Tuesday 9 May 2017

ಲೇಖನ - ಮಹಿಳಾ ಅಧ್ಯಯನದ ನೆಲೆಗಳು



ಮಹಿಳಾ ಅಧ್ಯಯನದ ನೆಲೆಗಳನ್ನು ಕುರಿತ ಚರ್ಚೆಯಲ್ಲಿ ಮೂಲಭೂತವಾಗಿ ಈ ಅಧ್ಯಯನ ಶಿಸ್ತಿನ ಉಗಮ ‘ಹೇಗಾಯಿತು ಮತ್ತು ಏಕಾಯಿತು’ ಎಂಬ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗುತ್ತದೆ. ನನ್ನ ದೃಷ್ಟಿಯಲ್ಲಿ ಮಹಿಳಾ ಅಧ್ಯಯನ ಉದ್ಭವಿಸಿದ್ದು ಪ್ರಶ್ನೆಗಳಲ್ಲಿ ಮತ್ತು ಚಳವಳಿಗಳಲ್ಲಿ. ನಾವಿಂದು ಇಡೀ ಜ್ಞಾನ ವ್ಯವಸ್ಥೆಯನ್ನು ವಿಶ್ಲೇಷಿಸಿದಾಗ ಅದರಲ್ಲಿ ಬಹುತೇಕ ಎದ್ದು ಕಾಣುವುದು ಪುರುಷ ಭಾಷೆ, ಪುರುಷ ದೃಷ್ಟಿಕೋನ ಮತ್ತು ಪುರುಷ ಪಕ್ಷಪಾತ. 
ನೀವು ಯಾವುದೇ ಅಧ್ಯಯನ ಶಿಸ್ತನ್ನು ತೆಗೆದುಕೊಳ್ಳಿ, ಇಡೀ ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧಭಾಗದಷ್ಟಿರುವ ಮಹಿಳೆಯರ ದೃಷ್ಟಿಕೋನದಿಂದ ಪ್ರಪಂಚವನ್ನು ನೋಡುವ, ಅರ್ಥೈಸುವ ಪ್ರವೃತ್ತಿ ಕಾಣುತ್ತಿಲ್ಲ. ಬಹು ಶತಮಾನಗಳ ಕಾಲ ಈ ಪ್ರವೃತ್ತಿ ಇರಲೇ ಇಲ್ಲವೆಂದು ಹೇಳಿದರೆ ಪ್ರಾಯಶಃ ಅದು ಉತ್ಪ್ರೇಕ್ಷೆ ಎನಿಸುವುದಿಲ್ಲವೇನೋ. ಕಳೆದ ಮೂರು ನಾಲ್ಕು ದಶಕಗಳಿಂದ ಕೆಲವು ಜ್ಞಾನ ಶಾಖೆಗಳಲ್ಲಾದರೂ ಲಿಂಗ ವ್ಯವಸ್ಥೆಯ ದೃಷ್ಟಿಕೋನದಿಂದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಗಳು ಆರಂಭವಾಗಿವೆ. ಸಾಮಾಜಿಕ ಘಟನಾವಳಿಗಳನ್ನು ಲಿಂಗಸೂಕ್ಷ್ಮ ಸಂವೇದನಾಶೀಲತೆಯಿಂದ ವಿಶ್ಲೇಷಿಸದಿದ್ದರೆ, ಪ್ರಶ್ನೆಗಳನ್ನು ಕೇಳದಿದ್ದರೆ, ಖಾಲಿ ಜಾಗಗಳನ್ನು ತುಂಬದಿದ್ದರೆ, ಚರ್ಚೆಗೆ ಒಳಪಟ್ಟ ವಿಷಯ ಅಪೂರ್ಣವೆನಿಸುತ್ತದೆ, ಅರ್ಥವನ್ನು ಕಳೆದುಕೊಳ್ಳುತ್ತದೆ. ಇಂತಹ ಆಲೋಚನೆಗಳೇ ಮಹಿಳಾ ಅಧ್ಯಯನಕ್ಕೆ ಮೂಲ ನೆಲೆಯನ್ನು ಒದಗಿಸುವುದು.
