Tuesday 9 May 2017

ಚಳವಳಿಗಳು - ಟ್ರಯಾಂಗಲ್ ಕಾರ್ಖಾನೆ ಬೆಂಕಿ ದುರಂತ ಮತ್ತು ಹೋರಾಟ





ನ್ಯೂಯಾರ್ಕ್‍ನ ಟ್ರಯಾಂಗಲ್ ಜವಳಿ ಕಾರ್ಖಾನೆ ಬೆಂಕಿ ದುರಂತ ಮತ್ತು ಹೋರಾಟ

ಮಹಿಳಾ ಕಾರ್ಮಿಕರ ಜೀವಂತ ದಹನ


ಒಂದು ಶತಮಾನದ ಹಿಂದೆ 1911ರ ಮಾರ್ಚ್ 25ರಂದು ನ್ಯೂಯಾರ್ಕ್‍ನ ಟ್ರಯಾಂಗಲ್ ಶರ್ಟ್‍ವೇಸ್ಟ್ (ರವಿಕೆ) ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ 146 ಯುವ ಜೀವಗಳನ್ನು ಬಲಿತೆಗೆದುಕೊಂಡು ವಿಶ್ವದಲ್ಲೇ ಅತ್ಯಂತ ಘೋರ ದುರಂತವೆಂದು ದಾಖಲಾಗಿದೆ. ಲಾಭ ಪಿಪಾಸುಗಳಾದ ಕೈಗಾರಿಕೋದ್ಯಮಿಗಳ ನಿರ್ಲಕ್ಷ್ಯದಿಂದಾದ ಈ ಅನಾಹುತ, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಭಾರತದಲ್ಲಿನ ಇಂದಿನ ಪರಿಸ್ಥಿತಿ ಅಕ್ಷರಶಃ ಅದನ್ನೇ ಹೋಲುತ್ತದೆ. ಕೈಗಾರಿಕೀಕರಣ ಆಧುನಿಕ ಸಮಾಜಕ್ಕೆ ಮುನ್ನುಡಿ ಬರೆದದ್ದು ಸತ್ಯವಾದರೂ, ಈ ಸಮಾಜದ ಸಂಪತ್ತನ್ನು ಸೃಜಿಸುತ್ತಿರುವ ಕಾರ್ಮಿಕರ ಅತ್ಯಂತ ದಯನೀಯ ಪರಿಸ್ಥಿತಿಗೂ ಕಾರಣವಾದದ್ದು ಒಂದು ವಿಡಂಬನೆಯೇ ಸರಿ. 
ಯಾವುದೇ ಕನಿಷ್ಠ ಭದ್ರತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಶೋಷಿಸುವ ಈ ಜವಳಿ ಕಾರ್ಖಾನೆಗಳನ್ನು ಸ್ವೆಟ್ ಶಾಪ್ಸ್ ಅಥವಾ ಬೆವರು ಅಂಗಡಿಗಳು ಎನ್ನುತ್ತಾರೆ. ನ್ಯೂಯಾರ್ಕ್‍ನ ಜವಳಿ ಕಾರ್ಖಾನೆಗಳಲ್ಲಿ ದುಡಿಯುವ ಸಾವಿರಾರು ಮಹಿಳಾ ಕಾರ್ಮಿಕರು ಅಲ್ಲಿ ತಮ್ಮ ಜೀವ ತೇದು ತೇದು ತಮ್ಮಕಾಲಕ್ಕೆ ಮುನ್ನವೇ ಸಾವಿಗೆ ಶರಣಾಗುವ ಪರಿಸ್ಥಿತಿ ಸ್ವಲ್ಪ ಬದಲಾದದ್ದು ಈ ಬೆಂಕಿ ಅನಾಹುತ ಎಡೆಮಾಡಿಕೊಟ್ಟ ಜನತೆಯ ಆಕ್ರೋಶ, ಪ್ರತಿಭಟನೆ, ಕಾರ್ಮಿಕ ಸಂಘಟನೆಗಳ ಒತ್ತಡ ಮುಂತಾದವುಗಳಿಂದಾಗಿ. ಅಂದಿನ ಆ ಭೀಕರ ಘಟನೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ವಲಸೆಗಾರ, ಬಡ ಹೆಣ್ಣುಮಕ್ಕಳ ಅಸಹಾಯಕತೆಯ ದುರ್ಬಳಕೆ
