Monday 8 May 2017

ಆರೋಗ್ಯ - ಹಣ್ಣೆಲೆಗಳು - 3

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)     

ಅಧ್ಯಾಯ - 3

                    ಗರ್ಭಚೀಲದ ಜಾರಿಳಿತ  (Prolapse uterus)


ಗರ್ಭಚೀಲದ ಜಾರಿಳಿತ ಋತುಬಂಧದ ಆಸುಪಾಸಿನಲ್ಲಿ, ಹೆಚ್ಚಾಗಿ ಋತುಬಂಧದ ನಂತರ ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆ. ಇದರ ಬಗ್ಗೆ ಬಹಳ ಮಹಿಳೆಯರಿಗೆ ತಿಳಿದಿರುವುದಿಲ್ಲ. ತಿಳಿದಿದ್ದರೂ ಸಂಕೋಚದಿಂದ, ಆರ್ಥಿಕ ಸಮಸ್ಯೆಗಳಿಂದ, ಕೌಟುಂಬಿಕ ತಾಪತ್ರಯಗಳಿಂದ, ಶಸ್ತ್ರಚಿಕಿತ್ಸೆಯ ಭಯದಿಂದ ವೈದ್ಯರ ಬಳಿಗೆ ಬರುವಾಗ ತಡವಾಗಿರುತ್ತದೆ.

ಗರ್ಭಕೋಶವನ್ನು ಅದರ ಸ್ಥಾನದಲ್ಲಿರಿಸಲು ಹಲವು ತಂತುಕಟ್ಟುಗಳು (ligament), ಸ್ನಾಯುಗಳು ಮತ್ತು ತೆಳು ಪದರಗಳು (fasciaಸಹಾಯಕವಾಗಿದೆ. ಇವೆಲ್ಲವೂ ಋತುಬಂಧದ ಸಮಯದಲ್ಲಿ ನಮೆತಗೊಂಡು (atrophy)   ಗರ್ಭಕೋಶದ ಜಾರಿಳಿತವುಂಟಾಗುತ್ತದೆ.

ಅಶಕ್ತಗೊಳ್ಳಲು (ನಮೆತಗೊಳ್ಳಲು) ಮುಖ್ಯ ಕಾರಣಗಳು ಯಾವುವೆಂದರೆ:
ರಸದೂತಗಳ ಉತ್ಪಾದನೆಯಲ್ಲಿ ವ್ಯತ್ಯಯ
ಹೆರಿಗೆಗಳು ಕಷ್ಟವಾಗಿ, ಸ್ನಾಯುಗಳು, ಒಳಪದರುಗಳು ಹಾಳಾಗಿರುವುದು
ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದು, ಹೆರಿಗೆಗಳ ನಡುವಿನ ಅಂತರ ಕಡಿಮೆಯಿದ್ದರೆ
ಕಷ್ಟಕರವಾದ ಹೆರಿಗೆಯಲ್ಲಿ ಮಗುವನ್ನು ತೆಗೆಯಲು ಇಕ್ಕಳ (forcepsಉಪಯೋಗಿಸಿರುವುದು
ಅತಿಯಾದ ಕೆಮ್ಮು, ಉಬ್ಬಸವಿರುವುದು
ಹುಟ್ಟಿನಿಂದ ಸ್ನಾಯುಗಳ ಅಶಕ್ತತೆಯಿರುವುದು


