Monday 8 May 2017

ಪುಸ್ತಕ ವಿಮರ್ಶೆ - ಮರುಭೂಮಿಯ ಹೂ



ವಾರಿಸ್ ಡಿರಿ, ಪ್ರಖ್ಯಾತ ರೂಪದರ್ಶಿಯ ಆತ್ಮಕಥನವಾದ "ದಿ ಡೆಸರ್ಟ್ ಫ್ಲವರ್" ಅನ್ನು ಡಾ. ಎನ್ ಜಗದೀಶ್ ಕೊಪ್ಪರವರು "ಮರುಭೂಮಿಯ ಹೂ" ಎಂದು ಬಹಳ ಸರಳವಾಗಿ ಅನುವಾದಿಸಿ ಬರೆದಿದ್ದಾರೆ. ಆಫ್ರಿಕಾದ ಹೆಣ್ಣು ಮಗಳೊಬ್ಬಳು ಅನುಭವಿಸಿದ ನೋವು, ನಲಿವುಗಳನ್ನೊಳಗೊಂಡ ಅವಳ ಸಾಹಸ ಕಥೆಯನ್ನು ಓದುಗರ ಮನ ಮುಟ್ಟುವಂತೆ ಬರೆದಿದ್ದಾರೆ. 
ಈ ಕೃತಿಯು "ಅತ್ಯುತ್ತಮ ಅನುವಾದ ಕೃತಿ"ಎಂಬ ಪ್ರಶಸ್ತಿಯನ್ನು ಪಡೆದಿದೆ. ಈ ಆತ್ಮಕಥೆ ಒಟ್ಟಾರೆ 85 ಭಾಷೆಗಳಲ್ಲಿ ಪ್ರಕಟಗೊಂಡು ಅತ್ಯಂತ  ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಒಂದಾಗಿದೆ.
ಆಫ್ರಿಕಾದ ಸೋಮಾಲಿಯ ರಾಷ್ಟ್ರದ ಮುಸ್ಲಿಂ  ಅಲೆಮಾರಿ  ಬುಡಕಟ್ಟಿನ ಜನಾಂಗದ ತುಂಬು ಕುಟುಂಬದಲ್ಲಿ ಜನಿಸಿದಳು ವಾರಿಸ್. ವಾರಿಸ್ ಎಂದರೆ ಸೋಮಾಲಿಯ ಭಾಷೆಯಲ್ಲಿ "ಮರಳುಗಾಡಿನಲ್ಲಿ ಅರಳುವ ಒಂದು ಹೂವಿನ ಹೆಸರು."
ತಂದೆ ಅಲೆಮಾರಿ ಜನಾಂಗ, ತಾಯಿ ಮೊಗದಿಶು ನಗರದ ಸುಸಂಸ್ಕೃತ ಕುಟುಂಬದಿಂದ ಬಂದವಳು. ಶಾಲೆ, ಶಿಕ್ಷಣ ಏನು ಎಂದರಿಯದ ಇವರು ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಸಾಕು ಪ್ರಾಣಿಗಳ ಪೋಷಣೆ  ಮತ್ತು ರಕ್ಷಣೆ ಇವೇ ಮೊದಲಾದವುಗಳನ್ನು ತಮ್ಮ ಮಕ್ಕಳಿಗೆ ಕಲಿಸುತ್ತಿದ್ದರು. ಸೋಮಾಲಿಯದಲ್ಲಿ ಅವಿಭಕ್ತ ಕುಟುಂಬ ಪದ್ಧತಿಯಿದ್ದು, ಕಿರಿಯರು ಹಿರಿಯರಿಗೆ ಗೌರವ ತೋರುವುದು ಇವರ ವಿಶೇಷ ಗುಣವಾಗಿದೆ. ಕುರಿ, ಮೇಕೆ, ಒಂಟೆಗಳನ್ನು ಸಾಕುತ್ತಿದ್ದರು. ಮರುಭೂಮಿಯಾದ್ದರಿಂದ ಪ್ರಾಣಿಗಳ ಮೇವು ನೀರು ಹುಡುಕುವುದರಲ್ಲೇ ಇವರ ದಿನಚರಿ ಮುಗಿದು ರಾತ್ರಿ ವೇಳೆಯಲ್ಲಿ ಮಾತ್ರವೇ ಮನೆಯವರೆಲ್ಲಾ ಒಟ್ಟಾಗಿ ಸೇರುತ್ತಿದ್ದದ್ದು. ಹೀಗೆ ಬೆಳೆದ ವಾರಿಸ್ 4 ವರ್ಷದಲ್ಲಿಯೇ ತನ್ನ ತಂದೆಯ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು.
