Tuesday 9 May 2017

ಅನುವಾದಿತ ಕಥೆ - ಧಿಕ್ಕಾರ - ಪ್ರೇಮ್‍ಚಂದ್


                                            
ಪ್ರೇಮ್ ಚಂದ್ 
                                        
(1)
     ಅನಾಥೆ ಹಾಗೂ ವಿಧವೆ ಮಾನಿಗೆ ಜೀವನದಲ್ಲಿ ಈಗ ಅಳುವುದರ ವಿನಃ ಬೇರೇನೂ ದಾರಿಯಿರಲಿಲ್ಲ.  ಆವಳಿಗೆ ಐದು ವರ್ಷವಿದ್ದಾಗ ತಂದೆಯ ದೇಹಾಂತ್ಯವಾಯಿತು.  ತಾಯಿ ಹೇಗೋ ಮಾಡಿ ಆಕೆಯನ್ನು ಬೆಳೆಸಿದರು.  16ನೇ ವರ್ಷದಲ್ಲಿ ನೆರೆಹೊರೆಯವರ ನೆರವಿನಿಂದ ಆಕೆಯ ವಿವಾಹವೂ ನಡೆಯಿತು. ಆದರೆ ವರ್ಷದೊಳಗೆ ತಾಯಿ ಮತ್ತು ಪತಿ ಇಬ್ಬರೂ ತೀರಿಕೊಂಡರು. ಇಂತಹ ವಿಪತ್ತಿನ ಸಮಯದಲ್ಲಿ ಅವಳಿಗೆ ಆಶ್ರಯ ಪಡೆಯಲು ತನ್ನ ಚಿಕ್ಕಪ್ಪ ವಂಶಿಧರರ ಹೊರತಾಗಿ ಬೇರಿನ್ಯಾರೂ ಕಂಡು ಬರಲಿಲ್ಲ.  
ವಂಶೀಧರರ ಇಲ್ಲಿಯವರೆಗಿನ ವ್ಯವಹಾರದಿಂದ ಅಲ್ಲಿ ಶಾಂತಿಯಿಂದ ಇರುವ ಆಶೆಯಂತೂ ಇರಲಿಲ್ಲ.  ಆದರೆ ಅವಳು ಎಲ್ಲವನ್ನೂ ಸಹಿಸಲು, ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು. ಅವಳು ಬೈಗಳು, ನಿಂದೆ, ಹೊಡೆತ ಎಲ್ಲವನ್ನೂ ಸಹಿಸಬಲ್ಲಳು. ಆದರೆ ಅಲ್ಲಿದ್ದರೆ ಯಾರೂ ಅವಳನ್ನು ಸಂದೇಹದ ದೃಷ್ಟ್ಠಿಯಿಂದ ನೋಡಲಾರರು, ಅವಳ ಮೇಲೆ ಸುಳ್ಳು ಆರೋಪ ಹೊರಿಸಲಾರರು, ಕಾಮುಕರಿಂದ, ನೀಚರಿಂದ ಅವಳ ರಕ್ಷಣೆ ಆಗುವುದು. ವಂಶೀಧರರು ಕುಲಮರ್ಯಾದೆ ರಕ್ಷಿಸುವ ಕಾರಣದಿಂದ ಮಾನಿಯ ಯಾಚನೆಯನ್ನು ನಿರಾಕರಿಸಲಾರದೆ ಹೋದರು.
ಆದರೆ ಈ ಮನೆಯಲ್ಲಿ ಬಹಳ ದಿನ ನಿಭಾಯಿಸಲಾಗದೆಂದು ಮಾನಿಗೆ ನಾಲ್ಕಾರು ತಿಂಗಳುಗಳಲ್ಲೇ ತಿಳಿದುಹೋಯಿತು. ಅವಳು ಮನೆಯ ಎಲ್ಲಾ ಕೆಲಸ ಮಾಡುತ್ತಿದ್ದಳು, ಎಲ್ಲರೂ ಕುಣಿಸಿದ ಹಾಗೆ ಕುಣಿಯುತ್ತಿದ್ದಳು. ಎಲ್ಲರನ್ನೂ ಸಂತೋಷವಾಗಿರಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಏಕೋ ಚಿಕ್ಕಮ್ಮ, ಚಿಕ್ಕಪ್ಪ, ಇಬ್ಬರಿಗೂ ಅವಳನ್ನು ಕಂಡರೆ ಹೊಟ್ಟೆಉರಿ. 
ಅವಳು ಬಂದೊಡನೆ ಅಡುಗೆಯವಳನ್ನು ಬಿಡಿಸಿದ್ದಾಯ್ತು. ಹೊರಗೆಲಸಕ್ಕೆ ಒಬ್ಬ ಆಳಿದ್ದ. ಅವನನ್ನೂ ಮನೆಗೆ ಕಳುಹಿಸಿದ್ದಾಯ್ತು. ಮಾನಿಯ ಮೇಲೆ ಇಷ್ಟು ಹೊರೆ ಹೊರಿಸಿದರೂ ಯಾಕೋ ಅವಳ ಚಿಕ್ಕಮ್ಮ, ಚಿಕ್ಕಪ್ಪ ಅವಳ ಮೇಲೆ ಮುನಿಸಿಕೊಂಡೇ ಇರುತ್ತಿದ್ದರು. ಚಿಕ್ಕಪ್ಪನ ಮಗಳು ಲಲಿತಾ ಸಹ ಮಾತುಮಾತಿಗೆ ನಿಂದಿಸುತ್ತಿದ್ದಳು.
ಇಡೀ ಮನೆಯಲ್ಲಿ ಅವಳ ಚಿಕ್ಕಪ್ಪನ ಮಗ ಗೋಕುಲನಿಗೆ ಮಾತ್ರ ಅವಳ ಬಗ್ಗೆ ಸಹಾನುಭೂತಿ ಇತ್ತು. ಅವನ ಮಾತಿನಲ್ಲಿ ಮಾತ್ರ ಸ್ವಲ್ಪ ಸ್ನೇಹ, ಸ್ವಲ್ಪ ಆತ್ಮೀಯತೆ ದೊರಕುತ್ತಿದ್ದವು. ಅವನಿಗೆ ತನ್ನ ತಾಯಿಯ ಸ್ವಭಾವ ಗೊತ್ತಿತ್ತು.  ಅವನೇನಾದರೂ ತಾಯಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಮಾಡಿದ್ದಲ್ಲಿ, ಅಥವಾ ಬಹಿರಂಗವಾಗಿ ಮಾನಿಯ ಪಕ್ಷ ವಹಿಸಿದ್ದಲ್ಲಿ ಮಾನಿಗೆ ಆ ಮನೆಯಲ್ಲಿ ಒಂದು ಘಳಿಗೆ ಸಹ ಇರುವುದು ಕಠಿಣವಾಗಿ ಬಿಡುವುದು. ಹಾಗಾಗಿ ಅವನ ಸಹಾನುಭೂತಿ ಮಾನಿಗೆ ಸಾಂತ್ವನ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. 
ಅವನು ಹೇಳುತ್ತಿದ್ದ – ‘ತಂಗಿ, ನನಗೆಲ್ಲಾದರೂ ನೌಕರಿ ಸಿಗಲಿ, ನಂತರ ನಿನ್ನ ಕಷ್ಟಗಳು ಕೊನೆಗೊಳ್ಳುವುವು.  ಆಗ ನಿನ್ನನ್ನು ತಿರಸ್ಕಾರದಿಂದ ಕಾಣುವವರಾರೆಂದು ನಾನೂ ನೋಡಿಯೇ ಬಿಡುತ್ತೇನೆ.  ನನ್ನ ಶಿಕ್ಷಣ ಮುಗಿಯುವ ತನಕ ಮಾತ್ರ ನಿನಗೆ ಕೆಟ್ಟದಿನಗಳು’. ಮಾನಿ ಈ ಸ್ನೇಹ ತುಂಬಿದ ಮಾತುಗಳಿಂದ ಪುಲಕಿತಳಾಗುತ್ತಿದ್ದಳು.  ಹಾಗೂ ಅವಳ ಶರೀರದ ಕಣಕಣ ಗೋಕಲನಿಗೆ ಆಶೀರ್ವಾದ ನೀಡುತ್ತಿದ್ದವು.
ಇಂದು ಲಲಿತಾಳ ವಿವಾಹ. ಬೆಳಗ್ಗಿನಿಂದಲೇ ಅತಿಥಿಗಳು ಬರಲಾರಂಭಿಸಿದ್ದಾರೆ. ಆಭರಣಗಳ ನಾದ ಮನೆಯಲ್ಲಿ ಕೇಳಿಸುತ್ತಿದೆ. ಮಾನಿಗೂ ಅತಿಥಿಗಳನ್ನು ಕಂಡು ಸಂತೋಷವಾಗುತ್ತಿದೆ.  ಅವಳ ಮೇಲೆ ಯಾವ ಆಭರಣವೂ ಇಲ್ಲ, ಅವಳಿಗೆ ಒಳ್ಳೆಯ ಬಟ್ಟೆಗಳನ್ನು ಕೊಟ್ಟಿಲ್ಲ, ಆದರೂ ಅವಳ ಮುಖ ಪ್ರಸನ್ನವಾಗಿದೆ.
ಅರ್ಧರಾತ್ರಿ ಕಳೆದಿತ್ತು.  ವಿವಾಹದ ಮುಹೂರ್ತ ಸಮೀಪಿಸಿತ್ತು.  ವರನ ಕಡೆಯಿಂದ ವಧುವಿಗಾಗಿ ಆಭೂಷಣಗಳು ಬಂದವು.  ಎಲ್ಲಾ ಸ್ತ್ರೀಯರು ಉತ್ಸಕುತೆಯಿಂದ ಎಲ್ಲ ವಸ್ತುಗಳನ್ನು ನೋಡಲಾರಂಭಿಸಿದರು. ಲಲಿತಾಳಿಗೆ ವಸ್ತ್ರಾಭರಣಗಳನ್ನು ತೊಡಿಸಲಾರಂಭಿಸಿದರು. ಮಾನಿಗೂ ವಧುವನ್ನು ನೋಡುವ ಉತ್ಕಟ ಇಚ್ಛೆ ಆಯಿತು. ನಿನ್ನೆಯವರೆಗೆ ಬಾಲಿಕೆಯಾಗಿದ್ದವಳನ್ನು ವಧುವಾಗಿ ನೋಡುವ ಹಂಬಲವನ್ನು ತಡೆದುಕೊಳ್ಳಲಾರದೆ ಹೋದಳು. ನಗುತ್ತಾ ಅವಳು ಕೋಣೆ ಪ್ರವೇಶಿಸಿದಳು.  ಕೂಡಲೇ ಚಿಕ್ಕಮ್ಮ ಗದರಿದಳು – ‘ನಿನ್ನನ್ಯಾರು ಇಲ್ಲಿ ಕರೆದವರು? ಹೋಗಾಚೆ!’
ಮಾನಿ ಬಹಳ ಯಾತನೆಗಳನ್ನು ಸಹಿಸಿದ್ದಳು; ಆದರೆ ಇಂದಿನ ನಿಂದೆ ಅವಳ ಎದೆಯಲ್ಲಿ ಬಾಣದಂತೆ ಚುಚ್ಚಿಕೊಂಡಿತು.  ಅವಳ ಮನಸ್ಸು ಅವಳನ್ನು ನಿಂದಿಸಿತು – ‘ನಿನ್ನ ತಲೆಹರಟೆಗೆ ಇದೇ ಪುರಸ್ಕಾರ. ಇಲ್ಲಿ ಮುತ್ತೈದೆಯರ ಮಧ್ಯೆ ನೀನು ಹೋಗುವ ಅವಶ್ಯಕತೆ ಏನಿತ್ತು?’. ಅವಳು ಮೈ ಮುದುಡಿಕೊಂಡು ಕೋಣೆಯಾಚೆ ಬಂದಳು ಹಾಗೂ ಏಕಾಂತದಲ್ಲಿ ಕುಳಿತು ಅಳಲು ಮಹಡಿ ಹತ್ತಲಾರಂಭಿಸಿದಳು.  
ಮೆಟ್ಟಿಲ ಮೇಲೆ ಅವಳಿಗೆ ಇಂದ್ರನಾಥನ ಭೇಟಿ ಆಯಿತು.  ಇಂದ್ರನಾಥ ಗೋಕುಲನ ಸಹಪಾಠಿ ಹಾಗೂ ಪರಮಮಿತ್ರ.  ಅವನೂ ಆಹ್ವಾನದ ಮೇರೆಗೆ ಅಲ್ಲಿ ಬಂದಿದ್ದ. ಗೋಕುಲನನ್ನು ಹುಡುಕುತ್ತಾ ಮೇಲೆ ಬಂದಿದ್ದ.  ಅವನು ಮಾನಿಯನ್ನು ಒಂದೆರಡು ಬಾರಿ ನೋಡಿದ್ದ.  ಅವಳಿಗೆ ಅಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಅವನಿಗೆ ಅರಿವಿತ್ತು. ಚಿಕ್ಕಮ್ಮನಾಡಿದ ಮಾತು ಅವನ ಕಿವಿಗೂ ಬಿದ್ದಿತು. ಮಾನಿ ಮೇಲೆ ಹೋಗುತ್ತಿರುವುದನ್ನು ನೋಡಿದ ಅವನಿಗೆ ಮನದಾಳದ ನೋವು ಅರ್ಥವಾಯಿತು. ಅವಳಿಗೆ ಸಾಂತ್ವನ ನೀಡುವ ಸಲುವಾಗಿ ಅವನೂ ಮೇಲೆ ಬಂದ.  ಆದರೆ ಕೋಣೆಯ ಬಾಗಿಲು ಒಳಗಿನಿಂದ ಮುಚ್ಚಿತ್ತು.  ಅವನು ಕಿಟಕಿಯಿಂದ ಒಳಗೆ ಬಗ್ಗಿ ನೋಡಿದ. ಮಾನಿ ಮೇಜಿನ ಹತ್ತಿರ ನಿಂತಿದ್ದಳು.
ಅವನು ಮೆಲ್ಲಗೆ ಹೇಳಿದ –‘ಮಾನಿ, ಬಾಗಿಲು ತೆರೆ’.  
ಮಾನಿ ಅವನ ಧ್ವನಿ ಕೇಳಿ ಕೋಣೆಯಲ್ಲಿ ಅಡಗಿಕೊಂಡಳು, ಮತ್ತೆ ಗಂಭೀರ ಸ್ವರದಿಂದ ಕೇಳಿದಳು – “ಏನದು?”
ಇಂದ್ರನಾಥ ಗದ್ಗದಿತನಾಗಿ ಹೇಳಿದ – ‘ನಿನ್ನ ಕಾಲಿಗೆ ಬೀಳುತ್ತೇನೆ ಮಾನಿ, ಬಾಗಿಲು ತೆರೆ”.  
