Monday 17 July 2017

ಪುಟ್ಕಥೆಗಳು -


ಯಾವಾಗಲೂ ಮಂಕಾಗಿರುತ್ತಿದ್ದ ಮಡದಿಯನ್ನು "ಯಾಕ್ಹೀಗೆ, ನಿನಗೇನು ಕಡಿಮೆಯಾಗಿದೆ? ನೀ ಕೇಳಿದ್ದನೆಲ್ಲಾ ಕೊಡಿಸುತ್ತೀನಲ್ಲ" ಎಂದನು ಕೋಪದಿಂದ ಗಂಡ.  "ಎಲ್ಲಾ ಅತಿಯಾಗಿರುವುದೆ ಕಾರಣ" ಎಂದಳವಳು!!!


"ಎಲ್ಲರೊಡನೆ ಹೊಂದಿಕೊಂಡು ಹೋದರೆ ಬದುಕು ಸೊಗಸು"ಎಂದು ಮೊಮ್ಮಗಳಿಗೆ ಹೇಳಿದಳು ಅಜ್ಜಿ.  "ಇದನ್ನು ನಿನ್ನ ಮಗನಿಗೂ ಕಲಿಸಿದ್ದರೆ  ನನ್ನಮ್ಮನೂ ಇದೇ ಮನೆಯಲ್ಲಿರುತ್ತಿದ್ದಳು ನೊಂದು ನುಡಿದಳವಳು!!


"ತಪ್ಪು ಮಾಡಲು ಅವಕಾಶ ಕೊಡುವುದೂ ಒಂದು ದೊಡ್ಡ ತಪ್ಪು" ಎಂದ ಗೆಳತಿಯ ಮಾತಿನಿಂದ ಎಚ್ಚೆತ್ತು, ಇದುವರೆವಿಗು ಮೇಲಧಿಕಾರಿಯ ಕಿರುಕುಳವನ್ನು ಮೌನವಾಗಿ ಸಹಿಸಿ ಸಾಕಾಗಿದ್ದ ಅವಳು, ಅವನನ್ನು ಎದುರಿಸಲು ಸಜ್ಜಾದಳು!!


"ಗೊತ್ತಿದ್ದು ತಪ್ಪು ಏಕೆ ಮಾಡಿದೆ? ಮನೆಗೆ ತಡವಾಗಿ ಬಂದರೆ ಅಪ್ಪ ಬೈಯುತ್ತಾರೆ ಅಂತ ಗೊತ್ತಿಲ್ಲವಾ?" ಕೇಳಿದಳು ಮಗಳನ್ನು. "ಅಮ್ಮ, ಆದರೆ ಗೊತ್ತಿದ್ದೂ ದಿನಾ ಕುಡಿದು ತಡವಾಗಿ ಮನೆಗೆ ಬರುತ್ತಿದ್ದಾರಲ್ಲ ಅಪ್ಪ, ಅದು ಸರೀನಾ?" ಕೇಳಿದ ಅಲ್ಲೇ ಇದ್ದ ಮಗ!!


“ಹಿರಿಯರನ್ನು ಏಕೆ ರೇಗಿಕೊಂಡೆ, ನೀನು ನಡೆದುಕೊಂಡು ರೀತಿ ಸರೀನಾ? ಮಗಳನ್ನು ಪ್ರಶ್ನಿಸಿದಳು ಅಮ್ಮ. "ನೀತಿ ಬಿಟ್ಟು ನಡೆದ ಅವರಿಗೆ ಗೌರವ ಕೊಡಬೇಕಾ, ನೀನೆ ಹೇಳು" ಎಂದಳು ಮಗಳು.


ಪದೇ ಪದೇ ತುಳಿತಕ್ಕೆ ಒಳಗಾದ ಅವಳು ದಾರಿಕಾಣದೆ ಕುಳಿತ್ತಿದ್ದಳು. ಮಗಳು "ಉಳಿವಿಗಾಗಿ ಹೋರಾಟ" ಎಂದು ಓದುತ್ತಿದ್ದನ್ನು ಕೇಳಿ  ಎದ್ದು ನಿಂತಳು!!!


ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದ ಆಕೆ, ಗೆಳತಿಗೆ ಹೇಳಿದಳು "ಪ್ರೀತಿಗೆ ಬೆಲೆ ಕಟ್ಟಲಾಗದು." ಆದರೆ  ಬೆಲೆ ಕಟ್ಟಿಯೇ ಬಿಟ್ಟ ಆಕೆಯ ದತ್ತು ಮಗ!!


ಗಂಡ ಮತ್ತು ಮೈದುನಂದಿರ ದರ್ಪ, ದೌರ್ಜನ್ಯದಿಂದ ಬೇಸರಗೊಂಡು  ಸಾಯಲು ನಿರ್ಧರಿಸಿದಳು ಅವಳು. "ನಿನ್ನ ಮಗಳ ಗತಿಯೇನು? ಅವಳೂ ನಿನ್ನಂತಾಗಬೇಕೆ?" ಪ್ರಶ್ನಿಸಿದಳು ಗೆಳತಿ.  ತನ್ನ ನಿಲುವನ್ನು ಬದಲಿಸಿಕೊಂಡ ಆಕೆ ಪ್ರತಿಭಟಿಸಲು ತಯಾರಾದಳು!! 


"ನನ್ನನ್ನು ನಂಬು ನಾನು ಏನೂ ತಪ್ಪು  ಮಾಡಿಲ್ಲ " ಎಂದು ಎಷ್ಟು  ಹೇಳಿದರೂ ಕೇಳುತ್ತಿರಲಿಲ್ಲ ಅವಳನ್ನು, ಮದುವೆಯಾಗಬೇಕಿದ್ದ ಹುಡುಗ." ನಂಬಿಕೆಯೇ ಇಲ್ಲ ಎಂದ ಮೇಲೆ ಮದುವೆ ಏಕೆ?" ಅವನನ್ನು ಬಿಟ್ಟು ಹೊರಟಳವಳು!!


"ಯಾವತ್ತೂ  ಎದುರುತ್ತರ ಕೊಡದಿದ್ದವಳು ಇಂದೇಕೆ ಈ ರೀತಿ ಮಾತನಾಡುತ್ತಿರುವೆ?" ಕೇಳಿದ ಗಂಡ ಮಡದಿಯನ್ನು ಕೋಪದಿಂದ.  "ಬದಲಾವಣೆ ಈ ಲೋಕದ ನಿಯಮ, ನಾನೂ ಅದರಲೊಬ್ಬಳಲ್ಲವೇ?" ಕೇಳಿದಳು!!"



 - ವಿಜಯಲಕ್ಷ್ಮಿ ಎಂ ಎಸ್      

No comments:

Post a Comment