Monday 8 May 2017

ಮಹಿಳಾ ಸಾಧಕಿ - ಡಾ. ರುಕ್ಮಾಬಾಯಿ

ಡಾ. ರುಕ್ಮಾಬಾಯಿ(1864-1955)

            ಸಂಪ್ರದಾಯಗಳನ್ನು ಧಿಕ್ಕರಿಸಿ ಮುನ್ನಡೆದ ಮಹಿಳೆ


  19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಕ್ರಮಿತ ಭಾರತ ಹಾಗೂ ಬ್ರಿಟನ್‍ನಲ್ಲಿ ಶಾಕ್ ತರಂಗಗಳನ್ನೆಬ್ಬಿಸಿದ್ದು ರುಕ್ಮಾಬಾಯಿ ಪ್ರಕರಣ. ಹಿರಿಯರು ತನಗೆ ಬಾಲ್ಯದಲ್ಲೇ ಮದುವೆ ಮಾಡಿಸಿದ ಒಲ್ಲದ ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆಯೊಬ್ಬಳ ಹೋರಾಟದ ಕಥೆ ಇದು.
  “ನಮ್ಮನ್ನು (ಹಿಂದೂ ಸ್ತ್ರೀಯರನ್ನು) ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಾರೆ. ನಮ್ಮನ್ನು ಆಟಿಕೆಯಂತೆ, ಭೋಗದ ವಸ್ತುವಿನಂತೆ, ತಾತ್ಕಾಲಿಕ ಬಳಕೆಯ ಬಳಿಕ ಎಗ್ಗುಸಿಗ್ಗಿಲ್ಲದೆ ಬಿಸಾಡುವ ಸಾಮಾನಿನಂತೆ ಕಾಣುತ್ತಾರೆ. ನಮ್ಮ ಕಾನೂನುದಾತರು(ಶಾಸ್ತ್ರ ರಚಿಸಿದವರು) ತಾವೇ ಸ್ವತ: ಪುರುಷರಾದ್ದರಿಂದ ತಮ್ಮನ್ನೇ ಉದಾತ್ತ ಮತ್ತು ಪವಿತ್ರ ಎಂಬುದಾಗಿ ಚಿತ್ರಿಸಿಕೊಂಡಿದ್ದಾರೆ ಹಾಗೂ ಊಹಿಸಲು ಸಾಧ್ಯವಾದ ಎಲ್ಲಾ ಪಾಪ-ಅಪವಿತ್ರತೆಗಳನ್ನು ನಮ್ಮ ಮಡಿಲಿಗೆ ಹಾಕಿದ್ದಾರೆ. ಈ ಯೋಗ್ಯರನ್ನು ನಂಬುವುದಾದರೆ ನಾವು ಕೊಳಕು ಪ್ರಾಣಿಗಳ ಒಂದು ಮಂದೆಯಾಗಿದ್ದು ದೇವರು ನಮ್ಮನ್ನು ಸೃಷ್ಟಿಸಿರುವುದೇ ಪುರುಷನ ವಿಶೇಷ ಸೇವೆ ಮತ್ತು ತೃಪ್ತಿಗಾಗಿ; ದೈವ ಕೃಪೆಯುಳ್ಳ ಪುರುಷ ತನಗಿಷ್ಟ ಬಂದಹಾಗೆ ನಮ್ಮೊಂದಿಗೆ ವರ್ತಿಸಬಹುದು, ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಶಾಸ್ತ್ರಗಳ ಆಣತಿಯಂತೆ ನಾವು ಇಂತಹ ಪತನಕ್ಕೆ ಒಳಗಾಗಿದ್ದೇವೆ; ಶತಮಾನಗಳಿಂದ ಪುರುಷರು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ; ಈ ಕಾರಣದಿಂದ ಸಹಜವಾಗಿಯೇ ನಾವು ನಮ್ಮ ಕುರಿತಾಗಿಯೇ ಕೀಳರಿಮೆ ಬೆಳೆಸಿಕೊಂಡಿದ್ದೇವೆ. ಹಾಗಾಗಿ ಬಾಲ್ಯ ವಿವಾಹದ ಪದ್ಧತಿಯನ್ನು ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣವನ್ನು ಹೆಚ್ಚುಹೆಚ್ಚಾಗಿ ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು.” 
