Showing posts with label ಡಾ. ಸುಚೇತಾ ಪೈ. Show all posts
Showing posts with label ಡಾ. ಸುಚೇತಾ ಪೈ. Show all posts

Thursday, 14 September 2017

ಕವನ - ಮಗುವಿನಳಲು




ಮೀಸೆ ಹೊತ್ತ ಮೊಣಕೈಯೊಂದು
ಕಣ್ಣುಗುಡ್ಡೆಗಳನು ಒದ್ದಾಗ
ಸಣ್ಣಗೆದ್ದ ದನಿಯೊಂದು
ಹನಿಹನಿಯಾಗಿ ಉದುರಿ
ಕಪಾಳ ಕಂಪನದಿಂದ ಅದುರುತ್ತಾ
ಕುಸಿದು ಬೀಳುವ ಮಾಂಸದ ಮುದ್ದೆಯ ಬಳಿ
ಗೆದ್ದ ಭಾವದಿಂದ ಬೀಗುವ
ಮತ್ತೇರಿದ ಆ ಕಿವಿಗೆ ಕೇಳಿದ್ದು
"ದೇವರೇ ನನ್ನಮ್ಮನನ್ನು ಕಾಪಾಡು"


ಕಣ್ಣೀರ ಹೀರುತ್ತ ಹೆಪ್ಪುಗಟ್ಟಿದ ನಸುಕಿಗೆ
ಕೇಳುತ್ತದೆ ದಿನದಿನವೂ
ಅಳಬಾರದ ಅಳು ಬಾರದ
ಕೀರಲು ದನಿಯ ಅಳಲೊಂದು
"ದೇವರೇ ನನ್ನಮ್ಮನನ್ನು ಕಾಪಾಡು".

- ಡಾ. ಸುಚೇತಾ ಪೈ


Saturday, 19 August 2017

ಅನುವಾದಿತ ಕವಿತೆ - ಆ ಹೆಣ್ಣು ನಾನಲ್ಲ



ಕಾಲು ಚೀಲ ಬೂಟುಗಳನ್ನು ನಿನಗೆ ಮಾರುತ್ತಿರುವ ಆ ಹೆಣ್ಣು ನಾನಲ್ಲ!

ನೆನಪಿದೆಯೇ ನಿನಗೆ
ನಿನ್ನ ಕಲ್ಲಿನ ಗೋಡೆಗಳಲ್ಲಿ ನನ್ನನ್ನು  ಹುದುಗಿಸಿಟ್ಟು,
ನೀನು ತಂಗಾಳಿಯಂತೆ ಸ್ವಚ್ಛಂದವಾಗಿ ತಿರುಗಾಡುತ್ತಿದ್ದೆ
ಆಗ ನಿನಗೆ ತಿಳಿದಿರಲಿಲ್ಲ
ನನ್ನ ದನಿಯನ್ನು ಕಲ್ಲುಗಳಡಿ ಉಡುಗಿಸಿಡಲಾಗದೆಂದು

ಸಂಪ್ರದಾಯ ಪರಂಪರೆಗಳ ಭಾರದಡಿ ನನ್ನನ್ನು ಹೊಸಕಿ ಹಾಕಿ ಹೋಗಿದ್ದೆಯಲ್ಲಾ
ನಿನಗಾಗ ತಿಳಿದಿರಲಿಲ್ಲ
ಕತ್ತಲಲ್ಲಿ ಬೆಳಕನ್ನು ಬಂಧಿಸಿಡಲಾಗದೆಂದು

ನೆನಪಿದೆಯೇ ನಿನಗೆ
ನನ್ನೊಡಲಿನಿಂದ ಹೂಗಳನ್ನು ಕಿತ್ತುಕೊಂಡು
ಅಲ್ಲಿ ಮುಳ್ಳು, ಕೆಂಡಗಳನ್ನು ನೆಟ್ಟು ಹೋಗಿ ಬಿಟ್ಟಿದ್ದೆಯಲ್ಲಾ
ನಿನಗಾಗ ತಿಳಿದಿರಲಿಲ್ಲ
ಸಂಕೋಲೆಗಳಿಂದ ನನ್ನ ಸುವಾಸನೆಯನ್ನು ಅದುಮಿಡಲಾಗದೆಂದು

