Saturday 19 August 2017

ವ್ಯಕ್ತಿ ಪರಿಚಯ - ಬಚೇಂದ್ರಿಪಾಲ್



ಚಿಕ್ಕ ವಯಸ್ಸಿನಲ್ಲಿ ಕಂಡ ಕನಸ್ಸನ್ನು ಸಾಕಾರ ಮಾಡಿಕೊಂಡ ಮಹಿಳೆಯ ಸಾಹಸಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅವರು ಮತ್ತಾರೂ ಅಲ್ಲ ಮೌಂಟ್ ಎವರೆಸ್ಟ್  ಏರಿದ ಪ್ರಪ್ರಥಮ ಭಾರತೀಯ ಮಹಿಳೆ ಬಚೇಂದ್ರಿಪಾಲ್ ರವರು.
ವ್ಯಾಪಾರಿ ಕಿಶನ್ ಸಿಂಗ್ ಪಾಲ್ ಮತ್ತು ಹಂಸದೇವಿಯವರ ಮೂರನೇ ಮಗಳಾಗಿ ಬಚೇಂದ್ರಿಯವರು  1954 ಮೇ 24 ರಂದು ನಾಕುರಿ ಎಂಬಲ್ಲಿ ಜನಿಸಿದರು. ಬಾಲ್ಯದಿಂದಲೂ ತುಂಟಾಟ ಮಾಡುತ್ತಿದ್ದ ಇವರ ಮೇಲೆ ತಂದೆಯ ಕಷ್ಟಸಹಿಷ್ಣುತೆ ಮತ್ತು ನೈತಿಕತೆ ತುಂಬಾ ಪ್ರಭಾವ ಬೀರಿತ್ತು. ಇವರನ್ನು ಡುಂಡ-ಹರ್ಸಿಲ್ ಶಾಲೆಗೆ ಸೇರಿಸಲಾಯಿತು. ಈ ಶಾಲೆ ಆರು ತಿಂಗಳಿಗೊಮ್ಮೆ ಎರಡೂ ಊರುಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಅಂದರೆ ಚಳಿಗಾಲದಲ್ಲಿ ಡುಂಡದಲ್ಲೂ, ಬೇಸಿಗೆಯಲ್ಲಿ ಹರ್ಸಿಲ್ ನಲ್ಲೂ ನಡೆಯುತ್ತಿತ್ತು. ಈ ಶಾಲಾ ಸ್ಥಳಾಂತರದಿಂದ ಬಚೇಂದ್ರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ನಿಸರ್ಗದ ಮಡಿಲಿನಲ್ಲಿ ಹೆಚ್ಚು ಕಾಲ ಕಳೆಯುವಂತಾಯಿತು. ಚಿಕ್ಕ ಪುಟ್ಟ ಬೆಟ್ಟ ಗುಡ್ಡಗಳನ್ನು ಹತ್ತುವುದು,ತೊರೆಗಳಲ್ಲಿ ಆಟವಾಡುವುದು ತುಂಬಾ ಖುಷಿ ಕೊಡುತ್ತಿದ್ದವು. 
ಒಮ್ಮೆ ಬಚೇಂದ್ರಿ ತಮ್ಮಹನ್ನರಡನೇ ವಯಸ್ಸಿನಲ್ಲಿ  ಶಾಲೆಯ ಮಕ್ಕಳ ಜೊತೆ ಹತ್ತಿರದಲ್ಲಿದ್ದ ಪರ್ವತವನ್ನು ಏರಲು ನಿರ್ಧರಿಸಿ ಯಾವ ಸಿದ್ಧತೆಯೂ ಇಲ್ಲದೆ ಹೊರಟರು. ಉತ್ಸಾಹದಿಂದ ಅರಿವಿಲ್ಲದೆ ಎಲ್ಲರೂ ಸುಮಾರು 4000 ಮೀಟರ್ ಎತ್ತರವನ್ನು ಕ್ರಮಿಸಿದ್ದರು. ಅಲ್ಲಿ ಹಿಮ ಬೀಳುತ್ತಿದ್ದರಿಂದ ಎಲ್ಲರು ಕುಣಿದು ಕುಪ್ಪಳಿಸಿದರು. ತಿನ್ನಲೂ, ಕುಡಿಯಲು ಏನೂಯಿಲ್ಲದೆ ,ಆಯಾಸಗೊಂಡ ಮಕ್ಕಳು ಹಿಂತಿರುಗಲು ದಾರಿ ತಿಳಿಯದಂತಾಗಿ ಭಯಗೊಂಡರು. ರಾತ್ರಿಯಲ್ಲಾ ಅಲ್ಲೇ ಕಳೆದು ಮರುದಿನ ಊರಿಗೆ ಹಿಂತಿರುಗಿದರು. ಈ ಪುಟ್ಟ ಪರ್ವತಾರೋಹಣವೇ ಮುಂದಿನ ಮೌಂಟ್ ಎವರೆಸ್ಟ್ ಆರೋಹಣಕ್ಕೆ ನಾಂದಿಯಾಗುವುದು ಎಂದು ಯಾರೂ ಊಹಿಸಿರಲಿಲ್ಲ.
