Saturday 19 August 2017

ಮಹಿಳಾ ಸಾಧಕಿ - ಡಾ. ಮರಿಯಾ ಮಾಂಟೆಸ್ಸೊರಿ





ಡಾ. ಮರಿಯಾ ಮಾಂಟೆಸ್ಸೊರಿ

ಚಿತ್ರ 1 - ಅದೊಂದು ಬಡ ಕಾರ್ಮಿಕರ ಮಕ್ಕಳ ಶಾಲೆ. ಕಾರ್ಮಿಕರು ದುಡಿತಕ್ಕೆ ಹೋಗುವ ಮುನ್ನ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗುತ್ತಾರೆ. ಆ ಮಕ್ಕಳೊ – ಅಳುತ್ತಾ, ಜಗಳವಾಡುತ್ತಾ, ಇನ್ನೊಬ್ಬರನ್ನು ತಳ್ಳುತ್ತಾ, ಒಬ್ಬರ ಮೇಲೊಬ್ಬರು ಬೀಳುತ್ತಾ ಒಳಗೆ ಬರುತ್ತಾರೆ. ಆ 50 ಮಕ್ಕಳಿಗೆ ಒಬ್ಬ ಕಾಳಜಿರಹಿತ ಕೇರ್‍ಟೇಕರ್. ಆಕೆ ಅವರಿಗೆ ಸ್ನಾನ ಮಾಡಿಸಿ, ಎರಡು ಹೊತ್ತು ಊಟ ಹಾಕಬೇಕು. ಆದರೆ ಅಲ್ಲಿ ಕೇವಲ ಅವ್ಯವಸ್ಥೆ. ಆ ಮಕ್ಕಳ್ಯಾರೂ ಅವರ ಮಾತನ್ನು ಕೇಳುವುದಿಲ್ಲ. ಹಾಗಾಗಿ ಅಲ್ಯಾವುದೂ ಸಕ್ರಮವಾಗಿ ನಡೆಯುವುದಿಲ್ಲ. 
ಚಿತ್ರ 2 - ಅದೇ ಶಾಲೆ. ಕೆಲವು ತಿಂಗಳುಗಳ ನಂತರ. ಮಕ್ಕಳು ನಗುನಗುತ್ತಾ, ಶಾಲಾ ಆವರಣದೊಳಗೆ ಬಹಳ ಶಿಸ್ತಿನಿಂದ ಬರುತ್ತಿದ್ದಾರೆ. ಜಗಳವಾಡದೆ, ಪರಸ್ಪರ ಮಾತನಾಡಿಕೊಳ್ಳುತ್ತಾ, ಒಬ್ಬರ ಹೆಗಲಮೇಲೊಬ್ಬರು ಕೈಹಾಕುತ್ತಾ. ಒಳಗೆ ಬಂದ ಕೂಡಲೆ ಸ್ವಲ್ಪ ದೊಡ್ಡ ಮಕ್ಕಳು ಚಿಕ್ಕವರ ಬಗ್ಗೆ ಕಾಳಜಿ ವಹಿಸುತ್ತಾರೆ. ನಂತರ ಎಲ್ಲರೂ ಅಲ್ಲಿರುವ ಆಟಿಕೆಗಳೊಂದಿಗೆ ಆಡುತ್ತಾರೆ, ಕಲಿಯುತ್ತಾರೆ. ನಂತರ ಅಡಿಗೆ ಮಾಡುವುದರಲ್ಲಿ, ಬಡಿಸುವುದರಲ್ಲಿ ನೆರವಾಗುತ್ತಾರೆ. ಕೆಲಸ ಕಲಿತ ಮಕ್ಕಳ ಮುಖದ ಮೇಲೆ ತಾವೇನೋ ಸಾಧಿಸಿದ್ದೇವೆ ಎನ್ನುವ ಹೆಮ್ಮೆ ಕಾಣುತ್ತದೆ.. ಎಲ್ಲರ ಮುಖದಲ್ಲೂ ನಗು-ಸಂತೋಷ. ಅವರ ಕೇರ್‍ಟೇಕರ್ ಕಾಳಜಿಯಿರುವ ಸುಮನಸ್ಸಿನ ವ್ಯಕ್ತಿ.
