Tuesday 1 August 2017

ಅನುಭವ - 1


ದೊಡ್ಡ ಗೆಲವುಗಳು - ಸಣ್ಣ ಸೋಲು

ಬೆಂಗಳೂರು ಮಹಾನಗರಿಯಲ್ಲಿ ಹಲವಾರು ಕಣ್ಣಿಗೆಕಾಣದ ಲೋಕಗಳಿವೆ. ಯಾರ ಕಣ್ಣಿಗೂ ಕಾಣದೆ ಮುಚ್ಚಿದ ಕ್ಯಾಬ್ ಅಥವಾ ಕಾರ್ ಗಲ್ಲಲ್ಲಿ ಓಡಾಡುವ ಒಂದು ಪ್ರಪಂಚ ಇದ್ದರೆ , ಹೊಸ್ತಿಲಿನಂತೆ ಒಳಗು ಹೊರಗೂ ಎರಡು ಕಾಣುವ ಆಟೋ ನಲ್ಲಿ ಓಡಾಡುವ ಮತ್ತೊಂದು ಲೋಕ. ಇವೆರಡು ಅಲ್ಲದೆ, ನೆಲೆಯಿಲ್ಲದೆ ಬಿಸಿಲಿನಲ್ಲಿ ನಿಂತಿರುವ ಮತ್ತೊಂದು  ಪ್ರಪಂಚ. ಈ ಮೂಲೋಕಗಳ ಮಧ್ಯೆ ,ಇಲ್ಲೇ ಸ್ವರ್ಗ ನರಕಗಳು ಇರಬೇಕು. ಸ್ವರ್ಗ ಯಾವುದೋ ನನಗೆ ತಿಳಿದಿಲ್ಲ,ಆದರೆ ನಮ್ಮ ಸರ್ಕಾರೀ ಆಸ್ಪತ್ರೆಗಳಿಗೆ ಭೇಟಿ ಇತ್ತರೆ ನರಕ ದರ್ಶನವಂತೂ ಆಗುತ್ತದೆ. ನಮ್ಮ ಸರ್ಕಾರೀ ಆಸ್ಪತ್ರೆಗಳ ಏಡ್ಸ್ ರೆಟ್ರೋವೈರಲ್ ಥೆರಪಿ ಸೆಂಟರ್ ಹಾಗು ಅದಕ್ಕೆ ಹೊಂದಿಕೊಂಡಿರುವಂತೆ ಇರುವ ಕ್ಷಯ ರೋಗ ವಿಭಾಗಗಳಿಗೆ ಭೇಟಿ ಇತ್ತರೆ ಸಾಕು ಜೀವನದಲ್ಲಿ ವೈರಾಗ್ಯಕ್ಕೆ ಬೇರೆ ಕಾರಣ ಬೇಕಿಲ್ಲ. ನರಕ ಇಲ್ಲೇ ನಮ್ಮ ಕಣ್ಣ ಮುಂದಿದೆ ಅಲ್ವೇ ಅನ್ನಿಸುತ್ತೆ. ಏಡ್ಸ್ ಹಾಗು ಕ್ಷಯ ಎರಡಕ್ಕೂ ತುತ್ತಾದ ಕೆಲವು ರೋಗಿಗಳನ್ನು ನೋಡಿದರೆ, ಇವರು ನಕ್ಕು ಎಷ್ಟು ದಿನಗಳಾಗಿರಬೇಕೊನೊ? ಅನ್ನಿಸುತ್ತೆ. ಎಂದಾದರೂ ಇವರ ಮುಖದಲ್ಲಿ ಒಂದು ಸಣ್ಣ ನಗು ಬರುತದೆಯೇ? ಅನ್ನಿಸುತ್ತೆ.