ಮಹಿಳಾ ಅಧ್ಯಯನವನ್ನು ಅರ್ಥಪೂರ್ಣವಾಗಿಸಲು ಪ್ರಮುಖವಾಗಿ ಮೂರು ಮಾರ್ಗಗಳನ್ನು ಅನುಸರಿಸಬೇಕು. ಅವುಗಳೆಂದರೆ ಬೋಧನೆ, ಸಂಶೋಧನೆ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆಗಳು. ಈ ಮೂರು ಮಾರ್ಗಗಳು ಸಮ್ಮಿಳಿತವಾದಾಗ ಮಾತ್ರ ಮಹಿಳಾ ಅಧ್ಯಯನಕ್ಕೆ ಒಂದು ನೆಲೆ ದೊರೆಯುವುದು. 
ಮಹಿಳಾ ಅಧ್ಯಯನದ ಆರಂಭಕಾಲದಲ್ಲಿ ಡಿಪ್ಲೊಮಾ ಅಥವಾ ಪದವಿ ಮಟ್ಟದ ಶಿಕ್ಷಣ ಕೆಲವೇ ಸಂಸ್ಥೆಗಳಲ್ಲಿ ಲಭ್ಯವಾಗಿತ್ತು. ಆಗಿನ ಕಾಲಘಟ್ಟದಲ್ಲಿ ಮಹಿಳಾ ವಿಚಾರಗಳಲ್ಲಿ ಆಸಕ್ತರಾಗಿದ್ದ, ಕಾರ್ಯಪ್ರವೃತ್ತರಾಗಿದ್ದ ಅಧ್ಯಾಪಕರು ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಗ ಶಿಸ್ತಿನ ಗೋಡೆಗಳು ಇರಲಿಲ್ಲ. ಈ ಹಿನ್ನೆಲೆಯಿಂದ ಬಂದ ಮಹಿಳಾ ಅಧ್ಯಯನಕ್ಕೆ ಬಹುಶಿಸ್ತೀಯ ಅಥವಾ ಅಂತರಶಿಸ್ತೀಯ ದೃಷ್ಟಿಕೋನದ ಅಗತ್ಯವಿದೆ ಎಂಬ ನಂಬಿಕೆ ಬೆಳೆಯಿತು. ಹಾಗೆಯೇ ಅದರ ಬೋಧನೆ ಕೂಡ ಆ ಚೌಕಟ್ಟಿನಲ್ಲಿಯೇ ನಡೆಯುತ್ತಿತ್ತು. 
ಆಗ ಮುಖ್ಯವಾಗಿದ್ದೆಂದರೆ, ನಾವು ಯಾವ ವಿಷಯದಲ್ಲಿ ಎಂಎ ಅಥವಾ ಪಿಎಚ್‍ಡಿ ಮಾಡಿದ್ದೇವೆ ಎನ್ನುವುದಕ್ಕಿಂತ ನಮಗೆಷ್ಟು ವಿಷಯ ಸಂಬಂಧಿ ಕಾಳಜಿಗಳಿವೆ; ನಾವೆಷ್ಟು ಅಧ್ಯಯನಗಳನ್ನು ಕೈಗೊಂಡಿದ್ದೇವೆ; ಎಷ್ಟು ಸಭೆಗಳಲ್ಲಿ, ಸಂವಾದಗಳಲ್ಲಿ ಸಾರ್ವಜನಿಕ ವಲಯದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇವೆ, ನಾವೆಷ್ಟು ಬರೆದಿದ್ದೇವೆ, ಎಷ್ಟರಮಟ್ಟಿಗೆ ನಮ್ಮ ಅನುಭವ, ಆಸಕ್ತಿಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಶ್ರಮಿಸುತ್ತಿದ್ದೇವೆ ಎನ್ನುವಂತಹ ಅಂಶಗಳು. ಎಲ್ಲಕ್ಕಿಂತ ಮಿಗಿಲಾಗಿ ಮಹಿಳಾ ಚಳವಳಿಗೂ ಅಧ್ಯಯನಕ್ಕೂ ಒಂದು ಅವಿನಾವಭಾವ ಸಂಬಂಧವಿತ್ತು. 
