Showing posts with label ಮಹಿಳಾ ಸಾಧಕಿ. Show all posts
Showing posts with label ಮಹಿಳಾ ಸಾಧಕಿ. Show all posts

Thursday, 14 September 2017

ಮಹಿಳಾ ಸಾಧಕಿ - ಸಾವಿತ್ರಿಭಾಯಿ ಫುಲೆ


  
  ಇಂದು ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಾವು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಏಕೆಂದರೆ ಇಂದು ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಆದರೆ 19ನೇ ಶತಮಾನದಲ್ಲಿ , ಹೆಣ್ಣೆಂದರೆ ನಾಲ್ಕು ಗೋಡೆಗಳ ಮಧ್ಯೆ ಕೊಳೆಯಬೇಕೆನ್ನುವ ಕಾಲದಲ್ಲಿ, ಚಿಕ್ಕ ವಯಸ್ಸಿಗೆ ಮದುವೆಯಾಗಿ, ಮುದಿಗಂಡ ತೀರಿಕೊಂಡ ನಂತರ ತಲೆ ಬೋಳಿಸಿಕೊಂಡು, ಆಡುವ ವಯಸ್ಸಿನಲ್ಲಿ ರುಚಿ, ರಂಜನೆ, ಅಲಂಕಾರ, ವಿಹಾರ, ನಗು ಎಲ್ಲ ಮರೆತು ಮೂಲೆಯಲ್ಲಿ ಕೂರುತ್ತಿದ್ದ ಕಾಲದಲ್ಲಿ, ವಿಧವೆಯರು ಪುರುಷರ ವಿಕೃತಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ, ಬೀದಿಯಲ್ಲಿ ನಡೆದರೆ ಅಪವಿತ್ರವಾಗುವುದೆಂದು ಅಸ್ಪೃಶ್ಯರೆನಿಸಿಕೊಂಡ ಮಹಿಳೆಯರು ತಮ್ಮ ಸೊಂಟಕ್ಕೆ ಮರದ ಕೊಂಬೆಗಳನ್ನು ಕಟ್ಟಿಕೊಂಡು ನಡೆಯುತ್ತಿದ್ದ ಕಾಲದಲ್ಲಿ, ಅದನ್ನೆಲ್ಲಾ ಮೀರಿ, ಓದಿ, ವಿದ್ಯಾವಂತರಾಗಿ, ಮೊದಲ ಬಾರಿಗೆ ಶಾಲೆ ತೆರೆದು, ಶಿಕ್ಷಕಿಯಾಗಿ ಕೆಲಸಮಾಡಿದ ಸಾವಿತ್ರಿಭಾಯಿ ಫುಲೆಯವರ ಸಾಧನೆ ಮಹೋನ್ನತವಾದದ್ದು.
ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನೈಗಮ್ ಎಂಬ ಗ್ರಾಮದಲ್ಲಿ 1831ರ ಜನವರಿ 3ರಂದು ರೈತರ ಕುಟುಂಬವೊಂದರಲ್ಲಿ ಅವರು ಜನಿಸಿದರು. 9ನೇ ವಯಸ್ಸಿನಲ್ಲಿ ಜ್ಯೋತಿಭಾ ಫುಲೆಯವರೊಂದಿಗೆ ಇವರ ವಿವಾಹವಾಯಿತು. ನಂತರದ ದಿನಗಳಲ್ಲಿ ಸ್ತ್ರೀಯರ ಏಳಿಗೆಗಾಗಿ ಹೋರಾಡಲಾರಂಭಿಸಿದ ಫುಲೆಯವರೇ ತಮ್ಮ ಪತ್ನಿಗೆ ಶಿಕ್ಷಣ ನೀಡಿದರು. 

ಅವರ ಪ್ರೇರಣೆಯಿಂದಲೇ ಸಾವಿತ್ರಿಭಾಯಿಯವರು ಭಾರತದಲ್ಲಿಯೇ ಪ್ರಥಮ ಬಾರಿಗೆ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು. ಅತ್ತೆ ಮಾವಂದಿರು, ಸಮಾಜದ ವಿರೋಧದ ನಡುವೆಯೇ ಅವರು ತಮ್ಮ ಪತಿಯೊಂದಿಗೆ ಹೆಣ್ಣುಮಕ್ಕಳ ರಕ್ಷಣೆಗೆ ಸಜ್ಜಾದರು.

ಅವರು ಆರಂಭಿಸಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಎಲ್ಲರಿಗೂ ಮುಕ್ತವಾದ ಆಹ್ವಾನವಿತ್ತು – ಯಾವುದೇ ಜಾತಿಭೇದವಿರಲಿಲ್ಲ. ಸಾವಿತ್ರಿಭಾಯಿಯವರು ಶಿಕ್ಷಣ ಹೇಳಿಕೊಡುತ್ತಿದ್ದರು ಎಂಬ ಕಾರಣಕ್ಕಾಗಿಯೇ ಸ್ತ್ರೀ ಶಿಕ್ಷಣ ವಿರೋಧಿಗಳು ಅವರು ದಾರಿಯಲ್ಲಿ ಹೋಗುವಾಗ ಮೊಟ್ಟೆ, ಸಗಣಿ ಇತ್ಯಾದಿ ಎಸೆಯುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಅವರಿಗೆ ಬೆನ್ನುಲುಬಾಗಿ ನಿಂತದ್ದು ಅವರ ಪತಿ, ಸಮಾಜ ಸುಧಾರಕರು ಆದ, ಜನರಿಂದ ಆ ಕಾರಣಕ್ಕೆ ಪ್ರಪ್ರಥಮವಾಗಿ ಭಾರತದಲ್ಲಿ ಮಹಾತ್ಮ ಎಂಬ ಬಿರುದನ್ನು ಪಡೆದಿದ್ದ ಜ್ಯೋತಿಭಾ ಫುಲೆಯವರು. ತಮ್ಮ ಪತ್ನಿಗೆ ಅವರು 2 ಸೀರೆಯನ್ನು ಕೊಟ್ಟರು. ಸಾವಿತ್ರಿಭಾಯಿ ಫುಲೆಯವರು ಹೋಗುವಾಗ ಒಂದು ಸೀರೆಯನ್ನು ಉಟ್ಟು ಹೋಗುತ್ತಿದ್ದರು. ಶಾಲೆಗೆ ಹೋದ ತಕ್ಷಣ ಆ ಗಲೀಜು ಸೀರೆಯನ್ನು ತೆಗೆದು ಬೇರೊಂದನ್ನು ಉಟ್ಟು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಒಂದು ದಿನ ಯಾರೋ ಒಬ್ಬ ಅವರ ಮೈಮುಟ್ಟಲು ಬಂದಾಗ ಅವರು ಅವನ ಕೆನ್ನೆಗೆ ಬಾರಿಸಿದರು. ಅಂದಿನಿಂದ ಈ ಕಾಟಗಳೆಲ್ಲವೂ ನಿಂತುಹೋದವು.
ಹೆಣ್ಣುಮಕ್ಕಳಿಗೆ ಶಿಕ್ಷಣವಲ್ಲದೆ, ಅನ್ಯಾಯಕ್ಕೊಳಗಾದ ಹೆಂಗಸರಿಗಾಗಿ ಹೆರಿಗೆಮನೆ ಆರಂಭಿಸಿದರು ಜೊತೆಗೆ ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಸ್ಥಾಪಿಸಿದರು. ವಿಧವಾ ಮಹಿಳೆಯರಿಗೆ ತಲೆ ಬೋಳಿಸಬಾರದೆಂದು ಹಜಾಮರ ವಿರುದ್ಧ ಹೋರಾಟ ನಡೆಸಿದರು. ತಮ್ಮ ಪತಿಯ ಮರಣಾನಂತರ ಅವರು ಸ್ಥಾಪಿಸಿದ್ದ ‘ಸತ್ಯ ಶೋಧಕ ಸಮಾಜ’ವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. 

1897ರಲ್ಲಿ ಪ್ಲೇಗ್ ಮಾರಿ ವ್ಯಾಪಿಸಿದಾಗ ರೋಗಿಗಳ ಶುಶ್ರೂಷೆಗೆ ಮುಂದಾದ ಅವರು ಅದೇ ಪ್ಲೇಗಿಗೆ ಮಾರ್ಚ್ 10ರಂದು ಬಲಿಯಾದರು. :::::::::::::::