    1885ರ ‘ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ‘ಓರ್ವ ಹಿಂದೂ ಸ್ತ್ರೀ’ ಎಂಬ ಗುಪ್ತ ನಾಮದಲ್ಲಿ ಓರ್ವ ಮಹಿಳೆ ಬರೆದ ಪತ್ರದ ಭಾಗ ಇದು. ಗಂಡನ ಮನೆಯಲ್ಲಿ ತರುಣ ಸೊಸೆ ಅನುಭವಿಸುವ ಕ್ರೂರ, ಅಮಾನವೀಯ ಕಿರುಕುಳದ ಕುರಿತು ಮಹಿಳೆಯೊಬ್ಬಳು ನೊಂದು ಬರೆದ ಪತ್ರ ಅದು. ಸೊಸೆಯ ಮಾನಸಿಕ, ದೈಹಿಕ ಸ್ವಾತಂತ್ರ್ಯಹರಣ, ದಮನ ಹಾಗೂ ಕೆಲಸದಾಳಿನೊಂದಿಗೆ (“ಕೆಲಸದಾಳಿನಂತೆ ಎಂದು ಹೇಳಲಾರೆ, ಏಕೆಂದರೆ ಕೆಲಸದಾಳಿಗೆ ಕೆಲಸ ನಿರಾಕರಿಸುವ ಆಯ್ಕೆ ಇದೆ, ಸೊಸೆಗೆ ಇಲ್ಲ.”) ಮಾಡಬೇಕಾದ ಕಠಿಣ ಕೆಲಸಗಳ ಕುರಿತು ಆಕೆ ಬರೆದಿದ್ದರು.
    ಈ ಪತ್ರ ಅಂದಿನ ಸಮಾಜದಲ್ಲಿ ತಳಮಳ ಸೃಷ್ಟಿಸಿತು. ಮುಂದೆ ಅದನ್ನು ಬರೆದದ್ದು ರುಕ್ಮಾಬಾಯಿ ಎಂಬುದು ಬಯಲಾದಾಗ ಸನಾತನಿಗಳು ಆಕೆಯ ಮೇಲೆ ಕತ್ತಿ ಮಸೆದರು. ನ್ಯಾಯಾಲಯದಲ್ಲಿ ರುಕ್ಮಾಬಾಯಿ ಕೇಸು ನಡೆಯುತ್ತಿದ್ದ ಕಾಲದಲ್ಲಿ ಅದು ಅವಳ ವಿರುದ್ಧ ಜನಾಭಿಪ್ರಾಯ ರೂಪಿಸಿತು.
  ರುಕ್ಮಾಬಾಯಿಯದು ಬಾಲ್ಯವಿವಾಹ, ನಂತರ ಅವಳು ತಿರಸ್ಕರಿಸಿದ ವಿವಾಹ.

ಸಾಂಪ್ರದಾಯಿಕ ಸಮಾಜದ ಬಲಿ
  ರುಕ್ಮಾಬಾಯಿ ಜನಿಸಿದ್ದು 1864ರಲ್ಲಿ ಮುಂಬೈನಲ್ಲಿ. ಆಕೆಯ ತಾಯಿಯ ವಿವಾಹ ನಡೆದಾಗ ಅವಳಿಗೆ 14 ವರ್ಷ, ರುಕ್ಮಾಬಾಯಿ ಜನಿಸಿದಾಗ 15ವರ್ಷ. ಮಗುವಿಗೆ 2ವರ್ಷವಿದ್ದಾಗಲೇ ಆಕೆ ವಿಧವೆಯಾದಳು. ವಿಧವಾವಿವಾಹ ನಿಷಿದ್ಧವಿರದ ಜಾತಿಗೆ ಸೇರಿದ ಕಾರಣ ಡಾ. ಸಕ್ರಾಮ್ ಅರ್ಜುನ್ ಎಂಬ ವೈದ್ಯರನ್ನು ವಿವಾಹವಾದಳು. ಆತ ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಬಾಟನಿ ಪ್ರಾಧ್ಯಾಪಕರು. ಅವರು ಪ್ರಗತಿಪರ ಮನೋಧರ್ಮದವರು, ಸ್ತ್ರೀ ಶಿಕ್ಷಣಪರರು. ಹಾಗಾಗಿ ರುಕ್ಮಾಬಾಯಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸಿದರು. 
