹ ಮದುವೆ ಬೇಕಿತ್ತಾ? ಗಂಡಸರು ಒಳ್ಳೆಯವರಲ್ಲ, ಅವರ ಸಂಬಂಧವೆ ಬೇಡ ಎಂದು ಬಿಟ್ಟು ಬಂದೆ’ ಎಂದು ಹೇಳುವ ಸಾದ್ಯತೆಯಿತ್ತು. ಸೌಮ್ಯ ಹಾಗು ಮೃದು ರೂಪದ ವ್ಯಕ್ತಪಡಿಸುವಿಕೆ ಸುತಾಪ ಮುಖರ್ಜಿ, ಕೊಯ್ಲಿ ರಾಯ್, ಅಬ್ಬೂರಿ ಛಾಯಾದೇವಿ ಅವರ ಪ್ರಕರಣಗಳಲ್ಲಿ ಕಂಡುಬರುತ್ತದೆ. 
  ಇಲ್ಲಿ ಇನ್ನೊಂದು ಕುತೂಹಲದ ಪ್ರಶ್ನೆ ಏಳುತ್ತದೆ ಮಹಿಳೆಯರ ವೈವಾಹಿಕ ಮತ್ತು ವೈಧವ್ಯದ ಪರಿಸ್ಥಿತಿಯನ್ನು ಪರುಷರ ದೃಷ್ಟಿಯಿಂದ ನೋಡಿದರೆ ಏನೇನು ಅಂಶಗಳು ಕಂಡುಬರುತಿದ್ದವು? ಪರುಷರು ತಮ್ಮ ಹೆಂಡತಿಯನ್ನು ಬಿಟ್ಟುಕೊಡುತಿದ್ದರಾ? ಬಿಟ್ಟುಕೊಡುತ್ತಿರಲಿಲ್ಲವೆನಿಸುತ್ತದೆ. ಮಹಿಳೆಯರು ಪರಿಪೂರ್ಣರಲ್ಲ ಅವರು ಎಲ್ಲಾ ವಿಷಯಗಳಲ್ಲೂ ಸರಿ ಎಂದು ಹೇಳಲಾಗುವುದಿಲ್ಲ. ಪುರುಷರೂ ಮಹಿಳೆಯರನ್ನು ಸಹಿಸಿಕೊಳ್ಳಬೇಕಾಗುತ್ತದೆ, ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೂ ಪುರುಷರು ಮಾಡಿಕೊಡುವ ವೈಧವ್ಯ ಜೀವನ ಚಿತ್ರಣ ಭಿನ್ನವಾಗಬಹುದು.
ಹೆಣ್ಣುಮಕ್ಕಳು ತಮಗೇನೆ ಆದರು ಅಂದರೆ ಹಕ್ಕು ಉಲ್ಲಂಘನೆಯಾದರು, ಅವಕಾಶ ವಂಂಚಿತರಾದರು, ಅಸಮಾನತೆ ಎದುರಿಸುತಿದ್ದರು ಅದು ಸಹಜವೇನೊ, 'ಇನ್ನೇನು ಮಾಡಬೇಕಾಗುತ್ತದೆ, ಬೇರೆ ಮಹಿಳೆಯರಿಗೆ ಹೋಲಿಸಿದರೆ ನನ್ನದೆ ವಾಸಿ, ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು, ಇರುವುದರಲ್ಲಿ, ಸಿಕ್ಕಿರುವುದಕ್ಕೆ ತೃಪ್ತಿಪಡಬೇಕು, ತಮ್ಮದೆ ತಪ್ಪಿರಬಹುದು, ಸುಮ್ಮನೆ ದೂರಿದರೆ ಏನು ಪ್ರಯೋಜನ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು,' ಎಂದೆಲ್ಲಾ ಯೋಚಿಸಿ ತಮ್ಮ ಮನದಾಳದ ಭಾವನೆ ಆಸೆ ಆಕಾಂಕ್ಷೆಗಳನ್ನು, ನೋವು, ನಲಿವು, ಹಿಂಸೆಗಳನ್ನು ಒಳಗೆ ಹುದುಗಿಸಿ ಮೇಲು ನೋಡಕ್ಕೆ ಎಲ್ಲವು ಚೆನ್ನಾಗಿದೆ ಎಂದು ತೋರಿಸಿಕೊಳ್ಳುತ್ತಾರೆ ಅನಿಸುತ್ತದೆ.
‘ಸಂಸಾರ ಗುಟ್ಟು ವ್ಯಾಧಿ ರಟ್ಟು’  ಎಂಬ ಗಾದೆಯಂತೆ  ಮಹಿಳೆಯರು ತಮ್ಮ ವೈಯಕ್ತಿಕ, ಕೌಟುಂಬಿಕ ಪರಿಸ್ಥಿತಿ, ವಾಸ್ತವ ಹಾಗೂ ಸಮಸ್ಯೆಗಳನ್ನು ಹೊರಗೆಡವಬಾರದು ಎಂಬ ಸಾಮಜೀಕರಣವು ದು:ಖ ದುಮ್ಮಾನಗಳನ್ನು ಹುದುಗಿಸಿಕೊಳ್ಳುವಂತೆ ಮಾಡುತ್ತವೆ.
