Tuesday 7 March 2017

ಲೇಖನ - 1 - ಮಹಿಳೆಯರು ಮತ್ತು ಧರ್ಮ

 - 

ಇತ್ತೀಚೆಗೆ, ರಂಗರಾಗಿಣಿ ಭೂಮಾತ ಬ್ರಿಗೇಡ್(ಆರ್‍ಬಿಬಿ) ನಾಯಕಿ ತೃಪ್ತಿ ದೇಸಾಯಿ ಅವರು ಸೇರಿದಂತೆ 400 ಕಾರ್ಯಕರ್ತೆಯರು ಮಹಾರಾಷ್ಟ್ರದ ಕೊಲ್ಹಾಪುರ್ ಜಿಲ್ಲೆಯ ಐತಿಹಾಸಿಕ ಶನಿ ಶಿಂಗ್ಣಾಪುರ್ ಪವಿತ್ರ ದೇವಾಲಯವನ್ನು ಮಹಾಲಕ್ಷ್ಮಿ ದೇವಸ್ಥಾನ ಆಡಳಿತ ಮಂಡಳಿಯ ಪ್ರತಿರೋಧದ ನಡುವೆಯೂ ಪ್ರವೇಶಿಸಿದ್ದಾರೆ. ಆ ಮೂಲಕ ಸ್ತ್ರೀಯರ ಹೋರಾಟದ ಹಾದಿಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ. ತೃಪ್ತಿ ದೇಸಾಯಿ ಅವರ ವಿರುದ್ಧ ಹಲವಾರು ಸಂಘಟನೆಗಳು ಅಪಪ್ರಚಾರ ನಡೆಸಿವೆ.

ಈ ಸಂದರ್ಭದಲ್ಲಿ ಸಮತಾ ಸಂಘಟನೆಯ ವತಿಯಿಂದ ನಾವು (12 ಮಹಿಳೆಯರು ಮತ್ತು ನಾಲ್ವರು ಪುರುಷರು) ನಡೆಸಿದ ಇಂತಹದೇ ಪ್ರಗತಿಪರ ಹೋರಾಟ ನೆನಪಾಗುತ್ತಿದೆ. 1984ರಲ್ಲಿ ಕೊಂಗಳ್ಳಿಯಲ್ಲಿರುವ (ಗುಂಡ್ಲುಪೇಟೆ, ಚಾಮರಾಜನಗರ ಜಿಲ್ಲೆ) ಶಿವ ದೇವಾಲಯವನ್ನು ಪ್ರವೇಶ ಮಾಡಿದ್ದೆವು. ಆಗ ವಿಚಾರವಾದಿ ಕೆ.ರಾಮದಾಸ್ ಕೂಡ ನಮ್ಮೊಡನಿದ್ದರು. ನಮ್ಮ ತಂಡದಲ್ಲಿ ಮೀರಾ ನಾಯಕ್, ವಿಜಯಾ ದಬ್ಬೆ, ಸರಸ್ವತಿ ಜೆ, ನಿರ್ಮಲ ಕೋಟಿ, ಕುಮುದ ಟಿ ಎಸ್ ಮತ್ತಿತರು ಇದ್ದರು. ವಾಸ್ತವವಾಗಿ ಆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಅದು ದೇವರೇ ಮಾಡಿರುವ ನಿಯಮ. ಅದನ್ನು ಮೀರಿ ಪ್ರವೇಶ ಮಾಡಿದರೆ ರಕ್ತಕಾರಿಕೊಂಡು, ನಮ್ಮ ತಲೆ ಒಡೆದು ಹೋಳಾಗುತ್ತದೆ ಎಂಬ ಎಚ್ಚರಿಕೆಗಳೂ ನಮಗೆ ಕೇಳಿಬಂದಿದ್ದವು. 