- ಉಷಾಗಂಗೆ 

Saturday, 19 August 2017

ಮಹಿಳಾ ಸಾಧಕಿ - ಡಾ. ಮರಿಯಾ ಮಾಂಟೆಸ್ಸೊರಿ





ಡಾ. ಮರಿಯಾ ಮಾಂಟೆಸ್ಸೊರಿ

ಚಿತ್ರ 1 - ಅದೊಂದು ಬಡ ಕಾರ್ಮಿಕರ ಮಕ್ಕಳ ಶಾಲೆ. ಕಾರ್ಮಿಕರು ದುಡಿತಕ್ಕೆ ಹೋಗುವ ಮುನ್ನ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗುತ್ತಾರೆ. ಆ ಮಕ್ಕಳೊ – ಅಳುತ್ತಾ, ಜಗಳವಾಡುತ್ತಾ, ಇನ್ನೊಬ್ಬರನ್ನು ತಳ್ಳುತ್ತಾ, ಒಬ್ಬರ ಮೇಲೊಬ್ಬರು ಬೀಳುತ್ತಾ ಒಳಗೆ ಬರುತ್ತಾರೆ. ಆ 50 ಮಕ್ಕಳಿಗೆ ಒಬ್ಬ ಕಾಳಜಿರಹಿತ ಕೇರ್‍ಟೇಕರ್. ಆಕೆ ಅವರಿಗೆ ಸ್ನಾನ ಮಾಡಿಸಿ, ಎರಡು ಹೊತ್ತು ಊಟ ಹಾಕಬೇಕು. ಆದರೆ ಅಲ್ಲಿ ಕೇವಲ ಅವ್ಯವಸ್ಥೆ. ಆ ಮಕ್ಕಳ್ಯಾರೂ ಅವರ ಮಾತನ್ನು ಕೇಳುವುದಿಲ್ಲ. ಹಾಗಾಗಿ ಅಲ್ಯಾವುದೂ ಸಕ್ರಮವಾಗಿ ನಡೆಯುವುದಿಲ್ಲ. 
ಚಿತ್ರ 2 - ಅದೇ ಶಾಲೆ. ಕೆಲವು ತಿಂಗಳುಗಳ ನಂತರ. ಮಕ್ಕಳು ನಗುನಗುತ್ತಾ, ಶಾಲಾ ಆವರಣದೊಳಗೆ ಬಹಳ ಶಿಸ್ತಿನಿಂದ ಬರುತ್ತಿದ್ದಾರೆ. ಜಗಳವಾಡದೆ, ಪರಸ್ಪರ ಮಾತನಾಡಿಕೊಳ್ಳುತ್ತಾ, ಒಬ್ಬರ ಹೆಗಲಮೇಲೊಬ್ಬರು ಕೈಹಾಕುತ್ತಾ. ಒಳಗೆ ಬಂದ ಕೂಡಲೆ ಸ್ವಲ್ಪ ದೊಡ್ಡ ಮಕ್ಕಳು ಚಿಕ್ಕವರ ಬಗ್ಗೆ ಕಾಳಜಿ ವಹಿಸುತ್ತಾರೆ. ನಂತರ ಎಲ್ಲರೂ ಅಲ್ಲಿರುವ ಆಟಿಕೆಗಳೊಂದಿಗೆ ಆಡುತ್ತಾರೆ, ಕಲಿಯುತ್ತಾರೆ. ನಂತರ ಅಡಿಗೆ ಮಾಡುವುದರಲ್ಲಿ, ಬಡಿಸುವುದರಲ್ಲಿ ನೆರವಾಗುತ್ತಾರೆ. ಕೆಲಸ ಕಲಿತ ಮಕ್ಕಳ ಮುಖದ ಮೇಲೆ ತಾವೇನೋ ಸಾಧಿಸಿದ್ದೇವೆ ಎನ್ನುವ ಹೆಮ್ಮೆ ಕಾಣುತ್ತದೆ.. ಎಲ್ಲರ ಮುಖದಲ್ಲೂ ನಗು-ಸಂತೋಷ. ಅವರ ಕೇರ್‍ಟೇಕರ್ ಕಾಳಜಿಯಿರುವ ಸುಮನಸ್ಸಿನ ವ್ಯಕ್ತಿ.
ಎರಡನೇ ಚಿತ್ರದಲ್ಲಿರುವ ಶಾಲೆಯ ಕೇರ್ ಟೇಕರ್ ವಿಶ್ವದ ಪ್ರಖ್ಯಾತ ಶಿಕ್ಷಣತಜ್ಞೆ, ಇಡೀ ಶಿಕ್ಷಣದ ರೀತಿಯನ್ನು ಬದಲಾಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದಾಕೆ – ಡಾ. ಮರಿಯಾ ಮಾಂಟೆಸ್ಸೊರಿ; ವಿಶ್ವವಿಖ್ಯಾತ ಮಾಂಟೆಸ್ಸೊರಿ ಶಿಕ್ಷಣ ವಿಧಾನದ ಜನ್ಮದಾತೆ. 
1870ರ ಆಗಸ್ಟ್ 31ರಂದು ಇಟಲಿಯಲ್ಲಿ ಜನಿಸಿದ ಇವರು ತಮ್ಮ ತಾಯಿಯ ಬೆಂಬಲದೊಂದಿಗೆ ಓದುವುದರಲ್ಲಿ ಸದಾ ಮುಂದಿದ್ದರು. ಅವರು 12  ವರ್ಷದವರಿದ್ದಾಗ ಉತ್ತಮ ಶಿಕ್ಷಣ ಸವಲತ್ತಿಗಾಗಿ ಕುಟುಂಬ ರೋಮ್‍ಗೆ ತೆರಳಿತು. ಅಂದಿನ ಸಾಂಪ್ರದಾಯಿಕ ಸಮಾಜದ ಆಚರಣೆಯನ್ನು ವಿರೋಧಿಸಿ, ಅವರು ಇಂಜಿನಿಯರಿಂಗ್ ಮತ್ತು ಗಣಿತದ ಬಗೆಗಿನ ತಮ್ಮ ಆಸಕ್ತಿಯಿಂದಾಗಿ 14 ವರ್ಷದವರೆಗೆ, ತಾಂತ್ರಿಕ ಸಂಸ್ಥೆಯಲ್ಲಿ ಸೇರಿದರು. ಸಂಪ್ರದಾಯಸ್ಥರಾದ, ಮಿಲಿಟರಿ ಅಧಿಕಾರಿಯಾದ ಅವರ ತಂದೆ ಅವರ ವೃತ್ತಿಗೆ ಪ್ರೋತ್ಸಾಹ ನೀಡದಿದ್ದರೂ, ಅವರ ಜೀವಶಾಸ್ತ್ರದಲ್ಲಿನ ಆಸಕ್ತಿ ಅವರನ್ನು ವೈದ್ಯಕೀಯ ಶಿಕ್ಷಣ ಪಡೆಯುವಂತೆ ಮಾಡಿತು. ತಂದೆ, ಶಿಕ್ಷಕರು, ಪುರುಷ ಸಹಪಾಠಿಗಳ ವಿರೋಧದ ನಡುವೆಯೂ ಅತ್ಯಂತ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪದವಿ ಪಡೆದರು. 1894ರಲ್ಲಿ ಇಟಲಿಯ ಪ್ರಥಮ ಮಹಿಳಾ ವೈದ್ಯೆಯಾದರು. 
ಅಂದಿನ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲು ಸಾಕಷ್ಟು ಧೈರ್ಯ ಬೇಕಿತ್ತು. ಏಕೆಂದರೆ ಸಮಾಜದ ರೂಢಿಗಳು ಮಹಿಳೆಯರನ್ನು ಇಂತಹುದರಲ್ಲಿ ಪ್ರೋತ್ಸಾಹಿಸುತ್ತಿರಲಿಲ್ಲ. ವಿಪರ್ಯಾಸವೆಂದರೆ, ಆಗ ಪ್ರಚಲಿತವಿದ್ದ ಮಹಿಳೆಯರಿಗಾಗಿನ ವೃತ್ತಿಗಳಾದ - ಶಿಕ್ಷಣ, ಗೃಹ ನಿರ್ವಹಣೆ ಅಥವಾ ಸನ್ಯಾಸಿನಿಯಾಗುವುದನ್ನು ವಿರೋಧಿಸುತ್ತಿದ್ದ ಮಾಂಟೆಸ್ಸೊರಿಯವರು ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಕೊಡುಗೆಗಳಿಗಾಗಿ ವಿಶ್ವವಿಖ್ಯಾತರಾದದ್ದು.
ರೋಮ್ ವಿಶ್ವವಿದ್ಯಾನಿಲಯದಲ್ಲಿನ ಮಾನಸಿಕ ಕ್ಲಿನಿಕ್‍ನಲ್ಲಿ ಸಹಾಯಕ ವೈದ್ಯೆಯಾಗಿ ಸೇರಿಕೊಂಡರು. ಆಗ ಅವರು ಮಾನಸಿಕ ವಿಕಲಚೇತನರ ಸಂಪರ್ಕದಲ್ಲಿ ಬಂದರು. ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೈದ್ಯಕೀಯ ಚಿಕಿತ್ಸೆ ಜೊತೆಗೆ ಕಲಿಕೆಯ ವಿಧಾನವೂ ಮುಖ್ಯ ಎಂದು ನಿರ್ಧರಿಸಿದರು. ತನ್ನ ಯುವ ರೋಗಿಗಳಿಗೆ ಬೇಕಾದ ಪ್ರೇರೇಪಣೆ, ಉಪಯುಕ್ತ ಚಟುವಟಿಕೆ, ಆತ್ಮಗೌರವ – ಮಾಂಟೆಸ್ಸೊರಿ ಅಲ್ಲಿದ್ದವರನ್ನು ತಿರಸ್ಕಾರದಿಂದ ಕಾಣುತ್ತಿದ್ದ ಕೇರ್ ಟೇಕರ್ಸ್‍ಅನ್ನು ತೆಗೆದುಹಾಕಿದರು. ಸಿಬ್ಬಂದಿ ವರ್ಗದ ಕೊರತೆಯಿಂದಾಗಿ, ಕಡಿಮೆ ಸಮಸ್ಯೆ ಇರುವ ಮಕ್ಕಳಿಗೆ ತಮ್ಮ ಬಗ್ಗೆ ಮತ್ತು ತಮ್ಮ ಇತರ ಸಹಚರರ ಬಗ್ಗೆ ಕಾಳಜಿ ವಹಿಸಲು ಹೇಳಿಕೊಟ್ಟರು. 
ಆ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲಾರಂಭಿಸಿದ ಅವರು, ಆ ಮಕ್ಕಳಿಗೆ ಕಲಿಸಿಕೊಡುವಲ್ಲಿ ತಮ್ಮೆಲ್ಲ ಕ್ರಿಯಾಶೀಲ ವಿಧಾನಗಳನ್ನು ಬಳಸಿದರು; ಇತರ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು ಮತ್ತು ಯಶಸ್ವಿಯಾದರು. ಅವರ ವಿಧಾನ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ಆ ಮಕ್ಕಳಲ್ಲಿ ಬಹುತೇಕ ಮಂದಿ ಬೋರ್ಡನಲ್ಲಿ ಎಲ್ಲಾ ಮಕ್ಕಳಂತೆ ಪರೀಕ್ಷೆ ಬರೆದು ಉತ್ತಮ ಶ್ರೇಣಿಯಲ್ಲಿ ಪಾಸಾದರು. ಈ ಸುದ್ದಿ ಬಹಳಷ್ಟು ಕಡೆಗಳಲ್ಲಿ ಹರಡಿತು.
1900ರಿಂದಲೇ ಅವರು ಗ್ರಂಥಾಲಯಗಳಲ್ಲಿ ವಿಕಲಚೇತನ ಮಕ್ಕಳ ಬಗೆಗಿನ ಶಿಕ್ಷಣದ ಮಾಹಿತಿಗಾಗಿ ಹುಡುಕಾಡಿದರು. ಆಗ ಅವರಿಗೆ ದೊರೆತದ್ದು ಇಟಾರ್ಡ್ ಮತ್ತು ಸೆಗುಯಿನ್ ಎಂಬ ಫ್ರೆಂಚ್ ವೈದ್ಯರ ಕೃತಿಗಳು. ಆದರೆ ಅವರ ಇಡೀ ವಿಧಾನ ಅವರ ಸ್ವಂತ ಪ್ರಯತ್ನಗಳ ಮೂಲಕ ಬೆಳೆದು ಬಂದದ್ದು. ಆ ಬಗ್ಗೆ ಮಾಂಟೆಸ್ಸೊರಿಯವರು, “ನಾನು ಮಕ್ಕಳನ್ನು ಗಮನಿಸುತ್ತಾ, ಅವರಿಗೆ ಏನು ಬೇಕೆಂಬುದನ್ನು ಕಲಿತುಕೊಂಡೆ, ಅವರಿಗೆ ಹೇಗೆ ಕಲಿಸಲು ಸಹಾಯ ಮಾಡಬೇಕೆಂಬುದನ್ನು ಅರಿತೆ” ಎಂದಿದ್ದಾರೆ. 
ನಂತರ ಆಕೆ ಸ್ಯಾಂಟೊ ಸ್ಪಿರಿಟೊದಲ್ಲಿ ಸರ್ಜಿಕಲ್ ಅಸಿಸ್ಟೆಂಟ್ ಆಗಿ ಬಡ್ತಿ ಹೊಂದಿದರು. 1901 ರಲ್ಲಿ ಮಾಂಟೆಸ್ಸೊರಿ ತಮ್ಮ ಹೆಚ್ಚಿನ ಓದಿಗಾಗಿ ಮತ್ತು ಸಂಶೋಧನೆಗಾಗಿ ಶಾಲೆಯನ್ನು ಬಿಟ್ಟರು. ಅಷ್ಟರಲ್ಲಿ ಅವರು ರೋಮ್‍ನಲ್ಲಿದ್ದ ಶಾಲೆಯಲ್ಲಿ ಆರೋಗ್ಯದ ಅಧ್ಯಕ್ಷರಾಗಿದ್ದರು ಜೊತೆಗೆ ಶಿಕ್ಷಣ ವಿಭಾಗದ ಶಾಶ್ವತ ಬಾಹ್ಯ ಪರೀಕ್ಷಕರಾಗಿದ್ದರು. 1904ರಲ್ಲಿ ರೋಮ್ ವಿವಿಯಲ್ಲಿ ಪೂರ್ಣಕಾಲಿಕ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದರು. ಶಾಲೆಗಳ ಸರ್ಕಾರಿ ಇನ್‍ಸ್ಪೆಕ್ಟರ್, ಉಪನ್ಯಾಸಕಿ ಮತ್ತು ವೈದ್ಯೆಯಾಗಿದ್ದರು.
1906ರಲ್ಲಿ ರೋಮ್ ವಿವಿಯಲ್ಲಿ ತಮಗಿದ್ದ ಆಂಥ್ರೊಪಾಲಜಿ ಪ್ರೊಫೆಸರ್ ಹುದ್ದೆಯನ್ನು ತ್ಯಜಿಸಿ, ತಮ್ಮ ಜೀವನದ ಮಹದಾಶೆಯ ಕೆಲಸದಲ್ಲಿ, ಅಂದರೆ ಮಕ್ಕಳ ಶಿಕ್ಷಣವನ್ನು ಪುನರ್ ರಚಿಸುವ ಕೆಲಸದಲ್ಲಿ ತೊಡಗಿಸಿಕೊಂಡರು. ಅವರ ಆರಂಭಿಕ ಗಮನ ಸಮಾಜದಿಂದ ತ್ಯಜಿಸಲ್ಪಟ್ಟಿದ್ದ ಮಾನಸಿಕ ವಿಕಲಚೇತನರನ್ನು ಸಮಾಜದ ಮುಖ್ಯ ಪ್ರವಾಹಕ್ಕೆ ತರುವುದಾಗಿತ್ತು. ಅವರ ಪ್ರಯತ್ನಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ಪೋಷಕರು ಮತ್ತು ಅವರಿಂದ ಕಲಿಯಲು ಇಚ್ಛಿಸಿದ ಶಿಕ್ಷಕರ ಒಂದು ಬಹು ದೊಡ್ಡ ಸಮುದಾಯವೇ ಅವರ ಬೆಂಬಲಿಗರಾದರು.
