Saturday 19 August 2017

ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು - 4

(ಕಳೆದ ಸಂಚಿಕೆಯಿಂದ ಮುಂದುವರೆದಿದೆ)

I. ಮಗುವಿನ ಜೀವನ
1. ಶಿಶುವಿಹಾರ:
ಸೋವಿಯತ್ ತಾಯಿಯು ಎರಡು ತಿಂಗಳು ಅಥವಾ ಆರು ವಾರದ ನಂತರ ಮತ್ತೆ ಕೆಲಸಕ್ಕೆ ಹಿಂತಿರುಗುತ್ತಾಳೆ. ಆಗ ಮಗುವನ್ನು ನೋಡಿಕೊಳ್ಳುವ ಪ್ರಶ್ನೆ ಬರುತ್ತದೆ. ಸೋವಿಯತ್ ಯೂನಿಯನ್ನಿನಲ್ಲಿ ಎರಡು ತಿಂಗಳಿಂದ ನಾಲ್ಕು ವರ್ಷದ ನಡುವಿನ ಮಕ್ಕಳಿಗೆ ಸಾಕಷ್ಟು ಸಮಗ್ರವಾಗಿರುವ ಕ್ರೆಷೆಯ (creche) ವ್ಯವಸ್ಥೆಯಿದೆ; ಅದನ್ನು ಸಧ್ಯದಲ್ಲೇ ಎಲ್ಲಾ ರೀತಿಯಲ್ಲೂ ಸಮಗ್ರಗೊಳಿಸುವ ಯೋಜನೆಯಿದೆ. 
ಈಗಿನ ಪರಿಸ್ಥಿತಿಯೇನೆಂದರೆ, ಮಾಸ್ಕೊದಲ್ಲಿರುವ ನಾರ್ಕೊಮ್ಸ್‍ದ್ರಾವ್‍ನ
(Peoples’ Commissariat of Health) ಅಧಿಕಾರಿಯೊಬ್ಬರು ಹೇಳುವಂತೆ, ಪ್ರತಿಯೊಂದು ಕಾರ್ಖಾನೆಯು ತನ್ನ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ ಕಡ್ಡಾಯವಾಗಿ ಕ್ರೆಷೆಯನ್ನು ಒದಗಿಸಬೇಕು; ದೊಡ್ಡ ದೊಡ್ಡ ಕಛೇರಿಗಳಲ್ಲೂ ಸಹ ಕ್ರೆಷೆಗಳಿರುತ್ತವೆ; ಇವೆರಡೂ ವಿಭಾಗಗಳಿಗೂ ಸೇರದ ಕಛೇರಿ ಉದ್ಯೋಗಸ್ಥರು ಮತ್ತು ಸಾಮಾನ್ಯ ಮಹಿಳೆಯರು, ಯಾವ ನಿರ್ದಿಷ್ಟ ಗುಂಪಿಗೂ ಸೇರಿರದ ಜಿಲ್ಲಾ ಕ್ರೆಷೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬಹುದು. ತನ್ನ ಅನುಭವದಲ್ಲಿ ಇದು ಹೆಚ್ಚು ಆಶಾದಾಯಕ ದೃಷ್ಟಿ, ಏಕೆಂದರೆ ಕಾರ್ಖಾನೆಗಳು ಕ್ರೆಷೆಯ ಸೌಲಭ್ಯವನ್ನು ಕೊಟ್ಟರೂ ಸಹ, ತನ್ನೆಲ್ಲಾ ಉದ್ಯೋಗಿಗಳ ಮಕ್ಕಳನ್ನು ಸೇರಿಸಿಕೊಳ್ಳುವಷ್ಟು ದೊಡ್ಡ ಕ್ರೆಷೆಗಳನ್ನು ಹೊಂದಿರುವುದಿಲ್ಲ; ಜೊತೆಗೆ, ಕಾರ್ಖಾನೆಯಲ್ಲಿ ಕೆಲಸ ಮಾಡದ ಕೆಲವು ಉದ್ಯೋಗಿಗಳು ಕ್ರೆಷೆಗಳ ಸಹಾಯವಿಲ್ಲದೆ ತಮ್ಮ ಮಕ್ಕಳನ್ನು ತಾವೇ ಹೇಗೋ ಒಂದು ರೀತಿ ನೋಡಿಕೊಳ್ಳುವ ಸಂದರ್ಭ ಬರುತ್ತದೆ. 
ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು; ಗ್ರಾಮೀಣ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಸರ್ಕಾರಿ ಅಥವಾ ಸಾಮೂಹಿಕ ಕೃಷಿಕ್ಷೇತ್ರದಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ಕ್ರೆಷೆಯನ್ನು ಒದಗಿಸಲಾಗುವುದು; ಆದ್ದರಿಂದ ಸ್ವತಂತ್ರವಾಗಿ ದುಡಿಯುವ ರೈತರ ಮಕ್ಕಳಿಗೆ ಸಾಮೂಹಿಕವಾಗಿ ಅವಕಾಶವಿರುವುದಿಲ್ಲ.
ಹಾಗಿದ್ದರೂ ಸಹ, ಸೋವಿಯತ್ ನೀತಿಯೊಂದಿಗೆ ಕೆಲಸ ಮಾಡುವ ಪಟ್ಟಣಗಳಲ್ಲಿ, ಕೃಷಿ ಜಿಲ್ಲೆಗಳಲ್ಲಿ ಇರುವ ದೊಡ್ಡ ಸಂಖ್ಯೆಯ ಮಕ್ಕಳನ್ನು ಕ್ರೆಷೆಗಳಲ್ಲಿ ನೋಡಿಕೊಳ್ಳಲಾಗುತ್ತದೆ; ಅದಕ್ಕೆ ಶುಲ್ಕವನ್ನು ಕಾರ್ಮಿಕರ ಆದಾಯಕ್ಕೆ ತಕ್ಕಂತೆ ನಿಗದಿಪಡಿಸಲಾಗುತ್ತದೆ ಮತ್ತು ಕಾರ್ಮಿಕರು ಸಾಕಷ್ಟು ಬಡವರಾಗಿದ್ದರೆ ಶುಲ್ಕವನ್ನು ಸೊನ್ನೆಯವರೆಗೂ ಇಳಿಸಲಾಗುತ್ತದೆ. ಈ ಕ್ರೆಷೆಗಳಿಗೆ ಮಕ್ಕಳನ್ನು ತಾಯಿಯು ಕೆಲಸಕ್ಕೆ ಹೋದ ನಂತರ ಕರೆತರುತ್ತಾರೆ ಮತ್ತು ಕೆಲಸ ಮುಗಿಯುವವರೆಗೂ ನೋಡಿಕೊಳ್ಳುತ್ತಾರೆ; ಕೆಲವೊಮ್ಮೆ ಆಕೆಗೆ ಒಂದಷ್ಟು ವಿಶ್ರಾಂತಿ ಸಿಗಲಿ ಎಂದು ಕೆಲಸ ಮುಗಿದ ಒಂದು ಗಂಟೆಯ ನಂತರ ಮಗುವನ್ನು ಮನೆಗೆ ಕಳುಹಿಸುತ್ತಾರೆ. ತಾಯಿಗೇನಾದರೂ ರಾತ್ರಿಪಾಳಿಯಿದ್ದರೆ, ಕ್ರೆಷೆಯು ಐದು ರಾತ್ರಿಗಳಲ್ಲೂ (ಆರನೇ ದಿನ ರಜೆ) ಮಗುವನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡುತ್ತದೆ. ತಾಯಿಯು ಮಗುವಿಗೆ ಹಾಲುಣಿಸುವಂತಿದ್ದರೆ ಕಾರ್ಖಾನೆ ಅಥವಾ ಕಛೇರಿಯಿಂದ ಬಿಡುವು ಮಾಡಿಕೊಂಡು (ವೇತನ ಕಡಿತವಿಲ್ಲದೆ) ಕ್ರೆಷೆಗೆ ಬರುತ್ತಾಳೆ. ಇನ್ನೊಂದು ವಿಷಯವನ್ನೂ ಗಮನಿಸಬೇಕು; ಮಹಿಳಾ ಕೈದಿಗಳ ಮಕ್ಕಳಿಗೂ ಕ್ರೆಷೆಯ ವ್ಯವಸ್ಥೆಯಿದೆ; ಅಷ್ಟೇ ಅಲ್ಲದೆ ತಾಯಿಯು ಬಂಧಿಯಾದಾಗ ಮಗುವನ್ನು ಕಾರಾಗೃಹಕ್ಕೆ ಕರೆದೊಯ್ಯಲು ಇಷ್ಟಪಡದಿದ್ದರೆ (ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಬೇರೆ ಯಾರಾದರೂ ಇದ್ದರೆ ಹಾಗೂ ಮಾಡಬಹುದು) ಹಾಲುಣಿಸಲು ಮನೆಗೆ ಹೋಗಿಬರಲು ಅವಕಾಶವಿದೆ.
ಕ್ರೆಷೆಗಳು ಸಾಮಾನ್ಯವಾಗಿ ಸಮರ್ಥವಾಗಿರುತ್ತವೆ. ನಾನು ನೋಡಿದ್ದರಲ್ಲಿ ಅತ್ಯುತ್ತಮವಾದದ್ದೆಂದರೆ, ಹಿಂದೆ ತಿಳಿಸಿದ ಕ್ಲಿನಿಕ್ ಜೊತೆ ಸಂಬಂಧವಿರುವ ಲೆನಿನ್‍ಗ್ರಾದ್ ಕ್ರೆಷೆ. ಇಲ್ಲಿ ಮಕ್ಕಳಿಗೆ ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಾರೆ ಮತ್ತು ಮಕ್ಕಳು ಬಹಳ ಆರೋಗ್ಯವಂತರಾಗಿ ಕಾಣುತ್ತವೆ; ಸಾಕಷ್ಟು ಆಟದ ಸಾಮಾನುಗಳನ್ನು ನೀಡುತ್ತಾರೆ. ಬಿಸಿನೀರಿನಲ್ಲಿ ಸ್ನಾನ ಮಾಡಿಸುವುದಕ್ಕೆ, ಸ್ವಚ್ಛವಾದ ಕ್ರೆಷೆಯ ಬಟ್ಟೆಗಳನ್ನು ಕೊಡುವುದಕ್ಕೆ ಅವಕಾಶವಿದೆ. ಅಲ್ಲಿ (ರಷ್ಯಾದಲ್ಲಿ ಇದು ಬಹಳ ಮುಖ್ಯವಾದ ವಿಷಯ) ನೊಣ ಅಥವಾ ಇನ್ನೂ ಹೆಚ್ಚಿನ ಅನಾರೋಗ್ಯ ಹರಡುವ ಕೀಟಗಳ ಸುಳಿವೂ ಅಲ್ಲಿಲ್ಲ. 
