Sunday 9 April 2017

ವ್ಯಕ್ತಿ ಪರಿಚಯ - ಆರ್ ಕಲ್ಯಾಣಮ್ಮ



ನಮಗೆಲ್ಲಾ ತಿಳಿದಿರುವಂತೆ ರಾಜಕೀಯದಲ್ಲಿ ಅದರಲ್ಲು ಔಪಚಾರಿಕ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ತುಂಬಾ ಕಡಿಮೆ ಇದೆ.  ಔಪಚಾರಿಕ ರಾಜಕೀಯದಲ್ಲಿ ನೇರವಾಗಿ ಭಾಗವಹಿಸಿದದಿದ್ದರೂ ಸಮಾಜದ ಇತರ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ರಾಜಕೀಯವನ್ನು ಪ್ರಭಾವಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ. ಅನೇಕ ಕಾರಣಗಳಿಂದ ಅವರ ಸಂಖ್ಯೆ ಅನೌಪಚಾರಿಕ ರಾಜಕೀಯ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಳುವಳಿ, ಮಾಜ ಸುಧಾರಣೆ, ಸಾಹಿತ್ಯದ ಕೊಡುಗೆ ಮುಂತಾದವುಗಳ ಮೂಲಕ ಮಹಿಳೆಯರು ಅನೌಪಚಾರಿಕ ರಾಜಕೀಯ ಪ್ರಕ್ರಿಯೆಯಲ್ಲಿ ಕಂಡು ಬರುತ್ತಾರೆ. ಅಂತಹವರಲ್ಲಿ ಆರ್ ಕಲ್ಯಾಣಮ್ಮ ಅವರು ಪ್ರಮುಖರು. ಇವರು ತಮ್ಮ ಬದುಕು ಬರಹ ಮತ್ತು ಸಮಾಜ ಸುಧಾರಣೆ ಕೆಲಸಗಳ ಮೂಲಕ ಮಹಿಳೆಯರ ಪ್ರಗತಿಗಾಗಿ ಶ್ರಮಿಸಿದಂತವರು. ಇವರ ವೈಯಕ್ತಿಕ ಜೀವನದ ಹಿನ್ನೆಲೆ, ಸಾಹಿತ್ಯದ ಕೊಡುಗೆ, ಸಮಾಜ ಸುಧಾರಣಾ ಚಟುವಟಿಕೆಗಳನ್ನ ಅಧ್ಯಯನ ಮಾಡಿ ಅವುಗಳನ್ನ ಬೆಳಕಿಗೆ ತಂದು ಇಂದಿನ ಯುವ ಪೀಳಿಗೆಗೆ ಆದರ್ಶ ಮಾದರಿ ಮಹಿಳೆಯನ್ನಾಗಿ ಗುರುತಿಸಬೇಕಾಗಿದೆ. ಈಗಾಗಲೆ ಇವರ ಬಗ್ಗೆ ಪುಸ್ತಕ, ಸಂಶೋಧನೆ, ಕೆಲಸಗಳು ನಡೆದಿವೆ. ಆದರೂ ಹಲವಾರು ಮಾರ್ಗಗಳ ಮೂಲಕ  ಇನ್ನೂ ಹೆಚ್ಚು ಜನರನ್ನು  ತಲುಪಿ ಇವರ ಬಗ್ಗೆ ಪ್ರಚಾರವಾಗಬೇಕಾಗಿದೆ. ಅದರಿಂದ ಈ ಲೇಖನ.