ಅದು ಹಾಗಿರಲಿ. ಧರ್ಮಗುರು ಶ್ರೀ ಶಂಕರಾಚಾರ್ಯ ಅವರು, 'ಶಿಂಗ್ಣಾಪುರ್ ದೇವಾಲಯಕ್ಕೆ ಸ್ತ್ರೀಯರು ಪ್ರವೇಶಿಸಿದರೆ ಅಲ್ಲಿನ ದೈವ ಶನೀಶ್ವರ ಕುಪಿತನಾಗುತ್ತಾನೆ. ಅದಕ್ಕೆ ಶಿಕ್ಷೆಯಾಗಿ ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚಾಗುವಂತೆ ಮಾಡುತ್ತಾನೆ' ಎಂದಿದ್ದರು. ಅಂದರೆ ದೇವರು ಅತ್ಯಾಚಾರ ಮಾಡುತ್ತಾನ? ಅತ್ಯಾಚಾರವನ್ನು ಉತ್ತೇಜಿಸುತ್ತಾನ? ಈ ಬೆದರಿಕೆಗೆ ಅವರ ಅನುಯಾಯಿಗಳು ಹೆದರಿಕೊಂಡು ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಹಿಂಜರಿಯುತ್ತಾರೆ. ಆದರೆ, ಆರ್‍ಬಿಬಿ ತಂಡದವರೂ ಅದನ್ನು ಒಪ್ಪಿಕೊಳ್ಳಬೇಕೆನ್ನುವುದು ಅಪರಾಧವಾಗುತ್ತದೆ. ಹಾಗೆ ಶಿಕ್ಷೆ ನೀಡುವ ಅಧಿಕಾರ ದೇವರಿಂದ ಮನುಷ್ಯರಿಗೆ ಅಂದರೆ ಮೂಲಭೂತವಾದಿಗಳಿಗೆ ಹಸ್ತಾಂತರವಾದರೆ, ಅವರು ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಸಮಾಜದಲ್ಲಿ ದುಷ್ಪರಿಣಾಮ ಉಂಟುಮಾಡುತ್ತಾರೆ.  ಸದ್ಯದ ಪರಿಸ್ಥಿತಿಯಲ್ಲಿ ಅದು ನಿಜವಾಗಿ ಕಾಣುತ್ತಿದೆ. 
ಶನಿ ಶಿಂಗ್ಣಾಪುರ ದೇವಾಲಯದ ಪವಿತ್ರವೆನ್ನಲಾದ ಗರ್ಭಗುಡಿ ಪ್ರವೇಶಿಸುವ ಹಕ್ಕಿಗಾಗಿ ಮಹಿಳೆಯರ ಹೋರಾಟವನ್ನು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ (ಎಂಎಎನ್‍ಎಸ್) ಆರಂಭ ಮಾಡಿತ್ತು. ಈ ಸಂಘಟನೆಯನ್ನು ವೈಚಾರಿಕ ಪ್ರಜ್ಞೆಯ ಪ್ರಗತಿಪರ ಹೋರಾಟಗಾರ ಡಾ.ನರೇಂದ್ರ ದಾಬೋಲ್ಕರ್ 1998ರಲ್ಲಿ ಸ್ಥಾಪಿಸಿದ್ದರು. ಆರ್‍ಬಿಬಿ ತಂಡವು ಶಿಂಗ್ಣಾಪುರ ದೇವಾಲಯವನ್ನು ಪ್ರವೇಶಿಸಿದ ನಂತರ, ದಾಬೋಲ್ಕರ್ ಅವರ ಪುತ್ರ, `ನಮ್ಮ ತಂದೆಯನ್ನು ಕೊಂದವರು ದೊಡ್ಡವರೆನ್ನಿಸಿಕೊಂಡಿರಬಹುದು. ಆದರೆ, ನಮ್ಮ ತಂದೆಯ ಚಿಂತನೆಗಳನ್ನು ಅವರು ಕೊಲ್ಲುವುದು ಸಾಧ್ಯವಾಗಿಲ್ಲ. ಅವೂ ಇನ್ನೂ ಜೀವಂತವಾಗಿವೆ. ಅದಕ್ಕೆ ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಯಶಸ್ವಿಯಾಗಿರುವುದೇ ಸಾಕ್ಷಿ' ಎಂದು ಪ್ರತಿಪಾದಿಸಿದ್ದಾರೆ. 
ಆದರೆ ಇದನ್ನು ವಿರೋಧಿಸುತ್ತಿರುವವರು, ಹಾಜಿ ಆಲಿ ದರ್ಗಾದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ ಎಂದು ಅವರು ಹೇಳುವ ಮೂಲಕ ಎಲ್ಲ ಧರ್ಮಗಳಲ್ಲೂ ಸ್ತ್ರೀಯರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿರುವುದನ್ನು ಅವರು ಪುಷ್ಟೀಕರಿಸಿದ್ದಾರೆ. ಆದರೆ, ಎಂಎಎನ್‍ಎಸ್, ದೇವರು ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯ ಮೇಲಿನ ಶೋಷಣೆಯನ್ನು ಕಟುವಾಗಿ ವಿರೋಧಿಸುತ್ತದೆ. ಕೇವಲ ಹಿಂದೂ ಪೂಜಾ ಮಂದಿರಗಳಲ್ಲಿ ದೇಶದಲ್ಲಿರುವ ಸರ್ವ ಧರ್ಮಗಳ ಪ್ರಾರ್ಥನಾ ಮಂದಿರಗಳ ಗರ್ಭಗುಡಿಗಳಿಗೆ ಸ್ತ್ರೀಯರಿಗೆ ಮುಕ್ತ ಪ್ರವೇಶ ಇರಬೇಕು ಎಂದು ಪ್ರತಿಪಾದಿಸುತ್ತದೆ.