ಎರಡನೇ ಚಿತ್ರದಲ್ಲಿರುವ ಶಾಲೆಯ ಕೇರ್ ಟೇಕರ್ ವಿಶ್ವದ ಪ್ರಖ್ಯಾತ ಶಿಕ್ಷಣತಜ್ಞೆ, ಇಡೀ ಶಿಕ್ಷಣದ ರೀತಿಯನ್ನು ಬದಲಾಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದಾಕೆ – ಡಾ. ಮರಿಯಾ ಮಾಂಟೆಸ್ಸೊರಿ; ವಿಶ್ವವಿಖ್ಯಾತ ಮಾಂಟೆಸ್ಸೊರಿ ಶಿಕ್ಷಣ ವಿಧಾನದ ಜನ್ಮದಾತೆ. 
1870ರ ಆಗಸ್ಟ್ 31ರಂದು ಇಟಲಿಯಲ್ಲಿ ಜನಿಸಿದ ಇವರು ತಮ್ಮ ತಾಯಿಯ ಬೆಂಬಲದೊಂದಿಗೆ ಓದುವುದರಲ್ಲಿ ಸದಾ ಮುಂದಿದ್ದರು. ಅವರು 12  ವರ್ಷದವರಿದ್ದಾಗ ಉತ್ತಮ ಶಿಕ್ಷಣ ಸವಲತ್ತಿಗಾಗಿ ಕುಟುಂಬ ರೋಮ್‍ಗೆ ತೆರಳಿತು. ಅಂದಿನ ಸಾಂಪ್ರದಾಯಿಕ ಸಮಾಜದ ಆಚರಣೆಯನ್ನು ವಿರೋಧಿಸಿ, ಅವರು ಇಂಜಿನಿಯರಿಂಗ್ ಮತ್ತು ಗಣಿತದ ಬಗೆಗಿನ ತಮ್ಮ ಆಸಕ್ತಿಯಿಂದಾಗಿ 14 ವರ್ಷದವರೆಗೆ, ತಾಂತ್ರಿಕ ಸಂಸ್ಥೆಯಲ್ಲಿ ಸೇರಿದರು. ಸಂಪ್ರದಾಯಸ್ಥರಾದ, ಮಿಲಿಟರಿ ಅಧಿಕಾರಿಯಾದ ಅವರ ತಂದೆ ಅವರ ವೃತ್ತಿಗೆ ಪ್ರೋತ್ಸಾಹ ನೀಡದಿದ್ದರೂ, ಅವರ ಜೀವಶಾಸ್ತ್ರದಲ್ಲಿನ ಆಸಕ್ತಿ ಅವರನ್ನು ವೈದ್ಯಕೀಯ ಶಿಕ್ಷಣ ಪಡೆಯುವಂತೆ ಮಾಡಿತು. ತಂದೆ, ಶಿಕ್ಷಕರು, ಪುರುಷ ಸಹಪಾಠಿಗಳ ವಿರೋಧದ ನಡುವೆಯೂ ಅತ್ಯಂತ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪದವಿ ಪಡೆದರು. 1894ರಲ್ಲಿ ಇಟಲಿಯ ಪ್ರಥಮ ಮಹಿಳಾ ವೈದ್ಯೆಯಾದರು. 
ಅಂದಿನ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲು ಸಾಕಷ್ಟು ಧೈರ್ಯ ಬೇಕಿತ್ತು. ಏಕೆಂದರೆ ಸಮಾಜದ ರೂಢಿಗಳು ಮಹಿಳೆಯರನ್ನು ಇಂತಹುದರಲ್ಲಿ ಪ್ರೋತ್ಸಾಹಿಸುತ್ತಿರಲಿಲ್ಲ. ವಿಪರ್ಯಾಸವೆಂದರೆ, ಆಗ ಪ್ರಚಲಿತವಿದ್ದ ಮಹಿಳೆಯರಿಗಾಗಿನ ವೃತ್ತಿಗಳಾದ - ಶಿಕ್ಷಣ, ಗೃಹ ನಿರ್ವಹಣೆ ಅಥವಾ ಸನ್ಯಾಸಿನಿಯಾಗುವುದನ್ನು ವಿರೋಧಿಸುತ್ತಿದ್ದ ಮಾಂಟೆಸ್ಸೊರಿಯವರು ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಕೊಡುಗೆಗಳಿಗಾಗಿ ವಿಶ್ವವಿಖ್ಯಾತರಾದದ್ದು.