ಗರ್ಭಕೋಶದ ಅಂಗರಚನೆ ಬಗ್ಗೆ ಒಂದೆರಡು ವಿವರಣೆ ನೀಡದಿದ್ದರೆ ಗರ್ಭಕೋಶದ ಜಾರಿಳಿತದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಗರ್ಭಕೋಶವು ನಮ್ಮ ಮುಷ್ಟಿ ಗಾತ್ರದ ಅಂಗ. ಅದು ಕಟಿ ಪ್ರದೇಶದ (pelvis) ಮೂಳೆಗಳ ಗೂಡಿನಲ್ಲಿ ಇರುವುದು. ಕಿಬ್ಬೊಟ್ಟೆಯಲ್ಲಿ ಮೂತ್ರಕೋಶದ ಹಿಂಭಾಗದಲ್ಲಿ ಮತ್ತು ಮಲಕೋಶದ ಮುಂಭಾಗದಲ್ಲಿ, ಅಂದರೆ ಇವೆರಡರ ಮಧ್ಯೆ ಸ್ವಲ್ಪ ಬಾಗಿಕೊಂಡು ಕೆಲವೊಂದು ಸ್ನಾಯುಗಳು, ತಂತು ಕಟ್ಟುಗಳು ಹಾಗೂ ತೆಳು ಪದರಗಳಿಂದ  ಸುತ್ತುವರಿಯಲ್ಪಟ್ಟು ತನ್ನ ಸ್ಥಾನದಲ್ಲಿ ಇರುತ್ತದೆ.

ಗರ್ಭಕೋಶವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದರೆ, ಒಂದೊಂದು ಭಾಗದಲ್ಲೂ ವಿವಿಧ ಸ್ನಾಯುಗಳು, ತಂತುಕಟ್ಟುಗಳು ಹಾಗೂ ಪದರಗಳು  ಗರ್ಭಕೋಶವನ್ನು ಅದರ ಸ್ಥಾನದಲ್ಲಿರಿಸುತ್ತವೆ. 
ಮೇಲ್ಭಾಗದಲ್ಲಿ :
ದುಂಡು ತಂತುಕಟ್ಟು (Round ligament), ಡಿಂಭನಾಳ (Fallopian tube ಹಾಗೂ ಅಂಡಾಶಯದ ತಂತುಕಟ್ಟು (ovarian ligament), ಇವಿಷ್ಟನ್ನು ಅಗಲ ತಂತುಕಟ್ಟು  (Broad ligament  ಎಂದು ಕರೆಯುತ್ತೇವೆ.
ಮಧ್ಯಭಾಗದಲ್ಲಿ:
ಮ್ಯಾಕೆನ್‍ರಾಡ್‍ನ ತಂತುಕಟ್ಟು (Mackenrodt’s ligament ಮತ್ತು ಯುಟಿರೋ ಸೇಕ್ರಲ್ ತಂತುಕಟ್ಟು (uterosacral ligamentಇವೆರಡೂ ಸೇರಿ ಗರ್ಭಕೋಶವನ್ನು ಅದರ ಸ್ಥಾನದಲ್ಲಿ ಹಿಡಿದಿಟ್ಟಿರುತ್ತದೆ. ಯುಟಿರೋ ಸೇಕ್ರಲ್ ತಂತುಕಟ್ಟು ಗರ್ಭಕೋಶವನ್ನು ಅದರ ಹಿಂಭಾಗದಲ್ಲಿರುವ ಸೇಕ್ರಮ್ ಎಂಬ ಮೂಳೆಗೆ ಅಂಟಿಕೊಂಡು ಅದು ಕೆಳಗೆ ಜಾರದಂತೆ ನೋಡಿಕೊಳ್ಳುತ್ತದೆ. 
ಕೆಳಭಾಗದಲ್ಲಿ:
ಮುಂದುಗಡೆ ಮೂತ್ರಕೋಶದಿಂದ ತಂತುಕಟ್ಟು ಗರ್ಭಕೋಶಕ್ಕೆ ಸೇತುವೆಯಾಗಿ ಗರ್ಭಕೋಶವನ್ನು ಅದರ ಜಾಗದಲ್ಲಿ ಹಿಡಿದಿಟ್ಟಿರುತ್ತದೆ. ಗರ್ಭಕೋಶದ ಕೆಳಭಾಗದಲ್ಲಿ ಯೋನಿಯ ಎರಡು ಕಡೆಗಳಲ್ಲಿ ಅದರ ಒಳಪದರುಗಳು ಅದನ್ನು ತನ್ನ ಸ್ಥಾನದಲ್ಲಿರಿಸಲು ಸಹಕರಿಸುತ್ತವೆ.