1906ರಲ್ಲಿ ಇಟಲಿ ಸರ್ಕಾರ ಅವರನ್ನು ಸ್ಯಾನ್ ಲೊರೆನ್ಜೊ ಪ್ರದೇಶದ ರಾಜ್ಯ ಬೆಂಬಲಿತ ಸ್ಲಮ್ ಶಾಲೆಗೆ ಇನ್‍ಚಾರ್ಜ್ ಮಾಡಿದರು. ಅಲ್ಲಿ 3ರಿಂದ 6 ವರ್ಷದ 60 ಮಕ್ಕಳಿದ್ದರು. ಮಾನಸಿಕವಾಗಿ ವಿಕಲಚೇತನ ಮಕ್ಕಳೊಂದಿಗೆ ಕೆಲಸ ಮಾಡಿ ಅನುಭವವಿದ್ದ ಅವರಿಗೆ ಸಾಮಾನ್ಯ ಮಕ್ಕಳೊಂದಿಗೆ ಕೆಲಸ ಮಾಡಲು ಕಷ್ಟವಾಗಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಹಾಳಾಗಿದ್ದ ಮಕ್ಕಳೊಂದಿಗೆ ಕೆಲಸ ಮಾಡಲು ವಾತಾವರಣ ಸಿದ್ಧತೆ ಅವಶ್ಯಕ ಎನಿಸಿತು. ಅಲ್ಲಿನ ಮಕ್ಕಳನ್ನು ಗಮನಿಸಿದ ಅವರು ಈ ತೀರ್ಮಾನಕ್ಕೆ ಬಂದರು – ‘ಮಕ್ಕಳು ತಾವಿರುವ ಪರಿಸ್ಥಿತಿಯಿಂದಾಗಿ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆಯೇ ಹೊರತು ಬುದ್ಧಿವಂತಿಕೆಯಲ್ಲಲ್ಲ. ಜೊತೆಗೆ ಸಾಮಾನ್ಯ ಪರಿಸರದಲ್ಲಿ ಬೆಳೆಯುವ ಮಕ್ಕಳನ್ನು ಅಳೆಯುವ ಮಾಪನದಿಂದ ಅವರನ್ನು ಅಳೆಯುವುದು ಸರಿಯಲ್ಲ. ಅವರಲ್ಲಿ ಬುದ್ಧಿವಂತಿಕೆಯಿದೆ, ಅದನ್ನು ಹೊರತೆಗೆಯುವ ವಿಧಾನ ಹುಡುಕಬೇಕಷ್ಟೇ.’ ಅಂತೆಯೇ ಆ ಮಕ್ಕಳಿಗೆ ಸೂಕ್ತ ವಾತಾವರಣವನ್ನು ಯಶಸ್ವಿಯಾಗಿ ನಿರ್ಮಿಸಿದರು. 
ಅವರ ವಿಧಾನದ ಮೂಲ ಲಕ್ಷಣಗಳೆಂದರೆ - ಮಕ್ಕಳಲ್ಲಿ ಮುನ್ನುಗ್ಗುವ ಧೋರಣೆಯನ್ನು ಬೆಳೆಸುವುದು, ಜವಾಬ್ದಾರಿಯುತ ವೈಯಕ್ತಿಕ ಸ್ವಾತಂತ್ರ್ಯದ ವರ್ತನೆಯನ್ನು ಕಲಿಸುವುದಾಗಿತ್ತು. ಸ್ವ -ಪ್ರೇರೇಪಣೆ, ಸ್ವ – ಕಲಿಕೆ. ಸರಿಯಾದ ಸಾಮಗ್ರಿಗಳನ್ನು ಒದಗಿಸಿದರೆ ಮಗು ಸಹಜವಾಗಿಯೇ ಕಲಿಯುತ್ತದೆ. ಆ ಸಾಮಾಗ್ರಿಗಳೆಂದರೆ – ಕಲಿಕೆಯ ಆಟಗಳು – ಮಕ್ಕಳ ಸಾಮರ್ಥ್ಯ ಮತ್ತು ಕಲಿಕೆಗೆ ಸೂಕ್ತವಾಗಿರುವಂತಹುದು. ಮಾಂಟೆಸ್ಸೊರಿ ವಿಧಾನದ ಶಿಕ್ಷಕರು - ಕ್ರಿಯಾಶೀಲ ಶಿಕ್ಷಕರು. ಅವರು ಕ್ರಿಯಾರಹಿತ ತರಗತಿಗೆ ಗಂಟೆಗಟ್ಟಲೆ ಬೋಧಿಸುವ ಸಾಂಪ್ರದಾಯಿಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. 
ಕಲಿಸುವ, ಗಮನ ಸೆಳೆವ, ಏಕಾಗ್ರತೆ ಬೆಳೆಸುವ, ದೇಹದ ವಿವಿಧ ಅಂಗಗಳ ನಡುವೆ ಹೊಂದಾಣಿಕೆ ಮೂಡುವ, ಕಣ್ಣು-ಕೈ ನಡುವೆ ಸಂಬಂಧ ಬೆಳೆಸುವ ಆಟಗಳನ್ನು ಮಾಂಟೆಸ್ಸೊರಿಯವರು ಸಿದ್ಧಪಡಿಸಿದರು.  ಅದನ್ನು ಶಿಕ್ಶಕರು ಮಕ್ಕಳಿಗೆ ಒದಗಿಸುತ್ತಿದ್ದರು, ಮಕ್ಕಳಿಗೆ ನೆರವು ಅಗತ್ಯವಿದ್ದಾಗ ಮಾತ್ರ ಮಧ್ಯ ಪ್ರವೇಶಿಸುತ್ತಿದ್ದರು. ಶಾಲೆಯಲ್ಲಿ ಸಿಧ್ದವಿರುವ ಆಟಗಳು, ಗೊಂಬೆಗಳು, ಪಾತ್ರೆಗಳು, ಪ್ರಾಣಿಗಳು, ಗಿಡಗಳು – ಮಕ್ಕಳು ಅವುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಮಕ್ಕಳು ಕಲಿಯಲು ಸಹಾಯ ಮಾಡುತ್ತಾ, ಶಿಕ್ಷಕರು ಮಕ್ಕಳಿಗೆ ಸಲಹಾಗಾರರಾಗಿ, ಮಾರ್ಗದರ್ಶಕರಾಗಿ ಇರುತ್ತಿದ್ದರು. ಮಕ್ಕಳು ತ್ವರಿತ ಗತಿಯಲ್ಲಿ ಕಲಿಯಲಾರಂಭಿಸಿದರು. ಕೇವಲ ಓದಿನಲ್ಲಿ ಅಷ್ಟೇ ಅಲ್ಲದೆ ಸುಸಂಸ್ಕೃತ ನಾಗರಿಕರಾಗುವ ಲಕ್ಷಣಗಳನ್ನು ಬೆಳೆಸಿಕೊಂಡರು.
ಅವರ ಈ ಯಶಸ್ವಿ ಪ್ರಯೋಗಗಳ ಬಗ್ಗೆ ಪತ್ರಿಕೆಗಳು ಬರೆಯಲಾರಂಭಿಸಿದವು. ಮಾಂಟೆಸ್ರ್ಸೆರಿಯವರ ಶಿಕ್ಷಣ ಪದ್ಧತಿಯನ್ನು ಅಮೇರಿಕಾದ ಪ್ರಮುಖ ವ್ಯಕ್ತಿಗಳಾದ ವುಡ್ರೊ ವಿಲ್ಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಥಾಮಸ್ ಎಡಿಸನ್, ಹೆನ್ರಿ ಫೋರ್ಡ್ ಮುಂತಾದವರು ಬೆಂಬಲಿಸಿದರು. ಅವರ ಬಗ್ಗೆ ಅಸಂಖ್ಯಾತ ಲೇಖನಗಳು ಪ್ರಕಟವಾದವು. ಡಾ. ಮರಿಯಾ ಮಾಂಟೆಸ್ಸೊರಿಯವರನ್ನು ಆರಂಭಿಕ ಬಾಲ್ಯ ಶಿಕ್ಷಣದ ಆರಂಭಕರ್ತರಲ್ಲಿ ಒಬ್ಬರೆಂದೇ ಗುರುತಿಸಲಾಯಿತು. ಅವರ ಪ್ರಮುಖ ಬರಹಗಳೆಂದರೆ  – ಮಾಂಟೆಸ್ಸೊರಿ ವಿಧಾನ (1912), ಪೆಡಗಾಗಿಕಲ್ ಆಂಥ್ರೊಪಾಲಜಿ (1913), ಮುಂದುವರೆದ ಮಾಂಟೆಸ್ಸೊರಿ ವಿಧಾನ (1917); ಬಾಲ್ಯದ ರಹಸ್ಯ (1936)
1910ರಿಂದ ಯೂರೋಪ್, ಅಮೇರಿಕಾ, ಭಾರತದಲ್ಲಿ ಪ್ರವಾಸ ಮಾಡುತ್ತಾ, ಭಾಷಣಗಳನ್ನು ಮಾಡುತ್ತಾ, ಮಾಂಟೆಸ್ಸೊರಿ ಶಾಲೆಗಳನ್ನು ಸ್ಥಾಪಿಸುತ್ತಾ, ಶಿಕ್ಷಕರಿಗೆ ತರಬೇತಿ ನೀಡುತ್ತಾ, ಶಿಕ್ಷಣದ ಬಗ್ಗೆ ಪುಸ್ತಕಗಳನ್ನು ಬರೆಯುತ್ತಾ 40 ವರ್ಷಗಳನ್ನು ಕಳೆದರು. 
ಮಾಂಟೆಸ್ಸೊರಿಯವರು 1929ರಲ್ಲಿ ಮಾಂಟೆಸ್ಸೊರಿ ಅಂತರರಾಷ್ಟ್ರೀಯ ಸಂಘವನ್ನು ಸ್ಥಾಪಿಸಿದರು. ಅಷ್ಟರಲ್ಲಿ ರಾಜಕೀಯ ಜಗತ್ತು ಬದಲಾಗುತ್ತಿತ್ತು. ಇಟಲಿಯಲ್ಲಿ ಮುಸ್ಸೊಲಿನಿ ನಾಯಕತ್ವದ ನಿರಂಕುಶ ಪ್ರಭುತ್ವ ಅಸ್ತಿತ್ವಕ್ಕೆ ಬಂದಿತ್ತು. ಆ ಸರ್ಕಾರ ಮಕ್ಕಳ ಬಗೆಗಿನ, ಶಿಕ್ಷಣದ ಬಗೆಗಿನ ಅವರ ವಿಚಾರಗಳನ್ನು ಅಂಗೀಕರಿಸಲಿಲ್ಲ. ಮಾಂಟೆಸ್ಸೊರಿಯವರ ಶಾಲೆಗಳನ್ನು, ಯುದ್ಧಕ್ಕಾಗಿ ಸೈನಿಕರನ್ನು ಸಜ್ಜುಗೊಳಿಸುವ ತರಬೇತಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ಒತ್ತಡ ಹೆಚ್ಚಾಯಿತು. ತಮ್ಮ ತತ್ವಗಳೊಂದಿಗೆ ಯಾವುದೇ ಸಂಧಾನ ಮಾಡಿಕೊಳ್ಳಲಿಚ್ಛಿಸದ ಅವರು ಸಹಜವಾಗಿ ಅದನ್ನು ತಿರಸ್ಕರಿಸಿದರು. ಅವರನ್ನು ಮತ್ತು ಅವರ ಮಗನನ್ನು ಗೃಹಬಂಧನದಲ್ಲಿರಿಸಲಾಯಿತು, ನಂತರ ಗಡಿಪಾರು ಮಾಡಲಾಯಿತು. ಅವರು ಅಲ್ಲಿಂದ ಸ್ಪೇನ್‍ಗೆ ತೆರಳಿದರು. 1936ರವರೆಗೆ ಅಲ್ಲಿದ್ದು ನಂತರ ಅಲ್ಲಿಂದ ನೆದರ್‍ಲ್ಯಾಂಡ್ ಗೆ ತೆರಳಿ ಅಲ್ಲಿ ಆಶ್ರಯ ಪಡೆದರು. 
2ನೇ ಜಾಗತಿಕ ಯುದ್ಧದ ಸಮಯದಲ್ಲಿ ಭಾರತದಲ್ಲಿ ಶಿಕ್ಷಕರ ಸಮ್ಮೇಳನಕ್ಕೆ ಬಂದ ಅವರು ಯುದ್ಧ ಕಾಲಾವಧಿಯಲ್ಲಿ ಇಲ್ಲಿಯೇ ಉಳಿದರು. ನಂತರ 1952ರವರೆಗೆ, ಅಂದರೆ, ತಮ್ಮ ಮರಣಕಾಲದವರೆಗೆ ನೆದರ್‍ಲ್ಯಾಂಡ್ಸ್‍ನಲ್ಲಿ ಉಳಿದರು. ಅಲ್ಲಿ ಅಸೋಸಿಯೇಷನ್ ಮಾಂಟೆಸ್ಸೊರಿ ಇಂಟರ್‍ನ್ಯಾಷನೇಲ್‍ನ ಕೇಂದ್ರ ಸ್ಥಾನವಿದೆ.
ಅವರ ಮಾನವೀಯತಾವಾದಿ ಮೌಲ್ಯಗಳನ್ನು ಪ್ರತಿಪಾದಿಸಿದರು. ಅವರು ಸಕ್ರಿಯವಾಗಿ ಹಲವಾರು ಸಾಮಾಜಿಕ ಸುಧಾರಣಾ ಚಳುವಳಿಗಳಲ್ಲಿ ಭಾಗಿಯಾದರು. ಯೂರೋಪಿನಾದ್ಯಂತ ಮಕ್ಕಳ ಹಕ್ಕುಗಳು, ಮಹಿಳಾ ಚಳುವಳಿ, ಶಾಂತಿ ಶಿಕ್ಷಣ ಮತ್ತು ಲೀಗ್ ಆಫ್ ನೇಷನ್ಸ್ ನ ಪ್ರಾಮುಖ್ಯತೆ ಬಗ್ಗೆ ಭಾಷಣಕಾರರಾಗಿ ಗುರುತಿಸಲ್ಪಟ್ಟರು.  ಮಕ್ಕಳನ್ನು ವ್ಯಕ್ತಿಗಳನ್ನಾಗಿ ಗುರುತಿಸುವ ಹಕ್ಕು ನೀಡಬೇಕು ಎಂದು ಸಾರಿದರು. ಇದು ವಿಶ್ವದಾದ್ಯಂತ, ಸಮಾಜಗಳು ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಅವರ ಪಾತ್ರಗಳ ಬಗ್ಗೆ ಪುನರ್ ವ್ಯಾಖ್ಯಾನಿಸಲಾರಂಭಿಸುವಂತೆ ಮಾಡಿತು. ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ಇದ್ದ ಅವರು ಬಹಳಷ್ಟು ಮಹಿಳಾ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ, ಅವರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣಕ್ಕಾಗಿ, ಮಹಿಳೆಯರ ಹಕ್ಕುಗಳಿಗಾಗಿ, ಸಮಾಜ ಸುಧಾರಣೆಗಾಗಿ ಹೋರಾಡಿದ ಅವರ ಹೆಸರನ್ನು ಮೂರು ಬಾರಿ ನೊಬೆಲ್ ಪ್ರಶಸ್ತಿಗೆ ಸೂಚಿಸಲಾಯಿತು.
  - ಸುಧಾ ಜಿ 