ರೋಮ್ ವಿಶ್ವವಿದ್ಯಾನಿಲಯದಲ್ಲಿನ ಮಾನಸಿಕ ಕ್ಲಿನಿಕ್‍ನಲ್ಲಿ ಸಹಾಯಕ ವೈದ್ಯೆಯಾಗಿ ಸೇರಿಕೊಂಡರು. ಆಗ ಅವರು ಮಾನಸಿಕ ವಿಕಲಚೇತನರ ಸಂಪರ್ಕದಲ್ಲಿ ಬಂದರು. ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೈದ್ಯಕೀಯ ಚಿಕಿತ್ಸೆ ಜೊತೆಗೆ ಕಲಿಕೆಯ ವಿಧಾನವೂ ಮುಖ್ಯ ಎಂದು ನಿರ್ಧರಿಸಿದರು. ತನ್ನ ಯುವ ರೋಗಿಗಳಿಗೆ ಬೇಕಾದ ಪ್ರೇರೇಪಣೆ, ಉಪಯುಕ್ತ ಚಟುವಟಿಕೆ, ಆತ್ಮಗೌರವ – ಮಾಂಟೆಸ್ಸೊರಿ ಅಲ್ಲಿದ್ದವರನ್ನು ತಿರಸ್ಕಾರದಿಂದ ಕಾಣುತ್ತಿದ್ದ ಕೇರ್ ಟೇಕರ್ಸ್‍ಅನ್ನು ತೆಗೆದುಹಾಕಿದರು. ಸಿಬ್ಬಂದಿ ವರ್ಗದ ಕೊರತೆಯಿಂದಾಗಿ, ಕಡಿಮೆ ಸಮಸ್ಯೆ ಇರುವ ಮಕ್ಕಳಿಗೆ ತಮ್ಮ ಬಗ್ಗೆ ಮತ್ತು ತಮ್ಮ ಇತರ ಸಹಚರರ ಬಗ್ಗೆ ಕಾಳಜಿ ವಹಿಸಲು ಹೇಳಿಕೊಟ್ಟರು. 
ಆ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲಾರಂಭಿಸಿದ ಅವರು, ಆ ಮಕ್ಕಳಿಗೆ ಕಲಿಸಿಕೊಡುವಲ್ಲಿ ತಮ್ಮೆಲ್ಲ ಕ್ರಿಯಾಶೀಲ ವಿಧಾನಗಳನ್ನು ಬಳಸಿದರು; ಇತರ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು ಮತ್ತು ಯಶಸ್ವಿಯಾದರು. ಅವರ ವಿಧಾನ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ಆ ಮಕ್ಕಳಲ್ಲಿ ಬಹುತೇಕ ಮಂದಿ ಬೋರ್ಡನಲ್ಲಿ ಎಲ್ಲಾ ಮಕ್ಕಳಂತೆ ಪರೀಕ್ಷೆ ಬರೆದು ಉತ್ತಮ ಶ್ರೇಣಿಯಲ್ಲಿ ಪಾಸಾದರು. ಈ ಸುದ್ದಿ ಬಹಳಷ್ಟು ಕಡೆಗಳಲ್ಲಿ ಹರಡಿತು.