ನ್ಯೂಯಾರ್ಕ್‍ನ ಟ್ರಯಾಂಗಲ್ ಕಾರ್ಖಾನೆಯ ಬಹುತೇಕ ಕಾರ್ಮಿಕರು ಮಹಿಳೆಯರೇ. ಕೆಲವರ ವಯಸ್ಸು 15 ಅಷ್ಟೇ. ಹೆಚ್ಚಿನವರು ಯುರೋಪಿನ ಯಹೂದಿ ಹಾಗೂ ಇಟಲಿಯ ಅಕ್ರಮ ವಲಸೆಗಾರರು. ಜೀವನೋಪಾಯಕ್ಕೆ ತಮ್ಮ ಕುಟುಂಬದವರೊಂದಿಗೆ ಅಮೆರಿಕಾಗೆ ಬಂದಂಥ ಅವರಿಗೆ ಇಲ್ಲಿನ ಭಾಷೆ ಗೊತ್ತಿಲ್ಲ, ಈ ಸಂಸ್ಕೃತಿ ಹೊಸದು. ಇವರಂಥವರೇ ಅಲ್ಲವೆ ಶೋಷಣೆಯ ಸುಲಭ ಬಲಿಪಶುಗಳಾಗುವುದು; ಏಕೆಂದರೆ ಧ್ವನಿ ಎತ್ತಿದರೆ ಇರುವ ಕೆಲಸವನ್ನು ಕಳಕೊಳ್ಳುವಂಥ ಪರಿಸ್ಥಿತಿ. ಹಾಗಾಗಿಯೇ ಹೆಣ್ಣು ಮಕ್ಕಳು ತಮ್ಮ ಘನತೆ-ಗೌರವಗಳನ್ನು ಬಲಿಕೊಟ್ಟು, ಮಾಲೀಕರ ದೌರ್ಜನ್ಯ ಸಹಿಸಿಕೊಂಡು, ಎಷ್ಟೋ ಸಲ ಕಾರ್ಖಾನೆಗಳಲ್ಲಿ ಲೈಂಗಿಕ ದೌರ್ಜನ್ಯಗಳಿಗೂ ಬಲಿಯಾಗಿ ಮೌನವಾಗಿ, ತಲೆಬಗ್ಗಿಸಿ ಕೆಲಸಮಾಡಿಕೊಂಡು ಹೋಗುತ್ತಿದ್ದುದು. ಕಾರ್ಖಾನೆಗಳಲ್ಲಿ ದಿನಕ್ಕೆ 9 ಗಂಟೆಗಳ, ಶನಿವಾರ 7 ಗಂಟೆಗಳ ದುಡಿತ. ಸರಿಯಾಗಿ ಗಾಳಿ ಬೆಳಕುಗಳಿಲ್ಲದ ಕೊಠಡಿಗಳು, ಹೊಲಿಗೆ ಯಂತ್ರಗಳ ನಡುವೆ ಇಕ್ಕಟ್ಟಿನಲ್ಲಿಯೇ ಕುರಿಮಂದೆಯಂತೆ ತುಂಬಿಕೊಂಡೇ ಇವರ ಕೆಲಸ. ಅವರಿಗೆ ಬೆಂಕಿ ದುರಂತ ಘಟಿಸಿದಾಗ ಏನು ಮಾಡಬೇಕು ಎಂದು ನೀಡಬೇಕಾದ ತರಬೇತಿಯನ್ನು ಕೊಟ್ಟಿರಲಿಲ್ಲ. ಕನಿಷ್ಠ ವೇತನವನ್ನೂ ನೀಡದೆ ಇವರಿಂದ ಗರಿಷ್ಠ ಕೆಲಸ ತೆಗೆಯುತ್ತಿದ್ದ ಮಾಲೀಕರು ಅವರ ಭದ್ರತೆಯ ಕುರಿತು ಎಳ್ಳಷ್ಟೂ ಕಾಳಜಿ ವಹಿಸದ ಕಾರಣ ಈ ಭೀಕರ ದುರಂತ ಘಟಿಸಿದ್ದು.