ಮಾಸ್ಕೊ ಟೆಕ್ಸ್‍ಟೈಲ್ಸ್ ಫ್ಯಾಕ್ಟರಿಗೆ ಸೇರಿದ ಕ್ರೆಷೆಯನ್ನು ಒಬ್ಬ ಭೂತಾಕಾರದ ಮಹಿಳೆ ನಡೆಸುತ್ತಾಳೆ; ಆಕೆ ಯಾರೇ ವೀಕ್ಷಕರು ಬಂದರೆ ಮತ್ತು ಏನನ್ನಾದರೂ ಕೇಳಿದರೆ ದ್ವೇಷಕಾರುತ್ತಾಳೆ; ಇಲ್ಲಿ ಮಕ್ಕಳಿಗೆ ಅಳುವುದು ಮತ್ತು ಕಾಟ ಕೊಡುವುದು ಅಭ್ಯಾಸವಾಗಿ ಹೋಗಿದೆ. ಇನ್ನೊಂದು ಹಿಂದುಳಿದ ಗ್ರಾಮೀಣ ಪ್ರದೇಶದಿಂದ ಬಂದ ಕಾರ್ಮಿಕರು ಇರುವ ಕಾರ್ಕೊವ್‍ನ ಟೆಕ್ಸ್‍ಟೈಲ್ ಫ್ಯಾಕ್ಟರಿಗೆ ಸಂಬಂಧಿಸಿದ ಕ್ರೆಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪೌಷ್ಠಿಕತೆಯಿಲ್ಲದ ಎಣಿಕೆಸಲಾಗದಷ್ಟು ಮಕ್ಕಳನ್ನು ಕಾಣಬಹುದು; ಥರ್ಮಾಮೀಟರ್ ಅನ್ನು ಸಾಕಷ್ಟು ಕ್ರಿಮಿನಿರೋಧಕಗೊಳಿಸಿರುವುದಿಲ್ಲ; ಉಕ್ರೇನ್‍ನ ಸಾಮೂಹಿಕ ಕೃಷಿಕ್ಷೇತ್ರದಲ್ಲಿರುವ ಇನ್ನೊಂದು, ಸ್ವಲ್ಪ ಮಬ್ಬಾಗಿದೆ; ಇಲ್ಲಿ ಸುಣ್ಣಹೊಡೆಯುವುದು ಮತ್ತು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಹೇಳುವಂತಿದೆ. ನಾನು ನೋಡಿದ ಕ್ರೆಷೆಗಳಲ್ಲಿ ಹೆಚ್ಚಿನವು ಸಾಧನಗಳು ಮತ್ತು ಸಿಬ್ಬಂದಿಗಳ ವಿಷಯದಲ್ಲಿ ಮಿಸ್ ಮಾರ್ಗರೆಟ್ ಮ್ಯಾಕ್‍ಮಿಲನ್ ಅವರ ಒಪ್ಪಿಗೆ ಪಡೆಯಲು ಸಾಧ್ಯವೇ ಇಲ್ಲ.
ಸೋವಿಯತ್ ರಾಜ್ಯದ ಹೊಂದಿಕೊಳ್ಳುವ/ಹೊಂದಾಣಿಕೆಯ ಗುಣದ ಬಗ್ಗೆ ಹೇಳಲೇಬೇಕು. ಬೇಸಿಗೆಯ ತಿಂಗಳುಗಳಲ್ಲಿ ಶಾಲೆಯ ಮತ್ತು ಶಿಶುವಿಹಾರದ (ಅವರ ಕುರಿತು ನಂತರ ಹೆಚ್ಚು ತಿಳಿಸಲಾಗುತ್ತದೆ) ಮಕ್ಕಳಂತೆ ಕ್ರೆಷೆಯ ಮಕ್ಕಳೂ ಸಹ ರಜಾ ಶಿಬಿರಗಳಿಗೆ ತಾವೇ, ತಂದೆತಾಯಿಗಳ ಜೊತೆ ಹೋಗುವುದು ವಾಡಿಕೆ. ಇದರ ಪರಿಣಾಮವಾಗಿ, ನಾನು ಆಗಸ್ಟ್ ನಲ್ಲಿ ಭೇಟಿನೀಡಿದ ಕ್ರೆಷೆಗಳಲ್ಲಿ ಇದ್ದವರ ಸಂಖ್ಯೆ ಕಡಿಮೆಯಿತ್ತು. ಅವರಲ್ಲೂ ಊರಿಗೆ ಹೋಗದ ಹಿರಿಯರು (ಮೂರರಿಂದ ನಾಲ್ಕು ವರ್ಷದವರೆಗಿನವರು) ಹೆಚ್ಚಾಗಿದ್ದರು. ಇದಕ್ಕೆ ಹಲವಾರು ವಿವರಣೆಗಳನ್ನು ನೀಡಿದರು; ಉದಾಹರಣೆಗೆ, ಎರಡು, ಮೂರು ಮಕ್ಕಳು ಇನ್ನೂ ತಾಯಿಹಾಲು ಕುಡಿಯುತ್ತಿವೆ (ಇದು ರೈತಾಪಿ ದೇಶಗಳಲ್ಲಿ ಸಾಮಾನ್ಯವಾಗಿರುತ್ತದೆ ಮತ್ತು ಇದು ಸೋವಿಯತ್ ಯೂನಿಯನ್‍ಗೆ ಇಷ್ಟವಿಲ್ಲ, ಆದರೂ ಕೆಲವರಲ್ಲಿ ಹಾಗೇ ಮುಂದುವರೆಯತ್ತಿದೆ); ಅಥವಾ ಇಲ್ಲಿರುವ ಮಗು ತುಂಬಾ ಸೂಕ್ಷ್ಮವಾಗಿದ್ದು, ತಾಯಿಯ ಆರೈಕೆ ಬೇಕಾಗುತ್ತದೆ; ಅಥವಾ ಸರಳವಾಗಿ ಹೇಳುವುದಾದರೆ, “ಅವುಗಳ ತಾಯಂದಿರು ಕಳುಹಿಸಲು ಒಪ್ಪುವುದಿಲ್ಲ.” ವ್ಯಕ್ತಿಗಳ ವಿಶಿಷ್ಟತೆಗಳನ್ನು ಎದುರಿಸಲು ಸಾಮಾನ್ಯ ನಿಯಮಗಳನ್ನು ಸಡಿಲಗೊಳಿಸುವುದಕ್ಕಿಂತ ದೊಡ್ಡ ನಿದರ್ಶನವಿಲ್ಲ ಎನಿಸುತ್ತದೆ.

2. ಶಿಶುವಿಹಾರ
ರಷ್ಯನ್ ಮಗುವಿಗೆ ನಾಲ್ಕು ವರ್ಷವಾದಾಗ ಕ್ರೆಷೆಯಿಂದ ಹೊರಬಂದು “ಶಿಶುವಿಹಾರದ ಘಟ್ಟ”ಕ್ಕೆ ಬರುತ್ತದೆ; ಅದು ಏಳನೇ ವಯಸ್ಸಿನವರೆಗೂ ಇರುತ್ತದೆ. ಈ ಹಂತದಲ್ಲಿ ಮಗು ಸ್ವಲ್ಪಮಟ್ಟಿಗಾದರೂ ಸಹ, ನಾರ್ಕೊಮ್‍ಪ್ರೊಸ್ ಆರೈಕೆಯಡಿಯಲ್ಲಿ ಬರುತ್ತದೆ. ಲೇಖಕ ಗಮನಿಸಿದ ಹಾಗೆ, ಈ ಹಂತದಲ್ಲೂ ಮಕ್ಕಳು ತಮ್ಮ ಹಿರಿಯರಂತೆ ‘ಹೊಟ್ಟೆಕಟ್ಟಿ’ಕೊಂಡು ಜೀವಿಸಬೇಕು. ನನಗೆ ನಾರ್ಕೊಮ್ಸ್‍ಪ್ರೊಸ್ ಅಧಿಕಾರಿಗಳು ನೀಡಿದ ಭರವಸೆಯೆಂದರೆ, ಮಕ್ಕಳಿಗೆ ಹೋಗಲು ತುಂಬಾ ಕ್ರೆಷೆಗಳಿಲ್ಲದಿರಬಹುದು; ಆದರೆ ಕ್ರೆಷೆಗೆ ಮತ್ತು ಕ್ರೆಷೆಯಲ್ಲಿನ ಮಕ್ಕಳಿಗೆ ಸರಬರಾಜಿನಲ್ಲಿ ಕೊರತೆಯಿಲ್ಲ. ಈ ಅಭಿಪ್ರಾಯ ಸರಿಯಲ್ಲವೆಂದು ನನ್ನ ಅನಿಸಿಕೆ; ಏಕೆಂದರೆ, ಒಂದು ಕ್ರೆಷೆಯಲ್ಲಿ – ಅದೆಷ್ಟರಮಟ್ಟಿಗಾದರೂ ಸರಿ ಹಾಲಿನ ಕೊರತೆಯ ದೂರು ಬಂದಿದೆ. ಆದರೆ ಸಾಮಾನ್ಯವಾಗಿ ನೋಡಿದರೆ ಅಲ್ಲಿ ದೊರಕುವ ಸಂಪನ್ಮೂಲಗಳಲ್ಲಿ ಮಕ್ಕಳಿಗೆ ಅತ್ಯುತ್ತಮವಾದದ್ದೇ ಸಿಗುತ್ತದೆ; ಮಕ್ಕಳು ಹೆಚ್ಚಿನಾಂಶ ಅರೋಗ್ಯಕರವಾಗಿವೆ ಮತ್ತು ಚೆನ್ನಾಗಿ ಆರೈಕೆ ಮಾಡಿಸಿಕೊಂಡ ಹಾಗೆ ಕಾಣುತ್ತವೆ. 
ಹಾಗಿದ್ದರೂ ಸಹ ಶಿಶುವಿಹಾರಗಳಲ್ಲಿ ಕೊರತೆಯಿರುವುದನ್ನು ಕಾಣಬಹುದು. ಕೀವ್‍ನಲ್ಲಿರುವ ಒಂದು ಶಿಶುವಿಹಾರದಲ್ಲಿ ಕೊಡುತ್ತಿರುವ ಊಟ “ಈಗ ಸಾಕಾಗುವುದಿಲ್ಲ. ಶರತ್ಕಾಲದಲ್ಲಿ ಪರಿಸ್ಥಿತಿ ಉತ್ತಮವಾಗಬಹುದೆಂಬ ಭರವಸೆಯಿದೆ” ಎಂದು ಹೇಳುತ್ತಾರೆ. ಅಲ್ಲಿ ಮಕ್ಕಳು ಉದ್ಯಾನವನದಲ್ಲಿ ಹಾಡುವ ಆಟವಾಡುತ್ತಿದ್ದರು. ಅವರು ಸಂತೋಷವಾಗಿರುವುದು, ಚೆನ್ನಾಗಿರುವುದು ಮತ್ತು ಸ್ವಚ್ಛವಾಗಿರುವುದು ಎದ್ದು ಕಾಣುತ್ತಿತ್ತು; ಸಾಮಾನ್ಯವಾಗಿ ಎಲ್ಲರೂ ಹುಡುಕುವ ಬಾಲಗ್ರಹದ (rickets)  ಸೂಚನೆಯೂ ಇಲ್ಲ. ಇನ್ನೆಲ್ಲೋ ಒಂದು ಕಡೆ ಶಾಲೆಯ ಬಟ್ಟೆಗಳನ್ನು ಒದಗಿಸಲು ಹಣವಿಲ್ಲವೆಂದು ತಿಳಿಸಿದ್ದಾರೆ – ಕ್ರೆಷೆ ಮತ್ತು ಶಿಶುವಿಹಾರಗಳಲ್ಲಿ, ಮಕ್ಕಳು ಬಂದ ಕೂಡಲೇ ಬಟ್ಟೆ ತೆಗೆದುಹಾಕಿ, ಶಾಲೆಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು; ಅದು ಸೋಂಕನ್ನು ತಡೆಗಟ್ಟುವ ಅದ್ಭುತ ವಿಧಾನ.(ನಾನು ನೋಡಿದ ನಗರದ ಕ್ರೆಷೆ ಮತ್ತು ಶಿಶುವಿಹಾರಗಳಲ್ಲಿ ಸೋಂಕು ತಗುಲಿರಬಹುದೆಂಬ ಅನುಮಾನವಿರುವ ಮಕ್ಕಳಿಗೆ ಪ್ರತ್ಯೇಕವಾದ ಬಾಗಿಲಿರುವ ತಾತ್ಕಾಲಿಕ ಪ್ರತ್ಯೇಕ ಕೊಠಡಿಗಳೂ ಇವೆ.) 