1900ರಿಂದಲೇ ಅವರು ಗ್ರಂಥಾಲಯಗಳಲ್ಲಿ ವಿಕಲಚೇತನ ಮಕ್ಕಳ ಬಗೆಗಿನ ಶಿಕ್ಷಣದ ಮಾಹಿತಿಗಾಗಿ ಹುಡುಕಾಡಿದರು. ಆಗ ಅವರಿಗೆ ದೊರೆತದ್ದು ಇಟಾರ್ಡ್ ಮತ್ತು ಸೆಗುಯಿನ್ ಎಂಬ ಫ್ರೆಂಚ್ ವೈದ್ಯರ ಕೃತಿಗಳು. ಆದರೆ ಅವರ ಇಡೀ ವಿಧಾನ ಅವರ ಸ್ವಂತ ಪ್ರಯತ್ನಗಳ ಮೂಲಕ ಬೆಳೆದು ಬಂದದ್ದು. ಆ ಬಗ್ಗೆ ಮಾಂಟೆಸ್ಸೊರಿಯವರು, “ನಾನು ಮಕ್ಕಳನ್ನು ಗಮನಿಸುತ್ತಾ, ಅವರಿಗೆ ಏನು ಬೇಕೆಂಬುದನ್ನು ಕಲಿತುಕೊಂಡೆ, ಅವರಿಗೆ ಹೇಗೆ ಕಲಿಸಲು ಸಹಾಯ ಮಾಡಬೇಕೆಂಬುದನ್ನು ಅರಿತೆ” ಎಂದಿದ್ದಾರೆ. 
ನಂತರ ಆಕೆ ಸ್ಯಾಂಟೊ ಸ್ಪಿರಿಟೊದಲ್ಲಿ ಸರ್ಜಿಕಲ್ ಅಸಿಸ್ಟೆಂಟ್ ಆಗಿ ಬಡ್ತಿ ಹೊಂದಿದರು. 1901 ರಲ್ಲಿ ಮಾಂಟೆಸ್ಸೊರಿ ತಮ್ಮ ಹೆಚ್ಚಿನ ಓದಿಗಾಗಿ ಮತ್ತು ಸಂಶೋಧನೆಗಾಗಿ ಶಾಲೆಯನ್ನು ಬಿಟ್ಟರು. ಅಷ್ಟರಲ್ಲಿ ಅವರು ರೋಮ್‍ನಲ್ಲಿದ್ದ ಶಾಲೆಯಲ್ಲಿ ಆರೋಗ್ಯದ ಅಧ್ಯಕ್ಷರಾಗಿದ್ದರು ಜೊತೆಗೆ ಶಿಕ್ಷಣ ವಿಭಾಗದ ಶಾಶ್ವತ ಬಾಹ್ಯ ಪರೀಕ್ಷಕರಾಗಿದ್ದರು. 1904ರಲ್ಲಿ ರೋಮ್ ವಿವಿಯಲ್ಲಿ ಪೂರ್ಣಕಾಲಿಕ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದರು. ಶಾಲೆಗಳ ಸರ್ಕಾರಿ ಇನ್‍ಸ್ಪೆಕ್ಟರ್, ಉಪನ್ಯಾಸಕಿ ಮತ್ತು ವೈದ್ಯೆಯಾಗಿದ್ದರು.
1906ರಲ್ಲಿ ರೋಮ್ ವಿವಿಯಲ್ಲಿ ತಮಗಿದ್ದ ಆಂಥ್ರೊಪಾಲಜಿ ಪ್ರೊಫೆಸರ್ ಹುದ್ದೆಯನ್ನು ತ್ಯಜಿಸಿ, ತಮ್ಮ ಜೀವನದ ಮಹದಾಶೆಯ ಕೆಲಸದಲ್ಲಿ, ಅಂದರೆ ಮಕ್ಕಳ ಶಿಕ್ಷಣವನ್ನು ಪುನರ್ ರಚಿಸುವ ಕೆಲಸದಲ್ಲಿ ತೊಡಗಿಸಿಕೊಂಡರು. ಅವರ ಆರಂಭಿಕ ಗಮನ ಸಮಾಜದಿಂದ ತ್ಯಜಿಸಲ್ಪಟ್ಟಿದ್ದ ಮಾನಸಿಕ ವಿಕಲಚೇತನರನ್ನು ಸಮಾಜದ ಮುಖ್ಯ ಪ್ರವಾಹಕ್ಕೆ ತರುವುದಾಗಿತ್ತು. ಅವರ ಪ್ರಯತ್ನಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ಪೋಷಕರು ಮತ್ತು ಅವರಿಂದ ಕಲಿಯಲು ಇಚ್ಛಿಸಿದ ಶಿಕ್ಷಕರ ಒಂದು ಬಹು ದೊಡ್ಡ ಸಮುದಾಯವೇ ಅವರ ಬೆಂಬಲಿಗರಾದರು.