ಇಲ್ಲಿನ ಹೆಣ್ಣುಮಕ್ಕಳು ಹೆಚ್ಚೇನು ಓದುತ್ತಿರಲಿಲ್ಲ. ಇವರ ಅಕ್ಕನು ಸಹ ಓದದೆ ಮನೆಕೆಲಸಕ್ಕೆ ತೊಡಗಿದಳು. ಆದರೆ ಸ್ವತಂತ್ರ ಮನೋಭಾವದ ಬಚೇಂದ್ರಿ ಸಾಹಸ ಗುಣವುಳ್ಳವಳು. ಅಣ್ಣ ಬಚ್ಚನ್ ಸಿಂಗ್ ಒಬ್ಬ ಕ್ರೀಡಾಪಟು ಹಾಗೂ ಪರ್ವತಾರೋಹಿ. ಅಣ್ಣನ ಸಾಹಸಗಳ ಗುಣಗಳಿಂದ ಪ್ರೇರಣೆಗೊಂಡ ಬಚೇಂದ್ರಿಗೆ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲ ಮಹತ್ತರವಾಗಿ ಬೆಳೆದಿತ್ತು.
ತುಂಟತನದಲ್ಲಿ ಮುಂದಿರುವಂತೆ ಓದಿನಲ್ಲೂ ಚುರುಕಾಗಿದ್ದ ಬಚೇಂದ್ರಿಯ ಗ್ರಹಣ ಶಕ್ತಿ ಅಪಾರವಾಗಿತ್ತು  ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು  ಬಹುಮಾನಗಳನ್ನು ಪಡೆಯುತ್ತಿದ್ದರು. 8 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾದರೂ  ತಂದೆಯ ಆರ್ಥಿಕ ಪರಿಸ್ಥಿತಿಯಿಂದ ಮುಂದೆ ಓದಿಸಲು ಸಾಧ್ಯವಿಲ್ಲವೆಂದರೂ, ಎದೆಗುಂದದೆ ಬಚೇಂದ್ರಿಯವರು ಮನೆಯ ಕೆಲಸಗಳನ್ನು ಮುಗಿಸಿ ಸಂಜೆಯ ಮೇಲೆ ಸಹಪಾಠಿಗಳಿಂದ 9 ನೇ ತರಗತಿಯ ಪಾಠದ ಪುಸ್ತಕಗಳನ್ನು ತಂದು ಮನೆಯಲ್ಲಿಯೇ ಓದುತ್ತಿದ್ದಳು. ಇದನ್ನು ಕಂಡ ಅಕ್ಕ ತಂದೆಗೆ " ನಾನಂತೂ ಶಾಲೆಗೆ ಹೋಗಲಿಲ್ಲ ಇಷ್ಟು ಆಸಕ್ತಿಯಿರುವ ಇವಳನ್ನು ಮುಂದೆ ಓದಿಸದಿದ್ದರೆ ಇವಳ ಭವಿಷ್ಯವನ್ನು ಹಾಳು ಮಾಡಿದಂತೆ ಇವಳ ಕೆಲಸಗಳನ್ನು ನಾನು ಮಾಡುತ್ತೇನೆ ಇವಳನ್ನು ಶಾಲೆಗೆ ಕಳುಹಿಸಿ " ಎಂದು ಕೇಳಿಕೊಂಡಳು. ಮನ ಕರಗಿದ ತಂದೆ ಶಾಲೆಗೆ ಹೋಗಲು ಅನುಮತಿ ನೀಡಿದರು. 