ಪ್ರತಿಯೊಂದು ಮಗುವೂ ಶಿಶುವಿಹಾರಕ್ಕೆ ಹೋಗಬೇಕೆಂಬುದು ಸೋವಿಯತ್ ಆದರ್ಶ; ಆದರೆ ಅದು ಇನ್ನೂ ವಾಸ್ತವವಾಗಿಲ್ಲ; ಏಕೆಂದರೆ ಸಮಸ್ಯೆ ಬಹಳ ದೊಡ್ಡದು. ಉದಾಹರಣೆಗೆ, ಕೀವ್‍ನಲ್ಲಿ 2,500 ಮಕ್ಕಳಿಗೆ ಸುಮಾರು 200 ಶಿಶುವಿಹಾರಗಳಿವೆ; ಆದರೆ ಇದು ಸಾಕಾಗುವುದಿಲ್ಲ ಎಂದು ಹೇಳುತ್ತಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟೂ ಬೇಗ ಹೊಸ ಶಿಶುವಿಹಾರಗಳನ್ನು ಕಟ್ಟುತ್ತಿದ್ದಾರೆ; ಶಾಲೆಗಳಲ್ಲಿರುವಂತೆ ಇಲ್ಲಿಯೂ ಶಿಕ್ಷಕರು ಮತ್ತು ಕಟ್ಟಡಗಳನ್ನು ಒದಗಿಸುವ ಕಷ್ಟ ಎದುರಾಗುತ್ತದೆ. (ಇತ್ತೀಚಿನ ಅಂಕಿಅಂಶಗಳ ಪ್ರಕಾರ ಶಿಶುವಿಹಾರಗಳಲ್ಲಿ 1928ರಲ್ಲಿ 4,50,000, 1931ರಲ್ಲಿ 27,50,000 ಮತ್ತು 1932ರ ನವೆಂಬರ್‍ನಲ್ಲಿ 60,00,000 ಮಕ್ಕಳಿದ್ದರು.)
ಶಿಶುವಿಹಾರಗಳನ್ನು ಕೈಗಾರಿಕೆಗಳು ಮತ್ತು ಕೊಲ್ಕೊಜಿ ಸೇರಿದಂತೆ ಎಲ್ಲಾ ರೀತಿಯ ಸಾಮೂಹಿಕ ಅಂಗಸಂಸ್ಥೆಗಳು ನಡೆಸುತ್ತವೆ. ಉದಾಹರಣೆಗೆ, ಕಾರ್ಕೊವ್‍ನ ಸುತ್ತಿಗೆ ಮತ್ತು ಕುಡುಗೋಲಿನ ಬೃಹತ್ ಕೈಗಾರಿಕೆಯು ತನ್ನದೇ ಆದ ಶಿಶುವಿಹಾರಗಳನ್ನು, ಶಾಲೆಗಳನ್ನೂ ಸಹ ನಡೆಸುತ್ತದೆ. ಇಲ್ಲಿ ನಿಯಮದ ಪ್ರಕಾರ, ಸಣ್ಣ ಸಂಸ್ಥೆಗಳು ತಮ್ಮದೇ ಆದ ಶಿಶುವಿಹಾರಗಳನ್ನು ತೆರೆಯುವಂತಿಲ್ಲ; ಆದರೆ ತಮ್ಮ ಕಾರ್ಮಿಕರ ಮಕ್ಕಳನ್ನು ನೇರವಾಗಿ ಸರ್ಕಾರವೇ ನಡೆಸುವ ಶಿಶುವಿಹಾರಗಳಿಗೆ ಕಳುಹಿಸಿಕೊಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಪ್ರಮುಖ ಕೈಗಾರಿಕೆಗಳು ಕಾಣಿಕೆಗಳನ್ನು – ಕೆಲವೊಮ್ಮೆ ನೇರವಾಗಿ ಹಣ, ಹೆಚ್ಚಿನ ಬಾರಿ ಬಟ್ಟೆಗಳು ಮತ್ತು ಶಾಲಾ ಸಾಮಗ್ರಿಗಳನ್ನು ನೀಡುವ ಮೂಲಕ ಸಹಾಯ ಮಾಡುವ ವ್ಯವಸ್ಥೆಯನ್ನು ಶಿಶುವಿಹಾರಗಳು ಮಾಡುತ್ತವೆ. 
ಶಿಕ್ಷಕರ ಸಂಬಳ ಮತ್ತು ಶಾಲೆಯ ಸುರಕ್ಷತೆಗಳ ಖರ್ಚನ್ನು ನಾರ್ಕೊಮ್‍ಪ್ರೊಸ್ ನೀಡುತ್ತದೆ; ಅದು ಕೈಗಾರಿಕೆಗಳಿಂದ ಶುಲ್ಕವನ್ನು ಸಂಗ್ರಹಿಸುತ್ತದೆ. ನಾನು ನೋಡಿದ ಕೀವ್‍ನ ಶಿಶುವಿಹಾರದ ಅರ್ಧ ಮಕ್ಕಳು ಹತ್ತಿರದಲ್ಲಿರುವ ‘ಫಿಸಿಕೊ-ಮೆಕ್ಯಾನಿಕಲ್ ಫ್ಯಾಕ್ಟರಿ’ಯಿಂದ ಬರುತ್ತಾರೆ; ಆದರೆ ಫ್ಯಾಕ್ಟರಿಯು ಉದಾರವಾಗಿ ಕಾಣಿಕೆ ನೀಡಿದಂತೆ ಕಾಣಿಸಲಿಲ್ಲ.
ಈ ಶಿಶುವಿಹಾರಕ್ಕೆ ಒಂದು ನೂರು ಮಕ್ಕಳು ಬರುತ್ತಾರೆ; ನಮ್ಮ ಭೇಟಿಯ ಸಮಯದಲ್ಲಿ ಅರ್ಧಕ್ಕರ್ಧ ಮಕ್ಕಳು ಹಳ್ಳಿಗೆ ಹೋಗಿದ್ದರು. ಅಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಮಕ್ಕಳಿಗಾಗಿ ಮಲಗುವ ವ್ಯವಸ್ಥೆಯಿದೆ; ಅಲ್ಲಿ ಹದಿನೈದರಿಂದ ಇಪ್ಪತ್ತು ಮಕ್ಕಳು ಮಲಗಬಹುದು. ಇತರ ಮಕ್ಕಳು ಬೆಳಿಗ್ಗೆ 8 ರಿಂದ 15ರ ತನಕ ಇರುತ್ತಾರೆ; ಎರಡು ಬಾರಿ ಉಪಹಾರ, ಮಧ್ಯಾಹ್ನದ ಊಟ, ಚಹಾ  - ಎಲ್ಲಾ ಸೇರಿ ನಾಲ್ಕು ಬಾರಿ ಆಹಾರ ನೀಡುತ್ತಾರೆ; ನಿಜ, ಬೆಳಗಿನ ಉಪಹಾರಗಳು ಕಡಿಮೆಯಿರುತ್ತವೆ. ಅಲ್ಲೇ ತಂಗುವ ಮಕ್ಕಳಿಗೆ ರಾತ್ರಿಯೂಟವನ್ನೂ ನೀಡುತ್ತಾರೆ. ನನಗೆ ಕೊಟ್ಟ ವೇಳಾಪಟ್ಟಿಯಂತೆ, ಬಟ್ಟೆಗಳನ್ನು ತೆಗೆಯುವುದು, ಹಾಕಿಕೊಳ್ಳುವುದು, ಹೊರಗೆ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸುವುದು ಮತ್ತು ತಂದಿಡುವುದಕ್ಕೇ ಹೆಚ್ಚಿನ ಸಮಯ ವ್ಯಯವಾಗುತ್ತದೆ – ಇದೆಲ್ಲವೂ ನಾಲ್ಕು ವರ್ಷದ ಮಕ್ಕಳಿಗೆ ತುಂಬಾ ವಿವೇಕದ ಚಟುವಟಿಕೆಗಳು. ಅಲ್ಲಿ ಮಕ್ಕಳು ತಾವೇ ಊಟವನ್ನು ಹಾಕಿಕೊಂಡು, ತಟ್ಟೆಗಳನ್ನು ತೊಳೆದಿಟ್ಟು, ಹಾಸಿಗೆಗಳನ್ನು ಹಾಸಿಕೊಂಡು, ಮಲಗುವ ಮನೆಯನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುತ್ತಾರೆ ಮತ್ತು ಸಾಧ್ಯವಾದಷ್ಟರಮಟ್ಟಿಗೆ ತೋಟವನ್ನು ನೋಡಿಕೊಳ್ಳುತ್ತಾರೆ; ತೋಟ ಅಷ್ಟೇನು ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ; ಆದರೆ ಆಗ ಬಹಳ ಬಿಸಿಲಿತ್ತು ಮತ್ತು ಒಣಹವೆಯಿತ್ತು. ನನ್ನ ತೋಟವು ಅಂತಹುದೇ ಪರಿಸ್ಥಿತಿಯಲ್ಲಿದ್ದರೆ ಖಂಡಿತವಾಗಿ ನನ್ನದ್ದಕ್ಕಿಂತ ಅವರ ತೋಟವೇ ಚೆನ್ನಾಗಿದೆ!
ನಾವು ಯಾವುದನ್ನು “ಬೋಧನೆಯ ಪ್ರಕ್ರಿಯೆ” ಎಂದು ಕರೆಯುತ್ತೇವೆ, ಅದು ದಿನದ ಒಂದೂವರೆ ಗಂಟೆಯನ್ನು ಮಾತ್ರ ತೆಗೆದುಕೊಳ್ಳುತ್ತದೆ; ಉಳಿದ ಸಮಯವನ್ನು ವಿಶ್ರಾಂತಿ ಮತ್ತು ಸಂಘಟಿತ ಆಟಗಳಲ್ಲಿ ಕಳೆಯುತ್ತಾರೆ. ಈ “ಬೋಧನೆಯ ಪ್ರಕ್ರಿಯೆ”ಯು ಹೆಚ್ಚಿನಾಂಶ ಚಿತ್ರ ಬಿಡಿಸುವುದು, ಮಾಡೆಲ್ ಮಾಡುವುದು ಹಾಗೂ ಇನ್ನಿತರ ಕರಕುಶಲ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ; ಜೊತೆಗೆ ಕಮ್ಯುನಿಸಮ್ ಕುರಿತು ಬೋಧನೆ ಮಾಡುತ್ತಾರೆ – ಅದು ಹೆಚ್ಚುಕಡಿಮೆ ಇಂಗ್ಲಿಷ್ ಶಾಲೆಯಲ್ಲಿ ಬೋಧಿಸುವ ‘ಪೌರನೀತಿ’, ‘ಸ್ವಚ್ಛತೆ’ ಮತ್ತು ‘ಬೈಬಲ್ ಕಥೆ’ಗಳನ್ನು ಒಟ್ಟುಗೂಡಿಸಿ ಒಂದು ಮಾಡಿದರೆ, ಅದಕ್ಕೆ ಸಮಾನವಾಗಿದೆ; ಆದರೆ ಹೆಚ್ಚು ನಿಖರವಾಗಿರುತ್ತದೆ ಮತ್ತು ಸದುದ್ದೇಶದಿಂದ ಕೂಡಿರುತ್ತದೆ. ದೊಡ್ಡ ಮಕ್ಕಳಿಗೆ ಓದುವುದನ್ನು, ಬರೆಯುವುದನ್ನು ಕಲಿಸುತ್ತಾರೆ. ಒಟ್ಟಾರೆಯಾಗಿ ಮಕ್ಕಳನ್ನು ವಯೋಮಿತಿಗೆ ಅನುಗುಣವಾದ ನಾಲ್ಕು ಗುಂಪುಗಳಾಗಿ ವಿಭಾಗಿಸುತ್ತಾರೆ ಮತ್ತು ವಿವಿಧ ರೀತಿಯ ಕೆಲಸಗಳನ್ನು ಮಾಡಲು (ಮುಖ್ಯವಾಗಿ ದೊಡ್ಡ ಮಕ್ಕಳನ್ನು) ಬ್ರಿಗೇಡ್ಸ್‍ಗಳಾಗಿ ಸಂಘಟಿಸುತ್ತಾರೆ. ಅಲ್ಲಿ ತುಂಟ ಮಕ್ಕಳ ವಿಚಾರಣೆ ನಡೆಸಲು ಮಕ್ಕಳ ನ್ಯಾಯಾಲಯಗಳಿವೆ; ಆದರೆ ದಂಡನೆಗಳನ್ನು ವಿಧಿಸುವ ವಿಷಯದಲ್ಲಿ ಸಿಬ್ಬಂದಿ ವರ್ಗ ಸ್ಪಷ್ಟವಾಗಿ ಹೇಳದ ಕೆಲವು ನಿಯಂತ್ರಣಗಳನ್ನು ಹೊಂದಿರುತ್ತದೆ ಎಂದು ಕೇಳಿದ್ದೇನೆ. ಏಕೆಂದರೆ, ಚಿಕ್ಕ ಮಕ್ಕಳಲ್ಲಿರುವ ದೃಢವಾದ ನೈತಿಕ ಪ್ರಜ್ಞೆ ಮತ್ತು ಸಿಟ್ಟಿನ ಪ್ರತಿಕ್ರಿಯೆಗಳ ಅನುಭವವಿರುವ ಯಾರಿಗಾದರೂ ಮಕ್ಕಳು ವಿಧಿಸುವ ದಂಡನೆಗಳ ಬಗ್ಗೆ ಭಯವಿರುತ್ತದೆ. ಸೀನಿಯರ್ ಗುಂಪಿನಲ್ಲಿರುವ ಎಲ್ಲರೂ ಅಕ್ಟೋಬರ್ ಮಕ್ಕಳು (ಕೆಳಗೆ ವಿವರಿಸಲಾಗಿದೆ); ಅಲ್ಲಿಗೆ ಪಯೊನಿರ್ ಸಂಘಟನೆಯವರೂ ಬರುತ್ತಾರೆ ಹಾಗೂ ತಮ್ಮ ಕರ್ತವ್ಯದ ಭಾಗವಾಗಿ ಮಕ್ಕಳಿಗೆ ಉಪನ್ಯಾಸ ನೀಡುತ್ತಾರೆ.