           ಆರ್. ಕಲ್ಯಾಣಮ್ಮನವರು ಹುಟ್ಟಿದ ವರ್ಷದ ಬಗ್ಗೆ ಏಕ ಅಭಿಪ್ರಾಯವಿಲ್ಲದಿದ್ದರೂ. ಕೆಲವು ಆಧಾರದ ಮೇಲೆ ಅವರು 1892ರಲ್ಲಿ ಹುಟ್ಟಿದ್ದರೆಂದು ಹೇಳಲಾಗುವುದು. ತಮಿಳುನಾಡಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಎಂಟು ಮಕ್ಕಳಲ್ಲೊಬ್ಬರಾಗಿ ಜನಿಸಿದರು. ಏಳು ಜನ ಹೆಣ್ಣುಮಕ್ಕಳಲ್ಲಿ ಇವರು ಎರಡನೆಯುವರು. ಏಳು ಜನರಲ್ಲಿ 5 ಜನರು ವಿಧವೆಯರಾಗಿದ್ದರು. ಚಿಕ್ಕವಯಸ್ಸಿಗೆ, ಮದುವೆಯ ಬಗ್ಗೆ ತಿಳುವಳಿಕೆ ಬರುವ ಮುನ್ನವೇ ವಿಧವೆಯಾದರು. ಕಲ್ಯಾಣಮ್ಮನವರ ಬುದ್ದಿವಂತಿಕೆಯನ್ನು ಅರಿತ ಅವರ ಚಿಕ್ಕಪ್ಪನವರು ಎಲ್ಲಾ ವಿಧವೆಯರಂತೆ ಜೀವನ ನಡೆಸಲು ಬಿಡಬೇಡವೆಂದು ಹೇಳಿ ಅವರ ಓದನ್ನು ಮುಂದುವರೆಸಲು ಪ್ರೋತ್ಸಾಹ ನೀಡೀದರು. ಚಿಕ್ಕಪ್ಪನವರ ಪ್ರೇರಣೆಯೇ ಅವರ ಜೀವನದ ಹಾದಿಯನ್ನು ಬದಲಾಯಿಸಲು ಕಾರಣವಾಯಿತು. ಕಲ್ಯಾಣಮ್ಮನವರು ತಮಗೊದಗಿದ ದುರಂತವನ್ನು ಮೆಟ್ಟಿನಿಂತು ವಿದ್ಯಾವಂತೆಯೆನಿಸಿ ಸಮಾಜಕ್ಕೆ ಬದುಕನ್ನು ಮುಡಿಪಾಗಿಡುವಂತೆ ಪ್ರೇರೇಪಿಸಿದರು. ಚಿಕ್ಕಪ್ಪ ಹಾಗು ತಂದೆಯ ಬೆಂಬಲದಿಂದ ಕಲ್ಯಾಣಮ್ಮ 1906 ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಕಟ್ಟಿ, ಕನ್ನಡ ಮತ್ತು ಇಂಗ್ಲೀಷ್ ವಿಷಯಗಳೆರಡರಲ್ಲು ಉತೀರ್ಣರಾದರು. ಮುಂದೆ ಓದುವ ಆಸೆ ಇದ್ದರು ಮನೆಯ ಸಂಪ್ರದಾಯದ ವಾತಾವರಣ ಓದಲು ಬಿಡಲಿಲ್ಲ. ಆದರೆ ಮನೆಯಲ್ಲೆ ತಮಿಳು, ಸಂಸ್ಕೃತ ಭಾಷೆಗಳ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡತೊಡಗಿದರು, ಈ ಅಧ್ಯಯನಗಳಿಂದ ಅವರ ವಿಚಾರಶಕ್ತಿ ಹೆಚ್ಚಿ ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಕಂಡು ಮನದಲ್ಲೆ ಚಿಂತಿಸಲು ಪ್ರಾರಂಬಿಸಿದರು.