 ಈ ಸ್ನೇಹಭರಿತ ವಿನಯ ಮಾನಿಯ ಪಾಲಿಗೆ ಅಭೂತಪೂರ್ವ. ಈ ನಿರ್ದಯ ಪ್ರಪಂಚದಲ್ಲಿ ಯಾರಾದರೂ ಇಂಥ ವಿನಂತಿ ಮಾಡಲು ಸಾಧ್ಯ ಎಂದವಳು ಕನಸಿನಲ್ಲೂ ಕಲ್ಪನೆ ಮಾಡಿರಲಿಲ್ಲ.  ಮಾನಿ ನಡುಗುತ್ತಿರುವ ಕೈಗಳಿಂದ ಬಾಗಿಲು ತೆರೆದಳು.  ಇಂದ್ರನಾಥ ತಕ್ಷಣ ಒಳಗೆ ನುಗ್ಗಿದ. ನೋಡುತ್ತಾನೆ, ಮೇಲೆ ಫ್ಯಾನಿನ ಗೂಟದಿಂದ ಒಂದು ಹಗ್ಗ ಜೋತುಬಿದ್ದಿದೆ.  ಅವನು ಕೂಡಲೇ ಜೇಬಿನಿಂದ ಚಾಕು ತೆಗೆದು ಹಗ್ಗ ಕತ್ತರಿಸಿದ, ಬಳಿಕ ಕೇಳಿದ – “ಮಾನಿ ಏನು ಮಾಡಲು ಹೊರಟಿದ್ದೆ?.  ಈ ಅಪರಾಧಕ್ಕೆ ಶಿಕ್ಷೆ ಏನೆಂದು ಗೊತ್ತೇ ನಿನಗೆ?”
ಮಾನಿ ತಲೆ ತಗ್ಗಿಸಿ ನುಡಿದಳು – “ಈ ಶಿಕ್ಷೆಗಿಂತ ಕಠೋರವಾದ ಇನ್ನೊಂದು ಶಿಕ್ಷೆಯೂ ಇದೆಯೇನು? ಯಾರ ಮುಖ ನೋಡಿದರೆ ತಿರಸ್ಕಾರ ವ್ಯಕ್ತಪಡಿಸುತ್ತಾರೋ ಅವಳಿಗೆ ಸತ್ತರೂ ಕಠೋರ ಶಿಕ್ಷೆ ನೀಡುವುದಾದರೆ ನಾನು ಹೇಳುವುದಿಷ್ಟೇ –“ದೇವರೆ ನಿನ್ನ ಆಸ್ಥಾನದಲ್ಲೂ ನ್ಯಾಯದ ಹೆಸರಿಲ್ಲವಲ್ಲ. ನಿಮಗೆ ನನ್ನ ಪರಿಸ್ಥಿತಿಯ ಅನುಭವ ಸಾಧ್ಯವಿಲ್ಲ”.
ಇಂದ್ರನಾಥನ ಕಣ್ತುಂಬಿ ಬಂದವು.  ಮಾನಿಯ ಮಾತುಗಳಲ್ಲಿ ಎಂಥ ಕಠೋರ ಸತ್ಯ ತುಂಬಿತ್ತು. ಹೇಳಿದ – “ಮಾನಿ ಯಾವಾಗಲೂ ಇಂತಹ ದಿನಗಳೇ ಇರುವುದಿಲ್ಲ. ಆದರೆ ಈ ಜಗತ್ತಿನಲ್ಲಿ ನಿನ್ನವರಾರೂ ಇಲ್ಲ ಎಂದು ನೀನು ತಿಳಿದಿದ್ದರೆ, ಅದು ನಿನ್ನ ಭ್ರಮೆ. ಈ ಜಗತ್ತಿನಲ್ಲಿ ನಿನ್ನ ಪ್ರಾಣ ತನ್ನ ಪ್ರಾಣಕ್ಕಿಂತ ಪ್ರಿಯನಾಗಿರುವ ಒಬ್ಬ ವ್ಯಕ್ತಿಯಂತೂ ಇದ್ದಾನೆ.”
ಅಷ್ಟರಲ್ಲಿ ಗೋಕುಲ ಬರುತ್ತಿರುವುದು ಕಾಣಿಸಿತು.  ಮಾನಿ ಕೋಣೆಯಿಂದಾಚೆ ಹೋದಳು. ಇಂದ್ರನಾಥನ ಮಾತುಗಳಿಂದ ಅವಳ ಮನಸ್ಸಿನಲ್ಲಿ ಕೋಲಾಹಲವೆದ್ದಿತು. ಅವನ ಆಶಯವೇನೆಂಬುದು ಅವಳಿಗೆ ಅರ್ಥವಾಗಲಿಲ್ಲ. ಆದರೂ ಇಂದು ಅವಳಿಗೆ ತನ್ನ ಜೀವನ ಸಾರ್ಥಕವೆನಿಸಿತು.  ಅವಳ ಅಂಧಕಾರಮಯ ಜೀವನದಲ್ಲಿ ಒಂದು ಪ್ರಕಾಶದ ಉದಯವಾಯಿತು.

(2)
ಇಂದ್ರನಾಥ ಕೋಣೆಯಲ್ಲಿ ಇರುವುದು ಮತ್ತು ಮಾನಿ ಅಲ್ಲಿಂದ ತೆರಳುವುದನ್ನು ನೋಡಿದ್ದು ಗೋಕುಲನಿಗೆ ಚುಚ್ಚಿತು.  ಅವನ ಮುಖ ಬಣ್ಣ ಬದಲಾಯಿಸಿತು.  ಕಠಿಣ ಸ್ವರದಲ್ಲಿ ಕೇಳಿದ – “ನೀನ್ಯಾವಾಗ ಇಲ್ಲಿಗೆ ಬಂದೆ?”  
ಇಂದ್ರನಾಥ ಅವಿಚಲಿತನಾಗಿ ಉತ್ತರಿಸಿದ – “ನಿನ್ನನ್ನು ಹುಡುಕುತ್ತಲೇ ಇಲ್ಲಿಗೆ ಬಂದಿದ್ದೆ.  ನೀನಿಲ್ಲದ್ದು ನೋಡಿ ಕೆಳಗೆ ಹಿಂದಿರುಗುತ್ತಿದ್ದೆ.  ನಾನೇನಾದರೂ ಹಾಗೆ ಹೋಗಿಬಿಟ್ಟಿದ್ದರೆ ನಿನಗೆ ಈ ಮುಚ್ಚಿದ ಬಾಗಿಲು ಕಾಣ ಸಿಗುತ್ತಿತ್ತು ಮತ್ತು ಫ್ಯಾನಿನ ಗೂಟದಿಂದ ತೂಗಾಡುತ್ತಿರುವ ಒಂದು ಶವ ಕಾಣಬರುತ್ತಿತ್ತು.” 
ತನ್ನ ಅಪರಾಧವನ್ನು ಮರೆಮಾಚಲು ಇವನು ಏನೊಂದು ನೆವ ತೆಗೆಯುತ್ತಿದ್ದಾನೆಂದು ಗೋಕುಲ ತಿಳಿದ.  ಗಟ್ಟಿದನಿಯಲ್ಲಿ ನುಡಿದ – “ನೀನಿಂಥ ವಿಶ್ವಾಸಘಾತುಕನೆಂದು ನಾನು ಎಣಿಸಿರಲಿಲ್ಲ”. 
ಇಂದ್ರನಾಥನ ಮುಖ ಕೆಂಪಡರಿತು.  ಅವನು ಅವೇಶದಿಂದ ಎದ್ದು ನಿಂತು ಹೇಳಿದ - ನಾನೂ ಸಹ ನೀನು ನನ್ನ ಮೇಲೆ ಇಂತಹ ದೊಡ್ಡ ಕಳಂಕ ಹೊರೆಸುವೆಯೆಂದು ಎಣಿಸಿರಲಿಲ್ಲ. ನೀನು ನನ್ನನ್ನು ಇಷ್ಟೊಂದು ನೀಚ ಮತ್ತು ಕುಟಿಲ ಎಂದು ತಿಳಿದಿರುವೆಯೆಂದು ನನಗೆ ಗೊತ್ತಿರಲಿಲ್ಲ.  ಮಾನಿ ನಿನಗೆ ತಿರಸ್ಕಾರದ ವಸ್ತು. ನನಗವಳು ಶ್ರದ್ಧೆಯ ವಸ್ತು, ಹಾಗೆಯೇ ಇರುತ್ತಾಳೆ. ನಿನಗೆ ವಿವರಿಸುವ ಅವಶ್ಯಕತೆ ನನಗಿಲ್ಲ.  ಆದರೆ ನನ್ನ ಪಾಲಿಗೆ ಮಾನಿ ನೀನಂದುಕೊಂಡದ್ದಕ್ಕಿಂತ ಎಷ್ಟೋ ಹೆಚ್ಚು ಪವಿತ್ರಳು.  ಈ ಹೊತ್ತಿನಲ್ಲಿ ನಿನ್ನ ಬಳಿ ಈ ವಿಷಯ ಹೇಳಲು ನಾನು ಬಯಸಿರಲಿಲ್ಲ.  ಇನ್ನೂ ಒಳ್ಳೆಯ ಅನುಕೂಲಕರ ಪರಿಸ್ಥಿತಿಗಾಗಿ ಕಾದಿದ್ದೆ.  ಆದರೀಗ ನಾನು ಹೇಳಲೇ ಬೇಕಾದ ಸಂದರ್ಭ ಬಂದಿದೆ.  ಮಾನಿಗೆ ನಿಮ್ಮ ಮನೆಯಲ್ಲಿ ಯಾವುದೇ ಆದರವಿಲ್ಲ ಎಂಬುದಂತೂ ನನಗೆ ಗೊತ್ತಿತ್ತು.  ಆದರೆ ನೀವು ಅವಳನ್ನು ಇಷ್ಟೊಂದು ನೀಚ ಮತ್ತು ತ್ಯಾಜ್ಯಳಂತೆ ಪರಿಗಣಿಸುತ್ತೀರೆಂಬುದು ಇಂದು ನಿಮ್ಮ ತಾಯಿ ಮಾತು ಕೇಳಿ ಅರ್ಥವಾಯಿತು.  ಅವಳು ವಧುವಿನ ಆಭೂಷಣ ನೋಡಲು ಬಂದಿದ್ದಾಳೆಂಬ ಕ್ಷುಲ್ಲಕ ವಿಷಯಕ್ಕೇ ನಿಮ್ಮ ತಾಯಿ ಅವಳನ್ನು ಎಷ್ಟು ಕೆಟ್ಟದಾಗಿ ನಿಂದಿಸಿದರೆಂದರೆ ಯಾರೂ ನಾಯಿಯನ್ನು ಸಹ ಹೀಗೆ ನಿಂದಿಸುವುದಿಲ್ಲ. ನಾನೇನು ಮಾಡಲಿ, ನಾನೇನು ಮಾಡಬಲ್ಲೆ ಎಂದು ನೀನು ಹೇಳಬಹುದು.  ಆದರೆ ಯಾವ ಮನೆಯಲ್ಲಿ ಒಬ್ಬ ಅನಾಥ ಸ್ತ್ರೀಯ ಮೇಲೆ ಇಷ್ಟು ಅತ್ಯಾಚಾರವಾಗುವುದೋ ಅಲ್ಲಿ ನೀರು ಕುಡಿಯುವುದೂ ಪಾಪ.  ನೀನು ಮೊದಲಿನಿಂದಲೇ ನಿಮ್ಮ ತಾಯಿಗೆ ತಿಳುವಳಿಕೆ ಕೊಟ್ಟಿದ್ದರೆ ಇವತ್ತು ಈ ಸಂದರ್ಭ ಬರುತ್ತಿರಲಿಲ್ಲ.  ನೀನು ಈ ಆರೋಪದಿಂದ ತಪ್ಪಿಸಿಕೊಳ್ಳಲಾರೆ. ಇಂದು ನಿಮ್ಮ ಮನೆಯಲ್ಲಿ ವಿವಾಹದ ಉತ್ಸವ.  ಹಾಗಾಗಿ ನಿನ್ನ ತಾಯ್ತಂದೆಯರೊಂದಿಗೆ ನಾನು ವಿಷಯ ಪ್ರಸ್ತಾಪಿಸಲಾರೆ. ಆದರೆ ನಿನ್ನೊಡನೆ ಹೇಳಲು ನನಗೇನೂ ಸಂಕೋಚವಿಲ್ಲ. ನಾನು ಮಾನಿಯನ್ನು ನನ್ನ ಜೀವನಸಂಗಾತಿಯನ್ನಾಗಿ ಮಾಡಿಕೊಂಡು ನನ್ನನ್ನೇ ಧನ್ಯ ಎಂದು ತಿಳಿದುಕೊಳ್ಳುತ್ತೇನೆ.  ನಾನು ನನ್ನದೇ ಆದ ಸ್ಥಾನ ಭದ್ರ ಮಾಡಿಕೊಂಡು ಈ ಪ್ರಸ್ತಾಪ ಮಾಡುವವನಿದ್ದೆ. ಆದರೆ ಇನ್ನೂ ತಡಮಾಡುವುದರಿಂದ ಮಾನಿ ಕೈತಪ್ಪಿ ಹೋಗಿಯಾಳು ಎಂದು ಭಯವಾಗುತ್ತಿದೆ. ಹಾಗಾಗಿ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಚಿಂತೆಯಿಂದ ಮುಕ್ತರನ್ನಾಗಿಸಲು ನಾನು ಇಂದೇ ಈ ವಿಷಯ ಪ್ರಸ್ತಾಪಿಸುತ್ತೇನೆ”.
ಗೋಕುಲನ ಹೃದಯದಲ್ಲಿ ಇಂದ್ರನಾಥನ ಮೇಲೆ ಹಿಂದೆಂದೂ ಇಂತಹ ಶ್ರದ್ಧೆ ಹುಟ್ಟಿರಲಿಲ್ಲ. ಅವನ ಮೇಲೆ ಇಂತಹ ಸಂದೇಹ ಪಟ್ಟಿದ್ದಕ್ಕೆ ಅವನಿಗೆ ನಾಚಿಕೆಯಾಯಿತು. ಅಮ್ಮನ ಭಯದಿಂದ ಮಾನಿಯ ವಿಷಯದಲ್ಲಿ ತಾನು ತಟಸ್ಥನಾಗಿ ಇದ್ದು ಹೇಡಿಯಾದೆ ಎಂದವನಿಗೆ ಅನಿಸಿತು. ಅದು ಬರಿಯ ಹೇಡಿತನವಷ್ಟೇ, ಇನ್ನೇನೂ ಅಲ್ಲ. ಅವನು ಹೇಳಿದ – “ಅಮ್ಮ ಮಾನಿಯನ್ನು ಈ ವಿಷಯಕ್ಕಾಗಿ ನಿಂದಿಸಿದ್ದರೆ ಅದವರ ಮೂರ್ಖತೆ. ಸಮಯ ಸಿಕ್ಕೊಡನೆ ನಾನವರನ್ನು ಕೇಳುತ್ತೇನೆ”.
ಇಂದ್ರನಾಥ – “ಈಗ ಹೇಳುವ ಕೇಳುವ ಕಾಲ ಮುಗಿದು ಹೋಗಿದೆ.  ನೀನು ಮಾನಿಯನ್ನು ಈ ವಿಷಯದ ಕುರಿತು ಕೇಳಿ ನನಗೆ ಹೇಳಬೇಕೆಂಬುದೇ ನನ್ನ ಇಚ್ಚೆ. ಅವಳು ಇಲ್ಲಿ ಒಂದು ಕ್ಷಣವೂ ಇರುವುದು ನನಗಿಷ್ಟವಿಲ್ಲ. ಅವಳು ಆತ್ಮಾಭಿಮಾನ ಉಳ್ಳ ಹೆಣ್ಣೆಂದು ಇವತ್ತು ನನಗೆ ಅರಿವಾಯಿತು. ನಿಜವಾಗಿ ಹೇಳಬೇಕೆಂದರೆ ನಾನವಳ ಸ್ವಭಾವದಿಂದ ಮುಗ್ಧನಾಗಿದ್ದೇನೆ.  ಇಂತಹ ಮಹಿಳೆ ಅತ್ಯಾಚಾರವನ್ನು ಸಹಿಸಲಾರಳು”.