 ತನ್ನ ತಂದೆಯ ಒತ್ತಡಕ್ಕೆ ಮಣಿದ ತಾಯಿ, ರುಕ್ಮಾಬಾಯಿಯ ವಿವಾಹವನ್ನು ಅವಳ 11ನೇ ವಯಸ್ಸಿನಲ್ಲೇ ದಾದಾಜಿ ಭಿಕಾಜಿಯೊಂದಿಗೆ ಮಾಡಿದರು. ನಂತರ ಸಂಪ್ರದಾಯದಂತೆ ತಾಯಿಮನೆಯಲ್ಲಿ ಉಳಿದ ರುಕ್ಮಾಬಾಯಿ ತನ್ನ ಶಿಕ್ಷಣ ಮುಂದುವರೆಸಿದಳು. ಆದರೆ ಅವಳ ಗಂಡನ ಶಿಕ್ಷಣ ಎಳವೆಯಲ್ಲೇ ಮೊಟಕಾಯಿತು. ಕೆಲ ವರ್ಷಗಳ ಬಳಿಕ ಅವನು ಪತ್ನಿ ತನ್ನೊಂದಿಗೆ ಸಂಸಾರ ಹೂಡಬೇಕೆಂದು ಬಯಸಿದ. ಅಶಿಕ್ಷಿತ, ಕುಸಂಸ್ಕೃತ, ರೋಗಿಷ್ಟ ಗಂಡನೊಡನೆ ಬಾಳಲು ರುಕ್ಮಾಬಾಯಿ ನಿರಾಕರಿಸಿದಳು. ಅಲ್ಲದೆ ತನ್ನ ತಂದೆ ತನ್ನ ಪಾಲಿಗೆ ಬಿಟ್ಟುಹೋದ ಆಸ್ತಿಯೇ ಗಂಡ ತನ್ನನ್ನು ಕರೆದೊಯ್ಯಲು ಒತ್ತಾಯಿಸುತ್ತಿರುವ ಮುಖ್ಯ ಕಾರಣ ಎಂಬ ಅರಿವೂ ಅವಳಿಗಿತ್ತು. 
  ಸಿಟ್ಟಿಗೆದ್ದ ಗಂಡ ಅವಳು ತನ್ನೊಂದಿಗೆ ಬರಲೇಬೇಕು ಎಂದು 1884ರಲ್ಲಿ ಅವಳ ವಿರುದ್ಧ ದಾವೆ ಹೂಡಿದ. ಅಲ್ಲಿಂದ ಶುರುವಾಯಿತು ಗಂಡನೊಂದಿಗೆ ರುಕ್ಮಾಬಾಯಿಯ ಕಾನೂನು ಸಮರ, ಒಂದು ಹೊಸ ಇತಿಹಾಸದ ಪ್ರಾರಂಭ.

   ಕಾನೂನಿನ ದಮನಕ್ಕೆ ಬಗ್ಗದ ಚೇತನ
     1885ರಲ್ಲಿ  ನ್ಯಾಯಾಲಯ ಕೊಟ್ಟ ಮೊದಲ ತೀರ್ಪು ರುಕ್ಮಾಬಾಯಿಯ ಪರವಾಗಿತ್ತು. ಗಂಡನೊಂದಿಗೆ ಎಂದೂ ಬಾಳುವೆ ನಡೆಸಿಯೇ ಇಲ್ಲದ ಕಾರಣ ಅವಳೊಂದಿಗೆ ಬಾಳು ನಡೆಸುವ ಹಕ್ಕಿನ ಮರುಸ್ಥಾಪನೆ (Restitution of conjugal rights)ಯ ಪ್ರಶ್ನೆಯೇ ಇಲ್ಲ; ಅಲ್ಲದೆ ಈ ಮದುವೆ ಅವಳ ಸಮ್ಮತಿ ಇಲ್ಲದೆ ಬಾಲ್ಯದಲ್ಲೇ ನಡೆದಿರುವುದರಿಂದ ವಯಸ್ಸಿಗೆ ಬಂದ ಮೇಲೆ ಅವನೊಡನೆ ಬಾಳುವಂತೆ ಅವಳಿಗೆ ಒತ್ತಾಯ ಮಾಡುವುದು ಕೌರ್ಯ ಹಾಗೂ ಅನಾಗರಿಕ ವ್ಯವಹಾರವಾಗುತ್ತದೆ; ಹಾಗಾಗಿ ಹಾಗೆ ಮಾಡುವಂತಿಲ್ಲ ಎಂದಿತು ನ್ಯಾಯಾಲಯ.
