Sunday 16 July 2017

ಅನುವಾದಿತ ಕವಿತೆ - ಎವೆಲಿನ್ ರೋಸಳ ದಂತಕಥೆ


ವಸಂತ ಬಂದಾಗ, ಕಡುನೀಲಿ ಕಡಲಾದಾಗ
ಬಡಿಯುತ್ತಿತ್ತು ಮೃದು ಹೃದಯ ವೇಗದಿಂದಾಗ
ಹಡಗನೇರಿ ಬಂದಳು ಕಡೆಯ ದೋಣಿಯಲಿಳಿದವಳು
ಎವಲಿನ್ ರೋಸ ಎನ್ನುವ ಹುಡುಗಿಯೊಬ್ಬಳು 

ಚರ್ಮದ ಮೇಲೆ ಹೊದೆದಿದ್ದಳು, ಮೆರುಗು
ಕೂದಲ ಧಿರಸು; ದಿವ್ಯ ಸೌಂದರ್ಯ ಅದಕೆ.
ಚಿನ್ನವಿಲ್ಲ, ಆಭರಣವಿಲ್ಲ, ಮೈಮೇಲೆ; ಅಚ್ಚರಿಯ
ವೇಣಿಯ ಹೊರತು ಇಲ್ಲ ಬೇರೆ ಹೊದಿಕೆ.

“ಹೊ, ಕ್ಯಾಪ್ಟನ್, ಕರೆದೊಯ್ಯಿ ನನ್ನನು,
ನಿಮ್ಮೊಂದಿಗೆ, ಪವಿತ್ರ ನಾಡಿಗೆ. ನಾನು
ಹೋಗಲೇಬೇಕು ಕ್ರಿಸ್ತನಿರುವೆಡೆಗೆ.”
“ಕರೆದೊಯ್ಯುತ್ತೇವೆ, ನಾವು ಪೆದ್ದರಲ್ಲವೆ,
ನೀನೊ ಚೆಲುವೆಯರಲ್ಲಿ ಬಲು ಚೆಲುವೆ.”

“ಬಹುಮಾನ ನೀಡುವನು ಆ ದೇವನು,
ಬಡವರಲ್ಲಿ ಬಲು ಬಡವಿ ನಾನು.
ನನ್ನಾತ್ಮ ಸೇರಿಹುದು ದೊರೆ ಕ್ರಿಸ್ತನಿಗೆ.”
“ನಿನ್ನ ಸವಿದೇಹವನ್ನೊಪ್ಪಿಸು ನಮಗೆ,
ನಿನ್ನ ದೇವ ಕೊಡಲಾರ ಹಡಗ ಬಾಡಿಗೆ;
ಅವನು ಸತ್ತು ಬಲು ಸಮಯವಾಯ್ತು ಅದಕೆ.”

ಮಳೆ ಗಾಳಿಯಲಿ ಪಯಣ ಬೆಳೆಸಿದರು,
ಪ್ರೀತಿಸಿದರೆಲ್ಲರೂ ಎವೆಲಿನ್ ರೋಸಳನು.
ಬ್ರೆಡ್ಡ ತಿಂದಳು, ಮದ್ಯ ಕುಡಿದಳು, ಎಲ್ಲ ಅವರದು;
ತಿಂದು ಕುಡಿದು ಅಳುತ್ತಿದ್ದಳು ಮುದ್ದು ರೋಸಳು.

ಹಗಲು ರಾತ್ರಿಯೆನ್ನದೆ ಕುಣಿಕುಣಿದರು
ಪ್ರೀತಿಸಿದರೆಲ್ಲರೂ ಎವೆಲಿನ್ ರೋಸಳನು.
ಬ್ರೆಡ್ಡ ತಿಂದಳು, ಮದ್ಯ ಕುಡಿದಳು, ಎಲ್ಲ ಅವರದು;
ತಿಂದು ಕುಡಿದು ಅಳುತ್ತಿದ್ದಳು ಮುದ್ದು ರೋಸಳು.

ಹಗಲು ರಾತ್ರಿಯೆನ್ನದೆ ಕುಣಿಕುಣಿದರು,
ಚುಕ್ಕಾಣಿಯನು ಅನಾಥ ಮಾಡಿದರು.
ಸವಿಯಾದವಳು, ಬಲು ಮೃದು ರೋಸ
ಅವರೋ, ಕಲ್ಲಿಗಿಂತ ಕಠಿಣರು.

ವಸಂತ ಕಳೆಯಿತು, ಬೇಸಗೆ ಹೋಯಿತು,
ಮಸುಕು ಬೆಳಕಲಿ, ಕೂವೆಯಿಂದ ಕೂವೆಗೆ 
ಹರಿದ ಶೂಗಳಲಿ, ರಾತ್ರಿಯಲ್ಲಿ ಓಡುತ್ತಿದ್ದಳು
ಶಾಂತ ಕಡಲ ತೀರವನ್ನು ಹುಡುಕುತ್ತಿದ್ದಳು.
ಪಾಪದ ಹುಡುಗಿ ಎವೆಲಿನ್ ರೋಸ.

ಹಗಲು ಕುಣಿದಳು, ರಾತ್ರಿ ಕುಣಿದಳು
ಜೀವವಿಲ್ಲ, ರೋಗಿಯಾದಳು.
‘ಓ ಕ್ಯಾಪ್ಟನ್, ಹೋಗುವುದೆಂದಿಗೆ
ನನ್ನ ದೊರೆಯ ಬಳಿಗೆ?’