“ಬಂಡವಾಳಿಗರಿಗೆ  ಮಹಿಳಾ ಕಾರ್ಮಿಕಳ ಶ್ರಮದ ಬಗ್ಗೆ ಆಸ್ಥೆ ಇರುವುದು ಅದು ಅಗ್ಗ ಎಂಬುದಕ್ಕೆ ಮಾತ್ರವಲ್ಲ, ಜೊತೆಗೆ ಮಹಿಳೆಯರು ಹೆಚ್ಚು ವಿಧೇಯರು ಎಂಬುದಕ್ಕಾಗಿ” ಎಂದು ಕ್ಲಾರಾ ಜೆಟ್‍ಕಿನ್ ಬರೆಯುತ್ತಾರೆ. 

25, ಮಾರ್ಚ್ 1911
ಕಾರ್ಖಾನೆ ಇದ್ದದ್ದು ನ್ಯೂಯಾರ್ಕ್‍ನ ಆಶ್ ಕಟ್ಟಡದ 8, 9, 10 ನೇ ಮಹಡಿಗಳಲ್ಲಿ. ಅಲ್ಲಿದ್ದುದು ಸುಮಾರು 500 ಕೆಲಸಗಾರರು, ಹೆಚ್ಚಿನವರು 15 ರಿಂದ 23 ವಯಸ್ಸಿನ ಮಹಿಳೆಯರು. ಕಾರ್ಖಾನೆಯ ಒಡೆಯರು ಮ್ಯಾಕ್ಸ್ ಬ್ಲಾಂಕ್ ಮತ್ತು ಐಸಾಕ್ ಹ್ಯಾರಿಸ್. ಇಲ್ಲಿ ಕಾರ್ಮಿಕ ಸಂಘಟನೆ ಇರಲಿಲ್ಲ.
ಅಂದು ಶನಿವಾರ, ಸಂಜೆ ಕೆಲಸದ ಅವಧಿ ಮುಗಿದು ಕಾರ್ಮಿಕರು ಮನೆಗೆ ಹೊರಡಲು ಸಿದ್ಧರಾಗುತ್ತಿದ್ದಂತೆ, 8ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲಿಂದ ಇಡೀ ಕಾರ್ಖಾನೆಯನ್ನು ವ್ಯಾಪಿಸಿತು. ಕಾರ್ಖಾನೆಯಿಂದ ಹೊರಹೋಗಲು 2 ದ್ವಾರಗಳಿದ್ದವು. ಅದರಲ್ಲಿ ಒಂದನ್ನು ಬೆಂಕಿ ಆವರಿಸಿತು. ಇನ್ನೊಂದನ್ನು ತೆಗೆಯಲು ಆಗದಂತೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕಾರ್ಮಿಕರು ಬಟ್ಟೆಯನ್ನು ಕದ್ದು ಹೊರಗೆ ಕಳಿಸದಂತೆ ತೆಗೆದುಕೊಂಡ ಮುನ್ನೆಚ್ಚರಿಕೆ ಅದು ! ಕದಿಯಬಹುದಾದ ಬಟ್ಟೆಯ ಬೆಲೆ ಎಷ್ಟು ಗೊತ್ತೇ - 10 ಸೆಂಟ್‍ಗಳು ! ಒಂದು ಲಿಫ್ಟ್ ಇತ್ತು. ಅದು ಕೆಲವರು ಪಾರಾಗಲು ನೆರವಾಯಿತಾದರೂ ಗಾಭರಿಯಿಂದ ಜಾಸ್ತಿ ಜನ ತುಂಬಿದ್ದರಿಂದ ಅದು ಕುಸಿದು ಹೋಯಿತು. ಅಲ್ಲಿನ ಖಾಲಿ ಸ್ಥಳದಲ್ಲಿ ಹಾರಿದವರು ಪ್ರಾಣ ಕಳೆದುಕೊಂಡರು. ಇದ್ದ ಒಂದು ಫೈರ್ ಎಸ್ಕೇಪ್ ಸರಿ ಇಲ್ಲದ ಕಾರಣ ಕುಸಿದುಹೋಯಿತು. 10ನೇ ಮಹಡಿಯಿಂದ ಕೆಲವರು ಟೆರೇಸ್‍ಗೆ ಹೋಗಿ ಪಾರಾಗುವುದು ಸಾಧ್ಯವಾಯಿತು. ಆದರೆ ಉಳಿದವರು ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡರು. ಅವರೆಲ್ಲ 9ನೇ ಮಹಡಿಯವರು. ಅವರು ಹತಾಶೆಯಿಂದ ಮುಚ್ಚಿದ ಬಾಗಿಲನ್ನು ಮತ್ತೆ ಮತ್ತೆ ಬಡಿದದ್ದು, ತೆರೆಯಲು ಪ್ರಯತ್ನಿಸುತ್ತಾ ಸೋತಿದ್ದು, ಬೆಂಕಿಯ ಜ್ವಾಲೆಗಳಿಗೆ ಆಹುತಿಯಾಗಿದ್ದು, ಇವೆಲ್ಲವನ್ನು ಪ್ರತ್ಯಕ್ಷದರ್ಶಿಗಳ ವರದಿ ವಿವರಿಸುತ್ತದೆ.
