Saturday 19 August 2017

ಆರೋಗ್ಯ - ಹಣ್ಣೆಲೆಗಳು - 6

ಅಧ್ಯಾಯ - 6
ಲೈಂಗಿಕ ಸಮಸ್ಯೆಗಳು

ಯೋನಿಯಲ್ಲಿ ಬಿಳಿ ಸ್ರಾವವಿಲ್ಲದೆ ಯೋನಿಯು ಶುಷ್ಕವಾಗಿ ಅಥವಾ ಒಣಗಿದಂತಾಗಿ ಸಂಭೋಗ ಕ್ರಿಯೆಯು ಕಷ್ಟವಾಗುತ್ತದೆ  ಹಾಗೂ ನೋವಿನಿಂದ ಕೂಡಿರುತ್ತದೆ. ಯೋನಿಯ ಒಳ ಪದರ ನಮೆತಗೊಂಡು ಯೋನಿದ್ವಾರವು ಸಂಕುಚಿತವಾಗಿರುತ್ತದೆ.  ಇದರಿಂದ ಸಂಭೋಗ ಕ್ರಿಯೆಯು ಕಷ್ಟವಾಗುತ್ತದೆ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಕೊರತೆಯಿಂದ ಮೇಲೆ ಹೇಳಿದ ಸಮಸ್ಯೆಗಳು ಉದ್ಬವಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಲ್ಯೂಬ್ರಿಕೆಂಟ್ಸ್ (lubricants) ಮುಲಾಮನ್ನು ಯೋನಿಯಲ್ಲಿ ಹರಡಿ ಸ್ವಲ್ಪ ಪಸೆಯಿರುವಂತೆ ನೋಡಿಕೊಂಡು ಸಂಭೋಗ ಕ್ರಿಯೆಯನ್ನೂ ಸುಲಭಗೊಳಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆ ಇಲ್ಲವೆ ಯಾವುದೇ ಸುವಾಸನೆರಹಿತ ಸಸ್ಯಜನ್ಯ ಎಣ್ಣೆಯನ್ನು ಉಪಯೋಗಿಸಬಹುದು. ಲೈಂಗಿಕ ಕ್ರಿಯೆಯಲ್ಲಿ ಉತ್ಸುಕತೆ ಇರುವುದಿಲ್ಲ. ಸಂಭೋಗ ಕ್ರಿಯೆ ಕಷ್ಟವಾದಾಗ ಮಾನಸಿಕವಾಗಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಲೈಂಗಿಕತೆಯು ವಿವಿಧ ಅಯಾಮಗಳ ಮೇಲೆ ಆವಲಂಬಿತವಾಗಿರುತ್ತದೆ -
ಬೌದ್ಧಿಕ, ಮಾನಸಿಕ, ಸಾಮಾಜಿಕ ಹಾಗೂ ವ್ಯಕ್ತಿಗಳ ನಡುವಣ ಸಂಬಂಧ ಇವೆಲ್ಲವೂ ಋತುಬಂಧದ ಸಮಯದಲ್ಲಿ ಏರುಪೇರಾಗಿರುವುದು.
ಮಾಂಸಖಂಡದ ಬಲಹೀನತೆ
ಲೈಂಗಿಕ ಕ್ರಿಯೆಯಲ್ಲಿ ಸ್ತನಗಳ ಗಾತ್ರ ಹಿಗ್ಗದಿರುವಿಕೆ
ಗರ್ಭಾಂಕುರ (clitoris) ಉದ್ರೇಕಗೊಳ್ಳದಿರುವುದು
ಯೋನಿಯು ಒಣಗಿರುವುದು
ಯೋನಿಯು ಹಿಗ್ಗದಿರುವುದು
ಜೀವರಸಗಳು ಇಲ್ಲದಿರುವುದರಿಂದ 
ರಕ್ತ ಸಂಚಾರ ಸರಿಯಾಗಿಲ್ಲದಿರುವುದು
ಸ್ಪರ್ಶ ಪ್ರಚೋದನೆ ಕೂಡ ಕಡಿಮೆಯಾಗಿರುತ್ತದೆ.
ದೇಹದ ಆಕಾರದಲ್ಲಿ, ರೂಪದಲ್ಲಿ ಬದಲಾವಣೆಗಳು ಆಗಿರುವುದರಿಂದ ಕೂಡ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿರುವುದು.
ಯೋನಿ ನಮೆತಗೊಂಡು ಸಂಭೋಗ ಕ್ರಿಯೆಯಿಂದ ಘಾಸಿಗೊಂಡು ನಂಜಾಗಬಹುದು. ಇದರಿಂದ ಸಂಭೋಗದ ನಂತರ ವಿಪರೀತ ಉರಿ ಕಾಣಿಸಿಕೊಳ್ಳಬಹುದು.

ಇದಕ್ಕೆ ಪರಿಹಾರವೇನು?