ಅವಳ ತೊಡೆಯ ಮೇಲೆ ಮಲಗಿ ಕ್ಯಾಪ್ಟನ್
ಒಮ್ಮೆ ನಕ್ಕನು, ಮುತ್ತನೊಂದಿತ್ತನು.
“ನಾವಲ್ಲಿ ಸೇರದಿರೆ, ಕಾರಣ ಯಾರೆಂದು ಕೇಳಿದರೆ,
ಕಾರಣ ಅವಳೇ, ಆ ಎವೆಲಿನ್ ರೋಸಳೆ.”

ಹಗಲು ಕುಣಿದಳು, ರಾತ್ರಿ ಕುಣಿದಳು,
ಸಾಯುವುದಕೂ ಶಕ್ತಿಯಿಲ್ಲ.
ಕ್ಯಾಪ್ಟನಿಗಾಗಲಿ, ಯುವಕನಿಗಾಗಲಿ ಅವರೆಲ್ಲರಿಗೂ
ಅವಳೀಗ ರಸಹಿಂಡಿದ ಕಬ್ಬಿನ ಜಲ್ಲೆ.

ತನ್ನ ಚರ್ಮದ ಮೇಲೊಂದು ಹೊದ್ದಿದ್ದಳು
ಒಣಗಿ ಒರಟಾದ ರೇಷ್ಮೆ ಬಟ್ಟೆ,
ಅಂದಗೆಟ್ಟ ಹಣೆಯ ಮೇಲೆ ಸುತ್ತಿತ್ತು
ಕೊಳೆಯಾದ ಸಿಕ್ಕುಗಟ್ಟಿದ ಕೂದಲು.

“ಓ ನನ್ನ ದೊರೆಯೆ ಬರಲಾರೆ ನಿನ್ನ ಬಳಿ,
ನಿನಗೊಪ್ಪಿಸಲಾರೆ, ನನ್ನದು ಪಾಪಿಷ್ಠ ದೇಹ.
ಹಾಳು ಸೂಳೆಯ ಬಳಿ ಬರಬೇಡ
ನಾನೊಬ್ಬ ಪಾಪಿಷ್ಠ ಹೆಂಗಸು.”

ಕೂವೆಯಿಂದ ಕೂವೆಗೆ ಹಾರಿದಳು ಗಂಟೆಗಟ್ಟಲೆ
ಕಾಲು, ಹೃದಯಗಳೆರೆಡೂ ಹರಿದಿದ್ದವು.
ಯಾರೂ ನೋಡದಿದ್ದ ಒಂದು ರಾತ್ರಿ
ತನ್ನ ತೀರವ ಹುಡುಕಿ ಹೊರಟಳು.

ಅದು ಚಳಿ ತುಂಬಿದ ಮಾಘ ಮಾಸ
ಕುಳಿರ್ ಕಡಲಲಿ ಈಜಿದಳು ದೂರ ದೂರ;
ಮರಗಳಿಂದ ಚಿಗುರೊಡೆಯಲೆಂದರೆ
ವಸಂತ ಮಾಸವಿನ್ನೂ ಬಲುದೂರ.

ಕಡುನೀಲಿ ಕಡಲ ತೆರೆಗಳಿಗೆ ಮೈಯನೊಡ್ಡಿದಳು
ತೊಳೆದವು ಅವಳನು ಬೆಳ್ಳಗೆ, ಕಾಂತಿಯೊಂದಿಗೆ.
ಅವಳು ಸೇರಿದಳು ದೊರೆಯ ನಾಡಿಗೆ,
ಕ್ಯಾಪ್ಟನ್ ಬರುವ ಮುನ್ನ ವೇಳೆಯೊಳಗೆ.

ನಾಕದ ಬಾಗಿಲ ಬಳಿ ಬಂದಳು ವಸಂತದಲಿ,
ಬಾಗಿಲು ಮುಚ್ಚಿದನು ಸಂತ ಪೀಟರನು,
“ದೇವರೇ ಹೇಳಿಹನು, ಅವನಿಗೆ ಬೇಡ
ಈ ಪಾಪದ ಎವೆಲಿನ್ ರೋಸ.”

ನರಕದ ಬಾಗಿಲ ಬಳಿ ಬಿದ್ದಾಗ ಅವಳು
ಬಾಗಿಲಿಗೆ ಅಗಳಿಯಿದ್ದುದ ಕಂಡಳು.
ಅರಚಿತು ದೆವ್ವ, “ನನಗೆ ಬೇಡ,
ಈ ಪಾಪದ ಎವೆಲಿನ್ ರೋಸ.”

ಎತ್ತ ಹೋಗಲೆಂದರಿಯದೆ ಅಲೆಯುತಿಹಳು,
ಗಾಳಿಯೊಳು, ತಾರೆಗಳೇ ತುಂಬಿಹ ಆಕಾಶದಡಿ,
ಹೊಲ ದಾಟುವುದ ಕಂಡೆನೊಂದು ಸಂಜೆಯಲಿ,
ಎಡವುತ್ತಿದ್ದಳು ಹೆಜ್ಜೆ ಹೆಜ್ಜೆಗೂ, ನೆಟ್ಟಗೆ ನಿಲಲಾರಳು.
ನೆಟ್ಟಗೆಂದೂ ನಿಲಲಿಲ್ಲ, ಪಾಪದ ಕೂಸು ಎವೆಲಿನ್ ರೋಸ.

- ಮೂಲ: ಬಟ್ರೋಲ್ಟ್ ಬ್ರೆಕ್ಟ್
ಅನುವಾದ: ಎಸ್.ಎನ್.ಸ್ವಾಮಿ 

No comments:

Post a Comment