ಓದಿನ ಜೊತೆಗೆ  ಹೊಲಿಗೆಯನ್ನು  ಕಲಿತು ತಮ್ಮ ಓದಿನ ವೆಚ್ಚವನ್ನು ನೋಡಿಕೊಳ್ಳುತ್ತಿದ್ದರು. ಹತ್ತನೇ ತರಗತಿಯಲ್ಲಿ  ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದರು. ನಂತರ ಪ್ರಾಂಶುಪಾಲರ ಸಹಾಯದಿಂದ ಕಾಲೇಜಿಗೆ ಸೇರಿ ಮುಂದೆ ಬಿ.ಎ ನಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ  ತೆಗೆದುಕೊಂಡರು. ಕಾರಣ ಕಾಳಿದಾಸನ ಕೃತಿಗಳನ್ನು  ಓದುವ ಸಲುವಾಗಿ. ಏಕೆಂದರೆ ಅದರಲ್ಲಿ ಅವರ ಕನಸಿನ ತಾಣವಾದ ಹಿಮಾಲಯದ ಬಗ್ಗೆ ಅನೇಕ ವಿಚಾರಗಳಿರುತ್ತವೆಯೆಂದು. 
ಇವರು ಬಿ.ಎ ಓದುವಾಗ ರೈಫೆಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು. ಮತ್ತು  ರೈಫೆಲ್ ನ ಬಿಡಿ ಭಾಗಗಳನ್ನು ಜೋಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯುವುದರ ಮೂಲಕ ಹುಡುಗರಿಗೆ ಮೀಸಲು ಎಂದು ತಿಳಿದಿದ್ದ ಸ್ಪರ್ಧೆಯಲ್ಲಿ ಗೆಲವು ಪಡೆದು ಪ್ರಖ್ಯಾತಿಯಾದರು. ನಂತರ ಬಿ.ಎ ಮುಗಿಸಿ ಡೆಹ್ರಾಡೂನಿನ ಡಿ ವಿ ಎ ಕಾಲೇಜಿನಲ್ಲಿ ಎಂ.ಎ ಗೆ ಸೇರಿ ಪದವಿಯನ್ನು ಪಡೆದರು ನಂತರ ಬಿ.ಎಡ್ ನ್ನು ಮುಗಿಸಿದರು.  ನಾಕುರಿ ಗ್ರಾಮದಲ್ಲಿ ಅತೀ ಹೆಚ್ಚು ಓದಿದ ಮಹಿಳೆಯೆನಿಸಿಕೊಂಡರು ಬಚೇಂದ್ರಿ ಪಾಲ್.
ಓದು ಮುಗಿದ ನಂತರ ಸರಿಯಾದ ಹುದ್ದೆ ಸಿಗದ ಕಾರಣ ಅಣ್ಣನ ನೆರವಿನಿಂದ      N I M ( ನೆಹರು ಇನ್ಸ್‌ಟಿಟ್ಯೂಟ್  ಆಫ್ ಮೌಂಟೆನಿರಿಂಗ್) ಗೆ ಪರ್ವತಾರೋಹಣ ತರಬೇತಿಗಾಗಿ ಅರ್ಜಿಯನ್ನು ಹಾಕಿದರು ಆದರೆ ಸೀಟ್ ಗಳು ಮುಗಿದಿದ್ದ ಕಾರಣ ಮುಂದಿನ ವರ್ಷಕ್ಕೆ ಪ್ರವೇಶ ದೊರೆಯಿತು. ಸಹಪ್ರಾಂಶುಪಾಲರಾಗಿದ್ದ ಮೇಜರ್ ಪ್ರೇಮ್ ಚಂದ್ರ ರವರ ಮಾರ್ಗದರ್ಶನದಲ್ಲಿ ತರಬೇತಿ ಆರಂಭವಾಯಿತು. ಎಲ್ಲರಂತೆ ಒಂದು ಸರ್ಟಿಫಿಕೇಟ್  ಸಿಗಬಹುದೆಂದು ನಿರೀಕ್ಷಿಸಿದ್ದ ಇವರಿಗೆ 'A' ಗ್ರೇಡ್ ದೊರೆಯಿತು. ಜೊತೆಗೆ " ಇದು ಎವರೆಸ್ಟ್ ಗಾಗಿ ಹುಟ್ಟಿ ಜೀವ " ಎಂದು ಪ್ರೇಮ್ ಚಂದ್ರ ರವರ ಹೊಗಳಿಕೆಗೂ ಪಾತ್ರರಾದರು.