ಆಫ್ರಿಕಾದ ಬಹುತೇಕ ಮುಸ್ಲಿಂ ಬುಡಕಟ್ಟು ಜನಾಂಗದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅತಿ ಅಮಾನುಷವಾದ ಆಚರಣೆಯೆಂದರೆ ಹೆಣ್ಣು ಮಕ್ಕಳು ರಜಸ್ವಲೆಯಾಗುವ ಮೊದಲೆ ಮಾಡುವ ಗುಪ್ತಾಂಗ ಛೇದನ ಕ್ರಿಯೆ. ಇದು ಧಾರ್ಮಿಕ ಹೆಸರಿನಲ್ಲಿ ಅವಳ ಪಾವಿತ್ರ್ಯತೆಯನ್ನು  ಸಾಬೀತು ಮಾಡುವ ಒಂದು ಅಮಾನವೀಯ ಕ್ರಿಯೆಯಾಗಿದೆ. ಪ್ರತಿಯೊಬ್ಬ ಮಹಿಳೆಯು ವಿವಾಹವಾಗಬೇಕಾದರೆ ಇದನ್ನು ಮಾಡಿಸಿಕೊಳ್ಳಲೇಬೇಕು. ಇದನ್ನು ಮಾಡಿಸಿಕೊಳ್ಳದ ಮಹಿಳೆಯನ್ನು ಅಪವಿತ್ರಳು, ವ್ಯಭಿಚಾರಿಣಿ ಎಂದು ಮದುವೆಯಾಗಲು ನಿರಾಕರಿಸುತ್ತಿದ್ದರು. ವಧುದಕ್ಷಿಣೆ ಪದ್ಧತಿ ಜಾರಿಯಲ್ಲಿರುವ ಇಲ್ಲಿ ಈ ಕ್ರಿಯೆಗೆ ಒಳಪಡುವ ಮಹಿಳೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. 
ವಾರಿಸ್ ಳಿಗೂ ಐದನೇ ವರ್ಷದಲ್ಲಿಯೇ ಇದನ್ನು ಮಾಡಿಸಿದರು. ಈ ಕಾರಣದಿಂದಾಗಿಯೇ ಅವಳು ಮನೆ  ಬಿಡಬೇಕಾಯಿತು. ವಾರಿಸ್ ಳ ಅಪ್ಪ ಶ್ರೀಮಂತ ವೃದ್ಧನಿಂದ ಐದು ಒಂಟೆಗಳನ್ನು ವಧುದಕ್ಷಿಣೆಯಾಗಿ ತೆಗೆದುಕೊಂಡು ಅವನಿಗೆ ವಾರಿಸಳನ್ನು ಮದುವೆ ಮಾಡಿಕೊಡಲು ನಿಶ್ಚಯಿಸಿದನು. ಈ ಮದುವೆಯನ್ನು ಒಪ್ಪದ ವಾರಿಸ್ ತಾಯಿಯ ನೆರವಿನಿಂದ ಮನೆ ಬಿಟ್ಟು  ಹೊರ ನಡೆದಳು.
