Thursday 13 July 2017

ಕಥೆ - ಒಂದು ಹೆಣ್ಣಿನ ಸ್ವಗತ


ಅಪ್ಪನಿಗೆ ನನ್ನ ಮೇಲೆ ಏಕಿಷ್ಟು ಅನುಮಾನ? ನಾನೇನು ತಪ್ಪು ಮಾಡಿದೆ? ಹೆಣ್ಣಾಗಿ
ಹುಟ್ಟಿದ್ದೇ ತಪ್ಪೇ? ನಾನು ಏನು ಮಾಡಿದರೂ ತಪ್ಪು ಎಂದು ಏಕೆ ಹೇಳುತ್ತಾರೆ?
ಹೊರಗಡೆ ಹೋದರೆ ತಪ್ಪು, ಯಾರೊಂದಿಗಾದರೂ ಮಾತನಾಡಿದರೆ ತಪ್ಪು,
ಗೆಳತಿಯರು ಮನೆಗೆ ಬಂದರೆ ತಪ್ಪು, ಅಂಗಡಿಗೆ ಹೋದರೆ ತಪ್ಪು. ಅಬ್ಬಾ ಈ ತಪ್ಪುಗಳ ಸರಮಾಲೆಯಲ್ಲಿ ಬದುಕು ಸಾಕಾಗಿದೆ.

ನಾನು ಸುಂದರವಾಗಿದ್ದರೆ ಅದೂ ನನ್ನ ತಪ್ಪೇ? ಯಾರೋ ನನ್ನನ್ನು ನೋಡಿದರೆ
ನಾನೇನು ಮಾಡಲು ಸಾಧ್ಯ, ಅದೂ ನನ್ನ ತಪ್ಪೇ? ಅಲಂಕಾರವಿರಲಿ, ಕೇವಲ ಹೊರಗೆ ಹೋಗುವಷ್ಟು ಸಿದ್ಧವಾದರೂ ಟೀಕೆಗಳ ಸುರಿಮಳೆ – ಇದನ್ನು ಹಾಕಿಕೊಳ್ಳಬೇಡ, ಅದ್ಯಾಕೆ ಇಷ್ಟು ಗಿಡ್ಡ, ಇದ್ಯಾಕೆ ಇಷ್ಟು ಉದ್ದ ಇತ್ಯಾದಿಗಳು. ಇವರು ಹಾಕುವ ಲಕ್ಷ್ಮಣ ರೇಖೆಗಳು ಒಂದೇ ಎರಡೇ. ಪ್ರತಿ ಬಾರಿ ಒಂದು ರೇಖೆ ಹಾಕಿದಾಗಲೂ ಸೀತೆಯ ಕಥೆಯ ಬೋಧನೆ. ನೋಡು ರೇಖೆ ದಾಟಿದ ಸೀತೆಯ ಕಥೆ ಏನಾಯ್ತು ಎಂದು. ಆದರೆ ಸೀತೆಯ ದುರಂತ ಆರಂಭವಾದದ್ದು ರಾಮನ ಮನೆಯಲ್ಲಿ, ರಾಮನೊಂದಿಗೆ ಬದುಕನ್ನು ಹಂಚಿಕೊಂಡಾಗ, ಅಯೋಧ್ಯೆಯಲ್ಲಿದ್ದಾಗ, ಗರ್ಭವತಿಯಾಗಿದ್ದಾಗ. ಕನಿಷ್ಟ ಪಕ್ಷ ಹೊತ್ತುಕೊಂಡು ಹೋದ ರಾವಣ ಸೀತೆಗೆ ಆಯ್ಕೆಯ ಸ್ವಾತಂತ್ರ್ಯವನ್ನಾದರೂ ಕೊಟ್ಟಿದ್ದ. ಆದರೆ ರಾಮ ತುಂಬು ಗರ್ಭಿಣೆಯನ್ನು ಕಾಡಿಗಟ್ಟಬೇಕಾದರೆ ಅವಳಿಗೆ ಸ್ವಾತಂತ್ರ್ಯ ಕೊಟ್ಟನೇ? ಹಾಗಿದ್ದರೆ ಈ ಲಕ್ಷ್ಮಣ ರೇಖೆಗಳು ಏಕೆ? ಅವರ ಹಿಡಿತದಿಂದ ಸ್ತ್ರೀ ಜಾರಿಹೋಗುತ್ತಾಳೆಂದೇ?

