Saturday 19 August 2017

ಪುಟ್ಕಥೆಗಳು

ಪುಟ್ಕಥೆ - 1
"ನೀನು ಹೇಳುವಂತೆ ಹಕ್ಕುಗಳಿಗಾಗಿ ಹೋರಾಡಿದರೆ ಸಂಸಾರ ಕಿತ್ತುಹೋಗುತ್ತಲ್ಲ" ಅಕ್ಕ ತಮ್ಮನಿಗೆ ಹೇಳಿದಳು.
"ಹಾಗಿದ್ದರೆ ಅದು ಸಂಸಾರವಲ್ಲ ಅಕ್ಕ, ವ್ಯವಹಾರ" ಉತ್ತರಿಸಿದ.

ಪುಟ್ಕಥೆ - 2
"೧೪ ವರ್ಷದ ಹೆಣ್ಣುಮಗಳೊಬ್ಬಳ ಫೋನ್ ಕರೆ ೧೦ ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಿಂದ ರಕ್ಷಿಸಿತು." ಸುದ್ದಿಯನ್ನು ಓದಿದಳು ಆಕೆ.
 "೧೪ ವರ್ಷಕ್ಕೆ ಆ ಅಸಹಾಯಕ ಹುಡುಗಿ ಧೈರ್ಯದಿಂದ ಹೋರಾಡಬಹುದಾದರೆ ೨೪ ವರ್ಷದ ಉದ್ಯೋಗಸ್ಥೆಯಾದ ನಾನು ಎದುರಿಸಲಾರೆನೆ?" ತನ್ನನ್ನೇ ತಾನು ಪ್ರಶ್ನಿಸಿಕೊಂಡಳು ಆಕೆ. ಮಾರನೇ ಬೆಳಿಗ್ಗೆ ಗಂಡನಿಗೆ ಹೇಳಿದಳು, "ನಾನು ಅಬಾರ್ಷನ್ ಮಾಡಿಸಿಕೊಳ್ಳೋಲ್ಲ, ನನಗೆ ನನ್ನ ಮಗಳು ಬೇಕು!!"

ಪುಟ್ಕಥೆ - 3
"ಮೈತುಂಬ ಒಡವೆ ಮಾಡಿಸಿಕೊಟ್ಟಿದ್ದೀನಿ, ಬೀರು ತುಂಬ ರೇಷ್ಮೆ ಸೀರೆಗಳಿವೆ, ಇರಲು ಬಂಗಲೆ, ಓಡಾಡಲು ಕಾರು, ಆಳುಕಾಳುಗಳು ಎಲ್ಲ ಕೊಟ್ಟಿದ್ದೇನೆ, ಇನ್ನೇನು ಬೇಕು ನಿನಗೆ?" ಕೋಪದಿಂದ ಕೇಳಿದ ಗಂಡ.
"ಗೌರವ" ತಣ್ಣಗೆ ನುಡಿದಳು ಹೆಂಡತಿ!!

ಪುಟ್ಕಥೆ - 4
"ಯಾಕೊ ಕಿರುಚಿ ಅಳ್ತಾ ಇದ್ಯಾ, ನೀನೇನು ಹುಡುಗೀನಾ?" ಗದರಿದ ಅಪ್ಪ, ಏನೋ ಚುಚ್ಚಿದೆಯೆನಿಸಿ ಕಿಟಾರ್ ಎಂದು ಕಿರುಚಿದ. "ಗೊತ್ತಾಯ್ತ ಅಪ್ಪ ನಾನೇಕೆ ಅತ್ತೆ ಅಂತ" ಕೈಯಲ್ಲಿ ದೊಡ್ಡ ಪಿನ್ ಹಿಡಿದಿದ್ದ ಮಗ!!

ಪುಟ್ಕಥೆ - 5
"ನನ್ನನ್ನು ಈ ಭೂಮಿಗೆ ತಂದಿದ್ದು ನೀನೆ. ನಿನಗೀಗ ಇಲ್ಲಿ ಸಮಸ್ಯೆಗಳಿವೆ, ಬದುಕಲಾಗುವುದಿಲ್ಲ ಎಂದು ಸಾಯಲು ಹೊರಟಿದ್ದೀಯಲ್ಲ, ಹಾಗಿದ್ದರೆ ನಾನು ಹೇಗೆ ಬದುಕಬೇಕು ಹೇಳು? ನಿನ್ನ ದಾರಿಯನ್ನೇ ಅನುಸರಿಸಬೇಕೆ?" ಪ್ರಶ್ನಿಸಿದಳು ಮಗಳು ಅಮ್ಮನನ್ನು. ತಕ್ಷಣವೇ ಮಗಳನ್ನು ಬಿಗಿದಪ್ಪಿದಳು ತಾಯಿ!!