1984 ರಲ್ಲಿ ಐ.ಎಂ.ಎಫ್ (ಇಂಡಿಯನ್ ಮೌಂಟೆನಿರಿಂಗ್ ಫೌಂಡೇಶನ್) ಸಂಸ್ಥೆಯು ತನ್ನ 4 ನೇ ಎವರೆಸ್ಟ್ ಪರ್ವತಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಿತು. ಈ ಬಾರಿಯ ತಂಡದಲ್ಲಿ ಬಚೇಂದ್ರಿಪಾಲ್ ರವರಿಗೆ ಅವಕಾಶ ದೊರೆಯಿತು. ನಂತರ ಎನ್.ಐ.ಎಂ ನ ಮುಂದಿನ ಕೋರ್ಸ್ ನಲ್ಲಿ ಭಾಗವಹಿಸಿ ಸುಮಾರು 6397 ಮೀಟರ್ ಎತ್ತರದ " ಕಪ್ಪು ತುದಿ "(black peak) ಪರ್ವತವನ್ನು ಏರಿ A ಗ್ರೇಡ್ ಪಡೆದರು. ಗುರುಗಳ ಉತ್ತೇಜನದಿಂದ "ಎವರೆಸ್ಟ್ 84 " ರ ಆರೋಹಣದಲ್ಲಿ ಭಾಗವಹಿಸಲು ಒಪ್ಪಿಗೆಯನ್ನು ನೀಡಿ  ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡತೊಡಗಿದರು. ನಂತರ 1982 ರಲ್ಲಿ 6672 ಮೀಟರ್ ಎತ್ತರದ ಗಂಗೋತ್ರಿಯನ್ನು ಮತ್ತು ರದುಗಾರಿಯಾ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿದರು.
1983 ರಲ್ಲಿ ಎನ್.ಎ.ಎಫ್ ನ ಮುಖ್ಯ ಕಾರ್ಯದರ್ಶಿಯಾಗಿ ಗ್ಯಾನ್ ಸಿಂಗ್ ರವರು ಅಡ್ವೆಂಚರ್ ಕೋರ್ಸ್ ನ್ನು ಹೇಳಿಕೊಡಲು ಬಂದರು. ಅವರ ಸಲಹೆಯಂತೆ ಬಚೇಂದ್ರಿಪಾಲ್ ರವರು ಹೆಣ್ಣು ಮಕ್ಕಳಿಗಾಗಿ ಎವರೆಸ್ಟ್  ಆರೋಹಣ ತರಬೇತಿ ನೀಡುವ ಕ್ಲಬ್ ನ್ನು ಆರಂಭಿಸಿ ಮಕ್ಕಳಿಗೆ ಕಲಿಸುತ್ತಾ, ತಾವೂ ಕಲಿಯುತ್ತ ಮನೆಗೆ ಆರ್ಥಿಕವಾಗಿ ನೆರವಾದರು. ಈ ಸಮಯದಲ್ಲಿ ಅನೇಕ ಪರ್ವತಗಳನ್ನು ಏರಿದರು,ಹರಿವ ನದಿಗಳನ್ನು ದಾಟುವುದನ್ನು, ಕಾಡು ಪ್ರಾಣಿಗಳಂದ ರಕ್ಷಣೆ ಪಡೆಯುವುದನ್ನು ತಿಳಿದರು.
1983 ರಲ್ಲಿ ಬಚೇಂದ್ರಿಪಾಲ್ ಇನ್ನಿಬ್ಬರು ಪರ್ವತಾರೋಹಿಗಳೊಂದಿಗೆ ದೂರದರ್ಶನದ ಸಂದರ್ಶನದಲ್ಲಿ ಭಾಗವಹಿಸಿದರು. ಮತ್ತು 1983 ರಲ್ಲಿ ನಡೆದ   "ಹಿಮಾಲಯನ್ ಮೌಂಟೆನಿರಿಂಗ್ ಅಂಡ್ ಟೂರಿಸಂ" ನ ಸಭೆಯಲ್ಲಿ ಪ್ರಪ್ರಥಮವಾಗಿ ಎವರೆಸ್ಟ್ ಏರಿದ ತೇನ್ ಸಿಂಗ್ ಮತ್ತು ಪ್ರಥಮ ಜಪಾನಿನ ಮಹಿಳೆ ಜುಂಕೋ ತಬೈ ರವರುಗಳು  ಭಾಗವಹಿಸಿದ್ದರು. ಈ ಸಭೆಯಲ್ಲಿ ಬಚೇಂದ್ರಿ ಪಾಲ್ ರವರು ಸಹ ಪಾಲ್ಗೊಂಡಿದ್ದರು.