ಗೋಕುಲ ಅಳುಕಿನಿಂದಲೇ ಕೇಳಿದ – “ಆದರೆ ನಿನಗೆ ತಿಳಿದಿದೆಯೇ, ಅವಳು ವಿಧವೆ”.  
ಯಾರಾದರೂ ನಮಗೆ ಅಸಾಧಾರಣ ಹಿತ ಬಯಸಿದರೆ ನಾವವರ ಮುಂದೆ ನಮ್ಮ ಕೆಡುಕನ್ನೆಲ್ಲಾ ಬಿಚ್ಚಿಡಬಯಸುತ್ತೇವೆ.  ನಾವು ನಿಮ್ಮ ಕೃಪೆಗೆ ಪಾತ್ರರಲ್ಲ ಎಂದವರಿಗೆ ನಾವು ತೋರಬಯಸುತ್ತೇವೆ. 
ಇಂದ್ರನಾಥ ನಕ್ಕು ಹೇಳಿದ – “ಗೊತ್ತಿದೆ, ಕೇಳಿದ್ದೇನೆ. ಅದಕ್ಕಾಗಿ ನಿಮ್ಮ ತಂದೆಯವರೊಂದಿಗೆ ಮಾತನಾಡಲು ಇಲ್ಲಿಯವರೆಗೆ ನನಗೆ ಧೈರ್ಯವಾಗಿರಲಿಲ್ಲ. ಆದರೆ ತಿಳಿದಿರದಿದ್ದರೂ ಇದರಿಂದ ನನ್ನ ನಿರ್ಧಾರದ ಮೇಲೆ ಯಾವ ಪ್ರಭಾವವೂ ಆಗುತ್ತಿರಲಿಲ್ಲ. ಮಾನಿ ವಿಧವೆ ಮಾತ್ರವಲ್ಲ, ಅಸ್ಪೃಶ್ಯಳು ಅಥವಾ ಅದಕ್ಕಿಂತ ಕನಿಷ್ಠವಾಗಿದ್ದರೂ ನನ್ನ ಪಾಲಿಗೆ ಅವಳೊಂದು ಸ್ತ್ರೀರತ್ನ. ನಾವು ಸಣ್ಣಪುಟ್ಟ ಕೆಲಸಕ್ಕಾಗಿ ಅನುಭವ ಇರುವುದು ಒಳ್ಳೆಯದು ಎಂದುಕೊಳ್ಳುತ್ತೇವೆ. ಆದರೆ ಯಾರೊಂದಿಗೆ ಜೀವನಯಾತ್ರೆ ಮಾಡಬೇಕೋ ಅವರಲ್ಲಿ ಅನುಭವ ಇದ್ದರೆ ಅದನ್ನೊಂದು ಕುಂದು ಎಂದು ಭಾವಿಸುತ್ತೇವೆ. ನಾನು ನ್ಯಾಯದ ಕತ್ತು ಹಿಸುಕುವವರಲ್ಲಿ ಒಬ್ಬನಲ್ಲ. ಸಂಕಷ್ಟ ಕೊಡುವ ಅನುಭವಕ್ಕಿಂತ ಹೆಚ್ಚಿನದನ್ನು ನೀಡುವ ವಿದ್ಯಾಲಯ ಇದುವರೆಗೂ ತೆರೆದಿಲ್ಲ.  ಯಾರು ಈ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೋ ಅವರ ಕೈಗೆ ನಾವು ನಿಶ್ಚಿಂತರಾಗಿ ಜೀವನದ ಸೂತ್ರ ಕೊಡಬಹುದು. ಯಾವುದಾದರೂ ಸ್ತ್ರೀ ವಿಧವೆಯಾಗಿರುವುದು ನನ್ನ ಪ್ರಕಾರ ಗುಣವೇ ಹೊರತು ದೋಷವಲ್ಲ”.
ಗೋಕುಲ ಪ್ರಸನ್ನನಾಗಿ ನುಡಿದ – “ಆದರೆ ನಿಮ್ಮ ಮನೆಯವರು?”  
ಇಂದ್ರನಾಥ ದೃಢತೆಯಿಂದ ನುಡಿದ – “ಈ ವಿಷಯದಲ್ಲಿ ತೊಂದರೆ ಕೊಡುವಷ್ಟು ಮೂರ್ಖರು ನನ್ನ ಮನೆಯವರು ಎಂದು ನನಗೆ ಅನಿಸುವುದಿಲ್ಲ.  ಒಂದೊಮ್ಮೆ ಅವರು ಒಪ್ಪಿಗೆ ಕೊಡದಿದ್ದರೂ ನನ್ನ ಭವಿಷ್ಯವನ್ನು ನಾನೇ ರೂಪಿಸುವುದನ್ನು ನಾನು ಬಯಸುತ್ತೇನೆ.  ನನ್ನ ಹಿರಿಯರಿಗೆ ನನ್ನ ಮೇಲೆ ಅನೇಕ ಹಕ್ಕುಗಳಿವೆ.  ಅನೇಕ ವಿಷಯಗಳಲ್ಲಿ ನಾನವರ ಇಚ್ಛೆ ಏನಿದೆ ಎಂದು ಅರ್ಥ ಮಾಡಿಕೊಳ್ಳಬಲ್ಲೆ.  ಆದರೆ ಯಾವ ವಿಷಯ ನನ್ನ ಆತ್ಮವಿಕಾಸಕ್ಕೆ ಯೋಗ್ಯ ಎಂದು ನಾನು ತಿಳಿಯುತ್ತೇನೋ ಇದರಲ್ಲಿ ನಾನು ಯಾರ ಬಲವಂತವನ್ನೂ ಸಹಿಸುವುದಿಲ್ಲ.  ನಾನು ಸ್ವಯಂ ನನ್ನ ಜೀವನದ ನಿರ್ಮಾತ ಎಂಬ ಅಭಿಮಾನ ನನಗಿದೆ”.   
ಗೋಕುಲ ಸಂದೇಹದಿಂದ ಕೇಳಿದ – “ಒಂದೊಮ್ಮೆ ಮಾನಿಯೇ ಇದಕ್ಕೆ ಒಪ್ಪದಿದ್ದರೆ?” 
ಇಂದ್ರನಾಥನಿಗೆ ಈ ಸಂದೇಹ ಆಧಾರರಹಿತ ಅನಿಸಿತು. ಹೇಳಿದ – “ನೀನೀಗ ಮಕ್ಕಳಂತೆ ಮಾತನಾಡುತ್ತಿರುವೆ ಗೋಕುಲ. ಮಾನಿ ಸುಲಭವಾಗಿ ಒಪ್ಪುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಅವಳು ಈ ಮನೆಯಲ್ಲಿ ಏಟು ತಿನ್ನುತ್ತಾಳೆ, ನಿಂದೆ ಸಹಿಸಿಕೊಳ್ಳುತ್ತಾಳೆ, ಬೈಗಳು ತಿನ್ನುತ್ತಾಳೆ, ಆದರೆ ಈ ಮನೆಯಲ್ಲೇ ಇರುತ್ತಾಳೆ. ಯುಗಗಳ ಸಂಸ್ಕಾರವನ್ನು ಕಿತ್ತೊಗೆಯುವುದು ಸುಲಭವಲ್ಲ. ಆದರೆ ಅವಳನ್ನು ನಾವು ಒಪ್ಪಿಸಲೇ ಬೇಕು. ಅವಳ ಮನದಲ್ಲಿ ಮನೆಮಾಡಿದ ಸಂಸ್ಕಾರಗಳನ್ನು ಕಿತ್ತೊಗೆಯಲೇಬೇಕು. ನಾನು ವಿಧವೆಯರ ಪುನರ್‍ವಿವಾಹದ ಪರ ಇಲ್ಲ.  ನನ್ನ ವಿಚಾರದಲ್ಲಿ ಪತಿವ್ರತೆಯರ ಈ ಅಲೌಕಿಕ ಆದರ್ಶ ವಿಶ್ವದ ಅಮೂಲ್ಯ ರತ್ನ.  ನಾವು ಬಹಳ ವಿಚಾರಿಸಿ, ಯೋಚಿಸಿ ಇದರ ಮೇಲೆ ಪ್ರಹಾರ ಮಾಡಬೇಕಾಗುತ್ತದೆ.  ಆದರೆ ಮಾನಿಯ ವಿಷಯದಲ್ಲಿ ಈ ಮಾತು ಬರುವುದಿಲ್ಲ. ಪ್ರೇಮ ಮತ್ತು ಭಕ್ತಿ ಹೆಸರಿನಂದಲ್ಲ, ವ್ಯಕ್ತಿಯಿಂದ ಹುಟ್ಟುತ್ತದೆ.  ಯಾವ ಪುರುಷನ ಮುಖವನ್ನು ಸಹ ಆಕೆ ನೋಡಿಲ್ಲವೋ ಅವನ ಮೇಲೆ ಅವಳಿಗೆ ಪ್ರೇಮ ಹುಟ್ಟಲಾರದು. ಇದು ಬರಿಯ ಸಂಪ್ರದಾಯವಷ್ಟೇ. ಈ ಆಡಂಬರ, ಈ ತೋರಿಕೆಯನ್ನು ನಾವು ಗಣನೆಗೆ ತೆಗೆದುಕೊಳ್ಳಬಾರದು. ನೋಡು, ಯಾರೋ ನಿನ್ನ ಕರೆಯುವಂತಿದೆ. ನಾನೂ ಹೋಗುತ್ತೇನೆ. ಎರಡು ಮೂರು ದಿನಗಳಲ್ಲಿ ಮತ್ತೆ ಭೇಟಿಯಾಗುತ್ತೇನೆ. ಆದರೆ ನೀನು ಸಂಕೋಚದಿಂದ, ಆಲೋಚನೆಯಲ್ಲೇ ಮುಳುಗಿ ದಿನಗಳು ಕಳೆದುಹೋಗದಂತಾಗಲಿ ಅಷ್ಟೇ”.
ಗೋಕುಲ ಅವನನ್ನು ಆಲಂಗಿಸಿ ನುಡಿದ – “ನಾನೇ ಸ್ವತಃ ನಾಡಿದ್ದು ಬರುತ್ತೇನೆ”.

(3)
ಬೀಗರು ಹೋಗಿಯಾಗಿತ್ತು.  ಅತಿಥಿಗಳೂ ಹೊರಟುಹೋಗಿದ್ದರು.  ರಾತ್ರಿ 9 ಗಂಟೆ. ರಾತ್ರಿಯ ನಿದ್ದೆ ಪ್ರಸಿದ್ಧಿ ಪಡೆದಿದೆ. ಮನೆ ಮಂದಿಯೆಲ್ಲಾ ನಿಶ್ಚಿಂತೆಯಿಂದ ಮಲಗಿದ್ದರು. ಕೆಲವರು ಚಾಪೆ ಮೇಲೆ, ಕೆಲವರು ನೆಲದ ಮೇಲೆ, ಇನ್ಯಾರೋ ಮಂಚದ ಮೇಲೆ, ಯಾರಿಗೆಲ್ಲಿ ಸ್ಥಳ ಸಿಕ್ಕಿತ್ತೋ, ಅಲ್ಲೇ ಮಲಗಿದ್ದರು. ಮಾನಿ ಮಾತ್ರ ಮನೆ ನೋಡಿಕೊಳ್ಳುತ್ತಾ ಇದ್ದಳು ಮತ್ತು ಗೋಕುಲ ಮೇಲೆ ತನ್ನ ಕೊಠಡಿಯಲ್ಲಿ ಕುಳಿತು ಸಮಾಚಾರ ಪತ್ರಿಕೆ ಓದುತ್ತಾ ಇದ್ದ.
ಇದ್ದಕ್ಕಿದ್ದಂತೆ ಗೋಕುಲ ಕೂಗು ಹಾಕಿದ – “ಮಾನಿ, ಒಂದು ಲೋಟ ತಣ್ಣಗಿನ ನೀರು ತಾ, ತುಂಬಾ ಬಾಯಾರಿಕೆ”.
ಮಾನಿ ನೀರು ತೆಗೆದುಕೊಂಡು ಮೇಲೆ ಹೋದಳು.  ಮೇಜಿನ ಮೇಲೆ ನೀರಿನ ಲೋಟ ಇಟ್ಟು ಹಿಂದಿರುಗುವಷ್ಟರಲ್ಲಿ ಗೋಕುಲ ಹೇಳಿದ – “ಮಾನಿ, ಸ್ವಲ್ಪ ಇರು, ನಿನಗೇನೋ ಹೇಳಬೇಕು”.
ಮಾನಿ ನುಡಿದಳು – “ಅಣ್ಣಾ ಈಗ ಪುರುಸೊತ್ತಿಲ್ಲ, ಇಡೀ ಮನೆ ಮಲಗಿದೆ. ಯಾರಾದರೂ ನುಗ್ಗಿ ಮನೆ ಖಾಲಿ ಮಾಡಿಯಾರು”.
ಗೋಕುಲ ಹೇಳಿದ – “ನುಗ್ಗಲಿ ಬಿಡು. ನಾನೇನಾದರೂ ನೀನಾಗಿದ್ದಿದ್ದರೆ ಕಳ್ಳರ ಜೊತೆ ಸೇರಿ ಕಳ್ಳತನ ಮಾಡಿಸುತ್ತಿದ್ದೆ. ನನಗೆ ಈ ಕೂಡಲೇ ಇಂದ್ರನಾಥನನ್ನು ನೋಡಬೇಕಾಗಿದೆ. ನಾನಿವತ್ತು ಅವನನ್ನು ಭೇಟಿ ಮಾಡುವೆನೆಂದು ಮಾತು ಕೊಟ್ಟಿದ್ದೇನೆ. ನೋಡು, ಸಂಕೋಚಪಡಬೇಡ, ನಾನೇನು ಕೇಳುತ್ತೇನೋ ಅದಕ್ಕೆ ಕೂಡಲೇ ಉತ್ತರಿಸಬೇಕು. ತಡವಾದರೆ ಆತ ದಿಗಿಲು ಬೀಳಬಹುದು. ಇಂದ್ರನಾಥನಿಗೆ ನಿನ್ನಲ್ಲಿ ಪ್ರೇಮವಿದೆ, ಇದು ನಿನಗೆ ಗೊತ್ತಿದೆ ತಾನೆ?”
ಮಾನಿ ಮುಖ ತಿರುಗಿಸಿ ನುಡಿದಳು – “ಇದನ್ನು ಹೇಳಲಿಕ್ಕೆ ಅಂತಲೇ ನನ್ನನ್ನು ಕರೆದದ್ದು?  ನನಗೇನೂ  ಗೊತ್ತಿಲ್ಲ”.
ಗೋಕುಲ - “ಸರಿ ಹಾಗಾದರೆ ಇದು ನಿಮ್ಮಿಬ್ಬರಿಗೆ ಬಿಟ್ಟಿದ್ದು.  ಅವನು ನಿನ್ನೊಡನೆ ವಿವಾಹವಾಗಬಯಸುತ್ತಾನೆ. ವೈದಿಕ ರೀತಿಯಲ್ಲಿ ವಿವಾಹವಾಗುತ್ತದೆ. ನಿನಗೆ ಒಪ್ಪಿಗೆಯೇ?”