ಪುಟ್ಕಥೆ - 6
ತನ್ನ ಬಗೆಗಿನ ಕಟ್ಟುಕತೆಗಳನ್ನು ಕೇಳಿ ನೊಂದುಕೊಂಡಿದ್ದ ಆಕೆಗೆ ಅವಳಪ್ಪ ಹೇಳಿದರು, "ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಬೇಕೆ ಮಗಳೇ? ನಿಜವಾದ ಸುದ್ದಿಗೆ ಆಮೆ ವೇಗ, ಸುಳ್ಳು ಸುದ್ದಿಗೆ ವಾಯುವೇಗ ಎಂದು ಕೇಳಿಲ್ಲವೇ?"

ಪುಟ್ಕಥೆ - 7
ಆ ಅಣ್ಣತಂಗಿಯರ ಅನುಬಂಧ ಅಪರೂಪವಾಗಿತ್ತು. ಆತನಿಗೆ ಮದುವೆಯಾಯಿತು.  ಅಣ್ಣತಂಗಿಯರ ಸಂಬಂಧ ಏನಾಗುತ್ತದೆಂಬ ಕುತೂಹಲ ಎಲ್ಲರಿಗೂ. ಬಂದವಳು ಇವಳಿಗೆ ಅತ್ತಿಗೆಯಾಗಲಿಲ್ಲತಾಯಾದಳು!!

ಪುಟ್ಕಥೆ - 8
"ಏನ್ಮಹಾ, ಆಯಮ್ಮ ಕಡಿದು ಕಟ್ಟೆ ಹಾಕಿರೋದು?" ಸಭೆಯೊಂದರಲ್ಲಿ  ವಿಶ್ವವಿದ್ಯಾನಿಲಯದ ಮಹಿಳಾ ಉಪಕುಲಪತಿಗಳ ಬಗ್ಗೆ ಮುಖ್ಯಮಂತ್ರಿಯೊಬ್ಬರು ಹಗುರಾಗಿ ಮಾತಾಡಿದರು. ಅಲ್ಲಿದ್ದ  ಹಿರಿಯ ಪ್ರೊಫೆಸರ್ ಒಬ್ಬರು ತಕ್ಷಣವೇ "ಮನಸ್ಸು ಮಾಡಿದರೆ ಆಕೆ ನಿಮ್ಮ ಸ್ಥಾನಕ್ಕೆ ಬರಬಹುದು, ನೀವು ಆಕೆಯ ಸ್ಥಾನ ಗಳಿಸಲು ಸಾಧ್ಯವೇ?" ಪ್ರಶ್ನಿಸಿದರು.
ಮತ್ತೆ ಅವರು ಬಾಯ್ಬಿಟ್ಟಿದ್ದರೆ ಕೇಳಿ!!

ಪುಟ್ಕಥೆ - 9
ಅನಿವಾರ್ಯವಾಗಿ ತಂದೆಯನ್ನು ನೋಡಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂತು ಆಕೆಗೆ. ಗಂಡನಿಗೆ ಇಷ್ಟವಿರಲಿಲ್ಲ. ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಯಿತು. ತನ್ನ ಜೀವನದಲ್ಲಿ ಮೊದಲು ಬಂದವರನ್ನೇ ಆರಿಸಿಕೊಂಡಳು!!

ಪುಟ್ಕಥೆ - 10
"ಹೆಂಗಸರನ್ನು ನಂಬಿಸುವುದು ತುಂಬಾ ಸುಲಭ. ಅವರಿಗೆ ಆಗಾಗ ಸೀರೆ, ಒಡವೆ ಕೊಡಿಸುತ್ತಿದ್ದರೆ, ಹೊಗಳುತ್ತಿದ್ದರೆ, ನಾವು ಏನು ಮಾಡಿದರೂ ಪ್ರಶ್ನಿಸುವುದಿಲ್ಲ" ಜಂಬ ಕೊಚ್ಚಿಕೊಳ್ಳುತ್ತಿದ್ದನೊಬ್ಬ.
ಯಾರದನ್ನು ರೆಕಾರ್ಡ್ ಮಾಡಿದರೋ, ಯಾರು ಹೆಂಡತಿಯ ವಾಟ್ಸಪ್ ಗೆ ಕಳಿಸಿದರೊ, ಈಗ ಅವನು ತನ್ನ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾನೆ!!