ಕೇರಳ ರಾಜ್ಯದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೂ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವ ವಿಚಾರಕ್ಕೆ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಚಾಟಿ ಬೀಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ‘ವೈಯಕ್ತಿಕ ನೈತಿಕತೆ’ ಮತ್ತು ‘ಸಂವಿಧಾನಬದ್ಧ ನೈತಿಕತೆ’ ನಡುವಿನ ಸಂಘರ್ಷ ಇದಾಗಿದೆ. ಋತುಚಕ್ರ ಎಂಬುದು ಸ್ತ್ರೀಯರ ಸಾಮಾನ್ಯ ಶಾರೀರಿಕ ವಿದ್ಯಮಾನವಾಗಿದೆ. ಆ ಅಂಶವನ್ನು ಪ್ರಧಾನವಾಗಿಟ್ಟುಕೊಂಡು ದೇವಾಲಯ ಪ್ರವೇಶ ನಿರ್ಬಂಧಿಸುವುದು ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ. ನ್ಯಾಯಾಲಯದ ಈ ಆರೋಪಕ್ಕೆ ದೇವಸ್ಥಾನದ ಪರ ವಕೀಲೆ ಇಂದಿರಾ ಜೈಸಿಂಗ್ ಅವರು, `10 ವರ್ಷದ ಎಳೆಬಾಲೆಯರಿಂದ 55 ವಯೋಮಾನದವರೆಗಿನ ಮಹಿಳೆಯರು ದೇವಸ್ಥಾನ ಪ್ರವೇಶ ಮಾಡುವುದರಿಂದ ದೇವರ ಬ್ರಹ್ಮಚರ್ಯೆಗೆ ತೊಂದರೆ ಉಂಟಾಗುತ್ತದೆ' ಎಂದು ಸಂಪ್ರದಾಯವಾದಿ ಸಮಜಾಯಿಷಿ ನೀಡಿದ್ದಾರೆ. 
ಇದೆಂಥಾ ವಿಚಿತ್ರ? ದೇವರ (ವೈಯಕ್ತಿಕ ನೈತಿಕತೆ) ಬ್ರಹ್ಮಚರ್ಯೆ ವಿಷಯಕ್ಕೆ ಮಹಿಳೆಯರನ್ನು (ಸಂವಿಧಾನಬದ್ಧ ನೈತಿಕತೆ) ಆರೋಪಿಗಳಾಗಿ ಮಾಡುವುದು ವಿಪರ್ಯಾಸವಾಗಿದೆ. ಇದು ಒಂದು ಬಲಿಪಶು ಇನ್ನೊಂದು ಬಲಿಪಶುವನ್ನು ಬಲಿ ನೀಡಿದಂತಹ ವಾದವಾಗಿದೆ. (women is a victim of system and she is further victimized) ಮಹಿಳೆಯರ ಜೈವಿಕ ಪ್ರಕ್ರಿಯೆಯಲ್ಲಿ ಋತುಚಕ್ರ ಎಂಬುದು ಆರೋಗ್ಯಕರ ಬೆಳವಣಿಗೆ. ಸ್ತ್ರೀಯರು ಈ ಋತುಚಕ್ರದ ಬಗ್ಗೆ ತಾರತಮ್ಯವನ್ನು ಏಕೆ ಸಹಿಸಿಕೊಳ್ಳಬೇಕು. ಈ ಬಗ್ಗೆ ಅರಿವು ಮೂಡಿಸಿಕೊಳ್ಳುವ ಅಗತ್ಯವನ್ನೂ ಈ ಘಟನೆ ಪ್ರತಿಪಾದಿಸುತ್ತದೆ. 