ಈ ದುರಂತದಲ್ಲಿ ಸತ್ತವರು 146. ಅದರಲ್ಲಿ 62 ಜನ ಬೆಂಕಿಯಿಂದ ತಪ್ಪಿಕೊಳ್ಳಲು 9ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಕಳಕೊಂಡರು. ಹೊರಗೆ ಸಹಾಯಕ್ಕೆ ಬಂದಿದ್ದ ಅಗ್ನಿಶಾಮಕ ದಳದವರ ಏಣಿಗಳು ಆ ಮಹಡಿಗಳನ್ನು ತಲುಪುವಷ್ಟು ಎತ್ತರವಿರಲಿಲ್ಲ. ಹಾರುವವರ ರಕ್ಷಣೆಗೆ ಅವರು ಹಿಡಿದು ನಿಂತಿದ್ದ ನೆಟ್‍ಗಳು ಗಟ್ಟಿ ಇಲ್ಲದೆ ಅದನ್ನು ಒಡೆದು ಕೆಳಗೆ ಫುಟ್‍ಪಾತ್ ಮೇಲೆ ಬಿದ್ದವರು ತಲೆ ಒಡೆದುಕೊಂಡರು, ಅಪ್ಪಚ್ಚಿಯಾದರು. ಕೆಳಗೆ ನಿಂತ ಜನ ಅಸಹಾಯಕರಾಗಿ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆಗಿಂತ ಈ ಸಾವೇ ಮೇಲು ಎಂದು ಯುವಕನೊಬ್ಬ ಹಲವಾರು ಯುವತಿಯರನ್ನು ಹೊರಗೆ ಜಿಗಿಯಲು ನೆರವಾದ, ಕೊನೆಗೆ ತಾನೂ ಜಿಗಿದ. ಟಪ್ ಟಪ್ ಎಂದು ಈ ದೇಹಗಳು ಕೆಳಗೆ ಬೀಳುತ್ತಿದ್ದದು ಹೃದಯವಿದ್ರಾವಕವಾಗಿತ್ತು ಎಂದು ನೋಡಿದವರು ವೇದನೆಯಿಂದ ದಾಖಲಿಸಿದ್ದಾರೆ. ಸುಟ್ಟು ಹೋದ ಕಾರ್ಖಾನೆಯಲ್ಲಿ ಸುಟ್ಟು ಕರಕಲಾದ ಮೂಳೆ ಚಕ್ಕಳದ ದೇಹಗಳು ಹೊಲಿಗೆ ಯಂತ್ರವನ್ನು ಬಳಸಿ ಬಿದ್ದಿದ್ದವು. ಅಗ್ನಿಶಾಮಕ ದಳದವರು ಸುರಿಸಿದ ನೀರು ಕೆಳಗೆ ಹರಿದಾಗ ಅದು ರಕ್ತಭರಿತ ಕಾಲುವೆಯಾಗಿತ್ತು.

ಸುಟ್ಟು ಕರಕಲಾದವರು
ಸತ್ತವರ ಸಮೂಹ ಸಮಾಧಿ ಮಾಡಲಾಯಿತು, ಅಲ್ಲಿ ಒಂದು ಸ್ಮಾರಕವೂ ಬಂತು. ಬದುಕುಳಿದು ಗಾಯಗೊಂಡ 70 ಕಾರ್ಮಿಕರು  ಚೇತರಿಸಿಕೊಳ್ಳಲು ಬಹಳ ಕಾಲವೇ ಹಿಡಿಯಿತು. ಮಾನಸಿಕವಾಗಿ-ದೈಹಿಕವಾಗಿ ಅವರನ್ನು ಕಾಡಿಸಿದ ಗಾಯಗಳವು. ಸಾವನ್ನು ಅಷ್ಟು ಹತ್ತಿರದಿಂದ ನೋಡಿದ್ದು, ಆಗಿನ ಆತಂಕ, ಹತಾಶೆ, ಹತ್ತಿರದವರನ್ನು ಕಳೆದುಕೊಂಡಿದ್ದು, ಇವೆಲ್ಲಾ ಮಾಯುವ ಗಾಯಗಳೇ? 
