Wednesday 5 April 2017

ಪುಸ್ತಕ ವಿಮರ್ಶೆ - ಮಣ್ಣಿಂದ ಎದ್ದವರು

  [ಈ ಅಂಕಣದಲ್ಲಿ ನಾವು ಮಹಿಳೆಯರ ವಿಷಯಗಳಿಗೆ 
ಸಂಬಂಧಿಸಿದ ಪುಸ್ತಕಗಳ ವಿಮರ್ಶೆಗಳನ್ನು ಕೊಡುತ್ತಿದ್ದೇವೆ]


“ಮಣ್ಣಿಂದ ಎದ್ದವರು” ಕುಸುಮಾರವರ ಮೊದಲ ಕಾದಂಬರಿಯಾಗಿದ್ದು, ಇದನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.  
ಕುಸುಮಾ ಶಾನುಭಾಗರು ಬರಹಕ್ಕೆ ತೊಡಗುವ ಮುನ್ನ ಸ್ವಯಂಸೇವಾ ಕಾರ್ಯಕರ್ತೆಯಾಗಿದ್ದರೆಂದು, ಲೈಂಗಿಕ ಕಾರ್ಯಕರ್ತೆಯರ ಬದುಕಿನ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರೆಂದು, ಆ ಸಮಯದಲ್ಲಿ ತಲೆಹಿಡುಕರು ಸಿಟ್ಟಿಗೆದ್ದು ಇವರನ್ನು ಎರಡನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದರೆಂದು, ಆದರೂ ಕುಸುಮಾರವರು ಧೃತಿಗೆಡದೆ ತಮ್ಮ ಅಧ್ಯಯನ ಮುಂದುವರೆಸಿದರೆಂದು, ಆ ಹೆಣ್ಣುಮಕ್ಕಳ ನರಕಸದೃಶ ಜೀವನವನ್ನು “ಕಾಯಕ ಕಾರ್ಪಣ್ಯ” ಎಂದು ಹೊರತಂದರೆಂದು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿರುವ ಶ್ರೀ ಎಚ್ ಎಲ್ ಕೇಶವಮೂರ್ತಿಯವರು ಬರೆದಿದ್ದಾರೆ. 
ಕಥಾಹಂದರ 
ಪಾಲಂಗಾಲದ ದೇವರಭಟ್ಟರ ಮನೆತನದ ಸುಬ್ರಾಯಪ್ಪನಿಗೆ ಇಬ್ಬರು ಮಕ್ಕಳು ಶಿವಣ್ಣ ಮತ್ತು ವೆಂಕಪ್ಪಯ್ಯ. ಈ ವೆಂಕಪ್ಪಯ್ಯನ ಪತ್ನಿ ಸುಬ್ಬಮ್ಮ. ಚಿಕ್ಕಮಗನ ಮದುವೆಯಾದಾಗಲೇ ತಮ್ಮ ಆಸ್ತಿಯನ್ನು ಸಮಪಾಲು ಮಾಡಿದ್ದರು. ದೈರ್ಯಶಾಲಿಯಾದ ಚಿಕ್ಕ ಸೊಸೆಯನ್ನು ಕಂಡರೆ ಮಾವನಿಗೆ ಅತಿಯಾದ ಪ್ರೀತಿ. ಆದ್ದರಿಂದ ಅವಳಿಗೆ ಮನೆತನದ ಸೊತ್ತಾದ ಹವಳದ ಸರವನ್ನು ಕೊಟ್ಟರು. ವೆಂಕಪ್ಪಯ್ಯನಿಗೆ ಮಲೇರಿಯ ಜ್ವರ ಬಂದು ಅಸು ನೀಗಿದಾಗ ಸುಬ್ಬಮ್ಮ ಎದೆಗುಂದದೆ ತಾನೆ ಉಳುಮೆ ಮಾಡುವುದರಿಂದ ಹಿಡಿದು ವ್ಯವಸಾಯವನ್ನು ಮಾಡಲು ನಿಂತಳು. ಇದನ್ನು ನೋಡಿದ ಭಾವ ಶಿವಣ್ಣನು ಹೆಂಗಸರು ಮನೆಗೆಲಸ ಮಾಡಿಕೊಂಡು ಮನೆಯೊಳಗಿರಬೇಕು, ನಿನ್ನಿಂದ ಮನೆತನದ ಗೌರವ ಹಾಳಾಯಿತು ಎಂದು ಕಿರುಚಾಡಿದ. ನಂತರ ಗುರುಗಳನ್ನು ಮನೆಗೆ ಕರೆಯಿಸುವೆ ಭಿಕ್ಷೆಯನ್ನು ಹಾಕಬೇಕು ಎಂದು ಹೇಳುವ ಮೂಲಕ ಸುಬ್ಬಮ್ಮನಿಗೆ ಕೇಶಮುಂಡನ ಮಾಡಿಸಬಹುದೆಂದು ಲೆಕ್ಕ ಹಾಕಿದ ಶಿವಣ್ಣ. ಆದರೆ ಸುಬ್ಬಮ್ಮ ಮನೆಯನ್ನು ಬಿಟ್ಟು ಹೋಗುವೆ ಹೊರತು ಕೇಶಮುಂಡನ ಮಾಡಿಸಿಕೊಳ್ಳುವುದಿಲ್ಲ ಎಂದು ಮನೆಯನ್ನು ಬಿಟ್ಟು ಹೊರಬಂದಳು. ತನ್ನ ಭಾವ ಏನೆಲ್ಲಾ ತೊಂದರೆ ಕೊಟ್ಟರೂ ಹೆದರದೆ ಹೊರಬಂದ ಸುಬ್ಬಮ್ಮ ಚಿಕ್ಕ ಗುಡಿಸಲನ್ನು ಕಟ್ಟಿಕೊಂಡು ತನ್ನ ಗಂಡನ ಜಮೀನನ್ನು ಉಳಿಸಿಕೊಂಡು ಮಕ್ಕಳನ್ನು ಬೆಳೆಸಿದಳು. ಇವಳಿಗೆ ಇಬ್ಬರು ಮಕ್ಕಳು ಗೋಪಾಲಯ್ಯ ಮತ್ತು ಮಂಜಯ್ಯ. 
ಗೋಪಾಲಯ್ಯನಿಗೆ ಜಾನಕಿಯೊಡನೆ ವಿವಾಹ ಮಾಡಿದಳು. ಗೋಪಾಲಯ್ಯನಿಗೆ ಇಬ್ಬರು ಮಕ್ಕಳು ವಿಶ್ವನಾಥ ಮತ್ತು ಕಾವೇರಿ. ಎರಡನೆಯ ಮಗು ಹೆಣ್ಣಾದಾಗ ಗೋಪಾಲಯ್ಯನಿಗೆ ಸಂತೋಷವಾಯಿತು. ಏಕೆಂದರೆ ತಾನು ಆಸ್ತಿ ಭಾಗ ಮಾಡುವ ಸಮಸ್ಯೆ ತಪ್ಪಿತು, ಪೂರಾ ಆಸ್ತಿ ಮಗ ವಿಶ್ವನಾಥನಿಗೆ ಸೇರುತ್ತದೆ ಎಂದು. ಇಲ್ಲಿ ಗೋಪಾಲಯ್ಯನಿಗೆ ಹಿಂದೆ ತನ್ನ ತಾಯಿಯ ಪರಿಶ್ರಮದಿಂದ ತಾನು ಈ ಮಟ್ಟದಲ್ಲಿದ್ದೇನೆ ಎಂಬುದು ತಿಳಿಯಲಿಲ್ಲ.  