ಪ್ರಪಂಚದ ಬಹುತೇಕ ಧರ್ಮಗಳು ಪಿತೃಪ್ರಧಾನವಾಗಿದ್ದು, ಪುರುಷರಿಗೆ ಆದ್ಯತೆ ನೀಡಿವೆ. ಮಹಿಳೆಯರನ್ನು ದ್ವಿತೀಯ ದರ್ಜೆ ಪ್ರಜೆಗಳಾಗಿ ಪರಿಗಣಿಸಿವೆ. ಪುರುಷರಿಗಿಂತ ಬೌದ್ಧಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಕೀಳು ಎಂಬ ಭಾವನೆಗಳನ್ನು ಪ್ರಚುರಪಡಿಸಿವೆ. ಹಾಗಾಗಿಯೇ ಹೆಣ್ಣು ಮಕ್ಕಳ ಜನನವನ್ನು ನಿಯಂತ್ರಿಸಲಾಗುತ್ತಿದೆ ಹಾಗೂ ಅವರ ವಿರುದ್ಧ ದೌರ್ಜನ್ಯ ನಡೆಸಲಾಗುತ್ತಿದೆ. ಇದನ್ನು ಖಚಿತಪಡಿಸುವ ಜತೆಗೆ ಪ್ರಬಲವಾಗಿ ಸಮರ್ಥಿಸಿಕೊಳ್ಳಲು ಅನುಕೂಲಕರವಾಗಿ ಧಾರ್ಮಿಕ ಆಚರಣೆಗಳನ್ನು ಕೂಡ ನಿಸರ್ಗದತ್ತವೆಂಬಂತೆ ರೂಢಿಸಿಕೊಳ್ಳಲಾಗಿದೆ.

ಧಾರ್ಮಿಕ ಕಾಯ್ದೆಗಳು ಅಫೀಮು ಇದ್ದಂತೆ. ಹಾಗಾಗಿ ಹಲವು ಮಠಗಳ ಗುರುಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಭಕ್ತರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಅದಕ್ಕೆ ರಾಘವೇಶ್ವರ ಸ್ವಾಮಿ ಪ್ರಕರಣವೇ ಸಾಕ್ಷಿ. ಆಧುನಿಕ ಕಾಲದಲ್ಲಿ ಮಹಿಳೆಯರು ಬಹುತೇಕ ಎಲ್ಲ ವೃತ್ತಿಪರ ಕ್ಷೇತ್ರಗಳಲ್ಲೂ ಯಶಸ್ವಿಯಾಗಿದ್ದಾರೆ. ಆದರೆ ಧರ್ಮಕ್ಕೆ ಸಂಬಂಧಿಸಿದ ಕುರುಡ ನಂಬಿಕೆಗಳಿಂದ ಹೊರಬರುವುದು ಮಹಿಳೆಯರಿಗೆ ಇಂದಿನ ಸವಾಲಾಗಿ ಪರಿಣಮಿಸಿದೆ. ಬಹುದೊಡ್ಡ ಸ್ತ್ರೀವಾದಿ, ಕಂದಾಚಾರಗಳ ವಿರುದ್ಧ ಹೋರಾಟ ನಡೆಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾನೂನು ಸಚಿವರಾಗಿದ್ದಾಗ ಮಹಿಳಾ ಅಸಮಾನತೆ ವಿರುದ್ಧ ಹಿಂದೂ ಕೋಡ್ ಬಿಲ್‍ನ್ನು ಸಂಸತ್‍ನಲ್ಲಿ ಮಂಡಿಸಿದ್ದರು. ಅದಕ್ಕೆ ಮಾನ್ಯತೆ ಸಿಗದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂವಿಧಾನವು ಸ್ತ್ರೀಯರೂ ಸೇರಿದಂತೆ ಪ್ರತಿಯೊಬ್ಬ ನಾಗರಿಕರ ಹಕ್ಕುಗಳ ರಕ್ಷಣೆಗಾಗಿಯೇ ಇದೆ. ಅದು ಯಾವುದೇ ವಿಧದ ತಾರತಮ್ಯವನ್ನು ಒಪ್ಪುವುದಿಲ್ಲ.
ಸಂವಿಧಾನ ತತ್ವಗಳು ಘನತೆಯ ಬದುಕಿಗಾಗಿ ಎಲ್ಲ ಜನರಿಗೂ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ವೈಯಕ್ತಿಕ ಹಕ್ಕುಗಳ ದೊರೆಯಬೇಕೆಂದು ಪ್ರತಿಪಾದಿಸುತ್ತವೆ. ಆದರೆ, ಧರ್ಮದ ಮೂಲ ಆಧ್ಯಾತ್ಮಿಕತೆಯಾಗಿದೆ. ಈ ಅಧ್ಯಾತ್ಮವು ಶಾಸ್ತ್ರಗಳಾಧಾರಿತವಾಗಿದ್ದು, ಅದು ಕೂಡ ಕೇವಲ ಉಪನ್ಯಾಸಗಳು ಮತ್ತು ಉಪದೇಶಗಳ ಆಧಾರಿತವಾಗಿದೆ. ಸಂವಿಧಾನ ತತ್ವಗಳು ಪುರಾತನ ನಿಯಮಾವಳಿಗಿಂತ ಮುಖ್ಯವಲ್ಲವೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ. ಸಂವಿಧಾನದ ತತ್ವಗಳು ವೈಜ್ಞಾನಿಕ ಮನೋಧರ್ಮವನ್ನು ಪ್ರತಿಪಾದಿಸಿದರೆ, ಧರ್ಮದಲ್ಲಿ ಶಾಸ್ತ್ರಗಳು ನಿಯಮವನ್ನು ನಿರ್ದೇಶಿಸುತ್ತವೆ. ಮಹಿಳೆಯರು ಕೂಡ ಮಾನವರೇ ಹಾಗೂ ಈ ದೇಶದ ನಾಗರಿಕರೇ. ಆದರೆ, ಧರ್ಮವು ತಾರತಮ್ಯ ಮತ್ತು ಕ್ರೌರ್ಯದ ಮೂಲವಾಗಿ ಅವರನ್ನು ಕಾಡುತ್ತಿದೆ.

