Thursday 13 July 2017

ಕವನ - ಅಸಹಾಯಕಳು



ಹೊರಗೆಡವಲಿ ಹೇಗೆ ನನ್ನೆದೆಯ ನೋವನ್ನು
ಹೇಗೆ ಸುಧಾರಿಸಲಿ ಈ ನನ್ನ ಮಗುವನ್ನು
ಬತ್ತಿದಾ ಎದೆಯನು ಜಗ್ಗಿ ರಕ್ತ ಮೆತ್ತಿದ
ಬಾಯನು ತೆರೆದು ಕೀರಲು ದನಿಯಲಿ
ಚೀರುತಿದೆ ಪ್ರಾಣಹೋಗುವ ಹಾಗೆ

ಕತ್ತಲು ತುಂಬಿದ ಗುಡಿಸಲಿನ ಒಳಗಡೆ
ತಲೆ ನೇವರಿಸುತ ಎದೆಗವಚಿ ಮಗುವನ್ನು
ಕತ್ತು ಸೆಣೆದಳು ಜೀವ ಹೋದನುಭವದಿಂದ
ಎದೆಯ ನೋವಿಗೆ ಕಣ್ಣೀರು ಸುರಿಯುತಿದೆ
ಬಿದ್ದು ಒದ್ದಾಡಿದಳು ಮಗುವನೆಸೆದು ಕೆಳಗೆ

ಈ ಪಾಪಿ ಮಡಿಲಲ್ಲಿ ಏಕೆ ಹುಟ್ಟಿದೆ ನೀನು
ಹಸಿವನೀಗಲು ಕೂಡ ಶಕ್ತಿಯಿಲ್ಲದ ನಾನು
ಹೇಗೆ ಸುಧಾರಿಸಲಿ ಈ ನನ್ನ ಮಗುವನ್ನು

ಹಾಲು ತರುವೆನೆಂದು ಹೊರನಡೆದನು ತಂದೆ
ತೂಗುತಿಹನು ನೇಣ ಕೊರಳಿಗೇರಿಸಿ ಹೊರಗೆ
ಹೋಟಲಿನ ಲೋಟ ತೊಳೆವ ನಿನ್ನಣ್ಣ
ಬರುವನು ಹಾಲನಿಡಿದು ಅಳಬೇಡ

ಬಿದಿರು ಬೊಂಬೆಯನಿಡಿದು ಆಡುತ ಮಲಗು
ಕನಸಿನಲಿ ಬರುವುದು ನೀ ಬಯಸುವ ಹಾಲು
ಬೇಕಾದಷ್ಟು ಕುಡಿದು ತೃಪ್ತಳಾಗು

ನಾ ಕೊಡುವೆನು ಹಾಲ ಈ ನಿನ್ನ ಕಂದನಿಗೆ
ಈ ರಾತ್ರಿ ಬರುವೆಯ ನೀ ನನ್ನ ಜೊತೆಗೆ
ಎಂದ ದುರುಳನ ಮಾತು ಕಿವಿಯ ತಮಟೆಯನೊಡೆದು
ನರವ್ಯೂಹ ಬಿಗಿದಿದೆ ಕಣ್ಣು ಕುರುಡಾಗಿದೆ
ಇದಕಿಂತ ಸಾವೇ ಮೇಲು

ಕತ್ತನಿಸುಕಲು ಸಿದ್ಧವಾಯಿತು ನೇಣು
ಸೆರಗನೆಳೆಯಿತು ಮಗುವು ಅಳುತ
ಅಮ್ಮ ಹಸಿವು ಎದೆಯ ಕೊಡು ಬೇಗ

ಈಟಿಯಿಂದಿರಿದಳು, ಆತ್ಮವನು ಕೊಂದಳು
ಹಾಲಿಗಾಗಿ ಪರರ ಬಳಿಗೆ ನಡೆದಳು
ಬಡವರ ಮಗಳೀಕೆ ಅಸಹಾಯಕಳು
ಶ್ರೀಮಂತರಡಿಗಳಡಿ ಹುಡಿಯಾಗಿ ಹೋದಳು
  - ನರಸಿಂಹರಾಜು    

No comments:

Post a Comment