ಕಾವೇರಿ ಅಣ್ಣನೊಂದಿಗೆ ನಾಲ್ಕನೆಯ ತರಗತಿಯವರೆಗೆ ಓದಿದಳು. ನಂತರ ಓದಲು ಇಷ್ಟವಿದ್ದರೂ ಅಪ್ಪನ ಮಾತಿನಂತೆ ಮನೆಯಲೇ ಉಳಿದಳು. ತಾಯಿಗೆ ಯಾವಾಗಲೂ ಹುಷಾರಿಲ್ಲದ ಕಾರಣ ಅಜ್ಜಿಯ ಸಲಹೆಯಂತೆ ಮನೆಗೆಲಸ ಮತ್ತು ಅಡುಗೆ ಮಾಡುವುದನ್ನು ಕಲಿತಳು. ಹದಿನೈದು ವಯಸ್ಸು ದಾಟುತ್ತಿದ್ದಂತೆಯೆ ಅಜ್ಜಿ ಮದುವೆ ಮಾಡುವಂತೆ ಮಗನಿಗೆ ಹೇಳಿದಳು. ಆದರೆ ಮಗ ಗೋಪಾಲಯ್ಯ ಸ್ವಾರ್ಥದಿಂದ ಮಗಳ ಜಾತಕದಲ್ಲಿ ಮದುವೆ ಯೋಗವಿಲ್ಲವೆಂದು ಸುಳ್ಳು ಹೇಳಿದನು. ಆಜ್ಜಿಯ ಸಾವಿನ ನಂತರ ಕಾವೇರಿ ಒಂಟಿಯಾದಳು. ತಂದೆ ಮತ್ತು ಅಣ್ಣನ ನಡೆವಳಿಕೆಯಿಂದ ಬೇಸರಗೊಡ ಕಾವೇರಿ ತಾನು ಸ್ವತಂತ್ರವಾಗಿರಲು ಯೋಚಿಸಿ ತಂದೆಯನ್ನು ಆಸ್ತಿಯಲ್ಲಿ ಪಾಲು ಕೊಡಿಯೆಂದು ಕೇಳಿದಳು. ತಂದೆ “ಗಂಡುಮಕ್ಕಳಿಗೆ ಮಾತ್ರ ಆಸ್ತಿಯಲ್ಲಿ ಪಾಲು ಕೊಡುವುದು ನಿನಗೇಕೆ?”ಎಂದನು. ನೀವೇನು ನನಗೆ ಸಮಪಾಲು ಕೊಡಬೇಡಿ, ಜೀವನ ನಡೆಸಲು ಎಷ್ಟು ಬೇಕೋ ಅಷ್ಟು ಕೊಡಿ ಎಂದಳು. 
ತಂದೆ ಮತ್ತು ಅಣ್ಣನ ನಡೆವಳಿಕೆಯಿಂದ ಬೇಸರಗೊಂಡ ಕಾವೇರಿ ಕೊನೆಗೆ ವಕೀಲರ ಸಹಾಯದಿಂದ  ಮನೆಯವರ ವಿರೋಧದ ನಡುವೆಯೂ ಪಾಲು ತೆಗೆದುಕೊಂಡು ಮನೆಯಿಂದ ಹೊರ ಬಂದಳು. ಹೊರ ಬಂದು ವ್ಯವಸಾಯ ಮಾಡಿಕೊಂಡು ಸ್ವತಂತ್ರವಾಗಿದ್ದರೂ ಅಣ್ಣನ ಸಂಚಿನಿಂದ ಕೋರ್ಟಿಗೆ ಅಲೆದಾಡಿ ವ್ಯಾಜ್ಯದಲ್ಲಿ ಜಯಗಳಿಸಿದಳು. 
ಹೀಗೆ ಒಂಟಿಯಾಗಿ ಜೀವನ ಸಾಗಿಸುತ್ತಿರಬೇಕಾದರೆ ಪಕ್ಕದ ತೋಟದಲ್ಲಿದ್ದವನು ಕಾವೇರಿಯನ್ನು ಹಿಡಿಯಲು ಬಂದು, ಅವಳು ಕಿರುಚಿಕೊಂಡಾಗ, ಕಾವೇರಿಯ ಕರೆದಳು ಎಂದು ಹೇಳಿದನು. ಆಗ ಕಾವೇರಿ ವಿವಾಹದ ಬಗ್ಗೆ ಆಲೋಚಿಸಿ, ಜಾಹೀರಾತು ನೀಡಿದಳು; ಬಂದ ನಾರಾಯಣನನ್ನು ಏನನ್ನು ವಿಚಾರಿಸದೆ ಮದುವೆ ಮಾಡಿಕೊಂಡಳು. ನಂತರ ಅವನೊಬ್ಬ ಕಳ್ಳ ಹಾಗೂ ಅವನಿಗೆ ಇದು ಐದನೇ ಮದುವೆ ಎಂದು ತಿಳಿಯಿತು. ಆದರೆ ಅದನ್ನು ಬಹಳ ಸಮರ್ಥವಾಗಿ ಎದುರಿಸುತ್ತಾಳೆ. 