ಇವರಿಗೆ ನಾನು ಬೇಡ ಎನಿಸಿದ್ದರೆ ಹುಟ್ಟಿದಾಗಲೇ ಸಾಯಿಸಿಬಿಡಬೇಕಿತ್ತು. ಈ ಬದುಕು ಇನ್ನೆಷ್ಟು ದಿನ. ಸಹಿಸಿ, ಸಹಿಸಿ, ಸಹನೆ ನಾಶವಾಗಿದೆ. ಏನಾದರೊಂದು ತೀರ್ಮಾನ ಕೈಗೊಳ್ಳಬೇಕು. ನಾನೀಗ ಏನು ಮಾಡಲಿ. ಬೇಡಪ್ಪಾ ಬೇಡಾ. ಈ ನರಕಾನೇ ಬೇಡ. 

ಹೋಗಲಿ ಮದುವೆ ಮಾಡಿಕೊಂಡು ಈ ಮನೆಯಿಂದ ಹೊರ ಹೋಗೋಣ ಎಂದುಕೊಂಡರೆ ಬರುವವನು ಇವರಂತೆಯೇ ಇದ್ದರೆ, ಆಗ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗುವುದಿಲ್ಲವೇ? ಹಾಗೆಯೇ ಹೊರಹೋದರೆ ಇವರನ್ನು ಧಿಕ್ಕರಿಸಿ, ಇವರು ನನ್ನನ್ನು ಬದುಕಲು ಬಿಡುವರೇ? ಸಮಾಜದ ನಿಂದನೆಯನ್ನು ಸಹಿಸಿ ಬದುಕಲು ಸಾಧ್ಯವೇ? ಹೋಗಲಿ ಏನೆಂದರೂ ಸಹಿಸಿಕೊಳ್ಳೋಣ ಎಂದುಕೊಂಡರೆ ಆ ಸಹನೆಗೆ ಬೆಲೆ ಎಲ್ಲಿ? ಈ ನಿಂದನೆಗೆ ಕೊನೆ ಎಲ್ಲಿ? ಈ ಮನಸ್ಸೊಂದು ಮರಗಟ್ಟಿ ಹೋಗಬಾರದೇ. ಕಲ್ಲಾಗಬಾರದೇ?

ಹಾ, ಆ ಅಹಲ್ಯೆಯಂತೆ ಕಲ್ಲಾಗಬಾರದೆ. ಅಯ್ಯೊ, ಆದರೆ ಅವಳು ತಪ್ಪು ಮಾಡಿದಳು
ಎನ್ನುತ್ತದೆ ಜಗತ್ತು, ನನ್ನನ್ನು ಹಾಗೆಯೇ ನೋಡಿದರೆ? ಆದರೆ ಆ ಅಹಲ್ಯೆ ತಪ್ಪು ಮಾಡಿದಳೋ ಇಲ್ಲವೋ ಯಾರಿಗೆ ಗೊತ್ತು. ಗೌತಮ ಶಾಪ ಕೊಟ್ಟನೋ ಇಲ್ಲವೊ,ಅಥವಾ ಅವನ ನಿಂದನೆಗೆ ಅವಳೆ ಕಲ್ಲಾಗಿಬಿಟ್ಟಳೋ ಗೊತ್ತಿಲ್ಲ!

ಅಯ್ಯೊ, ಈ ಕಣ್ಣೀರೊಂದು, ನಿಲ್ಲುತ್ತಲೇ ಇಲ್ಲ. ಯಾರು ಕೊಟ್ಟರೊ, ಯಾರು ಕಲಿಸಿದರೋ ಹೆಣ್ಣುಮಕ್ಕಳಿಗಿದನ್ನು. ಹೆಣ್ಣು ಏಕಿಷ್ಟು ಅಬಲೆ. ದೈಹಿಕವಾಗಿಯಂತೂ ಅಲ್ಲ. ನಾನು ಮಾಡುವ ಕೆಲಸವನ್ನು ನನ್ನ ಅಣ್ಣತಮ್ಮಂದಿರೂ ಸಹ ಮಾಡುವುದಿಲ್ಲ. 3ನೇ ಬಾರಿ ಪಾಸಾದ ತಮ್ಮನಿಗೆ ಡೊನೇಷನ್ ಕೊಟ್ಟು ಕಾಲೇಜಿಗೆ ಕಳಿಸುವ ಇವರು, 85% ತೆಗೆದರೂ ನನ್ನನ್ನು ಮುಂದೆ ಓದಲು ಕಳಿಸಲು ಸಂಕಟ ಪಡುತ್ತಾರೇಕೆ?