ಮರುಭೂಮಿಯಲ್ಲಿ ಸಾಗುತ್ತಿರುವಾಗ ಸಿಂಹದ ಬಾಯಿಂದ ಪಾರಾಗಿ, ಕಾಮುಕರಿಂದ ತಪ್ಪಿಸಿಕೊಂಡ ಇವಳನ್ನು ಗ್ಯಾಲ್ಕಯೋ ನಗರದ ಚಿಕ್ಕಪ್ಪನ ಮನೆ ತೋರಿಸುವ ನೆಪದಿಂದ ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡ ವಾರಿಸ್ ಹೇಗೊ ಚಿಕ್ಕಪ್ಪನ ಮನೆ ಸೇರಿದಳಾದರೂ ಅಲ್ಲಿಗು ಅಪ್ಪ ಬರುತ್ತಿರುವ ವಿಷಯ ತಿಳಿದು ಅಣ್ಣಂದಿರ ಸಹಾಯದಿಂದ ಮೊಗದಿಶು ನಗರದಲ್ಲಿರುವ ಅಕ್ಕನ ಮನೆಗೆ ಬಂದಳು. ಅಲ್ಲಿ ಕೇವಲ ಮೂರು ತಿಂಗಳಿದ್ದು ಅಕ್ಕನ ಮಾತುಗಳಿಂದ ಬೇಸರಗೊಂಡು ಮಾವನ ಮನೆಗೆ ಹೋದಳು. ಮಗಳ ಕಾರಣದಿಂದ ಅತ್ತೆ ಇವಳನ್ನು ಮನೆಯಿಂದ ಹೊರ ಹಾಕಿದಳು. ಮುಂದೆ ತನ್ನ ಚಿಕ್ಕಮ್ಮನ ಮನೆಗೆ ಬಂದ ವಾರಿಸಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು ಚಿಕ್ಕಮ್ಮ. ಹೀಗಿರುವಾಗ ಲಂಡನ್ ನಲ್ಲಿ ಸೋಮಾಲಿಯಾದ ರಾಯಭಾರಿಯಾಗಿದ್ದ ಮತ್ತೊಬ್ಬ ಚಿಕ್ಕಪ್ಪ, "ನಮ್ಮ ಮನೆಗೆ ಕೆಲಸದ ಹುಡುಗಿ ಬೇಕಾಗಿತ್ತು" ಎಂದು ಮಾತನಾಡುತ್ತಿದ್ದುದ್ದನ್ನು ಕೇಳಿದ ವಾರಿಸ್ ಅಲ್ಲಿಗೆ ಹೋಗಲು ನಿರ್ಧರಿಸಿ ಚಿಕ್ಕಮ್ಮನಿಗೆ ತಿಳಿಸಿ ಅವಳ ನೆರವಿನಿಂದ ಲಂಡನ್ ಗೆ ಹೋಗಲು ತಯಾರಾದಳು.
ಪ್ರಥಮ ಬಾರಿಗೆ ವಿಮಾನದ ಪ್ರಯಾಸದಿಂದ ಭಯವಾದರೂ ಗಗನಸಖಿಯ ನೆರವಿನಿಂದ ಧೈರ್ಯಗೊಂಡಳು.