ಮಾನಿಯ ತಲೆ ನಾಚಿಕೆಯಿಂದ ಬಾಗಿತು. ಅವಳಿಗೆ ಯಾವ ಉತ್ತರವನ್ನೂ ಕೊಡಲಾಗಲಿಲ್ಲ.
ಗೋಕುಲ ಮತ್ತೆ ಹೇಳಿದ – “ಅಪ್ಪ ಮತ್ತು ಅಮ್ಮನ ಬಳಿ ಈ ವಿಷಯ ಹೇಳಿಲ್ಲ. ಯಾಕೆಂದು ನಿನಗೆ ಗೊತ್ತು. ಅವರು ನಿನ್ನನ್ನು ನಿಂದಿಸಿ, ತೆಗಳಿ ಬೇಕಾದರೆ ಸಾಯಿಸುತ್ತಾರೆ, ಆದರೆ ಮದುವೆಗೆ ಎಂದಿಗೂ ಒಪ್ಪಿಗೆ ನೀಡಲಾರರು.  ಇದರಿಂದ ಅವರ ಮರ್ಯಾದೆ ಹೋಗುತ್ತದೆ.  ಹಾಗಾಗಿ ಈಗ ಇದರ ನಿರ್ಣಯ ನಿನ್ನ ಮೇಲೆಯೇ ಇದೆ.  ನೀನಿದನ್ನು ಒಪ್ಪಬೇಕೆಂದು ನನ್ನ ಅಭಿಪ್ರಾಯ.  ಇಂದ್ರನಾಥ ನಿನ್ನನ್ನು ಪ್ರೇಮಿಸುವುದಂತೂ ಖರೆ.  ಜೊತೆಗೆ ನಿಷ್ಕಳಂಕ ಚಾರಿತ್ರ್ಯದ ವ್ಯಕ್ತಿ ಮತ್ತು ಧೈರ್ಯಶಾಲಿ.  ಭಯ ಅವನಿಂದ ದೂರ.  ನಿನ್ನನ್ನು ನೋಡಿದರೆ ನನಗೆ ಆನಂದವಾಗುತ್ತದೆ”.
ಮಾನಿಯ ಹೃದಯ ತೀವ್ರವಾಗಿ ಹೊಡೆದುಕೊಳ್ಳುತ್ತಿತ್ತು. ಆದರೆ ಬಾಯಿಂದ ಮಾತು ಹೊರಡಲಿಲ್ಲ.
ಗೋಕುಲ ಒತ್ತಾಯಿಸುತ್ತಾ ಹೇಳಿದ – “ನೋಡು ಮಾನಿ, ಇದು ಸುಮ್ಮನಿರುವ ಸಮಯವಲ್ಲ, ಏನು ಯೋಚಿಸುತ್ತಾ ಇದ್ದೀಯೇ?”
 ಮಾನಿ ನಡುಗುತ್ತಾ ಹೇಳಿದಳು – “ಹೂಂ”.
ಗೋಕುಲನ ಎದೆ ಮೇಲಿನ ಭಾರ ಇಳಿಯಿತು.  ನಗಲಾರಂಭಿಸಿದ.  ಮಾನಿ ನಾಚಿಕೆಯಿಂದ ಅಲ್ಲಿಂದ ಓಡಿಹೋದಳು.

(4)
ಸಂಜೆ ಗೋಕುಲ ತಾಯಿಯ ಬಳಿ ಹೇಳಿದ – “ಅಮ್ಮ, ಇಂದ್ರನಾಥನ ಮನೆಯಲ್ಲಿ ಇವತ್ತು ಏನೋ ಉತ್ಸವ.  ಅವರಮ್ಮ ಒಬ್ಬರೇ ಹೇಗೆ ನಿಭಾಯಿಸುವುದೆಂದು ಹೆದರುತ್ತಾ ಇದ್ದಾರೆ. ನಾನು ಮಾನಿಯನ್ನು ಕಳುಹಿಸುತ್ತೇನೆಂದು ಹೇಳಿದ್ದೇನೆ. ನೀನೊಪ್ಪಿದರೆ ಮಾನಿಯನ್ನು ತಲುಪಿಸಲೇ. ನಾಳೆ, ನಾಡಿದ್ದು ವಾಪಸ್ಸು ಬಂದು ಬಿಡುತ್ತಾಳೆ.
ಮಾನಿ ಆಗಲೇ ಅಲ್ಲಿಗೆ ಬಂದಳು.  ಗೋಕುಲ ಅವಳಿಗೆ ಸನ್ನೆ ಮಾಡಿದ.  ಮಾನಿ ಲಜ್ಜಾಭರಿತಳಾದಳು.  ಓಡಿಹೋಗಲೂ ದಾರಿ ಕಾಣಲಿಲ್ಲ.
ತಾಯಿ ನುಡಿದರು – “ನನ್ನನ್ನೇನು ಕೇಳುತ್ತೀಯಾ.  ಅವಳು ಬಂದರೆ ಕರಕೊಂಡು ಹೋಗು”.
ಗೋಕುಲ ಹೇಳಿದ – “ಬಟ್ಟೆ ಧರಿಸಿ ಸಿದ್ಧಳಾಗು.  ಇಂದ್ರನಾಥನ ಮನೆಗೆ ಹೋಗುವುದಿದೆ”.  
ಮಾನಿ ತಕರಾರು ಮಾಡಿದಳು – “ನನಗೆ ಹುಷಾರಿಲ್ಲ. ನಾನು ಬರುವುದಿಲ್ಲ”.  
ಗೋಕುಲನ ತಾಯಿ ಹೇಳಿದರು – “ಯಾಕೆ ಹೋಗಬಾರದು? ಅಲ್ಲೇನು ಬೆಟ್ಟ ಅಗೆಯುವುದಿದೆಯೇನು?”.
ಮಾನಿ ಒಂದು ಬಿಳಿಸೀರೆ ಉಟ್ಟು ಟಾಂಗೆಯಲ್ಲಿ ಕುಳಿತಾಗ ಅವಳ ಎದೆ ನಡುಗುತ್ತಿತ್ತು. ಮತ್ತೆ ಮತ್ತೆ ಕಂಗಳಲ್ಲಿ ನೀರು ತುಂಬುತ್ತಿತ್ತು.  ನದಿಯಲ್ಲಿ ಮುಳುಗಲು ಹೊರಟಿದ್ದಾಳೇನೋ ಅನ್ನುವಷ್ಟು ಹೃದಯ ಭಾರವಾಯಿತು.
ಟಾಂಗ ಸ್ವಲ್ಪ ದೂರ ಹೋದ ಬಳಿಕ ಅವಳು ಗೋಕುಲನಿಗೆ ಹೇಳಿದಳು – “ಅಣ್ಣಾ ನನಗೆ ಹೇಗೇಗೋ ಆಗುತ್ತಿದೆ.  ನಿನ್ನ ಕಾಲಿಗೆ ಬೀಳುತ್ತೇನೆ, ಹಿಂದಿರುಗೋಣ”.
ಗೋಕುಲ ಹೇಳಿದ – “ಹುಚ್ಚಿ! ಅಲ್ಲಿ ಎಲ್ಲರೂ ನಿನ್ನ ದಾರಿಯನ್ನೇ ಕಾಯುತ್ತಿದ್ದಾರೆ. ಮತ್ತೆ ನೀನು ಹಿಂದಿರುಗೋಣ ಅನ್ನುತ್ತಿದ್ದೀಯಾ”.
ಮಾನಿ - “ಏನೋ ಅನಿಷ್ಟ ಸಂಭವಿಸಲಿದೆಯೆಂದು ನನ್ನ ಮನಸ್ಸು ಹೇಳುತ್ತಿದೆ”.
ಗೋಕುಲ - “ಮತ್ತೆ ನನ್ನ ಮನಸ್ಸು ಹೇಳುತ್ತಿದೆ ನೀನು ರಾಣಿಯಾಗುವೆಯೆಂದು”.
ಮಾನಿ - “ಹತ್ತು-ಹದಿನೈದು ದಿನ ಏಕೆ ಕಾಯಬಾರದು ನೀನು? ಮಾನಿಗೆ ಹುಷಾರಿಲ್ಲವೆಂದು ಹೇಳು”.
ಗೋಕುಲ - “ಹುಚ್ಚಿಯಂತೆ ಮಾತನಾಡಬೇಡ”.
ಮಾನಿ - “ಜನರು ಎಷ್ಟು ನಗುತ್ತಾರೋ?”.
ಗೋಕುಲ - “ಶುಭಕಾರ್ಯದಲ್ಲಿ ನಾನು ಯಾರನ್ನೂ ಲೆಕ್ಕಿಸುವುದಿಲ್ಲ”.
ಮಾನಿ - “ಅಮ್ಮ ನಿನ್ನನ್ನು ಮನೆಯೊಳಗೆ ಸೇರಿಸಲಾರರು. ನನ್ನಿಂದ ನಿನಗೂ ಬೈಗಳು ಸಿಗುತ್ತವೆ”.
ಗೋಕುಲ - “ಪರವಾಗಿಲ್ಲ.  ಅವರದಂತೂ ಇದು ಅಭ್ಯಾಸವೇ ಆಗಿದೆ”.
ಟಾಂಗಾ ತಲುಪಿತು.  ಇಂದ್ರನಾಥನ ತಾಯಿ ವಿಚಾರವಂತ ಮಹಿಳೆ.  ಅವರು ಬಂದು ವಧುವನ್ನು ಇಳಿಸಿಕೊಂಡು ಒಳಗೆ ಕರಕೊಂಡು ಹೋದರು.

(5)
ಗೋಕುಲ ಅಲ್ಲಿಂದ ಮನೆಗೆ ಹೋದಾಗ ಗಂಟೆ ಹನ್ನೊಂದು.  ಒಂದೆಡೆ ಶುಭ ಕಾರ್ಯ ಪೂರೈಸಿದ ಆನಂದ, ಇನ್ನೊಂದೆಡೆ ನಾಳೆ ಮಾನಿ ಬರದಿದ್ದಾಗ ಜನರಿಗೆ ಏನು ಉತ್ತರ ಕೊಡುವುದೆಂಬ ಭಯ.  ಹೋಗಿ ಎಲ್ಲವನ್ನೂ ಹೇಳಿ ಬಿಡುವುದೆಂದು ನಿಶ್ಚಯಿಸಿದ.  ಮುಚ್ಚಿಡುವುದು ವ್ಯರ್ಥ.  ಇವತ್ತಲ್ಲ ನಾಳೆ, ನಾಳೆಯಲ್ಲ ನಾಡಿದ್ದು ಅಂತೂ ಎಲ್ಲವನ್ನೂ ಹೇಳಲೇ ಬೇಕಾಗುವುದು.  ಹಾಗಿದ್ದರೆ ಇವತ್ತೇ ಯಾಕೆ ಹೇಳಿ ಬಿಡಬಾರದು.
ಹೀಗೆ ನಿರ್ಧರಿಸಿ ಅವನು ಮನೆಯೊಳಗೆ ಪ್ರವೇಶಿಸಿದ.
ತಾಯಿ ಬಾಗಿಲು ತೆರೆಯುತ್ತಾ ಕೇಳಿದಳು – “ಇಷ್ಟು ರಾತ್ರಿಯವರೆಗೆ ಏನು ಮಾಡುತ್ತಿದ್ದೆ? ಅವಳನ್ನು ಏಕೆ ಕರಕೊಂಡು ಬರಲಿಲ್ಲ. ನಾಳೆ ಮನೆಗೆಲಸ ಮಾಡುವವರಾರು?”
ಗೋಕುಲ ತಲೆ ತಗ್ಗಿಸಿ ನುಡಿದ – “ಅಮ್ಮಾ ಅವಳಿನ್ನು ಎಂದೂ ಹಿಂದಿರುಗಲಾರಳು. ಅವಳು ಅಲ್ಲೇ ಇರುವ ವ್ಯವಸ್ಥೆ ಆಗಿದೆ”.
ತಾಯಿ ಬಿರುಗಣ್ಣು ಬಿಟ್ಟು ಕೇಳಿದಳು – “ಏನು ಬೊಗಳ್ತಾ ಇದೀಯಾ, ಅವಳೇಕೆ ಅಲ್ಲಿರಬೇಕು?”.
ಗೋಕುಲ - “ಇಂದ್ರನಾಥನೊಂದಿಗೆ ಅವಳ ವಿವಾಹವಾಗಿದೆ”.
ತಾಯಿಗೆ ಆಕಾಶದಿಂದ ಕೆಳಗೆ ಬಿದ್ದಂತಾಯಿತು.  ತನ್ನ ಬಾಯಿಂದ ಏನು ಹೊರಬರುತ್ತಿದೆಯೆಂಬ ಜ್ಞಾನ ಸಹ ಆಕೆಗಿರಲಿಲ್ಲ.  ಕುಲನಾಶಿನಿ, ಕುಲಟೆ, ಮತ್ತಿನ್ನೇನೋ ಬಾಯಿಂದ ಬಂದವು.  ಅವರು ಎಷ್ಟು ಬೈದರೆಂದರೆ ಗೋಕುಲನ ಧೈರ್ಯ ಚರಮಸೀಮೆಯನ್ನು ಉಲ್ಲಂಘಿಸಿತು.  ಅವನ ಮುಖ ಕೆಂಪಾಯಿತು, ಕ್ರೋಧ ಉಮ್ಮಳಿಸಿತು.  ಹೇಳಿದ – “ಅಮ್ಮಾ, ಸಾಕು ನಿಲ್ಲಿಸು.  ಇನ್ನು ನನ್ನಲ್ಲಿ ಇದಕ್ಕಿಂತ ಹೆಚ್ಚು ಹೇಳುವ ಸಾಮರ್ಥ್ಯವಿಲ್ಲ.  ನಾನೇನಾದರೂ ಅನುಚಿತ ಕಾರ್ಯ ಎಸಗಿದ್ದಲ್ಲಿ ನಿಮ್ಮ ಬೈಗಳು ತಿಂದರೂ ತಲೆ ಮೇಲೆತ್ತುತ್ತಿರಲಿಲ್ಲ.  ಆದರೆ ನಾನು ಯಾವುದೂ ಅನುಚಿತ ಕಾರ್ಯ ಎಸಗಿಲ್ಲ.  ಈ ಪರಿಸ್ಥಿತಿಯಲ್ಲಿ ಏನು ಕರ್ತವ್ಯವಿತ್ತೋ, ಯಾವುದನ್ನು ಯಾವುದೇ ಒಳ್ಳೇ ವ್ಯಕ್ತಿ ಮಾಡಬೇಕಿತ್ತೋ ನಾನದನ್ನು ಮಾಡಿದ್ದೇನೆ. ನೀನೊಬ್ಬ ಮೂರ್ಖಳು.  ಕಾಲ ಬದಲಾಗಿರುವುದು ನಿನಗೆ ಸ್ವಲ್ಪವೂ ಗೊತ್ತಿಲ್ಲ. ಹಾಗಾಗಿ ನಾನು ಧೈರ್ಯದಿಂದ ನಿನ್ನ ಬೈಗಳನ್ನು ಕೇಳಿಸಿಕೊಂಡೆ.  ನೀನು ಮತ್ತು ಅಪ್ಪ ಸಹ, ಇದನ್ನು ನಾನು ದುಃಖದಿಂದ ಹೇಳಬೇಕಾಗಿದೆ, ಮಾನಿಯ ಜೀವನವನ್ನು ನರಕಮಾಡಿದ್ದಿರಿ.  ಏಕೆಂದರೆ ಅವಳು ನಿಮ್ಮ ಆಶ್ರಿತಳಾಗಿದ್ದಳು, ಅದಕ್ಕೇ ಅಲ್ಲವೇ? ಅವಳು ಅನಾಥೆ, ಅದಕ್ಕಾಗಿಯೇ ಅಲ್ಲವೇ?  ಅವಳೀಗ ನಿಮ್ಮ ಬೈಗಳನ್ನು ತಿನ್ನಲು ಬರುವುದಿಲ್ಲ.  ನಿನ್ನ ಮನೆಯಲ್ಲಿ ವಿವಾಹದ ಉತ್ಸವ ನಡೆಯುತ್ತಿರುವಾಗ ನಿನ್ನದೇ ಕಠಿಣ ಮಾತಿನಿಂದ ನೊಂದು ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಳು. ಇಂದ್ರನಾಥ ಮೇಲೆ ಹೋಗಿ ತಲುಪಿರದಿದ್ದರೆ ಈ ದಿನ ನಾವು, ನೀವು ಇಡೀ ಮನೆಯವರು ಜೈಲಿನಲ್ಲಿರುತ್ತಿದ್ದೆವು”.