  ನ್ಯಾಯಾಲಯದ ತೀರ್ಪು ಇಡೀ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡಿತು. ಅಂದಿನ ಸಾ0ಪ್ರದಾಯಿಕ ಸಮಾಜದಲ್ಲಿ ಹೆಣ್ಣುಮಗಳೊಬ್ಬಳು ಗಂಡನೊಂದಿಗೆ ಹೋಗುವುದಿಲ್ಲ ಎಂದರೇನು! ಇದಕ್ಕಾಗಿ ಕೋರ್ಟಿನಲ್ಲಿ ವ್ಯಾಜ್ಯ ನಡೆಯುವುದೆಂದರೇನು!! ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ನಡೆಸುತ್ತಿದ್ದ ‘ಕೇಸರಿ’ ಪತ್ರಿಕೆಯಲ್ಲಿ ರುಕ್ಮಾಬಾಯಿಯ ವಿರುದ್ಧ ಲೇಖನ ಬಂತು. ವಿದ್ಯಾವಂತ ಸ್ತ್ರೀಯರು ಹೀಗೆ ಗಂಡನೊಡನೆ ಬಾಳಲು ನಿರಾಕರಿಸಿದರೆ ಅದರಿಂದ ಸ್ತ್ರೀ ಶಿಕ್ಷಣ ಚಳುವಳಿಗೆ ಹಿನ್ನಡೆಯಾಗುತ್ತದೆ ಎಂಬುದು ತಿಲಕ್ ಅಭಿಪ್ರಾಯ. ಅಲ್ಲದೆ ಬ್ರಿಟಿಷ್ ಸರ್ಕಾರ ಹಿಂದೂ ಧಾರ್ಮಿಕ ಸಂಪ್ರದಾಯ -ಕಟ್ಟಳೆಗಳಲ್ಲಿ ಮೂಗು ತೂರಿಸಬಾರದು ಎಂಬುದೂ ಅವರ ಆಗ್ರಹ. ಇದನ್ನು ಸಹಜವಾಗಿಯೇ ಸನಾತನವಾದಿಗಳು ಬೆಂಬಲಿಸಿದರು. ಹಾಗಾಗಿ ಕೊನೆಗೂ ಬ್ರಿಟಿಷ್ ಸರ್ಕಾರ ಈ ಒತ್ತಡಕ್ಕೆ  ಮಣಿಯಿತು. ತನ್ನ ಆಡಳಿತ ಸುಗಮವಾಗಿ ನಡೆಯಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದರಿಂದ ಇಲ್ಲಸಲ್ಲದ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಅದಕ್ಕೆ ಬೇಕಿರಲಿಲ್ಲ. ದಾದಾಜಿ ಮತ್ತೆ ಕೋರ್ಟಿನ ಮೊರೆಹೋದಾಗ ತೀರ್ಪು ಅವನ ಪರವಾಗಿಯೇ ಬಂತು! ರುಕ್ಮಾಬಾಯಿ ಒಂದು ತಿಂಗಳಲ್ಲಿ ಅವನ ಬಳಿ ಹೋಗಬೇಕು, ಇಲ್ಲವೇ 6 ತಿಂಗಳ ಸೆರೆಮನೆವಾಸ ಎಂದಿತು ನ್ಯಾಯಾಲಯ!! ಎಂಥ ನ್ಯಾಯ!!!
   ಆದರೂ ರುಕ್ಮಾಬಾಯಿ ಬಗ್ಗಲಿಲ್ಲ. ಸೆರೆಮನೆವಾಸಕ್ಕೆ ಸಿದ್ಧ ಎಂದು ಸೆಟೆದು ನಿಂತಳು. ದಾದಾಜಿ, ರುಕ್ಮಾಬಾಯಿ ಮತ್ತವಳ ಮನೆಯವರ ಮೇಲೆ ಚಾರಿತ್ರ್ಯವಧೆಯ ದಾವೆಯನ್ನೂ ಹೂಡಿದ, ಆದರೆ ಅದರಲ್ಲಿ ಸೋಲನ್ನುಂಡ. ಕೊನೆಗೆ 1888ರ ಹೊತ್ತಿಗೆ, ಇನ್ನು ರುಕ್ಮಾಬಾಯಿಯನ್ನು ಮಣಿಸುವುದು ಸಾಧ್ಯವಿಲ್ಲ ಎಂದು ಅವನು ಮನಗಂಡ. ರುಕ್ಮಾಬಾಯಿ ಜೈಲಿಗೆ ಹೋಗುವುದರಿಂದ ಅವನಿಗೇನೂ ಲಾಭ ಇರಲಿಲ್ಲ. ಹಾಗಾಗಿ ರಾಜಿ ಮಾಡಿಕೊಂಡ. ದಾವೆಯ ಹಣವನ್ನು ಅವಳಿಂದ ಪಡೆದು ಅವಳ ಮೇಲಿನ ಅಧಿಕಾರ ಬಿಟ್ಟುಕೊಟ್ಟ, ಮರುಮದುವೆ ಮಾಡಿಕೊಂಡ.