1906ರಲ್ಲಿ ಇಟಲಿ ಸರ್ಕಾರ ಅವರನ್ನು ಸ್ಯಾನ್ ಲೊರೆನ್ಜೊ ಪ್ರದೇಶದ ರಾಜ್ಯ ಬೆಂಬಲಿತ ಸ್ಲಮ್ ಶಾಲೆಗೆ ಇನ್‍ಚಾರ್ಜ್ ಮಾಡಿದರು. ಅಲ್ಲಿ 3ರಿಂದ 6 ವರ್ಷದ 60 ಮಕ್ಕಳಿದ್ದರು. ಮಾನಸಿಕವಾಗಿ ವಿಕಲಚೇತನ ಮಕ್ಕಳೊಂದಿಗೆ ಕೆಲಸ ಮಾಡಿ ಅನುಭವವಿದ್ದ ಅವರಿಗೆ ಸಾಮಾನ್ಯ ಮಕ್ಕಳೊಂದಿಗೆ ಕೆಲಸ ಮಾಡಲು ಕಷ್ಟವಾಗಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಹಾಳಾಗಿದ್ದ ಮಕ್ಕಳೊಂದಿಗೆ ಕೆಲಸ ಮಾಡಲು ವಾತಾವರಣ ಸಿದ್ಧತೆ ಅವಶ್ಯಕ ಎನಿಸಿತು. ಅಲ್ಲಿನ ಮಕ್ಕಳನ್ನು ಗಮನಿಸಿದ ಅವರು ಈ ತೀರ್ಮಾನಕ್ಕೆ ಬಂದರು – ‘ಮಕ್ಕಳು ತಾವಿರುವ ಪರಿಸ್ಥಿತಿಯಿಂದಾಗಿ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆಯೇ ಹೊರತು ಬುದ್ಧಿವಂತಿಕೆಯಲ್ಲಲ್ಲ. ಜೊತೆಗೆ ಸಾಮಾನ್ಯ ಪರಿಸರದಲ್ಲಿ ಬೆಳೆಯುವ ಮಕ್ಕಳನ್ನು ಅಳೆಯುವ ಮಾಪನದಿಂದ ಅವರನ್ನು ಅಳೆಯುವುದು ಸರಿಯಲ್ಲ. ಅವರಲ್ಲಿ ಬುದ್ಧಿವಂತಿಕೆಯಿದೆ, ಅದನ್ನು ಹೊರತೆಗೆಯುವ ವಿಧಾನ ಹುಡುಕಬೇಕಷ್ಟೇ.’ ಅಂತೆಯೇ ಆ ಮಕ್ಕಳಿಗೆ ಸೂಕ್ತ ವಾತಾವರಣವನ್ನು ಯಶಸ್ವಿಯಾಗಿ ನಿರ್ಮಿಸಿದರು. 