ವ್ಯಕ್ತಿ ಪರಿಚಯ - ಬಚೇಂದ್ರಿಪಾಲ್



ಚಿಕ್ಕ ವಯಸ್ಸಿನಲ್ಲಿ ಕಂಡ ಕನಸ್ಸನ್ನು ಸಾಕಾರ ಮಾಡಿಕೊಂಡ ಮಹಿಳೆಯ ಸಾಹಸಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಅವರು ಮತ್ತಾರೂ ಅಲ್ಲ ಮೌಂಟ್ ಎವರೆಸ್ಟ್  ಏರಿದ ಪ್ರಪ್ರಥಮ ಭಾರತೀಯ ಮಹಿಳೆ ಬಚೇಂದ್ರಿಪಾಲ್ ರವರು.
ವ್ಯಾಪಾರಿ ಕಿಶನ್ ಸಿಂಗ್ ಪಾಲ್ ಮತ್ತು ಹಂಸದೇವಿಯವರ ಮೂರನೇ ಮಗಳಾಗಿ ಬಚೇಂದ್ರಿಯವರು  1954 ಮೇ 24 ರಂದು ನಾಕುರಿ ಎಂಬಲ್ಲಿ ಜನಿಸಿದರು. ಬಾಲ್ಯದಿಂದಲೂ ತುಂಟಾಟ ಮಾಡುತ್ತಿದ್ದ ಇವರ ಮೇಲೆ ತಂದೆಯ ಕಷ್ಟಸಹಿಷ್ಣುತೆ ಮತ್ತು ನೈತಿಕತೆ ತುಂಬಾ ಪ್ರಭಾವ ಬೀರಿತ್ತು. ಇವರನ್ನು ಡುಂಡ-ಹರ್ಸಿಲ್ ಶಾಲೆಗೆ ಸೇರಿಸಲಾಯಿತು. ಈ ಶಾಲೆ ಆರು ತಿಂಗಳಿಗೊಮ್ಮೆ ಎರಡೂ ಊರುಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಅಂದರೆ ಚಳಿಗಾಲದಲ್ಲಿ ಡುಂಡದಲ್ಲೂ, ಬೇಸಿಗೆಯಲ್ಲಿ ಹರ್ಸಿಲ್ ನಲ್ಲೂ ನಡೆಯುತ್ತಿತ್ತು. ಈ ಶಾಲಾ ಸ್ಥಳಾಂತರದಿಂದ ಬಚೇಂದ್ರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ನಿಸರ್ಗದ ಮಡಿಲಿನಲ್ಲಿ ಹೆಚ್ಚು ಕಾಲ ಕಳೆಯುವಂತಾಯಿತು. ಚಿಕ್ಕ ಪುಟ್ಟ ಬೆಟ್ಟ ಗುಡ್ಡಗಳನ್ನು ಹತ್ತುವುದು,ತೊರೆಗಳಲ್ಲಿ ಆಟವಾಡುವುದು ತುಂಬಾ ಖುಷಿ ಕೊಡುತ್ತಿದ್ದವು. 
ಒಮ್ಮೆ ಬಚೇಂದ್ರಿ ತಮ್ಮಹನ್ನರಡನೇ ವಯಸ್ಸಿನಲ್ಲಿ  ಶಾಲೆಯ ಮಕ್ಕಳ ಜೊತೆ ಹತ್ತಿರದಲ್ಲಿದ್ದ ಪರ್ವತವನ್ನು ಏರಲು ನಿರ್ಧರಿಸಿ ಯಾವ ಸಿದ್ಧತೆಯೂ ಇಲ್ಲದೆ ಹೊರಟರು. ಉತ್ಸಾಹದಿಂದ ಅರಿವಿಲ್ಲದೆ ಎಲ್ಲರೂ ಸುಮಾರು 4000 ಮೀಟರ್ ಎತ್ತರವನ್ನು ಕ್ರಮಿಸಿದ್ದರು. ಅಲ್ಲಿ ಹಿಮ ಬೀಳುತ್ತಿದ್ದರಿಂದ ಎಲ್ಲರು ಕುಣಿದು ಕುಪ್ಪಳಿಸಿದರು. ತಿನ್ನಲೂ, ಕುಡಿಯಲು ಏನೂಯಿಲ್ಲದೆ ,ಆಯಾಸಗೊಂಡ ಮಕ್ಕಳು ಹಿಂತಿರುಗಲು ದಾರಿ ತಿಳಿಯದಂತಾಗಿ ಭಯಗೊಂಡರು. ರಾತ್ರಿಯಲ್ಲಾ ಅಲ್ಲೇ ಕಳೆದು ಮರುದಿನ ಊರಿಗೆ ಹಿಂತಿರುಗಿದರು. ಈ ಪುಟ್ಟ ಪರ್ವತಾರೋಹಣವೇ ಮುಂದಿನ ಮೌಂಟ್ ಎವರೆಸ್ಟ್ ಆರೋಹಣಕ್ಕೆ ನಾಂದಿಯಾಗುವುದು ಎಂದು ಯಾರೂ ಊಹಿಸಿರಲಿಲ್ಲ.
ಇಲ್ಲಿನ ಹೆಣ್ಣುಮಕ್ಕಳು ಹೆಚ್ಚೇನು ಓದುತ್ತಿರಲಿಲ್ಲ. ಇವರ ಅಕ್ಕನು ಸಹ ಓದದೆ ಮನೆಕೆಲಸಕ್ಕೆ ತೊಡಗಿದಳು. ಆದರೆ ಸ್ವತಂತ್ರ ಮನೋಭಾವದ ಬಚೇಂದ್ರಿ ಸಾಹಸ ಗುಣವುಳ್ಳವಳು. ಅಣ್ಣ ಬಚ್ಚನ್ ಸಿಂಗ್ ಒಬ್ಬ ಕ್ರೀಡಾಪಟು ಹಾಗೂ ಪರ್ವತಾರೋಹಿ. ಅಣ್ಣನ ಸಾಹಸಗಳ ಗುಣಗಳಿಂದ ಪ್ರೇರಣೆಗೊಂಡ ಬಚೇಂದ್ರಿಗೆ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲ ಮಹತ್ತರವಾಗಿ ಬೆಳೆದಿತ್ತು.
ತುಂಟತನದಲ್ಲಿ ಮುಂದಿರುವಂತೆ ಓದಿನಲ್ಲೂ ಚುರುಕಾಗಿದ್ದ ಬಚೇಂದ್ರಿಯ ಗ್ರಹಣ ಶಕ್ತಿ ಅಪಾರವಾಗಿತ್ತು  ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು  ಬಹುಮಾನಗಳನ್ನು ಪಡೆಯುತ್ತಿದ್ದರು. 8 ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾದರೂ  ತಂದೆಯ ಆರ್ಥಿಕ ಪರಿಸ್ಥಿತಿಯಿಂದ ಮುಂದೆ ಓದಿಸಲು ಸಾಧ್ಯವಿಲ್ಲವೆಂದರೂ, ಎದೆಗುಂದದೆ ಬಚೇಂದ್ರಿಯವರು ಮನೆಯ ಕೆಲಸಗಳನ್ನು ಮುಗಿಸಿ ಸಂಜೆಯ ಮೇಲೆ ಸಹಪಾಠಿಗಳಿಂದ 9 ನೇ ತರಗತಿಯ ಪಾಠದ ಪುಸ್ತಕಗಳನ್ನು ತಂದು ಮನೆಯಲ್ಲಿಯೇ ಓದುತ್ತಿದ್ದಳು. ಇದನ್ನು ಕಂಡ ಅಕ್ಕ ತಂದೆಗೆ " ನಾನಂತೂ ಶಾಲೆಗೆ ಹೋಗಲಿಲ್ಲ ಇಷ್ಟು ಆಸಕ್ತಿಯಿರುವ ಇವಳನ್ನು ಮುಂದೆ ಓದಿಸದಿದ್ದರೆ ಇವಳ ಭವಿಷ್ಯವನ್ನು ಹಾಳು ಮಾಡಿದಂತೆ ಇವಳ ಕೆಲಸಗಳನ್ನು ನಾನು ಮಾಡುತ್ತೇನೆ ಇವಳನ್ನು ಶಾಲೆಗೆ ಕಳುಹಿಸಿ " ಎಂದು ಕೇಳಿಕೊಂಡಳು. ಮನ ಕರಗಿದ ತಂದೆ ಶಾಲೆಗೆ ಹೋಗಲು ಅನುಮತಿ ನೀಡಿದರು. 
ಓದಿನ ಜೊತೆಗೆ  ಹೊಲಿಗೆಯನ್ನು  ಕಲಿತು ತಮ್ಮ ಓದಿನ ವೆಚ್ಚವನ್ನು ನೋಡಿಕೊಳ್ಳುತ್ತಿದ್ದರು. ಹತ್ತನೇ ತರಗತಿಯಲ್ಲಿ  ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದರು. ನಂತರ ಪ್ರಾಂಶುಪಾಲರ ಸಹಾಯದಿಂದ ಕಾಲೇಜಿಗೆ ಸೇರಿ ಮುಂದೆ ಬಿ.ಎ ನಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ  ತೆಗೆದುಕೊಂಡರು. ಕಾರಣ ಕಾಳಿದಾಸನ ಕೃತಿಗಳನ್ನು  ಓದುವ ಸಲುವಾಗಿ. ಏಕೆಂದರೆ ಅದರಲ್ಲಿ ಅವರ ಕನಸಿನ ತಾಣವಾದ ಹಿಮಾಲಯದ ಬಗ್ಗೆ ಅನೇಕ ವಿಚಾರಗಳಿರುತ್ತವೆಯೆಂದು. 
ಇವರು ಬಿ.ಎ ಓದುವಾಗ ರೈಫೆಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು. ಮತ್ತು  ರೈಫೆಲ್ ನ ಬಿಡಿ ಭಾಗಗಳನ್ನು ಜೋಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯುವುದರ ಮೂಲಕ ಹುಡುಗರಿಗೆ ಮೀಸಲು ಎಂದು ತಿಳಿದಿದ್ದ ಸ್ಪರ್ಧೆಯಲ್ಲಿ ಗೆಲವು ಪಡೆದು ಪ್ರಖ್ಯಾತಿಯಾದರು. ನಂತರ ಬಿ.ಎ ಮುಗಿಸಿ ಡೆಹ್ರಾಡೂನಿನ ಡಿ ವಿ ಎ ಕಾಲೇಜಿನಲ್ಲಿ ಎಂ.ಎ ಗೆ ಸೇರಿ ಪದವಿಯನ್ನು ಪಡೆದರು ನಂತರ ಬಿ.ಎಡ್ ನ್ನು ಮುಗಿಸಿದರು.  ನಾಕುರಿ ಗ್ರಾಮದಲ್ಲಿ ಅತೀ ಹೆಚ್ಚು ಓದಿದ ಮಹಿಳೆಯೆನಿಸಿಕೊಂಡರು ಬಚೇಂದ್ರಿ ಪಾಲ್.
ಓದು ಮುಗಿದ ನಂತರ ಸರಿಯಾದ ಹುದ್ದೆ ಸಿಗದ ಕಾರಣ ಅಣ್ಣನ ನೆರವಿನಿಂದ      N I M ( ನೆಹರು ಇನ್ಸ್‌ಟಿಟ್ಯೂಟ್  ಆಫ್ ಮೌಂಟೆನಿರಿಂಗ್) ಗೆ ಪರ್ವತಾರೋಹಣ ತರಬೇತಿಗಾಗಿ ಅರ್ಜಿಯನ್ನು ಹಾಕಿದರು ಆದರೆ ಸೀಟ್ ಗಳು ಮುಗಿದಿದ್ದ ಕಾರಣ ಮುಂದಿನ ವರ್ಷಕ್ಕೆ ಪ್ರವೇಶ ದೊರೆಯಿತು. ಸಹಪ್ರಾಂಶುಪಾಲರಾಗಿದ್ದ ಮೇಜರ್ ಪ್ರೇಮ್ ಚಂದ್ರ ರವರ ಮಾರ್ಗದರ್ಶನದಲ್ಲಿ ತರಬೇತಿ ಆರಂಭವಾಯಿತು. ಎಲ್ಲರಂತೆ ಒಂದು ಸರ್ಟಿಫಿಕೇಟ್  ಸಿಗಬಹುದೆಂದು ನಿರೀಕ್ಷಿಸಿದ್ದ ಇವರಿಗೆ 'A' ಗ್ರೇಡ್ ದೊರೆಯಿತು. ಜೊತೆಗೆ " ಇದು ಎವರೆಸ್ಟ್ ಗಾಗಿ ಹುಟ್ಟಿ ಜೀವ " ಎಂದು ಪ್ರೇಮ್ ಚಂದ್ರ ರವರ ಹೊಗಳಿಕೆಗೂ ಪಾತ್ರರಾದರು.
1984 ರಲ್ಲಿ ಐ.ಎಂ.ಎಫ್ (ಇಂಡಿಯನ್ ಮೌಂಟೆನಿರಿಂಗ್ ಫೌಂಡೇಶನ್) ಸಂಸ್ಥೆಯು ತನ್ನ 4 ನೇ ಎವರೆಸ್ಟ್ ಪರ್ವತಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಿತು. ಈ ಬಾರಿಯ ತಂಡದಲ್ಲಿ ಬಚೇಂದ್ರಿಪಾಲ್ ರವರಿಗೆ ಅವಕಾಶ ದೊರೆಯಿತು. ನಂತರ ಎನ್.ಐ.ಎಂ ನ ಮುಂದಿನ ಕೋರ್ಸ್ ನಲ್ಲಿ ಭಾಗವಹಿಸಿ ಸುಮಾರು 6397 ಮೀಟರ್ ಎತ್ತರದ " ಕಪ್ಪು ತುದಿ "(black peak) ಪರ್ವತವನ್ನು ಏರಿ A ಗ್ರೇಡ್ ಪಡೆದರು. ಗುರುಗಳ ಉತ್ತೇಜನದಿಂದ "ಎವರೆಸ್ಟ್ 84 " ರ ಆರೋಹಣದಲ್ಲಿ ಭಾಗವಹಿಸಲು ಒಪ್ಪಿಗೆಯನ್ನು ನೀಡಿ  ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡತೊಡಗಿದರು. ನಂತರ 1982 ರಲ್ಲಿ 6672 ಮೀಟರ್ ಎತ್ತರದ ಗಂಗೋತ್ರಿಯನ್ನು ಮತ್ತು ರದುಗಾರಿಯಾ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿದರು.
1983 ರಲ್ಲಿ ಎನ್.ಎ.ಎಫ್ ನ ಮುಖ್ಯ ಕಾರ್ಯದರ್ಶಿಯಾಗಿ ಗ್ಯಾನ್ ಸಿಂಗ್ ರವರು ಅಡ್ವೆಂಚರ್ ಕೋರ್ಸ್ ನ್ನು ಹೇಳಿಕೊಡಲು ಬಂದರು. ಅವರ ಸಲಹೆಯಂತೆ ಬಚೇಂದ್ರಿಪಾಲ್ ರವರು ಹೆಣ್ಣು ಮಕ್ಕಳಿಗಾಗಿ ಎವರೆಸ್ಟ್  ಆರೋಹಣ ತರಬೇತಿ ನೀಡುವ ಕ್ಲಬ್ ನ್ನು ಆರಂಭಿಸಿ ಮಕ್ಕಳಿಗೆ ಕಲಿಸುತ್ತಾ, ತಾವೂ ಕಲಿಯುತ್ತ ಮನೆಗೆ ಆರ್ಥಿಕವಾಗಿ ನೆರವಾದರು. ಈ ಸಮಯದಲ್ಲಿ ಅನೇಕ ಪರ್ವತಗಳನ್ನು ಏರಿದರು,ಹರಿವ ನದಿಗಳನ್ನು ದಾಟುವುದನ್ನು, ಕಾಡು ಪ್ರಾಣಿಗಳಂದ ರಕ್ಷಣೆ ಪಡೆಯುವುದನ್ನು ತಿಳಿದರು.
1983 ರಲ್ಲಿ ಬಚೇಂದ್ರಿಪಾಲ್ ಇನ್ನಿಬ್ಬರು ಪರ್ವತಾರೋಹಿಗಳೊಂದಿಗೆ ದೂರದರ್ಶನದ ಸಂದರ್ಶನದಲ್ಲಿ ಭಾಗವಹಿಸಿದರು. ಮತ್ತು 1983 ರಲ್ಲಿ ನಡೆದ   "ಹಿಮಾಲಯನ್ ಮೌಂಟೆನಿರಿಂಗ್ ಅಂಡ್ ಟೂರಿಸಂ" ನ ಸಭೆಯಲ್ಲಿ ಪ್ರಪ್ರಥಮವಾಗಿ ಎವರೆಸ್ಟ್ ಏರಿದ ತೇನ್ ಸಿಂಗ್ ಮತ್ತು ಪ್ರಥಮ ಜಪಾನಿನ ಮಹಿಳೆ ಜುಂಕೋ ತಬೈ ರವರುಗಳು  ಭಾಗವಹಿಸಿದ್ದರು. ಈ ಸಭೆಯಲ್ಲಿ ಬಚೇಂದ್ರಿ ಪಾಲ್ ರವರು ಸಹ ಪಾಲ್ಗೊಂಡಿದ್ದರು.
"ಎವರೆಸ್ಟ್ 84 " ರ ತಂಡದ ಅಂತಿಮ ಆಯ್ಕೆಯಲ್ಲಿ ಇವರು ಆಯ್ಕೆಯಾದರು. ಇದಕ್ಕಾಗಿ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿಯುವುದು ಮತ್ತು ಭಾರವಾದ ಕಲ್ಲುಗಳನ್ನು ಹೊರುವುದರಿಂದ ಮೂಲಕ ದೇಹವನ್ನು ಕಠಿಣ ಪರಿಶ್ರಮಕ್ಕೆ ಹೊಂದುವಂತೆ ತಯಾರಾಗುತ್ತಿದ್ದರು. ಇದನ್ನು  ನೋಡಿದ ತಾಯಿಯು " ಇಷ್ಟೆಲ್ಲಾ ಓದಿ ಗುಡ್ಡ ಏಕೆ ಹತ್ತಬೇಕು" ಎಂಬ ಪ್ರಶ್ನೆಗೆ ಇವರು ಉತ್ತರಿಸುತ್ತಾ " ಮುಂಬರುವ ದಿನಗಳಲ್ಲಿ ನಿನ್ನ ಮಗಳನ್ನು ಇಡೀ ಜಗತ್ತೇ ಕೊಂಡಾಡುತ್ತದೆ" ಎಂದು ಹೇಳುತ್ತಿದ್ದರು. ಇವರಿಗೆ ಅಣ್ಣನ ಪೂರ್ಣ ಬೆಂಬಲವಿತ್ತು.
1983 ರ ಡಿಸೆಂಬರ್ ನಲ್ಲಿ ಅಭ್ಯರ್ಥಿಗಳೆಲ್ಲಾ  ಐ.ಎಂ.ಎಫ್ ಸೇರಿ ಅಭ್ಯಾಸವನ್ನು ಪ್ರಾರಂಭಿಸಿದರು. ಮತ್ತು ಶರೀರವನ್ನು ಪರ್ವತದ ಎತ್ತರದ ವಾತಾವರಣಕ್ಕೆ ಹೊಂದುವಂತೆ "ಆಕ್ಲಮಟೈಸ್" ಮಾಡಲು ಅನೇಕ ಕಠಿಣ ಪರಿಶ್ರಮದ ತರಬೇತಿಯನ್ನು ನೀಡಲಾಯಿತು.ನಂತರ ಗ್ಯಾನ್ ಸಿಂಗ್ ರವರ ಸಹಾಯದಿಂದ ಟಾಟಾ ಐರನ್ ಸ್ಟೀಲ್ ಕಂಪನಿಯಲ್ಲಿ ಬಚೇಂದ್ರಿ ಪಾಲ್ ತವರಿಗೆ ಸಾಹಸ ಕ್ರೀಡೆಗಳ ಪ್ರಚಾರಕಿ ಹುದ್ದೆ ದೊರೆಯಿತು.
ತಂದೆ, ತಾಯಿ ಮತ್ತು ತಮ್ಮ ಗ್ರಾಮದವರೆಲ್ಲರ ಹಾರೈಕೆಯೊಂದಿಗೆ ಬಚೇಂದ್ರಿ ಪಾಲ್ ರವರು ಎವರೆಸ್ಟ್ ಯಾನಕ್ಕೆ ದೆಹಲಿಗೆ ಹೊರಟರು. 1984 ರ ಮಾರ್ಚ್ 7 ರಂದು "ಎವರೆಸ್ಟ್ 84 " ರ ತಂಡ ದೆಹಲಿಯಿಂದ ಹೊರಟು ಕಠ್ಮಂಡುಗೆ ತೆರಳಿ ಮುಂದೆ ಜರಿ ಯ ಮೂಲಕ ನಾಮಚೆ ಬಜಾರ್ ನ್ನು ಸೇರಿತು. ಇಲ್ಲಿಂದ ಹಿಮಾಲಯವನ್ನು ಹತ್ತಿರದಿಂದ ನೋಡಿದ ಬಚೇಂದ್ರ ಪಾಲ್ ರವರಲ್ಲಿ ಏರುವ ತವಕ ಹೆಚ್ಚಾಗಿ ನಿಂತಲ್ಲಿಯೇ ಕೈ ಮುಗಿದು "ಓ ಮಹಾತಾಯಿ  ನಿನ್ನ ಮಗಳು ನಿನ್ನನ್ನು ನೋಡಲು ಕಾತುರದಿಂದ ಬಂದಿದ್ದಾಳೆ ದಯ ಮಾಡಿ ಪ್ರೀತಿಯಿಂದ ನಿನ್ನಲ್ಲಿ ಸೇರಿಸಿಕೊ " ಎಂದು ಬೇಡಿದರು. 
ಇಲ್ಲಿಂದ ಹೊರಟ ತಂಡ ಲಾಮರವರಿಂದ ಆಶೀರ್ವಾದ ಪಡೆದು ಫೆರಿಚೆ ಎಂಬ ಸ್ಥಳಕ್ಕೆ ಬಂದರು. ಅತಿಯಾದ ಹಿಮಪಾತದಿಂದ ಸಾವಿನ ಸುದ್ದಿ ಕೇಳಿದ ಬಚೇಂದ್ರಿ ಪಾಲ್ ರವರೂ ಅಳುಕಿದರು. ನಂತರ ಕರ್ನಲ್ ಕುಲಾಲ್ ಮತ್ತು ಪ್ರೇಮ್ ಚಂದ್ ರವರ ಮಾತುಗಳಿಂದ ಸ್ಪೂರ್ತಿಗೊಂಡರು. ಹಾಗೂ ಮತ್ತೊಮ್ಮೆ ಭೇಟಿಯಾದ ತೇನ್ ಸಿಂಗ್ ಅಳುಕಿದ ಇವರಿಗೆ " ಎಲ್ಲಾ ಮಹಾ ಪ್ರಯಾಣಗಳು ಶುರುವಾಗುವುದು ಮೊದಲ ಹೆಜ್ಜೆಯಲ್ಲಿಯೇ, ನಿನ್ನ ಮೊದಲ ಪ್ರಯತ್ನ ಯಶಸ್ವಿಯಾಗಲಿ ಹೋಗಿ ಬಾ" ಎಂದು ಹಾರೈಸಿದರು. ಇದರಿಂದ " ಏನೇ ಆದರೂ ಸರಿ ಎವರೆಸ್ಟ್ ಅನ್ನು ಏರುವೆ" ಎಂಬ ಛಲ ದೃಢವಾಯಿತು. 
ಮೂರು ಪಂಗಡಗಳಾಗಿ ಹೊರಟ ತಂಡ ತಮ್ಮ ಪ್ರಯಾಣವನ್ನು ಮುಂದುವರಿಸಿತು. 1984 ರ ಏಪ್ರಿಲ್ 14-15 ರಂದು ಹಿಮಪಾತ ಪ್ರಾರಂಭವಾಗಿ ಲೋತ್ಸೆಯ ಶಿಖರದಿಂದ ಹಿಮಗಡ್ಡೆಗಳು ಕೆಳಗುರುಳುತ್ತಿದ್ದವು. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಎಲ್ಲರನ್ನೂ ಹಿಮದರಾಶಿ ಆವರಿಸಿತು.ಎಲ್ಲರೂ ಹಿಮಗಡ್ಡೆಗಳನ್ನು ಕತ್ತರಿಸಿ ಹೊರ ಬಂದರು. ಹೀಗೆ ಹೊರ ಬಂದ ಬಚೇಂದ್ರಿ ಪಾಲ್ ತಮ್ಮ ನೋವನ್ನು ಲೆಕ್ಕಿಸದೆ ಎಲ್ಲರ ಶುಶ್ರೂಷೆ ಮಾಡಿದರು. ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ  ತಮ್ಮ ಪ್ರಯಾಣವನ್ನು ಮುಂದುವರಿಸಿ ಮೇ 22 ರ ರಾತ್ರಿ ಸೌತ್ ಕೋಲ್ ನ್ನು ತಲುಪಿದರು. ಮಾರನೆಯ ದಿನ ಆಂಗ್ ದೋರ್ಜಿ ಯೊಂದಿಗೆ ಬಚೇಂದ್ರಿಪಾಲ್ ಎವರೆಸ್ಟ್ ನ್ನು ಏರಲು ಹೊರಟರು.ಎಲ್ಲಾ ಅಡೆತಡೆಗಳನ್ನು ಎದುರಿಸುತ್ತಾ, ದೃಢವಾದ ಹೆಜ್ಜೆಯಳನ್ನಿಡುತ್ತ ಮಧ್ಯಾಹ್ನ ಸುಮಾರು ಒಂದು ಘಂಟೆಗೆ ಬಚೇಂದ್ರಿಯವರು ಪ್ರಪಂಚದ ಅತಿ ಎತ್ತರದ ಎವರೆಸ್ಟ್ ನ ಶೃಂಗದಲ್ಲಿ ಪಾದಾರ್ಪಣೆ ಮಾಡಿ, ತಲೆ ಬಾಗಿ ನಮಸ್ಕರಿಸಿದರು. ಭಾರತದ ತ್ರಿವರ್ಣ ಧ್ವಜ ಮತ್ತು 7 ಸಿಸ್ಟರ್ ತಂಡದ ಧ್ವಜವನ್ನು ನೆಟ್ಟು ಅಲ್ಲಿಯೇ ಸುಮಾರು 43 ನಿಮಿಷಗಳನ್ನು ಕಳೆದರು. 

