Sunday 7 May 2017

ಕಥೆ - ಹೆಣ್ಣಿಗೆ ಹೆಣ್ಣು ಶತ್ರುವೇ?



 ಪಾಠ ಮಾಡುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಹೊರಗಡೆ ಏನೋ ಬಿದ್ದ ಶಬ್ದ ಕೇಳಿ ಬಂತು. ತರಗತಿಯಿಂದ ಹೊರಗಡೆ ಬಂದು ನೋಡಿದರೆ ಹತ್ತನ್ನೆರಡು ವರ್ಷದ ಹುಡುಗಿ ಮೇಲಿನಿಂದ ಬಿದ್ದಿದ್ದಳು. ಕಾಲಿಗೆ ಪೆಟ್ಟಾಗಿ ಅಳುತ್ತಿದ್ದಳು. ಬಹುಶಃ ಮೂಳೆ ಮುರಿದಿತ್ತೇನೋ, ಎದ್ದೇಳಲು ಪ್ರಯತ್ನಿಸಿ ಸಾಧ್ಯವಾಗದೆ ಹಾಗೆಯೇ ಕುಳಿತುಬಿಟ್ಟಳು.
“ಯಾರಮ್ಮ ನೀನು, ಇಲ್ಲಿ ಏಕೆ ಬಂದೆ?” ಎಂದರೆ, ತಾನು ಅಲ್ಲಿ ಕಟ್ಟಡದ ಕೆಲಸ ಮಾಡುತ್ತಿದ್ದ ರಂಗಮ್ಮನ ಮಗಳು ಎಂದಳು. ಸುತ್ತಮುತ್ತ ನೋಡಿದರೆ ಕೆಲಸದವರು ಯಾರೂ ಕಾಣಲಿಲ್ಲ. ವಿದ್ಯಾರ್ಥಿಯೊಬ್ಬನಿಗೆ ರಂಗಮ್ಮನಿಗೆ ವಿಷಯ ತಿಳಿಸಲು ಹೇಳಿ, ಆ ಮಗುವನ್ನು ಇನ್ನಿಬ್ಬರು ಹುಡುಗರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೊರಟೆ. 
ವೈದ್ಯರು ಎಕ್ಸ್‍ರೇ ತೆಗೆದು, ಹೇರ್ ಲೈನ್ ಫ್ರಾಕ್ಚರ್ ಆಗಿದೆ ಎಂದು ಹೇಳಿ ಪ್ಲಾಸ್ಟರ್ ಹಾಕಿದರು. ಮಗು ಗಾಬರಿಯಾಗಿದೆ ಎಂದು ಹೇಳಿ, ಸ್ವಲ್ಪ ಹೊತ್ತಿನ ನಂತರ ಕರೆದುಕೊಂಡು ಹೋಗಲು ಹೇಳಿದರು. ಇನ್ನೇನೂ ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ರಂಗಮ್ಮ, ನನ್ನ ತರಗತಿಯ ವಿದ್ಯಾರ್ಥಿಯೊಬ್ಬನೊಂದಿಗೆ ಓಡಿಓಡಿ ಬಂದಳು. ಮಗುವನ್ನು ಅಪ್ಪಿದಳು. 
ನಂತರ ಏಕಾಏಕಿ ನನ್ನ ಕಾಲಿಗೆ ಬಿದ್ದು, “ಅಮ್ಮ, ನೀವಿದ್ದದ್ದಕ್ಕೆ ನನ್ ಮಗಾ ಬದುಕ್ಕೊಂತು. ಇಲ್ದಿದ್ರೆ ಏನಾಗ್ತಿತ್ತೊ ಆ ಶಿವನೇ ಬಲ್ಲ” ಎಂದು ಉದ್ಘಾರ ತೆಗೆದಳು. 
ನಾನು “ಅಂತಾದ್ದೆಲ್ಲಾ ಏನೂ ಆಗಿಲ್ಲ ಬಿಡು. ಒಂದು ತಿಂಗಳಲ್ಲಿ ಮತ್ತೆ ಮೊದಲಿನ ತರಹ ಆಟ ಆಡಿಕೊಂಡು ಇರ್ತಾಳೆ” ಎಂದೆ. 