 ಅಸಹಾಯ ಮಹಿಳೆಯ ದಮನಕ್ಕೆ ನಿಂತ ಸಮಾಜ
   ಅಂದಿನ ನಿಷ್ಠುರ, ಕಠೋರ ಸಮಾಜ ರುಕ್ಮಾಬಾಯಿಯನ್ನು ದಮನಕ್ಕೆ ಒಳಪಡಿಸಿದ ರೀತಿ ದಿಗ್ಭ್ರಮೆಗೊಳಿಸುವಂಥಾದ್ದು. ಸಂಪ್ರದಾಯವಾದಿಗಳ ಪಾಲಿಗೆ ಅದು ಒಂದು ಕೇಸು ಮಾತ್ರವಾಗಿರಲಿಲ್ಲ. ಅದು ಅವರ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ತಮ್ಮ ಪವಿತ್ರ ಶಾಸ್ತ್ರ-ಸಂಹಿತೆಗಳನ್ನು ಬ್ರಿಟಿಷ್ ನ್ಯಾಯಾದೀಶರು ಉಲ್ಲಂಘಿಸುತ್ತಿದ್ದಾರೆ ಎಂಬುದೇ ಅವರ ಆಕ್ರೋಶ. ಹೆಣ್ಣುಮಗಳೊಬ್ಬಳು ವಿವಾಹಕ್ಕೆ ತನಗೆ ತಕ್ಕ ವರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪಡೆದರೆ, ಅದು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ ಎಂದು ‘ಕೇಸರಿ’ ಸಂಪಾದಕೀಯ ಬರೆಯಿತು. “.....ಎಲ್ಲೆಲ್ಲೋ ಅಡ್ಡಾಡುತ್ತಿರುವ ತನ್ನ ಹಸುವಿನ ಕೊರಳಿಗೆ ಹಗ್ಗಹಾಕಿ ಓರ್ವ ಪುರುಷ ಅದನ್ನು ಮನೆಗೆ ತಂದರೆ ಇಂಗ್ಲಿಷ್  ಕಾನೂನು ಅದು ದಾವೆಗೆ ಯೋಗ್ಯ ಎನ್ನುವುದಿಲ್ಲ. ಹಿಂದೂ ಧರ್ಮ ಮಹಿಳೆಯನ್ನು ಒಂದು ಆಸ್ತಿಯನ್ನಾಗಿ ಮತ್ತು ಪಶುವಿಗೆ ಸಮಾನ ಎಂದು ಪರಿಗಣಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಮಾನವಳಾದ ಕಾರಣ ಅವಳಿಗೆ ಆಹಾರದ-ಬಟ್ಟೆಬರೆಯ ಹಕ್ಕಿದೆ. ಆದರೆ ಇಂಗ್ಲಿಷ್ ಕಾನೂನು ಇದನ್ನು ತಪ್ಪೆಂದು ಪರಿಗಣಿಸಿದೆ, ಇದು ಧರ್ಮ ಮತ್ತು ಸಂಪ್ರದಾಯದಲ್ಲಿ ವಿದೇಶಿ ಮಧ್ಯಪ್ರವೇಶದ ಪ್ರಾರಂಭ....” (ಕೇಸರಿ-ಸಂಪಾದಕೀಯ-ಏಪ್ರಿಲ್ 13,1886)
  ದಾದಾಜಿಗೆ ನ್ಯಾಯಾಲಯದಲ್ಲಿ  ದಾವೆ ಹೂಡಲು ಸನಾತನಿಗಳು ಹಣ ಒಗ್ಗೂಡಿಸಿ ನೀಡಿದರು, ಅವನಿಗೆ ಬೆಂಗಾವಲಾಗಿ ನಿಂತರು. ರುಕ್ಮಾಬಾಯಿಯ ಪರ ಇದ್ದವರು ಕೆಲವೇ ಮಂದಿ ಪ್ರಗತಿಪರರು - ಅವಳ ಸಾಕು ತಂದೆ ಹಾಗೂ ಸಮಾಜ ಸುಧಾರಕರಾದ ಗಣೇಶ್ ಗೋಪಾಲ್ ಅಗರ್‍ಕರ್. ‘ಕೇಸರಿ’ಯ ಇನ್ನೊಬ್ಬ ಸಂಪಾದಕರಾದ ಅಗರ್‍ಕರ್ ಈ ಪ್ರಕರಣದಲ್ಲಿ ತಿಲಕ್‍ರೊಂದಿಗೆ ಭಿನ್ನಮತ ಹೊಂದಿದ ಕಾರಣ ಅವರಿಂದ ಬೇರೆಯಾದರು, ಮಹಿಳೆಯರ ವಿಮೋಚನೆಗೆ ಟೊಂಕಕಟ್ಟಿ ನಿಂತರು.