ಇವೆಲ್ಲಕ್ಕೂ ಅದರ ಬಲವನ್ನು ಕೊಡಲು ದೇಹದಲ್ಲಿ ಉತ್ಪತ್ತಿಯಾಗುವ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಜೀವರಸದ ಅವಶ್ಯಕತೆಯಿದೆ. ಯಾವಾಗ ಈ ಜೀವರಸಗಳ ಉತ್ಪತ್ತಿ ಕ್ಷೀಣಿಸುವುದೋ ಆಗ ತಂತುಕಟ್ಟುಗಳು, ಸ್ನಾಯುಗಳು ತಮ್ಮಬಲವನ್ನು ಕಳೆದುಕೊಳ್ಳುತ್ತ ಹೋಗುತ್ತವೆ ಮತ್ತು ಗರ್ಭಕೋಶವು ತನ್ನ ಸ್ಥಾನದಿಂದ ಸ್ವಲ್ಪ ಸ್ವಲ್ಪವಾಗಿ ಜಾರುತ್ತ ಕೆಳಗೆ ಯೋನಿಯ ಮೂಲಕ ಹೊರಗೆ ಬರುತ್ತದೆ.
ಗರ್ಭಕೋಶದ ಜಾರಿಳಿತವನ್ನು  ಸಾಮಾನ್ಯವಾಗಿ ಮೂರು ರೀತಿಯಲ್ಲಿ ಗುರುತಿಸುತ್ತೇವೆ. 
ಮೊದಲನೆ ಹಂತ: ಗರ್ಭಕೋಶ ತನ್ನ ಸ್ಥಾನಕ್ಕಿಂತ ಸ್ವಲ್ಪವೇ ಕೆಳಗೆ ಜಾರಿದ್ದು ಅದನ್ನು ವೈದ್ಯರು ಪರಿಶೀಲಿಸಿದಾಗ ಮಾತ್ರ ತಿಳಿಯುತ್ತದೆ. 
ಎರಡನೆ ಹಂತ: ಇದರಲ್ಲಿ ಗರ್ಭಕೋಶವು ಯೋನಿದ್ವಾರದ ಬಳಿ ಬಂದಿದ್ದು ಮೂತ್ರ ಮಾಡುವಾಗ ಇಲ್ಲವೇ ಮಲ ವಿಸರ್ಜಿಸುವಾಗ ಏನೋ ಜಾರಿದಂತಾಗಿ, ಇಲ್ಲ ಕೆಳಗೆ ಸಿಗುವಂತಾಗಿ ಮಹಿಳೆಯರು ವೈದ್ಯರ ಬಳಿಗೆ ಬರುತ್ತಾರೆ.
ಮೂರನೇ ಹಂತ: ಇದರಲ್ಲಿ ಗರ್ಭಕೋಶವು ಯೋನಿದ್ವಾರದಿಂದ ಹೊರಗೆ ಬಂದಿರುತ್ತದೆ. ಮೊದಮೊದಲಿಗೆ ಚಿಕ್ಕದಿದ್ದು, ಬರಬರುತ್ತಾ ದೊಡ್ಡದಾಗುತ್ತ ಹೋಗುತ್ತದೆ ಮತ್ತು ಮಹಿಳೆಯರು ವೈದ್ಯರ ಬಳಿಗೆ ತಮ್ಮ ಈ ತೊಂದರೆಗಾಗಿ ಬರುತ್ತಾರೆ.