ನಾವು ಅಲ್ಲಿಂದ ಆಟೋದಲ್ಲಿ ಅವಳ ಮನೆಗೆ ಹೋಗುವವರೆಗೂ ಅವಳ ವಂದನಾರ್ಪಣೆಯನ್ನು ನಿಲ್ಲಿಸಲಿಲ್ಲ. ಮನೆ ಒಳಗಡೆ ಬಾರೆಂದು ಕರೆಯುತ್ತಿದ್ದರೂ ‘ತರಗತಿ ಇದೆ, ಇನ್ನೊಮ್ಮೆ ಬರುವೆ’ ಎಂದು ಹೊರಟೆ. ಹೋಗುವಾಗ ಹಣ್ಣು, ಔಷಧಿಗೆಂದು ಸ್ವಲ್ಪ ದುಡ್ಡು ಕೊಟ್ಟೆ. ಸಂಜೆ ಕಾಲೇಜು ಮುಗಿಸಿ, ಮನೆಗೆ ಹೋಗುವಾಗ, ಒಮ್ಮೆ ರಂಗಮ್ಮನ ಮಗಳನ್ನು ನೋಡಿ ಹೋಗೋಣವೆಂದು ಹೋದೆ. 
 ಬಾಗಿಲಲ್ಲಿಯೇ ಏನೋ ಕೆಲಸ ಮಾಡುತ್ತಿದ್ದ ರಂಗಮ್ಮನ ತಾಯಿ ಆಶ್ಚರ್ಯದಿಂದಲೇ, “ಬಾರವ್ವ, ಬಾ” ಎಂದು ಒಳಗೆ ಕರೆದೊಯ್ದರು. ಒಳಗೆ ರಂಗಮ್ಮ ಮಗಳಿಗೆ ಹಣ್ಣು ತಿನ್ನಿಸುತ್ತಿದ್ದಳು. 
ನನ್ನನ್ನು ನೋಡಿ ದಿಗ್ಭ್ರಮೆಗೊಳಗಾದವಳಂತೆ, “ಅಮ್ಮ, ನೀವಿಲ್ಲಿ?. . . .” 
ಮಾತನಾಡಲಾಗದೆ ಮೌನ ವಹಿಸಿದಳು. 
“ಯಾಕೆ ರಂಗಮ್ಮ, ಬರಬಾರದಾಗಿತ್ತೇ, ನಿನ್ನ ಮಗಳನ್ನು ನೋಡಿ ಹೋಗೋಣವೆಂದು ಬಂದೆ” ಎಂದು ಹೇಳಿ ಅಲ್ಲಿಯೇ ನೆಲದ ಮೇಲೆ ಕುಳಿತೆ. ರಂಗಮ್ಮನಿಗೆ ಏನೂ ಮಾತನಾಡಲು ಬಿಡದೆ, ಮಗಳ ಕಡೆ ತಿರುಗಿ, “ಈಗ ಹೇಗಿದೆ ಪುಟ್ಟಾ, ನೋವು ಕಡಿಮೆ ಆಗಿದೆಯಾ, ಮದ್ಯಾಹ್ನ ನಿದ್ರೆ ಮಾಡಿದೆಯಾ?” ಕೇಳಿದೆ. 
 “ಹೌದಕ್ಕ ನಿದ್ರೆ ಮಾಡಿದೆ, ನೋವು ಇದೆ, ಆದ್ರೆ ಬೆಳಿಗ್ಗೆಗಿಂತ ಪರವಾಗಿಲ್ಲ. ನೀವು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ರೆ ಬಹಳ ಕಷ್ಟ ಆಗುತ್ತಿತ್ತು. ತುಂಬಾ ಥ್ಯಾಂಕ್ಸ್ ಅಕ್ಕ” ಎಂದಳು. ಅವಳ  ಮಾತು, ಸ್ಪಷ್ಟ ಭಾಷೆಯನ್ನು ಕೇಳಿ ಈಗ ಶಾಕ್ ಆಗುವ ಸರದಿ ನನ್ನದಾಯಿತು.