ಅವರ ವಿಧಾನದ ಮೂಲ ಲಕ್ಷಣಗಳೆಂದರೆ - ಮಕ್ಕಳಲ್ಲಿ ಮುನ್ನುಗ್ಗುವ ಧೋರಣೆಯನ್ನು ಬೆಳೆಸುವುದು, ಜವಾಬ್ದಾರಿಯುತ ವೈಯಕ್ತಿಕ ಸ್ವಾತಂತ್ರ್ಯದ ವರ್ತನೆಯನ್ನು ಕಲಿಸುವುದಾಗಿತ್ತು. ಸ್ವ -ಪ್ರೇರೇಪಣೆ, ಸ್ವ – ಕಲಿಕೆ. ಸರಿಯಾದ ಸಾಮಗ್ರಿಗಳನ್ನು ಒದಗಿಸಿದರೆ ಮಗು ಸಹಜವಾಗಿಯೇ ಕಲಿಯುತ್ತದೆ. ಆ ಸಾಮಾಗ್ರಿಗಳೆಂದರೆ – ಕಲಿಕೆಯ ಆಟಗಳು – ಮಕ್ಕಳ ಸಾಮರ್ಥ್ಯ ಮತ್ತು ಕಲಿಕೆಗೆ ಸೂಕ್ತವಾಗಿರುವಂತಹುದು. ಮಾಂಟೆಸ್ಸೊರಿ ವಿಧಾನದ ಶಿಕ್ಷಕರು - ಕ್ರಿಯಾಶೀಲ ಶಿಕ್ಷಕರು. ಅವರು ಕ್ರಿಯಾರಹಿತ ತರಗತಿಗೆ ಗಂಟೆಗಟ್ಟಲೆ ಬೋಧಿಸುವ ಸಾಂಪ್ರದಾಯಿಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. 
ಕಲಿಸುವ, ಗಮನ ಸೆಳೆವ, ಏಕಾಗ್ರತೆ ಬೆಳೆಸುವ, ದೇಹದ ವಿವಿಧ ಅಂಗಗಳ ನಡುವೆ ಹೊಂದಾಣಿಕೆ ಮೂಡುವ, ಕಣ್ಣು-ಕೈ ನಡುವೆ ಸಂಬಂಧ ಬೆಳೆಸುವ ಆಟಗಳನ್ನು ಮಾಂಟೆಸ್ಸೊರಿಯವರು ಸಿದ್ಧಪಡಿಸಿದರು.  ಅದನ್ನು ಶಿಕ್ಶಕರು ಮಕ್ಕಳಿಗೆ ಒದಗಿಸುತ್ತಿದ್ದರು, ಮಕ್ಕಳಿಗೆ ನೆರವು ಅಗತ್ಯವಿದ್ದಾಗ ಮಾತ್ರ ಮಧ್ಯ ಪ್ರವೇಶಿಸುತ್ತಿದ್ದರು. ಶಾಲೆಯಲ್ಲಿ ಸಿಧ್ದವಿರುವ ಆಟಗಳು, ಗೊಂಬೆಗಳು, ಪಾತ್ರೆಗಳು, ಪ್ರಾಣಿಗಳು, ಗಿಡಗಳು – ಮಕ್ಕಳು ಅವುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಮಕ್ಕಳು ಕಲಿಯಲು ಸಹಾಯ ಮಾಡುತ್ತಾ, ಶಿಕ್ಷಕರು ಮಕ್ಕಳಿಗೆ ಸಲಹಾಗಾರರಾಗಿ, ಮಾರ್ಗದರ್ಶಕರಾಗಿ ಇರುತ್ತಿದ್ದರು. ಮಕ್ಕಳು ತ್ವರಿತ ಗತಿಯಲ್ಲಿ ಕಲಿಯಲಾರಂಭಿಸಿದರು. ಕೇವಲ ಓದಿನಲ್ಲಿ ಅಷ್ಟೇ ಅಲ್ಲದೆ ಸುಸಂಸ್ಕೃತ ನಾಗರಿಕರಾಗುವ ಲಕ್ಷಣಗಳನ್ನು ಬೆಳೆಸಿಕೊಂಡರು.