ಗರ್ಭಕೋಶದ ಜಾರಿಳಿತದ ವಿವಿಧ ಹಂತಗಳು 

ಗರ್ಭಕೋಶದ ಜಾರಿಳಿತದಿಂದಾಗುವ ತೊಂದರೆಗಳು
ಏನೋ ಕೆಳಗಡೆ ಬಂದ ಹಾಗೆ/ಜಾರಿದ ಹಾಗೆ ಅನ್ನಿಸುವುದು
ಹೆಚ್ಚು ಹೊತ್ತು ನಿಂತರೆ ಇಲ್ಲವೆ ಹೆಚ್ಚಾಗಿ ಓಡಾಡಿದರೆ ಗರ್ಭಕೋಶ ಜಾರುತ್ತದೆ ಮತ್ತು ಮಲಗಿದಾಗ ಇಲ್ಲವಾಗುತ್ತದೆ
ಬರುಬರುತ್ತಾ ಹೆಚ್ಚೆಚ್ಚು ಹೊರಬಂದು ದೊಡ್ಡದಾಗಿ, ನಡೆದಾಡಲು ತೊಂದರೆಯಾಗುತ್ತದೆ
ಬೆನ್ನು ನೋವು ಬರಬಹುದು
ಗರ್ಭಕೋಶದ ಜೊತೆ ಮೂತ್ರಕೋಶವು ಜಾರಿ ಆಗಾಗ ಮೂತ್ರ ಮಾಡಬೇಕೆಂದು ಅನ್ನಿಸಬಹುದು
ಕೈಯಿಂದ ಗರ್ಭಕೋಶವನ್ನು ಒಳಗೆ ದೂಡಿದರೆ ಮಾತ್ರ ಮೂತ್ರ ಮಾಡಲು ಆಗುವುದು
ಮೂತ್ರಕೋಶದಲ್ಲಿ ಮೂತ್ರ ಉಳಿದು ನಂಜಾಗಿ ಜ್ವರ ಆಗಾಗ ಬರಬಹುದು ಮತ್ತು ಪದೇ ಪದೇ ಉರಿಮೂತ್ರದ ಸಮಸ್ಯೆ ತಲೆದೋರಬಹುದು
ಮಲವಿಸರ್ಜನೆ ಮಾಡುವಾಗಲೂ ತೊಂದರೆಗಳಾಗಬಹುದು
ಗರ್ಭಕೋಶ ಹೊರಗೆ ಉಳಿದರೆ, ಅದರ ರಕ್ತ ಸಂಚಾರದಲ್ಲಿ ವ್ಯತ್ಯಯವಾಗಿ ಅದರ ಮೇಲೆ ಗಾಯ (ವ್ರಣ) ಆಗಬಹುದು. ಇದರಿಂದ ಬಿಳಿ ಮುಟ್ಟು ಇಲ್ಲವೇ ರಕ್ತಮಿಶ್ರಿತ ಬಿಳಿಸ್ರಾವ ಹೋಗಬಹುದು, ವಾಸನೆಯಿಂದ ಕೂಡಿರಬಹುದು
ಸಂಭೋಗ ಕ್ರಿಯೆಯಲ್ಲಿ ತೊಂದರೆಯುಂಟಾಗಬಹುದು

ಗರ್ಭಕೋಶ ಜಾರಿರುವುದನ್ನು ಮಹಿಳೆಯರು ಸುಲಭವಾಗಿ ಗುರುತಿಸಬಹುದು. ಗುರುತಿಸಿದ ತಕ್ಷಣ ವೈದ್ಯರ ಬಳಿಗೆ ಬಂದು ಚಿಕಿತ್ಸೆಗೊಳಪಡುವುದು ಒಳ್ಳೆಯದು ಇಲ್ಲದಿದ್ದರೆ ಅದು ಬರಬರುತ್ತಾ ಹೆಚ್ಚು ತೊಂದರೆ ಮಾಡಬಹುದು. ಹೆಚ್ಚು ವಯಸ್ಸಾದಂತೆ ಶಸ್ತ್ರ ಚಿಕಿತ್ಸೆ ಮಾಡಲು ಅನೇಕ ತೊಡಕುಗಳು ಎದುರಾಗಬಹುದು. ಅಧುನಿಕ ವೈದ್ಯ ರಂಗದಲ್ಲಿ ಅರವಳಿಕೆ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ಸುಧಾರಣೆಗಳಾಗಿರುವುದರಿಂದ ಯಾವುದೇ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು.