 “ನಿನ್ನ ಹೆಸರೇನಮ್ಮ, ಶಾಲೆಗೆ ಹೋಗ್ತೀಯಾ, ಎಷ್ಟನೇ ತರಗತಿ?” ಎಂಬ ಪ್ರಶ್ನೆಗಳಿಗೆ “ನಾನು ಏಳನೇ ತರಗತಿಯಲ್ಲಿದ್ದೇನೆ. ನನ್ನ ಹೆಸರು ಸುಮ” ಎಂದಳು. ರಂಗಮ್ಮನ ಅಮ್ಮ, “ಇವಳು ಬಾಳಾ ಸಂದಾಗಿ ಓದ್ತಾಳೆ. ಕಲಾಸ್‍ಗೆ ಪಸ್ಟ್ ಬತ್ತಾಳೆ” ಹೆಮ್ಮೆಯಿಂದ ಹೇಳಿದಳು.
 “ಸರಿ ರೆಸ್ಟ್ ತಗೋಮ್ಮ” ಎಂದು ಏಳುವ ಮೊದಲೇ ರಂಗಮ್ಮ ಹಣ್ಣು, ಟೀ ತಂದಿಟ್ಟು “ಅಮ್ಮ, ನೀವು ಟೀ ಕುಡೀತೀರೋ ಇಲ್ವೊ, ಇಲ್ದಿದ್ರೆ ಹಣ್ ತಕಳ್ಳಿ” ಎಂದಳು. ಟೀ ಕುಡಿದು ಎದ್ದೆ.
 ಮಾರನೇ ದಿನವೂ ಸಹ ಸಂಜೆ ತರಗತಿಗಳು ಮುಗಿದ ಮೇಲೆ ರಂಗಮ್ಮನ ಮನೆಗೆ ಹೋದೆ. ಬಿಸ್ಕತ್, ಹಣ್ಣುಗಳೊಂದಿಗೆ ಕೆಲವು ಕಾಮಿಕ್ಸ್ ಪುಸ್ತಕಗಳೊಂದಿಗೆ ಹೋದೆ. ಸುಮ ಪುಸ್ತಕಗಳನ್ನು ನೋಡಿ ಹಿರಿಹಿರಿ ಹಿಗ್ಗಿದಳು. 
ರಂಗಮ್ಮ ಮತ್ತು ಅವಳ ತಾಯಿಗಂತೂ ಬಹಳಷ್ಟು ಖುಷಿಯಾಯಿತು. “ಅಮ್ಮ, ಬೆಳಿಗ್ಗೆಯಿಂದ ಅವ್ಳು ನಂಗ್ ಬೇಜಾರು, ನಾನು ಸಾಲೆಗೆ ಹೋಯ್ತಿನಿ ಅಂತಾ ಕುಂತಿದ್ದಳು. ಈಗ ನೀವ್ ಪುಸ್ತಕ ತಂದ್ಕೊಟ್ಟಿದ್ದೀರಾ, ಇನ್ ಚಿಂತೆಯಿಲ್ಲ, ಬಿಡಿ” ಎಂದು ಕೂರಿಸಿ ಟೀ ಮಾಡಿಕೊಂಡು ಬರಲು ಹೋದಳು. 
 ಟೀ ತಂದಿಟ್ಟು “ಅಮ್ಮ, ನಿಮ್ಮ ಋಣ ಹೇಗ್ ತೀರಿಸ್ಬೇಕೊ ಗೊತ್ತಾಗ್ತಿಲ್ಲ” ಅಂದಳು. ನಾನು “ನಿನಗೆ ನಿಜಕ್ಕೂ ನನಗೆ ಸಹಾಯ ಮಾಡಬೇಕು ಅಂತಿದ್ರೆ, ನಮ್ಮ ಮನೆಯಲ್ಲಿ ಕೆಲಸ ಮಾಡ್ಲಿಕ್ಕೆ ಯಾರನ್ನಾದ್ರೂ ನೋಡ್ತೀಯಾ?” ಕೇಳಿದೆ.
“ಅಯ್ಯೊ, ಯಾರ್ ಯಾಕ್ರವ್ವಾ ಬೇಕು, ನಾನೇ ಬತ್ತೀನಿ ಬಿಡಿ, ಬೆಳಿಗ್ಗೆ ಒಂದು ಘಂಟೆ ಬಂದು ಮಾಡ್ಕೊಟ್ಟು ನಂತರ ಕಾಲೇಜಿನತ್ರ ಕೆಲಸಕ್ಕೆ ಹೋಯ್ತೀನಿ” ಅಂದಳು.