ನಾನು ನಿಜಕ್ಕೂ ಇವರ ಮಗಳೇನಾ ಎಂಬ ಅನುಮಾನ ಕಾಡುತ್ತದೆ. ಇಲ್ಲಾ ಎಲ್ಲಿಂದಾದರೂ ತಂದು ಸಾಕಿಕೊಂಡಿದ್ದಾರಾ? ಮನೆಯಲ್ಲಿಯೇ ಇರು ಎಲ್ಲವನ್ನು ತಂದುಕೊಡುತ್ತೇನೆ ಎಂದರೆ ನಾನೇನು ಪಂಜರದಲ್ಲಿರುವ ಗಿಣಿಯೇ? ಮದುವೆ ಮಾಡಿಬಿಡುತ್ತೇವೆ. ನಂತರ ಏನಾದರೂ ಮಾಡಿಕೊ ಎನ್ನುತ್ತಾರೆ. ಅಂದರೆ ಮದುವೆಯಾದಮೇಲೆ ಹಾಳಾದರೆ ಪರವಾಗಿಲ್ಲವಾ. ಅಂದರೆ ನಾವೇನೋ ಇವರ ಮೇಲೆ ಹೊರೆಯಿದ್ದಂತೆ, ಇಳಿಸಿಕೊಂಡು ಬೇರೆಯವರ ಹೆಗಲಿಗೆ ವರ್ಗಾಯಿಸಿದರೆ ಸಾಕು ಎನ್ನುವಂತಿದೆ ಇವರ ಧೋರಣೆ.

ನನಗೆ ಬೇಡಪ್ಪಾ ಈ ರೀತಿಯ ಬದುಕು. ಹಾಗಿದ್ದರೆ, ಇರುವುದು ಎರಡೇ ದಾರಿ. ನಾನೇ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುವುದು, ಇಲ್ಲವೇ ಬದುಕನ್ನು ಮುಗಿಸುವುದು. ಹಾ! ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುವುದು ಸಾಧ್ಯವೇ? ಇಲ್ಲ. ಹಾಗಿದ್ದರೆ ಉಳಿದಿರುವುದೊಂದೇ ದಾರಿ - ಸಾವು.

ಈಗ ನಿರಾತಂಕವೆನಿಸಿದೆ. ಈ ನರಕಯಾತನೆ ಇನ್ನು ಕೆಲವೇ ಘಂಟೆಗಳಲ್ಲಿ ಶಾಶ್ವತವಾಗಿ ದೂರವಾಗುತ್ತದಲ್ಲ ಎಂದು ಖುಶಿಯಾಗುತ್ತಿದೆ. ಈ ನರಕದಿಂದ ಬಿಡುಗಡೆ ಎಂದುಕೊಂಡ ತಕ್ಷಣ ಎಷ್ಟು ಆರಾಮಾಗಿದೆ. ಸಾವೇನೂ ಭಯವೆಂದೆನಿಸುತ್ತಿಲ್ಲ. ಎಲ್ಲರೂ ಧೈರ್ಯ ಬೇಕು ಎನ್ನುತ್ತಾರೆ, ಯಾಕೆ? ಬದುಕಿನ ಜಂಜಡದಿಂದ ಮುಕ್ತಿ ಪಡೆಯುವ ಮಾರ್ಗ ಸಲೀಸಾಗಿದೆಯಲ್ಲಾ, ಭಯವೇಕೆ. ನನ್ನ ವಿಧಿ ಎಷ್ಟು ವಿಚಿತ್ರವಲ್ಲವೇ? ಬದುಕಿಗಿಂತ ಸಾವೇ ಹಾಯೆನಿಸಬೇಕಾದರೆ?