ಆದರೆ ಕಾಲಕ್ರಮೇಣ ಕೇಂದ್ರಗಳು ಕೋರ್ಸ್‍ಗಳು ಪದವೀಧರರು ಮಹಾಪ್ರಬಂಧಗಳು ಪುಸ್ತಕಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಆದರೆ ನೇರವಾಗಿ ಹೇಳಬೇಕೆಂದರೆ ಮಹಿಳಾ ಪರ ಕಾಳಜಿಗಳು ಹಾಗೂ ಕಾರ್ಯೋನ್ಮುಖತೆ ಕಡಿಮೆಯಾಗುತ್ತಾ ಹೋಯಿತು. 
ಇಂದು ದೇಶದಲ್ಲಿ 155ಕ್ಕೂ ಹೆಚ್ಚು ಕೇಂದ್ರಗಳು ಬಂದಿವೆ. ಅನೇಕ ಹುದ್ದೆಗಳು ಸೃಷ್ಟಿಯಾಗಿವೆ. ಸಾವಿರಾರು ಪದವೀಧರರು ಹೊರಬಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ 1500 ಮೀರಿದ ಮಹಿಳಾ ಅಧ್ಯಯನ ಪದವೀಧರರಿದ್ದಾರೆ. ಅವರಲ್ಲಿ ಅನೇಕರಿಗೆ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ದೊರೆತಿಲ್ಲ. ಒಂದು ಬಗೆಯ ಅತಂತ್ರ ಪರಿಸ್ಥಿತಿ ಅವರನ್ನು ಕಾಡುತ್ತಿದೆ ಎಂಬುವುದು ನಮ್ಮ ಮುಂದಿರುವ ಸತ್ಯ. 
ಈ ಪರಿಸ್ಥಿತಿಯಲ್ಲಿ ಎದ್ದಿರುವ ಒಂದು ಪ್ರಮುಖ ಪ್ರಶ್ನೆಯೆಂದರೆ ಮಹಿಳಾ ಅಧ್ಯಯನವನ್ನು ಯಾರು ಬೋಧನೆ ಮಾಡಬೇಕು” ಎನ್ನುವುದು. ಇಲ್ಲಿ ಡಿಗ್ರಿ ಮುಖ್ಯವೋ, ವಿಷಯಕ್ಕೆ ದಿಶೆಯನ್ನು ನೀಡುವಂತಹ ಸಾಮರ್ಥ್ಯ ಮುಖ್ಯವೋ ಅಥವಾ ಹುದ್ದೆ ಮುಖ್ಯವೊ ಎಂಬ ಪ್ರಶ್ನೆಗಳನ್ನು ಎತ್ತಿ ಸಂಸ್ಥೆಗಳನ್ನು, ಮಹಿಳಾ ಅಧ್ಯಯನ ಶಿಸ್ತನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ವ್ಯಕ್ತಿಗಳಿಗೆ ಈ ಜವಾಬ್ದಾರಿಯನ್ನು ನೀಡಬೇಕು ಎನ್ನುವುದು ನನ್ನ ನಿಶ್ಚಿತ ಅಭಿಪ್ರಾಯ. 
ತಮ್ಮ ಮಹಿಳಾ ಪರ ಕಾಳಜಿಗಳನ್ನು ತೋರಿಕೆಗಾಗಿ ಪ್ರದರ್ಶಿಸಲು ಮಹಿಳಾ ಅಧ್ಯಯನ ಸ್ನಾತಕೋತ್ತರ ಕೋರ್ಸ್ ಗಳನ್ನು ಅನೇಕ ವಿವಿಗಳಲ್ಲಿ ತೆಗೆದು ಈ ಹೊತ್ತು ಆ ವಿದ್ಯಾರ್ಥಿಗಳ ಬಗ್ಗೆ ಆಗಲಿ ಹೊರಬಂದಿರುವ ಪದವೀಧರರ ಬಗ್ಗೆಯಾಗಲಿ ಕನಿಷ್ಟ ಕಾಳಜಿಯನ್ನು ವ್ಯಕ್ತಪಡಿಸದೆ ಅವರನ್ನು ನಡುದಾರಿಯಲ್ಲಿ ಬಿಟ್ಟಿರುವ ಶೈಕ್ಷಣಿಕ – ಆಡಳಿತಾತ್ಮಕ ವ್ಯವಸ್ಥೆ ಇನ್ನಾದರೂ ಎಚ್ಚರಗೊಳ್ಳದಿದ್ದರೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತದೆ.