 “ನೀನೇ ಬಂದ್ರೆ ನನಗೂ ಸಂತೋಷ ರಂಗಮ್ಮ, ಎಷ್ಟು ಕೊಡ್ಬೇಕು.”
“ಅಯ್ಯೊ ದುಡ್ಡು ಯಾರ್ ಕೇಳಿದ್ರವ್ವಾ. ನನ್ ಮಗೀನ್ ಪ್ರಾಣ ಕಾಪಾಡ್ದೋರ್ ನೀವು” ಎಂದಳು. 
“ಸರಿ ಬಿಡು ಹಾಗಿದ್ರೆ ಬೇಡ” ಎದ್ದು ನಿಂತೆ. 
“ಅಯ್ಯೊ ಕೂತ್ಕೊಳ್ರವ್ವಾ. ಬ್ಯಾಸ್ರ ಮಾಡ್ಕಬೇಡಿ, ನಿಮಗೆ ಏನು ಕೊಡಬೇಕು ಅನಿಸುತ್ತೊ ಅಷ್ಟು ಕೊಡಿ” ಅಂದಳು. 
“ಸರಿ ಯಾವಾಗ್ಲಿಂದ ಬರ್ತೀಯಾ. ಮಗೂಗೆ ಹುಷಾರಾದ ಮೇಲೆಯೇ ಬಾ” ಎಂದೆ. 
“ಅಯ್ಯೊ, ಪರ್ವಾಗಿಲ್ಲವ್ವಾ, ನಮ್ಮಮ್ಮ ನೋಡ್ಕೋತಾಳೆ. ನಾಳೇನೆ ಬರ್ತೀನಿ.” 
ಮಾರನೆ ದಿನದಿಂದಲೇ ರಂಗಮ್ಮ ಕೆಲಸಕ್ಕೆ ಬರಲಾರಂಭಿಸಿದಳು. ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿಕೊಡುತ್ತಿದ್ದಳು. ಒಂದೂವರೆ ತಿಂಗಳಾದ ಮೇಲೆ, ಸುಮಳ ಪ್ಲಾಸ್ಟರ್ ತೆಗೆದರು. ಈ ಮಧ್ಯೆ ನಾನು ಅಲ್ಲಿಗೆ ಹೋಗಿ ಬಂದು ಮಾಡುತ್ತಿದೆ. 
ಪ್ಲಾಸ್ಟರ್ ತೆಗೆದ ಒಂದು ವಾರದ ನಂತರ, ಬೆಳಿಗ್ಗೆ ರಂಗಮ್ಮನ ಬದಲು ಸುಮ ಬಂದಳು. ‘ಅಮ್ಮ ಎಲ್ಲಿ’ ಎಂದು ಕೇಳಿದ್ದಕ್ಕೆ, “ಅಮ್ಮನಿಗೆ ಹುಷಾರಿಲ್ಲ, ಅದಕ್ಕೆ ಕೆಲಸ ಮಾಡಿಕೊಡಲು ನಾನು ಬಂದೆ” ಎಂದಳು. 
“ನೀನಾ, ನಿನ್ನ ಕೈಲಿ ಕೆಲಸ ಮಾಡಿಸ್ತೀನಿ ಅಂತಾ ನಾನು ಯಾವಾಗ ಹೇಳಿದ್ದೆ, ಅದೆಲ್ಲಾ ಬೇಡ, ಅಮ್ಮನಿಗೆ ಹುಷಾರಿಲ್ಲದಿದ್ರೆ ಪರವಾಗಿಲ್ಲ, ನಾನೇ ಮಾಡ್ಕೋತೀನಿ, ಹೇಗೂ ಬಂದಿದ್ದೀಯ, ಸ್ವಲ್ಪ ತಾಳು, ತಿಂಡಿ ಕೊಡ್ತೀನಿ, ತಿಂದು ಹೋಗು” ಎಂದೆ. 
ಸುಮಳಿಗೆ ಏನೂ ಮಾತನಾಡಲು ಅವಕಾಶ ಕೊಡದೆ ಅವಳಿಗೆ ತಿಂಡಿ ಕೊಟ್ಟು, ನಾನೂ ತಿಂದು, ದಾರಿಯಲ್ಲಿ ಅವಳನ್ನು ಬಿಟ್ಟು ರಂಗಮ್ಮನನ್ನು ವಿಚಾರಿಸಿ, ಮಾತ್ರೆ ತರಿಸಿಕೊಟ್ಟು ಕಾಲೇಜಿಗೆ ಹೋದೆ.