ಪತ್ರ ಬರೆದಿಟ್ಟು ಸಾಯಬೇಕೆ? ಅಥವಾ ಬೇಡವೇ? ಏನೆಂದು ಬರೆಯಲಿ. ನಿಮ್ಮ ಕಾಟ ತಡೆಯಲಾರದೇ ಸತ್ತೆನೆಂದೆ? ಬೇಡ ಬಿಡು. ಪೋಲಿಸರು ಬರುತ್ತಾರೇನೋ. ಬರಲಿ ಬಿಡು, ಬಂದು ಸ್ವಲ್ಪ ವಿಚಾರಿಸಿಕೊಳ್ಳಲಿ. ನನಗೆ ಅಷ್ಟು ಕಷ್ಟ ಕೊಟ್ಟ ಅವರು ಕಷ್ಟವೇನೆಂದು ತಿಳಿಯಲಿ. ಅಥವಾ ಅವರೇ ಕಾರಣವೆಂದು ಬರೆದಿಟ್ಟರೆ? ನೋಡಲಿ, ನೋವಾಗಲಿ. ಹಾಗಾದರೂ ಬದಲಾಗುತ್ತಾರೇನೊ, ಆದರೆ ಏನು ಪ್ರಯೋಜನ? ನಾನಿರುವುದಿಲ್ಲವಲ್ಲ. ಆದರೆ ಜೀವಂತವಿರುವ ನನ್ನ ಕಣ್ಣೀರಿಗೆ ಬೆಲೆ ಕೊಡದಿರುವರು, ನಾನು ಸತ್ತರೆ ಒಂದು ಹನಿ ಕಣ್ಣೀರಾದರೂ ಹಾಕುವರೇ? ಬೇಜಾರು ಮಾಡಿಕೊಳ್ಳುವರೆ? ಹೋಗಲಿ ಬಿಡು ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ.

ಹೇಗೋ ನಿರ್ಧಾರ ತೆಗೆದುಕೊಂಡಮೇಲೆ ಸಾಯೋದು ಹೇಗೆ ಅನ್ನೋದಾದ್ರೂ ನಿರ್ಧರಿಸೋಣ. ಮನೆಯಲ್ಲಿ ಹೇಗೂ ಹಗ್ಗವಿದೆ, ಇಲಿ ಪಾಷಾಣವಿದೆ, ಬಾವಿಯಿದೆ, ನಿದ್ರೆಮಾತ್ರೆಗಳಿವೆ, ಸೀಮೆಎಣ್ಣೆಯೂ ಇದೆ. ಯಾವುದಾದ್ರೂ ಒಂದನ್ನು ಆರಿಸಿಕೊಂಡರಾಯಿತು. ಇಲಿ ಪಾಶಾಣ, ನಿದ್ರೆಮಾತ್ರೆ ತಿಂದರೆ ಏನೋ ಕಣ್ತಪ್ಪಿ, ಏನೋ ತಿಂದು ಹೀಗಾಗಿದೆ ಅಂದುಕೊಳ್ತಾರೆ. ಬಾವಿಗೆ ಬಿದ್ರೆ, ಕಾಲು ಜಾರಿ ಅಂದ್ಕೋತಾರೆ. ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಕೊಂಡ್ರೇ ಅದೂ ಆಕಸ್ಮಿಕ ಅಂದುಕೊಳ್ತಾರೆ. ಅಪ್ಪನಿಗೆ ಏನಾದ್ರೂ ತಟ್ಟುತ್ತಾ? ಹಾಗಿದ್ದರೆ ನೇಣು ಹಾಕ್ಕೊಂಡ್ರೆ ಅವರಿಗೆ ಗೊತ್ತಾಗುತ್ತೆ. 

ಆದರೆ ಸತ್ತ ಮೇಲೆ ಜನ ಏನೆಂದುಕೊಳ್ತಾರೆ? ಏನು ಮಾಡಿಕೊಂಡಿದ್ದಳೋ ಏನೋ, ಅದಕ್ಕೆ..... ಈ ರೀತಿ ನಾನಾ ಮಾತುಗಳು ಬರುತ್ತವೆ. ಯಾರೇನೆಂದುಕೊಂಡರೆ ನನಗೇನೂ. ಕೇಳಿಸಿಕೊಳ್ಳಲು ನಾನಿರುವುದಿಲ್ಲವಲ್ಲ. ಆದರೂ ಅಪ್ಪ ಇಷ್ಟು ದಿನ ಏನು ಅನುಮಾನ ಪಟ್ಟಿದ್ದರೊ ಅದು ನಿಜ ಎಂದು ಅವರಿಗನಿಸದೇ ಇರುತ್ತದಾ? ನಾನು ಮಾಡದ ತಪ್ಪಿಗೆ ಈ ಕಳಂಕ ಜೀವನದುದ್ದಕ್ಕೂ ಇರುವುದಿಲ್ಲವೇ? ಅರೇ ಯಾರ ಜೀವನದುದ್ದಕ್ಕೂ. ನಾನಂತೂ ಇರುವುದಿಲ್ಲವಲ್ಲ. ಆದರೂ ಈ ರೀತಿ ಸಾಯಬೇಕೆ? ತಪ್ಪು ಉದಾಹರಣೆ ನೀಡಲು ಬೇರೆ ಅಪ್ಪ ಅಮ್ಮಂದಿರು ನನ್ನ ಹೆಸರನ್ನು ಬಳಸಿಕೊಳ್ಳುವುದಿಲ್ಲವೇ?

