Sunday 2 April 2017

ಕವನ - ಧಿಕ್ಕಾರದ ದನಿ






ದಾರುಣವದು ದುರ್ದಿನದಲಿ 
ದಾಂಡಿಗರ ದಾಂಧಲೆಯಲಿ
ಧ್ವಂಸಳಾದೆ ದಯೆತೋರದ 
ದುಷ್ಟ ಜನರ ನಡುವಲಿ
ನೆತ್ತರಿನ ಮಡುವಿನಲಿ 
ನೆಂದುಹೋದರೂ ನೀನು
ನಂದಲಿಲ್ಲ ನಂಬಿಕಾಗ್ನಿ 
ನರಳುತ್ತಿದ್ದರೂನು

ದೇಶವಿಡೀ ಕಂಪಿಸಿ 
ದುರಂತಕಾಗಿ ದುಃಖಿಸಿ
ದಾಮಿನಿಯರ ದುರ್ಗತಿಯ 
ದಾರಿಯನ್ನು ಅಳಿಸಿ ಎಂದು
ಬದುಕಬಯಸಿದೆ ನೀನು 
ಛಲದಿ ಸಹಿಸಿದೆ
ಇಂದು ನಾಳೆ ಎಂದಾದರೂ 
ಗೆಲುವೆ ಎಂದೆಣಿಸಿದೆ

ಆ ದುರುಳರ ದಮನವಿನ್ನು 
ದೂರದಲ್ಲಿ ಇಲ್ಲವೆಂದು
ದೂರ್ತರಿಗೆ ದಂಡವಂತು 
ದೊರಕದಿರುವುದಿಲ್ಲವೆಂದು
ದಿನವು ದೂಡಿದೆ 
ನೀನು ದಾರಿ ನೋಡಿದೆ
ಮತ್ತೇಕೆ ದೂರವಾದೆ 
ನಮ್ಮನೇಕೆ ದೂಡಿಹೋದೆ


ಓ ಗೆಳತಿ ಈ ಅಂತ್ಯವು 
ಮುಗಿದಾ ಕತೆಯಲ್ಲ
ಮೌನ ವಹಿಸಿ ಸಹಿಸಿದವರೂ 
ಎದ್ದುನಿಂತರಲ್ಲ
ದಫನದಾಗ್ನಿ ದಳ್ಳುರಿಯು 
ದೀವಿಗೆಯಾಗಿಹುದಿಲ್ಲಿ
ದಾನವರ ದೌರ್ಜನ್ಯವು 
ದುಸ್ಸಹವಿನ್ನಿಲ್ಲಿ


ನೀ ಸಹಿಸಿದ ದುಷ್ಕೃತ್ಯಕೆ 
ಜಗವೇ ಜರ್ಜರಿತಗೊಂಡು 
ಪೈಶಾಚಿಕ ಕೃತ್ಯಕೆ 
ಪ್ರಪಂಚ ಪರದೆ ಸೀಳಿಕೊಂಡು
ತಂಡ ತಂಡ ಮಾಡಿಕೊಂಡು 
ಕೆಂಪುಕೆಂಡ ಜಾರಿಕೊಂಡು
ನಾವ್ ಸಹಿಸೆವು ನಾಯಕರೆ 
ಎದ್ದು ಹೊರಗೆ ಬನ್ನಿರೆಂದು
ಧಾತ್ರಿಯರು ದ್ರೋಹಿಗಳಿಗೆ 
ಧಕ್ಕೆ ಉಂಟು ಮಾಡಲೆಂದು
ಧಿಕ್ಕಾರದ ದನಿಯೆದ್ದಿದೆ 
ದೈತ್ಯದಲೆಯು ದಡದಲಿಂದು

     - ಉಷಾಗಂಗೆ      

No comments:

Post a Comment