ಸಂಜೆ ಹಿಂದಿರುಗಿದಾಗ, ರಂಗಮ್ಮ ಮನೆಯ ಹತ್ತಿರವೇ ಕಾಯುತ್ತಿದ್ದಳು. “ನೀನು ಯಾಕೆ ಬರಲು ಹೋದೆ, ನಾನು ಬೆಳಿಗ್ಗೇನೆ ಹೇಳಿದ್ದೆನಲ್ಲ, ಎರಡು ದಿನ ಬಿಟ್ಟು ಬಾ ಅಂತಾ.” ರಂಗಮ್ಮ ಏನೂ ಮಾತನಾಡದೆ, ಬಾಗಿಲು ತೆಗೆಯುತ್ತಿದ್ದಂತೆ ಒಳಹೋಗಿ ಪೊರಕೆ ಕೈಗೆತ್ತಿಕೊಂಡು ಗುಡಿಸಲು ಸಿದ್ಧವಾದಳು. 
 ನಾನು ಅವಳ ಕೈಯಿಂದ ಪೊರಕೆಯನ್ನು ಕಿತ್ತುಕೊಂಡು, “ಜ್ವರವಿನ್ನೂ ಬಿಟ್ಟಿಲ್ಲ, ಕೂತ್ಕೊ” ಎಂದು ಕೂಡಿಸಿ, ಕಾಫಿ ಮಾಡಿ, ಬ್ರೆಡ್ ಕಾಫಿಯನ್ನು ಆಕೆಗೆ ಕೊಟ್ಟೆ. ಗದ್ಗದಿತಳಾದಳು. ಬ್ರೆಡ್ ತಿಂದು ಕಾಫಿ ಕುಡಿದು, “ಅಮ್ಮ, ನಾನು ಎಷ್ಟೋ ಕಡೆ ಕೆಲಸ ಮಾಡಿದ್ದೀನಿ, ಕೆಲವರು ಒಳ್ಳೆಯವರು, ಕೆಲವರು ಕೆಟ್ಟವರು, ಆದ್ರೆ ನಿಮ್ಮಷ್ಟು ಒಳ್ಳೆಯವರಾರನ್ನು ನೋಡಲಿಲ್ಲ. ನಿಮ್ಮ ಮನೆಯವರ ತರಹ ನೋಡಿಕೊಳ್ತೀರಾ” ಅತ್ತೇಬಿಟ್ಟಳು. 
“ಇರ್ಲಿ ಬಿಡು, ಅದೆಲ್ಲಾ, ಈಗ ಮನೆಗೆ ಹೋಗಿ ರೆಸ್ಟ್ ತಗೊ. ಎರಡು ದಿನ ಬಿಟ್ಟು ಬಾ” ಎಂದು ಕಳಿಸಿದೆ. ಹೀಗೆಯೇ ನಮ್ಮ ಬಾಂಧವ್ಯ ಬೆಳೆಯುತ್ತಾ ಹೋಯಿತು. ಸುಮಳಿಗೆ ಸಾಧ್ಯವಾದಾಗಲೆಲ್ಲಾ ನಾನು ಪಾಠ ಹೇಳಿಕೊಡುತ್ತಿದ್ದೆ. 