ಪುಟ್ಕಥೆ - 11
ದಾರಿಯಲ್ಲಿ ಅಡ್ಡ ಹಾಕಿದ ಕಳ್ಳರು ಆ ವ್ಯಕ್ತಿಯನ್ನು ಚೆನ್ನಾಗಿ ತದುಕಿದರು. ಮನೆಗೆ ಬಂದ ಅವನು ಮಗನನ್ನು ಕೇಳಿದ, "ನೀನ್ಯಾಕೊ ಬಿಡಿಸಲು ಬರಲಿಲ್ಲ?"
"ಅಮ್ಮನನ್ನು ನೀ ಹೊಡೀವಾಗ ಮಧ್ಯ ಬಂದರೆ, ನೀನೇ ಅಲ್ವೇನಪ್ಪ ಹೇಳ್ತಾ ಇದ್ದದ್ದು ಮಧ್ಯ ಬರಬೇಡ ಅಂತ?!!"

ಪುಟ್ಕಥೆ - 12
ಹೆಣ್ಣುಮಕ್ಕಳು ಬಹಳ ಪ್ರೀತಿಯಿಂದ ಕರೆದರೂ ಅವರ ಮನೆಯಲ್ಲಿರಲು ನಿರಾಕರಿಸಿ ಒಂಟಿಯಾಗಿದ್ದರಾಕೆ. ಆದರೆ ತಮ್ಮ ಸ್ನೇಹಿತೆಯ ಮಕ್ಕಳು ತಮ್ಮ ತಾಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ ಇವರಿಗೆ ತಮ್ಮ ಮಕ್ಕಳ ಪ್ರೀತಿಯ ಅರಿವಾಯಿತು. ಈಗವರು ಒಂಟಿಯಾಗಿಲ್ಲ! !

ಪುಟ್ಕಥೆ - 13
"ಅಷ್ಟು ಪ್ರೀತಿಸುತ್ತಿದ್ದ ನಿನ್ನ ಮಗಳ ಬಗ್ಗೆ ಯಾಕಮ್ಮ ಇಷ್ಟು ಕಟುವರ್ತನೆ, ಅವಳು ಬೇರೆ ಧರ್ಮದವನನ್ನು ಮದುವೆಯಾದಳೆಂದೇ?" ಕೇಳಿದಳು ದೊಡ್ಡ ಮಗಳು.
"ಇಲ್ಲ, ಅವಳು ಅವನ ಎರಡನೆ ಹೆಂಡತಿಯಾದಳೆಂದು, ಒಂದುವೇಳೆ ನಿಮ್ಮಪ್ಪನೇ ಅವನಂತೆ ಮಾಡಿದ್ದರೆ?!" ಮರುಪ್ರಶ್ನೆ ತಾಯಿಯದು.

ಪುಟ್ಕಥೆ - 14
"ಬದುಕಿನುದ್ದಕ್ಕೂ ಅವರನ್ನು ನೋಡಿ ಅಡಿಗೆ ಮಾಡುವುದು ಕಲಿ, ಇವರನ್ನು ನೋಡಿ ಮನೆ ನೀಟಾಗಿಟ್ಟುಕೊಳ್ಳುವುದನ್ನು ಕಲಿ ಎಂದೆಲ್ಲಾ ಹೇಳಿದಿರಲ್ಲ, ನೀವು ಹೆಂಡತಿಯ ಭಾವನೆಗಳಿಗೆ ಬೆಲೆ ಕೊಡುವ ನನ್ನಣ್ಣನನ್ನು ನೋಡಿ ಅಥವಾ ನಿಮ್ಮ ಸ್ನೇಹಿತರನ್ನು ನೋಡಿ ಏನೂ ಕಲಿಯಲಿಲ್ಲವೇಕೆ?" ಹೆಂಡತಿಯ ಪ್ರಶ್ನೆಗೆ, ಯಾರಿಂದಲೂ ಏನೂ ಕಲಿಯದಿದ್ದ ಅವನು ಏನೆಂದು ಉತ್ತರಿಸಬಲ್ಲ?!

ಪುಟ್ಕಥೆ - 15
ನಡೆದ ಅಹಿತಕರ ಘಟನೆಗೆ ಸ್ನೇಹಿತೆಯನ್ನೇ ದೂರುತ್ತಿದ್ದೆ ಬೆಳಿಗ್ಗೆಯಿಂದಲೂ. ಕೇಳಿ ಕೇಳಿ ಸುಸ್ತಾದ ಅಮ್ಮ ಒಂದೇ ಒಂದು ಪ್ರಶ್ನೆ ಕೇಳಿದರು, "ನಿನ್ನ ಬುದ್ಧಿ ನಿನ್ನ ಕೈಲಿದ್ದಿದ್ದರೆ ಅವಳಾಗಲಿ, ಇನ್ನೊಬ್ಬಳಾಗಲಿ ಏನು ಮಾಡಲು ಸಾಧ್ಯವಿತ್ತು?"

     -  ಸುಧಾ ಜಿ


No comments:

Post a Comment