"ಎವರೆಸ್ಟ್ 84 " ರ ತಂಡದ ಅಂತಿಮ ಆಯ್ಕೆಯಲ್ಲಿ ಇವರು ಆಯ್ಕೆಯಾದರು. ಇದಕ್ಕಾಗಿ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿಯುವುದು ಮತ್ತು ಭಾರವಾದ ಕಲ್ಲುಗಳನ್ನು ಹೊರುವುದರಿಂದ ಮೂಲಕ ದೇಹವನ್ನು ಕಠಿಣ ಪರಿಶ್ರಮಕ್ಕೆ ಹೊಂದುವಂತೆ ತಯಾರಾಗುತ್ತಿದ್ದರು. ಇದನ್ನು  ನೋಡಿದ ತಾಯಿಯು " ಇಷ್ಟೆಲ್ಲಾ ಓದಿ ಗುಡ್ಡ ಏಕೆ ಹತ್ತಬೇಕು" ಎಂಬ ಪ್ರಶ್ನೆಗೆ ಇವರು ಉತ್ತರಿಸುತ್ತಾ " ಮುಂಬರುವ ದಿನಗಳಲ್ಲಿ ನಿನ್ನ ಮಗಳನ್ನು ಇಡೀ ಜಗತ್ತೇ ಕೊಂಡಾಡುತ್ತದೆ" ಎಂದು ಹೇಳುತ್ತಿದ್ದರು. ಇವರಿಗೆ ಅಣ್ಣನ ಪೂರ್ಣ ಬೆಂಬಲವಿತ್ತು.
1983 ರ ಡಿಸೆಂಬರ್ ನಲ್ಲಿ ಅಭ್ಯರ್ಥಿಗಳೆಲ್ಲಾ  ಐ.ಎಂ.ಎಫ್ ಸೇರಿ ಅಭ್ಯಾಸವನ್ನು ಪ್ರಾರಂಭಿಸಿದರು. ಮತ್ತು ಶರೀರವನ್ನು ಪರ್ವತದ ಎತ್ತರದ ವಾತಾವರಣಕ್ಕೆ ಹೊಂದುವಂತೆ "ಆಕ್ಲಮಟೈಸ್" ಮಾಡಲು ಅನೇಕ ಕಠಿಣ ಪರಿಶ್ರಮದ ತರಬೇತಿಯನ್ನು ನೀಡಲಾಯಿತು.ನಂತರ ಗ್ಯಾನ್ ಸಿಂಗ್ ರವರ ಸಹಾಯದಿಂದ ಟಾಟಾ ಐರನ್ ಸ್ಟೀಲ್ ಕಂಪನಿಯಲ್ಲಿ ಬಚೇಂದ್ರಿ ಪಾಲ್ ತವರಿಗೆ ಸಾಹಸ ಕ್ರೀಡೆಗಳ ಪ್ರಚಾರಕಿ ಹುದ್ದೆ ದೊರೆಯಿತು.
ತಂದೆ, ತಾಯಿ ಮತ್ತು ತಮ್ಮ ಗ್ರಾಮದವರೆಲ್ಲರ ಹಾರೈಕೆಯೊಂದಿಗೆ ಬಚೇಂದ್ರಿ ಪಾಲ್ ರವರು ಎವರೆಸ್ಟ್ ಯಾನಕ್ಕೆ ದೆಹಲಿಗೆ ಹೊರಟರು. 1984 ರ ಮಾರ್ಚ್ 7 ರಂದು "ಎವರೆಸ್ಟ್ 84 " ರ ತಂಡ ದೆಹಲಿಯಿಂದ ಹೊರಟು ಕಠ್ಮಂಡುಗೆ ತೆರಳಿ ಮುಂದೆ ಜರಿ ಯ ಮೂಲಕ ನಾಮಚೆ ಬಜಾರ್ ನ್ನು ಸೇರಿತು. ಇಲ್ಲಿಂದ ಹಿಮಾಲಯವನ್ನು ಹತ್ತಿರದಿಂದ ನೋಡಿದ ಬಚೇಂದ್ರ ಪಾಲ್ ರವರಲ್ಲಿ ಏರುವ ತವಕ ಹೆಚ್ಚಾಗಿ ನಿಂತಲ್ಲಿಯೇ ಕೈ ಮುಗಿದು "ಓ ಮಹಾತಾಯಿ  ನಿನ್ನ ಮಗಳು ನಿನ್ನನ್ನು ನೋಡಲು ಕಾತುರದಿಂದ ಬಂದಿದ್ದಾಳೆ ದಯ ಮಾಡಿ ಪ್ರೀತಿಯಿಂದ ನಿನ್ನಲ್ಲಿ ಸೇರಿಸಿಕೊ " ಎಂದು ಬೇಡಿದರು. 