 ಸುಮಳ ತಂದೆಯ ಬಗ್ಗೆ ಕೇಳಿದಾಗ ರಂಗಮ್ಮನ ಮಾತು ನನ್ನನ್ನು ಆಶ್ಚರ್ಯಗೊಳಿಸಿತು. ಸುಮ ಚಿಕ್ಕ ಮಗುವಿದ್ದಾಗ ಬಿಸಿಗಂಜಿಯಲ್ಲಿ ಬಿದ್ದು, ಅವಳ ಎಡಗಿವಿ ಮತ್ತು ಸುತ್ತಲಿನ ಚರ್ಮ ಸುಟ್ಟುಹೋಗಿತ್ತು.  ಮಗು ನೋಡಲು ವಿಕಾರವಾಗಿತ್ತೆಂದು ಗಂಡ ಆ ಮಗುವನ್ನು ಸಾಯಿಸಿಬಿಡೋಣ ಎಂದನಂತೆ. 6 ತಿಂಗಳ ಹಸುಗೂಸನ್ನು ಕೊಲ್ಲಬೇಕೆಂದ ಆ ಕಿರಾತಕನನ್ನು ಧಿಕ್ಕರಿಸಿ ರಂಗಮ್ಮ ತಾನೇ ಮನೆಯಿಂದ ಹೊರಬಂದಿದ್ದಳಂತೆ. ನಂತರ ಊರಿನಲ್ಲಿರುವ ತನ್ನ ತಾಯಿಯನ್ನು ಕರೆಸಿಕೊಂಡು, ತಾಯಿಯನ್ನು, ಮಗಳನ್ನು ನೋಡಿಕೊಳ್ಳುತ್ತಿದ್ದಳು.
ಶ್ರಮಜೀವಿ ರಂಗಮ್ಮನ ಬಗ್ಗೆ ನನಗಿದ್ದ ಗೌರವ ಇನ್ನಷ್ಟು ಹೆಚ್ಚಾಯಿತು. ಆ ದಿಟ್ಟತನ, ಮಾತೃವಾತ್ಸಲ್ಯ ಬಹಳ ಮೆಚ್ಚುಗೆಯಾಯಿತು. ಇದಾದ ನಂತರ ನಮ್ಮಿಬ್ಬರ ಕುಟುಂಬಗಳು ಇನ್ನಷ್ಟು ಹತ್ತಿರವಾದವು. 
ನನ್ನ ಗಂಡ ರಾಜೀವ್, ‘ನಿನ್ನ ಅಕ್ಕ ಬಂದಳು ನೋಡು’ ಎಂದೇ ಛೇಡಿಸುತ್ತಿದ್ದರು. 
ಸುಮ ಹತ್ತನೇ ತರಗತಿಯಲ್ಲಿ ಶೇಕಡ 92ರಷ್ಟು ಅಂಕಗಳನ್ನು ಗಳಿಸಿ ಪಾಸಾದಾಗ, ರಂಗಮ್ಮನಿಗಿಂತ ನಾನೇ ಹೆಚ್ಚು ಖುಷಿ ಪಟ್ಟಿದ್ದೆ. ಸುಮ ಕಾಲೇಜಿಗೆ ಸೇರಿದಳು. 
ಈ ಮಧ್ಯೆ ನಾನು ಗರ್ಭಿಣಿಯಾದೆ. ರಾಜೀವ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿದ್ದುದ್ದರಿಂದ ಕೆಲವೊಮ್ಮೆ ವಾರಾನುಗಟ್ಟಲೆ ಹೊರಗಿರುತ್ತಿದ್ದರು. ಆಗ ಸುಮ, ರಂಗಮ್ಮ ನನ್ನ ಜೊತೆ ಬಂದಿರುತ್ತಿದ್ದರು. 
ಈ ಬಾರಿ ರಾಜೀವ್ ಬಂದವರು, “ಡಾಕ್ಟರ್ ಬಳಿ ಹೋಗೋಣ ನಡಿ” ಎಂದರು. ನಾನು “ನೆನ್ನೆಯಷ್ಟೇ ಡಾಕ್ಟರ್ ಬಳಿ ಹೋಗಿ ಬಂದೆ, ಎಲ್ಲವೂ ನಾರ್ಮಲ್ ಇದೆ” ಎಂದೆ. 
“ಅವರ ಬಳಿ ಅಲ್ಲ,  ನನ್ನ ಸ್ನೇಹಿತರ ಬಳಿಗೆ” ಎಂದರು. ಸರಿ ಅವರಿಗೇಕೆ ಬೇಜಾರಾಗಬೇಕೆಂದು ಹೋಗಿಬಂದೆ. 