ಮಹಿಳಾಭಿವೃಧ್ಧಿಯಲ್ಲಿ ಚರ್ಚಿಸುವ ‘ಪ್ರಾಕ್ಟಿಕಲ್ ಜಂಡರ್ ನೀಡ್ಸ್’ ಮತ್ತು ಸ್ರ್ಟಾಟಜಿಕ್ ಜಂಡರ್ ನೀಡ್ಸ್’ ಪರಿಕಲ್ಪನೆಗಳಂತೆ ಇಲ್ಲಿ ಮಹಿಳೆಯರು ಮೂಲ ಭೂುತ ಅವಶ್ಯಕತೆಗಳ ಪೂರೈಕೆಗೆ ಪರದಾಡಬೇಕಿರಲಿಲ್ಲ ಆದರೆ ಸ್ವಂತಿಕೆ, ಆಯ್ಕೆ, ನಿರ್ಧಾರ ಕೈಗೊಳ್ಳುವಿಕೆ, ಸಮಾನತೆ, ಸ್ವಾತಂತ್ರ್ಯಗಳಿಗಾಗಿ ಗುದ್ದಾಡಬೇಕಿತ್ತು. ಇದಕ್ಕೆ ಸಾಕಷ್ಟು ಪೂರಕ ವಾತಾವರಣವಿದ್ದರೂ ಅವರ ಜೀವನ ಹೋರಾಟದಿಂದ ಮುಕ್ತವಾಗಿರಲಿಲ್ಲ. ಇವರ ಜೀವನವೇ ಇಷ್ಟು ದೊಡ್ಡ ಹೋರಾಟವಾಗಿರಬೇಕಾದರೆ ಸಮಾನ್ಯ, ಕೆಳ ವರ್ಗದ, ಹಿಂದುಳಿದ ಜಾತಿ, ಧಾರ್ಮಿಕ ಕಟ್ಟುಪಾಡುಗಳ ನಡುವೆ ಬಂಧಿಯಾಗಿರುವ ಮಹಿಳೆಯರ ಜೀವನವು ಎನ್ನೆಷ್ಟು ಹೋರಾಟಮಯವಾಗಿರಬಹುದು.
ಗ್ರಂಥವು ಆಯ್ದ ಮಹಿಳೆಯರ ವೈಧವ್ಯದ ಬದುಕಿನ ಚಿತ್ರಣವನ್ನು ನೀಡಿದರು ಅದೇ ವರ್ಗದ ಇತರ ಮಹಿಳೆಯರನ್ನು ಪ್ರತಿನಿಧಿಸುತ್ತದೆ. ಆತ್ಮಚರಿತ್ರೆಯ ಒಂದು ಭಾಗವಾಗಿ ಹೊರಹೊಮ್ಮಬಹುದಾದ ವಿಷಯಗಳು ಪ್ರಕರಣ ಅಧ್ಯಯನ ರೂಪದಲ್ಲಿ ಬಂದಿದೆ.  ಕೆಲವೊಂಮೆ ಸಾಮಾನ್ಯ ಮಹಿಳೆಯರಂತೆ ಇನ್ನು ಕೆಲವೊಮ್ಮೆ ಕ್ರಾಂತಿಕಾರಿ ಮಹಿಳೆಯರಂತೆ ತೋರಿಬರುತ್ತಾರೆ. ಲೇಖಕಿ ವಸಂತ ಅವರು ಪ್ರಸ್ತಾವನೆಯಲ್ಲಿ ಹೇಳಿರುವಂತೆ ‘ಸ್ವಂತ ಆಯ್ಕೆ, ನಿರ್ಧಾರ, ಸಾಮರ್ಥ್ಯ ಬಳಕೆ, ಏನನ್ನಾದರು ಸಾಧಿಸಬೇಕೆಂಬ ಹಂಬಲದಿಂದ ಜೀವನವನ್ನು ಕಟ್ಟಿಕೊಂಡು ಎದುರಾದ ಸಮಸೆಯಗಳನ್ನು ನಿವಾರಿಸಿಕೊಂಡಿರುವುದು ಇಂದಿನ ಯುವ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರವನ್ನು ನೀಡಬಲ್ಲವು ಈ ಪ್ರಕತಣ ಅಧ್ಯಯನಗಳು’. ಆದರೆ ಯುವ ಮಹಿಳೆಯರು ಈ ಗ್ರಂಥವನ್ನು ಓದುತ್ತಾರಾ ಅನ್ನುವ ಪ್ರಶೆ ಏಳುತ್ತದೆ.
ಗ್ರಂಥವು ಅನುವಾದವಾಗಿರುವುದರಿಂದ ಕೆಲವು ಕಡೆ ವಾಕ್ಯ ರಚನೆ ಮತ್ತು ನಿರೂಪಣೆ ಸರಾಗ ಓದಿಗೆ ಅಡ್ಡಿ ಉಂಟುಮಾಡುತ್ತವೆ. ಇದೇ ರೀತಿ ವಿವಿಧ ಗುಂಪು, ಪರಿಸ್ಥಿತಿ, ಘಟ್ಟಗಳಲ್ಲಿರುವ ಮಹಿಳೆಯರ ಜೀವನವನ್ನು ಮಹಿಳಾ ಅಧ್ಯಯನದ ದೃಷ್ಟಿಕೋನ ಮತ್ತು ಸ್ತ್ರೀವಾದಿ ಆಯಾಮದಲ್ಲಿ ಪರಿಶೀಲಿಸಿದರೆ ಮಹಿಳಾ ವಾಸ್ತವ ಬದುಕನ್ನು ಅನಾವರಣಗೋಳಿಸಬಹುದು.

ಹೇಮಲತ ಎಚ್.ಎಮ್.
ಮಹಿಳಾ ಅಧ್ಯಯನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಮಂಡ್ಯ. 571402

No comments:

Post a Comment