  ಸಮಾಜದ ಖಂಡನೆಯಿಂದ ನೊಂದ ರುಕ್ಮಾಬಾಯಿ ತನ್ನ ಬೆಂಬಲಕ್ಕೆ ನಿಂತ ಸಮಾಜಸುಧಾರಕಿ ಪಂಡಿತ ರಮಾಬಾಯಿಗೆ ಪತ್ರ ಬರೆದಳು. 1887ರ ಮಾರ್ಚ್ 8ರಂದು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದಾಗ ಅವಳು ಬರೆದ ಪತ್ರ ಅವಳಲ್ಲಿನ ನೋವು-ಹತಾಶೆಯನ್ನು ವ್ಯಕ್ತ ಪಡಿಸುತ್ತದೆ.
  “ನಾವಿರುವುದು ಎಲ್ಲರಿಗೂ ಸಮಾನ ನ್ಯಾಯ ಎಂದು ಕೊಚ್ಚಿಕೊಳ್ಳುವ, ಭೇದಭಾವರಹಿತ ಬ್ರಿಟಿಷ್ ಆಳ್ವಿಕೆಯಲ್ಲಿ ಅಲ್ಲವೇ? ನಾವಿರುವುದು ಸ್ವತ: ಮಹಿಳೆಯೇ ಆಗಿರುವ ರಾಣಿ - ಸಾಮ್ರಾಜ್ಞಿ ವಿಕ್ಟೋರಿಯಾರ ರಾಜ್ಯಭಾರದಲ್ಲಿ ಅಲ್ಲವೇ? ಹಿಂದೂ ಆಳ್ವಿಕೆಯೇ ಇರಲಿ, ಬ್ರಿಟಿಷ್ ಆಳ್ವಿಕೆಯೇ ಇರಲಿ, ಭಾರತದಲ್ಲಿ ಮಹಿಳೆಯರಿಗೆ ಯಾವ ಆಶಾಭಾವನೆಯೂ ಇಲ್ಲ. ನನ್ನ ಕೇಸಿನ ತೀರ್ಮಾನ ಇಷ್ಟು ಕ್ರೂರವಾಗಿ ಆಗಿರುವ ಕಾರಣ ಇದು ಸಾರ್ವಜನಿಕ ಅಭಿಪ್ರಾಯವನ್ನು ಮಹಿಳೆಯ ಪರವಾಗಿ ರೂಪಿಸಿ ಅವಳ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕಾರಣವಾಗಬಹುದು ಎಂಬುದು ಕೆಲವರ ಅಭಿಪ್ರಾಯ. ಆದರೆ ಅದು ತದ್ವಿರುದ್ಧವಾಗಿರುತ್ತದೆ ಎಂಬುದು ನನ್ನ ಭೀತಿ. ಕಠೋರ ಅತ್ತೆಯರು ಇನ್ನಷ್ಟು ಬಲ ಪಡೆಯುತ್ತಾರೆ ಹಾಗೂ ಬ್ರಿಟಿಷ್ ಸರ್ಕಾರ ಯಾವ ಪರಿಸ್ಥಿತಿಯಲ್ಲೂ ಹಿಂದೂ ಕಾನೂನಿನ ವಿರುದ್ಧ ಹೋಗಲಾರದು ಎಂಬ ದೃಢ ನಂಬಿಕೆಯಿಂದ, ಇದುವರೆವಿಗೂ ತಮ್ಮ ಪತ್ನಿಯರೊಂದಿಗೆ ಬಾಳುವ ಹಕ್ಕಿನ ಮರುಸ್ಥಾಪನೆಗಾಗಿ ದಾವೆ ಹೂಡಲು ಹಿಂಜರಿಯುತ್ತಿರುವ ತಮ್ಮ ಗಂಡುಮಕ್ಕಳನ್ನು ಬ್ರಿಟಿಷ್ ನ್ಯಾಯಾಲಯಕ್ಕೆ ಹೋಗಲು ಅವರು ಪ್ರೇರೇಪಿಸಬಹುದು!”