ಅವರ ಈ ಯಶಸ್ವಿ ಪ್ರಯೋಗಗಳ ಬಗ್ಗೆ ಪತ್ರಿಕೆಗಳು ಬರೆಯಲಾರಂಭಿಸಿದವು. ಮಾಂಟೆಸ್ರ್ಸೆರಿಯವರ ಶಿಕ್ಷಣ ಪದ್ಧತಿಯನ್ನು ಅಮೇರಿಕಾದ ಪ್ರಮುಖ ವ್ಯಕ್ತಿಗಳಾದ ವುಡ್ರೊ ವಿಲ್ಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಥಾಮಸ್ ಎಡಿಸನ್, ಹೆನ್ರಿ ಫೋರ್ಡ್ ಮುಂತಾದವರು ಬೆಂಬಲಿಸಿದರು. ಅವರ ಬಗ್ಗೆ ಅಸಂಖ್ಯಾತ ಲೇಖನಗಳು ಪ್ರಕಟವಾದವು. ಡಾ. ಮರಿಯಾ ಮಾಂಟೆಸ್ಸೊರಿಯವರನ್ನು ಆರಂಭಿಕ ಬಾಲ್ಯ ಶಿಕ್ಷಣದ ಆರಂಭಕರ್ತರಲ್ಲಿ ಒಬ್ಬರೆಂದೇ ಗುರುತಿಸಲಾಯಿತು. ಅವರ ಪ್ರಮುಖ ಬರಹಗಳೆಂದರೆ  – ಮಾಂಟೆಸ್ಸೊರಿ ವಿಧಾನ (1912), ಪೆಡಗಾಗಿಕಲ್ ಆಂಥ್ರೊಪಾಲಜಿ (1913), ಮುಂದುವರೆದ ಮಾಂಟೆಸ್ಸೊರಿ ವಿಧಾನ (1917); ಬಾಲ್ಯದ ರಹಸ್ಯ (1936)
1910ರಿಂದ ಯೂರೋಪ್, ಅಮೇರಿಕಾ, ಭಾರತದಲ್ಲಿ ಪ್ರವಾಸ ಮಾಡುತ್ತಾ, ಭಾಷಣಗಳನ್ನು ಮಾಡುತ್ತಾ, ಮಾಂಟೆಸ್ಸೊರಿ ಶಾಲೆಗಳನ್ನು ಸ್ಥಾಪಿಸುತ್ತಾ, ಶಿಕ್ಷಕರಿಗೆ ತರಬೇತಿ ನೀಡುತ್ತಾ, ಶಿಕ್ಷಣದ ಬಗ್ಗೆ ಪುಸ್ತಕಗಳನ್ನು ಬರೆಯುತ್ತಾ 40 ವರ್ಷಗಳನ್ನು ಕಳೆದರು. 
ಮಾಂಟೆಸ್ಸೊರಿಯವರು 1929ರಲ್ಲಿ ಮಾಂಟೆಸ್ಸೊರಿ ಅಂತರರಾಷ್ಟ್ರೀಯ ಸಂಘವನ್ನು ಸ್ಥಾಪಿಸಿದರು. ಅಷ್ಟರಲ್ಲಿ ರಾಜಕೀಯ ಜಗತ್ತು ಬದಲಾಗುತ್ತಿತ್ತು. ಇಟಲಿಯಲ್ಲಿ ಮುಸ್ಸೊಲಿನಿ ನಾಯಕತ್ವದ ನಿರಂಕುಶ ಪ್ರಭುತ್ವ ಅಸ್ತಿತ್ವಕ್ಕೆ ಬಂದಿತ್ತು. ಆ ಸರ್ಕಾರ ಮಕ್ಕಳ ಬಗೆಗಿನ, ಶಿಕ್ಷಣದ ಬಗೆಗಿನ ಅವರ ವಿಚಾರಗಳನ್ನು ಅಂಗೀಕರಿಸಲಿಲ್ಲ. ಮಾಂಟೆಸ್ಸೊರಿಯವರ ಶಾಲೆಗಳನ್ನು, ಯುದ್ಧಕ್ಕಾಗಿ ಸೈನಿಕರನ್ನು ಸಜ್ಜುಗೊಳಿಸುವ ತರಬೇತಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ಒತ್ತಡ ಹೆಚ್ಚಾಯಿತು. ತಮ್ಮ ತತ್ವಗಳೊಂದಿಗೆ ಯಾವುದೇ ಸಂಧಾನ ಮಾಡಿಕೊಳ್ಳಲಿಚ್ಛಿಸದ ಅವರು ಸಹಜವಾಗಿ ಅದನ್ನು ತಿರಸ್ಕರಿಸಿದರು. ಅವರನ್ನು ಮತ್ತು ಅವರ ಮಗನನ್ನು ಗೃಹಬಂಧನದಲ್ಲಿರಿಸಲಾಯಿತು, ನಂತರ ಗಡಿಪಾರು ಮಾಡಲಾಯಿತು. ಅವರು ಅಲ್ಲಿಂದ ಸ್ಪೇನ್‍ಗೆ ತೆರಳಿದರು. 1936ರವರೆಗೆ ಅಲ್ಲಿದ್ದು ನಂತರ ಅಲ್ಲಿಂದ ನೆದರ್‍ಲ್ಯಾಂಡ್ ಗೆ ತೆರಳಿ ಅಲ್ಲಿ ಆಶ್ರಯ ಪಡೆದರು. 