ಇಲ್ಲಿಂದ ಹೊರಟ ತಂಡ ಲಾಮರವರಿಂದ ಆಶೀರ್ವಾದ ಪಡೆದು ಫೆರಿಚೆ ಎಂಬ ಸ್ಥಳಕ್ಕೆ ಬಂದರು. ಅತಿಯಾದ ಹಿಮಪಾತದಿಂದ ಸಾವಿನ ಸುದ್ದಿ ಕೇಳಿದ ಬಚೇಂದ್ರಿ ಪಾಲ್ ರವರೂ ಅಳುಕಿದರು. ನಂತರ ಕರ್ನಲ್ ಕುಲಾಲ್ ಮತ್ತು ಪ್ರೇಮ್ ಚಂದ್ ರವರ ಮಾತುಗಳಿಂದ ಸ್ಪೂರ್ತಿಗೊಂಡರು. ಹಾಗೂ ಮತ್ತೊಮ್ಮೆ ಭೇಟಿಯಾದ ತೇನ್ ಸಿಂಗ್ ಅಳುಕಿದ ಇವರಿಗೆ " ಎಲ್ಲಾ ಮಹಾ ಪ್ರಯಾಣಗಳು ಶುರುವಾಗುವುದು ಮೊದಲ ಹೆಜ್ಜೆಯಲ್ಲಿಯೇ, ನಿನ್ನ ಮೊದಲ ಪ್ರಯತ್ನ ಯಶಸ್ವಿಯಾಗಲಿ ಹೋಗಿ ಬಾ" ಎಂದು ಹಾರೈಸಿದರು. ಇದರಿಂದ " ಏನೇ ಆದರೂ ಸರಿ ಎವರೆಸ್ಟ್ ಅನ್ನು ಏರುವೆ" ಎಂಬ ಛಲ ದೃಢವಾಯಿತು. 
ಮೂರು ಪಂಗಡಗಳಾಗಿ ಹೊರಟ ತಂಡ ತಮ್ಮ ಪ್ರಯಾಣವನ್ನು ಮುಂದುವರಿಸಿತು. 1984 ರ ಏಪ್ರಿಲ್ 14-15 ರಂದು ಹಿಮಪಾತ ಪ್ರಾರಂಭವಾಗಿ ಲೋತ್ಸೆಯ ಶಿಖರದಿಂದ ಹಿಮಗಡ್ಡೆಗಳು ಕೆಳಗುರುಳುತ್ತಿದ್ದವು. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಎಲ್ಲರನ್ನೂ ಹಿಮದರಾಶಿ ಆವರಿಸಿತು.ಎಲ್ಲರೂ ಹಿಮಗಡ್ಡೆಗಳನ್ನು ಕತ್ತರಿಸಿ ಹೊರ ಬಂದರು. ಹೀಗೆ ಹೊರ ಬಂದ ಬಚೇಂದ್ರಿ ಪಾಲ್ ತಮ್ಮ ನೋವನ್ನು ಲೆಕ್ಕಿಸದೆ ಎಲ್ಲರ ಶುಶ್ರೂಷೆ ಮಾಡಿದರು. ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ  ತಮ್ಮ ಪ್ರಯಾಣವನ್ನು ಮುಂದುವರಿಸಿ ಮೇ 22 ರ ರಾತ್ರಿ ಸೌತ್ ಕೋಲ್ ನ್ನು ತಲುಪಿದರು. ಮಾರನೆಯ ದಿನ ಆಂಗ್ ದೋರ್ಜಿ ಯೊಂದಿಗೆ ಬಚೇಂದ್ರಿಪಾಲ್ ಎವರೆಸ್ಟ್ ನ್ನು ಏರಲು ಹೊರಟರು.ಎಲ್ಲಾ ಅಡೆತಡೆಗಳನ್ನು ಎದುರಿಸುತ್ತಾ, ದೃಢವಾದ ಹೆಜ್ಜೆಯಳನ್ನಿಡುತ್ತ ಮಧ್ಯಾಹ್ನ ಸುಮಾರು ಒಂದು ಘಂಟೆಗೆ ಬಚೇಂದ್ರಿಯವರು ಪ್ರಪಂಚದ ಅತಿ ಎತ್ತರದ ಎವರೆಸ್ಟ್ ನ ಶೃಂಗದಲ್ಲಿ ಪಾದಾರ್ಪಣೆ ಮಾಡಿ, ತಲೆ ಬಾಗಿ ನಮಸ್ಕರಿಸಿದರು. ಭಾರತದ ತ್ರಿವರ್ಣ ಧ್ವಜ ಮತ್ತು 7 ಸಿಸ್ಟರ್ ತಂಡದ ಧ್ವಜವನ್ನು ನೆಟ್ಟು ಅಲ್ಲಿಯೇ ಸುಮಾರು 43 ನಿಮಿಷಗಳನ್ನು ಕಳೆದರು. 

