Thursday 13 July 2017

ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು - 3

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)

III. ಆಸ್ಪತ್ರೆಗಳು
ಈ ಹಂತದಲ್ಲಿ ಸೋವಿಯತ್ ಆಸ್ಪತ್ರೆಗಳ ಕುರಿತು ಒಂದು ಟಿಪ್ಪಣಿಯನ್ನು ಸೇರಿಸುವುದು ಉಚಿತವೆನಿಸುತ್ತದೆ. ಅವುಗಳಲ್ಲಿ ತುಂಬಾ ವ್ಯತ್ಯಾಸಗಳಿವೆ. ಉದಾಹರಣೆಗೆ, ಮಾಸ್ಕೊದಲ್ಲಿರುವ ಕ್ರೆಮ್ಲಿನ್ ಆಸ್ಪತ್ರೆಯು ಉಪಕರಣ, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಇಂಗ್ಲಿಷ್ ಆಸ್ಪತ್ರೆಗಳಿಗೂ ಹೇಳಿಕೊಡುವಂತಿವೆ. ಅಲ್ಲಿ ಹಲವಾರು ಹೊಸತರದ ಸಲಕರಣೆಗಳಿವೆ ಮತ್ತು ಎಲ್ಲವೂ ಕೆಲಸ ಮಾಡುತ್ತಿವೆ; ಅದು ಶಸ್ತ್ರಚಿಕಿತ್ಸೆಯ ಸ್ವಚ್ಛತೆಯಲ್ಲಿ ಬಹಳ ಅತ್ಯುತ್ತಮವಾದ ಮಟ್ಟಹೊಂದಿದೆ; ಜೊತೆಗೆ, ಕೆಲವು ವ್ಯವಸ್ಥೆಗಳಲ್ಲಿ, ಇಬ್ಬರಿಗಿಂತ ಹೆಚ್ಚು ಇರದ “ವಾರ್ಡ್”ಗಳಂತಹ ವ್ಯವಸ್ಥೆಗಳಲ್ಲಿ, ಒಳರೋಗಿಗಳಿಗೆ ಹನ್ನೆರೆಡು ಗಿನಿಗಳನ್ನು ಸಂಗ್ರಹಿಸುವ ಲಂಡನ್ ನರ್ಸಿಂಗ್ ಹೋಮ್‍ಗಳೊಂದಿಗೆ ಹೋಲಿಸಬಹುದು: ಇದಕ್ಕಿಂತಲೂ ಉತ್ತಮವಾದ ವ್ಯವಸ್ಥೆಯಿರುವ ಆಸ್ಪತ್ರೆಗಳಿವೆಯೆಂದು ಕೇಳಿದ್ದೇನೆ. ಆದರೆ ಈ ಆಸ್ಪತ್ರೆಯನ್ನು ಸರ್ಕಾರಿ ಅಧಿಕಾರಿಗಳು ಮತ್ತು ಕಮ್ಯುನಿಸ್ಟ್ ಪಾರ್ಟಿಯ ಉನ್ನತ ಸ್ಥಾನಗಳಲ್ಲಿರುವವರು ಮಾತ್ರ ಉಪಯೋಗಿಸಬಹುದು. (ಇಲ್ಲಿ ಒಂದು ವಿಷಯವನ್ನು ನಾನು ಹೇಳಲೇ ಬೇಕು. ನಾನು ಮಾತನಾಡಿಸಿದವರಲ್ಲಿ ಯಾರಿಗೂ ಸ್ವಲ್ಪವೂ ಇದರ ಬಗ್ಗೆ ಬೇಸರವಿಲ್ಲ. ಅವರು ಉನ್ನತ ಸರ್ಕಾರಿ ಅಧಿಕಾರಿಗಳ ಜೀವ ಅದೆಷ್ಟು ಮುಖ್ಯವೆಂದರೆ, ಅವರ ಆರೋಗ್ಯ ಹದಗೆಟ್ಟರೆ ದೇಶದ ಅತ್ಯುತ್ತಮ ಸಂಪನ್ಮೂಲಗಳನ್ನು ಅವರ ಆರೋಗ್ಯ ಉತ್ತಮಪಡಿಸಲು ಉಪಯೋಗಿಸಬೇಕು ಎಂದು ಒಪ್ಪಿಕೊಳ್ಳುತ್ತಾರೆ. ಅದು ಟ್ರಾಟ್‍ಸ್ಕಿ ಪದಪುಂಜದಲ್ಲಿ ಹೇಳುವುದಾದರೆ ‘ತೆರ್ಮಿದೊರ್’ ಇರಬಹುದು; ಆದರೆ ಅದು ತೆರ್ಮಿದೊರ್ ಎನ್ನುವುದಾದರೆ ಅದನ್ನು ಜಾಕೊಬಿಯನ್ಸ್ ಬೆಂಬಲಿಸುತ್ತಾರೆ. ನಮ್ಮ ಅತ್ಯಂತ ಭಾವುಕ ಮತ್ತು ಬೇಸರ ತರಿಸುವ ಕಮ್ಯುನಿಸ್ಟ್ ಬೆಂಬಲಿಗರಾದ ಮಾಸ್ಕೊ ಮಾರ್ಗದರ್ಶಕರು ಕ್ರೆಮ್ಲಿನ್ ಆಸ್ಪತ್ರೆಯನ್ನು ಸೋವಿಯತ್ ರಾಜ್ಯದ ವಿಜಯದ ಸಂಕೇತವೆಂದು ಹೇಳುತ್ತಾರೆ.)