ವಜೈನಲ್ ಹಿಸ್ಟರೆಕ್ಟಮಿ (Vaginal Hysterectomy


ಯೋನಿಯ ಮೂಲಕವೇ ಶಸ್ತ್ರ ಚಿಕಿತ್ಸೆ ಮಾಡಿ, ಗರ್ಭಕೋಶವನ್ನು ತೆಗೆದುಹಾಕುವುದು ಮತ್ತು ಜಾರಿದ ಮೂತ್ರಕೋಶವನ್ನು ಅದರ ಸ್ಥಾನದಲ್ಲಿಟ್ಟು ತಂತು ಕಟ್ಟುಗಳನ್ನು ಬಿಗಿಗೊಳಿಸುವುದು. ಮಲಕೋಶವನ್ನು ಕೂಡ ತಂತುಕಟ್ಟುಗಳನ್ನು ಜೋಡಿಸಿ ಬಿಗಿಗೊಳಿಸುವುದು. ಇದನ್ನು ‘ವಜೈನಲ್ ಹಿಸ್ಟರೆಕ್ಟಮಿ’ ಎನ್ನುತ್ತೇವೆ. ‘ವಜೈನಲ್’ ಅಂದರೆ ‘ಯೋನಿ’ ಮೂಲಕ ‘ಹಿಸ್ಟರೆಕ್ಟಮಿ’ ಎಂದರೆ ‘ಗರ್ಭಕೋಶವನ್ನು ತೆಗೆಯುವುದು’ ಎಂದರ್ಥ. ಇದು 1 ಗಂಟೆಯಿಂದ 2-3 ಗಂಟೆಗಳ ಕಾಲ ಮಾಡುವ ಶಸ್ತ್ರಚಿಕಿತ್ಸೆ. ರೋಗಿಯು ಶಸ್ತ್ರಚಿಕಿತ್ಸೆಯ ನಂತರ 3-5 ದಿನಗಳ ಕಾಲ ಮಾತ್ರ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಹೊಲಿಗೆ ತೆಗೆಯುವ ಅವಶ್ಯಕತೆಯಿರುವುದಿಲ್ಲ. ನೋವು ಕೂಡ ಕಡಿಮೆಯಿರುತ್ತದೆ. ರೋಗಿಯು ಎದ್ದು ಬೇಗನೆ ತಿರುಗಾಡಬಹುದು. ಮೇಲೆ ಹೇಳಿದ ಸಮಸ್ಯೆಗಳೆಲ್ಲಾ ಶೇಕಡ 80 ರಷ್ಟು ಕಡಿಮೆಯಾಗಬಹುದು.

ಯೋನಿದ್ವಾರವನ್ನು ಕಿರಿದುಗೊಳಿಸುವುದರಿಂದ ಸಂಭೋಗ ಕ್ರಿಯೆಯು ಉತ್ತಮಗೊಳ್ಳುತ್ತದೆ. ಸ್ನಾಯುಗಳು, ತಂತುಕಟ್ಟುಗಳು ಬಲಹೀನವಾಗಿದ್ದರೆ ಮಾರುಕಟ್ಟೆಯಲ್ಲಿ ದೊರಕುವ ‘ಮೆಷ್’ (Meshಉಪಯೋಗಿಸಿ ಶಸ್ತ್ರ ಚಿಕಿತ್ಸೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. 