ಹಿಂದಿರುಗಿದ ಇವರು ಅನೇಕ ಸಭೆ, ಸಮಾರಂಭ ಹಾಗೂ ಸಂದರ್ಶನಗಳಿಲ್ಲಿ ಭಾಗವಹಿಸಿದರು. ಎವರೆಸ್ಟ್ ಅಲ್ಲದೆ ಯೂರೋಪಿನ ಅತೀ ಎತ್ತರದ ಶಿಖರ ಮೌಂಟ್ ಬ್ಲಾಕ್ ನ್ನು ಏರಿದರು.
1985 ರಲ್ಲಿ ಮಹಿಳೆಯರೇ ಇದ್ದ ಭಾರತ-ನೇಪಾಳ ಪರ್ವತಾರೋಹಣದ ತಂಡದ ನೇತೃತ್ವ ವಹಿಸಿ ಯಶಸ್ವಿಯಾಗಿ ಆರೋಹಣ ಮಾಡಿ ಬಂದರು.ಈ ಆರೋಹಣ ಏಳು ದಾಖಲೆಗಳನ್ನು ನಿರ್ಮಿಸಿತು. 
1994 ರಲ್ಲಿ ಸಾಹಸ ರಾಫ್ಟಿಂಗ್ ಕ್ರೀಡೆಯ ಮಹಿಳಾ ತಂಡದ ಮುಖ್ಯಸ್ಥರಾದರು.

 1994 ರಲ್ಲಿ ಮೊದಲ ಮಹಿಳಾ ಪರ್ವತಾರೋಹಣದ ಗುಂಪಿನೊಂದಿಗೆ "ಇಂದಿರಾ ಕೋಲ್ "ಆರೋಹಣ ಮಾಡಿದರು. 2007 ರಲ್ಲಿ "ಥಾರ್ ಡೆಸೆರ್ಟ್ ಆಲ್ ವುಮೆನ್ ಎಕ್ಸ್ ಪೆಡಿಷನ್" ನ ಮುಖಂಡರಾಗಿ ಥಾರ್ ಮರುಭೂಮಿಯ 2000 ಕಿಲೋ ಮೀಟರ್ ಕಠಿಣ ಹಾದಿಯನ್ನು ಕ್ರಮಿಸುವುದರ ಮೂಲಕ ಕೊರೆಯುವ ಚಳಿಯಲ್ಲಿ ಮಾತ್ರವಲ್ಲದೆ ಮರುಭೂಮಿಯಲ್ಲೂ ತಮ್ಮ ಸಾಹಸಯಾತ್ರೆಯನ್ನು ತೋರಿದರು.