          ಮನೆಯ ಸಂಪ್ರದಾಯ ಪರಿಸರಕ್ಕೆ ಹೊಂದಿಕೂಂಡು ತಮ್ಮ ಓದುವ, ಬರೆಯುವ  ಚಟುವಟಿಕೆಗಳನ್ನು, ಮನೆಯ ನಿಗದಿತ ಕೆಲಸ ಎಲ್ಲವನ್ನು ಒಟ್ಟಿಗೆ ಮಾಡಿಕೊಂಡು ಹೋಗಬೇಕಾಗುತ್ತಿತ್ತು. ಸಾಂಪ್ರಾದಾಯಿಕ ಬದುಕಿನ ಗತಿಯನ್ನು ನಿರಾಕರಿಸುವುದರಿಂದ ಉಂಟಾಗುವ ಹಿಂಸೆ, ಅವಮಾನ, ಹೀಯಾಳಿಸುವಿಕೆ, ಕಡ್ಡಾಯವಾದ ಅಮಾನವೀಯ ನಿಯಮಗಳಿಂದ ತಮ್ಮನ್ನು ಪಾರು ಮಾಡಿಕೊಳ್ಳುವುದಲ್ಲದೆ ತಮ್ಮಂತಹ ಇತರರನ್ನು ಪಾರು ಮಾಡುವುದಕ್ಕೋಸ್ಕರ ಕಲ್ಯಾಣಮ್ಮ ಕೂನೆಗೆ ಸಮಾಜ ಸೇವೆಯ ಮಾರ್ಗವನ್ನು ಆರಿಸಿಕೊಂಡರು. ಅಸಂಖ್ಯಾತ ವಿಧವೆಯರ ಬದುಕು ಅನರಕ್ಷರತೆ, ಮೌಡ್ಯ ಮತ್ತು ಕ್ರೂರ ಸಂಪ್ರದಾಯಗಳಲ್ಲಿ ಸಿಕ್ಕಿ ಯಾತನಾಮಯವಾಗಿರುವುದನ್ನು ಕಂಡ ಕಲ್ಯಾಣಮ್ಮ ತಾವು ಅವರ ಹಾಗೆ ಆಗುವುದಿಲ್ಲ ಎಂದು ಹದಿನಾಲ್ಕು - ಹದಿನೈದನೇ ವಯಸ್ಸಿನಲ್ಲಿ ನಿರ್ಧರಿಸಿದರು.

     ಹಲವು ವರ್ಷಗಳ ಅಧ್ಯಯನದ ನಂತರ ಕನ್ನಡದಲ್ಲಿ ಲೇಖನ, ಕಥೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸತೂಡಗಿದರು. ಬರವಣಿಗೆಯ ಜೊತೆಯಲ್ಲೆ ಹತಭಾಗಿನಿಯರ, ನಿರ್ಗತಿಕ ಸ್ತ್ರೀಯರ ಏಳಿಗೆಗಾಗಿ ದುಡಿಯಲು ನಿರ್ಧರಿಸಿ ಯೋಜನಾಬದ್ದವಾಗಿ ಯತ್ನಿಸಿದರು. ಆಧ್ಯಾತ್ಮಿಕ ಶ್ರದ್ದೆ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳ ಜೂತೆಗೆ ಸುತ್ತಲಿನ ಹಲವು ಗಣ್ಯ ವ್ಯಕ್ತಿಗಳ ಸಹಕಾರದಿಂದ ಅವರು ತಮ್ಮ ಗುರಿಯತ್ತ ಹೆಜ್ಜೆ ಹಾಕಿದರು.

 ಕಲ್ಯಾಣಮ್ಮ ನವರ ಕಾರ್ಯ ಸಾಧನೆಯನ್ನು ಮೂರು ಪ್ರಮುಖ ಕ್ಷೇತ್ರಗಳಲ್ಲಿ ಕಾಣಬಹುದು
1.ಸ್ತ್ರೀಯರ ಅಭಿವೃಧ್ದಿ /ಏಳಿಗೆ
2. ಪತ್ರಿಕೋದ್ಯಮ ಹಾಗೂ
3. ಮಕ್ಕಳ ಏಳಿಗೆ