ನನ್ನ ಕೆಲಸದ ಒಂದು  ಅಂಗವಾಗಿ ಹಲವಾರು ಕ್ಷಯ ಹಾಗು ಏಡ್ಸ್ ರೋಗಿಗಳಿಗೆ ಫೋನ್ ಮೂಲಕ  ಕೌನ್ಸೆಲಿಂಗ್ ಮಾಡಬೇಕಿತ್ತು. ವಾರದಲ್ಲಿ ಒಮ್ಮೆ ಯಾದರು ಇವರೊಡನೆ ಮಾತಾಡುವ  ಅವಕಾಶ ಇತ್ತು. ಹೀಗೆ  ಪರಿಚಯವಾದದ್ದು ಹದಿನೆಂಟು - ಇಪ್ಪತ್ತರ ವಯಸ್ಸಿನ  ಜ್ಯೋತಿ,  ಕಾರ್ಖಾನೆ ಒಂದರಲ್ಲಿ ಕೆಲಸಮಾಡುತಿದ್ದ ಜ್ಯೋತಿ ಮೊದಲ ಎರಡು ತಿಂಗಳು ತುಂಬಾ ಸುಸ್ತಾಗಿ ಮೆಲು ಧ್ವನಿಯಲ್ಲಿ ಮಾತಾಡುತಿದ್ದಳು. ಕ್ಷಯ ರೋಗದಿಂದ ಗುಣಹೊಂದಬಹುದಾದರೂ ಅದರ ಚಿಕಿತ್ಸೆ ತುಂಬ ಕಷ್ಟ. ಕೆಲವರಿಗೆ ಸೈಡ್ ಎಫೆಕ್ಟ್ಸ್ ತುಂಬಾ ಆಗುತ್ತದೆ. ಮೊದಲ ಎರಡು ತಿಂಗಳು ಇಂಟೆನ್ಸಿವ್ ಫೆಸ್ (Intensive Phase) ಅನ್ನುತಾರೆ.ಇದನ್ನು ದಾಟಿದರೆ ಮುಂದಿನ ನಾಲ್ಕು ತಿಂಗಳು ಚಿಕಿತ್ಸೆ ಸಾಮಾನ್ಯವಾಗಿ  ಸುಲಭ ವಾಗಿರುತ್ತೆ. ನೋವು ತಾಳಲಾರದೆ ಸಾವೇಮೇಲು ಅನ್ನುತಿದ್ದ ಜ್ಯೋತಿಗೆ ಎಷ್ಟೋ  ರೀತಿಯಲ್ಲಿ ಬುದ್ಧಿ ಹೇಳತೊಡಗಿದೆ.  ಜ್ಯೋತಿ ಬಹಳ ಧೈರ್ಯವಾಗಿ ಎರಡು ತಿಂಗಳು ಚಿಕಿತ್ಸೆ ಯನ್ನು ಬಿಡದೆ ಮಾಡಿಕೊಂಡಳು. ವಾರ ವಾರ ಮಾತಡುತಿದ್ದರಿಂದ ನನ್ನ ಬಳಿ ತುಂಬಾ ಸ್ನೇಹದಿಂದ ಇರುತ್ತಿದ್ದಳು. ಅವಳ ಸುಖ ದುಃಖ್ಖ ಹೇಳ ತೊಡಗಿದಳು. ನಾಲ್ಕು ತಿಂಗಳು ಚಿಕಿತ್ಸೆ ಯಾಗುವಷ್ಟರಲ್ಲಿ ಎಷ್ಟೋ ಚೇತರಿಸಿಕೊಂಡ ಜ್ಯೋತಿ ಕೆಲಸಕ್ಕೆ ಹೋಗ ತೊಡಗಿದಳು." 
" ಹಲೋ ಮೇಡಂ, ರಿಸಲ್ಟ್ ನೆಗೆಟಿವ್ ಇದೆ. ಕೆಲಸಕ್ಕೆ ಹೋಗ್ತಾಯಿದ್ದೀನಿ" ಅವಳ ಸಂತೋಷ ಹೇಳತೀರದು.