2ನೇ ಜಾಗತಿಕ ಯುದ್ಧದ ಸಮಯದಲ್ಲಿ ಭಾರತದಲ್ಲಿ ಶಿಕ್ಷಕರ ಸಮ್ಮೇಳನಕ್ಕೆ ಬಂದ ಅವರು ಯುದ್ಧ ಕಾಲಾವಧಿಯಲ್ಲಿ ಇಲ್ಲಿಯೇ ಉಳಿದರು. ನಂತರ 1952ರವರೆಗೆ, ಅಂದರೆ, ತಮ್ಮ ಮರಣಕಾಲದವರೆಗೆ ನೆದರ್‍ಲ್ಯಾಂಡ್ಸ್‍ನಲ್ಲಿ ಉಳಿದರು. ಅಲ್ಲಿ ಅಸೋಸಿಯೇಷನ್ ಮಾಂಟೆಸ್ಸೊರಿ ಇಂಟರ್‍ನ್ಯಾಷನೇಲ್‍ನ ಕೇಂದ್ರ ಸ್ಥಾನವಿದೆ.
ಅವರ ಮಾನವೀಯತಾವಾದಿ ಮೌಲ್ಯಗಳನ್ನು ಪ್ರತಿಪಾದಿಸಿದರು. ಅವರು ಸಕ್ರಿಯವಾಗಿ ಹಲವಾರು ಸಾಮಾಜಿಕ ಸುಧಾರಣಾ ಚಳುವಳಿಗಳಲ್ಲಿ ಭಾಗಿಯಾದರು. ಯೂರೋಪಿನಾದ್ಯಂತ ಮಕ್ಕಳ ಹಕ್ಕುಗಳು, ಮಹಿಳಾ ಚಳುವಳಿ, ಶಾಂತಿ ಶಿಕ್ಷಣ ಮತ್ತು ಲೀಗ್ ಆಫ್ ನೇಷನ್ಸ್ ನ ಪ್ರಾಮುಖ್ಯತೆ ಬಗ್ಗೆ ಭಾಷಣಕಾರರಾಗಿ ಗುರುತಿಸಲ್ಪಟ್ಟರು.  ಮಕ್ಕಳನ್ನು ವ್ಯಕ್ತಿಗಳನ್ನಾಗಿ ಗುರುತಿಸುವ ಹಕ್ಕು ನೀಡಬೇಕು ಎಂದು ಸಾರಿದರು. ಇದು ವಿಶ್ವದಾದ್ಯಂತ, ಸಮಾಜಗಳು ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಅವರ ಪಾತ್ರಗಳ ಬಗ್ಗೆ ಪುನರ್ ವ್ಯಾಖ್ಯಾನಿಸಲಾರಂಭಿಸುವಂತೆ ಮಾಡಿತು. ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ಇದ್ದ ಅವರು ಬಹಳಷ್ಟು ಮಹಿಳಾ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ, ಅವರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣಕ್ಕಾಗಿ, ಮಹಿಳೆಯರ ಹಕ್ಕುಗಳಿಗಾಗಿ, ಸಮಾಜ ಸುಧಾರಣೆಗಾಗಿ ಹೋರಾಡಿದ ಅವರ ಹೆಸರನ್ನು ಮೂರು ಬಾರಿ ನೊಬೆಲ್ ಪ್ರಶಸ್ತಿಗೆ ಸೂಚಿಸಲಾಯಿತು.
  - ಸುಧಾ ಜಿ 



No comments:

Post a Comment