ಈ ಮಕ್ಕಳಿಗೆ ಏಳು ಶಿಕ್ಷಕರಿರುತ್ತಾರೆ; ನಾನು ಅವರಲ್ಲಿ ಇಬ್ಬರು ಮತ್ತು ಮುಖ್ಯಸ್ಥರನ್ನು ನೋಡಿದೆ; ಇಬ್ಬರು ತಾಂತ್ರಿಕ ಕೆಲಸಗಾರರು (ಅಂದರೆ ಮನೆಗೆಲಸ ಮಾಡುವವರು), ಇನ್ನೊಬ್ಬರು ಅಡುಗೆಯವರು. ಸಂಬಳ ತಿಂಗಳಿಗೆ 117 ರೂಬಲ್. ಇದು ಕನಿಷ್ಟ, ಇದರೊಂದಿಗೆ ಬಹಳ ಅಲ್ಪದರದಲ್ಲಿ – ತಿಂಗಳಿಗೆ 10 ರೂಬಲ್‍ಗಳಿಗೆ ಅಲ್ಲೇ ಊಟ ಕೊಡುತ್ತಾರೆ. ತಮಾಷೆಯ ವಿಷಯವೆಂದರೆ, ಇಬ್ಬರು ಶಿಕ್ಷಕರೂ ಇಂಗ್ಲೆಂಡಿನ ಶಿಕ್ಷಕರಂತೆಯೇ ಇದ್ದಾರೆ; ಒಬ್ಬಾಕೆ ಸುಮಾರು 30-35ರ ಅವಿವಾಹಿತೆ, ಕನ್ನಡಕ ಧರಿಸಿದ್ದಾಳೆ; ಕರುಣೆ ತುಂಬಿದ ಮುಖ; ಇನ್ನೊಬ್ಬಾಕೆ ಸುಂದರವಾದ ‘ವಿದ್ಯಾರ್ಥಿ-ಶಿಕ್ಷಕ’ ರೀತಿಯ ಹುಡುಗಿ. ನಮ್ಮ ಮಟ್ಟಕ್ಕೆ ಹೋಲಿಸಿದರೆ ಅವರಿಗೆ ತರಬೇತಿ ಸಾಲದು ಎನಿಸುತ್ತದೆ. ಕೀವ್‍ನ ಬೋಧನಾ ಸಂಸ್ಥೆಯಲ್ಲಿ (Pedagogical Institute) ಶಿಶುವಿಹಾರದ ಶಿಕ್ಷಕರಿಗೆ ಮೂರು ವರ್ಷಗಳ ತರಬೇತಿ ಕೋರ್ಸು ಇದೆ; ಆದರೆ ಇಲ್ಲಿರುವ ಯಾವ ಸಿಬ್ಬಂದಿಯೂ ಆ ತರಬೇತಿಯನ್ನು ಪಡೆದಿಲ್ಲ.
ನಾನು ನೋಡಿದ ಇಬ್ಬರು ಅಲ್ಪಾವಧಿ ಕೋರ್ಸುಗಳನ್ನು ಮುಗಿಸಿದ್ದರು ಮತ್ತು ಸಂಜೆಯ ತರಗತಿಗಳಿಗೆ ಹೋಗುತ್ತಿದ್ದರು; ಪಾಶ್ಚಿಮಾತ್ಯ ರಾಷ್ಟ್ರಗಳು ಯಾರನ್ನು ಸಂಪೂರ್ಣವಾಗಿ ಅರ್ಹತೆಯುಳ್ಳವರೆಂದು ಪರಿಗಣಿಸುತ್ತಾರೋ, ಅಂತಹ ಶಿಕ್ಷಕರನ್ನು ಶಾಲೆಗಳಿಗೆ ಕಳುಹಿಸುವವರೆಗೂ ಕಾಯುತ್ತಿದ್ದರೆ, ಅವರು ಶಾಲಾಪೂರ್ವ ವ್ಯವಸ್ಥೆ (ಅಥವಾ ಇಡೀ ಶಾಲಾ ವ್ಯವಸ್ಥೆ)ಯನ್ನು ಆರಂಭಿಸಲು ಇನ್ನೂ ಕಾಯುತ್ತಲೇ ಇರಬೇಕಾಗುತ್ತಿತ್ತು – ಮತ್ತೆ ಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ.
ನಾನು ಈ ಶಿಶುವಿಹಾರವನ್ನು ಇಷ್ಟೊಂದು ವಿವರಿಸುತ್ತಿರುವುದಕ್ಕೆ ಕಾರಣವೇನೆಂದರೆ, ನಾನು ರಷ್ಯಾಗೆ ಹೋಗಿದ್ದ ಸಮಯದಲ್ಲಿ ಶಾಲೆಗಳಿಗೆ ರಜೆಯತ್ತು; ಆದ್ದರಿಂದ ಕೆಲಸ ಮಾಡುತ್ತಿರುವ ಯಾವ ಶಾಲೆಯನ್ನೂ ನೋಡಲು ಸಾಧ್ಯವಾಗಲಿಲ್ಲ ಮತ್ತು ನನಗೆ ಹತ್ತಿರದಲ್ಲೇ ಸಿಕ್ಕದ್ದು ಶಿಶುವಿಹಾರ. ಅದು ಅತ್ಯುತ್ತಮವಾದ ಶಿಶುವಿಹಾರವೆಂದು ಹೇಳಲಾರೆ; ನಾನು ಅದಕ್ಕಿಂತಲೂ ಉತ್ತಮವಾದುದನ್ನು ಇಂಗ್ಲೆಂಡಿನಲ್ಲಿ ನೋಡಿದ್ದೇನೆ. ಅಲ್ಲಿ ಸಲಕರಣೆಗಳ ಕೊರತೆಯಿತ್ತು, ಆಹಾರ ಯಥೇಚ್ಛವಾಗಿರಲಿಲ್ಲ, ಶಿಕ್ಷಕರು ಪೂರ್ಣ ತರಬೇತಿ ಪಡೆದಿರಲಿಲ್ಲ, ಹೀಗೆ ಹಲವು. ಆದರೆ ಒಂದು ಶಿಶುವಿಹಾರದ ಒಳ್ಳೆಯ ಅಂಶಗಳಲ್ಲಿ ತುಂಬಾ ಮಹತ್ವ ಇಲ್ಲ; ಆದರೆ ಕೀವ್ ನಗರವೊಂದರಲ್ಲೇ, ಅದೂ ಕ್ರಾಂತಿಯ ನಂತರ ಅಸ್ತಿತ್ವಕ್ಕೆ ಬಂದ 200 ಶಿಶುವಿಹಾರಗಳಿವೆ ಎಂಬ ಸಂಗತಿಯಲ್ಲಿ ಮಹತ್ವವಿರುವಿದೆ; ಮತ್ತೆ ಎಲ್ಲಾ ಮಕ್ಕಳನ್ನು ಇದರ ವ್ಯಾಪ್ತಿಯಲ್ಲಿ ತರುವಂತೆ ವ್ಯವಸ್ಥೆಯನ್ನು ವಿಸ್ತರಿಸುವ ಪ್ರಯತ್ನದಲ್ಲೂ ಅದರ ಮಹತ್ವವಿದೆ. ಇದೇ ಮಾತುಗಳು ಕ್ರೆಷೆಗಳಿಗೂ ಅನ್ವಯಿಸುತ್ತವೆ. 
ಲೆನಿನ್‍ಗ್ರಾದ್‍ನಲ್ಲಿರುವ ಕ್ರೆಷೆಯು ನಿಜವಾಗಿಯೂ ಚೆನ್ನಾಗಿತ್ತು ಮತ್ತು ಒಳ್ಳೆಯ ಸೌಲಭ್ಯಗಳಿದ್ದವು; ಮತ್ತು ಮಕ್ಕಳು ಬಹಳ ಚೆನ್ನಾಗಿದ್ದರು ಮತ್ತು ಸಂತೋಷದಿಂದಿದ್ದರು. ರಷ್ಯನ್ನರು ವಿದೇಶಿ ಪ್ರವಾಸಿಗರಿಗೆ ಸುಮಾರಾಗಿರುವ ಕ್ರೆಷೆಯನ್ನು ಹಿಂದೆಂದೂ ಕಂಡುಕೇಳರಿಯದಂತಹದ್ದು ಎಂದು ತೋರಿಸುವಾಗ ಸ್ವಲ್ಪ ರೇಗುತ್ತದೆ. ಆದರೆ ರಷ್ಯಾದ ಬಹುಭಾಗಗಳಲ್ಲಿ ಕ್ರಾಂತಿಗೂ ಮುನ್ನ ಅದು ಕೇಳರಿಯದಿದ್ದುದು ನಿಜವೇ; ಈಗ ಅದು ನಿಜವಾಗಿಯೂ ಸಾರ್ವತ್ರಿಕವಾಗಿದೆ. ಇಂಗ್ಲಿಷ್ ನರ್ಸರಿ ಶಾಲೆಗೆ  ಹೋಲಿಸಿಕೊಂಡು ರಷ್ಯನ್ ಕ್ರೆಷೆಗಳನ್ನು ಟೀಕಿಸುವ ಮುನ್ನ, ಇಂಗ್ಲಿಷ್ ಮಕ್ಕಳಲ್ಲಿ ಎಷ್ಟು ಭಾಗ ನರ್ಸರಿ ಶಾಲೆಗಳಿಗೆ ಹೋಗುತ್ತದೆ ಮತ್ತು ಎಷ್ಟು ಭಾಗ ಹೋಗುವುದಿಲ್ಲ ಎನ್ನುವುದನ್ನು ತೋರಿಸಬೇಕು.