" ತುಂಬಾ ಒಳ್ಳೇದು ಜ್ಯೋತಿ,, ಹೆಚ್ಚು ಕಡಿಮೆ  ಒಂದು ವರ್ಷದಿಂದ ಕಷ್ಟ ಪಟ್ಟಿದ್ದೀರಾ, ಇನ್ನು ಕೆಲವೇ ತಿಂಗಳು ಗುಳಿಗೆ ತೊಗೊಳ್ಳೋದು ಮಾತ್ರ ನಿಲ್ಲಿಸಬೇಡಿ, ಚಿಕಿತ್ಸೆ ಪೂರ್ತಿ ಆಗಬೇಕು" ಅಂದೇ
"ಹ ಹಹ ...ಮೇಡಂ ಒಂದನ್ನ ಗೆಲ್ಲಕ್ಕೆ ಇಷ್ಟು ಕಷ್ಟ, ಕ್ಷಯ ರೋಗದಿಂದ ಮುಕ್ತಿ ಆದರೆ ಸಾಕಾಗಿದೆ ಆದರೆ ಏಡ್ಸ್ ಇನ್ನು ಇದೆ ಮೇಡಂ. ಇದೊಂದು ಹೊಸ್ತಿಲು . ಇಲ್ಲಿ ನಿಂತು ಎರಡು ನರಕ ನೋಡಿದ್ದೀನಿ. ಹುಷಾರಾಗಿರ್ತಿನಿ. ಧೈರ್ಯ ಕೆಡಲ್ಲ ಮೇಡಂ" ಎಂದಳು.
 ನಮ್ಮ ವಾರವರದ ಮಾತು ಕಥೆ ನಡದೇ ಇತ್ತು. ಜ್ಯೋತಿಗೆ ಅವಳ ತಮ್ಮನ ಜವಾಬ್ದಾರಿ ಇತ್ತು. ಹೀಗೆ ಮಾತಾಡುತ್ತ ಒಮ್ಮೆ ಅವಳು ತಮ್ಮ ಸರಿಯಾಗಿ ಓದುತಿಲ್ಲ, ಕೆಟ್ಟ ಸಹವಾಸ ಮಾಡ್ತಾ ಇದ್ದಾನೆ ಎಂದು ದುಃಖ  ತೋಡಿಕೊಂಡಳು. ಜ್ಯೋತಿಯ ಗಂಡ ಕೂಡ ಕುಡಿದು ಮನೆಯಲ್ಲಿ ಜಗಳ ಮಾಡುತಿದ್ದ ಎಂದು ಹೇಳಿದಳು.ಇಷ್ಟಾದರೂ ಅವಳು ಬೇಜಾರಿಲ್ಲದೆ ತನ್ನ ಚಿಕಿತ್ಸೆ ಮುಂದುವರೆಸಿದ್ದಳು. ಅವಳ ಆರೋಗ್ಯ ಚೆನ್ನಾಗಿದ್ದರಿಂದು  ಇಪತ್ತು ದಿವಸ ಕಳೆದು ಕಾಲ್ ಮಾಡಿದೆ.   ಸದಾ ನಗುತ್ತ ಮಾತಾಡುತಿದ್ದವಳು ಯಾಕೋ ಎಷ್ಟು ಕೇಳಿದರೆ ಅಷ್ಟಕ್ಕೇ ಉತ್ತರ ವಿತ್ತು ಕರೆ ನಿಲ್ಲಿಸಿದಳು. ಮತ್ತೆ ಕಾಲ್ ಮಾಡಿದಾಗಲೂ ಹೆಚ್ಚು ಮಾತಾಡಲಿಲ್ಲ .  