ಲಂಡನ್ ಸೇರಿದ ವಾರಿಸ್ ಚಿಕ್ಕಮ್ಮನ ಮನೆಯಲ್ಲಿ ಪರಿಚಾರಿಕೆಯಾಗಿ ತನ್ನ ಹೊಸ ಜೀವನವನ್ನು ಪ್ರಾರಂಭಿಸಿದಳು. ಇಂಗ್ಲಿಷ್ ಭಾಷೆಯ ಅರಿವಿಲ್ಲದೆ ಕಾರಣ ಚಿಕ್ಕಮ್ಮಳ ಮಗಳಾದ ಬಸ್ಮಾಳಿಂದ ಅಲ್ಪಸ್ವಲ್ಪ ಕಲಿಯತೊಡಗಿದಳು ಮತ್ತು ರೂಪದರ್ಶಿ ಜಗತ್ತಿನ ಬಗ್ಗೆ ಆಸಕ್ತಿಯಿದ್ದ ವಾರಿಸ್ ಮನೆಗೆ ಬರುತ್ತಿದ್ದ ಪತ್ರಿಕೆಗಳ ಜಾಹೀರಾತುಗಳನ್ನು ನೋಡಿ ಆಕರ್ಷಿತಳಾಗುತ್ತಿದ್ದಳು. ಅಲ್ಲದೆ ರೂಪದರ್ಶಿಯಾಗಿದ್ದ ಚಿಕ್ಕಮ್ಮನ ಗೆಳತಿಯ ಮಗಳು ಇಮ್ರಾನ್ ಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು.
ಒಮ್ಮೆ ಚಿಕ್ಕಪ್ಪನ ತಂಗಿ ಮಗಳು ಸೋಫಿಯಾಳನ್ನು ಶಾಲೆಗೆ ಬಿಡುವಾಗ ಫೋಟೋಗ್ರಾಫರ್ ಇವಳನ್ನು "ನಾನೊಬ್ಬ ಫೋಟೋಗ್ರಾಫರ್, ನನಗೆ ಆಫ್ರಿಕನ್ ಹೆಣ್ಣುಮಕ್ಕಳ ಚಿತ್ರ ಬೇಕು" ಅಸಕ್ತಿಯಿದ್ದರೆ ಈ ವಿಳಾಸಕ್ಕೆ ಬರುವಂತೆ ತಿಳಿಸಿ ವಿಸಿಟಿಂಗ್ ಕಾರ್ಡ್ ಅನ್ನು ನೀಡಿದನು. ಅವಳು ಏನು ತೋಚದಂತಾಗಿ ಸುಮ್ಮನಾದಳು.
ಇದುವರೆವಿಗೂ ಚಿಕ್ಕಮ್ಮನ ಮನೆಯಲ್ಲಿ ನೆಮ್ಮದಿಯಿಂದ ಇದ್ದ ವಾರಿಸ್ ಳಿಗೆ ಮತ್ತೊಂದು ಸಮಸ್ಯೆ ಎದುರಾಯಿತು. ಚಿಕ್ಕಮ್ಮನ ಮಗ ಇವಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದನು. ಈ ಘಟನೆಯಿಂದ ನೊಂದ ವಾರಿಸ್ ಳಿಗೆ ನಾಗರಿಕ ಪ್ರಪಂಚದ ಬಗ್ಗೆ ಜಿಗುಪ್ಸೆ ಮೂಡಿತು.
ಹೀಗಿರುವಾಗಲೇ ಚಿಕ್ಕಪ್ಪನ ಕೆಲಸದ ಅವಧಿ ಮುಗಿದು ಅವರೆಲ್ಲರೂ ಸೋಮಾಲಿಯಾಕ್ಕೆ ವಾಪಸ್ಸಾಗಲು ತಯಾರಾದರು. ಆದರೆ ವಾರಿಸ್ ಕೈ ತುಂಬಾ ಹಣವನ್ನು ತೆಗೆದುಕೊಂಡು ಹಿಂದಿರುಗಬೇಕು ಎಂದುಕೊಂಡು ಲಂಡನ್ ನಲ್ಲಿಯೇ  ಉಳಿದುಕೊಂಡಳು. 