ಮಹಿಳಾ ಅಧ್ಯಯನದ ಎರಡನೆಯ ನೆಲೆಯಿರುವುದು ಸಂಶೋಧನಾ ಅಧ್ಯಯನಗಳಲ್ಲಿ. 3-4 ದಶಕಗಳ ಹಿಂದೆಯೇ ಮಹಿಳೆಯರನ್ನು ಕುರಿತ ವಿವರಣಾತ್ಮಕ ಸಂಶೋಧನೆಗಳು ಬಹುಸಂಖ್ಯೆಯಲ್ಲಿ ಹೊರಬರಲಾರಂಭಿಸಿದವು. ಆಗಿನ ಕಾಲಘಟ್ಟದಲ್ಲಿ ಅವು ವಿಶಿಷ್ಟವೆನಿಸಿದ್ದರೂ ಕಾಲ ಕಳೆಯುತ್ತಾ ಹೋದ ಹಾಗೆಲ್ಲ ಖಚಿತ ಪ್ರಶ್ನೆಗಳನ್ನೆತ್ತಿ ನಿಶ್ಚಿತ ಉತ್ತರಗಳನ್ನು ನೀಡುವಂತಹ ಸಂಶೋಧನೆಗಳ ಅಭಾವ ಕಂಡುಬರತೊಡಗಿತು. ಮಹಿಳೆಯರು ಸಮರೂಪವಾದ ಒಂದು ವರ್ಗವಾಗಿಲ್ಲವಾದ್ದರಿಂದ ಅವರವರ ಬದುಕಿನ ವಾಸ್ತವಗಳ ಚೌಕಟ್ಟಿನಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಬೇಕೆ ಹೊರತು ತೀರಾ ಸಾಮಾನ್ಯೀಕೃತ ತೀರ್ಮಾನಗಳನ್ನು ಹೊರತಂದು ಹೊಸದೇನನ್ನು ಹೇಳದ ಸಂಶೋಧನೆಗಳ ಪ್ರಸ್ತುತತೆ, ಅವಶ್ಯಕತೆ ಮತ್ತು ಪ್ರಯೋಜನಗಳ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತುವ ಸಮಯ ಈಗ ಬಂದಿದೆ. 
ಇನ್ನು ಮೂರನೆಯ ಹಾಗೂ ನನ್ನ ದೃಷ್ಟಿಯಲ್ಲಿ ಅತಿ ಮುಖ್ಯವಾದ ಮಹಿಳಾ ಅಧ್ಯಯನದ ಆಯಾಮವೆಂದರೆ ಸಮಾಜಮುಖಿ ಕಾರ್ಯೋನ್ಮುಖತೆ ಅಥವಾ ಆಂಗ್ಲಭಾಷೆಯಲ್ಲಿ "Activism" ಎಂದು ಗುರುತಿಸಿರುವ ಚಟವಟಿಕೆ. ಮಹಿಳಾ ಅಧ್ಯಯನದ ಆರಂಭವಾದದ್ದೇ ಮಹಿಳಾ ಚಳವಳಿ ನೀಡಿದ ಸ್ಪೂರ್ತಿಯಿಂದ, ಅದು ತೋರಿದ ಆಸಕ್ತಿಯಿಂದ ಹಾಗೂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರ ಭಾಗವಹಿಸುವಿಕೆಯಿಂದ. 