3. ಶಾಲೆಯ ದಿನಗಳು
ಶಿಶುವಿಹಾರದ ಹಂತ ಮುಗಿದ ಮೇಲೆ ರಷ್ಯನ್ ಮಕ್ಕಳು ಶಾಲೆಗೆ ಹೋಗುತ್ತಾರೆ. ಆಗ ಶಾಲೆಗಳು ಮುಚ್ಚಿದ್ದರಿಂದ ಸಿವಿಲ್ ಸರ್ವೀಸ್‍ನವರು ನನಗೆ ನೀಡಿದ ಸಾಮಾನ್ಯೀಕರಣಗೊಳಿಸಿದ ಮಾಹಿತಿಯೇ ಅವುಗಳ ಬಗ್ಗೆ ನಾನು ನೀಡುವ ಮಾಹಿತಿ; ಅದರ ಸಂಕ್ಷಿಪ್ತ ಸಾರಾಂಶ ಬಿಟ್ಟು ಬೇರೇನೂ ಹೇಳುವುದಿಲ್ಲ. ರಷ್ಯಾದಲ್ಲಿ ಶಾಲಾವಧಿಯು ಏಳು ವರ್ಷಗಳು; ಕಳೆದ ವರ್ಷ ನಾಲ್ಕು ವರ್ಷಗಳಿತ್ತು, ಈಗ ಹತ್ತು ವರ್ಷಗಳಿಗೆ, ಅಂದರೆ ಏಳರಿಂದ ಹತ್ತನೇ ವಯಸ್ಸಿನವರೆಗೆ ವಿಸ್ತರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಪ್ರಾಥಮಿಕ ಮತ್ತು ಸೆಕೆಂಡರಿ ಎಂದು ವಿಭಾಗಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ದೈಹಿಕ, ಸಾಂಸ್ಕೃತಿಕ ಮತ್ತು ಸಂಗೀತದ ವಿಷಯಗಳನ್ನು ಶಿಕ್ಷಕರು ಬೋಧಿಸಬೇಕು; ಸೆಕೆಂಡರಿ ಮಟ್ಟದಲ್ಲಿ ಪರಿಣಿತ ಶಿಕ್ಷಕರಿದ್ದಾರೆ. ಸಧ್ಯಕ್ಕೆ ಸೆಕೆಂಡರಿ ಶಿಕ್ಷಕರ ಕೊರತೆ ತೀವ್ರವಾಗಿದೆ; ಮತ್ತೆ ಸ್ವಲ್ಪ ಕಡಿಮೆಯದರೂ ಪ್ರಾಥಮಿಕ ಶಿಕ್ಷಕರ ಕೊರತೆಯೂ ಇದೆ. ಆದರೆ ಸೆಕೆಂಡರಿ ಶಿಕ್ಷಕರಿಗೆ ವೇತನ ಹೆಚ್ಚು; ಹಾಗಾಗಿ ಪ್ರಾಥಮಿಕ ಶಿಕ್ಷಕರು ಸೆಕೆಂಡರರಿ ಶಿಕ್ಷಣದ ಕಾರ್ಯನಿರ್ವಹಿಸಲು ಪ್ರೋತ್ಸಾಹ ಸಿಕ್ಕಿದೆ. 
ಕೆಲವೊಮ್ಮೆ ಬೇರೆ ಉತ್ತೇಜನಗಳನ್ನೂ ನೀಡುತ್ತಿದ್ದರು; ಉದಾಹರಣೆಗೆ, ಸರಬರಾಜಿನಲ್ಲಿ ಕೊರತೆಯಿದ್ದ ಕಾರಣದಿಂದಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾದ ಗಾಮೀಣ ಜಿಲ್ಲೆಯ ಶಿಕ್ಷಕರಿಗೆ ಪಡಿತರವನ್ನು ಬೃಹತ್ ಕೈಗಾರಿಕೆಯ ಕಾರ್ಮಿಕರಿಗೆ ಕೊಡುವಷ್ಟು ಸಮಾನವಾಗಿ ಕೊಡುತ್ತಾರೆ. ಬೋಧನ ಸಂಸ್ಥೆ ಮತ್ತು ಅಂತಹುದೇ ಸಂಸ್ಥೆಗಳ ಕೆಲಸಗಳ ಜೊತೆಗೆ, ಯಂಗ್ ಕಮ್ಯುನಿಸ್ಟ್ ಲೀಗ್ (komsomol) ಶಿಕ್ಷಕರಿಗೆ ವಿಶೇಷ ಕೋರ್ಸುಗಳು ಮತ್ತು ತರಬೇತಿಯನ್ನು ನೀಡುವುದರಲ್ಲಿ ಸಾಕಷ್ಟು ದುಡಿಯುತ್ತದೆ. ಶಿಕ್ಷಕರ ಟ್ರೇಡ್ ಯೂನಿಯನ್‍ಗಳು ಸಾಕಷ್ಟು ಸಂಖ್ಯೆಯಲ್ಲಿ ವಿಶ್ರಾಂತಿ ಗೃಹಗಳನ್ನು ನಡೆಸುತ್ತವೆ ಮತು ಶಿಕ್ಷಕರು ಬೇರೆ ವಿಶ್ರಾಂತಿಗೃಹಗಳಿಗೂ ಹೋಗಬಹುದು. ವೇತನಕ್ಕೆ ಸಂಬಂಧಪಟ್ಟಂತೆ, ಪ್ರಾಥಮಿಕ ಶಿಕ್ಷಕರಿಗೆ ತಿಂಗಳಿಗೆ 100 ರೂಬಲ್‍ಗಳು (ಶಾಲೆಯಲ್ಲಿ ಸ್ವಲ್ಪ ಆಹಾರವೂ ದೊರಕುತ್ತದೆ), ಸೆಕೆಂಡರಿ ಶಿಕ್ಷಕರಿಗೆ 100ರಿಂದ 200 ರೂಬಲ್‍ಗಳು ಮತ್ತು ಶಾಲಾ ಮುಖ್ಯಸ್ಥರಿಗೆ 300ರಿಂದ 400 ರೂಬಲ್‍ಗಳು. ಇದಕ್ಕಿಂತಲೂ ಕಡಿಮೆ ವೇತನ ಪಡೆಯುವ ಶಿಕ್ಷಕರು ಸಾಕಷ್ಟಿದ್ದಾರೆ; ಆದರೆ ವೇತನ ಹೆಚ್ಚಿಸಲು ಪ್ರಯತ್ನಗಳಂತೂ ನಡೆಯುತ್ತಿವೆ. (ಬೇರೆ ವೃತ್ತಿಗಳ ವೇತನವನ್ನು ಹೋಲಿಸಿ ನೋಡಲು, ಪುಸ್ತಕದ ಬೇರೆ ಅಧ್ಯಾಯಗಳನ್ನು ನೋಡಬೇಕು.) 
ಶಿಕ್ಷಕರು ಶಾಲೆಯ ಹೊರಗೆ ಉಪನ್ಯಾಸಗಳನ್ನು ನೀಡಿ, ಅದಕ್ಕೆ ಸಂಭಾವನೆ ಪಡೆಯಬಹುದು; ಅವರು ಖಾಸಗಿ ಪಾಠಗಳನ್ನೂ ಮಾಡಬಹುದು – ಉದಾಹರಣೆಗೆ, ವಿದೇಶಿ ಭಾಷೆಯ ಬೋಧನೆ; ಆದರೆ ಇದು ಅಪರೂಪ. ಅವರ ವೇತನವನ್ನು ಮತ್ತು ಶಾಲೆಗೆ ಬೇಕಾದ ಪರಿಕರಗಳನ್ನು ನಾರ್ಕೊಮ್‍ಪ್ರೊಸ್ ನೀಡುತ್ತದೆ; ಆದರೆ ತಾವೇ ಸ್ವತಃ ಶಾಲೆಗಳನ್ನು ನಡೆಸದ ಫ್ಯಾಕ್ಟರಿಗಳು, ಶಿಶುವಿಹಾರದಲ್ಲಾದಂತೆಯೇ, ಬೇರೆ ಶಾಲೆಗಳ ಜೊತೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಶಾಲೆ ನೀಡುವ ಈ ಬೆಂಬಲಕ್ಕೆ ಫ್ಯಾಕ್ಟರಿಗಳು ದೇಣಿಗೆ ನೀಡಬೇಕು.
ಶಾಲೆಗಳಲ್ಲಿ ಆಹಾರದ ಕೊರತೆ ಕಾಣಿಸುತ್ತದೆ. ಉಕ್ರೈನ್‍ನ ಚೀಫ್ ಇನ್ಸ್‍ಪೆಕ್ಟರ್ ಆಫ್ ಸೋಷಿಯಲ್ ಎಜುಕೇಷನ್ ಹೇಳುವ ಪ್ರಕಾರ, ಸಧ್ಯಕ್ಕೆ ಉಪಹಾರ ನೀಡುತ್ತಿದ್ದಾರೆ, ಮಧ್ಯಾಹ್ನದ ಊಟ ನೀಡಲು ಪ್ರಯತ್ನಿಸುತ್ತಿದ್ದಾರೆ. ಪೋಷಕರ ಸಮಿತಿಯು ಉಪಹಾರವನ್ನು ವಿತರಿಸುವ (ತಯಾರಿಸುವುದಲ್ಲ) ಮತ್ತು ಅಣಿಗೊಳಿಸುವ ಕೆಲಸವನ್ನು ಮಾಡುತ್ತದೆ; ಅದು ಶಾಲೆಗೆ ಒದಗಿಸುವ ಪರಿಕರಗಳನ್ನು ಬಿಟ್ಟು ಮತ್ತಷ್ಟು ಪರಿಕರಗಳಿಗಾಗಿ ಬೇರೆ ರೀತಿಯಲ್ಲಿ ಹಣ ಹೊಂದಿಸುತ್ತದೆ. ಶಾಲೆಯ ಸಮಯವು ಜಿಲ್ಲೆಯಿಂದ ಜಿಲ್ಲೆಗೆ, ಹೆಚ್ಚು ನಿರ್ದಿಷ್ಟವಾಗಿ ನಗರಕ್ಕೂ ಹಳ್ಳಿಗೂ ವ್ಯತ್ಯಾಸವಿರುತ್ತದೆ; ಆದರೆ ವೈದ್ಯರ ಒತ್ತಾಯದಿಂದಾಗಿ ಸಮಯವನ್ನು ಹೆಚ್ಚು ಹೆಚ್ಚು ಪ್ರಮಾಣಬದ್ಧಗೊಳಿಸಲು (standardized)  ಪ್ರಯತ್ನಗಳು ನಡೆಯುತ್ತಿವೆ. 
ಒಂದು ದಿನಕ್ಕೆ ಚಿಕ್ಕ ಮಕ್ಕಳು ಸುಮಾರು ನಾಲ್ಕು ಗಂಟೆಗಳು ಮತ್ತು ದೊಡ್ಡವರು ಆರು ಗಂಟೆಗಳು ಕ್ರಿಯಾಶೀಲವಾಗಿರುತ್ತವೆ ಮತ್ತು ಒಂದು ವರ್ಷದಲ್ಲಿ 220 ಶಾಲಾ ದಿನಗಳಿರುತ್ತವೆ; ಮಾಸ್ಕೊ ಮತ್ತು ಲೆನಿನ್‍ಗ್ರಾದ್‍ನಲ್ಲಿ ಶಾಲಾ ಜೀವನ ಮತ್ತಷ್ಟು ದೀರ್ಘವಾಗಿರುತ್ತದೆ; ಆದರೆ ಹಿಂದುಳಿದ ಪ್ರದೇಶದಲ್ಲಿ ಬಹಳಷ್ಟು ಕಡಿಮೆ. ಸುಮಾರು ಹನ್ನೆರೆಡು ವರ್ಷದ ಮಕ್ಕಳೆಲ್ಲರೂ ಶಾಲೆಯಲ್ಲಿದ್ದಾರೆ ಮತ್ತು ಅವರಿಗಿಂತ ಹೆಚ್ಚು ವಯಸ್ಸಿನವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹದಿನೈದು ವರ್ಷಕ್ಕಿಂತ ದೊಡ್ಡವರಾಗಿರುವವರಿಗೆ ಹಲವಾರು ಅವಕಾಶಗಳು ತೆರೆದಿಟ್ಟಿವೆ; ಉದಾಹರಣೆಗೆ, ಅಲ್ಪಾವಧಿ ಮುಂದುವರಿಕೆ ಶಿಕ್ಷಣದಂತೆ ಕಾಣುವ ‘ಶ್ರಮ ಶಾಲೆಗಳು’, ಹರೆಯದವರ ಪಾಲಿಟೆಕ್ನಿಕ್‍ಗಳು, ಸಂಜೆ ತರಗತಿಗಳು ಮತ್ತು ಎಲ್ಲಾ ರೀತಿಯ ತಾಂತ್ರಿಕ ಶಾಲೆಗಳಿಗೆ ಪ್ರವೇಶ ದೊರೆಯುತ್ತದೆ. ತಾಂತ್ರಿಕ ಶಾಲೆಗಳು ಅಸಾಧಾರಣವಾಗಿ ಸಾಕಷ್ಟು ಸಂಖ್ಯೆಯಲ್ಲಿವೆ ಮತ್ತು ಕೆಲವೆಡೆ ಬೇಡಿಕೆಯನ್ನು ಮೀರಿಸಿಬಿಟ್ಟಿವೆ.