ನನ್ನ ಡಾಕ್ಟರ್ ಸ್ಕಾನ್ ಮಾಡಿಸಿರಲಿಲ್ಲ. ಈಗಲೇ ಬೇಡವೆಂದಿದ್ದರು. “ಅಯ್ಯೊ ಆ ಹಳೆಯ ಕಾಲದ ಡಾಕ್ಟರ್‍ಗಳೇ ಹಾಗೆ, ಮಾಡಿಸಿಬಿಡಿ” ಎಂದರು. ಸರಿ ಇನ್ನೇನು ಮಾಡುವುದು ಎಂದು ಮಾಡಿಸಿಕೊಂಡೆ. ಮಾರನೆ ದಿನ ರಿಪೋರ್ಟ್ ತೆಗೆದುಕೊಂಡು ಬಂದ ರಾಜೀವ್ “ತೆಗೆಸಿಬಿಡೋಣ, ಈ ಮಗು ನಮಗೆ ಬೇಡ” ಎಂದರು. 
“ಯಾಕೆ” ಎಂದು ಕೇಳಿದ್ದಕ್ಕೆ, “ಇಲ್ಲಾ ಏನೋ ಪ್ರಾಬ್ಲಮ್ ಇದೆಯಂತೆ ಅದಕ್ಕೆ” ಎಂದರು. 
“ಮತ್ತೆ ನಮ್ಮ ಫ್ಯಾಮಿಲಿ ಡಾಕ್ಟರ್ ಎಲ್ಲವೂ ಸರಿಯಿದೆ ಎಂದರಲ್ಲ, ಅವರನ್ನೇ ಒಮ್ಮೆ ಕೇಳಿಬಿಡೋಣ ನಡೆಯಿರಿ” ಎಂದೆ. “ಅಂದ್ರೆ ನಿನಗೆ ನನ್ನ ಮಾತಿನ ಮೇಲೆ ನಂಬಿಕೆ ಇಲ್ಲ ಎಂದಾಯ್ತು” ಎಂದು ಕೂಗಾಡಿದರು. 
ಇನ್ನಾವುದನ್ನೊ ಮರೆಮಾಚುತ್ತಿರುವುದು ನನಗೆ ಸ್ಪಷ್ಟವಾಯಿತು. “ಸರಿಯಾಗಿ ಬಿಡಿಸಿ ಹೇಳಿ ಏನದು” ಎಂದು ಕೇಳಿದಾಗ ವಿಷಯ ಗೊತ್ತಾಗಿದ್ದಿಷ್ಟು. ‘ಸ್ಕ್ಯಾನ್ ಮೂಲಕ ಗರ್ಭದಲ್ಲಿರುವ ಶಿಶು ಹೆಣ್ಣು ಎಂದು ಗೊತ್ತಾಗಿದೆ, ಹಾಗಾಗಿ ಅದು ಬೇಡ’ ಎಂದು. 
ಈ ಮಾತನ್ನು ಕೇಳಿ ಶಾಕ್‍ಗೆ ಒಳಗಾದೆ. ಕಾಲೇಜಿನಲ್ಲಿದ್ದಾಗ ಸ್ತ್ರೀಪರ ಧೋರಣೆಯಿದೆ ಎಂದೇ ಇವನನ್ನು ನಾನು ಇಷ್ಟಪಟ್ಟು ಮದುವೆಯಾಗಿದ್ದೆ.
ಎಷ್ಟೇ ವಾದ ವಿವಾದ ನಡೆದರೂ ಅವನು ಬಗ್ಗಲು ತಯಾರಿರಲಿಲ್ಲ. ನಾನೂ ಅಷ್ಟೇ ದೃಢವಾಗಿದ್ದೆ. 
‘ನನ್ನ ಜೊತೆ ಬದುಕಬೇಕಾದರೆ ನೀನು ಈ ಕೆಲಸ ಮಾಡಲೇ ಬೇಕು’ ಆಗ್ರಹಿಸಿದ. ನನಗೆ ರಂಗಮ್ಮನ ಕಥೆ ನೆನಪಾಯಿತು. ಅಲ್ಲಿ ರಂಗಮ್ಮನ ಗಂಡ ಅನಕ್ಷರಸ್ಥ, ಹಳೆಯ ಕಾಲದವ. ಆದರೆ ರಾಜೀವ ಓದಿದವ, ಹೊಸ ಕಾಲದವ. ಇಲ್ಲಿಯವರೆಗೂ ಮಾತನಾಡಿದ್ದೆಲ್ಲಾ ಹಾಗಿದ್ದರೆ ಬೂಟಾಟಿಕೆ. ‘ಇಲ್ಲಿ ಎಲ್ಲಾ ಹೆಣ್ಣುಗಳ ಜೀವನವೂ ಒಂದೇ. ನಾವು ಓದಿರಲಿ, ಬಿಡಲಿ, ಉದ್ಯೋಗವಿರಲಿ, ಬಿಡಲಿ, ನಮ್ಮ ಜೀವನವನ್ನು ನಿರ್ದೇಶಿಸುವವರು ಪುರುಷರೇ. ಹಾಗಿದ್ದರೆ ಏನು ಮಾಡಬೇಕು?   ಮನದ ಮುಂದೆ ಬೃಹದಾಕಾರದ ಪ್ರಶ್ನೆ ಮೂಡಿತು. ಹಾಗೆಯೆ ಮೌನವಾಗಿ ಕುಳಿತೆ.