ಇವರ ಸಾಹಸ ಕಾರ್ಯಗಳಿಂದ ಸ್ಪೂರ್ತಿಗೊಂಡ 48 ವರ್ಷದ ಎರಡು ಮಕ್ಕಳ ತಾಯಿ ಪ್ರೇಮಲತಾ ಅಗರ್ ವಾಲ್ ರವರನ್ನು ಪ್ರೋತ್ಸಾಯಿಸಿ, ತರಬೇತಿ ನೀಡಿ 2011ರಲ್ಲಿ ಎವರೆಸ್ಟ್ ಅನ್ನು ಆರೋಹಣ ಮಾಡಲು ಕಾರಣರಾದರು. ಪ್ರೇಮಲತಾರವರು ಎವರೆಸ್ಟ್  ಏರಿದ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಯನ್ನು ನಿರ್ಮಿಸಿದರು.  2012 ರಲ್ಲಿ ಪೆಲ್ವಿಕ್ ಮೂಳೆಗೆ ಹೊಡೆತ ಬಿದ್ದು ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡು ಇನ್ನೊಂದು ಕಾಲಿಗೆ ಕೃತಕ ರಾಡ್ ನ್ನು ಹಾಕಿಸಿಕೊಂಡಿದ್ದ ಅರುಣಿಮಾ ಸಿನ್ಹಾ ರವರು ಬಚೇಂದ್ರಪಾಲ್ ರವರನ್ನು ಭೇಟಿ ಮಾಡಿ ತಮ್ಮ ಎವರೆಸ್ಟ್ ಏರುವ ಆಸೆಯನ್ನು ತಿಳಿಸಿದಾಗ ಎಲ್ಲರಂತೆ ಇವರನ್ನು ಹೀಯಾಳಿಸದೆ, ಪ್ರೋತ್ಸಾಹಿಸಿ ಉತ್ತಮ ತರಬೇತಿ ನೀಡಿದರ ಫಲವಾಗಿ ಅರುಣಿಮಾರವರು ಒಂಟಿ ಕಾಲಿನಲ್ಲಿ ಎವರೆಸ್ಟ್ ಏರಿದ ಪ್ರಪಂಚದ ಪ್ರಥಮ ಮಹಿಳೆ ಎನಿಸಿಕೊಂಡರು.

2013 ರಲ್ಲಿ  ಉತ್ತರಾಖಂಡ್ ನಲ್ಲಿ ಜಲಪ್ರಳಯವಾದಾಗ ಜನರ ನೆರವಿಗಾಗಿ ಸೈನ್ಯ ಕಾರ್ಯಾಚರಣೆಯೊಂದಿಗೆ ಕೈಜೋಡಿಸುವುದರ ಮೂಲಕ ಮಾನವೀಯತೆ ತೋರಿದರು.
ಪರ್ವತಾರೋಹಣದೊಂದಿಗೆ ಇವರು ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ಇದ್ದುದರಿಂದ, ಅವರಿಗೆ ಪರಿಸರದ ಬಗ್ಗೆ, ಅದನ್ನು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸುತ್ತಿದ್ದರು. ಪರಿಸರಪ್ರೇಮಿಯಾಗಿದ್ದ ಇವರು ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿದ್ದ ಅರಣ್ಯ ಸಂಪತ್ತನ್ನು ಉಳಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು.
ತಮ್ಮ ಸಾಹಸ ಕಾರ್ಯಗಳಗೆ ಬಚೇಂದ್ರಿ ಪಾಲ್ ರವರು ಪಡೆದ ಪ್ರಶಸ್ತಿಗಳನ್ನು ಪಡೆದರು.
1984 ರಲ್ಲಿ ಐ.ಎಂ.ಎಫ್ ನಿಂದ ಚಿನ್ನದ ಪದಕವನ್ನು ಪಡೆದರು.
1984 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ  ಪ್ರಶಸ್ತಿಯನ್ನು ನೀಡಿ ಗೌರವಿಸಿತು.
1985 ರಲ್ಲಿ ಉತ್ತರ ಪ್ರದೇಶದ ರಾಜ್ಯ ಶಿಕ್ಷಣ ಇಲಾಖೆ ಚಿನ್ನದ ಪದಕವನ್ನು ನೀಡಿತು.
1986 ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿಯನ್ನು ನೀಡಿತು.
1986 ರಲ್ಲಿ ಕೋಲ್ಕತ್ತ ಮಹಿಳೆಯ ಅಧ್ಯಯನ ಸಂಸ್ಥೆಯು ಪ್ರಶಸ್ತಿಯನ್ನು ನೀಡಿತು.
1990 ರಲ್ಲಿ ಗಿನ್ನೀಸ್ ಪುಸ್ತಕದಲ್ಲಿ ಹೆಸರು ದಾಖಲೆಯಾಯಿತು.
1994 ರಲ್ಲಿ ಭಾರಯ ಸರ್ಕಾರವು ನ್ಯಾಶನಲ್ ಅಡ್ವೆಂಚರ್ ಪ್ರಶಸ್ತಿಯನ್ನು ನೀಡಿತು.
1995 ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರ ಯಶ್ ಪ್ರಶಸ್ತಿಯನ್ನು ನೀಡಿತು.
1997 ರಲ್ಲಿ ಗಢವಾಲ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದರು.
2013-14 ರಲ್ಲಿ ಮಧ್ಯೆ ಪ್ರದೇಶದ ಸರ್ಕಾರ ಸಾಂಸ್ಕೃತಿಕ ಸಂಸ್ಥೆಯಿಂದ ವೀರಾಂಗನೆ ಲಕ್ಷ್ಮೀಬಾಯಿ ಪ್ರಶಸ್ತಿಯನ್ನು ಪಡೆದರು.
ಹೀಗೆ " ಮನಸ್ಸಿದ್ದರೆ  ಮಾರ್ಗ " ಎಂಬಂತೆ ತಾವು ಚಿಕ್ಕ ವಯಸ್ಸಿನಲ್ಲಿ ಕಂಡ ಕನಸ್ಸನ್ನು ನನಸು ಮಾಡಿಕೊಳ್ಳಲು ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಎವರೆಸ್ಟ್  ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಎಲ್ಲರಿಗೂ ಸ್ಪೂರ್ತಿ ನೀಡಿ ಮಾದರಿಯಾಗಿದ್ದಾರೆ.

- ಎಂ ಎಸ್ ವಿಜಯಲಕ್ಷ್ಮಿ 

Monday, 8 May 2017

ಮಹಿಳಾ ಸಾಧಕಿ - ಡಾ. ರುಕ್ಮಾಬಾಯಿ

ಡಾ. ರುಕ್ಮಾಬಾಯಿ(1864-1955)

            ಸಂಪ್ರದಾಯಗಳನ್ನು ಧಿಕ್ಕರಿಸಿ ಮುನ್ನಡೆದ ಮಹಿಳೆ


  19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಕ್ರಮಿತ ಭಾರತ ಹಾಗೂ ಬ್ರಿಟನ್‍ನಲ್ಲಿ ಶಾಕ್ ತರಂಗಗಳನ್ನೆಬ್ಬಿಸಿದ್ದು ರುಕ್ಮಾಬಾಯಿ ಪ್ರಕರಣ. ಹಿರಿಯರು ತನಗೆ ಬಾಲ್ಯದಲ್ಲೇ ಮದುವೆ ಮಾಡಿಸಿದ ಒಲ್ಲದ ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆಯೊಬ್ಬಳ ಹೋರಾಟದ ಕಥೆ ಇದು.
  “ನಮ್ಮನ್ನು (ಹಿಂದೂ ಸ್ತ್ರೀಯರನ್ನು) ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಾರೆ. ನಮ್ಮನ್ನು ಆಟಿಕೆಯಂತೆ, ಭೋಗದ ವಸ್ತುವಿನಂತೆ, ತಾತ್ಕಾಲಿಕ ಬಳಕೆಯ ಬಳಿಕ ಎಗ್ಗುಸಿಗ್ಗಿಲ್ಲದೆ ಬಿಸಾಡುವ ಸಾಮಾನಿನಂತೆ ಕಾಣುತ್ತಾರೆ. ನಮ್ಮ ಕಾನೂನುದಾತರು(ಶಾಸ್ತ್ರ ರಚಿಸಿದವರು) ತಾವೇ ಸ್ವತ: ಪುರುಷರಾದ್ದರಿಂದ ತಮ್ಮನ್ನೇ ಉದಾತ್ತ ಮತ್ತು ಪವಿತ್ರ ಎಂಬುದಾಗಿ ಚಿತ್ರಿಸಿಕೊಂಡಿದ್ದಾರೆ ಹಾಗೂ ಊಹಿಸಲು ಸಾಧ್ಯವಾದ ಎಲ್ಲಾ ಪಾಪ-ಅಪವಿತ್ರತೆಗಳನ್ನು ನಮ್ಮ ಮಡಿಲಿಗೆ ಹಾಕಿದ್ದಾರೆ. ಈ ಯೋಗ್ಯರನ್ನು ನಂಬುವುದಾದರೆ ನಾವು ಕೊಳಕು ಪ್ರಾಣಿಗಳ ಒಂದು ಮಂದೆಯಾಗಿದ್ದು ದೇವರು ನಮ್ಮನ್ನು ಸೃಷ್ಟಿಸಿರುವುದೇ ಪುರುಷನ ವಿಶೇಷ ಸೇವೆ ಮತ್ತು ತೃಪ್ತಿಗಾಗಿ; ದೈವ ಕೃಪೆಯುಳ್ಳ ಪುರುಷ ತನಗಿಷ್ಟ ಬಂದಹಾಗೆ ನಮ್ಮೊಂದಿಗೆ ವರ್ತಿಸಬಹುದು, ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಶಾಸ್ತ್ರಗಳ ಆಣತಿಯಂತೆ ನಾವು ಇಂತಹ ಪತನಕ್ಕೆ ಒಳಗಾಗಿದ್ದೇವೆ; ಶತಮಾನಗಳಿಂದ ಪುರುಷರು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ; ಈ ಕಾರಣದಿಂದ ಸಹಜವಾಗಿಯೇ ನಾವು ನಮ್ಮ ಕುರಿತಾಗಿಯೇ ಕೀಳರಿಮೆ ಬೆಳೆಸಿಕೊಂಡಿದ್ದೇವೆ. ಹಾಗಾಗಿ ಬಾಲ್ಯ ವಿವಾಹದ ಪದ್ಧತಿಯನ್ನು ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣವನ್ನು ಹೆಚ್ಚುಹೆಚ್ಚಾಗಿ ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು.” 
    1885ರ ‘ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ‘ಓರ್ವ ಹಿಂದೂ ಸ್ತ್ರೀ’ ಎಂಬ ಗುಪ್ತ ನಾಮದಲ್ಲಿ ಓರ್ವ ಮಹಿಳೆ ಬರೆದ ಪತ್ರದ ಭಾಗ ಇದು. ಗಂಡನ ಮನೆಯಲ್ಲಿ ತರುಣ ಸೊಸೆ ಅನುಭವಿಸುವ ಕ್ರೂರ, ಅಮಾನವೀಯ ಕಿರುಕುಳದ ಕುರಿತು ಮಹಿಳೆಯೊಬ್ಬಳು ನೊಂದು ಬರೆದ ಪತ್ರ ಅದು. ಸೊಸೆಯ ಮಾನಸಿಕ, ದೈಹಿಕ ಸ್ವಾತಂತ್ರ್ಯಹರಣ, ದಮನ ಹಾಗೂ ಕೆಲಸದಾಳಿನೊಂದಿಗೆ (“ಕೆಲಸದಾಳಿನಂತೆ ಎಂದು ಹೇಳಲಾರೆ, ಏಕೆಂದರೆ ಕೆಲಸದಾಳಿಗೆ ಕೆಲಸ ನಿರಾಕರಿಸುವ ಆಯ್ಕೆ ಇದೆ, ಸೊಸೆಗೆ ಇಲ್ಲ.”) ಮಾಡಬೇಕಾದ ಕಠಿಣ ಕೆಲಸಗಳ ಕುರಿತು ಆಕೆ ಬರೆದಿದ್ದರು.
    ಈ ಪತ್ರ ಅಂದಿನ ಸಮಾಜದಲ್ಲಿ ತಳಮಳ ಸೃಷ್ಟಿಸಿತು. ಮುಂದೆ ಅದನ್ನು ಬರೆದದ್ದು ರುಕ್ಮಾಬಾಯಿ ಎಂಬುದು ಬಯಲಾದಾಗ ಸನಾತನಿಗಳು ಆಕೆಯ ಮೇಲೆ ಕತ್ತಿ ಮಸೆದರು. ನ್ಯಾಯಾಲಯದಲ್ಲಿ ರುಕ್ಮಾಬಾಯಿ ಕೇಸು ನಡೆಯುತ್ತಿದ್ದ ಕಾಲದಲ್ಲಿ ಅದು ಅವಳ ವಿರುದ್ಧ ಜನಾಭಿಪ್ರಾಯ ರೂಪಿಸಿತು.
  ರುಕ್ಮಾಬಾಯಿಯದು ಬಾಲ್ಯವಿವಾಹ, ನಂತರ ಅವಳು ತಿರಸ್ಕರಿಸಿದ ವಿವಾಹ.