ನಂತರ ಹಾಲ್ವು ಎಂಬ ಆಫ್ರಿಕನ್ ಮಹಿಳೆಯ ಪರಿಚಯವಾಯಿತು.  ಇವಳಿಂದ ಲಂಡನ್ ನಲ್ಲಿ ಜೀವನ ನಡೆಸಲು ಬೇಕಾದ ಕನಿಷ್ಠ ಪಾಠಗಳನ್ನು ಕಲಿತಳು. ರೆಸ್ಟೊರೆಂಟ್ ನಲ್ಲಿ  ಕೆಲಸಕ್ಕೆ ಸೇರಿಕೊಂಡು ರಾತ್ರಿ ಶಾಲೆಗೆ ಸೇರಿ ಇಂಗ್ಲಿಷ್ ಅನ್ನು ಕಲಿಯತೊಡಗಿದಳು. ಪರಿಚಿತಳಾಗಿ ಬಂದ ಹಾಲ್ವು ಗೆಳತಿ, ಅಕ್ಕ, ತಾಯಿ ಮತ್ತು ಗುರು ಎಲ್ಲವೂ ಆಗಿ ಇವಳ ಬದುಕಿಗೆ ಒಂದು ದಾರಿ ತೋರಿಸಿದಳು. 
ಈ ಹಿಂದೆ ಭೇಟಿಯಾಗಿದ್ದ ಫೋಟೋಗ್ರಾಫರ್ ಮತ್ತೆ ವಾರಿಸ್ ಳನ್ನು ಭೇಟಿಯಾದನು. ಈ ಭೇಟಿಯು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿತು. ಅವನ ಬಗ್ಗೆ ಗೆಳತಿಗೆ ಹೇಳಿದಾಗ ಅವಳು "ನೀನ್ಯಾಕೆ ರೂಪದರ್ಶಿಯಾಗಬಾರದು?" ಎಂದಳು. ನಂತರ ಗೆಳತಿಯೊಂದಿಗೆ ಫೋಟೋಗ್ರಾಫರ್ ನನ್ನು ಭೇಟಿ ಮಾಡಿ ರೂಪದರ್ಶಿಯಾಗಲು ಒಪ್ಪಿಗೆ  ನೀಡುವುದರ ಮೂಲಕ ಒಂದು ಹೊಸ ಜಗತ್ತಿಗೆ ಪಾದಾರ್ಪಣೆ  ಮಾಡಿದಳು.
ಸ್ಟುಡಿಯೋದಲ್ಲಿ ಇವಳ ಫೋಟೋ ನೋಡಿದ ಮಾಡಲಿಂಗ್ ಏಜನ್ಸಿಯ ಕ್ಯಾಲೆಂಡರ್ ಗೆ ರೂಪದರ್ಶಿಯಾಗಿ ಆಯ್ಕೆಯಾದಳು. ನಂತರ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದಳು. ಹೀಗೆ ಒಂದೊಂದೆ ಮೆಟ್ಟಲೇರುತ್ತಾ ಮಾಡಲಿಂಗ್ ಪ್ರಪಂಚದಲ್ಲಿ ಪರಿಚಿತಳಾಗತೊಡಗಿದಳು.
ಸಿನಿಮಾದಲ್ಲಿ ಅಭಿನಯಿಸಿದ ನಂತರ ಇವಳ ಚಿತ್ರ The Sunday Times ನಲ್ಲಿ ಪ್ರಕಟವಾಯಿತು. ನಂತರ ಜಾಹೀರಾತು  ಕಂಪನಿಯು ಇವಳಿಗೆ ಆಹ್ವಾನ ನೀಡಿತು. ಪ್ಯಾರಿಸ್, ನ್ಯೂಯಾರ್ಕ್ ಮತ್ತು ಇಟಲಿಯಲ್ಲಿ ಕಪ್ಪು ಬಣ್ಣದ ರೂಪದರ್ಶಿಯರಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ಇಂಗ್ಲೆಂಡ್ ನ ಪೌರತ್ವ ಪಡೆದು ಪಾಸ್ ಪೊರ್ಟ್ ಪಡೆಯಲು ವೃದ್ಧನೊಬ್ಬನನ್ನು ವಿವಾಹವಾದಳು. ಆದರೆ ಇಂಗ್ಲೆಂಡ್  ಸರ್ಕಾರ ಇದನ್ನು ಒಪ್ಪದೆ ಗಡಿಪಾರು ಮಾಡಲು ನಿರ್ಧರಿಸಿತು. ಇದಕ್ಕಾಗಿ ವಾರಿಸ್ ಗೆಳತಿಯ ತಮ್ಮನನ್ನು ನಾಟಕೀಯವಾಗಿ ಮದುವೆಯಾಗಿ ಶಾಶ್ವತ ಪಾಸ್ ಪೋರ್ಟ್ ಅನ್ನು ಪಡೆದು ಅಮೆರಿಕಾಗೆ ತೆರೆಳಿದಳು.  