 ಅಮ್ಮನಿಗೆ, ಅತ್ತೆಗೆ, ಅಕ್ಕನಿಗೆ ಫೋನ್ ಮಾಡಿದ್ರೆ ಎಲ್ಲರದ್ದೂ ಒಂದೇ ರಾಗ – “ನಿನ್ನ ಬದುಕು ನೋಡಿಕೊ, ಮಗು ನಾಳೆ ಇನ್ನೊಂದು ಆಗುತ್ತೆ.” ಆಘಾತಕ್ಕೊಳಗಾದೆ. ‘ಇವರೆಲ್ಲಾ ಹೆಣ್ಣೆ ಅಲ್ಲವೇ’ ಪ್ರಶ್ನೆ ಮೂಡಿತು. 
 ರಂಗಮ್ಮ ಬಂದಳು. ಮಂಕಾಗಿ ಕುಳಿತಿದ್ದ ನನ್ನನ್ನು ನೋಡಿ, “ಏನಾಯ್ತವ್ವಾ” ಎಂದಳು. ವಿಷಯ ಹೇಳಿದೆ. 
 ಕೇಳಿದ ಅವಳು, “ಮಗೀನ್ ಸಾಯಿಸೋದಾ, ಅದೂ ಹೆಣ್ಣು ಅಂತಾ, ಖಂಡಿತಾ ಬೇಡ ಕಣ್ರವ್ವಾ” ಅಂದಳು. “ಆದ್ರೆ ರಂಗಮ್ಮ, ಎಲ್ಲರೂ ಅದನ್ನೇ ಹೇಳುತ್ತಿರುವಾಗ, . . .” 
ಮಧ್ಯದಲ್ಲಿಯೇ ನನ್ನ ಮಾತನ್ನು ನಿಲ್ಲಿಸಿ, “ನಿಮ್ಮನ್ಯಾರ್ ನೋಡ್ಕೋತಾರೆ, ಯಾರ್ ಬಾಣಂತನ ಮಾಡ್ತಾರೆ ಅಂತಾ ತಾನೆ ನಿಮ್ ಯೋಚ್ನೆ, ನಾನಿಲ್ಲವಾ, ನಾನ್ ನೋಡ್ಕೋತೀನಿ” ಎಂದಳು.
ಅವಳು ಕೊಟ್ಟ ಧೈರ್ಯ ಕೆಲಸ ಮಾಡಿತು. “ನೀನು ಹೋಗು, ನಾನು ಬರ್ತೀನಿ” ಎಂದು ಹೇಳಿ ಕಳಿಸಿದೆ. 
ಕೂಗಾಡಿ ಹೊರಗಡೆ ಹೋಗಿದ್ದ ರಾಜೀವ ಬಂದ. “ಏನು ನಿರ್ಧಾರ ಮಾಡಿದೆ?” ಕೇಳಿದ. 
ಸಿದ್ಧ ಮಾಡಿಕೊಂಡಿದ್ದ ಸೂಟ್‍ಕೇಸ್ ಎತ್ತಿಕೊಂಡು ಏನೂ ಮಾತನಾಡದೆ ಹೊರನಡೆದೆ, ಇಡೀ ಪುರುಷಪ್ರಧಾನ ಸಮಾಜದ ಹೆಣ್ಣಿನ ನೀತಿಸೂತ್ರವನ್ನು ಧಿಕ್ಕರಿಸಿ!!!

- ಸುಧಾ ಜಿ      

No comments:

Post a Comment