Saturday 19 August 2017

ಅನುವಾದಿತ ಕವಿತೆ - ಆ ಹೆಣ್ಣು ನಾನಲ್ಲ



ಕಾಲು ಚೀಲ ಬೂಟುಗಳನ್ನು ನಿನಗೆ ಮಾರುತ್ತಿರುವ ಆ ಹೆಣ್ಣು ನಾನಲ್ಲ!

ನೆನಪಿದೆಯೇ ನಿನಗೆ
ನಿನ್ನ ಕಲ್ಲಿನ ಗೋಡೆಗಳಲ್ಲಿ ನನ್ನನ್ನು  ಹುದುಗಿಸಿಟ್ಟು,
ನೀನು ತಂಗಾಳಿಯಂತೆ ಸ್ವಚ್ಛಂದವಾಗಿ ತಿರುಗಾಡುತ್ತಿದ್ದೆ
ಆಗ ನಿನಗೆ ತಿಳಿದಿರಲಿಲ್ಲ
ನನ್ನ ದನಿಯನ್ನು ಕಲ್ಲುಗಳಡಿ ಉಡುಗಿಸಿಡಲಾಗದೆಂದು

ಸಂಪ್ರದಾಯ ಪರಂಪರೆಗಳ ಭಾರದಡಿ ನನ್ನನ್ನು ಹೊಸಕಿ ಹಾಕಿ ಹೋಗಿದ್ದೆಯಲ್ಲಾ
ನಿನಗಾಗ ತಿಳಿದಿರಲಿಲ್ಲ
ಕತ್ತಲಲ್ಲಿ ಬೆಳಕನ್ನು ಬಂಧಿಸಿಡಲಾಗದೆಂದು

ನೆನಪಿದೆಯೇ ನಿನಗೆ
ನನ್ನೊಡಲಿನಿಂದ ಹೂಗಳನ್ನು ಕಿತ್ತುಕೊಂಡು
ಅಲ್ಲಿ ಮುಳ್ಳು, ಕೆಂಡಗಳನ್ನು ನೆಟ್ಟು ಹೋಗಿ ಬಿಟ್ಟಿದ್ದೆಯಲ್ಲಾ
ನಿನಗಾಗ ತಿಳಿದಿರಲಿಲ್ಲ
ಸಂಕೋಲೆಗಳಿಂದ ನನ್ನ ಸುವಾಸನೆಯನ್ನು ಅದುಮಿಡಲಾಗದೆಂದು

ನನ್ನದೇ  ಶೀಲದ ಹೆಸರಿನಲ್ಲಿ
ನನ್ನನ್ನು ಮಾರಿದ್ದೆ, ಕೊಂಡು ಕೊಂಡಿದ್ದೆಯಲ್ಲಾ
ಆಗ ನಿನಗೆ ತಿಳಿದಿರಲಿಲ್ಲ
ಮುಳುಗುವಾಗಲೂ ನಾನು ನೀರ ಮೇಲೆ ನಡೆಯಬಲ್ಲೆನೆಂದು

ಒಂದು ಭಾರ ಕಳೆಯಲೆಂದು
ಮದುವೆಯೊಂದು ಮಾಡಿ ಹೊರಗಟ್ಟಿ ಬಿಟ್ಟಿದ್ದೆಯಲ್ಲಾ
ಆ ಹೆಣ್ಣು ನಾನೇ

ಆಗ ನಿನಗೆ ತಿಳಿದಿರಲಿಲ್ಲ
ಬಂದಿ ಮನಸ್ಸುಗಳ ನಾಡಿಗೆ ಎಂದಿಗೂ ಮುಕ್ತಿ ಇಲ್ಲವೆಂದು

ನನ್ನ ಶೀಲ, ನನ್ನ ತಾಯ್ತನ,ನನ್ನ ನಿಷ್ಠೆ ಗಳನ್ನು ಹಾಗೂ ನನ್ನನ್ನೂ ಸರಕಾಗಿಸಿ
ಮಾರಾಟ ಮಾಡಿದ್ದೆ

ಈಗ ನಾನು ಸ್ವತಂತ್ರವಾಗಿ ಹೂವಾಗಿ ಅರಳುವ ಕಾಲ ಕೂಡಿ ಬಂದಿದೆ
ಅಲ್ಲಿ ಗೋಡೆಯ ಮೇಲೆ
ಭಿತ್ತಿಚಿತ್ರ ದಲ್ಲಿ ಅರೆಬೆತ್ತಲಾಗಿ ನಿಂತು
ಕಾಲುಚೀಲ ಬೂಟುಗಳನು ಮಾರುತ್ತಿರುವವಳು ನಾನಲ್ಲ

ಇಲ್ಲ, ಇಲ್ಲ,  ಆ ಹೆಣ್ಣು ನಾನಲ್ಲ

—--------
ಕೀಶ್ವರ್ ನಹೀದ್ (ಪಾಕಿಸ್ತಾನಿ ಲೇಖಕಿ)
ಅನುವಾದ : ಡಾ.ಸುಚೇತಾ ಪೈ

No comments:

Post a Comment