ಸಾಂಪ್ರದಾಯಿಕ ಸಮಾಜದ ಬಲಿ
  ರುಕ್ಮಾಬಾಯಿ ಜನಿಸಿದ್ದು 1864ರಲ್ಲಿ ಮುಂಬೈನಲ್ಲಿ. ಆಕೆಯ ತಾಯಿಯ ವಿವಾಹ ನಡೆದಾಗ ಅವಳಿಗೆ 14 ವರ್ಷ, ರುಕ್ಮಾಬಾಯಿ ಜನಿಸಿದಾಗ 15ವರ್ಷ. ಮಗುವಿಗೆ 2ವರ್ಷವಿದ್ದಾಗಲೇ ಆಕೆ ವಿಧವೆಯಾದಳು. ವಿಧವಾವಿವಾಹ ನಿಷಿದ್ಧವಿರದ ಜಾತಿಗೆ ಸೇರಿದ ಕಾರಣ ಡಾ. ಸಕ್ರಾಮ್ ಅರ್ಜುನ್ ಎಂಬ ವೈದ್ಯರನ್ನು ವಿವಾಹವಾದಳು. ಆತ ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಬಾಟನಿ ಪ್ರಾಧ್ಯಾಪಕರು. ಅವರು ಪ್ರಗತಿಪರ ಮನೋಧರ್ಮದವರು, ಸ್ತ್ರೀ ಶಿಕ್ಷಣಪರರು. ಹಾಗಾಗಿ ರುಕ್ಮಾಬಾಯಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸಿದರು. 
 ತನ್ನ ತಂದೆಯ ಒತ್ತಡಕ್ಕೆ ಮಣಿದ ತಾಯಿ, ರುಕ್ಮಾಬಾಯಿಯ ವಿವಾಹವನ್ನು ಅವಳ 11ನೇ ವಯಸ್ಸಿನಲ್ಲೇ ದಾದಾಜಿ ಭಿಕಾಜಿಯೊಂದಿಗೆ ಮಾಡಿದರು. ನಂತರ ಸಂಪ್ರದಾಯದಂತೆ ತಾಯಿಮನೆಯಲ್ಲಿ ಉಳಿದ ರುಕ್ಮಾಬಾಯಿ ತನ್ನ ಶಿಕ್ಷಣ ಮುಂದುವರೆಸಿದಳು. ಆದರೆ ಅವಳ ಗಂಡನ ಶಿಕ್ಷಣ ಎಳವೆಯಲ್ಲೇ ಮೊಟಕಾಯಿತು. ಕೆಲ ವರ್ಷಗಳ ಬಳಿಕ ಅವನು ಪತ್ನಿ ತನ್ನೊಂದಿಗೆ ಸಂಸಾರ ಹೂಡಬೇಕೆಂದು ಬಯಸಿದ. ಅಶಿಕ್ಷಿತ, ಕುಸಂಸ್ಕೃತ, ರೋಗಿಷ್ಟ ಗಂಡನೊಡನೆ ಬಾಳಲು ರುಕ್ಮಾಬಾಯಿ ನಿರಾಕರಿಸಿದಳು. ಅಲ್ಲದೆ ತನ್ನ ತಂದೆ ತನ್ನ ಪಾಲಿಗೆ ಬಿಟ್ಟುಹೋದ ಆಸ್ತಿಯೇ ಗಂಡ ತನ್ನನ್ನು ಕರೆದೊಯ್ಯಲು ಒತ್ತಾಯಿಸುತ್ತಿರುವ ಮುಖ್ಯ ಕಾರಣ ಎಂಬ ಅರಿವೂ ಅವಳಿಗಿತ್ತು. 
  ಸಿಟ್ಟಿಗೆದ್ದ ಗಂಡ ಅವಳು ತನ್ನೊಂದಿಗೆ ಬರಲೇಬೇಕು ಎಂದು 1884ರಲ್ಲಿ ಅವಳ ವಿರುದ್ಧ ದಾವೆ ಹೂಡಿದ. ಅಲ್ಲಿಂದ ಶುರುವಾಯಿತು ಗಂಡನೊಂದಿಗೆ ರುಕ್ಮಾಬಾಯಿಯ ಕಾನೂನು ಸಮರ, ಒಂದು ಹೊಸ ಇತಿಹಾಸದ ಪ್ರಾರಂಭ.

   ಕಾನೂನಿನ ದಮನಕ್ಕೆ ಬಗ್ಗದ ಚೇತನ
     1885ರಲ್ಲಿ  ನ್ಯಾಯಾಲಯ ಕೊಟ್ಟ ಮೊದಲ ತೀರ್ಪು ರುಕ್ಮಾಬಾಯಿಯ ಪರವಾಗಿತ್ತು. ಗಂಡನೊಂದಿಗೆ ಎಂದೂ ಬಾಳುವೆ ನಡೆಸಿಯೇ ಇಲ್ಲದ ಕಾರಣ ಅವಳೊಂದಿಗೆ ಬಾಳು ನಡೆಸುವ ಹಕ್ಕಿನ ಮರುಸ್ಥಾಪನೆ (Restitution of conjugal rights)ಯ ಪ್ರಶ್ನೆಯೇ ಇಲ್ಲ; ಅಲ್ಲದೆ ಈ ಮದುವೆ ಅವಳ ಸಮ್ಮತಿ ಇಲ್ಲದೆ ಬಾಲ್ಯದಲ್ಲೇ ನಡೆದಿರುವುದರಿಂದ ವಯಸ್ಸಿಗೆ ಬಂದ ಮೇಲೆ ಅವನೊಡನೆ ಬಾಳುವಂತೆ ಅವಳಿಗೆ ಒತ್ತಾಯ ಮಾಡುವುದು ಕೌರ್ಯ ಹಾಗೂ ಅನಾಗರಿಕ ವ್ಯವಹಾರವಾಗುತ್ತದೆ; ಹಾಗಾಗಿ ಹಾಗೆ ಮಾಡುವಂತಿಲ್ಲ ಎಂದಿತು ನ್ಯಾಯಾಲಯ.
  ನ್ಯಾಯಾಲಯದ ತೀರ್ಪು ಇಡೀ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡಿತು. ಅಂದಿನ ಸಾ0ಪ್ರದಾಯಿಕ ಸಮಾಜದಲ್ಲಿ ಹೆಣ್ಣುಮಗಳೊಬ್ಬಳು ಗಂಡನೊಂದಿಗೆ ಹೋಗುವುದಿಲ್ಲ ಎಂದರೇನು! ಇದಕ್ಕಾಗಿ ಕೋರ್ಟಿನಲ್ಲಿ ವ್ಯಾಜ್ಯ ನಡೆಯುವುದೆಂದರೇನು!! ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ನಡೆಸುತ್ತಿದ್ದ ‘ಕೇಸರಿ’ ಪತ್ರಿಕೆಯಲ್ಲಿ ರುಕ್ಮಾಬಾಯಿಯ ವಿರುದ್ಧ ಲೇಖನ ಬಂತು. ವಿದ್ಯಾವಂತ ಸ್ತ್ರೀಯರು ಹೀಗೆ ಗಂಡನೊಡನೆ ಬಾಳಲು ನಿರಾಕರಿಸಿದರೆ ಅದರಿಂದ ಸ್ತ್ರೀ ಶಿಕ್ಷಣ ಚಳುವಳಿಗೆ ಹಿನ್ನಡೆಯಾಗುತ್ತದೆ ಎಂಬುದು ತಿಲಕ್ ಅಭಿಪ್ರಾಯ. ಅಲ್ಲದೆ ಬ್ರಿಟಿಷ್ ಸರ್ಕಾರ ಹಿಂದೂ ಧಾರ್ಮಿಕ ಸಂಪ್ರದಾಯ -ಕಟ್ಟಳೆಗಳಲ್ಲಿ ಮೂಗು ತೂರಿಸಬಾರದು ಎಂಬುದೂ ಅವರ ಆಗ್ರಹ. ಇದನ್ನು ಸಹಜವಾಗಿಯೇ ಸನಾತನವಾದಿಗಳು ಬೆಂಬಲಿಸಿದರು. ಹಾಗಾಗಿ ಕೊನೆಗೂ ಬ್ರಿಟಿಷ್ ಸರ್ಕಾರ ಈ ಒತ್ತಡಕ್ಕೆ  ಮಣಿಯಿತು. ತನ್ನ ಆಡಳಿತ ಸುಗಮವಾಗಿ ನಡೆಯಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದರಿಂದ ಇಲ್ಲಸಲ್ಲದ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಅದಕ್ಕೆ ಬೇಕಿರಲಿಲ್ಲ. ದಾದಾಜಿ ಮತ್ತೆ ಕೋರ್ಟಿನ ಮೊರೆಹೋದಾಗ ತೀರ್ಪು ಅವನ ಪರವಾಗಿಯೇ ಬಂತು! ರುಕ್ಮಾಬಾಯಿ ಒಂದು ತಿಂಗಳಲ್ಲಿ ಅವನ ಬಳಿ ಹೋಗಬೇಕು, ಇಲ್ಲವೇ 6 ತಿಂಗಳ ಸೆರೆಮನೆವಾಸ ಎಂದಿತು ನ್ಯಾಯಾಲಯ!! ಎಂಥ ನ್ಯಾಯ!!!
   ಆದರೂ ರುಕ್ಮಾಬಾಯಿ ಬಗ್ಗಲಿಲ್ಲ. ಸೆರೆಮನೆವಾಸಕ್ಕೆ ಸಿದ್ಧ ಎಂದು ಸೆಟೆದು ನಿಂತಳು. ದಾದಾಜಿ, ರುಕ್ಮಾಬಾಯಿ ಮತ್ತವಳ ಮನೆಯವರ ಮೇಲೆ ಚಾರಿತ್ರ್ಯವಧೆಯ ದಾವೆಯನ್ನೂ ಹೂಡಿದ, ಆದರೆ ಅದರಲ್ಲಿ ಸೋಲನ್ನುಂಡ. ಕೊನೆಗೆ 1888ರ ಹೊತ್ತಿಗೆ, ಇನ್ನು ರುಕ್ಮಾಬಾಯಿಯನ್ನು ಮಣಿಸುವುದು ಸಾಧ್ಯವಿಲ್ಲ ಎಂದು ಅವನು ಮನಗಂಡ. ರುಕ್ಮಾಬಾಯಿ ಜೈಲಿಗೆ ಹೋಗುವುದರಿಂದ ಅವನಿಗೇನೂ ಲಾಭ ಇರಲಿಲ್ಲ. ಹಾಗಾಗಿ ರಾಜಿ ಮಾಡಿಕೊಂಡ. ದಾವೆಯ ಹಣವನ್ನು ಅವಳಿಂದ ಪಡೆದು ಅವಳ ಮೇಲಿನ ಅಧಿಕಾರ ಬಿಟ್ಟುಕೊಟ್ಟ, ಮರುಮದುವೆ ಮಾಡಿಕೊಂಡ.