ಅಲ್ಲಿ ನ್ಯೂಯಾರ್ಕ್ ನ ಬೂಕರ್ ಮಾಡೆಲಿಂಗ್ ಏಜನ್ಸಿಯೊಂದಿಗೆ ಒಂದು ವರ್ಷದ ಅವಧಿಯವರೆಗೆ ರೂಪದರ್ಶಿಯಾಗಿರಲು ಒಪ್ಪಂದ ಮಾಡಿಕೊಂಡಳು. ನಂತರ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳಿಗೆ ರೂಪದರ್ಶಿಯಾಗುವ ಅವಕಾಶ ದೊರೆಯಿತು. ಪ್ರಸಿದ್ಧ ಜೀನ್ಸ್ ಉಡುಪುಗಳಿಗೆ ರೂಪದರ್ಶಿಯಾಗುತ್ತಿದ್ದಂತೆ ಮಹಿಳೆಯರ ಸೌಂದರ್ಯ ಸಾಧನಗಳನ್ನು ತಯಾರಿಸುವ ರೆವಲಾನ್ ಕಂಪನಿಯಿಂದ ವಾರಿಸಳಿಗೆ ಬೇಡಿಕೆ ಬಂದಿತು. ಈ ಕಂಪನಿಯ ಜಾಹೀರಾತಿನ ಕಿರುಚಿತ್ರವೊಂದಕ್ಕೆ " ಅಮೆರಿಕಾದ ಅಕಾಡೆಮಿ ಪ್ರಶಸ್ತಿ "ಯೂ ದೊರೆಯಿತು.
ನಂತರ ವಾರಿಸ್ ಯೂರೋಪಿನಾದ್ಯಂತ ಬಹುಬೇಡಿಕೆಯ ರೂಪದರ್ಶಿಯಾದಳು. ಅಮೆರಿಕಾ ಅಲ್ಲದೆ ಇಟಲಿ ಮತ್ತು ಫ್ರಾನ್ಸ್ ನ ಫ್ಯಾಷನ್ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದಳು.
1991-95 ರವರೆಗೆ ಯೂರೋಪಿನಾದ್ಯಂತ ವಾರಿಸ್ ಓಡಾಡಿದಳು. ಆನಂತರ ವಾರಿಸಳಿಗೆ ಬಿ.ಬಿ.ಸಿ ಛಾನಲ್ ರವರು "ನಿಮ್ಮ ಜೀವನವನ್ನು ಕುರಿತ ಸಾಕ್ಷ್ಯಚಿತ್ರವನ್ನು" ನಿರ್ಮಿಸುತ್ತೇವೆ ಎಂದು ಆಹ್ವಾನ ನೀಡಿದರು. ಆದರೆ ವಾರಿಸ್ "ನನ್ನನ್ನು ಸೋಮಾಲಿಯಾಕ್ಕೆ ಕರೆದುಕೊಂಡು ಹೋದರೆ ಮಾತ್ರ ನಾನು ಒಪ್ಪುವೆ" ಎಂದಳು. ವಾರಿಸ್ ಳನ್ನು ತಾಯ್ನಾಡಿಗೆ ಕರೆದುಕೊಂಡು ಹೋಗಿ ತಾಯಿಯನ್ನು ಭೇಟಿ ಮಾಡಿಸಿದರು. ಕಾಲ್ಮ್ ಬರೆದ ಇವಳ ಚಿತ್ರ ಕಥೆಯನ್ನು ಬಿಬಿಸಿ ನಿರ್ದೇಶಕ ಗೆರ್ರಿ ಪೊಮಿರೆ ನಿರ್ದೇಶನದಲ್ಲಿ ತಯಾರಾದ ಸಾಕ್ಷ್ಯ ಚಿತ್ರ 1995 ರಲ್ಲಿ "ನ್ಯೂಯಾರ್ಕ್ ನಲ್ಲಿ ಅಲೆಮಾರಿ" ಎಂಬ ಹೆಸರಿನಿಂದ ಬಿಡುಗಡೆಯಾಯಿತು.