   ಇದಕ್ಕೆ ಪಂಡಿತ ರಮಾಬಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ ಬ್ರಿಟಿಷ್ ಸರ್ಕಾರವನ್ನು ಖಂಡಿಸಿದ್ದಾರೆ - “ಅಸಹಾಯ ಹೆಣ್ಣುಮಗಳೊಬ್ಬಳ ಪರ ಇರದುದಕ್ಕಾಗಿ ನಾವು ಬ್ರಿಟಿಷ್ ಸರ್ಕಾರವನ್ನು ದೂಷಿಸಲಾಗದು. ಅದು ಭಾರತದ ಪುರುಷ ಜನಾಂಗದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಪಾಲಿಸುತಿದೆಯಷ್ಟೇ...... ಇಂಗ್ಲೆಂಡ್ ಏನಾದರೂ ಪ್ರಾಚೀನ ಸಂಸ್ಥೆಗಳ ತತ್ವ ಹಾಗೂ ಶಕ್ತಿಗಳ ವಿರುದ್ಧ ಓರ್ವ ಅಸಹಾಯಕ ಸ್ತ್ರೀಯನ್ನು ರಕ್ಷಿಸಿ ದೇವರ ಸೇವೆ ಮಾಡಿದರೆ ಜನತೆಗೆ ಅದರಿಂದ ಅಸಂತುಷ್ಟಿ ಉಂಟಾಗುತ್ತದೆ, ಅದರಿಂದ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಮತ್ತು ಲಾಭಕ್ಕೆ ಅಪಾಯ ಒದಗಬಹುದು. ಈ ಸರ್ಕಾರಕ್ಕೆ ಯಶಸ್ಸನ್ನು ಹಾರೈಸೋಣ. ಈ ಯಶಸ್ಸು 100 ಮಿಲಿಯ ಹೆಣ್ಣುಮಕ್ಕಳ ಹಕ್ಕು ಮತ್ತು ನೆಮ್ಮದಿಯ ತ್ಯಾಗದಿಂದ ಗಳಿಸಿರುವುದಾದರೂ ಸರಿಯೇ!!”
  ಅದೇ ಸಮಯದಲ್ಲೇ ‘ದ ಟೈಮ್ಸ್’ ಗೆ ಪತ್ರರೂಪದಲ್ಲಿ ಲೇಖನ ಬರೆದು ಹಿಂದೂ ಸಂಪ್ರದಾಯಗಳನ್ನು ಕಟುವಾದ ಟೀಕೆಗೆ ಗುರಿಮಾಡಿದ್ದು ರುಕ್ಮಾಬಾಯಿಯೇ ಎಂಬುದು ಬೆಳಕಿಗೆ ಬಂದಿದ್ದು. ವೃತ್ತ ಪತ್ರಿಕೆಗಳು, ಖಾಸಗಿ ಕಾಗದಗಳ ಮೂಲಕ ಅವಳ ಮೇಲೆ ನಿಂದನೆಯ ಮಳೆ ಸುರಿಯಿತು, ಕೆಲವೊಮ್ಮೆ ಕಲ್ಲುಗಳ ಸುರಿಮಳೆಯಂಥ ದೌರ್ಜನ್ಯಗಳಿಗೂ ಅವಳು ಒಳಗಾಗಬೇಕಾಯಿತು.

ಬೆಂಬಲಕ್ಕೆ ನಿಂತ ಪ್ರಗತಿಪರರು
   ಇಷ್ಟೆಲ್ಲಾ ಕಷ್ಟಗಳ ನಡುವೆ ರುಕ್ಮಾಬಾಯಿಯ ನೆರವಿಗೆ ನಿಂತವರು ಹಲವರಿದ್ದರು. ರುಕ್ಮಾಬಾಯಿಯ ವಿಶಿಷ್ಟ ಪ್ರಕರಣ ಭಾರತದಲ್ಲಿ ಮಾತ್ರವಲ್ಲ ಬ್ರಿಟನ್ನಿನಲ್ಲೂ ಹೆಸರುವಾಸಿಯಾದಾಗ ಲಂಡನ್ನಿನ ಸ್ತ್ರೀವಾದಿಗಳು ಅವಳ ಬೆಂಬಲಕ್ಕೆ ಬಂದರು. ಮುಂಬೈಯ ‘ಕಾಮಾ ಮಹಿಳಾ ಆಸ್ಪತ್ರೆ’ಯ ಹಿರಿಯ ವೈದ್ಯೆ ಡಾ.ಎಡಿತ್ ಪೀಛೇಯವರ ನೆರವಿನಿಂದ ಈ ಮಹಿಳೆಯರು ಧನ ಸಂಗ್ರಹಿಸಿ ರುಕ್ಮಾಬಾಯಿಯನ್ನು ಲಂಡನ್ನಿಗೆ ಕರೆಸಿಕೊಂಡರು.