ತಾಯಿ ಕಣ್ಣರಳಿಸಿ ಹೇಳಿದಳು – “ಆಹಾ! ಎಂತಹ ಸುಪುತ್ರ ನೀನಪ್ಪಾ, ಇಡೀ ಮನೆಯನ್ನು ಸಂಕಟದಿಂದ ಉಳಿಸಿದ್ದೀಯಾ.  ಯಾಕಾಗಬಾರದು.  ಈಗ ತಂಗಿಯ ಸರದಿ.  ಕೆಲದಿನಗಳಲ್ಲಿ ನನ್ನನ್ನೂ ಕರಕೊಂಡು ಯಾರ ಕೊರಳಿಗಾದರೂ ಕಟ್ಟಿಬಿಡು. ಇದರಿಂದ ಹಣ ಮಾಡಬಹುದು. ಈ ಉದ್ಯೋಗ ಎಲ್ಲಕ್ಕಿಂತ ಒಳ್ಳೆಯದು.  ಓದಿ ಬರೆದು ಏನು ಮಾಡುತ್ತೀಯೆ?”
ಗೋಕುಲ ಮರ್ಮವೇದನೆಯಿಮದ ತತ್ತರಿಸಿದ. ವ್ಯಥೆ ತುಂಬಿದ ಸ್ವರದಿಂದ ಹೇಳಿದ – “ನಿನ್ನಂಥ ತಾಯಿಯ ಗರ್ಭದಿಂದ ಯಾವ ಮಗನೂ ಹುಟ್ಟುವಂತೆ ಭಗವಂತ ಮಾಡದಿರಲಿ.  ನಿನ್ನ ಮುಖ ನೋಡುವುದೂ ಪಾಪ!”.
 ಹೀಗೆ ಹೇಳುತ್ತಾ ಅವನು ಮನೆಯಿಂದ ಹೊರ ನಡೆದ ಮತ್ತು ಉನ್ಮತ್ತನಂತೆ ಒಂದೆಡೆ ನಿಂತ.  ಗಾಳಿ ಜೋರಾಗಿ ಬೀಸುತ್ತಿತ್ತು.  ಆದರೆ ಅವನಿಗೆ ಉಸಿರಾಡಲು ಗಾಳಿ ಇಲ್ಲದ ಹಾಗೆ ಅನಿಸುತ್ತಿತ್ತು.
(6)
ಒಂದು ವಾರ ಕಳೆಯಿತು.  ಎಲ್ಲೂ ಗೋಕುಲನ ಪತ್ತೆ ಇಲ್ಲ.  ಇಂದ್ರನಾಥನಿಗೆ ಮುಂಬೈಯಲ್ಲಿ ಒಂದು ಕೆಲಸ ಸಿಕ್ಕಿತು.  ಅವನಲ್ಲಿಗೆ ಹೊರಟುಹೋದ.  ಅಲ್ಲಿ ಉಳಕೊಳ್ಳುವ ವ್ಯವಸ್ಥೆ ಮಾಡಿ ತನ್ನ ತಾಯಿಗೆ ಅವನು ತಂತಿ ಕಳುಹಿಸುವ, ಮತ್ತೆ ಅತ್ತೆ, ಸೊಸೆ ಅಲ್ಲಿಗೆ ಹೋಗುವರು.  
ವಂಶೀಧರರಿಗೆ ಮೊದಲು ಗೋಕುಲ ಇಂದ್ರನಾಥನ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆಂಬ ಸಂದೇಹವಿತ್ತು.  ಆದರೆ ಅಲ್ಲಿ ಸಿಗದೆ ಹೋಗಲು ಅವರು ಇಡೀ ನಗರದಲ್ಲಿ ಹುಡುಕಾಟ ಪ್ರಾರಂಭಿಸಿದರು.  ಪರಿಚಯವರು, ಸ್ನೇಹಿತರು, ಸಂಬಂಧಿಕರು, ಎಲ್ಲರ ಮನೆಗೂ ಹೋದರು.  ಎಲ್ಲೆಡೆ ನಕಾರವೇ ಸಿಕ್ಕಿತು. ದಿನವಿಡೀ ಬಿಸಿಲಿನಲ್ಲಿ ಓಡಾಡಿ ಸಂಜೆ ಮನೆಗೆ ಬಂದು ಪತ್ನಿಯನ್ನು ನಿಂದಿಸಲಾರಂಭಿಸಿದರು – “ಮಗನಿಗೆ ಇನ್ನು ಬಯ್ಯು. ಬಯ್ಯುತ್ತಾ ಹಾಲು ಕುಡಿ. ನಿನಗೆ ಎಂದಾದರೂ ಬುದ್ಧಿ ಬರುವುದೋ ಇಲ್ಲವೋ ನಾಕಾಣೆ.  ರಂಡೆ ಹೋದಳು, ಹೋಗಲಿ. ತಲೆ ಮೇಲಿನ ಭಾರ ಇಳಿಯಿತು.  ಕೆಲಸಕ್ಕೆ ಆಳನ್ನು ಇಟ್ಟುಕೋ.  ಅವಳಿಲ್ಲದಾಗ ನಾವೇನು ಉಪವಾಸ ಸಾಯುತ್ತಿದ್ದೆವೇನು? ಎಲ್ಲೆಡೆ ವಿಧವೆಯರ ಪುನರ್‍ವಿವಾಹ ನಡೆಯುತ್ತಲೇ ಇದೆ.  ಇದೇನು ಅಸಂಭವದ ಮಾತಲ್ಲ.  ಇದೇನಾದರೂ ನಮ್ಮ ಕೈಯಲ್ಲಿ ಇದ್ದಿದ್ದರೆ ವಿಧವಾ ವಿವಾಹದ ಪಕ್ಷಪಾತಿಗಳನ್ನು ದೇಶದಿಂದಲೇ ಓಡಿಸಿ ಬಿಡುತ್ತಿದ್ದೆವು, ಶಾಪ ಹಾಕಿ ಸುಟ್ಟು ಬಿಡುತ್ತಿದ್ದೆವು.  ಆದರೆ ಇದು ನಮ್ಮ ಕೈಯಲ್ಲಿ ಇಲ್ಲ.  ಮತ್ತೆ ನನ್ನನ್ನು ಕೇಳುವಷ್ಟು ನಿನ್ನ ಕೈಲಿ ಆಗಲಿಲ್ಲವೇ.  ನನಗೇನು ಸರಿ ಎಂದು ಕಂಡಿತೋ ಮಾಡುತ್ತಿದ್ದೆ.  ನಾನೇನು ಕಛೇರಿಯಿಂದ ಮನೆಗೇ ಬರುವುದಿಲ್ಲ, ನನ್ನ ಅಂತ್ಯಕ್ರಿಯೆಯೇ ಆಗಿಹೋಯಿತು ಎಂದು ನೀನು ತಿಳಿದಿದ್ದೆಯೇನು?  ಸುಮ್ಮನೆ ಹುಡುಗನ ಮೇಲೆ ಹರಿಹಾಯ್ದೆ.  ಈಗ ಅಳು, ಎದೆ ತುಂಬಿ ಅಳು!”
  ಸಂಜೆಯಾಗಿತ್ತು.  ವಂಶೀಧರರು ಪತ್ನಿಯ ಮೇಲೆ ಬೈಗಳ ಸುರಿಮಳೆ ಸುರಿಸಿ ಉದ್ವಿಗ್ನತೆಯಿಂದ ಬಾಗಿಲ ಬಳಿ ನಿಂತಿದ್ದರು.  ಮಾನಿಯ ಮೇಲೆ ಕ್ರೋಧ ಉಕ್ಕುಕ್ಕಿ ಬರುತ್ತಿತ್ತು.  ಈ ರಾಕ್ಷಸಿಯ ಕಾರಣದಿಂದ ನನ್ನ ಮನೆಯ ಸರ್ವನಾಶವಾಗಿ ಹೋಯಿತು.  ಎಂಥಾ ಕೆಟ್ಟ ಘಳಿಗೆಯಲ್ಲಿ ಬಂದಳೋ ಮನೆಯನ್ನು ಹಾಳುಗೆಡವಿದಳು! ಅವಳು ಬರದೆ ಹೋಗಿದ್ದಲ್ಲಿ ಇಂದು ಈ ಕೆಟ್ಟ ದಿನಗಳನ್ನು ಕಾಣಬೇಕಾಗಿರಲಿಲ್ಲ.  ಎಂತಹ ಬುದ್ಧಿವಂತ, ಎಂತಹ ಪ್ರತಿಭಾಶಾಲಿ ಮಗ. ಎಲ್ಲಿ ಹೋದನೋ!
ಇದ್ದಕ್ಕಿದ್ದಂತೆ ಓರ್ವ ವೃದ್ಧೆ ಅವರ ಬಳಿ ಬಂದು ಹೇಳಿದಳು – “ಬಾಬು ಸಾಹೇಬರೇ ಈ ಕಾಗದ ತಂದಿದ್ದೇನೆ, ತೆಗೆದುಕೊಳ್ಳಿ”
ವಂಶೀಧರರು ತಕ್ಷಣ ವೃದ್ಧೆಯಿಂದ ಕಾಗದ ಕಿತ್ತುಕೊಂಡರು. ಅವರೆದೆಯಲ್ಲಿ ಆಶೆ ಮಿನುಗಹತ್ತಿತು.  ಬಹುಶಃ ಗೋಕುಲ ಕಾಗದ ಬರೆದಿರಬೇಕು. ಕತ್ತಲಲ್ಲಿ ಏನೂ ತಿಳಿಯಲಿಲ್ಲ. ಕೇಳಿದರು – “ಎಲ್ಲಿಂದ ತಂದಿದ್ದೀಯೆ?”
ವೃದ್ಧೆ ಹೇಳಿದಳು – “ಅದೇ ಹುಸೇನ್‍ಗಂಜ್‍ನಲ್ಲಿರುವ ಬಾಬು, ಮುಂಬೈನಲ್ಲಿ ನೌಕರಿ ಮಾಡುತ್ತಾರೆ, ಅವರ ಪತ್ನಿ ಕಳಿಸಿದ್ದಾರೆ”.
ವಂಶೀಧರರು ಕೋಣೆಗೆ ಹೋಗಿ ದೀಪ ಹಚ್ಚಿ ಕಾಗದ ಓದಲಾರಂಭಿಸಿದರು. ಮಾನಿಯ ಕಾಗದ. ಬರೆದಿದ್ದಳು – “ಪೂಜ್ಯ ಚಿಕ್ಕಪ್ಪ, ಅಭಾಗಿನಿ ಮಾನಿಯ ಪ್ರಣಾಮ ಸ್ವೀಕರಿಸಿರಿ.  ಗೋಕುಲಣ್ಣ ಎಲ್ಲೋ ಹೋಗಿ ಬಿಟ್ಟಿದ್ದಾರೆ ಮತ್ತು ಇದುವರೆವಿಗೂ ಅವರ ಪತ್ತೆ ಇಲ್ಲ ಎಂಬುದನ್ನು ಕೇಳಿ ನನಗೆ ಅತ್ಯಂತ ದುಃಖವಾಯಿತು.  ನಾನೇ ಇದಕ್ಕೆ ಕಾರಣ.  ಈ ಕಳಂಕ ನನ್ನ ಮೋರೆಯ ಮೇಲೆಯೇ ತಗಲಬೇಕಿತ್ತು.  ಅದು ತಗಲಿತು.  ನನ್ನಿಂದ ನಿಮಗೆ ಇಷ್ಟೊಂದು ಶೋಕವಾಗಿದೆ, ಈ ಬಗ್ಗೆ ನನಗೆ ತುಂಬಾ ದುಃಖವಿದೆ. ಆದರೆ ಅಣ್ಣ ಖಂಡಿತ ಹಿಂದಿರುಗಿ ಬರುತ್ತಾರೆ, ನನಗೆ ಈ ನಂಬಿಕೆಯಿದೆ.  ನಾನು ಇವತ್ತೇ ಒಂಭತ್ತು ಗಂಟೆಯ ಗಾಡಿಯಿಂದ ಮುಂಬೈಗೆ ಹೋಗುತ್ತಿದ್ದೇನೆ. ನನ್ನಿಂದಾದ ಅಪರಾಧಗಳಿಗೆ ನನಗೆ ಕ್ಷಮೆ ನೀಡಿರಿ.  ಹಾಗು ಚಿಕ್ಕಮ್ಮನಿಗೆ ನನ್ನ ಪ್ರಣಾಮ ತಿಳಿಸಿರಿ.  ಗೋಕುಲಣ್ಣ ಕ್ಷೇಮವಾಗಿ ಮನೆಗೆ ಹಿಂದಿರುಗಲೆಂದೇ ನಾನು ದೇವರನ್ನು ಪ್ರಾರ್ಥಿಸುತ್ತೇನೆ.  ದೇವರ ಇಚ್ಛೆಯಿದ್ದರೆ ಅಣ್ಣನ ವಿವಾಹದ ಸಮಯದಲ್ಲಿ ತಮ್ಮ ಪಾದದರ್ಶನ ಮಾಡುತ್ತೇನೆ”.
ವಂಶೀಧರರು ಪತ್ರ ಹರಿದು ಚಿಂದಿಚಿಂದಿ ಮಾಡಿದರು.  ಗಡಿಯಾರ ನೋಡಿದರೆ ಎಂಟು ಗಂಟೆಯಾಗಿತ್ತು.  ಕೂಡಲೇ ಬಟ್ಟೆ ಧರಿಸಿ ರಸ್ತೆಗೆ ಬಂದು ಗಾಡಿ ಹಿಡಿದು ರೇಲ್ವೇ ನಿಲ್ದಾಣಕ್ಕೆ ಹೋದರು.