ಯಾರು ಬದುಕಿದರೇನು? ಯಾರು ಸತ್ತರೇನು ? ಮಾಲೀಕರಿಗೆ ಅದರಿಂದೇನು !
ಸತ್ತವರಂತೂ ಹೋದರು, ಎಲ್ಲ ಕಷ್ಟಗಳಿಂದ ಪಾರಾಗಿ ! ಆದರೆ ಬದುಕುಳಿದು ಗಾಯಗೊಂಡವರ ಗತಿ ? ಮಾಲೀಕರೂ, ಸರ್ಕಾರವೂ ಅವರ ನೋವಿಗೆ ಸ್ಪಂದಿಸಲಿಲ್ಲ. ಕೊನೆಗೆ ವಿವಿಧ ಕಾರ್ಮಿಕ ಸಂಘಟನೆಗಳು, ಇತರ ಸಂಘಟನೆಗಳು 30000 ಡಾಲರ್ ಹಣ ಸಂಗ್ರಹಿಸಿ ಅವರ ನೆರವಿಗೆ ಧಾವಿಸಿದವು. ಅಕಸ್ಮಿಕದ ಬಳಿಕ ತಮ್ಮ ದೇಶಗಳಾದ ರಷ್ಯಾ, ಇಟಲಿಗೆ ತೆರಳಿದವರಿಗೂ ಧನ ಸಹಾಯ ನೀಡಲಾಯಿತು;  ವಾರ ವಾರ ನಿವೃತ್ತಿ ವೇತನ ನೀಡಲಾಯಿತು; ವಿವಿಧ ಆಶ್ರಯಧಾಮಗಳಲ್ಲಿ ಆಶ್ರಯ ಪಡೆದ ಮಹಿಳಾ ಕಾರ್ಮಿಕರ, ಮಕ್ಕಳ ಜವಾಬ್ದಾರಿ ನಿರ್ವಹಿಸಲಾಯಿತು. ಗಾಯಗಳಿಂದ ಗುಣಮುಖರಾದ ಕಾರ್ಮಿಕರಿಗೆ ಕೆಲಸ ಮತ್ತು ವಾಸಸ್ಥಳ ಹುಡುಕುವ ಕೆಲಸ ಮಾಡಲಾಯಿತು. ಸರ್ಕಾರ ಮಾಡಬೇಕಾದ್ದನ್ನು ಸ್ವಯಂಸೇವಕ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು ಮಾಡಬೇಕಾದ್ದು ಎಂಥ ದುರಂತ ! 
ಪ್ರತಿಭಟನೆಯ ಮಹಾಪೂರ
ಈ ದುರಂತ ನಗರದಲ್ಲಿ ಒಂದು ಶೋಕದ ವಾತಾವರಣವನ್ನು ಸೃಷ್ಟಿಸಿತು. ಅಂತರರಾಷ್ಟ್ರೀಯ ಮಹಿಳಾ ಜವಳಿ ಕಾರ್ಮಿಕರ ಸಂಘಟನೆ ( ಐಎಲ್ ಜಿ ಡಬ್ಲ್ಯು ಯು)ಯ ಆದೇಶದ ಮೇರೆಗೆ ಮಾರ್ಚ್ 29ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಸಂಘಟಿತವಾಯಿತು. ಪ್ರಾರ್ಥನಾ ಸ್ಥಳಗಳಾದ ಚರ್ಚ್, ಸಿನಗಾಗ್ (ಯಹೂದಿಗಳ ದೇಗುಲ) ಗಳಿಂದ ಸಹಸ್ರ ಸಹಸ್ರ ಜನರು ಬೀದಿಗಿಳಿದು ಸುರಿವ ಮಳೆಯಲ್ಲಿ ಮುನ್ನಡೆದರು. ತಮ್ಮ ಬೆವರು - ರಕ್ತ ಸುರಿಸಿ ದುಡಿಯುವ ಜನರ ಕುರಿತು, ಅವರನ್ನು ಬಳಸಿ ಕೋಟ್ಯಾಧೀಶರಾಗಿರುವ ಮಾಲೀಕರ ಪಾತಕೀ ನಿರ್ಲಕ್ಷ್ಯ, ಅವರ ದುರಾಶೆ ಬಗ್ಗೆ ಅಲ್ಲಿ ಆಕ್ರೋಶ ಮಡುಗಟ್ಟಿತ್ತು; ನ್ಯಾಯಕ್ಕಾಗಿ ಆಗ್ರಹವಿತ್ತು; ಕಾರ್ಮಿಕರ ಭದ್ರತೆಗಾಗಿ ಒತ್ತಾಯವಿತ್ತು. ಪಾತಕಿ ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಎಲ್ಲರೂ ಒಕ್ಕೊರಲಿನಿಂದ ಚೀರಿ ಚೀರಿ ಹೇಳಿದರು. ಪ್ರತ್ಯಕ್ಷದರ್ಶಿಗಳ ವರದಿ ಪತ್ರಿಕೆಗಳಲ್ಲಿ ಬಂದು ಜನರನ್ನು ಭಾವಾವೇಶಗೊಳಿಸಿತು. ಸಂಘಟನೆಗಳ ನಾಯಕರ ಭಾಷಣ ಜನರನ್ನು ಬಡಿದೆಬ್ಬಿಸಿತು.

ಪ್ರತಿಭಟನೆಯ ಮಹಾಪೂರ
ಕಾರ್ಮಿಕರ ಆಕ್ರಂದನಕ್ಕೆ ಕಿವುಡಾದ ನ್ಯಾಯದೇಗುಲ
ನ್ಯಾಯದೇವತೆ ನಿಷ್ಪಕ್ಷಪಾತಿ ಎನ್ನುವುದುಂಟು. ಆದರೆ ಆಕೆ ಉಳ್ಳವರ, ಮಾಲೀಕರ ಪರ ಎನ್ನುವುದು ಬಹಳಷ್ಟು ಸಾರಿ ಸಾಬೀತಾಗಿದೆ. ಬಂಡವಾಳಶಾಹಿ ವ್ಯವಸ್ಥೆಯ ಭದ್ರಕೋಟೆಯಾದ ಅಮೆರಿಕಾದಲ್ಲಿ ನ್ಯಾಯ ಮಾಲೀಕರ ವಿರುದ್ಧ ಹೋಗಲು ಸಾಧ್ಯವೇ ? ಈ ಪ್ರಕರಣ ಇದರ ಜ್ವಲಂತ ಸಾಕ್ಷಿ.
ಕಾರ್ಖಾನೆಗಳಲ್ಲಿ ಬೆಂಕಿ ಆಕಸ್ಮಿಕ ನಿರ್ವಹಿಸಲು ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ, ಕಾರ್ಮಿಕರಿಗೆ ಈ ಕುರಿತು ಯಾವುದೇ ತರಬೇತಿ ನೀಡಿರಲಿಲ್ಲ, ಫೈರ್ ಎಸ್ಕೇಪ್ ಸುಸ್ಥಿತಿಯಲ್ಲಿರಲಿಲ್ಲ, ಅವರು ಪಾರಾಗುವ ಒಂದೇ ದ್ವಾರಕ್ಕೂ ಬೀಗ ಜಡಿದಿತ್ತು ಎಂಬುದೆಲ್ಲವೂ ಹಗಲು ಬೆಳಕಿನಷ್ಟೇ ಸತ್ಯವಾಗಿದ್ದರೂ ನ್ಯಾಯಾಲಯಕ್ಕೆ ಎಲ್ಲಕ್ಕೂ ಸಾಕ್ಷಿ ಬೇಕು ತಾನೆ ! ಸಾಕ್ಷಿಗಳೂ ಇದ್ದರು, ಕೋರ್ಟಿಗೆ ಬಂದು ಎಲ್ಲ ವಿವರಗಳನ್ನು ಕೊಟ್ಟರು. ಆದರೆ ಅವರನ್ನು ಮಾಲೀಕರ ಪರ ವಕೀಲರು ಯದ್ವಾತದ್ವಾ ಪಾಟಿ ಸವಾಲಿಗೆ ಒಳಪಡಿಸಿ ಸುಳ್ಳುಗಾರರೆಂದು ನಿರೂಪಿಸಿಬಿಟ್ಟರು. ಪಾಪ, ಓದು ಬರಹವಿಲ್ಲದ ಅಮಾಯಕ ಹುಡುಗಿಯರು ಆ ತಜ್ಞ ವಕೀಲರ ಮುಂದೆ ಯಾವ ಲೆಕ್ಕ ? ಕೊನೆಗೆ ಮಾಲೀಕರು ಬಿಡುಗಡೆಯಾದರು ! ನೂರಾರು ಜನರ ಮಾರಣಹೋಮ, ಚಿತ್ರಹಿಂಸೆಗೆ ಕಾರಣಿಭೂತರಾದವರು ಯಾವುದೇ ಶಿಕ್ಷೆ ಇಲ್ಲದೆ ಬಚಾವಾದರು. ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ನೊಂದ ಕುಟುಂಬದವರು, ಸಾರ್ವಜನಿಕರು “ನ್ಯಾಯ ! ಎಲ್ಲಿದೆ ನ್ಯಾಯ ?” ಎಂದು ಆಕ್ರೋಶ ವ್ಯಕ್ತಪಡಿಸಿದರು. 23 ವೈಯಕ್ತಿಕ ಪ್ರಕರಣಗಳಲ್ಲಿ, ನೊಂದವರು ಮತ್ತೆ ಮಾಲೀಕರ ವಿರುದ್ಧ ಸಿವಿಲ್ ಕಟ್ಲೆ ನಡೆಸಿದಾಗ, 3 ವರ್ಷಗಳ ಬಳಿಕ ಅವು ಇತ್ಯರ್ಥವಾಗಿ ಅವರಿಗೆಲ್ಲ ಪರಿಹಾರ ದೊರಕಿತು. ಎಷ್ಟು ಗೊತ್ತೇ ? ಸತ್ತ ಪ್ರತಿ ಒಬ್ಬರಿಗೂ 75 ಡಾಲರ್ ! ಜೀವದ ಬೆಲೆ 
ಅಷ್ಟು!! ಇದು ಅವರ ಒಂದು ವಾರದ ಸಂಬಳವಾಗಿದ್ದು ಅವರಿಗೆ ಒಂದು ವಾರದ ಸಂಬಳ ಸಹಿತ ರಜೆ ಕೊಡುವಂತಿತ್ತು ಎಂದು ಒಬ್ಬರು ಉದ್ಗಾರವೆಸಗಿದ್ದಾರೆ. ಆದರೆ ಮಾಲೀಕರಿಗೆ ವಿಮಾ ಕಂಪೆನಿಯವರು, ಅವರು ವರದಿ ಮಾಡಿದ ನಷ್ಟಕ್ಕಿಂತ 60000 ಡಾಲರ್ ಹೆಚ್ಚಿಗೆ ಹಣ ಕೊಟ್ಟರು ಎನ್ನಲಾಗಿದೆ !

ಪ್ರತಿಭಟನೆಯ ಫಲಶ್ರುತಿ - ಬಿಗಿಗೊಂಡ ಕಾನೂನು
ಈ ಬೃಹತ್ ದುರಂತ ಪೂರ್ತಿ ವ್ಯರ್ಥವಾಗಲಿಲ್ಲ ಎಂಬುದು ಅಲ್ಲಿಯವರಿಗೆ ನೆಮ್ಮದಿ ತಂದ ಸಂಗತಿ. ವಿವಿಧ ಸಂಘಟನೆಗಳ ಪ್ರತಿಭಟನೆ ಕಾರ್ಮಿಕರ ಭದ್ರತೆಯ ಕುರಿತು ಈಗಾಗಲೇ ಇರುವ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಮತ್ತು ಹೊಸ ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕಾರ್ಮಿಕರ ಪರಿಸ್ಥಿತಿ ಕೆಲ ಮಟ್ಟಿಗೆ ಸುಧಾರಿಸಿತು. ನಿಯಮಿತವಾಗಿ ಕಾರ್ಖಾನೆಗಳ ಭದ್ರತಾ ಕ್ರಮಗಳ ತಪಾಸಣೆ ನಡೆದು ಕೆಲವೆಡೆಯಂತೂ ಅವು ಜಾರಿಯಾದವು.