        ದೇಶದ ಇತರೆ ರಾಜ್ಯಗಳಲ್ಲಿ ಸ್ತ್ರೀಯರ ಅಭಿವೃದ್ದಿಗಾಗಿ ನಡೆಯುತ್ತಿದ್ದಂತಹ ಸುಧಾರಣೆ ಚಳುವಳಿಗಳು ವಿವಿಧ ಸಂಸ್ಥೆಗಳ ಸ್ಥಾಪನೆ ಇವುಗಳನ್ನು ಕಂಡ ಕಲ್ಯಾಣಮ್ಮನವರು ಕರ್ನಾಟಕದಲ್ಲೂ ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದರು. 1913ರಲ್ಲಿ ಶಾರದಾ ಸ್ತ್ರೀ ಸಮಾಜವನ್ನು ಸ್ಥಾಪಿಸಿದರು. ಅದರ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಕಲ್ಯಾಣಮ್ಮನವರೆ ಕೆಲಸ ಮಾಡಿದರು. ಅವರ ಕಲ್ಪನೆಯಲ್ಲಿ ಶಾರದಾ ಸಮಾಜವು ಪಸ್ತಕ ಭಂಡಾರ ತೆರೆಯುವುದು, ಉಪನ್ಯಾಸ ನಡೆಸುವುದು, ಸಂಗೀತ ಶಾಲೆ ಕುಶಲಕೈಗಾರಿಕೆಗಳನ್ನು ಕಲಿಸುವುದು, ಕಲಿಯಲು ಬರುವ ತಾಯಂದಿರ ಮಕ್ಕಳನ್ನ ನೋಡಿಕೂಳ್ಳುವ ವ್ಯವಸ್ಥೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕೇಂದ್ರವಾಗಿತ್ತು. ತಮ್ಮ ಕಲ್ಪನೆಗಳನ್ನು ಸಾಕಾರಗೂಳಿಸುವಲ್ಲಿಯೂ ಅವರು ಸಾಕಷ್ಟು ಶ್ರಮವಹಿಸಿ ಅದರಲ್ಲಿ ಯಶಸ್ಸನ್ನು ಪಡೆದರು. ಆದರೆ 1926 ರ ಹೊತ್ತಿಗೆ ತಾವೆ ಕಟ್ಟಿ ಬೆಳೆಸಿದರೂಅನೇಕ ಕಾರಣಗಳಿಂದ ಹೊರಬರಬೇಕಾಯಿತು. ಆದರೆ ನಂತರ ಅವರು ಸುಮ್ಮನೆ ಕೂರಲಿಲ್ಲ.
      
ಸಮಾಜದ ಏಳಿಗೆಯ ಮುಖ್ಯವಾಣಿಯಾಗಿ ಒದಗಬಲ್ಲ ಮಹಿಳಾ ಪತ್ರಿಕೆಯೊಂದನ್ನು ಪ್ರಕಟಿಸುವುದು ಅವಶ್ಯಕವೆಂದು ತಿಳಿದ ಕಲ್ಯಾಣಮ್ಮನವರು 1917 ರಲ್ಲಿ ಸರಸ್ವತಿ ಎಂಬ ಪತ್ರಿಕೆಯನ್ನು ಹೊರತಂದರು. ಇದು ಭಾರತ ಮಹಿಳೆಯರ ಇಹಪರ ಅಭ್ಯುದಯಗಳನ್ನು ಬೋಧಿಸುವಂತಹ ಲೇಖನಗಳನ್ನು ಒಳಗೊಂಡ ಪತ್ರಿಕೆಯಾಗಿತ್ತು. ಈ ಪತ್ರಿಕೆಗಾಗಿ ಕಲ್ಯಾಣಮ್ಮ ಮಾಡದ ಕೆಲಸವಿಲ್ಲ, ಪಡದ ಕಷ್ಟವಿಲ್ಲ. ಬರಹಗಳಿಗಾಗಿ ಲೇಖಕ ಲೇಖಕಿಯರಿಗೆ ಪತ್ರ ಬರೆಯುವುದು, ಸಾಧ್ಯವಿದ್ದವರನ್ನು ಸ್ವತಃ ಕಂಡು ಬರೆಸುವುದು, ಮುದ್ರಣ ಕಛೇರಿಗಳಿಗೆ ಓಡಾಡುವುದು, ಮುದ್ರಣ ಕಾಗದವನ್ನು ತರಿಸುವುದು, ಮುದ್ರಿತ ಪತ್ರಿಕೆಯನ್ನು ಚಂದಾದಾರರಿಗೆ ಟಪಾಲಿನಲ್ಲಿ ಕಳುಹಿಸುವುದು ಮೊದಲಾದ ಎಲ್ಲಾ ಕೆಲಸಗಳನ್ನು ಅವರೆ ನಿರ್ವಹಿಸುತ್ತಿದ್ದರು. ಹೊಸ ಪ್ರತಿಭೆಗಳು ಸರಸ್ವತಿಯ ಮೂಲಕ ಬೆಳಕು ಕಾಣಲು ಅವರು ಅವಕಾಶ ನೀಡಿದರು.