(7)
ಮುಂಬೈ ಮೇಲ್ ಪ್ಲಾಟ್‍ಫಾರಂನಲ್ಲಿ ನಿಂತಿತ್ತು.  ಪಯಣಿಗರು ಓಡಾಡುತ್ತಿದ್ದರು. ಮಾರಾಟಗಾರರ ಕಿರುಚಾಟದಿಂದ ಯಾರ ಮಾತೂ ಕೇಳುತ್ತಿರಲಿಲ್ಲ.  ಗಾಡಿ ಬಿಡಲು ಸ್ವಲ್ಪವೇ ಸಮಯವಿತ್ತು.  ಮಾನಿ ಮತ್ತು ಅವಳ ಅತ್ತೆ ಒಂದು ಸ್ತ್ರೀಯರ ಡಬ್ಬಿಯಲ್ಲಿ ಕುಳಿತಿದ್ದರು.  ಮಾನಿ ಸಜಲ ಕಂಗಳಿಂದ ಎದುರಿಗೆ ನೋಡುತ್ತಿದ್ದಳು.  ಅತೀತ ದುಃಖದಾಯಕವಾಗಿದ್ದರೂ ಅದರ ಸ್ಮೃತಿ ಮಧುರವೇ.  ಮಾನಿ ಇಂದು ಆ ಕೆಟ್ಟ ದಿನಗಳನ್ನು ನೆನೆದು ಸುಖ ಪಡುತ್ತಿದ್ದಳು. ಗೋಕುಲ ಇನ್ನೆಂದು ಸಿಗುವನೋ ಯಾರಿಗೆ ಗೊತ್ತು. ಚಿಕ್ಕಪ್ಪ ಬಂದರೆ ಅವರನ್ನು ನೋಡಬಹುದಿತ್ತು.  ಆಗಾಗ ಕೋಪಿಸಿಕೊಂಡರೂ ಏನೀಗ, ತನ್ನ ಒಳ್ಳೆಯದಕ್ಕಾಗೇ ಅಲ್ಲವೇ ಅವರು ಬೈಯುತ್ತಿದುದು.  ಅವರು ಬರುವುದಿಲ್ಲ.  ಈಗ ಗಾಡಿ ಬಿಡಲು ಕೊಂಚ ಸಮಯವೇ ಇರುವುದು.  ಹೇಗೆ ಬಂದಾರು?  ಸಮಾಜದಲ್ಲಿ ಕೋಲಾಹಲ ಉಂಟಾಗದೇ? ದೇವರಿಚ್ಛೆ ಇದ್ದರೆ ಮುಂದೆ ಇಲ್ಲಿ ಬಂದಾಗ ಖಂಡಿತ ಅವರನ್ನು ಭೇಟಿಯಾಗುವೆ.
ಇದ್ದಕ್ಕಿದ್ದಂತೆ ಅವಳಿಗೆ ಲಾಲಾ ವಂಶೀಧರರು ಬರುತ್ತಿರುವುದು ಕಾಣಿಸಿತು.  ಅವಳು ಗಾಡಿಯಿಂದ ಇಳಿದು ಹೊರಗೆ ನಿಂತಳು, ಮತ್ತೆ ಚಿಕ್ಕಪ್ಪನೆಡೆಗೆ ನಡೆದಳು.  ಅವರ ಕಾಲಿಗೆ ಬೀಳುವಷ್ಟರಲ್ಲಿ ಅವರು ಹಿಂದೆ ಸರಿದರು ಹಾಗೂ ಬಿರುಗಣ್ಣು ಬಿಟ್ಟು ನುಡಿದರು – “ನನ್ನನ್ನು ಮುಟ್ಟಬೇಡ, ದೂರ ಇರು, ಅಭಾಗಿನಿಯೇ ನಾಚಿಕೆಯಿಲ್ಲದೆ ನನಗೆ ಪತ್ರ ಬರೆಯುತ್ತಾಳೆ.  ನಿನಗೆ ಸಾವು ಸಹ ಬರದು.  ನೀನು ನನ್ನ ಕುಲದ ಸರ್ವನಾಶ ಮಾಡಿರುವೆ.  ಇದುವರೆಗೆ ಗೋಕುಲನ ಪತ್ತೆ ಇಲ್ಲ.  ನಿನ್ನಿಂದಾನೇ ಅವನು ಮನೆ ಬಿಟ್ಟದ್ದು ಮತ್ತು ನೀನೀಗ ನನ್ನೆದೆಯ ಮೇಲೆ ಮೆಣಸು ಅರೆಯುತ್ತಿದ್ದೀಯಾ.  ನಿನಗಾಗಿ ಗಂಗೆಯಲ್ಲಿ ನೀರಿಲ್ಲವೇನು?  ನೀನು ಇಂತಹ ಕುಲಟೆ, ಇಂತಹ ಮಾರಿ ಎಂದು ಮೊದಲೇ ತಿಳಿದಿದ್ದರೆ ನಾನು ಅಂದೇ ನಿನ್ನ ಕತ್ತು ಹಿಸುಕಿ ಬಿಡುತ್ತಿದ್ದೆ.  ಈಗ ನನಗೆ ತನ್ನ ಭಕ್ತಿ ತೋರಿಸಲು ಬಂದಿದ್ದಾಳೆ.  ನಿನ್ನಂಥ ಪಾಪಿಷ್ಟರು ಸತ್ತರೇ ಒಳ್ಳೆಯದು, ಭೂಮಿಯ ಭಾರ ಕಡಿಮೆಯಾಗುತ್ತದೆ”.
ಪ್ಲಾಟ್‍ಫಾರಂನ ಮೇಲೆ ನೂರಾರು ಜನರ ಸಂತೆಯೇ ನೆರೆದಿತ್ತು, ಮತ್ತೆ ವಂಶೀಧರರು ನಿರ್ಲಜ್ಜೆಯಿಂದ ಬೈಗಳನ್ನು ಸುರಿಸುತ್ತಿದ್ದರು.  ಏನು ವಿಷಯವೆಂದು ಯಾರಿಗೂ ಅರ್ಥವಾಗಲಿಲ್ಲ.  ಆದರೆ ಮನಸ್ಸಿನಲ್ಲಿ ಎಲ್ಲರಿಗೂ ಲಾಲಾರ ಬಗ್ಗೆ ತಿರಸ್ಕಾರ ಉಂಟಾಯಿತು.
ಮಾನಿ ಕಲ್ಲಿನ ಮೂರ್ತಿಯಂತೆ ನಿಂತಿದ್ದಳು. ಅಲ್ಲೇ ಪ್ರತಿಷ್ಠಾಪಿತಳಾದಂತೆ ಇದ್ದಳು. ಅವಳ ಅಭಿಮಾನವೆಲ್ಲಾ ಚೂರುಚೂರಾಯಿತು. ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ, ವಜ್ರಪಾತವಾಗಿ ಅವಳ ಜೀವನ – ಅಧಮ ಜೀವನ – ಅಂತ್ಯವಾಗಬಾರದೇ ಎಂದು ಅನ್ನಿಸಿತು.  ಇಷ್ಟೊಂದು ಜನರ ಮುಂದೆ ಅವಳ ಅಪಮಾನವಾಗಿ ಹೋಯಿತು.  ಅವಳ ಕಣ್ಣಿಂದ ಒಂದು ಹನಿ ನೀರೂ ಜಿನುಗಲಿಲ್ಲ, ಎದೆಯಲ್ಲಿ ಕಣ್ಣೀರೇ ಇರಲಿಲ್ಲ.  ಅದರ ಬದಲಿಗೆ ಒಂದು ದಾವಾನಲ ಉರಿಯುತ್ತಿತ್ತು. ಅದು ವೇಗದಿಂದ ಮಸ್ತಿಷ್ಕದೆಡೆಗೆ ಸಾಗುತ್ತಿತ್ತು.  ಜಗತ್ತಿನಲ್ಲಿ ಇದಕ್ಕಿಂತ ಅಧಮ ಜೀವನ ಇನ್ಯಾರದಿದೆ!
ಅತ್ತೆ ಕರೆದರು – “ಮಾನಿ, ಒಳಗೆ ಬಾ.

(8)
 ಗಾಡಿ ಹೊರಟಾಗ ಅತ್ತೆ ಹೇಳಿದರು – “ಇಂತಹ ನಿರ್ಲಜ್ಜ ವ್ಯಕ್ತಿಯನ್ನು ನಾನು ಇದುವರೆಗೆ ಕಂಡಿಲ್ಲ.  ಅವನ ಮುಖ ಪರಚುವಷ್ಟು ಕ್ರೋಧ ನನಗೆ ಬಂದಿತ್ತು”. 
ಮಾನಿ ತಲೆ ಎತ್ತಲಿಲ್ಲ.
ಅತ್ತೆ ಮತ್ತೆ ಹೇಳಿದರು – “ಈ ಸಂಪ್ರದಾಯವಾದಿಗಳಿಗೆ ಯಾವಾಗ ಬುದ್ಧಿ ಬರುತ್ತದೋ ನಾಕಾಣೆ.  ಈಗಂತೂ ಸಾವಿನ ದಿನಗಳೂ ಹತ್ತಿರವೇ ಇವೆ.  ನಿನ್ನ ಮಗ ಓಡಿಹೋದರೆ ನಾವೇನು ಮಾಡೋಣ ಎಂದು ಕೇಳು.  ಈತ ಇಂತಹ ಪಾಪಿಯಾಗಿರದಿದ್ದರೆ ಇಂತಹ ವಜ್ರಾಘಾತವಾದರೂ ಏಕಾಗುತ್ತಿತ್ತು?”.
ಮಾನಿ ಈಗಲೂ ಬಾಯಿ ತೆರೆಯಲಿಲ್ಲ. ಬಹುಶಃ ಅವಳ ಕಿವಿಯ ಮೇಲೆ ಏನೂ ಬೀಳುತ್ತಿರಲಿಲ್ಲ.  ಬಹುಶಃ ಅವಳಿಗೆ ತನ್ನ ಅಸ್ತಿತ್ವದ ಜ್ಞಾನವೂ ಇರಲಿಲ್ಲ.  ಅವಳು ಕಿಟಕಿಯಿಂದಾಚೆ ನೋಡುತ್ತಾ ಕುಳಿತಿದ್ದಳು.  ಆ ಅಂಧಃಕಾರದಲ್ಲಿ ಅವಳಿಗೇನು ತೋಚುತ್ತಿತ್ತೋ.  ಕಾನಪುರ ಬಂತು.  ಅತ್ತೆ ಕೇಳಿದರು – “ಮಗಳೇ ಏನಾದರೂ ತಿನ್ನುವೆಯೇನು? ಸ್ವಲ್ಪ ಮಿಠಾಯಿ ತಿನ್ನು.  ಹತ್ತು ಗಂಟೆ ಹೊಡೆದು ಎಷ್ಟೋ ಹೊತ್ತಾಯಿತು”.  ಮಾನಿ ಹೇಳಿದಳು – “ಇನ್ನೂ ಹಸಿವಿಲ್ಲ ಅಮ್ಮ, ಆಮೇಲೆ ತಿನ್ನುತ್ತೇನೆ”.  
 ಅತ್ತೆ ಮಲಗಿದರು.  ಮಾನಿಯೂ ಮಲಗಿದಳು.  ಆದರೆ ಚಿಕ್ಕಪ್ಪನ ಆ ಮುಖ ಎದುರೇ ನಿಂತಿತ್ತು ಮತ್ತು ಅವರ ಮಾತು ಕಿವಿಗಳಲ್ಲಿ ಪ್ರತಿಧ್ವನಿಸುತ್ತಿತ್ತು.  ಓಹ್! ನಾನೆಂಥ ನೀಚಳು, ಎಂಥಾ ಪತಿತೆ, ನನ್ನ ಸಾವಿನಿಂದ ಭೂಭಾರ ಕಡಿಮೆಯಾಗುತ್ತದೆ! ಏನಂದರು, ನೀನು ನಿನ್ನ ಅಪ್ಪ ಅಮ್ಮಂದಿರ ಮಗಳಾಗಿದ್ದರೆ ಎಂದೂ ನನಗೆ ನಿನ್ನ ಮುಖ ತೋರಿಸಬೇಡ.  ಇಲ್ಲ, ತೋರಿಸುವುದಿಲ್ಲ. ಯಾವ ಮುಖದ ಮೇಲೆ ಮಸಿ ಹಚ್ಚಿದೆಯೋ ಅದನ್ನು ಯಾರಿಗೂ ತೋರಿಸುವ ಇಚ್ಛೆಯೂ ಇಲ್ಲ.
ಗಾಡಿ ಅಂಧಃಕಾರವನ್ನು ಸೀಳಿ ಮುನ್ನುಗ್ಗುತ್ತಿತ್ತು.  ಮಾನಿ ತನ್ನ ಪೆಟ್ಟಿಗೆ ತೆಗೆದು ತನ್ನ ಆಭರಣ ತೆಗೆದು ಅದರಲ್ಲಿಟ್ಟಳು.  ಬಳಿಕ ಇಂದ್ರನಾಥನ ಛಾಯಚಿತ್ರವನ್ನು ತೆಗೆದು ಬಹಳ ಹೊತ್ತು ಅದನ್ನೇ ನೋಡುತ್ತಿದ್ದಳು.  ಅವಳ ಕಣ್ಣಲ್ಲಿ ಆತ್ಮಾಭಿಮಾನದ ಒಂದು ಮಿಂಚು ಮಿಂಚಿತು.  ಅವಳು ಛಾಯಾಚಿತ್ರವನ್ನು ಒಳಗಿಟ್ಟು ತನಗೆ ತಾನೇ ಹೇಳಿದಳು – 'ಇಲ್ಲ, ಇಲ್ಲ, ನಾನು ನಿಮ್ಮ ಜೀವನವನ್ನು ಕಳಂಕಿತಗೊಳಿಸಲಾರೆ. ನೀವು ದೇವರ ಸಮಾನ, ನೀವು ನನ್ನ ಮೇಲೆ ದಯೆ ತೋರಿಸಿದ್ದೀರಿ.  ನಾನು ನನ್ನ ಪೂರ್ವಜನ್ಮದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡುತ್ತಿದ್ದೆ. ನೀವು ನನ್ನನ್ನು ಎತ್ತಿ ನಿಮ್ಮೆದೆಗೆ ಒತ್ತಿಕೊಂಡಿರಿ.  ಆದರೆ ನಾನು ನಿಮ್ಮನ್ನು ಕಳಂಕಿತಗೊಳಿಸಲಾರೆ. ನಿಮಗೆ ನಾನೆಂದರೆ ಪ್ರೀತಿ ಇದೆ.  ನೀವು ನನಗಾಗಿ ಅನಾದರ, ಅಪಮಾನ, ನಿಂದೆ ಎಲ್ಲಾ ಸಹಿಸುವಿರಿ.  ಆದರೆ ನಾನು ನಿಮ್ಮ ಜೀವನದ ಮೇಲೆ ಹೊರೆಯಾಗಿ ಇರಲಾರೆ.'
  ಗಾಡಿ ಅಂಧಃಕಾರವನ್ನು ಸೀಳಿ ಓಡುತ್ತಿತ್ತು.  ಮಾನಿ ಆಕಾಶದೆಡೆಗೆ ಎಷ್ಟೊಂದು ಹೊತ್ತು ನೋಡುತ್ತಿದ್ದಳೆಂದರೆ ಅವಳಿಗೆ ಎಲ್ಲಾ ತಾರೆಗಳು ಅದೃಶ್ಯವಾಗಿ ಅಂಧಃಕಾರದಲ್ಲಿ ತನ್ನ ತಾಯಿಯ ಸ್ವರೂಪ ಕಾಣಿಸಿತು – ಎಷ್ಟು ಉಜ್ವಲ, ಎಷ್ಟು ಪ್ರತ್ಯಕ್ಷವಾಗಿ ಎಂದರೆ ಅವಳು ಬೆಚ್ಚಿಬಿದ್ದು ಕಣ್ಣು ಮುಚ್ಚಿಕೊಂಡಳು.  ಮತ್ತೆ ಒಳಗೆ ನೋಡಿದರೆ ಅತ್ತೆ ನಿದ್ರೆ ಮಾಡುತ್ತಿದ್ದರು.