 ಅಸಹಾಯ ಮಹಿಳೆಯ ದಮನಕ್ಕೆ ನಿಂತ ಸಮಾಜ
   ಅಂದಿನ ನಿಷ್ಠುರ, ಕಠೋರ ಸಮಾಜ ರುಕ್ಮಾಬಾಯಿಯನ್ನು ದಮನಕ್ಕೆ ಒಳಪಡಿಸಿದ ರೀತಿ ದಿಗ್ಭ್ರಮೆಗೊಳಿಸುವಂಥಾದ್ದು. ಸಂಪ್ರದಾಯವಾದಿಗಳ ಪಾಲಿಗೆ ಅದು ಒಂದು ಕೇಸು ಮಾತ್ರವಾಗಿರಲಿಲ್ಲ. ಅದು ಅವರ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ತಮ್ಮ ಪವಿತ್ರ ಶಾಸ್ತ್ರ-ಸಂಹಿತೆಗಳನ್ನು ಬ್ರಿಟಿಷ್ ನ್ಯಾಯಾದೀಶರು ಉಲ್ಲಂಘಿಸುತ್ತಿದ್ದಾರೆ ಎಂಬುದೇ ಅವರ ಆಕ್ರೋಶ. ಹೆಣ್ಣುಮಗಳೊಬ್ಬಳು ವಿವಾಹಕ್ಕೆ ತನಗೆ ತಕ್ಕ ವರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪಡೆದರೆ, ಅದು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ ಎಂದು ‘ಕೇಸರಿ’ ಸಂಪಾದಕೀಯ ಬರೆಯಿತು. “.....ಎಲ್ಲೆಲ್ಲೋ ಅಡ್ಡಾಡುತ್ತಿರುವ ತನ್ನ ಹಸುವಿನ ಕೊರಳಿಗೆ ಹಗ್ಗಹಾಕಿ ಓರ್ವ ಪುರುಷ ಅದನ್ನು ಮನೆಗೆ ತಂದರೆ ಇಂಗ್ಲಿಷ್  ಕಾನೂನು ಅದು ದಾವೆಗೆ ಯೋಗ್ಯ ಎನ್ನುವುದಿಲ್ಲ. ಹಿಂದೂ ಧರ್ಮ ಮಹಿಳೆಯನ್ನು ಒಂದು ಆಸ್ತಿಯನ್ನಾಗಿ ಮತ್ತು ಪಶುವಿಗೆ ಸಮಾನ ಎಂದು ಪರಿಗಣಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಮಾನವಳಾದ ಕಾರಣ ಅವಳಿಗೆ ಆಹಾರದ-ಬಟ್ಟೆಬರೆಯ ಹಕ್ಕಿದೆ. ಆದರೆ ಇಂಗ್ಲಿಷ್ ಕಾನೂನು ಇದನ್ನು ತಪ್ಪೆಂದು ಪರಿಗಣಿಸಿದೆ, ಇದು ಧರ್ಮ ಮತ್ತು ಸಂಪ್ರದಾಯದಲ್ಲಿ ವಿದೇಶಿ ಮಧ್ಯಪ್ರವೇಶದ ಪ್ರಾರಂಭ....” (ಕೇಸರಿ-ಸಂಪಾದಕೀಯ-ಏಪ್ರಿಲ್ 13,1886)
  ದಾದಾಜಿಗೆ ನ್ಯಾಯಾಲಯದಲ್ಲಿ  ದಾವೆ ಹೂಡಲು ಸನಾತನಿಗಳು ಹಣ ಒಗ್ಗೂಡಿಸಿ ನೀಡಿದರು, ಅವನಿಗೆ ಬೆಂಗಾವಲಾಗಿ ನಿಂತರು. ರುಕ್ಮಾಬಾಯಿಯ ಪರ ಇದ್ದವರು ಕೆಲವೇ ಮಂದಿ ಪ್ರಗತಿಪರರು - ಅವಳ ಸಾಕು ತಂದೆ ಹಾಗೂ ಸಮಾಜ ಸುಧಾರಕರಾದ ಗಣೇಶ್ ಗೋಪಾಲ್ ಅಗರ್‍ಕರ್. ‘ಕೇಸರಿ’ಯ ಇನ್ನೊಬ್ಬ ಸಂಪಾದಕರಾದ ಅಗರ್‍ಕರ್ ಈ ಪ್ರಕರಣದಲ್ಲಿ ತಿಲಕ್‍ರೊಂದಿಗೆ ಭಿನ್ನಮತ ಹೊಂದಿದ ಕಾರಣ ಅವರಿಂದ ಬೇರೆಯಾದರು, ಮಹಿಳೆಯರ ವಿಮೋಚನೆಗೆ ಟೊಂಕಕಟ್ಟಿ ನಿಂತರು.
  ಸಮಾಜದ ಖಂಡನೆಯಿಂದ ನೊಂದ ರುಕ್ಮಾಬಾಯಿ ತನ್ನ ಬೆಂಬಲಕ್ಕೆ ನಿಂತ ಸಮಾಜಸುಧಾರಕಿ ಪಂಡಿತ ರಮಾಬಾಯಿಗೆ ಪತ್ರ ಬರೆದಳು. 1887ರ ಮಾರ್ಚ್ 8ರಂದು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದಾಗ ಅವಳು ಬರೆದ ಪತ್ರ ಅವಳಲ್ಲಿನ ನೋವು-ಹತಾಶೆಯನ್ನು ವ್ಯಕ್ತ ಪಡಿಸುತ್ತದೆ.
  “ನಾವಿರುವುದು ಎಲ್ಲರಿಗೂ ಸಮಾನ ನ್ಯಾಯ ಎಂದು ಕೊಚ್ಚಿಕೊಳ್ಳುವ, ಭೇದಭಾವರಹಿತ ಬ್ರಿಟಿಷ್ ಆಳ್ವಿಕೆಯಲ್ಲಿ ಅಲ್ಲವೇ? ನಾವಿರುವುದು ಸ್ವತ: ಮಹಿಳೆಯೇ ಆಗಿರುವ ರಾಣಿ - ಸಾಮ್ರಾಜ್ಞಿ ವಿಕ್ಟೋರಿಯಾರ ರಾಜ್ಯಭಾರದಲ್ಲಿ ಅಲ್ಲವೇ? ಹಿಂದೂ ಆಳ್ವಿಕೆಯೇ ಇರಲಿ, ಬ್ರಿಟಿಷ್ ಆಳ್ವಿಕೆಯೇ ಇರಲಿ, ಭಾರತದಲ್ಲಿ ಮಹಿಳೆಯರಿಗೆ ಯಾವ ಆಶಾಭಾವನೆಯೂ ಇಲ್ಲ. ನನ್ನ ಕೇಸಿನ ತೀರ್ಮಾನ ಇಷ್ಟು ಕ್ರೂರವಾಗಿ ಆಗಿರುವ ಕಾರಣ ಇದು ಸಾರ್ವಜನಿಕ ಅಭಿಪ್ರಾಯವನ್ನು ಮಹಿಳೆಯ ಪರವಾಗಿ ರೂಪಿಸಿ ಅವಳ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕಾರಣವಾಗಬಹುದು ಎಂಬುದು ಕೆಲವರ ಅಭಿಪ್ರಾಯ. ಆದರೆ ಅದು ತದ್ವಿರುದ್ಧವಾಗಿರುತ್ತದೆ ಎಂಬುದು ನನ್ನ ಭೀತಿ. ಕಠೋರ ಅತ್ತೆಯರು ಇನ್ನಷ್ಟು ಬಲ ಪಡೆಯುತ್ತಾರೆ ಹಾಗೂ ಬ್ರಿಟಿಷ್ ಸರ್ಕಾರ ಯಾವ ಪರಿಸ್ಥಿತಿಯಲ್ಲೂ ಹಿಂದೂ ಕಾನೂನಿನ ವಿರುದ್ಧ ಹೋಗಲಾರದು ಎಂಬ ದೃಢ ನಂಬಿಕೆಯಿಂದ, ಇದುವರೆವಿಗೂ ತಮ್ಮ ಪತ್ನಿಯರೊಂದಿಗೆ ಬಾಳುವ ಹಕ್ಕಿನ ಮರುಸ್ಥಾಪನೆಗಾಗಿ ದಾವೆ ಹೂಡಲು ಹಿಂಜರಿಯುತ್ತಿರುವ ತಮ್ಮ ಗಂಡುಮಕ್ಕಳನ್ನು ಬ್ರಿಟಿಷ್ ನ್ಯಾಯಾಲಯಕ್ಕೆ ಹೋಗಲು ಅವರು ಪ್ರೇರೇಪಿಸಬಹುದು!”
   ಇದಕ್ಕೆ ಪಂಡಿತ ರಮಾಬಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ ಬ್ರಿಟಿಷ್ ಸರ್ಕಾರವನ್ನು ಖಂಡಿಸಿದ್ದಾರೆ - “ಅಸಹಾಯ ಹೆಣ್ಣುಮಗಳೊಬ್ಬಳ ಪರ ಇರದುದಕ್ಕಾಗಿ ನಾವು ಬ್ರಿಟಿಷ್ ಸರ್ಕಾರವನ್ನು ದೂಷಿಸಲಾಗದು. ಅದು ಭಾರತದ ಪುರುಷ ಜನಾಂಗದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಪಾಲಿಸುತಿದೆಯಷ್ಟೇ...... ಇಂಗ್ಲೆಂಡ್ ಏನಾದರೂ ಪ್ರಾಚೀನ ಸಂಸ್ಥೆಗಳ ತತ್ವ ಹಾಗೂ ಶಕ್ತಿಗಳ ವಿರುದ್ಧ ಓರ್ವ ಅಸಹಾಯಕ ಸ್ತ್ರೀಯನ್ನು ರಕ್ಷಿಸಿ ದೇವರ ಸೇವೆ ಮಾಡಿದರೆ ಜನತೆಗೆ ಅದರಿಂದ ಅಸಂತುಷ್ಟಿ ಉಂಟಾಗುತ್ತದೆ, ಅದರಿಂದ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಮತ್ತು ಲಾಭಕ್ಕೆ ಅಪಾಯ ಒದಗಬಹುದು. ಈ ಸರ್ಕಾರಕ್ಕೆ ಯಶಸ್ಸನ್ನು ಹಾರೈಸೋಣ. ಈ ಯಶಸ್ಸು 100 ಮಿಲಿಯ ಹೆಣ್ಣುಮಕ್ಕಳ ಹಕ್ಕು ಮತ್ತು ನೆಮ್ಮದಿಯ ತ್ಯಾಗದಿಂದ ಗಳಿಸಿರುವುದಾದರೂ ಸರಿಯೇ!!”
  ಅದೇ ಸಮಯದಲ್ಲೇ ‘ದ ಟೈಮ್ಸ್’ ಗೆ ಪತ್ರರೂಪದಲ್ಲಿ ಲೇಖನ ಬರೆದು ಹಿಂದೂ ಸಂಪ್ರದಾಯಗಳನ್ನು ಕಟುವಾದ ಟೀಕೆಗೆ ಗುರಿಮಾಡಿದ್ದು ರುಕ್ಮಾಬಾಯಿಯೇ ಎಂಬುದು ಬೆಳಕಿಗೆ ಬಂದಿದ್ದು. ವೃತ್ತ ಪತ್ರಿಕೆಗಳು, ಖಾಸಗಿ ಕಾಗದಗಳ ಮೂಲಕ ಅವಳ ಮೇಲೆ ನಿಂದನೆಯ ಮಳೆ ಸುರಿಯಿತು, ಕೆಲವೊಮ್ಮೆ ಕಲ್ಲುಗಳ ಸುರಿಮಳೆಯಂಥ ದೌರ್ಜನ್ಯಗಳಿಗೂ ಅವಳು ಒಳಗಾಗಬೇಕಾಯಿತು.

ಬೆಂಬಲಕ್ಕೆ ನಿಂತ ಪ್ರಗತಿಪರರು
   ಇಷ್ಟೆಲ್ಲಾ ಕಷ್ಟಗಳ ನಡುವೆ ರುಕ್ಮಾಬಾಯಿಯ ನೆರವಿಗೆ ನಿಂತವರು ಹಲವರಿದ್ದರು. ರುಕ್ಮಾಬಾಯಿಯ ವಿಶಿಷ್ಟ ಪ್ರಕರಣ ಭಾರತದಲ್ಲಿ ಮಾತ್ರವಲ್ಲ ಬ್ರಿಟನ್ನಿನಲ್ಲೂ ಹೆಸರುವಾಸಿಯಾದಾಗ ಲಂಡನ್ನಿನ ಸ್ತ್ರೀವಾದಿಗಳು ಅವಳ ಬೆಂಬಲಕ್ಕೆ ಬಂದರು. ಮುಂಬೈಯ ‘ಕಾಮಾ ಮಹಿಳಾ ಆಸ್ಪತ್ರೆ’ಯ ಹಿರಿಯ ವೈದ್ಯೆ ಡಾ.ಎಡಿತ್ ಪೀಛೇಯವರ ನೆರವಿನಿಂದ ಈ ಮಹಿಳೆಯರು ಧನ ಸಂಗ್ರಹಿಸಿ ರುಕ್ಮಾಬಾಯಿಯನ್ನು ಲಂಡನ್ನಿಗೆ ಕರೆಸಿಕೊಂಡರು.
   ಅಲ್ಲಿ ಆಕೆ ವೈದ್ಯಕೀಯ ಕಾಲೇಜು ಸೇರಿ 1894ರಲ್ಲಿ ವೈದ್ಯೆಯಾಗಿ ಪದವಿ ಪಡೆದರು. ನಂತರ ಸ್ವದೇಶಕ್ಕೆ ಮರಳಿ ಮುಂಬೈ, ಸೂರತ್, ರಾಜಕೋಟ್ ಮುಂತಾದೆಡೆಗಳಲ್ಲಿನ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು, ‘ಮಹಾರಾಷ್ಟ್ರದ ದ್ವಿತೀಯ ಮಹಿಳಾ ವೈದ್ಯೆ’ಯ ಉಪಾಧಿ ಪಡೆದರು. ( ಪ್ರಥಮ ಮಹಿಳಾ ವೈದ್ಯೆ: ಆನಂದಿಬಾಯಿ ಜೋಶಿ) ಜೊತೆಜೊತೆಗೆ ಮಹಿಳೆಯರ ಸಮಸ್ಯೆಗಳ ಕುರಿತು ಲೇಖನ ಬರೆಯುವುದನ್ನೂ ಮುಂದುವರೆಸಿದರು. ಅವರು ಮಹಿಳೆಯರ ಮೇಲೆ ಹೇರಲಾದ ‘ಪರದೆ’ಯ ದುಷ್ಪರಿಣಾಮಗಳು ಹಾಗೂ ‘ಜನಾನಾ’(ಮುಸ್ಲಿಂ ಮಹಿಳೆಯರು ಪುರುಷರ ಕಣ್ಣಿಗೆ ಬೀಳದಂತೆ ಮನೆ ಒಳಗೇ ಇರಬೇಕಾದ ಸ್ಥಳ)ದಲ್ಲಿನ ಜೀವನದ ಕುರಿತು ಲೇಖನ ಬರೆದಿದ್ದಾರೆ.
   ರುಕ್ಮಾಬಾಯಿ ಮತ್ತೆ ಮದುವೆ ಆಗಲಿಲ್ಲ. ಅವರ ಗಂಡ ಅವರ ಮೇಲಿನ ಕೇಸನ್ನು ಕೈಬಿಟ್ಟರೂ ಹಿಂದೂ ಕಾನೂನಿನ ಪ್ರಕಾರ ಆಕೆ ‘ವಿವಾಹಿತೆ’ಯೋ, ‘ಅವಿವಾಹಿತೆ’ಯೋ ಎಂಬುದು ಕೊನೆಯವರೆಗೂ ಸ್ಪಷ್ಟವಾಗಲೇ ಇಲ್ಲ!
     ಹೆಣ್ಣುಮಕ್ಕಳು ಮನೆಯಿಂದಾಚೆಗೆ ಬರುವುದೇ ಅಪರೂಪವಾಗಿದ್ದಂಥ ಕಾಲದಲ್ಲಿ, ‘ಪತಿಯೇ ಪರದೈವ’ ಎಂದು ತಿಳಿದಿದ್ದ ಸಮಾಜದಲ್ಲಿ ತನಗಾದ ಅನ್ಯಾಯದ ವಿರುದ್ಧ ರುಕ್ಮಾಬಾಯಿ ದನಿಯೆತ್ತಿದ್ದು, ಮುಂದೆ ಬಾಲ್ಯ ವಿವಾಹದ ವಿರುದ್ಧದ ಕಾನೂನು ರೂಪುಗೊಳ್ಳುವಲ್ಲಿ ನೆರವಾಯಿತು. ಸಮಾಜ ಸುಧಾರಕರೂ, ಪತ್ರಕರ್ತರೂ ಆದ ಬೆಹ್ರಾಂಜಿ ಮಲಬಾರಿ ಎಂಬುವರು ಈ ಪ್ರಕರಣದ ವಿರುದ್ಧ ದನಿಯೆತ್ತಿ 1891ರಲ್ಲಿ ‘ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ’ (Age of Consent Act) ತರುವಲ್ಲಿ ಯಶಸ್ವಿಯಾದರು. ತನ್ಮೂಲಕ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 10ರಿಂದ 12ಕ್ಕೆ ಏರಿಸಲಾಯಿತು. ಮುಂದೆ 1929ರಲ್ಲಿ ‘ಶಾರದಾ ಕಾಯ್ದೆ’ ಅದನ್ನು 14ಕ್ಕೆ ಏರಿಸಿತು. ಸ್ವತಂತ್ರ ಭಾರತದಲ್ಲಿ ಈಗ ಅದು ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಪ್ರಬುದ್ಧರಾಗುವ ವಯಸ್ಸು ಅಂದರೆ 18 ಆಗಿದೆ. ಭಾರತದ ಮಹಿಳಾ ಸಮುದಾಯದ ಕೃತಜ್ಞತೆ ಈ ಕಾರಣಕ್ಕೆ ರುಕ್ಮಾಬಾಯಿಗೆ ಸಲ್ಲಲೇಬೇಕು.
- ಡಾ. ಸುಧಾ ಕಾಮತ್