ಮೂಲತತ್ವದ ದೃಷ್ಟಿಯಲ್ಲಿ ನೋಡಿದರೆ, ಸರ್ಕಾರಿ ಶಾಲೆಗಳು ಹೆಚ್ಚುಕಡಿಮೆ ಶಿಶುವಿಹಾರಗಳ ರೀತಿಯೇ ಇವೆ. ಅಲ್ಲಿ ‘ವಿದ್ಯಾರ್ಥಿ ನಿಯಂತ್ರಣ’ದ, ಉದಾಹರಣೆಗೆ ‘ಕಮ್ಯುನಿಸ್ಟ್ ಶಾಲಾ ಬಾಲಕನ ಡೈರಿ’ಯಲ್ಲಿ ಬರೆದಂತಹ ಅತಿರೇಕವನ್ನು ಈಗ ನಿಷೇಧಿಸಲಾಗಿದೆ; ಶಿಸ್ತುಕ್ರಮವು ಹೆಚ್ಚು ಹೆಚ್ಚು ಬೇರೆ ದೇಶಗಳಿಗೆ ಹೋಲುತ್ತದೆ; ಆದಾಗ್ಯೂ ಅಲ್ಲಿ ಮಕ್ಕಳೇ ನಡೆಸುವ ನ್ಯಾಯಾಲಯಗಳಿವೆ ಮತ್ತು ಹಲವಾರು ಉದ್ದೇಶಗಳಿಗಾಗಿ ಕ್ಲಬ್‍ಗಳಿವೆ. ಇಂಗ್ಲೆಂಡಿನಲ್ಲಿ ಸಿಬ್ಬಂದಿ ವರ್ಗಕ್ಕೆ ಬಿಟ್ಟುಬಿಡುತ್ತಿದ್ದಂತಹ ಕೆಲವು ಕೆಲಸಗಳನ್ನು ಸ್ವತಃ ಮಕ್ಕಳೇ ಮಾಡುತ್ತಾರೆ; ಉದಾ: ಪುಸ್ತಕಗಳ ಸರಬರಾಜಿಗೆ ಕೇಂದ್ರೀಯ ಮಕ್ಕಳ ಸಹಕಾರ ಸಂಘಗಳಿವೆ. ಹಲವಾರು ಮಕ್ಕಳ ಸಂಘಟನೆಗಳನ್ನು, ಯಾರಾದರೂ ನಿರೀಕ್ಷಿಸುವಂತೆ ಪಯೊನಿರ್‍ನಂತಹ ಕೆಂಪು ಸಂಘಟನೆಗಳು ನಡೆಸುತ್ತವೆ. ಮತ್ತು ಯುವ ಶಿಕ್ಷಕರಲ್ಲಿ ಅನೇಕರು ಕೊಮ್ಸೊಮಾಲ್‍ನಲ್ಲಿದ್ದಾರೆ. ಶಾಲೆಯ ಶಿಸ್ತಿಗೆ ಸಂಬಂಧಪಟ್ಟಂತೆ, ಈಗ ಅಂತಿಮ ಮಾತು ಶಿಕ್ಷಕರಲ್ಲಿ ಇರುವಂತೆ ಕಾಣಿಸುತ್ತದೆ; ಆದರೆ ಸೋವಿಯತ್ ವ್ಯವಸ್ಥೆಯ ಎಲ್ಲಾ ವಿಭಾಗಗಳಲ್ಲೂ ದೂರಿಗೆ ಮತ್ತು ಚರ್ಚೆಗೆ ವಿಫುಲವಾದ ಅವಕಾಶವಿದೆ. ದೂರುಗಳನ್ನು ವೈಯಕ್ತಿಕವಾಗಿ ನೀಡಬಹುದು, ಆದರೆ ಹೆಚ್ಚಿನ ಬಾರಿ ಪೋಷಕರ ಸಂಘದಿಂದಲೋ ಅಥವಾ ಟ್ರೇಡ್ ಯೂನಿಯನ್ ಮೂಲಕವೋ ಬರುತ್ತದೆ. 
ಎಲ್ಲರೂ ತುಂಬಾ ಹೆದರುವ ಆರ್‍ಕೆಐ (ಜಿ.ಆರ್.ಮಿಚಿಥನ್ಸ್ ಅಧ್ಯಾಯ ನೋಡಿ.) ಶಿಕ್ಷಣದ ವಿಷಯದಲ್ಲಿ ಅತ್ಯಂತ ವಿಶೇಷವಾದ ಸಂದರ್ಭದಲ್ಲಿ ಬಿಟ್ಟರೆ, ಮಧ್ಯಪ್ರವೇಶಿಸುವುದಿಲ್ಲ; ಆದ್ದರಿಂದ ಶಾಲೆಗಳಲ್ಲಿ ‘ತ್ರಿಕೋನ’ವೇ ಇಲ್ಲ.
ಶಾಲೆಗಳು ನಡೆಯದೇ ಇರುವಾಗ ಪಠ್ಯಕ್ರಮವನ್ನು ಅಧ್ಯಯನ ಮಾಡುವುದು ವ್ಯರ್ಥ; ಏಕೆಂದರೆ ಯಾವುದು, ಏನು ಎನ್ನುವುದನ್ನು ನೀವು ಕಣ್ಣಾರೆ ನೋಡದಿದ್ದಾಗ ಕೇವಲ ಮುದ್ರಿತ ವೇಳಾಪಟ್ಟಿಯು ಏನನ್ನೂ ಹೇಳುವುದಿಲ್ಲ; ಉದಾಹರಣೆಗೆ, ‘ಇತಿಹಾಸ’ ಎಂದರೆ, ಅದರಲ್ಲೇನಿದೆ ಮತ್ತು ಅದನ್ನು ಹೇಗೆ ಬೋಧಿಸುತ್ತಾರೆ ಎನ್ನುವುದನ್ನು ನೋಡಬೇಕು. ಅಲ್ಲಿ ಸ್ವಲ್ಪಮಟ್ಟಿಗೆ ಪಠ್ಯಪುಸ್ತಕಗಳ ಕೊರತೆಯಿದೆ; ಅದಕ್ಕೆ ಕಾಗದದ ಸರಬರಾಜಿನಲ್ಲಿರುವ ಕಷ್ಟಗಳು ಭಾಗಶಃ ಕಾರಣವಾದರೆ, ಬಹಳ ಬೇಗ ಪಠ್ಯಪುಸ್ತಕಗಳನ್ನು ಬರೆಯಲು ಸಾಧ್ಯವಾಗದಿದ್ದುದೂ ಭಾಗಶಃ ಕಾರಣ. ಕ್ರಾಂತಿಪೂರ್ವದ ಶಾಲಾ ಪುಸ್ತಕಗಳನ್ನು ನಿಷೇಧಿಸಲಾಗಿದೆ; ಅದರ ವರ್ಣಮಾಲೆ ಹಾಗೂ ಸಿದ್ಧಾಂತದ ಕಾರಣಗಳಿಂದಾಗಿ (ಆದರೆ ಶಿಕ್ಷಕರು ಅದನ್ನು ಓದಬಹುದು); ಹೊಸ ಪಠ್ಯಪುಸ್ತಕಗಳನ್ನು ಮುಖ್ಯವಾಗಿ ಸಿಬ್ಬಂದಿ ಬರಹಗಾರರು (staff writers) ಬರೆಯುತ್ತಾರೆ; ಅದನ್ನು ಶಿಕ್ಷಕರ ಟ್ರೇಡ್ ಯೂನಿಯನ್‍ಗಳು ಮತ್ತು ವಿವಿಧ ವಿಷಯ ಸಮ್ಮೇಳನಗಳು ಚರ್ಚಿಸುತ್ತವೆ. ಎಲ್ಲಾ ಪುಸ್ತಕಗಳಂತೆ, ಶಾಲಾ ಪಠ್ಯಪುಸ್ತಕಗಳೂ ಸೆನ್ಸಾರ್ ಮಂಡಳಿಯ ಅಂಗೀಕಾರ ಪಡೆಯಬೇಕು ಮತ್ತು ಸಹಜವಾಗಿಯೇ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅನುಗುಣವಾಗಿರಬೇಕು.
ಕಡೆಯಲ್ಲಿ ಸೋವಿಯತ್ ಸರ್ಕಾರದ, ಸೋವಿಯತ್ ಶಿಕ್ಷಣದ ಬಲಿಷ್ಠ ಗುಣಲಕ್ಷಣವಾದ ‘ಸಾಂಸ್ಕøತಿಕ ಸ್ವಾಯತ್ತತೆ’ಯ ಬಗ್ಗೆ ಹೇಳಲೇಬೇಕು; ಅದು ವಿವಿಧ ಭಾಷಾ ತಂಡಗಳಿಗೆ ಶಾಲೆಗಳಲ್ಲಿ ಮಾಡಿರುವ ಏರ್ಪಾಡುಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಕಾರ್ಕೊವ್ ನಗರವೊಂದರಲ್ಲೇ, ಉಕ್ರೇನಿಯನ್ ಮತ್ತು ರಷ್ಯನ್ ಬೋಧಿಸುವ ಶಾಲೆಗಳ ಜೊತೆ ಜೊತೆಗೆ, ಯಿದ್ದೇಶ್ ಬೋಧಿಸುವ ಶಾಲೆಗಳು ಮತ್ತು ಗ್ರೀಕ್, ಅರ್ಮೇನಿಯ, ಜರ್ಮನ್ ಮತ್ತು ತಾತಾರ್ ಭಾಷೆಗಳಲ್ಲಿ ಬೋಧಿಸುವ ಶಾಲೆಗಳಿವೆ. ಕಾರ್ಕೊವ್‍ನಲ್ಲಿ ಇಂಗ್ಲಿಷ್ ಬೋಧಿಸುವ ಶಾಲೆಗಳಿಲ್ಲ, ಆದರೆ ದಿಪ್ರೊಸ್ಟ್ರಾಯ್ ಮತ್ತು ಉಕ್ರೆನ್‍ನ ಇನ್ನಿತರ ಸ್ಥಳಗಳಲ್ಲಿ ಅಂತಹ ಶಾಲೆಗಳಿವೆ. ಈ ಭಾಷೆಗಳನ್ನು ಕಲಿತ ಎಲ್ಲಾ ಮಕ್ಕಳು ಶಾಲೆಯಲ್ಲಿ ರಷ್ಯನ್ ಕಲಿಯಬೇಕು. ಒಂದು ವಿದೇಶಿ ಭಾಷೆಯನ್ನು (ಸಾಮಾನ್ಯವಾಗಿ ಜರ್ಮನ್ ಅಥವಾ ಇಂಗ್ಲಿಷ್) ಕಲಿತಿರಲೇಬೇಕು; ಈ ಮಕ್ಕಳು ಸಹಜವಾಗಿಯೇ ತ್ರಿಭಾಷಿಗಳಾಗುತ್ತಾರೆ.