ನನ್ನದೇ  ಶೀಲದ ಹೆಸರಿನಲ್ಲಿ
ನನ್ನನ್ನು ಮಾರಿದ್ದೆ, ಕೊಂಡು ಕೊಂಡಿದ್ದೆಯಲ್ಲಾ
ಆಗ ನಿನಗೆ ತಿಳಿದಿರಲಿಲ್ಲ
ಮುಳುಗುವಾಗಲೂ ನಾನು ನೀರ ಮೇಲೆ ನಡೆಯಬಲ್ಲೆನೆಂದು

ಒಂದು ಭಾರ ಕಳೆಯಲೆಂದು
ಮದುವೆಯೊಂದು ಮಾಡಿ ಹೊರಗಟ್ಟಿ ಬಿಟ್ಟಿದ್ದೆಯಲ್ಲಾ
ಆ ಹೆಣ್ಣು ನಾನೇ

ಆಗ ನಿನಗೆ ತಿಳಿದಿರಲಿಲ್ಲ
ಬಂದಿ ಮನಸ್ಸುಗಳ ನಾಡಿಗೆ ಎಂದಿಗೂ ಮುಕ್ತಿ ಇಲ್ಲವೆಂದು

ನನ್ನ ಶೀಲ, ನನ್ನ ತಾಯ್ತನ,ನನ್ನ ನಿಷ್ಠೆ ಗಳನ್ನು ಹಾಗೂ ನನ್ನನ್ನೂ ಸರಕಾಗಿಸಿ
ಮಾರಾಟ ಮಾಡಿದ್ದೆ

ಈಗ ನಾನು ಸ್ವತಂತ್ರವಾಗಿ ಹೂವಾಗಿ ಅರಳುವ ಕಾಲ ಕೂಡಿ ಬಂದಿದೆ
ಅಲ್ಲಿ ಗೋಡೆಯ ಮೇಲೆ
ಭಿತ್ತಿಚಿತ್ರ ದಲ್ಲಿ ಅರೆಬೆತ್ತಲಾಗಿ ನಿಂತು
ಕಾಲುಚೀಲ ಬೂಟುಗಳನು ಮಾರುತ್ತಿರುವವಳು ನಾನಲ್ಲ

ಇಲ್ಲ, ಇಲ್ಲ,  ಆ ಹೆಣ್ಣು ನಾನಲ್ಲ

—--------
ಕೀಶ್ವರ್ ನಹೀದ್ (ಪಾಕಿಸ್ತಾನಿ ಲೇಖಕಿ)
ಅನುವಾದ : ಡಾ.ಸುಚೇತಾ ಪೈ

Thursday, 13 July 2017

ಸುಮ್ಮನಿರಬೇಕಂತೆ - ಕವನ



ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಕತ್ತಲಲ್ಲಿ ಸತ್ಯ ಬಚ್ಚಿಟ್ಟು ಗೌಪ್ಯವಾಗಿಡಬೇಕಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಕತ್ತಲಿದ್ದಾಗ ಬೆಳಕನರಸಿದರೆ ನೆರಳಿಗೆ ನೋವಾಗುತ್ತದಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಮಾತುಗಳು ರೆಕ್ಕೆ ಬಡಿಯದಂತೆ ಅವನ್ನು ಎದೆಗೂಡಿನಲ್ಲೇ ಬಚ್ಚಿಡಬೇಕಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು

ಸತ್ಯಕ್ಕೆ ಮೌನದ ಬೇಡಿ ತೊಡಿಸಿ ಹಾಳುಕೂಪಕ್ಕೆ ದೂಡಬೇಕಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಗಿಡಗಳಿಗೆ ನೀರುಣಿಸಿದರೆ ಬೇರುಗಳಿಗೆ ಉಸಿರುಗಟ್ಟುತ್ತದಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಮೈತಬ್ಬಿ ನಾಗರ ಹೆಡೆಬಿಚ್ಚಿ ಹೂವ ಹಿಚುಕಿ ಹಿಂಡಿದರೆ
ಅದೇ ನಾಗರಕ್ಕೆ ಹಿತವಂತೆ 
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ನಿದ್ದೆಯಲ್ಲಿದ್ದವರನ್ನು ಸದ್ದು ಮಾಡಿ ಎಬ್ಬಿಸಿದರೆ
ಅವರ ಕನಸುಗಳಿಗೆ ಇರುಸುಮುರುಸು ಆಗುತ್ತದಂತೆ. ಅದಕ್ಕೇ ಎಲ್ಲಾರೂ
ಸುಮ್ಮನಾಗಿರಬೇಕಂತೆ ಸುಮ್ಮನಿರಬೇಕು 
ಸ್ಫಟಿಕದಂತಹ ಸತ್ಯ ಮಾತನಾಡಿದರೆ ಎಲ್ಲರ ನೆಮ್ಮದಿ ಕೆಡುತ್ತದಂತೆ
ಅದಕ್ಕೇ ಸುಮ್ಮನಿರಬೇಕಂತೆ ಸುಮ್ಮನಿರಬೇಕು
ಚಿಗುರೇ ಎದ್ದು ಮರವ ನುಂಗಿದರೆ ಮರ ಹಣ್ಣು ಕೊಡುವುದಂತೆ
ಅದಕ್ಕೇ ಎಲ್ಲಾರೂ ಸುಮ್ಮನಿರಬೇಕಂತೆ ಸುಮ್ಮನಿರಬೇಕು!!


ನಾನೂ ಸುಮ್ಮನಿರುತ್ತೇನೆ 

ಅಂತಃಸತ್ವ ಕಳೆದು ಕೊಂಡವರು
ಪಾಶಾಣ ಹೃದಯಿಗಳು
ನೀತಿಗೆಟ್ಟು ನಿತ್ಯ ಸತ್ಯದ ಹತ್ಯೆ ಮಾಡುವವರು
ಸುಳ್ಳಿನ ಕಂತೆ ಏಣಿಸುತ್ತಾ ಹಲ್ಲುಗಿಂಜುವವರು
ರೂಢಿಗಳ ರಾಡಿಯಲ್ಲೇ ಮಡಿ ಪಾಲಿಸುವವರು
ಸುಮ್ಮನಿರಲಿ
         
ಆಗ ನಾನೂ ಸುಮ್ಮನಿರುತ್ತೇನೆ.
  -          ಡಾ. ಸುಚೇತಾ ಪೈ, ಬಳ್ಳಾರಿ

Sunday, 7 May 2017

ಕವನ - ನನ್ನ ತಂಗಿ


ತೊದಲು ನುಡಿಗಳ ಆಡುತ್ತಿದ್ದಳು
ಬೊಂಬೆಗಾಗಿ ಜಗಳಾಡುತ್ತಿದ್ದಳು
ಈಗ ಸಿಡಿನುಡಿಗಳ ಆಡುತಾಳೆ
ನ್ಯಾಯಕಾಗಿ ಹೋರಾಡುತಾಳೆ

ಸಣ್ಣ ನೋವಿಗೂ ಸುಳ್ಳು ಏಟಿಗೂ
ಭಯದಿಂದ ಅಳುತ್ತಿದ್ದವಳು
ಈಗ ಪರರ ನೋವರಿತು
ಅವರ ಕಂಬನಿ ಒರೆಸುತ್ತಾಳೆ

ಬರೆಯಲಾರೆ ಅರಿಯಲಾರೆ
ಇನ್ನು ಶಾಲೆಗೆ ಹೋಗಲಾರೆ ಎನ್ನುತ್ತಿದ್ದಳು
ಈಗ  ತಾ ಕಲಿತದನ್ನು ಇತರರಿಗೂ ಹೇಳುತ್ತಾಳೆ
ಅರಿವು ಮೂಡಿಸಿ ದಾರಿ ತೋರುತ್ತಾಳೆ

ನಿನ್ನೆ ಕತ್ತಲೆಗೆ ಅಂಜುತ್ತಿದ್ದಳು
ಇಂದು ಕತ್ತಲೆ ಮೀರಿ ಬೆಳಕು ಹರಡುತ್ತಾಳೆ 
ನಿನ್ನೆ ನಮ್ಮ ಮನೆಯ ಮುದ್ದು ಮಗಳು
ಇಂದು ಎಲ್ಲರ ಮನೆಮಗಳಾಗಿ ಬಿಟ್ಟಿದ್ದಾಳೆ.
- ಡಾ. ಸುಚೇತಾ ಪೈ