ಹಿಂದಿರುಗಿದ ಇವರು ಅನೇಕ ಸಭೆ, ಸಮಾರಂಭ ಹಾಗೂ ಸಂದರ್ಶನಗಳಿಲ್ಲಿ ಭಾಗವಹಿಸಿದರು. ಎವರೆಸ್ಟ್ ಅಲ್ಲದೆ ಯೂರೋಪಿನ ಅತೀ ಎತ್ತರದ ಶಿಖರ ಮೌಂಟ್ ಬ್ಲಾಕ್ ನ್ನು ಏರಿದರು.
1985 ರಲ್ಲಿ ಮಹಿಳೆಯರೇ ಇದ್ದ ಭಾರತ-ನೇಪಾಳ ಪರ್ವತಾರೋಹಣದ ತಂಡದ ನೇತೃತ್ವ ವಹಿಸಿ ಯಶಸ್ವಿಯಾಗಿ ಆರೋಹಣ ಮಾಡಿ ಬಂದರು.ಈ ಆರೋಹಣ ಏಳು ದಾಖಲೆಗಳನ್ನು ನಿರ್ಮಿಸಿತು. 
1994 ರಲ್ಲಿ ಸಾಹಸ ರಾಫ್ಟಿಂಗ್ ಕ್ರೀಡೆಯ ಮಹಿಳಾ ತಂಡದ ಮುಖ್ಯಸ್ಥರಾದರು.

 1994 ರಲ್ಲಿ ಮೊದಲ ಮಹಿಳಾ ಪರ್ವತಾರೋಹಣದ ಗುಂಪಿನೊಂದಿಗೆ "ಇಂದಿರಾ ಕೋಲ್ "ಆರೋಹಣ ಮಾಡಿದರು. 2007 ರಲ್ಲಿ "ಥಾರ್ ಡೆಸೆರ್ಟ್ ಆಲ್ ವುಮೆನ್ ಎಕ್ಸ್ ಪೆಡಿಷನ್" ನ ಮುಖಂಡರಾಗಿ ಥಾರ್ ಮರುಭೂಮಿಯ 2000 ಕಿಲೋ ಮೀಟರ್ ಕಠಿಣ ಹಾದಿಯನ್ನು ಕ್ರಮಿಸುವುದರ ಮೂಲಕ ಕೊರೆಯುವ ಚಳಿಯಲ್ಲಿ ಮಾತ್ರವಲ್ಲದೆ ಮರುಭೂಮಿಯಲ್ಲೂ ತಮ್ಮ ಸಾಹಸಯಾತ್ರೆಯನ್ನು ತೋರಿದರು.

ಇವರ ಸಾಹಸ ಕಾರ್ಯಗಳಿಂದ ಸ್ಪೂರ್ತಿಗೊಂಡ 48 ವರ್ಷದ ಎರಡು ಮಕ್ಕಳ ತಾಯಿ ಪ್ರೇಮಲತಾ ಅಗರ್ ವಾಲ್ ರವರನ್ನು ಪ್ರೋತ್ಸಾಯಿಸಿ, ತರಬೇತಿ ನೀಡಿ 2011ರಲ್ಲಿ ಎವರೆಸ್ಟ್ ಅನ್ನು ಆರೋಹಣ ಮಾಡಲು ಕಾರಣರಾದರು. ಪ್ರೇಮಲತಾರವರು ಎವರೆಸ್ಟ್  ಏರಿದ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಯನ್ನು ನಿರ್ಮಿಸಿದರು.  2012 ರಲ್ಲಿ ಪೆಲ್ವಿಕ್ ಮೂಳೆಗೆ ಹೊಡೆತ ಬಿದ್ದು ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡು ಇನ್ನೊಂದು ಕಾಲಿಗೆ ಕೃತಕ ರಾಡ್ ನ್ನು ಹಾಕಿಸಿಕೊಂಡಿದ್ದ ಅರುಣಿಮಾ ಸಿನ್ಹಾ ರವರು ಬಚೇಂದ್ರಪಾಲ್ ರವರನ್ನು ಭೇಟಿ ಮಾಡಿ ತಮ್ಮ ಎವರೆಸ್ಟ್ ಏರುವ ಆಸೆಯನ್ನು ತಿಳಿಸಿದಾಗ ಎಲ್ಲರಂತೆ ಇವರನ್ನು ಹೀಯಾಳಿಸದೆ, ಪ್ರೋತ್ಸಾಹಿಸಿ ಉತ್ತಮ ತರಬೇತಿ ನೀಡಿದರ ಫಲವಾಗಿ ಅರುಣಿಮಾರವರು ಒಂಟಿ ಕಾಲಿನಲ್ಲಿ ಎವರೆಸ್ಟ್ ಏರಿದ ಪ್ರಪಂಚದ ಪ್ರಥಮ ಮಹಿಳೆ ಎನಿಸಿಕೊಂಡರು.