4. ಇನ್ನಿತರ ಅಂಶಗಳು
ಸೋವಿಯತ್ ಯೂನಿಯನ್ನಿನ ಮಕ್ಕಳ ಜೀವನವನ್ನು ಕೂರಿಸಿರುವ ಫ್ರೇಮ್ ಇದು. ಆದರೆ ಕ್ರೆಷೆ, ಶಾಲೆ ಮತ್ತು ಶಿಶುವಿಹಾರಗಳಿಂದ ಹೊರಗಿರುವ ಮಕ್ಕಳ ಜೀವನದ ಬಗ್ಗೆ ಸ್ವಲ್ಪ ತಿಳುವಳಿಕೆ ನೀಡದಿದ್ದರೆ ಚಿತ್ರ ಅಪೂರ್ಣವಾಗುತ್ತದೆ. ಬೇಸಿಗೆ ಕಾಲದಲ್ಲಿ ಲೆನಿನ್‍ಗ್ರಾದ್ ಅಥವಾ ಮಾಸ್ಕೊ ಅಥವಾ ಅಂತಹ ಯಾವುದೇ ದೊಡ್ಡ ನಗರಗಳಿಗೆ ಭೇಟಿಕೊಟ್ಟವರಿಗೆ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿಯುವ ಚಿತ್ರವೆಂದರೆ, ಬಹಳ ಕಡಿಮೆ ಬಟ್ಟೆಯುಟ್ಟ, ಅಲೆಯುತ್ತಿರುವ, ಆಟವಾಡುತ್ತಿರುವ, ನಡೆದಾಡುವವರನ್ನು ನಿಲ್ಲಿಸುವ ಮತ್ತು ಯಾವುದೇ ನಾಗರಿಕತೆಯಲ್ಲಿ ಅಂಕೆಸಂಕೆಯಿಲ್ಲದ (untramelled) ಮಕ್ಕಳಂತೆ ನಡೆದುಕೊಳ್ಳುವ ಅಗಾಧ ಸಂಖ್ಯೆಯ ಮಕ್ಕಳು. ಉದಾಹರಣೆಗೆ, ಮಾಸ್ಕೊದಲ್ಲಿ ಎಲ್ಲಾ ಕಡೆಗಳಲ್ಲಿ, ಎಲ್ಲಾ ಸಮಯದಲ್ಲಿ ನದಿಗೆ ಹಾರುವ ಮತ್ತು ನದಿಯಿಂದ ಹೊರಬರುವ ಚಿಕ್ಕಮಕ್ಕಳನ್ನು ಕಾಣಬಹುದು; ಕೆಲವೊಮ್ಮೆ ನದಿಯ ಸಂಚಾರಕ್ಕೆ ಅಪಾಯಕಾರಿಯಾಗಿ ಅಡ್ಡಬರುತ್ತಾರೆ. ಅವರು ಎಷ್ಟು ಬಟ್ಟೆ ತೊಟ್ಟಿದ್ದಾರೆನ್ನುವುದನ್ನು ನೋಡಲು ಒಬ್ಬ ಪೊಲೀಸ್ ಇಲ್ಲ. ಅವರಲ್ಲಿ ಹೆಚ್ಚಿನವರಿಗೆ ಆರಂಭದಲ್ಲಿ ಒಂದು ಜೊತೆ ನಿಕ್ಕರ್ಸ್ ಇರುತ್ತದೆ; ಅವರು ನದಿಗೆ ಹಾರಿ, ಹೊರಬಂದು, ರಷ್ಯನ್ ಬಿಸಿಲಿನಲ್ಲಿ ಮೈ ಒಣಗಿಸಿಕೊಳ್ಳುವುದನ್ನು ಯಾರಾದರೂ ನೋಡಿದರೆ, ಅವರಿಗೆ ಕೊಬ್ಬಿನಾಂಶ ಅದೆಷ್ಟೆ ಕಡಿಮೆಯಿದ್ದರೂ, ಅವರ ಬಟ್ಟೆಗಳು ಮತ್ತು ಅಭ್ಯಾಸಗಳಿಂದಾಗಿ ಬರಿಮೈ ಮೇಲೆ ಬಿದ್ದ ಸೂರ್ಯನ ಕಿರಣಗಳಿಂದಲೇ ಅತಿ ಹೆಚ್ಚು ವಿಟಮಿನ್ ಹೀರಿಕೊಳ್ಳುತ್ತಾರೆಂಬ ಭಾವನೆ ಬರುತ್ತದೆ. 
ಆದರೆ ಮಕ್ಕಳ ಶಾಲೆಯೇತರ ಸಂಘಟನೆಗಳ ಜಾಲವೂ ಸಹ ಅಸಂಖ್ಯಾತವಾಗಿವೆ. ಮೊದಲಿಗೆ, ಜೂನಿಯರ್ ಕೆಂಪು ಸೈನ್ಯಗಳು - ಪುಟ್ಟ ಮಕ್ಕಳಿಗೆ ಅಕ್ಟೋಬರ್ ಮಕ್ಕಳು, ಮಧ್ಯವಯಸ್ಸಿನ ಮಕ್ಕಳಿಗೆ ಪಯೊನಿರ್ ಮತ್ತು ಇಪ್ಪತ್ನಾಲ್ಕು ವರ್ಷದವರೆಗಿನ ದೊಡ್ಡ ಮಕ್ಕಳಿಗೆ ಯಂಗ್ ಕಮ್ಯುನಿಸ್ಟ್ ಲೀಗ್‍ಗಳಿವೆ. ಈ ಸಂಘಟನೆಗಳು, ನಾವು ಈಗಾಗಲೇ ತೋರಿಸಿಕೊಟ್ಟಂತೆ, ನಮ್ಮ ದೇಶದ ಸ್ಕೌಟ್ ಅಂಡ್ ಗೈಡ್ಸ್ ಚಳುವಳಿಯನ್ನು ಹೋಲುತ್ತದೆ; ಆದರೆ ಅವುಗಳ ಕಾರ್ಯಚಟುವಟಿಕೆ ಮತ್ತು ಮಹತ್ವವು ವಿಶಾಲವ್ಯಾಪ್ತಿಯನ್ನು ಹೊಂದಿವೆ. ಅವುಗಳು ಸರ್ಕಾರದ ಸಂಘಟನೆಯ ಭಾಗಗಳಾಗಿವೆ. ಅವುಗಳು ಯುವಜನಾಂಗವನ್ನು ಉತ್ತಮ ಕಮ್ಯುನಿಸ್ಟರನ್ನಾಗಿಸಲು ತರಬೇತಿ ನೀಡುವ ಮುಖ್ಯಮಾರ್ಗಗಳಾಗಿವೆ; ಅವರು ತಮ್ಮ ಕರ್ತವ್ಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಒಬ್ಬ ಹುಡುಗ ಅಥವಾ ಹುಡುಗಿ ಪಯೊನಿರ್ ಆಗಬೇಕೆಂದರೆ, ಕಮ್ಯುನಿಸ್ಟ್ ಪಾರ್ಟಿಯ ಅರ್ಜಿದಾರ ಸದಸ್ಯನಂತಹ ಪರೀಕ್ಷಾರ್ಥ (probation)  ಘಟ್ಟವನ್ನು ದಾಟಬೇಕು; ಸದಸ್ಯನಾದವನು ಕೆಲಸ ಮಾಡಬೇಕು, ಅದು ‘ದಿನಕ್ಕೊಂದು ಒಳ್ಳೆಯ ಕೆಲಸ’ದಂತಲ್ಲ; ಆದರೆ ರಜಾ ಶಿಬಿರ, ಶಿಶುವಿಹಾರಗಳಲ್ಲಿ ಉಪನ್ಯಾಸ ಕ್ಲಬ್ ಅಥವಾ ಅಂತಹುದೇ ಹತ್ತು ಹಲವಾರು ಚಟುವಟಿಕೆಗಳನ್ನು ಸಂಘಟಿಸಲು, ಅದನ್ನು ಮುಂದುವರೆಸಲು ಅಗತ್ಯವಿರುವಂತಹ ನಿರ್ದಿಷ್ಟ ಕೆಲಸಗಳನ್ನು ಮಾಡಬೇಕು. ಇಷ್ಟೊಂದು ಪ್ರಚಂಡ ಸಾರ್ವಜನಿಕ ಸೇವೆಯು ಕೆಲವು ಮಕ್ಕಳಲ್ಲಿ ಅಹಂಕಾರ ತರಬಹುದು ಎನ್ನುವುದನ್ನು ನಿರಾಕರಿಸಲಾಗದು; ಕಮ್ಯುನಿಸ್ಟ್ ಅಂತಃಸ್ವತ್ವ ಮತ್ತು ಕಮ್ಯುನಿಸ್ಟ್ ಘೋಷಣೆಗಳಲ್ಲಿ ತರಬೇತಿ ಪಡೆದಿರುವುದರಿಂದ ತಪ್ಪು ಮಾಡದ (self-righteous)  ಪೋರನ ಆಕ್ರಮಣಶೀಲತೆ ಕಡಿಮೆ ಅಪರಾಧ ಎನಿಸುವುದಿಲ್ಲ (ಎಲ್ಲಾ ಕಡೆಯಿರುವಂತೆ ರಷ್ಯಾದಲ್ಲೂ ಅಂತಹ ವಿದ್ಯಮಾನಗಳಿವೆ). ಆದರೆ ಇದೆಲ್ಲವೂ ಒಟ್ಟಾರೆಯಾಗಿ ನಡೆಯುತ್ತಿರುವ ಪ್ರಯೋಗದ ಒಂದು ಭಾಗ. ಕಮ್ಯುನಿಸ್ಟ್ ವಯಸ್ಕರರಂತೆ, ಕಮ್ಯುನಿಸ್ಟ್ ಹುಡುಗ-ಹುಡುಗಿಯರೂ ಈ ಮಹಾಯತ್ನದ ಭಾಗ; ಅದು ಸಮುದಾಯದ ಪ್ರತಿಯೊಬ್ಬ ಸದಸ್ಯನಲ್ಲೂ ಸಾಮಾಜಿಕ ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವ ಪಥನಿರ್ದೇಶ ಚಳುವಳಿಯಲ್ಲಿ ಇರಬಹುದಾದ ಎಲ್ಲಾ ತಪ್ಪುಒಪ್ಪುಗಳನ್ನು ಹೊಂದಿದೆ; ಆದರೆ ಅದನ್ನು ವ್ಯಕ್ತಿಗಳು ಮತ್ತು ತಂಡಗಳು ತಮ್ಮವರನ್ನು ಒಂದು ಹಂತದವರೆಗೆ ಮೇಲಕ್ಕೆ ಕೊಂಡೊಯ್ಯುವ ಮೂಲಕ ಮಾಡಬೇಕು, ಕೇವಲ ಶಾಸನ ಮತ್ತು ಸರ್ಕಾರಗಳ ಪ್ರಯತ್ನದಿಂದಲ್ಲ.