ಮಹಿಳೆಯರ ವಿರುದ್ಧ ಕೆಲಸ ಮಾಡುತ್ತಿರುವ ಬಲಪಂಥೀಯರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅದು ಏಕಕಾಲದಲ್ಲಿ ಎರಡು ಸಂವಿಧಾನವನ್ನು ಪ್ರತಿಪಾದಿಸುತ್ತಿದೆ. ಒಂದು ಮನುವಾದ, ಇನ್ನೊಂದು ಸಂವಿಧಾನ. ಇತ್ತೀಚೆಗೆ, ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಮಾಡುತ್ತಾ ಅವರ ಹಕ್ಕುಗಳನ್ನು ದಮನ ಮಾಡುವ ಪ್ರಯತ್ನ ನಡೆದಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಯುವಜನರು ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕಾಗಿದೆ. 
ಇತ್ತೀಚಿಗೆ, ಮುಸ್ಲಿಂ ಮಹಿಳೆಯರ ದರ್ಗಾ ಪ್ರವೇಶಕ್ಕೆ ಸಂಬಂಧಿಸಿದ ಸರ್ವೋಚ್ಛ ನ್ಯಾಯಾಲಯದ ತೀರ್ಪು ಪ್ರಗತಿಪರ ನಡೆಯಾಗಿದೆ. ತೃಪ್ತಿ ದೇಸಾಯ್ ರವರ ಗುಂಪು ಈಗ ಶಬರಿಮಲೆ ದೇವಸ್ಥಾನದಲ್ಲಿ ಹೆಣ್ಣುಮಕ್ಕಳ ಪ್ರವೇಶಕ್ಕಾಗಿ ಹೋರಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಕೇರಳ ಸರ್ಕಾರ, ಮಹಿಳೆಯರ ವಿರುದ್ಧದ ಎಲ್ಲಾ ಅಸಮಾನ ಆಚರಣೆಗಳನ್ನು ತೊಡೆದುಹಾಕುತ್ತೇನೆಂದು ಆಶ್ವಾಸನೆ ನೀಡಿದೆ.
ಮನುವಾದ, ಮೂಲಭೂತವಾದ, ಕೋಮುವಾದ ಇತ್ಯಾದಿ ವಾದಗಳಿಂದ ಸ್ವಾತಂತ್ರ್ಯ ಬೇಕು ಎಂಬುದು ಯುವಜನರ ಘೋಷಣೆಗಳಾಗಬೇಕು. ಹಾಗೆಯೇ ಸಂವಿಧಾನದ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಬ್ಬ ಮಾನವೀಯ ಮೌಲ್ಯವುಳ್ಳ ಪ್ರಗತಿಪರರು ಯುವಜನರ ಹೋರಾಟಕ್ಕೆ ಕೈಜೋಡಿಸಬೇಕು. 
-ಇ.ರತಿರಾವ್
ಮಹಿಳಾ ಪರ ಹೋರಾಟಗಾರರು 
ಸ್ತ್ರೀವಾದಿಗಳು
 ಮಾನವ ಹಕ್ಕುಗಳ ಹೋರಾಟಗಾರರು
ಮೈಸೂರು

No comments:

Post a Comment