   ಅಲ್ಲಿ ಆಕೆ ವೈದ್ಯಕೀಯ ಕಾಲೇಜು ಸೇರಿ 1894ರಲ್ಲಿ ವೈದ್ಯೆಯಾಗಿ ಪದವಿ ಪಡೆದರು. ನಂತರ ಸ್ವದೇಶಕ್ಕೆ ಮರಳಿ ಮುಂಬೈ, ಸೂರತ್, ರಾಜಕೋಟ್ ಮುಂತಾದೆಡೆಗಳಲ್ಲಿನ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು, ‘ಮಹಾರಾಷ್ಟ್ರದ ದ್ವಿತೀಯ ಮಹಿಳಾ ವೈದ್ಯೆ’ಯ ಉಪಾಧಿ ಪಡೆದರು. ( ಪ್ರಥಮ ಮಹಿಳಾ ವೈದ್ಯೆ: ಆನಂದಿಬಾಯಿ ಜೋಶಿ) ಜೊತೆಜೊತೆಗೆ ಮಹಿಳೆಯರ ಸಮಸ್ಯೆಗಳ ಕುರಿತು ಲೇಖನ ಬರೆಯುವುದನ್ನೂ ಮುಂದುವರೆಸಿದರು. ಅವರು ಮಹಿಳೆಯರ ಮೇಲೆ ಹೇರಲಾದ ‘ಪರದೆ’ಯ ದುಷ್ಪರಿಣಾಮಗಳು ಹಾಗೂ ‘ಜನಾನಾ’(ಮುಸ್ಲಿಂ ಮಹಿಳೆಯರು ಪುರುಷರ ಕಣ್ಣಿಗೆ ಬೀಳದಂತೆ ಮನೆ ಒಳಗೇ ಇರಬೇಕಾದ ಸ್ಥಳ)ದಲ್ಲಿನ ಜೀವನದ ಕುರಿತು ಲೇಖನ ಬರೆದಿದ್ದಾರೆ.
   ರುಕ್ಮಾಬಾಯಿ ಮತ್ತೆ ಮದುವೆ ಆಗಲಿಲ್ಲ. ಅವರ ಗಂಡ ಅವರ ಮೇಲಿನ ಕೇಸನ್ನು ಕೈಬಿಟ್ಟರೂ ಹಿಂದೂ ಕಾನೂನಿನ ಪ್ರಕಾರ ಆಕೆ ‘ವಿವಾಹಿತೆ’ಯೋ, ‘ಅವಿವಾಹಿತೆ’ಯೋ ಎಂಬುದು ಕೊನೆಯವರೆಗೂ ಸ್ಪಷ್ಟವಾಗಲೇ ಇಲ್ಲ!
     ಹೆಣ್ಣುಮಕ್ಕಳು ಮನೆಯಿಂದಾಚೆಗೆ ಬರುವುದೇ ಅಪರೂಪವಾಗಿದ್ದಂಥ ಕಾಲದಲ್ಲಿ, ‘ಪತಿಯೇ ಪರದೈವ’ ಎಂದು ತಿಳಿದಿದ್ದ ಸಮಾಜದಲ್ಲಿ ತನಗಾದ ಅನ್ಯಾಯದ ವಿರುದ್ಧ ರುಕ್ಮಾಬಾಯಿ ದನಿಯೆತ್ತಿದ್ದು, ಮುಂದೆ ಬಾಲ್ಯ ವಿವಾಹದ ವಿರುದ್ಧದ ಕಾನೂನು ರೂಪುಗೊಳ್ಳುವಲ್ಲಿ ನೆರವಾಯಿತು. ಸಮಾಜ ಸುಧಾರಕರೂ, ಪತ್ರಕರ್ತರೂ ಆದ ಬೆಹ್ರಾಂಜಿ ಮಲಬಾರಿ ಎಂಬುವರು ಈ ಪ್ರಕರಣದ ವಿರುದ್ಧ ದನಿಯೆತ್ತಿ 1891ರಲ್ಲಿ ‘ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ’ (Age of Consent Actತರುವಲ್ಲಿ ಯಶಸ್ವಿಯಾದರು. ತನ್ಮೂಲಕ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 10ರಿಂದ 12ಕ್ಕೆ ಏರಿಸಲಾಯಿತು. ಮುಂದೆ 1929ರಲ್ಲಿ ‘ಶಾರದಾ ಕಾಯ್ದೆ’ ಅದನ್ನು 14ಕ್ಕೆ ಏರಿಸಿತು. ಸ್ವತಂತ್ರ ಭಾರತದಲ್ಲಿ ಈಗ ಅದು ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಪ್ರಬುದ್ಧರಾಗುವ ವಯಸ್ಸು ಅಂದರೆ 18 ಆಗಿದೆ. ಭಾರತದ ಮಹಿಳಾ ಸಮುದಾಯದ ಕೃತಜ್ಞತೆ ಈ ಕಾರಣಕ್ಕೆ ರುಕ್ಮಾಬಾಯಿಗೆ ಸಲ್ಲಲೇಬೇಕು.
ಡಾ. ಸುಧಾ ಕಾಮತ್
    

No comments:

Post a Comment