ಇನ್ನು ಗೋಪಾಲಯ್ಯನ ಅಣ್ಣನ ಮನೆಯಲ್ಲು ಹೆಣ್ಣುಮಕ್ಕಳು ಜೋರಾಗಿ ಮಾತನಾಡುವಂತಿರಲಿಲ್ಲ. ಗಂಡ ಮತ್ತು ಮಗನ ಬಲವಂತದಿಂದ ಶೈಲಜಾ ತಂದೆಯಂತಿದ್ದ ಭಾವನ ಮೇಲೆ ಅಪವಾದ ಹೊರಿಸಬೇಕಾಯಿತು.
ಹೀಗೆ ಶ್ರೀಮಂತರಾಗಲೀ, ಬಡವರಾಗಲಿ ಎಲ್ಲಾ ಕಡೆಯೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೇಯಿದೆ. ಹೊರಗಾಗಲಿ ಅಥವಾ ಮನೆಯಲ್ಲಾಗಲಿ ಅದು ನಿರಂತರವಾಗಿ ನಡೆಯುತ್ತಲೇಯಿದೆ. ಕಾವೇರಿಯ ಮಾತಿನಲ್ಲೇ ಹೇಳುವುದಾದರೆ “ಅಜ್ಜಿ ಆಗ ಅನುಭವಿಸಿದ್ದ ಕಷ್ಟಕ್ಕೂ ಈಗ ನಾನು ಅನುಭವಿಸುತ್ತಿರುವ ಕಷ್ಟಕ್ಕೂ ವ್ಯತ್ಯಾಸವುಂಟೆ? ಇಲ್ಲವೇ ಇಲ್ಲ ಒಂದೇ ರೀತಿ ಯಾಕೆ ಹೇಳು? ಹೆಂಗಸು ಹೇಳದೇ ಇರುವುದು ಕಾರಣ. ನಮ್ಮ ಜನರು ಮಣ್ಣಿನ ಅಧಿಕಾರವನ್ನು ಹೆಣ್ಣಿಗೆ ಕೊಡುವುದಿಲ್ಲ, ಅವಳಾಗಿ ತೆಗೆದುಕೊಂಡರೆ ಒಪ್ಪಿಕೊಳ್ಳೋಕೂ ತಯಾರಿಲ್ಲ. ಅವಳಿಗೆ ಸ್ವಂತಿಕೆ ಇದ್ರೆ ಉಸಿರು ಉಸಿರಿಗೂ ಹೋರಾಡಬೇಕು” ಎಂದು ಹೇಳಿರುವ ಮಾತಿನಲ್ಲಿ ಇಡೀ ಕಥೆಯ ಸಾರಂಶವಿದೆ
ಕುಸುಮಾ ಶಾನುಭಾಗರವರು 
ಹೀಗೆ ಕಾದಂಬರಿಗಾರ್ತಿ ಕುಸುಮ ಶಾನುಭಾಗರವರು ಹೆಣ್ಣಿನ ಶೋಷಣೆಯ ವಿವಿಧ ಆಯಾಮಗಳನ್ನು ತಿಳಿಸಿದ್ದಾರೆ. ಪತ್ರಕರ್ತೆ ಮತ್ತು ಸ್ವಯಂಸೇವಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸಿರುವ ನೋವು, ಹಿಂಸೆಗಳನ್ನು ಮನಮುಟ್ಟುವಂತೆ ಬರೆದಿದ್ದಾರೆ.  

- ವಿಜಯಲಕ್ಷ್ಮಿ ಎಂ ಎಸ್  

No comments:

Post a Comment