1909ರಲ್ಲಿ ಇದೇ ಕಾರ್ಖಾನೆಯಲ್ಲಿ ಉತ್ತಮ ಕೆಲಸದ ಪರಿಸ್ಥಿತಿಗಾಗಿ ಆಗ್ರಹಿಸಿ ಕಾರ್ಮಿಕರು ಮುಷ್ಕರ ನಡೆಸಿದಾಗ ಗೂಂಡಾಗಳನ್ನು ಕರೆಸಿ ಅವರನ್ನು ಹೊಡೆಸಲಾಗಿತ್ತು, ಅವರನ್ನು ಜೈಲಿಗೆ ಅಟ್ಟಲಾಗಿತ್ತು. ಈ ವಲಸೆಗಾರ ಅಸಹಾಯ ಯುವತಿಯರು ದಿಕ್ಕೆಟ್ಟಾಗ ಅವರಿಗೆ ನೆರವಾಗಿದ್ದು ಮಹಿಳಾ ಜವಳಿ ಕಾರ್ಮಿಕರ ಸಂಘಟನೆ ಐ ಎಲ್ ಜಿ ಡಬ್ಲು ಯು. ಈಗ ಮತ್ತೆ 1911 ರಲ್ಲಿ ಈ ಮಹಿಳೆಯರು ಒಗ್ಗೂಡಿದರು, ಸಂಘಟನೆ ಬಲಪಡಿಸಿದರು. ತಮ್ಮ ಬೇಡಿಕೆಗಳನ್ನು ಸಂಘಟನೆ ಮೂಲಕ ಮಾತ್ರ ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಅವರು ಮನಗಂಡರು.
ಜೊತೆಗೆ ಈ ಪ್ರಕರಣ ಇಡೀ ನ್ಯೂಯಾರ್ಕ್ ನಗರದ ಮನಸಾಕ್ಷಿಯನ್ನು ಕದಡಿತು. ಇದು ಒಂದು ಪ್ರತ್ಯೇಕ, ಅಪರೂಪದ ಪ್ರಕರಣವಾಗಿರಲಿಲ್ಲ. ಪ್ರತಿವಾರ ಹಲವಾರು ಅಕಸ್ಮಿಕಗಳಲ್ಲಿ ಈ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ಪ್ರತಿವರ್ಷ ಸಾವಿರಾರು ಜನ ಅಂಗಾಂಗ ಕಳೆದುಕೊಂಡು ಊನವಾಗುವುದು ಸಾಮಾನ್ಯವೇ! ಮಾಲೀಕರಿಗೆ ಅವರ ಹಣ,ಆಸ್ತಿಯ ಶೇಖರಣೆ ಕಾರ್ಮಿಕರ ಪ್ರಾಣಕ್ಕಿಂತ ಮಿಗಿಲು, ಪವಿತ್ರ. ಕಾರ್ಮಿಕ ಸಂಘಟನೆಗಳು ಇವನ್ನೆಲ್ಲಾ ಬಯಲಿಗಳೆದು ಜನರ ಅಂತರಾತ್ಮಕ್ಕೆ ಕರೆ ನೀಡಿದವು. ನೊಂದವರಿಗೆ ದೇಣಿಗೆ ನೀಡುವುದಷ್ಟೇ ಸಾಲದು. ಕಾರ್ಮಿಕರ ಭದ್ರತೆಗಾಗಿ, ಶೋಷಣೆ ವಿರುದ್ಧ ಆಂದೋಳನ ಅವಶ್ಯ ಎಂದು ಸಾರಿ ಹೇಳಿದವು, ಕಾರ್ಮಿಕ ಸಂಘಟನೆಗಳು ಬಲಿಷ್ಥವಾದವು.
ಈ ಬೆಂಕಿ ಆಕಸ್ಮಿಕದ ನಂತರ 1911ರ ಅಕ್ಟೋಬರ್ 14ರಂದು ನ್ಯೂಯಾರ್ಕ್‍ನಲ್ಲಿ ಭದ್ರತಾ ಎಂಜಿನಿಯರ್‍ಗಳ ಅಮೆರಿಕನ್ ಸೊಸೈಟಿ ಸಂಸ್ಥೆ ಜನ್ಮ ತಳೆಯಿತು. ಶ್ರಮಿಕರ ಹಕ್ಕುಗಳಿಗಾಗಿ ಹೋರಾಟಗಳು ಮುಂದುವರೆದವು. 

    - ಡಾ. ಸುಧಾ  ಕಾಮತ್






No comments:

Post a Comment