ಗರ್ಭಕೋಶ ಜಾರಿಳಿತವನ್ನು ತಪ್ಪಿಸುವ ಮುಂಜಾಗ್ರತಾ ಕ್ರಮಗಳು;
ಗರ್ಭಿಣಿಯಾಗಿರುವಾಗ ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ಮಾಡುವುದು ಒಳ್ಳೆಯದು
ಎಲ್ಲಾ ಹೆರಿಗೆಗಳನ್ನು ಅಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಮಾಡಿಸಿಕೊಳ್ಳಿ
ಎರಡು ಮಕ್ಕಳ ನಡುವೆ ಸಾಕಷ್ಟು ಅಂತರವಿರಲಿ (ಕನಿಷ್ಟ 3-5 ವರ್ಷಗಳು) 
ಗರ್ಭನಿರೋಧಕ ಗುಳಿಗೆ, ವಂಕಿ (ಕಾಪರ್ ‘ಟಿ’),  ನಿರೋಧ್ ಅನ್ನು ಬಳಸಿ ಮಕ್ಕಳ ನಡುವೆ ಅಂತರವಿರಿಸಿಕೊಳ್ಳಿ
ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳು ಬೇಡ. ಒಂದು ಇದ್ದರೂ ಸಾಕು
‘ಕೀಗಲ್‍ನ ವ್ಯಾಯಾಮ’ (Kegel’s exercise ಅಂದರೆ ಹೊರ ಜನನಾಂಗದ ಸ್ನಾಯುಗಳ ವ್ಯಾಯಾಮ. ಮೂತ್ರ ಬರುವಾಗ ತಡೆ, ತಡೆದು ಮಾಡುವುದು, ಸುಮ್ಮನೆ ಕುಳಿತಿರುವಾಗ ಕಟಿ ಪ್ರದೇಶದ ಸ್ನಾಯುಗಳನ್ನು ಕುಗ್ಗಿಸುವುದು ಮತ್ತು ಹಿಗ್ಗಿಸುವುದನ್ನು ಸುಮಾರು ಒಂದು ಬಾರಿಗೆ 10-20 ಸಲ ದಿನಕ್ಕೆ 10-20 ಸಲ ಮಾಡಬೇಕು. ಇದರಿಂದ ಆ ಭಾಗದ ಸ್ನಾಯುಗಳು, ತಂತುಗಳು ಗಟ್ಟಿಯಾಗಿ ಗರ್ಭಕೋಶ ಜಾರುವುದನ್ನು ತಡೆಗಟ್ಟುತ್ತದೆ. 



ಶಸ್ತ್ರಚಿಕಿತ್ಸೆ ಮಾಡಲು ಆಗದಿದ್ದಲ್ಲಿ, ಪೆಸ್ಸರಿ (Pessary ಅಥವಾ ‘ರಿಂಗ್’ (Ringಬಳೆಯಾಕಾರದ, ರಬ್ಬರಿನಿಂದ ತಯಾರಿಸಿದ ವಸ್ತುಗಳು. ಇದನ್ನು ಯೋನಿಯ ಮೂಲಕ ಒಳಗಡೆ ಸೇರಿಸಿ, ಗರ್ಭಕೋಶ ಜಾರದಂತೆ ನೋಡಿಕೊಳ್ಳಬಹುದು. ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಅದನ್ನು ತೆಗೆದು ಶುಭ್ರಗೊಳಿಸಿ ಮತ್ತೆ ಹಾಕಿಕೊಳ್ಳಬೇಕು. ಅಲ್ಲಿಯೇ ಬಿಟ್ಟರೆ ನಂಜಾಗಿ ಅಥವಾ ಆ ಜಾಗದಲ್ಲಿ ಗಾಯವಾಗಿ ತೊಂದರೆ ಆಗಬಹುದು.


ಶಸ್ತ್ರ ಚಿಕಿತ್ಸೆಯ ನ0ತರದ ಜಾರುವಿಕೆ (vault prolapse)

ಹಿಸ್ಟರೆಕ್ಟಮಿ ಮಾಡಿದ ನ0ತರವು ಯೋನಿಯು ಕೆಳಗೆ ಜಾರುವ ಸಾಧ್ಯತೆಗಳನ್ನು ತಳ್ಳಿಹಾಕುವ ಆಗಿಲ್ಲ. “ಮೆಷ್” ಉಪಯೋಗಿಸಿ ಶಸ್ತ್ರ ಚಿಕಿತ್ಸೆ ಮಾಡಿದರೆ ಈ ತೊಂದರೆ ಸ್ವಲ್ಪ ಕಡಿಮೆ. ಜೀವರಸಗಳ ಕೊರತೆಯೆ ಇದಕ್ಕೆ ಕಾರಣ. 


- ಡಾ ಪೂರ್ಣಿಮಾ. ಜೆ

No comments:

Post a Comment