ಸ್ನೇಹ ವಾತ್ಸಲ್ಯಗಳಿಂದ ಎಂಥವರ ಮನಸ್ಸನ್ನು ಗೆದ್ದು ಅವರ ಸಹಕಾರವನ್ನು ಪಡೆದು ಕಾರ್ಯ ಸಾದನೆ ಮಾಡಿದ್ದರು ಜೊತೆಗೆ ತಮ್ಮ ಸಾಧನೆ ಪ್ರತಿಷ್ಠೆಗಳಿಗೆ ತಾವೇ ಮಣಿದು ತಲೆಗೇರಿಸಿಕೊಳ್ಳದ ಸರಳತೆಯೇ ಕಲ್ಯಾಣಮ್ಮನವರ ಯಶಸ್ಸಿನ ಮೂಲವೆನ್ನಬಹುದು. ಸುಮಾರು ನಲವತ್ತೈದು ವರ್ಷಗಳವರೆಗೆ ಪತ್ರಕರ್ತೆಯಾಗಿ ಕಲ್ಯಾಣಮ್ಮ ಸರಸ್ವತಿಯನ್ನು ನಿರ್ವಹಿಸಿದ ಬಗೆಯು ವಿಶೇಷವಾದುದು. ಬಡವರು ಹಾಗು ಎಲ್ಲರಿಗು ಪತ್ರಿಕೆಯು ಸುಲಭವಾಗಿ ಸಿಗುವಂತಾಗಲಿ ಎಂದು ಪತ್ರಿಕೆಗೆ ಕಡಿಮೆ ಬೆಲೆ ಇಟ್ಟಿದರು. ಕೊನೆಗೆ ತಮ್ಮ ಅನಾರೋಗ್ಯದ ಕಾರಣದಿಂದ ಪತ್ರಿಕೆಯ ಕಾರ್ಯವನ್ನು ಕೈಬಿಟ್ಟರು.




ಮಕ್ಕಳ ಕೊಟ: ಸ್ತ್ರೀಯರ ಸಮಸ್ಯೆಗಳು ಕುಟುಂಬ ಮತ್ತು ಮಕ್ಕಳ ಸಮಸ್ಯೆಯೊಂದಿಗೆ ಬೆಸೆದುಕೊಂಡಿರುವುದರಿಂದ ಮಕ್ಕಳನ್ನು ಬೇರ್ಪಡಿಸಿ ಮಹಿಳೆಯರ ಅಭಿವೃದ್ದಿ ಅಸಾದ್ಯವೆಂದು ಭಾವಿಸಿದ್ದ ಕಲ್ಯಾಣಮ್ಮನವರು ಮಹಿಳಾ ಸಮಾಜಗಳಲ್ಲಿ ಮಕ್ಕಳಿಗೂ ಸ್ಥಳವಿರಬೇಕು ಎಂದು ಪ್ರತಿಪಾದಿಸಿದ್ದಲ್ಲದೆ ತಮ್ಮ ಸಮಾಜದಲ್ಲಿ ನರ್ಸರಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದರು. ಬೀದಿಯಲ್ಲಿ ಆಡುವ ಮಕ್ಕಳನ್ನು ನೋಡಿದಾಗ ಇಂಥ ಮಕ್ಕಳಲ್ಲೂ ಹುದುಗಿರಬಹುದಾದ ಪ್ರತಿಭೆ ಅರಳುವಂತಾಗಲು ಏನಾದರು ಮಹತ್ತರವಾದ ಯೋಜನೆ ಮಾಡಬೇಕೆಂದು ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿಯಿದ್ದವರನ್ನು ಕಲೆಹಾಕಿ ತಮ್ಮೆಲ್ಲಾ ಯೋಜನೆ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು ಅಖಿಲ ಕರ್ನಾಟಕ ಮಕ್ಕಳ ಕೂಟ ವನ್ನು 1938 ರಲ್ಲಿ  ಸ್ಥಾಪಿಸಿದರು. ಮೈಸೂರು ಮಂಗಳೂರಿನಲ್ಲೂ ಅದರ ಉಪಶಾಖೆಗಳಲ್ಲೂ ಪ್ರಾರಂಭವಾದವು. ಮಕ್ಕಳ ಸಮ್ಮೇಳನ ನಡೆಸುವುದು, ಶಾಖೆಗಳನ್ನು ವಿಸ್ತರಿಸುವುದು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದು, ಮಕ್ಕಳ ಸಾಹಿತ್ಯ ಪ್ರಕಟಿಸುವುದು ಮೊದಲಾದವು ಮಕ್ಕಳ ಕೂಟದ ಉದ್ದೇಶಗಳಾಗಿದ್ದವು. ಕಲ್ಯಾಣಮ್ಮನವರು ಬದುಕಿದ್ದಾಗಲೆ ಜನರ ಬೆಂಬಲದೊಂದಿಗೆ ಮಕ್ಕಳಕೂಟ ಬಹುಮಟ್ಟಿಗೆ ಯಶಸ್ವಿಯಾಗಿ ನಡೆಯಿತು. ಪಟ್ಟಣಗಳಲ್ಲೇ ಅಲ್ಲಾ ಗ್ರಾಮಾಂತರ ಸ್ಥಳಗಳಲ್ಲೂ ಮಕ್ಕಳ ಕೂಟಗಳು ಸ್ಥಾಪಿತವಾದವು. ಮಕ್ಕಳಕೂಟದಿಂದ ಶಿಶು ಸಾಹಿತ್ಯದ ಅನೇಕ ಕಥೆ ಕವನಗಳನ್ನು ಪ್ರಕಟಿಸಿದರು. ಮಕ್ಕಳೆ ಬರೆದ ಕಥೆ ಕವನ ನಾಟಕಗಳನ್ನು ಒಬ್ಬ ಬಾಲಕ ಸಂಪಾದಕನ ನೇತೃತ್ವದಲಿಯೂ ಪ್ರಕಟಿಸಿದರು. ಎಳೆಯ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ ಅನೇಕ ಅಡ್ಡಿ ಸಮಸ್ಯೆಗಳನ್ನು ಎದುರಿಸುತಿದ್ದರೂ ಹಲವು ಕ್ಷೇತ್ರಗಳಲ್ಲಿ ಕೆಲಸಮಾಡಿ, ಇತರ ಮಹಿಳೆಯರಿಗೆ ದಾರಿದೀಪವಾಗಿ ಸಮಾಜಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.  ಮಹಿಳೆಯರು ಯಾವುದರಲೂ ಕಡಿಮೆಯಲ್ಲ ಎಂಥ ಕಾರ್ಯಕ್ಷೇತ್ರದಲ್ಲೂ ದಕ್ಷತೆಯಿಂದ ಕೆಲಸ ಮಾಡಬಲ್ಲರು ಎಂಬುದನ್ನು ಸಾದಹಿಸಿ ತೋರಿಸಬೇಕು ಎನ್ನುವುದು ಕಲ್ಯಾಣಮ್ಮನವರಲ್ಲಿ ಬಲವಾಗಿದ್ದ ಆಕಾಂಕ್ಷೆ.
    ತಾವು ಹಮ್ಮಿಕೊಂಡಿದ್ದ ಚಟುವಟಿಕೆಗಳ ಜೊತೆಜೊತೆಯಲ್ಲೇ ಕಲ್ಯಾಣಮ್ಮನವರು ಸಮಾಜದ ಇತರ ಸಂಘ ಸಂಸ್ಥೆಗಳ ಚಟುವಟಿಕೆಗಳಲೂ ಬಾಗವಹಿಸುತ್ತಿದ್ದರು. 
1926—27 ರಲ್ಲಿ ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ್ದ ಬಾಲ ಕರ್ನಾಟಕ ಸಂಘಕ್ಕೆ ಅಧ್ಯಕ್ಷರಾಗಿದ್ದರು. 1932 ರಲ್ಲಿ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ಸಕಾರದಿಂದ ನೇಮಕಗೊಂಡು ಅಲ್ಲಿಯೂ ಕಾರ್ಯನಿರ್ವಹಿಸಿದರು. 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮಹಿಳಾ ಅಧ್ಯಕ್ಷೆಯಾಗಿದ್ದರು ಕನ್ನಡ ನುಡಿ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡಿದರು .
1919 ರಲ್ಲಿ ಬಂಗಾಲದ ಆರ್ಯ ಸಾಹಿತ್ಯ ಪರಿಷತ್ತು ಕಲ್ಯಣಮ್ಮನವರಿಗೆ ದ್ಯಾವಿನೋದಿನಿ ಎಂಬ ಬಿರುದನ್ನಿತ್ತು ಗೌರವಿಸಿತು.
1937 ರಲ್ಲಿ ಸರ್ಕಾರ ಕಲ್ಯಾಣಮ್ಮನವರು ಮಕ್ಕಳ ಏಳಿಗೆಗಾಗಿ ನಡೆಸುತ್ತಿದ್ದ ಸಾರ್ಥಕ ಸೇವೆಯನ್ನು ಗುರುತಿಸಿ ಸಿಟಿ ಮುನ್ಸಿಪಾಲ್ ಸ್ಕೂಲ್ ಬೋರ್ಡಿಂಗ್ ನ ಸದಸ್ಯೆಯನ್ನಾಗಿ ನೇಮಿಸಿತು.
1933ರಲ್ಲಿ ಬೆಂಚ್ ಮೆಜಿಸ್ಟ್ರೇಟ್‍ರಾಗಿ ನೇಮಕಗೊಂಡಿದ್ದ ಕಲ್ಯಾಣಮ್ಮ ಸುಮಾರು 15 ವರ್ಷ ಈ ಸೇವೆಯನ್ನು ನಿರ್ವಹಿಸಿದರು.
ಅರಮನೆಯ ನಿಕಟ ಸಂಪರ್ಕ£ವನ್ನಿಟ್ಟುಕೊಂಡಿದ್ದ ಸ್ತ್ರೀಯರ ವಿದ್ಯಾಬ್ಯಾಸ ಮತ್ತು ಏಳಿಗೆ ಎಲ್ಲಾ ರೀತಿಯ ಅನುಕೂಲ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದರು. 1935ರಲ್ಲಿ ನವರಾತ್ರಿಯ ಸಂದರ್ಬದಲ್ಲಿ ಮೈಸೂರು ಸಂಸ್ಥಾನದ ಸರ್ಕಾರ ಇವರಿಗೆ ಸಾರ್ವಜನಿಕ ಸೇವಾ ಪದಕ ನೀಡಿ ಗೌರವಿಸಿತ್ತಲ್ಲದೆ ಅವರನ್ನು ಮೈಸೂರು ಪ್ರಜಾಪ್ರತಿನಿಧಿಯಾಗಿ ಪರಿಷತ್ತಿನ ಸದಸ್ಯೆಯಾಗಿ ನೇಮಿಸಿತು.
1938 ರಲ್ಲಿ ಬೆಂಗಳೂರಿನ ಪುರಸಭೆ ಸದಸ್ಯೆಯಾಗಿ ಚುನಾವಣೆಯಿಂದ ಆಯ್ಕೆಗೊಂಡರು. ಅಲ್ಲಿ ಸಲ್ಲಿಸಿದ ದಕ್ಷಸೇವೆಯಿಂದಾಗಿ ನಗರದ ಉಪಾದ್ಯಕ್ಷೆಯಾಗಿ ಆರಿಸಲ್ಪಟ್ಟರು. ಈ ಚುನಾವಣೆಯಲ್ಲಿ ಅವರು 18 ಮತಗಳಿಸಿ ತಮ್ಮ ಪ್ರತಿಸ್ಪರ್ದಿಗಿಂತ 10 ಮತಗಳನ್ನು ಹೆಚ್ಚಿಗೆ ಪಡೆದು ಗೆದ್ದರು. ಇಲ್ಲಿನ ಪ್ರಾಮಾಣಿಕ ದುಡಿಮೆಯಿಂದ 1937ರಲ್ಲಿ ಮುಸ್ಲಿಂ ಶಿಕ್ಷಣ ಸಮಿತಿಗೆ ಅದ್ಯಕರಾಗಿಯೂ ನೇಮಕಗೊಂಡಿದ್ದರು.