ಆನಂತರ ಪಾಸ್ ಪೋರ್ಟ್ ಪತಿಗೆ ವಿಚ್ಛೇದನೆಯನ್ನು ನೀಡಿ ಡನ್ ನೊಡನೆ ಮದುವೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು. ಅಲೀಕ್ (ಸೋಮಾಲಿಯ ಭಾಷೆಯಲ್ಲಿ ಗಂಡು ಸಿಂಹ ) ಎಂದು ಹೆಸರಿಟ್ಟಳು.
ತಾಯಿಯಾದ ನಂತರ ತನ್ನ ಹಿಂದಿನ ಅನುಭವಗಳನ್ನು ನೆನೆಪಿಸಿಕೊಳ್ಳುತ್ತಾ " ತನ್ನ 5 ನೇ ವಯಸ್ಸಿನಲ್ಲಿ ತನಗೆ ಮಾಡಿದ ಗುಪ್ತಾಂಗ ಛೇಧನ, ಅದರಿಂದಾಗಿ ತಾನು ದಿನಾ ಮೂತ್ರ ವಿಸರ್ಜಿಸುವಾಗ ಅನುಭವಿಸುತ್ತಿದ್ದ ನೋವು ಮತ್ತು ತಿಂಗಳ ಮುಟ್ಟಿನ ಸಮಯದಲ್ಲಿ ಅನುಭವಿಸುತ್ತಿದ್ದ ಯಾತನೆಗಳು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸರಿಪಡಿಸಿಕೊಂಡರೂ ಮರೆಯಲಾಗದೆ ಶಾಶ್ವತವಾಗಿ ಉಳಿದುಕೊಂಡಿವೆ" ಎಂದು ಹೇಳಿಕೊಂಡಿದ್ದಾಳೆ.
"ಮೇರಿಕ್ಲೈರ್" ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಾರಿಸ್ ಯಾವುದೇ ಭಾವನೆಗಳಿಲ್ಲದೆ "ತಾನು ಅಮಾನುಷ ಕ್ರಿಯೆಯಾದ ಗುಪ್ತಾಂಗ ಛೇಧನಕ್ಕೆ ಒಳಗಾಗಿರುವುದನ್ನು" ವಿವರಿಸಿದಳು. "ಹೆಣ್ಣೊಬ್ಬಳ ಗುಪ್ತಾಂಗ ಛೇಧನದ ದುರಂತ ಕಥೆ" ಎಂಬ ಶೀರ್ಷಿಕೆಯಿಂದ ಪ್ರಕಟಗೊಂಡಾಗ ಅಮೆರಿಕದ ನಾಗರಿಕ ಸಮಾಜ ಬೆಚ್ಚಿತು. ಕೆಲವರು ಇದನ್ನು ಟೀಕಿಸಿದರೆ ಹಲವರು ವಿರೋಧಿಸಿದರು. 1998 ರ ವೇಳೆಗೆ ಆಫ್ರಿಕಾದಲ್ಲಿ 13 ಕೋಟಿ ಹೆಣ್ಣುಮಕ್ಕಳು ಈ ಅಮಾನವೀಯ ಕ್ರಿಯೆಗೊಳಗಾಗಿದ್ದರು. ಹಾಗು ಅವೈಜ್ಞಾನಿಕವಾಗಿದ್ದ ಕಾರಣದಿಂದ ಸುಮಾರು 20 ಲಕ್ಷ ಹೆಣ್ಣುಮಕ್ಕಳು ಸಾವನ್ನಪ್ಪಿದರು.