2013 ರಲ್ಲಿ  ಉತ್ತರಾಖಂಡ್ ನಲ್ಲಿ ಜಲಪ್ರಳಯವಾದಾಗ ಜನರ ನೆರವಿಗಾಗಿ ಸೈನ್ಯ ಕಾರ್ಯಾಚರಣೆಯೊಂದಿಗೆ ಕೈಜೋಡಿಸುವುದರ ಮೂಲಕ ಮಾನವೀಯತೆ ತೋರಿದರು.
ಪರ್ವತಾರೋಹಣದೊಂದಿಗೆ ಇವರು ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ಇದ್ದುದರಿಂದ, ಅವರಿಗೆ ಪರಿಸರದ ಬಗ್ಗೆ, ಅದನ್ನು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸುತ್ತಿದ್ದರು. ಪರಿಸರಪ್ರೇಮಿಯಾಗಿದ್ದ ಇವರು ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿದ್ದ ಅರಣ್ಯ ಸಂಪತ್ತನ್ನು ಉಳಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು.
ತಮ್ಮ ಸಾಹಸ ಕಾರ್ಯಗಳಗೆ ಬಚೇಂದ್ರಿ ಪಾಲ್ ರವರು ಪಡೆದ ಪ್ರಶಸ್ತಿಗಳನ್ನು ಪಡೆದರು.
1984 ರಲ್ಲಿ ಐ.ಎಂ.ಎಫ್ ನಿಂದ ಚಿನ್ನದ ಪದಕವನ್ನು ಪಡೆದರು.
1984 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ  ಪ್ರಶಸ್ತಿಯನ್ನು ನೀಡಿ ಗೌರವಿಸಿತು.
1985 ರಲ್ಲಿ ಉತ್ತರ ಪ್ರದೇಶದ ರಾಜ್ಯ ಶಿಕ್ಷಣ ಇಲಾಖೆ ಚಿನ್ನದ ಪದಕವನ್ನು ನೀಡಿತು.
1986 ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿಯನ್ನು ನೀಡಿತು.
1986 ರಲ್ಲಿ ಕೋಲ್ಕತ್ತ ಮಹಿಳೆಯ ಅಧ್ಯಯನ ಸಂಸ್ಥೆಯು ಪ್ರಶಸ್ತಿಯನ್ನು ನೀಡಿತು.
1990 ರಲ್ಲಿ ಗಿನ್ನೀಸ್ ಪುಸ್ತಕದಲ್ಲಿ ಹೆಸರು ದಾಖಲೆಯಾಯಿತು.
1994 ರಲ್ಲಿ ಭಾರಯ ಸರ್ಕಾರವು ನ್ಯಾಶನಲ್ ಅಡ್ವೆಂಚರ್ ಪ್ರಶಸ್ತಿಯನ್ನು ನೀಡಿತು.
1995 ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಯಶ್ ಪ್ರಶಸ್ತಿಯನ್ನು ನೀಡಿತು.
1997 ರಲ್ಲಿ ಗಢವಾಲ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದರು.
2013-14 ರಲ್ಲಿ ಮಧ್ಯೆ ಪ್ರದೇಶದ ಸರ್ಕಾರ ಸಾಂಸ್ಕೃತಿಕ ಸಂಸ್ಥೆಯಿಂದ ವೀರಾಂಗನೆ ಲಕ್ಷ್ಮೀಬಾಯಿ ಪ್ರಶಸ್ತಿಯನ್ನು ಪಡೆದರು.
ಹೀಗೆ " ಮನಸ್ಸಿದ್ದರೆ  ಮಾರ್ಗ " ಎಂಬಂತೆ ತಾವು ಚಿಕ್ಕ ವಯಸ್ಸಿನಲ್ಲಿ ಕಂಡ ಕನಸ್ಸನ್ನು ನನಸು ಮಾಡಿಕೊಳ್ಳಲು ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಎವರೆಸ್ಟ್  ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಎಲ್ಲರಿಗೂ ಸ್ಪೂರ್ತಿ ನೀಡಿ ಮಾದರಿಯಾಗಿದ್ದಾರೆ.

- ಎಂ ಎಸ್ ವಿಜಯಲಕ್ಷ್ಮಿ 

1 comment:

  1. ಹೆಚ್ಚಿನ ಮಾಹಿತಿ ಬೇಕಾಗಿದೆ

    ReplyDelete