Thursday 13 July 2017

ಸುಮ್ಮನಿರಬೇಕಂತೆ - ಕವನ

ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಕತ್ತಲಲ್ಲಿ ಸತ್ಯ ಬಚ್ಚಿಟ್ಟು ಗೌಪ್ಯವಾಗಿಡಬೇಕಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಕತ್ತಲಿದ್ದಾಗ ಬೆಳಕನರಸಿದರೆ ನೆರಳಿಗೆ ನೋವಾಗುತ್ತದಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಮಾತುಗಳು ರೆಕ್ಕೆ ಬಡಿಯದಂತೆ ಅವನ್ನು ಎದೆಗೂಡಿನಲ್ಲೇ ಬಚ್ಚಿಡಬೇಕಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು

ಸತ್ಯಕ್ಕೆ ಮೌನದ ಬೇಡಿ ತೊಡಿಸಿ ಹಾಳುಕೂಪಕ್ಕೆ ದೂಡಬೇಕಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಗಿಡಗಳಿಗೆ ನೀರುಣಿಸಿದರೆ ಬೇರುಗಳಿಗೆ ಉಸಿರುಗಟ್ಟುತ್ತದಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಮೈತಬ್ಬಿ ನಾಗರ ಹೆಡೆಬಿಚ್ಚಿ ಹೂವ ಹಿಚುಕಿ ಹಿಂಡಿದರೆ
ಅದೇ ನಾಗರಕ್ಕೆ ಹಿತವಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ನಿದ್ದೆಯಲ್ಲಿದ್ದವರನ್ನು ಸದ್ದು ಮಾಡಿ ಎಬ್ಬಿಸಿದರೆ
ಅವರ ಕನಸುಗಳಿಗೆ ಇರುಸುಮುರುಸು ಆಗುತ್ತದಂತೆ. ಅದಕ್ಕೇ ಎಲ್ಲಾರೂ
ಸುಮ್ಮನಾಗಿರಬೇಕಂತೆ ಸುಮ್ಮನಿರಬೇಕು 
ಸ್ಫಟಿಕದಂತಹ ಸತ್ಯ ಮಾತನಾಡಿದರೆ ಎಲ್ಲರ ನೆಮ್ಮದಿ ಕೆಡುತ್ತದಂತೆ
ಅದಕ್ಕೇ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಚಿಗುರೇ ಎದ್ದು ಮರವ ನುಂಗಿದರೆ ಮರ ಹಣ್ಣು ಕೊಡುವುದಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು!!

ನಾನೂ ಸುಮ್ಮನಿರುತ್ತೇನೆ 

ಅಂತಃಸತ್ವ ಕಳೆದು ಕೊಂಡವರು
ಪಾಶಾಣ ಹೃದಯಿಗಳು
ನೀತಿಗೆಟ್ಟು ನಿತ್ಯ ಸತ್ಯದ ಹತ್ಯೆ ಮಾಡುವವರು
ಸುಳ್ಳಿನ ಕಂತೆ ಏಣಿಸುತ್ತಾ ಹಲ್ಲುಗಿಂಜುವವರು
ರೂಢಿಗಳ ರಾಡಿಯಲ್ಲೇ ಮಡಿ ಪಾಲಿಸುವವರು
ಸುಮ್ಮನಿರಲಿ
         
ಆಗ ನಾನೂ ಸುಮ್ಮನಿರುತ್ತೇನೆ.
  -          ಡಾ. ಸುಚೇತಾ ಪೈ, ಬಳ್ಳಾರಿ

No comments:

Post a Comment