ಲೆನಿನ್‍ಗ್ರಾದ್‍ನಲ್ಲಿರುವ ಮೆಚ್ನಿಕೊವ್ ಆಸ್ಪತ್ರೆಯು ಬಹಳ ವಿಶಿಷ್ಟವಾಗಿದೆ. ಇಲ್ಲಿ ಸಮವಸ್ತ್ರವಿಲ್ಲದಿರುವುದನ್ನು ಮತ್ತು ರೋಗಿಗಳೂ ಸೇರಿದಂತೆ ಜನರು ವಾರ್ಡ್‍ನ ಸುತ್ತಮುತ್ತ, ಶಸ್ತ್ರಚಿಕಿತ್ಸಾಕೇಂದ್ರದ ಸುತ್ತಮುತ್ತ ಕೂಡ ಓಡಾಡುವುದನ್ನು ನೋಡಿದರೆ ಶುದ್ಧವೈದ್ಯಕೀಯವಾದಿಗಳು ದಿಗ್ಭ್ರಮೆಗೊಳ್ಳುತ್ತಾರೆ. ಬಹುಶಃ ಇಲ್ಲಿ ಕ್ರಿಮಿಶುದ್ಧೀಕರಣದ ಮಟ್ಟವು ಅತ್ಯುತ್ತಮವಾದ ಇಂಗ್ಲಿಷ್ ಆಸ್ಪತ್ರೆಗಳಿಗಿಂತ ಕಡಿಮೆಯಿರಬಹುದು. ಇನ್ನೊಂದೆಡೆ, ಇಂಗ್ಲಿಷ್ ಆಸ್ಪತ್ರೆಗಳಿಗೆ ಮೆಚ್ನಿಕೊವ್ ಆಸ್ಪತ್ರೆಯಿಂದ ಕಲಿಯಲು ಕೆಲವು ವಿಷಯಗಳಿವೆ. ಉದಾಹರಣೆಗೆ, ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗೆ ಇಪ್ಪತ್ನಾಲ್ಕು ಅಥವಾ ನಲವತ್ತೆಂಟು ಗಂಟೆಗಳ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯಿದೆ; ಅದು  ಅತ್ಯಂತ ಅಪೇಕ್ಷಿತ ವಿಷಯ; ಜೊತೆಗೆ ಅಲ್ಲಿ ತೋಟವಿದೆ – ತರಕಾರಿ, ಹಣ್ಣು ಮತ್ತು ಹೂವುಗಳ ತೋಟವಿದೆ; ಅಲ್ಲಿ ಕಡಿಮೆ ಅವಧಿಗೆ ನರಸಂಬಂಧಿತ ಸಮಸ್ಯೆಗಳಿರುವ ರೋಗಿಗಳನ್ನು ಕೆಲಸಕ್ಕೆ ಹಾಕುತ್ತಾರೆ ಮತ್ತು ಹೂವುಗಳನ್ನು ವಾರ್ಡ್‍ಗಳಿಗೆ ಮತ್ತು ಪ್ರತ್ಯೇಕ ಕೊಠಡಿಗಳಿಗೆ ಕಳುಹಿಸುತ್ತಾರೆ. ನನಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ; ಆದರೂ ಸಹ, ನನಗೆ ಸಿಕ್ಕಿದ ಮಾಹಿತಿಯ ಪ್ರಕಾರ, ಪಾಶ್ಚಿಮಾತ್ಯ ಗುಣಮಟ್ಟಕ್ಕೆ ಒಗ್ಗಿದವರಿಗೆ ಕೆಲವು ಜಿಲ್ಲಾ ಆಸ್ಪತ್ರೆಗಳ ಸ್ವಚ್ಛತೆ ಮತ್ತು ಪ್ರತ್ಯೇಕ ಕೊಠಡಿಗಳನ್ನು ನೋಡಿ ಗಾಬರಿಯಾಗಬಹುದು ಎನಿಸುತ್ತದೆ. ಆದರೆ ರಷ್ಯನ್ ಜನತೆಯ ಹಿಂದಿನ ಇತಿಹಾಸವನ್ನು ಮರೆಯಬಾರದು; ಆಸ್ಪತ್ರೆಯೇ ಇಲ್ಲದಿರುವುದಕ್ಕಿಂತ ಯಾವುದಾದರೂ ಆಸ್ಪತ್ರೆಯೇ ಉತ್ತಮ!
ಒಂದನೆಯ ಪಂಚವಾರ್ಷಿಕ ಯೋಜನೆಯಾಗಲೀ, ಎರಡನೆಯದಾಗಲೀ, ಯುವ ಸೋವಿಯತ್ ನಾಗರಿಕರ ಹುಟ್ಟಿನ ಪ್ರಮಾಣದಲ್ಲಿ ಸಂಖ್ಯೆಯ ಹೆಚ್ಚಳದ ಬಗ್ಗೆ ಸಂತೋಷದಿಂದ ಹೇಳುವಂತಿಲ್ಲ; ಆದರೆ ಒಂದು ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನಾರ್ಕೊಮ್ಸ್‍ದ್ರಾವ್‍ನ ಅಧಿಕಾರಿಯು ಬಹಳ ಉತ್ಸಾಹದಿಂದ ಹೇಳಿದುದನ್ನು ಇಲ್ಲಿ ದಾಖಲಿಸಬಹುದು: “ಆಸ್ಪತ್ರೆಗಳಲ್ಲಿ ತಾಯಂದಿರು ಒಳಗೆ ಹೋಗುತ್ತಾರೆ, ಮಕ್ಕಳು ಹೊರಗೆ ಬರುತ್ತಾರೆ.”
   - ಎಸ್.ಎನ್.ಸ್ವಾಮಿ


No comments:

Post a Comment