ಮೈಸೂರು ರಾಜಯ ಜೀವ ವಿಮಾ ಕಂಪನಿಯ ನಿರ್ದೇಶಕರಾಗಿ, ಯೂನಿವರ್ಸಿಟಿ ಸೆನೆಟ್ ಸದಸ್ಯೆಯಾಗಿ,ಥಿಯಸಾಫಿಕಲ್ ಸೂಸೈಟಿ ಮುಂತಾದ ಅನೇಕ ಸಂಘಗಳಿಗೆ ಕೆಲಸ ಮಾಡಿದರು. ಸೆಂಟ್ರಲ್ ಜೈಲ್ ಸಮಿತಿಯ ಸದಸ್ಯೆಯಾಗಿದ್ದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯಕ್ರಮಗಳಲ್ಲಿಯೂ ಹಾಗು ಗಾಂದೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಹಿಂಸಾವಾದಿ ಚಳುವಳಿಯಲ್ಲಿಯೂ ತುಂಬಾ ಶ್ರದ್ದೆಯಿಟ್ಟಿದ್ದರು. ಹಲವಾರು ಕಾಂಗ್ರೆಸ್ ಧುರೀಣರ ಸಂಪರ್ಕಗಳು ಅವರಿಗಿದ್ದವು. ಬೆಳಗಾವಿ ಕಾಂಗೆಸ್ ಅಧಿವೇಶನದಲ್ಲಿ ಮಹಿಳಾ ಮಂಡಲವನ್ನು ಉದ್ದೇಶಿಸಿ ಬಾಷಣ ಮಾಡಿ ಮಹಿಳೆಯರು ರಾಷ್ಟ್ರ ನಿರ್ಮಾಣದಲ್ಲಿ ದೈರ್ಯವಾಗಿ ಮುಂದೆ ಬರಬೇಕೆಂದು ಕರೆ ನೀಡೀದರು. ಹೀಗೆ ಅವರು ರಾಜಕೀಯ ಆಗುಹೋಗುಗಳಲ್ಲಿ ಆಸಕ್ತಿಯಿದ್ದರು ನೇರವಾಗಿ ರಾಜಕೀಯದಲ್ಲಿ ಪಾಲ್ಗೂಳ್ಳಲು ಆಹ್ವಾನವಿದ್ದರು ಅದನ್ನು ನಿರಾಕರಿಸಿ ಸಮಾಜ ಸೇವೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡರು.
  ಬದುಕಿನ ಹಲವು ರಂಗಗಳಿಗೆ ತಮ್ಮ ಕ್ರಿಯಾಶಕ್ತಿಯನ್ನು ಹಂಚಿದ ಕಲ್ಯಾಣಮ್ಮನವರಿಗೆ ಯಾವುದು ಅಸಾದ್ಯವಲ್ಲ. ಮನಸಿದ್ದರೆ ಏನನ್ನಾದರು ಸಾದಿಸಬಹುದು ಎಂಬ ಮನ ಸಂಕಲ್ಪವೇ ಬಲವೆನ್ನಬೇಕು ಇಲ್ಲದಿದ್ದಲ್ಲಿ ದೀರ್ಘಕಾಲದಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ ಅವರು ತಮಗೆ ವಿರುದ್ದವಾಗಿದ್ದ ಸಾಂಪ್ರದಾಯಿಕ ಶಕ್ತಿಗಳನ್ನು ಎದುರಿಸುತ್ತಲೆ ಇಷ್ಟೊಂದು ಬಹುಮುಖವಾದ ಕಾರ್ಯ ಸಾದನೆಯಲ್ಲಿ ಯಶಸ್ಸು ಪಡೆಯುವುದು ಅಸಾಧಾರಣ ಮಾತಾಗಿತ್ತು. ಅವರ ಅಖಂಡ ಚಿತ್ತ ಶಕ್ತಿಯೆ ಅವರನ್ನು ಸ್ತ್ರೀಯರ ಸಾಧನೆಗಳ ಇತಿಹಾಸದಲ್ಲಿ ಹಲವಾರು ಪ್ರಥಮಗಳನ್ನು ನಿರ್ಮಿಸಲು ಪ್ರೇರೇಪಿಸಿತ್ತು.



-   ಹೇಮಲತ ಎಚ್.ಎಮ್.  
ಮೈಸೂರು   

No comments:

Post a Comment