ಅಯ್ಯೊ ಸಾಯುವುದೂ ಕೂಡ ಇಷ್ಟು ಕಷ್ಟವೇ? ಬದುಕಿದ್ದಾಗಲೂ ಅನ್ನಿಸಿಕೊಳ್ಳಬೇಕು, ಸತ್ತ ಮೇಲೆಯೂ ಅನ್ನಿಸಿಕೊಳ್ಳಬೇಕಾ? ಈ ನರಕ ತಪ್ಪುವುದೇ ಇಲ್ಲವೇ? ಹಾ! ಅನ್ನಿಸಿಕೊಳ್ಳುವುದು ಸತ್ತ ಮೇಲೆಯೇ ತಪ್ಪೋದಿಲ್ಲ ಎಂದ ಮೇಲೆ ಬದುಕಿಯೇ ಬಿಡಬಾರದೇಕೆ?

ಅಯ್ಯೊ ಮತ್ತೆ ಈ ನರಕದಲ್ಲಾ? ಅರೆ, ನರಕ ಎಂದು ಯಾಕೆ ಅಂದ್ಕೋಬೇಕು. ಬದುಕುವ ನಿರ್ಧಾರ ಮಾಡಿದ ಮೇಲೆ ಧೈರ್ಯವಾಗಿಯೇ ಬದುಕಿಬಿಡೋಣ. ಹಾಗಿದ್ದರೆ ಈಗಲೇ ಒಂದು ನಿರ್ಧಾರಕ್ಕೆ ಬರಬೇಕು. ಅಪ್ಪನನ್ನು ಇವತ್ತು ಕೇಳಿಯೇ ಬಿಡಬೇಕು. ಅವರ ಎಲ್ಲಾ ಅಪಮಾನಕರ ಮಾತುಗಳನ್ನು ಧಿಕ್ಕರಿಸಬೇಕು. ಕಳಿಸಿದರೆ ಓದಲು ಹೋಗುವುದು, ಇಲ್ಲದಿದ್ದರೆ ಹೇಗೂ ಗೆಳತಿ ತನ್ನ ಕಂಪನಿಯಲ್ಲಿಯೇ ಕೆಲಸವಿದೆ ಬಾ ಎಂದಿದ್ದಳಲ್ಲಾ. ಅಲ್ಲಿಗೆ ಹೋದರಾಯಿತು. ನಂತರ ಕಷ್ಟಪಟ್ಟು ಓದಿ ಒಳ್ಳೆಯ ಜೀವನ ನಡೆಸಬಹುದು. ಹಾ! ಅದೇ ಸರಿ.

ಅಬ್ಬಾ! ಮನಸ್ಸು ಈಗೆಷ್ಟು ಪ್ರಶಾಂತವಾಗಿದೆ. ಎಷ್ಟು ಧೈರ್ಯವೆನಿಸುತ್ತಿದೆ. ಏನು ಬೇಕಾದರೂ ಮಾಡಬಲ್ಲೆ, ಏನು ಬೇಕಾದರೂ ಎದುರಿಸಬಲ್ಲೆನೆಂಬ ನಂಬಿಕೆ ಬರುತ್ತಿದೆ. ಮತ್ತೆ ಇಷ್ಟು ದಿನ ಇದೆಲ್ಲಾ ಯೋಚಿಸದೆ ಮೂರ್ಖಳಂತೆ ಯೋಚಿಸಿ ಅಳುತ್ತಾ ಕುಳಿತೆ. 

ಹೋಗಲಿ ಬಿಡು, ಈಗಲಾದರೂ ಬುದ್ಧಿ ಬಂತಲ್ಲ.
ನಡೆ ಮನವೇ, ಬದುಕೋಣ, ಜಗತ್ತನ್ನು ಜಯಿಸೋಣ!!
- ಸುಧಾ ಜಿ    

No comments:

Post a Comment