ನಂತರ ಟಿವಿಯಲ್ಲಿ ಪ್ರಸಾರಗೊಂಡ ಈ ಸಂದರ್ಶನವನ್ನು ವೀಕ್ಷಿಸಿದ ವಿಶ್ವಸಂಸ್ಥೆಯ ಅಧಿಕಾರಿಗಳು ಆಫ್ರಿಕಾದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಗುಪ್ತಾಂಗ ಛೇಧನ ಕ್ರಿಯೆ ಕುರಿತು ಅರಿವು ಮೂಡಿಸುವ ಆಂದೋಲನದ ರಾಯಭಾರಿಯಾಗುವಂತೆ ವಾರಿಸ್ ಳನ್ನು ಕೇಳಿದರು.
ರಾಯಭಾರಿ ಪದವಿಯನ್ನು ಒಪ್ಪಿದ ವಾರಿಸ್ ಳಿಗೆ ಕೊಲೆಯ ಬೆದರಿಕೆಯೂ ಪ್ರಾರಂಭವಾಯಿತು. ಆದರೂ ಹೆದರದ ವಾರಿಸ್ ಇದರ ವಿರುದ್ಧ ಜಾಗೃತಿ ಮೂಡಿಸುತ್ತಾ ಡೆಸರ್ಟ್ ಫೌಂಡೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ತನ್ನ ಸಂದರ್ಶನ, ಲೇಖನ ಮೊದಲಾದವುಗಳಿಂದ ಬರುವ ಆದಾಯವನ್ನೆಲ್ಲಾ ಈ ಸಂಸ್ಥೆಗೆ ನೀಡುತ್ತಿದ್ದಾಳೆ. 
"ಸೋಮಾಲಿಯಾದಲ್ಲಿ ಹೆಣ್ಣುಮಕ್ಕಳಿಗೆ ಗುಪ್ತಾಂಗ ಛೇಧನ ಶಿಕ್ಷೆಯನ್ನು ನಿರ್ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಕೇಳಬೇಕೆಂಬುದು, ಇಂತಹ ಸುದ್ದಿಯನ್ನು ಕೇಳಿದ ದಿನ ನನ್ನ ಹೋರಾಟ ಸಾರ್ಥಕ. ಇದೇ ನನ್ನ ಜೀವನದ ಕೊನೆಯ ಆಸೆ" ಎಂದು ತಿಳಿಸಿದ್ದಾಳೆ.
ಹೀಗೆ ಅಲೆಮಾರಿಯಾಗಿ ಮರಳುಗಾಡಿನಿಂದ ಓಡಿ ಬಂದು, ಸಿಂಹದ ಬಾಯಿಂದ ಪಾರಾಗಿ, ಮೊಗದಿಶು ನಗರ, ಇಂಗ್ಲೆಂಡ್, ಅಮೆರಿಕಾ ಫ್ರಾನ್ಸ್ ಎಲ್ಲಾ ಕಡೆ ಸುತ್ತಿ ಜಗತ್ಪ್ರಸಿದ್ಧವಾದ ರೂಪದರ್ಶಿಯಾದ ವಾರಿಸ್ ಳ ಜೀವನ ಸೋಜಿಗ ಮತ್ತು ವಿಸ್ಮಯವೇ ಸರಿ!!
-  ವಿಜಯಲಕ್ಷ್ಮಿ ಎಂ ಎಸ್      

No comments:

Post a Comment