ಎನ್ನಾಯ್ತು ಎಂದು ಸೂಕ್ಷ್ಮವಾಗಿ ಕೇಳಿದಾಗ, “ಕೆಲಸ ಜಾಸ್ತಿ ಇದೆ  ಮೇಡಂ, ಮಾತಾಡ್ತಾಯಿದ್ರೆ ಓನರ್ ಬೈತಾರೆ” ಅಂದಳು. ನಂತರ ಏಡ್ಸ್ ಸೆಂಟರ್ ನಲ್ಲಿ ವಿಚಾರಿಸಿದಾಗ ಅವಳ ಟ್ರೀಟ್ಮೆಂಟ್ ಕಂಪ್ಲೀಟ್ ಆಗಿದೆ ಎಂದರು. ಇನ್ನೊಮ್ಮೆ ಅವಳು ಟೆಸ್ಟ್ಗೆ ಬಂದರೆ ಕ್ಯೂರ್  ಆಗಿದೆಯಾ ಇಲ್ಲ್ವಾ ಹೇಳ್ಥಿವಿ ಅಂದರು. ಇದು ಸಂತೋಷದ ಸುದ್ದಿ ಎಂದು ಅವಳಿಗೆ ಫೋನ್ ಮಾಡಿದೆ. ಫೋನ್ ಕಾಲ್ ಗೆ  ಯಾರು ಉತ್ತರಕೊಡಲಿಲ್ಲ . ಕೇಸ್ ಕ್ಲೋಸ್ ಮಾಡಿದ್ದರಿಂದ ಆಸ್ಪತ್ರೆಯ ಸಿಬ್ಬಂದಿಗೆ ಏನು ಸಮಾಚಾರ ಗೊತ್ತಿರಲಿಲ್ಲ. ಒಂದೆರಡು ದಿನ ಸುಮ್ಮನಿದ್ದೆ ಆದರೂ ತಲೆಯಲ್ಲಿ ಜ್ಯೋತಿ ತುಂಬಿದ್ದಳು .ಒಂದು ವಾರದ ನಂತರ , ಅವಳು ಒಮ್ಮೆ ಅವಳ ಗೆಳತಿಯ ನಂಬರ್ ಕೊಟ್ಟಿದ್ದದ್ದು ನೆನ್ಪಾಯ್ತು. ತಕ್ಷಣ ಅದನ್ನು ಹುಡುಕಿ ಕರೆ ಮಾಡಿದೆ. 
"ಇನ್ನೆಲ್ಲಿ ಮೇಡಂ ಜ್ಯೋತಿ. ಹೋಗಿಬಿಟ್ಲು.  ನಿಮ್ಮಬಗ್ಗೆ  ಯಾವಾಗ್ಲೂ ಹೇಳ್ತಿದ್ದಳು.." ಎಂದು ಹೇಳಿ ಅತ್ತಳು ಅವಳ  ಗೆಳತಿ
"ಅಂದ್ರೆ ಏನರ್ಥ ? ಅವಳು ಹುಷಾರಾಗಿದ್ಳಲ್ವಾ" ಎಂದೇ  
"ದೊಡ್ಡ ದೊಡ್ಡ ರೋಗದಿಂದ ಮುಕ್ತಿ ಪಡಿಬಹುದು ಮೇಡಂ, ಈ ಹಾಳಾದ್ದು ಕುಡಿತಕ್ಕೆ ಏನ್ಮಾಡೋದು? ಅವಳ  ಗಂಡ ಮತ್ತು  ತಮ್ಮ ಇಬ್ಬರು ಕುಡಿದು ಬಂದು ಜಗಳ ಆಡ್ತಾಯಿದ್ರು, ಅವಳನ್ನು ಹೊಡಿತಿದ್ರು. ದುಡ್ಡೆಲ್ಲ ತೊಗೊಂಡು ಹೋಗ್ತಿದ್ರು. ಹೋಗ್ಲಿಬಿಡಿ ಮೇಡಂ. ಅವಳು ಸ್ವರ್ಗದಲ್ಲಿ ಸುಖವಾಗಿರಲಿ. ಈ ನರಕ  ಸಾಕಾಯ್ತು " ಎಂದಳು.
ದೊಡ್ಡ ದೊಡ್ಡ ರೋಗಗಳನ್ನು ಗೆದ್ದು ಸಣ್ಣ ಕುಡಿತಕ್ಕೆ ಸೋತು ಆತ್ಮಹತ್ಯೆ ಮಾಡಿಕೊಂಡ  ಜ್ಯೋತಿಯ ಪಾಡು ಕೇಳಿ ಕಣ್ಣೀರು ಬಂತು.
  - ಡಾ. ಕ್ಷಮಾ 


No comments:

Post a Comment