ಆದರೆ ಇಂದು ಚಳವಳಿ ಮತ್ತು ಅಧ್ಯಯನಗಳ ನಡುವೆ ಒಂದು ದೂರವೇರ್ಪಟ್ಟಿದೆ, ಈ ದೂರ ದಿನೇದಿನೇ ಹೆಚ್ಚಾಗುತ್ತಿದೆ. ಇದು ಖಂಡಿತಾ ಮಹಿಳಾ ಅಧ್ಯಯನಕ್ಕೆ ಒಳಿತನ್ನು ತರುವ ಬೆಳವಣಿಗೆಯಲ್ಲ. ಈ ಹೊತ್ತು ಅಧಿಕಾರದಲ್ಲಿರುವ ಅನೇಕರಿಗೆ activists ಎಂದರೆ ಒಂದು ರೀತಿಯ ಭಯ ಬಂದಿದೆ. ಇದಕ್ಕೆ ಕಾರಣವೆಂದರೆ ಇವರು ಕೇಳುವ ಅನೇಕ ನೇರ ಪ್ರಶ್ನೆಗೆ  ಅವರ ಬಳಿ ಉತ್ತರಗಳಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಹೊಂದಾಣಿಕೆಯ ಸಂಸ್ಕೃತಿ  ತಾಂಡವವಾಡುತ್ತಿರುವ ಈಗಿನ ಶೈಕ್ಷಣಿಕ ರಾಜಕಾರಣದಲ್ಲಿ, ಹೋರಾಟಗಳಿಗೆಲ್ಲಿದೆ ಸ್ಥಾನ? ಆದರೆ ಅಧ್ಯಯನವಾಗಲಿ, ಚಳವಳಿಯಾಗಲಿ ಇಂಥಾ ನಕಾರಾತ್ಮಕ ಧೋರಣೆಗಳಿಂದ ಹಿಮ್ಮೆಟ್ಟಬೇಕಿಲ್ಲ. ಚಳವಳಿ ಪ್ರಶ್ನೆಗಳನ್ನು ಎತ್ತಿದ್ದರಿಂದಲೇ, ಹೋರಾಟಗಳನ್ನು ನಡೆಸಿದ್ದರಿಂದಲೇ ಮಹಿಳಾ ವಿಚಾರಗಳು ಸಾರ್ವಜನಿಕ ವಲಯಗಳಿಗೆ ಬಂದದ್ದು, ಹೊಸ ಕಾನೂನುಗಳ ರಚನೆಯಾಗಿದ್ದು,ಇಡೀ ಸಾಮಾಜಿಕ-ಆರ್ಥಿಕ-ರಾಜಕೀಯ-ಆಡಳಿತ ವ್ಯವಸ್ಥೆ  ಲಿಂಗ ವ್ಯವಸ್ಥೆ ದೃಷ್ಟಿ ಕೋನದಿಂದ ವಿಮರ್ಶೆಗೆ ಒಳಪಟ್ಟಿದ್ದು ಹಾಗೂ ಮಹಿಳಾ ಜಗತ್ತಿನ ವೈವಿಧ್ಯತೆ ಅನಾವರಣಗೊಂಡಿದ್ದು.
ಮಹಿಳಾ ಅಧ್ಯಯನ ಒಂದು ಅರ್ಥಪೂರ್ಣ ಶಿಸ್ತಾಗಿ ಉಳಿಯಬೇಕಾದರೆ, ಬೆಳೆಯಬೇಕಾದರೆ ಅದರಲ್ಲಿ ತೊಡಗಿರುವವರಿಗೆ ಮಾನವೀಯ ಗುಣವಿರಬೇಕು, ಮಹಿಳೆಯರ ಬದುಕಿನ ವಾಸ್ತವಗಳನ್ನು ಅರ್ಥ ಮಾಡಿಕೊಂಡು ಅದರ ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ಎತ್ತುವ, ಉತ್ತರಗಳನ್ನು ಹುಡುಕುವ ಮನಸ್ಸಿರಬೇಕು ಹಾಗೂ ಪುರುಷರನ್ನು ಒಳಗೊಂಡಂತೆ ಲಿಂಗಸಮಾನತೆಯನ್ನು ಸಾಧಿಸುವ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ವಿಶಾಲ ಹೃದಯವಿರಬೇಕು. ಸ್ತ್ರೀವಾದಿ ಮಾನವತಾವಾದಿಯಾದಾಗಲೇ ಸ್ತ್ರೀ - ಪುರುಷ ಸಮಾನತೆಯ ಕನಸು ಸಾಕಾರವಾಗುವುದು.  ಇದು ನಿಜವಾದ ಅರ್ಥದಲ್ಲಿ ಮಹಿಳಾ ಅಧ್ಯಯನದ ಗುರಿಯಾಗಬೇಕು. 
- ಪ್ರೊ।। ಆರ್. ಇಂದಿರಾ 


No comments:

Post a Comment