(9)
ರಾತ್ರಿ ಎಷ್ಟು ಕಳೆದಿತ್ತೋ ಗೊತ್ತಿಲ್ಲ. ಬಾಗಿಲು ತೆರೆಯುವ ಶಬ್ದದಿಂದ ಅತ್ತೆ ಕಣ್ಣು ತೆರೆದರು.  ಗಾಡಿ ವೇಗದಿಂದ ಧಾವಿಸುತ್ತಿತ್ತು.  ಆದರೆ ಸೊಸೆ ಎಲ್ಲೂ ಕಂಡು ಬರಲಿಲ್ಲ. ಅವರು ಕಣ್ಣು ಒರೆಸುತ್ತಾ ಎದ್ದು ಕುಳಿತು ಕರೆದಳು – “ಸೊಸೆಯೇ, ಸೊಸೆಯೇ.” ಯಾವ ಉತ್ತರವೂ ಬರಲಿಲ್ಲ. ಅವರ ಹೃದಯ ಢವಗುಟ್ಟಲಾರಂಭಿಸಿತು.  ಮೇಲಿನ ಬರ್ತ್ ನೋಡಿದರು, ಪಾಯಖಾನೆ ನೋಡಿದರು, ಬೆಂಚಿನ ಕೆಳಗೆ ನೋಡಿದರು, ಸೊಸೆ ಎಲ್ಲೂ ಇಲ್ಲ.   ಆಗವರು ಬಾಗಿಲ ಬಳಿ ಬಂದು ನಿಂತರು.  ಈ ಬಾಗಿಲನ್ನು ತೆರೆದಿದ್ದು ಯಾರು ಎಂಬ ಸಂದೇಹ ಬಂತು. ಗಾಡಿಯೊಳಗಂತೂ ಯಾರೂ ಬಂದಿಲ್ಲ! ಅವರಿಗೆ ಭಯವಾಗತೊಡಗಿತು.  ಅವರು ಕಿಟಕಿ ಮುಚ್ಚಿ ಜೋರು ಜೋರಾಗಿ ಅಳಲಾರಂಭಿಸಿದರು.  ಯಾರನ್ನು ಕೇಳುವುದು? ಈ ಅಂಚೆಗಾಡಿ ಎಷ್ಟು ಹೊತ್ತಿನ ನಂತರ ನಿಲ್ಲುವುದೋ. ಸೊಸೆಗೆ ಪುರುಷರ ಗಾಡಿಯಲ್ಲೇ ಹೋಗೋಣ ಎಂದಿದ್ದೆ.  ಆದರೆ ನನ್ನ ಮಾತನ್ನು ಕೇಳಲಿಲ್ಲ. ಅಮ್ಮಾ ನಿಮಗೆ ಮಲಗಲು ತೊಂದರೆ ಎಂದಿದ್ದಳು.  ಅವಳು ಕೊಟ್ಟಿದ್ದು ಈ ಆರಾಮವನ್ನೇ!
ಇದ್ದಕ್ಕಿದ್ದಂತೆ ಅವರಿಗೆ ಅಪಾಯದ ಸರಪಳಿ ನೆನಪಿಗೆ ಬಂತು.  ಅವರು ಜೋರಾಗಿ ಸರಪಳಿಯನ್ನು ಬಹಳ ಸಾರಿ ಎಳೆದರು.  ಎಷ್ಟೋ ನಿಮಿಷಗಳಾದ ನಂತರ ಗಾಡಿ ನಿಂತಿತು.  ಗಾರ್ಡ್ ಬಂದ.  ಅಕ್ಕಪಕ್ಕದ ಡಬ್ಬಿಗಳಿಂದ ನಾಲ್ಕಾರು ಜನರೂ ಬಂದರು. ಮತ್ತೆ ಜನರು ಇಡೀ ಡಬ್ಬಿಯಲ್ಲಿ ಹುಡುಕಿದರು.  ಕೆಳಗಿನ ಬೆಂಚನ್ನು ಗಮನವಹಿಸಿ ನೋಡಿದರು.  ಎಲ್ಲೂ ರಕ್ತದ ಚಿಹ್ನೆಯಿಲ್ಲ. ಸಾಮಾನಿನ ತಲಾಶಿ ನಡೆಸಿದರು. ಹಾಸಿಗೆ, ಸಂದೂಕ, ಪಾತ್ರೆ ಪಗಡಿ ಎಲ್ಲವೂ ಇದ್ದವು.  ಎಲ್ಲದರ ಬೀಗಗಳೂ ಸರಿಯಾಗಿದ್ದವು. ಯಾವ ಸಾಮಾನೂ ಮಾಯವಾಗಿರಲಿಲ್ಲ.  ಹೊರಗಿನಿಂದ ಯಾರಾದರೂ ವ್ಯಕ್ತಿ ಒಳಗೆ ಬಂದರೂ ಓಡುವ ಗಾಡಿ ಬಿಟ್ಟು ಎಲ್ಲಿಗೆ ಹೋದಾನು?  ಓರ್ವ ಸ್ತ್ರೀಯನ್ನು ಎತ್ತಿಕೊಂಡು ಗಾಡಿಯಿಂದ ಧುಮುಕುವುದು ಅಸಂಭವ.  ಇವೆಲ್ಲಾ ಪರೀಕ್ಷೆಯ ಬಳಿಕ ಎಲ್ಲರೂ ಈ ತೀರ್ಮಾನಕ್ಕೆ ಬಂದರು – ಮಾನಿ ಬಾಗಿಲು ತೆರೆದು ಬಗ್ಗಿ ನೋಡುವಾಗ ಬಾಗಿಲ ಹಿಡಿಯ ಮೇಲಿಂದ ಕೈ ಜಾರಿ ಕೆಳಗೆ ಬಿದ್ದಿರಬೇಕು.  ಗಾರ್ಡ್ ಒಳ್ಳೆಯ ವ್ಯಕ್ತಿ. ಅವನು ಕೆಳಗಿಳಿದು ಒಂದು ಮೈಲಿಯವರೆಗೆ ರಸ್ತೆಯ ಎರಡೂ ಕಡೆ ಹುಡುಕಿದ. ಮಾನಿಯ ಯಾವ ಚಿಹ್ನೆಯೂ ಸಿಗಲಿಲ್ಲ.  ರಾತ್ರಿ ಹೊತ್ತು ಇದಕ್ಕಿಂತ ಜಾಸ್ತಿ ಇನ್ನೇನು ತಾನೇ ಮಾಡಬಹುದಿತ್ತು.  ಕೆಲಜನರು ಅತ್ತೆಯನ್ನು ಆಗ್ರಹಪೂರ್ವಕವಾಗಿ ಪುರುಷರ ಡಬ್ಬಿಗೆ ಕರೆದೊಯ್ದರು.  ಅತ್ತೆ ಮುಂದಿನ ನಿಲ್ದಾಣದಲ್ಲಿ ಇಳಿಯುವುದು ಮತ್ತು ಬೆಳಿಗ್ಗೆ ಇನ್ನೂ ಸ್ವಲ್ಪ ದೂರ ಅಲ್ಲಿ ಇಲ್ಲಿ ಹುಡುಕುವುದು ಎಂದು ತೀರ್ಮಾನವಾಯಿತು. ವಿಪತ್ತಿನಲ್ಲಿ ನಾವು ಇತರರ ಮುಖವನ್ನೇ ದೃಷ್ಟಿಸುವ ಹಾಗಾಗುತ್ತದೆ.  ಅತ್ತೆ ಒಮ್ಮೆ ಒಬ್ಬರ ಮುಖ ನೋಡಿದರೆ ಮತ್ತೊಮ್ಮೆ ಇನ್ನೊಬ್ಬರದು.  ಯಾಚನೆ ತುಂಬಿದ ಅವರ ಕಂಗಳು ಎಲ್ಲರಲ್ಲೂ ಹೀಗೆ ಕೇಳುವಂತಿತ್ತು – “ಯಾರಾದರೂ ನನ್ನ ಮಗುವನ್ನು ಯಾಕೆ ಹುಡುಕಿ ತರುವುದಿಲ್ಲ?  ಅಯ್ಯೋ, ಈಗಿನ್ನೂ ಪ್ರಸ್ತವೂ ಆಗಿಲ್ಲ.  ಎಂಥೆಂಥ ಆಕಾಂಕ್ಷೆ - ಭರವಸೆಗಳನ್ನಿಟ್ಟುಕೊಂಡು ಪತಿಯ ಬಳಿ ಹೋಗುತ್ತಿದ್ದಳು. ಯಾರಾದರೂ ಆ ದುಷ್ಟ ವಂಶೀಧರನ ಹತ್ತಿರ ಹೋಗಿ ಯಾಕೆ ಹೇಳಬಾರದು - ನೋಡು, ನಿನ್ನ ಮನೋಭಿಲಾಷೆ ಪೂರೈಸಿತು. ನೀನು ಇಚ್ಛಿಸಿದ್ದು ಪೂರ್ತಿಯಾಯಿತು. ಈಗಲೂ ನಿನ್ನ ಎದೆ ತುಂಬಿ ಬರದೇನು?”  ವೃದ್ಧೆ ಕುಳಿತು ಅಳುತ್ತಿದ್ದಳು ಹಾಗೂ ಗಾಡಿ ಅಂಧಃಕಾರವನ್ನು ಸೀಳುತ್ತಾ ಓಡಿತು.

(10)
ಅಂದು ಭಾನುವಾರ. ಸಂಜೆ ಇಂದ್ರನಾಥ ತನ್ನ ಇಬ್ಬರು-ಮೂವರು ಮಿತ್ರರೊಡನೆ ತನ್ನ ಮನೆಯ ಬಿಸಿಲು ಮಚ್ಚಿನಲ್ಲಿ ಕುಳಿತಿದ್ದ.  ಪರಸ್ಪರ ಹಾಸ್ಯ-ಪರಿಹಾಸ್ಯ ನಡೆದಿತ್ತು. ಮಾನಿಯ ಆಗಮನ ಪರಿಹಾಸದ ವಿಷಯ.
ಒಬ್ಬ ಮಿತ್ರ ಹೇಳಿದ – “ಏನಪ್ಪಾ ಇಂದ್ರ, ನಿನಗಂತೂ ವೈವಾಹಿಕ ಜೀವನದ ಸ್ವಲ್ಪ ಅನುಭವವಿದೆ.  ನಮಗೇಕೆ ಸಲಹೆ ನೀಡಬಾರದು?  ಏನಾದರೂ ಗೂಡು ಮಾಡುವುದೋ ಅಥವಾ ಹೀಗೆ ಮರದ ರೆಂಬೆಗಳ ಮೇಲೆಯೇ ದಿನ ದೂಡುವುದೋ? ಪತ್ರಿಕೆಗಳನ್ನು ನೋಡಿದರಂತೂ ವೈವಾಹಿಕ ಜೀವನ ಮತ್ತು ನರಕಗಳ ನಡುವೆ ಬಹಳ ಕಡಿಮೆ ಅಂತರವಿದೆ ಎಂದು ಅನಿಸುತ್ತದೆ”.
ಇಂದ್ರನಾಥ ನಕ್ಕು ಹೇಳಿದ – “ತಮ್ಮಾ, ಇದು ವಿಧಿಯಾಟ, ಹದಿನಾರಾಣೆ ವಿಧಿಯದ್ದು.  ಒಂದೆಡೆ ವೈವಾಹಿಕ ಜೀವನ ನರಕ ಸದೃಶವಾದಲ್ಲಿ ಇನ್ನೊಂದೆಡೆ ಸ್ವರ್ಗಕ್ಕಿಂತ ಕಡಿಮೆ ಇಲ್ಲ”.
ಇನ್ನೊಬ್ಬ ಮಿತ್ರ ಕೇಳಿದ – “ಇಷ್ಟೊಂದು ಸ್ವಾತಂತ್ರ್ಯ ಉಳಿಯುವುದೇನು?”
ಇಂದ್ರನಾಥ – “ಇಷ್ಟೊಂದಾ, ಇದರ ಶೇಖಡಾ ಒಂದರಷ್ಟೂ ಇಲ್ಲ.  ನೀನು ದಿನಾಲು ಸಿನೆಮಾ ನೋಡಿ ರಾತ್ರಿ ಹನ್ನೆರಡು ಘಂಟೆಗೆ ಮನೆಗೆ ಮರಳಬಯಸಿದರೆ, ಬೆಳಿಗ್ಗೆ 9 ಘಂಟೆಗೆ ಏಳಬಯಸಿದರೆ, ಆಫೀಸಿನಿಂದ ನಾಲ್ಕು ಘಂಟೆಗೆ ಬಂದು ಇಸ್ಪೀಟು ಆಡಬಯಸಿದರೆ, ಆಗ ನಿನಗೆ ವಿವಾಹ ಮಾಡಿಕೊಂಡರೆ ಯಾವುದೇ ಸುಖ ದೊರಕದು.  ಮತ್ತು ಪ್ರತಿ ತಿಂಗಳು ಏನು ಸೂಟು ಹೊಲಿಸಿಕೊಳ್ಳುತ್ತಿದ್ದೆಯೋ ಬಹುಶಃ ವರ್ಷದಲ್ಲಿ ಒಂದೂ ಹೊಲಿಸಿಕೊಳ್ಳಲಾರೆ”.
“ಶ್ರೀಮತಿಯವರು ಇಂದು ರಾತ್ರಿಯ ಗಾಡಿಯಿಂದ ಬರುತ್ತಿದ್ದಾರಲ್ಲವೇ?”
“ಹೌದು ಮೇಲ್‍ನಲ್ಲಿ.  ನನ್ನೊಂದಿಗೆ ಅವರನ್ನು ರಿಸೀವ್ ಮಾಡಲು ಬರುತ್ತೀರಿ ತಾನೆ?”
“ಇದೇನು ಕೇಳುವ ಮಾತೇ.  ಈಗ ಮನೆಗ್ಯಾರು ಹೋಗುತ್ತಾರೆ.  ಆದರೆ ನಾಳೆ ಔತಣದ ಊಟವನ್ನಂತೂ ನೀಡಲೇಬೇಕು”.
 ಆಗ ತಂತಿಯವ ಬಂದು ಇಂದ್ರನಾಥನ ಕೈಗೆ ತಂತಿ ನೀಡಿ ಹೋದ.  
 ಇಂದ್ರನಾಥನ ಮುಖವರಳಿತು.  ಕೂಡಲೇ ತಂತಿ ಬಿಡಿಸಿ ಓದಲಾರಂಭಿಸಿದ.ಒಂದು ಸಲ ಓದಿದೊಡನೆ ಎದೆ ಧಸಕ್ಕೆಂದಿತು, ಉಸಿರುಗಟ್ಟಿತು, ತಲೆ ಚಕ್ಕರ್ ಬಂದಿತು, ಕಣ್ಣಿನ ಬೆಳಕು ನಂದಿತು, ಜಗತ್ತಿನ ಮೇಲೆ ಕಪ್ಪು ಪರದೆ ಬಿದ್ದಂತಾಯಿತು. ತಂತಿಯನ್ನು ಗೆಳೆಯರ ಮುಂದೆ ಎಸೆದು ಎರಡೂ ಕೈಗಳಿಂದ ಮುಖ ಮುಚ್ಚಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದ.  ಇಬ್ಬರೂ ಸ್ನೇಹಿತರು ಗಾಬರಿಯಿಂದ ತಂತಿ ಓದಿದರು, ಓದುತ್ತಲೇ ಹತಬುದ್ಧಿಯವರಾಗಿ ಗೋಡೆಯ ಆಸರೆ ಹಿಡಿದು ನಿಂತರು.  ಅವರು ಎಣಿಸಿದ್ದಾದರೂ ಏನು, ಆಗಿದ್ದಾದರೂ ಏನು!