ಯೋನಿಯನ್ನು ಒಣಗದಂತೆ ನೋಡಿಕೊಳ್ಳಲು ಮಾರುಕಟ್ಟೆಯಲ್ಲಿ ದೊರಕುವ ಲ್ಯುಬ್ರಿಕ್ ಕ್ರೀಮ್‍ಗಳನ್ನು ಉಪಯೋಗಿಸಬಹುದು. ಈಸ್ಟ್ರೋಜನ್ ಮುಲಾಮನ್ನು ಕೂಡ ವೈದ್ಯರ ಸಲಹೆ ಮೇರೆಗೆ ಉಪಯೋಗಿಸುವುದರಿಂದ ಯೋನಿ ನಮೆತವನ್ನು ಕಡಿಮೆ ಮಾಡಬಹುದು. ಇದರಿಂದ ಕಷ್ಟ ಸಂಭೋಗವನ್ನು ಹಾಗೂ ಉರಿಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಿಕೊಳ್ಳಬಹುದು. ಇದ್ಯಾವುದು ಇಲ್ಲದಿದ್ದಾಗ ಸಸ್ಯಜನ್ಯ ತೈಲವಾದ ಕೊಬ್ಬರಿಎಣ್ಣೆಯನ್ನು ಕೂಡ ಬಳಸಬಹುದು. 

                                             ಅಧ್ಯಾಯ - 7
ಸ್ಥೂಲಕಾಯ, ಬೊಜ್ಜುತನ

ಭಾರತದಲ್ಲಿ 37% ನಷ್ಟು ಹೆ0ಗಸರು ಸ್ಥೂಲಕಾಯದಿ0ದ ಬಳಲುತ್ತಿದ್ದಾರೆ. ಮುಟ್ಟು ನಿಲ್ಲುವ ಆಸುಪಾಸಿನಲ್ಲಿ ಜೀವರಸಗಳ ಕೊರತೆಯಿಂದಾಗಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಮಧ್ಯ ಭಾಗದಲ್ಲಿ, ನಿತಂಬಗಳಲ್ಲಿ ಸ್ತನಗಳಲ್ಲಿ ಕೊಬ್ಬಿನಾಂಶ ಹೆಚ್ಚಾಗಿ, ದೇಹದ ಆಕಾರದಲ್ಲಿ ಬದಲಾವಣೆ ಆಗುವುದು. ಕೆಲಸ ಮಾಡಲು ಕಷ್ಟವಾಗಿ ಸುಮ್ಮನೆ ಕೂತುಕೊಳ್ಳುವುದು. ಮಕ್ಕಳು ಮತ್ತು ಸೊಸೆಯಂದಿರು ಕೆಲಸ ಮಾಡುತ್ತಿರುವುದರಿಂದ ಕೆಲಸ ಕಡಿಮೆಯಾಗುವುದು. ವಂಶಪಾರಂಪರ್ಯವಾಗಿಯೂ ಕೂಡ ಬೊಜ್ಜುಬರಬಹುದು. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸಗಳ ಕೊರತೆ ಹಾಗೂ ಡಿಹೈಡ್ರೋಎಪಿಆಂಡ್ರೋಸ್ಟಿರಾನ್ ಜೀವರಸದ ಕೊರತೆಯಿಂದ ದೇಹದಲ್ಲಿ ಕೊಬ್ಬು ಶೇಖರವಾಗಿ ಸ್ಥೂಲಕಾಯ ಉಂಟಾಗುತ್ತದೆ. ಇದರೊಟ್ಟಿಗೆ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯದ ಕಾಯಿಲೆಗಳು ಸಂಬಂಧ ಹೊಂದಿವೆ. 

 ಕೊಬ್ಬು ಕರಗಿಸಲು ಏನು ಮಾಡಬೇಕು?

ವ್ಯಾಯಮ: ದಿನಕ್ಕೆ ಕನಿಷ್ಟ ಪಕ್ಷ 20-30 ನಿಮಿಷದಷ್ಟು ವೇಗದ ನಡಿಗೆಯನ್ನು ಮಾಡಬೇಕು.
ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು
ವಾರಕ್ಕೆ ಅರ್ಧ ಕೆ.ಜಿ ಹಾಗೂ ತಿಂಗಳಿಗೆ ಎರಡು ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕು
ಯೋಗಾಸನ ಮತ್ತು ಪ್ರಾಣಾಯಾಮವನ್ನು  ದಿನವೂ ಮಾಡಬೇಕು
ಸಮತೋಲನ ಆಹಾರವನ್ನು ಸೇವಿಸಬೇಕು
ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು
ಮಾಂಸವನ್ನು ಬಳಸುವಾಗ ಎಚ್ಚರವಿರಲಿ
ಎಣ್ಣೆ ಪದಾರ್ಥ, ಸಿಹಿ ತಿಂಡಿ, ಹಾಲಿನಿಂದ ಮಾಡಿದ ಪದಾರ್ಥಗಳನ್ನು ತ್ಯಜಿಸಬೇಕು

ಡಾ ಪೂರ್ಣಿಮಾ. ಜೆ     


No comments:

Post a Comment