Monday 3 April 2017

ಕವನ - ನಾನು ನಕ್ಷತ್ರ : ಸುಖದ ಸಗಟು ವ್ಯಾಪಾರಿ




ಮುತುವರ್ಜಿಯಿಂದ ಹುಡುಕುತ್ತಿದ್ದೇನೆ
ಪದಗಳನ್ನು
ನನ್ನ ಬಗ್ಗೆ ಹೇಳಿಕೊಳ್ಳಲು
ನಾನು ನಕ್ಷತ್ರ:
ನಕ್ಷತ್ರದ ಹಾಗೇ
ರಾತ್ರಿ ಕಣ್ತುಂಬಿಕೊಳ್ಳುವ ಜನಕ್ಕೆ
ಹಗಲು ಕಾಣಿಸದವಳು!
ನನಗೆ ಸೂತಕಗಳಿಲ್ಲ
ಮೈಲಿಗೆಯಾದವಳ ಮೈಗೆ
ಕಾಮನೆಗಳ ತುಲಾಭಾರವಾಗುವಾಗ
ನಾನು ಕಲ್ಲುದೇವತೆ
ಬಿಗಿದು ಮುಚ್ಚಿದ ಕಣ್ಣುಗಳೂ
ಸತಾಯಿಸುತ್ತವೆ
ಬೆಳಕಿನಲ್ಲಿ ಬೆತ್ತಲಾದಂತೆನಿಸಿ
ಕದವಿಕ್ಕಿದಾಗ ಕಿವಿಗಡಚಿಕ್ಕುವ ನಗು
ಹೌದಲ್ಲ! ನನ್ನ ಮನೆ ಗೋಡೆ ಗಾಜಿನದು
ಇನ್ನು ಮುಚ್ಚುವಿಕೆಗೆ ಅರ್ಥವೇ ಇಲ್ಲಂತ
ಮಂಪರಿನಲ್ಲೂ ಮನಸಿಗೆ
ತಿಳಿ ಹೇಳುತ್ತೇನೆ
ನರ ನಾಡಿ ತೊಗಲುಗಳು
ತಂತಾನೆ ತಂತುಗೊಂಡು ತಯಾರಾಗುತ್ತವೆ
ಎಷ್ಟಾದರೂ ಕಾಯಕದ ಪ್ರಶ್ನೆ
ಗಿರಾಕಿ ತಪ್ಪಬಾರದು!

ಬೆಳಗೆದ್ದು ಕೂತು
ಕತ್ತಲೆಯ ಗಾಯಗಳನ್ನು
ಮೈ ಮೇಲೆ ಹುಡುಕಿಕೊಳ್ಳುವಾಗ
ಮೊದಲಿನಂತೆ ಕಣ್ಣೀರಾಗುವುದಿಲ್ಲ
ಯಾರ್ಯಾರದೋ ತಬ್ಬುವಿಕೆಯಲ್ಲಿ
ಮಗುಮ್ಮಾಗಿ ಕಳೆದ ಬಿಕ್ಕುಗಳು
ಬದುಕಿಗೆ ಹೊಸದ್ದೇ ಅರ್ಥ ಕೊಟ್ಟಿವೆ
ನಿಜದ ಬದುಕಿಗೆ ಪುರುಸೊತ್ತಿಲ್ಲದೇನಿಲ್ಲ
ನನಗೆ ಅವಕಾಶಗಳಿಲ್ಲವಷ್ಟೆ
ಈಗೀಗ ನಿರೀಕ್ಷೆಯೂ ಇಲ್ಲ.

ವಯಸ್ಸಿಗೆ, ಸಂಕಟದ ನಿರಿಗೆಗಳಿಗೆ
ಬಣ್ಣಗಳ ತೇಪೆ ಹಾಕುವಾಗ
ನಿಜಕ್ಕೂ ಬಳಲಿಬಿಡುತ್ತೇನೆ.
ಎಡಗಡೆ ಮಚ್ಚೆ, ಅನುರಾಧ ನಕ್ಷತ್ರ
ಹೆಬ್ಬೆರಳಿಗಿಂತ ಉದ್ದದ ಆ ಕಾಲ್ಬೆರಳಿನ
ಆ ಅದೃಷ್ಟದ ಹುಡುಗಿ
ಕನ್ನಡಿಯಲ್ಲಿ ಹಾಗೆ ಹಾಗೆ ಕಾಣಿಸುತ್ತಾಳಲ್ಲ
ನನಗೆ ಸಂಕಟವಾಗುತ್ತದೆ
ಹೀಗೂ ಬದುಕುವುದಕ್ಕೆ 
ಅದೃಷ್ಟ ಬೇಕಿತ್ತಾ ಅಂತ ಹಳಿಯುವುದಿಲ್ಲ.
ಆ ಅದೃಷ್ಟ ನನಗೊಂದು
ಮುಖವಾಡ ತೊಡಿಸುವುದಾದರೆ
ನಾನೀಗಲೆ ಗೆಲುವಾಗುತ್ತೇನೆ
ಮತ್ತೆ ರಾತ್ರಿಗೆ ತಯಾರಾಗುತ್ತೇನೆ.

ಇಲ್ಲಿಗೆ ಇಷ್ಟು ದೂರ ಬಂದದ್ದಕ್ಕೆ
ಕಾರಣ ಕೇಳಿದರೆ ಏನು ಹೇಳಲಿ?
ತೋರು ಬೆರಳಿಗೆ ಕಣ್ಣಿಲ್ಲ
ಕಣ್ಣುಗಳಿಗೊ ಬಾಯಿ ಬರುವುದಿಲ್ಲ
ಕಣ್ಣು ಕೈಗಳಿಗೂ ಹೊಂದಾಣಿಕೆಯೇ ಇಲ್ಲ
ಹೆಣ್ತನ ಕಂಬನಿಸುವಾಗ
ಬೆರಳುಗಳು ಗಂಡಸಿಗೆ ಸೋತು
ಮುಷ್ಠಿಯಾಗಿರುತ್ತವಲ್ಲ ಅದೇ
ಕೈಗಳ ಹಿಡಿದವರೆ ಇಲ್ಲಿ ತಂದು ಬಿಟ್ಟಿದ್ದನ್ನು
ಹೇಳಿಕೊಳ್ಳಲು ಕೈಗಳಿಗೂ ಬಾಯಿಲ್ಲ. ಪಾಪ!

ಕೊನೆಗಿನ್ನೇನು
' ನನಗೆ' ನಾನೂ ಅಲ್ಲ
ಅನ್ನುವ ನನ್ನಂತವಳೊಬ್ಬಳ
ಕಣ್ಣಲ್ಲಿ ದುಃಖದ ಕಪ್ಪು ಮೋಡಗಳು
ಬೆಸೆದುಕೊಳ್ಳುವಾಗ
ಕನಸುಗಳು ಹನಿಸಿ ಹೋಗುತ್ತವೆ.
ಎಂದೋ.. ಹೊರಗಾದಾಗ
ತುಂಡು ಚಾಪೆ, ಚೆಂಬು ನೀರಿನ ಜೊತೆಗಿನ
ಏಕಾಂತ ಸಂವಾದ ಆಗಾಗ
ಸುಮ್ಮನೇ ಕಾಡುತ್ತದೆ.
ಈಗ ತಿಂಗಳ ರಜೆಗೂ ಅವಕಾಶವಿಲ್ಲ
ಎಷ್ಟಾದರೂ ಕಾಯಕದ ಪ್ರಶ್ನೆ
ಗಿರಾಕಿ ತಪ್ಪಬಾರದು
ಹಾಗಂತ,
ನಾನು ನಕ್ಷತ್ರ; ಸುಖದ ಸಗಟು ವ್ಯಾಪಾರಿ!
  ‌- ಹೆಚ್. ಸಿ. ಭವ್ಯ ನವೀನ್

No comments:

Post a Comment