ತಂತಿಯಲ್ಲಿ ಬರೆದಿತ್ತು – 'ಮಾನಿ ಗಾಡಿಯಿಂದ ಹೊರಕ್ಕೆ ಹಾರಿದಳು. ಅವಳ ಶವ ಲಾಲಪುರದಿಂದ ಮೂರು ಮೈಲಿ ದೂರದಲ್ಲಿ ಸಿಕ್ಕಿದೆ. ನಾನು ಲಾಲಪುರದಲ್ಲಿ ಇದ್ದೇನೆ. ಕೂಡಲೇ ಬಾ!'
ಒಬ್ಬ ಮಿತ್ರ ಹೇಳಿದ – “ಯಾರೋ ವೈರಿ ಸುಳ್ಳು ಸುಳ್ಳೇ ಸುದ್ದಿ ಕಳುಹಿಸಿರಬೇಕು”.
ಇನ್ನೊಬ್ಬ ಮಿತ್ರ ಹೇಳಿದ – “ಹಾಂ, ಕೆಲವೊಮ್ಮೆ ಜನರು ಈ ರೀತಿಯ ವಿನೋದ ಮಾಡುವುದುಂಟು”.
ಇಂದ್ರನಾಥ ಶೂನ್ಯ ತಂಬಿದ ಕಂಗಳಿಂದ ಅವರೆಡೆ ನೋಡಿದ, ಆದರೆ ಏನನ್ನೂ ಹೇಳಲಿಲ್ಲ.
 ಕೆಲ ನಿಮಿಷ ಎಲ್ಲರೂ ಮೂಕರಾಗಿ, ನಿಷ್ಕ್ರಿಯರಾಗಿ ಕುಳಿತೇ ಇದ್ದರು.
ಇದ್ದಕ್ಕಿದ್ದಂತೆ ಇಂದ್ರನಾಥ ಎದ್ದು ನಿಂತು ಹೇಳಿದ – “ನಾನೀಗ ರೈಲಿನಲ್ಲಿ ಅಲ್ಲಿ ಹೋಗುತ್ತೇನೆ”.
 ರಾತ್ರಿ 9 ಗಂಟೆಗೆ ಮುಂಬೈನಿಂದ ರೈಲು ಹೊರಡುತ್ತಿತ್ತು.  ಇಬ್ಬರೂ ಸ್ನೇಹಿತರು ಬೇಗ ಬೇಗನೆ ಹಾಸಿಗೆ ಮುಂತಾದವುಗಳನ್ನು ಕಟ್ಟಿ ಸಿದ್ಧ ಮಾಡಿದರು.  ಒಬ್ಬ ಹಾಸಿಗೆ ಹಿಡಿದುಕೊಂಡರೆ, ಇನ್ನೊಬ್ಬ ಪೆಟ್ಟಿಗೆ.  ಇಂದ್ರನಾಥ ಬೇಗನೆ ಬಟ್ಟೆ ಬದಲಿಸಿ ರೈಲ್ವೇ ನಿಲ್ಧಾಣಕ್ಕೆ ತೆರಳಿದ.  ನಿರಾಸೆ ಮುಂದೆ, ಆಶೆ ಅಳುತ್ತಾ ಅದರ ಹಿಂದೆ.

(11)
ಒಂದು ವಾರ ಕಳೆಯಿತು.  ಲಾಲಾ ವಂಶೀಧರರು ಕಛೇರಿಯಿಂದ ಬಂದು ಬಾಗಿಲ ಬಳಿ ಕುಳಿತ್ತಿದ್ದಾಗ ಇಂದ್ರನಾಥ ಬಂದು ನಮಸ್ಕಾರ ಮಾಡಿದ. ವಂಶೀಧರರು ಅವನನ್ನು ನೋಡಿ ಬೆಚ್ಚಿ ಬಿದ್ದರು.  ಅವನ ಅನಪೇಕ್ಷಿತ ಆಗಮನದಿಂದಲ್ಲ, ಅವನ ವಿಕೃತ ಪರಿಸ್ಥಿತಿ ನೋಡಿ. ಆತ ಶೋಕವೇ ಮೂರ್ತಿವೆತ್ತಂತಿದ್ದ, ಎದೆಯಿಂದ ಹೊರಟ ನಿಟ್ಟುಸಿರೇ ಮೂರ್ತಿರೂಪ ತಾಳಿದಂತಿದ್ದ.  
ವಂಶೀಧರರು ಕೇಳಿದರು – “ನೀನು ಮುಂಬೈಗೆ ಹೊರಟುಹೋಗಿದ್ದೆಯಲ್ಲಾ?”
ಇಂದ್ರನಾಥ ಉತ್ತರಿಸಿದ – “ಹೌದು, ಇವತ್ತೇ ಬಂದಿದ್ದೇನೆ”.
ವಂಶೀಧರರು ಕಟುವಾಗಿ ಹೇಳಿದರು – “ಗೋಕುಲನನ್ನಂತೂ ನೀನೇ ಕರೆದುಕೊಂಡುಹೋದೆ”.
ಇಂದ್ರನಾಥ ಕೈಬೆರಳು ನೋಡುತ್ತಾ ಹೇಳಿದ – “ಅವನು ನನ್ನ ಮನೆಯಲ್ಲಿದ್ದಾನೆ”.
ವಂಶೀಧರರ ಉದಾಸ ಮುಖದ ಮೇಲೆ ಹರ್ಷದ ಪ್ರಕಾಶ ಬೆಳಗಿತು.  ಹೇಳಿದರು – “ಹಾಗಾದರೆ ಇಲ್ಲಿಗೆ ಯಾಕೆ ಬರಲಿಲ್ಲ?  ನೀನವನನ್ನು ಎಲ್ಲಿ ಭೇಟಿ ಮಾಡಿದೆ?  ಮುಂಬೈಗೆ ಬಂದಿದ್ದನೇನು?”
“ಇಲ್ಲ, ನಿನ್ನೆ ಗಾಡಿಯಿಂದ ಇಳಿಯುವಾಗ ನಿಲ್ದಾಣದಲ್ಲಿ ಸಿಕ್ಕಿದ”.
“ಹಾಗಾದರೆ ಇಲ್ಲಿಗೆ ಕರಕೊಂಡು ಬಾರಲ್ಲ.  ಆಗಿದ್ದೆಲ್ಲಾ ಒಳಿತೇ ಆಯಿತು” 
ಹೇಳುತ್ತಾ ಅವರು ಒಳಕ್ಕೆ ಓಡಿದರು.  ಮರುಕ್ಷಣ ಗೋಕುಲನ ತಾಯಿ ಅವನನ್ನು ಒಳಕ್ಕೆ ಕರೆದರು.
ಅವನು ಒಳಗೆ ಬಂದಾಗ ತಾಯಿ ಅವನನ್ನು ಅಪಾದಮಸ್ತಕ ವೀಕ್ಷಿಸಿದರು – “ಏನಪ್ಪಾ ಕಾಯಿಲೆ ಬಿದ್ದಿದ್ದೆಯೇನು?  ಮುಖ ನೋಡು ಹೇಗಾಗಿದೆ”
 ಇಂದ್ರನಾಥ ಉತ್ತರ ಕೊಡಲಿಲ್ಲ.
ಗೋಕುಲನ ತಾಯಿ ನೀರಿನ ಗ್ಲಾಸು ಇಡುತ್ತಾ ಹೇಳಿದಳು – “ಕೈ ಕಾಲು ತೊಳೆದುಕೊ ಮಗ, ಗೊಕುಲ ಚೆನ್ನಾಗಿದ್ದಾನೆ ತಾನೇ.  ಇಷ್ಟು ದಿನ ಎಲ್ಲಿದ್ದನಂತೆ?  ಆವತ್ತಿನಿಂದ ನೂರಾರು ಹರಕೆ ಹೊತ್ತಿದ್ದೇನೆ.  ಇಲ್ಲಿಗೆ ಯಾಕೆ ಬರಲಿಲ್ಲ?”
ಇಂದ್ರನಾಥ ಕೈಕಾಲು ತೊಳೆಯುತ್ತಾ ಹೇಳಿದ – “ನಾನಂತೂ ಬಾ ಎಂದು ಕರೆದಿದ್ದೆ.  ಆದರೆ ಹೆದರಿಕೆಯಿಂದ ಬರುತ್ತಿಲ್ಲ”.
“ಇಷ್ಟು ದಿನ ಎಲ್ಲಿದ್ದ?”
“ಹಳ್ಳಿಗಳಲ್ಲಿ ಸುತ್ತುತ್ತಿದ್ದ ಎಂದು ಹೇಳುತ್ತಿದ್ದ”
“ಹಾಗಾದರೆ ಮುಂಬೈನಿಂದ ನೀನೊಬ್ಬನೇ ಬಂದಿಯೇನು?”
“ಇಲ್ಲ ಅಮ್ಮಾ ಸಹ ಬಂದಿದ್ದಾಳೆ”
ಗೋಕುಲನ ತಾಯಿ ಸಂಕೋಚದಿಂದ ಕೇಳಿದಳು – “ಮಾನಿ ಚೆನ್ನಾಗಿದ್ದಾಳೆ ತಾನೇ?”
ಇಂದ್ರನಾಥ ನಕ್ಕು ನುಡಿದ – “ಹೂಂ.  ಈಗಂತೂ ಅವಳು ತುಂಬಾ ಸುಖಿ. ಸಂಸಾರದ ಬಂಧನದಿಂದ ಮುಕ್ತಳಾದಳಲ್ಲ!”
ತಾಯಿ ಅವಿಶ್ವಾಸದಿಂದ ಹೇಳಿದಳು – “ತಲೆಹರಟೆ ಸುಮ್ಮನಿರು! ಪಾಪ, ಅವಳನ್ನು ಬೈಯುತ್ತಿದ್ದಾನೆ.  ಆದರೆ ಅಷ್ಟು ಬೇಗ ಮುಂಬೈಯಿಂದ ಮರಳಿದ್ದಾದರೂ ಏಕೆ?  
ಇಂದ್ರನಾಥ ನಗುತ್ತಾ ಹೇಳಿದ – “ಇನ್ನೇನು ಮಾಡಲಿ?  ಮಾನಿ ರೈಲಿನಿಂದ ಹಾರಿ ಪ್ರಾಣಬಿಟ್ಟಳು ಎಂದು ಅಮ್ಮನ ತಂತಿ ಮುಂಬೈಯಲ್ಲಿ ಸಿಕ್ಕಿತು.  ಅಲ್ಲಿ ಲಾಲಪುರದಲ್ಲಿ ಬಿದ್ದಿದ್ದಳು.  ಓಡಿಬಂದೆ.  ಅಲ್ಲೇ ದಹನಕ್ರಿಯೆ ನಡೆಸಿದೆ.  ಇವತ್ತು ಮನೆಗೆ ಬಂದೆ. ಈಗ ನನ್ನ ಅಪರಾಧ ಕ್ಷಮಿಸಿರಿ!”
ಅವನಿಗೆ ಇನ್ನೇನನ್ನೂ ಹೇಳಲಾಗಲಿಲ್ಲ.  ಕಣ್ಣೀರಿನ ಆವೇಗದಿಂದ ಗಂಟಲು ಕಟ್ಟಿತು. ಜೇಬಿನಿಂದ ಒಂದು ಕಾಗದ ತೆಗೆದು ತಾಯಿಯ ಮುಂದಿಟ್ಟು ಹೇಳಿದ – ಅವಳ ಸಂದೂಕದಿಂದ ಸಿಕ್ಕಿದ ಪತ್ರ ಇದು.  ಗೋಕುಲನ ತಾಯಿ ಎಷ್ಟೋ ಹೊತ್ತು ಸ್ತಂಭಿತಳಾಗಿ, ನೆಲವನ್ನೇ ನೋಡುತ್ತಾ ಕುಳಿತುಬಿಟ್ಟಳು.  ಶೋಕ, ಅದಕ್ಕಿಂತ ಹೆಚ್ಚಿನ ಪಶ್ಚಾತ್ತಾಪದಿಂದ ತಲೆಬಾಗಿ ಹೋಗಿತ್ತು.  ನಂತರ ಕಾಗದ ತೆರೆದು ಓದಿದಳು.
“ಸ್ವಾಮಿ!
  ಈ ಕಾಗದ ನಿಮ್ಮ ಕೈ ಸೇರುವ ಹೊತ್ತಿಗೆ ನಾನು ಈ ಜಗತ್ತಿನಿಂದ ಬಿಡುಗಡೆ ಹೊಂದಿರುತ್ತೇನೆ.  ನಾನು ತುಂಬಾ ಅಭಾಗಿನಿ.  ಈ ಪ್ರಪಂಚದಲ್ಲಿ ನನಗೆ ಸ್ಥಳವಿಲ್ಲ.  ನಿಮಗೂ ನನ್ನಿಂದ ಕ್ಲೇಶ ಮತ್ತು ಬರಿಯ ನಿಂದೆಯೇ ಸಿಗುವುದು.  ನಾನು ಆಲೋಚನೆ ಮಾಡಿ ನನ್ನ ಪಾಲಿಗೆ ಮೃತ್ಯುವೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ.  ನನ್ನ ಮೇಲೆ ನೀವು ತೋರಿಸಿದ ದಯೆಗೆ ನಾನು ಪ್ರತಿಯಾಗಿ ಏನು ಕೊಡಲಿ?  ಜೀವನದಲ್ಲಿ ನಾನು ಎಂದಿಗೂ ಯಾವ ವಸ್ತುವನ್ನೂ ಬಯಸಿದವಳಲ್ಲ; ಆದರೆ ನಿಮ್ಮ ಚರಣಗಳ ಮೇಲೆ ತಲೆಯಿಟ್ಟು ಸಾಯಲಿಲ್ಲ ಎಂಬುದರ ಬಗ್ಗೆ ನನಗೆ ದುಃಖವಿದೆ.  ನನ್ನ ಅಂತಿಮ ಕೋರಿಕೆಯೆಂದರೆ ನನಗಾಗಿ ನೀವು ದುಃಖಿಸದಿರಿ. ಭಗವಂತ ನಿಮ್ಮನ್ನು ಯಾವಾಗಲೂ ಸಂತೋಷದಿಂದಿಡಲಿ”.
ತಾಯಿ ಪತ್ರ ತೆಗೆದಿಟ್ಟರು.  ಆಕೆಯ ಕಂಗಳಿಂದ ನೀರು ಹರಿಯಲಾರಂಭಿಸಿತು. ವಂಶೀಧರರು ಪಡಸಾಲೆಯಲ್ಲಿ ನಿಶ್ಚೇತರಾಗಿ ನಿಂತಿದ್ದರು.  ಮತ್ತೆ ಮಾನಿ ಲಜ್ಜೆಯಿಂದ ಅವರ ಮುಂದೆ ನಿಂತಿರುವಂತೆ ಅವರಿಗೆ ಭಾಸವಾಯಿತು.
ಅನುವಾದ  - ಡಾ. ಸುಧಾ ಕಾಮತ್          

No comments:

Post a Comment