ಆದರೆ, ಯಾವುದೇ ರೀತಿಯಲ್ಲೂ ಕಮ್ಯುನಿಸ್ಟ್ ಮಕ್ಕಳೂ ಸೇರಿದಂತೆ ಎಲ್ಲರ ಶಕ್ತಿಯು ಕೇವಲ ನಾಗರಿಕ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಅಲ್ಲಿ ಕ್ರೀಡಾಪಟುಗಳಿದ್ದಾರೆ; ಎಲ್ಲಾ ರೀತಿಯ ಕ್ಲಬ್‍ಗಳಿವೆ – ಕೆಲವು ಕೆಂಪು ಸಂಘಟನೆಗಳಿಗೆ ಸೀಮಿತವಾಗಿವೆ, ಕೆಲವು ಮುಕ್ತವಾಗಿವೆ. ಈ ಕ್ಲಬ್‍ಗಳು ಮತ್ತು ಸಂಘಗಳು ಬಹಳಷ್ಟು ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ನಿಯತವಾಗಿ ನಡೆಸುತ್ತವೆ. (ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಶಾಲಾ ಚಟುವಟಿಕೆಗಳಂತೆಯೇ ಇಲ್ಲಿಯೂ ನಗದು ಬಹುಮಾನಗಳಿಲ್ಲ; ಉದಾ: ಒಳ್ಳೆಯ ಸಾಧನೆ ಮಾಡಿದ ಶಾಲೆಗೆ ಅಥವಾ ತರಗತಿಗೆ ಒಂದು ಹೊಸ ಅತ್ಯತ್ತಮ ರೇಡಿಯೋ ಅಥವಾ ಅಂಥದ್ದೇ ಏನಾದರೂ ಕೊಡುವುದು ಮತ್ತು ವ್ಯಕ್ತಿಗಳಿಗೂ ಅಷ್ಟೆ, ಬಹುಮಾನ (premia) ನೀಡಲಾಗುವುದು – ಆದರೆ ನಗದಲ್ಲ.) ಜೊತೆಗೆ, ಮಕ್ಕಳು ದೀರ್ಘಕಾಲ ಸಿಗುವ ಬೇಸಿಗೆ ರಜೆಯ ಸಮಯದಲ್ಲಿ ಹೋಗಲು ಶಿಬಿರಗಳು, ರಜಾಗೃಹಗಳು, ಮುಂತಾದವು ಅಸಂಖ್ಯಾತವಾಗಿವೆ. ಎಷ್ಟೆಂಬ ಅಂಕಿಗಳು ಸಿಗುವುದಿಲ್ಲ, ನಾನು ಭೇಟಿ ನೀಡಿದ ಕೆಲವು ಸ್ಥಳಗಳನ್ನು ಮಾನದಂಡವಾಗಿ ತೆಗೆದುಕೊಂಡರೆ, ಬೇಸಿಗೆಯ ಸಮಯದಲ್ಲಿ ನಗರದ ಶೇ.50ರಷ್ಟು ಮಕ್ಕಳು, ತಮ್ಮ ತಂದೆತಾಯಂದಿರ ಜೊತೆಗೆ ಅಥವಾ ಅವರಿಲ್ಲದೆಯೇ ಗ್ರಾಮೀಣ ಪ್ರದೇಶಕ್ಕೆ ಹೋಗುತ್ತಾರೆ.
ಈ ಶಿಬಿರಗಳು ಮತ್ತು ಮನೆಯಿಲ್ಲದ ಮಕ್ಕಳಿಗೆ ಮನೆಗಳು ರಷ್ಯಾದೆಲ್ಲೆಡೆ ಹರಡಿಕೊಂಡಿವೆ. ಮುಖ್ಯವಾಗಿ ಕ್ಷಯರೋಗ ಪೀಡಿತರಾದ ವಿದ್ಯಾರ್ಥಿಗಳಿಗೆ ‘ಕಾಡಿನ ಮನೆಗಳು’ ಮತ್ತು ‘ಕ್ಷಯರೋಗ ಆಸ್ಪತ್ರೆ’ಗಳಿವೆ; ಅವುಗಳನ್ನು ಎಷ್ಟು ಸಾಧ್ಯವೊ ಅಷ್ಟು ವೇಗವಾಗಿ ಕಟ್ಟುತ್ತಿದಾರೆ. ನಮ್ಮ ತಂಡದ ಇಬ್ಬರು ಮಾಸ್ಕೊದ ಹೊರಗಿರುವ ಕಾಡಿನ ಶಾಲೆಗೆ ಭೇಟಿ ನೀಡಿದ್ದರು; ಅಲ್ಲಿನ ಸ್ವಚ್ಛತೆ, ಸರಳತೆ ಮತ್ತು ಆಡಳಿತಕ್ರಮದ ಸಾಮಾನ್ಯ ಪ್ರಜ್ಞೆಗಳನ್ನು ನೋಡಿ ತುಂಬಾ ಮೆಚ್ಚಿಕೊಂಡರು. 
ಈ ಮಕ್ಕಳನ್ನು ನೋಡಿಕೊಳ್ಳಲು ತಗಲುವ ವೆಚ್ಚದಲ್ಲಿ ಶೇ.75ರಷ್ಟು ಭಾಗವನ್ನು ಪೋಷಕರ ಟ್ರೇಡ್ ಯೂನಿಯನ್‍ಗಳು ಭರಿಸುತ್ತವೆ; ಉಳಿದ ಹಣವನ್ನು ಪೋಷಕರು ಭರಿಸಬೇಕು; ಅವರು ಬಡವರಾಗಿದ್ದರೆ ನಾರ್ಕೊಮ್ಸ್‍ದ್ರೊವ್ ಅಥವಾ ಬೇರೆ ಯಾವುದಾದರು ಸಾರ್ವಜನಿಕ ಸಂಸ್ಥೆ ನೀಡುತ್ತದೆ. ಬಡತನದ ಕಾರಣದಿಂದ ಯಾವುದೇ ಮಗು ಲಭ್ಯವಿರುವ ಸೌಲಭ್ಯಗಳಿಂದ ವಂಚಿತವಾಗಬಾರದು ಎನ್ನುವ ದೃಢನಿಶ್ಚಯ ಶಾಲೆಗಳು ಮತ್ತು ಶಿಶುವಿಹಾರಗಳಲ್ಲಿ ಇದ್ದಂತೆಯೇ ಇಲ್ಲಿಯೂ ಎದ್ದು ಕಾಣುತ್ತದೆ. ಪೋಷಕರಿಗೆ ಖರ್ಚನ್ನು ಭರಿಸಲು ಸಾಧ್ಯವಿಲ್ಲದಿದ್ದರೆ, ಬೇರೆ ಯಾರಾದರೂ ಕೊಡಬೇಕು; ಆರೋಗ್ಯ ಸೇವೆಯ ವಿಷಯದಲ್ಲಿ ಇತ್ತೀಚಿಗೆ ಸಾರ್ವಜನಿಕ ವಿಮಾ ನಿಧಿ (Social Insurance Fund) ಯು ಸಂಗ್ರಹಿಸುತ್ತಿರುವ ಭಾರಿ ಮಿಗುತಾಯಗಳು (large surpluses) ಈ ತತ್ವವನ್ನು ಆಚರಣೆಗೆ ತರುವುದನ್ನು ಸುಲಭಗೊಳಿಸಿವೆ.
ಬೇಸಿಗೆಯ ಸಮಯದಲ್ಲಿ ನಗರದಲ್ಲೇ ಉಳಿಯುವ ಮಕ್ಕಳಿಗೆ ಯಾವುದೇ ಅವಕಾಶಗಳಿಲ್ಲದೆ ಸಂಪೂರ್ಣವಾಗಿ ಬಿಟ್ಟುಬಿಡುವುದಿಲ್ಲ. ಸೂರ್ಯ, ಗಾಳಿ ಮತ್ತು ನದಿಯಂತಹ ಸಾಮಾನ್ಯ ಸಂಪತ್ತನ್ನು ಬಿಟ್ಟು ಬೇರೆ ಕೂಡ ಇವೆ; ಮಕ್ಕಳಿಗೆ ವಿಶೇಷ ಸೌಕರ್ಯಗಳಿರುವ ಸಾರ್ವಜನಿಕ ಉದ್ಯಾನವನಗಳಿವೆ – ಅಲ್ಲಿ ಹೆಚ್ಚು ಸ್ನಾನದ ಮನೆಗಳಿದ್ದಿದ್ದರೆ ಉತ್ತಮವಾಗಿರುತ್ತಿತ್ತು. ಮಾಸ್ಕೊದಲ್ಲಿರುವ ಸಂಸ್ಕøತಿ ಮತ್ತು ವಿರಾಮದ ಉದ್ಯಾನವನದಲ್ಲಿ ಬಹಳ ವಿಶಾಲವಾದ ಪ್ರದೇಶವನ್ನು ಆವರಿಸಿಕೊಂಡಿರುವ ಮಕ್ಕಳ ಗ್ರಾಮವಿದೆ; ಅಲ್ಲಿ ಎಂಟು ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಮಕ್ಕಳು ಕಡಿಮೆ ಖರ್ಚಿನಲ್ಲಿ ಊಟವನ್ನೂ ಮಾಡಿಕೊಂಡು ಇಡೀ ದಿನ ಸಮಯ ಕಳೆಯಬಹುದು; ಈ ಗ್ರಾಮದೊಳಗೆ ಮಕ್ಕಳಿಗೇ ಮೀಸಲಾದ ಈಜುಕೊಳಗಳಿವೆ; ಆಟದ ಮೈದಾನಗಳಿವೆ; ಮರಗೆಲಸ, ಮಾಡೆಲ್ ಮಾಡುವುದು, ಮುಂತಾದವುಗಳನ್ನು ಮಾಡಲು ಮನೆಗಳಿವೆ; ಗ್ರಹವ್ಯೂಹದರ್ಶನ ಕೇಂದ್ರ (planetarium)ಗಳಿವೆ; ಇಡೀ ಪ್ರದೇಶವನ್ನು ಸುತ್ತುವ, ನಿಲ್ದಾಣಗಳಿರುವ, ನಾಲ್ಕು ಅಡಿ ಎತ್ತರದಲ್ಲಿರುವ ಪೂರ್ಣಪ್ರಮಾಣದ ರೈಲಿದೆ; ಮಕ್ಕಳನ್ನು ನೋಡಿಕೊಳ್ಳಲು ಬೋಧಕ ಸಿಬ್ಬಂದಿ ವರ್ಗವೇ ಇದೆ. ಹೀಗೆ, ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಬಂದು, ಮಕ್ಕಳು ಸುರಕ್ಷಿತವಾಗಿರುವುದನ್ನು ತಿಳಿದು, ತಾವು ಹೊರಗೆ ಸುತ್ತಾಡುವುದನ್ನು ಅನುಭವಿಸಲು ಸಾಧ್ಯವಾಗಿದೆ. ರಜಾದಿನಗಳಲ್ಲಿ ಮಕ್ಕಳ ಗ್ರಾಮವು ಬೆಳಗಿನ ಸಮಯದಲ್ಲಿ ಹೆಚ್ಚುಕಡಿಮೆ ಖಾಲಿಯಿರುತ್ತದೆ; ಏಕೆಂದರೆ ತಮ್ಮ ಮುದ್ದಿನ ಮಕ್ಕಳ ಜೊತೆ ಚೆನ್ನಾಗಿ ಕಾಲಕಳೆಯಬಹುದೆಂದು ಪೋಷಕರಿಗೆ ಅನಿಸುತ್ತದೆ. ಆದರೆ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ತಮ್ಮ ಮುದ್ದಿನ ಮಕ್ಕಳ ಜೊತೆ ಆಟವಾಡುವ ಉತ್ಸಾಹವೆಲ್ಲ ಬರಿದಾಗಿ, ಸುಸ್ತಾಗಿ ಹೋದ ಪೋಷಕರು ತಮ್ಮ ಮಕ್ಕಳನ್ನು ಆತುರಾತುರವಾಗಿ ಮಕ್ಕಳ ಗ್ರಾಮಕ್ಕೆ ತಂದು ಬಿಸಾಕುತ್ತಾರೆ ಎಂದು ಅಲ್ಲಿನ ಸಿಬ್ಬಂದಿ ಮುಸಿಮುಸಿ ನಗುತ್ತಾ ಹೇಳಿದರು.
ಎಸ್.ಎನ್.ಸ್ವಾಮಿ

(ಮುಂದುವರೆಯುತ್ತದೆ)

No comments:

Post a Comment